Covid Diary : ಕವಲಕ್ಕಿ ಮೇಲ್ ; ‘ಏಳ್ನೂರು ಕಿಲೊಮೀಟರ್ ನಡದ್ವಿ ಅಲ್ಲೊಂದ್ಕಡೆ ಸುರಂಗದಾಗ ಬೆಳಕಿಲ್ಲ ಕೈಯ್ಯಾಗ ಬಿಸ್ಕೀಟಿಲ್ಲ‘

|

Updated on: Jun 05, 2021 | 1:49 PM

Migrant labourers : ‘ರಾತ್ರಿ ಮನುಶ್ರೇ ಇಲ್ಲ. ಪೆಟ್ರೋಲು ಬಂಕ್ ಇಲ್ಲ. ಡಾಬಾ ಇಲ್ಲ. ಚಾ ಅಂಗ್ಡಿ ಸೈತ ಇಲ್ಲ. ಒಂಥರಾ ಭಯ. ಪೊಲೀಸ್ ಜೀಪು ಕಂಡಕೂಡ್ಲೆ, ಲೈಟು ಬಂದಕೂಡ್ಲೆ ತಲೆ ಮರೆಸ್ಕತಿದ್ವಿ. ಅಡಕ್ಕತಿದ್ವಿ. ಒಂದೂರಲ್ಲಿ ಸಿಕ್ಕಾಪಟ್ಟೆ ಹಸಿವಾಗಿ ಅನ್ನ ಕೇಳಿದ್ರೆ ನಾಯಿ ಬೆರಸಿದಂಗೆ ಬೆರೆಸಿದ್ರು. ಅವ್ರೇ ಪೊಲೀಸ್ನೋರನ್ನ ಕರೆಸಿದ್ರು. ತಲೆ ಸುತ್ತಿ ಬಂದು ಬಿದ್ವಿ. ಸರೀ ಹೊಡ್ತ ತಿಂದ್ವಿ.’

Covid Diary : ಕವಲಕ್ಕಿ ಮೇಲ್ ; ‘ಏಳ್ನೂರು ಕಿಲೊಮೀಟರ್ ನಡದ್ವಿ ಅಲ್ಲೊಂದ್ಕಡೆ ಸುರಂಗದಾಗ ಬೆಳಕಿಲ್ಲ ಕೈಯ್ಯಾಗ ಬಿಸ್ಕೀಟಿಲ್ಲ‘
Follow us on

ಬರ್ತ ಒಂದೂರಲ್ಲಿ ಟೀವೀಲಿ ನೋಡ್ತಿವಿ, ಅದೆಲ್ಲೊ ಟ್ರ್ಯಾಕ್ ಮೇಲೆ ಜನಾ ಸತ್ತು ಬಿದ್ದಿದಾರೆ. ಅವ್ರ ಬ್ಯಾಗಲ್ಲಿದ್ದ ಬಿಸ್ಕತ್ತು ಚಪಾತಿ ತುಂಡಾಗಿ ಬಿದ್ದಿದಾವೆ. ನೋಡಿ ಒಂಥರ ಚಳಿ ನಡ್ಕ ಬಂದಂಗಾತು. ಯಾವ ಕಾರಣಕ್ಕೂ ಟ್ರ್ಯಾಕಿನ ಮೇಲೆ ಮಲಗಬಾರ್ದು ಅಂತ ಡಿಸೈಡ್ ಮಾಡಿದ್ವಿ. ಊರು ಬಂದ್ರೆ ಟ್ರ್ಯಾಕಿಂದ ಇಳಿದು ಊರೊಳಗೆ ಹೋಗ್ತಿದ್ವಿ. ಹಗಲು ಪೋಲೀಸ್ನರ ಕಣ್ಗೆ ಕಾಣ್ದಂಗೆ ಅಡುಕ್ಕಳದು, ರಾತ್ರಿ ಹೊತ್ತು ನಡಿಯದು. ಊರ್ನಿಂದ ಹೊರಗೆ ಇರೊ ಮನೇಲಿ ಏನಾರ ಬೇಡ್ತ ಇದ್ವಿ. ನೀವ್ ನಂಬ್ತಿರೊ ಇಲ್ಲೊ, ದುಡ್ಡಿರೋರು ಹೆದ್ರಿ ಬಾಗ್ಲೇ ತೆಗಿಲಿಲ್ಲ. ನಾವ್ ಬೇಡಿದ್ದೆಲ್ಲ ಬಡುವ್ರ ಹತ್ರನೆ. ನಮ್ಗೆ ಕೊಟ್ಟೋರೆಲ್ಲ ಬಡುವ್ರೆ. ಪಾಪ, ಇದ್ದಿದ್ರಲ್ಲೆ ಏನೋ ಕೊಟ್ಟಿರೋರು. ಒಂದ್ಕಡೆ ಅಂತೂ ಆ ಅಜ್ಜಿ ಹತ್ರ ಇದ್ದಿದ್ದೇ ಇಷ್ಟ್ ಮುಗ್ಗಲು ಅಕ್ಕಿ, ನಂ ಕತೆ ಕೇಳಿದ್ದೇ ಗಂಜಿ ಮಾಡಿ ಕೊಟ್ಳು. ಅಂಥವ್ರ ಹೆಸ್ರು, ಊರ್ನೆಲ್ಲ ನೆನಪಿಟ್ಕಂಡಿದಿವಿ. ಬದ್ಕಿದ್ರೆ ಮುಂದೊಂದಿನ ಅವ್ರಿಗೆ ಥ್ಯಾಂಕ್ಸ್ ಹೇಳಕ್ಕೆ ಹೋಗ್ಬೇಕು ಅಂತ.
*
ಕುಂಡೆ ಮೇಲೆ ಲಾಠಿ ಹೊಡೆತದ ಗುರುತು. ಊದಿಕೊಂಡ ಕಾಲು. ಅಂಗಾಲಿಡೀ ಗಾಯ. ಮುಂಬಯಿಯಿಂದ ಹೊರಟು ನೂರಾರು ಮೈಲಿ ದೂರ ಪೊಲೀಸರ ಕಣ್ತಪ್ಪಿಸಿ ನಡೆದುಬಂದವರು ತಮ್ಮ ಜಿಲ್ಲೆಯ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಕಳ್ಳಕಾಕರಿಗಿಂತ ಕಡೆಯಾಗಿ ಹೊಡೆತ ತಿಂದು, ಗಂಟಲು ದ್ರವದ ರ್ಯಾಪಿಡ್ ಟೆಸ್ಟ್ ನೆಗೆಟಿವ್ ಬಂದಮೇಲೆ ಕೊನೆಗಂತೂ ಊರಿಗೆ ಬಂದಿದ್ದರು. ಮರುದಿನವೇ ಇಬ್ಬರು ನಮ್ಮಲ್ಲಿ ಬಂದರು. ಕೃಶ ದೇಹಗಳು, ಬಳಲಿಕೆಗೆ ಸಣ್ಣಗಾದ ದನಿ. ತಮ್ಮವರನ್ನು ಸೇರಲಿರುವ ಸಮಾಧಾನ, ತೃಪ್ತಿಗೆ ಉದ್ವೇಗಗೊಂಡಿದ್ದಾರೆ. ಕರುಣೆ, ಸಹಾನುಭೂತಿಯ ಒಂದು ಸೊಲ್ಲಿಗೆ ತಂಪಾಗಿ ಒಂದೇಸಮ ಮಾತಾಡುತ್ತಿದ್ದಾರೆ.

‘ಊರು ಬಿಟ್ ಬಾಂಬೈ ಸೇರಿ ಎಷ್ಟು? ಹತ್ತತ್ರ ಇಪ್ಪತ್ತೈದ್ ವರ್ಷ. ಹೀಂಗ್ ಬರ್ತಿವಿ ಅಂದ್ಕಂಡಿರ್ಲಿಲ್ಲ. ಮೊದ್ಲೆಲ್ಲ ನಾವ್ ಬರ್ತಿವಿ ಅಂದ್ರೆ ಬಂಬೈಯಿಂದ ಬಂದೋರು ಏನೇನೋ ವಸ್ತು ತರ್ತಾರೆ, ತಮಗೆ ಪಾಲು ಸಿಗ್ತದೆ ಅಂತ ಟ್ರಂಕು ಇಳಿಸ್ಕಳುಕೆ ಜನ ಓಡೋಡಿ ಬರ್ತಿದ್ರು. ಈಗ? ಟ್ರಂಕ್ ಹೊರುದು ಇರ್ಲಿ, ಮನೆಗ್ ಬರ್ತಿದಿವಿ ಅಂದ್ರೆ ಬರ್ರಿ ಅಂತ ಕರೆಯೋರೂ ಗತಿ ಇಲ್ಲ. ಥ!’

‘ಚಪ್ಪಲಿ ಇಲ್ಲದೆ ನಡೆದಿದ್ದಾ? ಕಾಲು ಇಷ್ಟು ಗಾಯ ಆಗಿದೆ?’

‘ಚಪ್ಲಿ ಎಷ್ಟ್ ದಿನ ಬರುತ್ತೆ ಮೇಡಂ? ನೂರು ಕಿಲೋಮೀಟ್ರು ನಡೆಯದ್ರಲ್ಲಿ ನಮ್ಮೆಲ್ಲಾರ ಚಪ್ಲಿ ಪಡ್ಚ. ಟ್ರ್ಯಾಕ್ ಮೇಲೆ ಬಿದ್ದಿದ್ದ ಯಾರ್ಯಾರದ್ದೋ ಎಡಗಾಲು, ಬಲಗಾಲಿನ ಚಪ್ಲಿ ಸೇರ್ಸಿ ನಡದ್ವಿ. ಅವ್ರಿವ್ರ ಮನೆಯೋರು ಬಿಸಾಡಿದ ಚಪ್ಲಿ ಮೆಟ್ಟಿ ನಡದ್ವಿ. ಬಟ್ಟೆ ಕಟ್ಕಂಡ್ ನಡದ್ವಿ. ಟ್ರ್ಯಾಕ್ ಮೇಲಿನ ಜಲ್ಲಿಗೆ ಯಾವ್ದೂ ನಿಲ್ಲಲ್ಲ. ಟಾರ್ ರೋಡಿನ ಮೇಲೆ ಬರಿಗಾಲಲ್ಲಿ ನಡದು ಅಂಗಾಲು ಸವೆದೇ ಹೋಯ್ತು.’

ಒಳ್ಳೆಯ ಶೂಸ್ ಇರದೆ ವಾಕ್ ಮಾಡುವುದೇ ಕಷ್ಟ. ಇನ್ನು ಏಳೆಂಟು ನೂರು ಕಿಲೋಮೀಟರುಗಳನ್ನು ಯಾವ ಚಪ್ಪಲಿ ತಡೆದೀತು? ಜಿಲ್ಲೆಯ ಪೊಲೀಸರು ಚಪ್ಪಲಿ ಕೊಡಿಸಿ ಕಳಿಸಿದ್ದರೂ ಮೆಟ್ಟಲು ಆಗದಷ್ಟು ಅಂಗಾಲ ಗಾಯಗಳಿದ್ದವು. ಪಾದದ ಗಾಯಗಳಿಗೆ ಡ್ರೆಸಿಂಗ್ ಮಾಡುತ್ತ ನೋವು ತಿಳಿಯದಿರಲೆಂದು ಮಾತನಾಡಿಸುತ್ತ ಸಾಗಿದೆವು. ಮಾತಿನ ನದಿ ನೆರೆಯಂತೆ ಹರಿದು ಬಂತು.

‘ನಾವ್ ಏಳು ಜನ ಒಂದೇ ಬಾರಲ್ಲಿ ಕೆಲಸ ಮಾಡ್ತಿದ್ದೋರು. ಅಲ್ಲೇ ಒಂದ್ ರೂಮಲ್ಲಿ ಇದ್ದಿದ್ದು. ಬಂಬೈ ಲಾಕ್‍ಡೌನ್ ಆದ್ಮೇಲೂ ಕದ್ದುಮುಚ್ಚಿ ಬಾರ್ ನಡೀತಿತ್ತು. ಎಣ್ಣೆ ಸ್ಟಾಕ್ ಖಾಲಿಯಾಗೋ ತಂಕ ನಮ್ಮ ಓನರ್ ಚಿಂತೆನೇ ಮಾಡ್ಲಿಲ್ಲ. ಒಂದು ತಿಂಗ್ಳು ಸಂಬ್ಳ ಹೆಚ್ಗೇ ಕೊಟ್ಟ. ದಿಲ್‍ದಾರ್ ಮನ್ಶ ಅಂವಾ. ಆದ್ರೆ ನಂ ಓನರ್ಗೇ ಕೊರೊನ ಬಂತು. ಹಂಗಿಂಗಲ್ಲ, ಸತ್ತೇ ಹೋದ. ಅವ್ರ ಮನೆಯೋರ್ಗೂ ಕರೊನ ಬಂದು ಪಾಪ ಅವ್ರುನ್ನ ಕೇಳೋರು ಗತಿ ಇಲ್ದಂಗಾದ್ರು. ಇನ್ ನಮ್ಮನ್ಯಾರು ಕೇಳೋರು? ನೇಪಾಳಿ ಹುಡುಗ್ರುನ್ನ ಅಲ್ಲೇ ಬಿಟ್ಟು ನಾವು ಹೊರಟ್ವಿ. ಹೊಗೆ ಹಾಕಿದ್ರೆ ಬಿಲದಿಂದ ಇಲಿ ಹೊರಗ್ ಬರೋಹಂಗೆ ಜನಾ ಆ ಊರು ಬಿಟ್ರು. ಸುತ್ತಮುತ್ತ ಇರೋರು ಸಾಯದ್ ನೋಡಿ ಜೀಂವಾ ಒಂದುಳುದ್ರೆ ಬೇಡ್ಕಂಡಾದ್ರು ತಿನ್ನಣ ಅಂತ ಆ ಊರು ಬಿಟ್ರು.

ಅಯ್ಯಪ್ಪ ಸ್ವಾಮಿಗೆ ಹೋಗೋರು ಬೊಂಬಾಯಿಂದ ಶಬರಿಮಲೆ ತಂಕ ನಡೀತಾರೆ. ಅವ್ರಿಗೆ ಭಕ್ತಿ. ನಮ್ಗೆ ಭಯ. ಪೋಲೀಸ್ನೋರ ಕಣ್ ತಪ್ಸುಕ್ಕೆ ಹೈವೇ ಬಿಟ್ಟು ಸಮುದ್ರ ದಂಡೆ ಹಿಡ್ದು ಕಡೆಗೆ ರೈಲ್ವೆ ಟ್ರ್ಯಾಕ್ ಹತ್ತಿದ್ವಿ. ಕೈಲಿ ದುಡ್ಡಿಲ್ಲ. ಒಬ್ರ ಮೊಬೈಲನ್ನ ಯಾವನೋ ಕುಡುಕಂಗೆ ನಾಕು ಕಾಸಿಗೆ ಮಾರಿದ್ವಿ. ಒಂದೆರೆಡು ಬಟ್ಟೆ, ಕುಡಿಯೋ ನೀರಿನ ಬಾಟಲಿ, ಒಂದ್ ಗೂಡಂಗ್ಡೀಲಿ ಇದ್ದಷ್ಟೂ ಬಿಸ್ಕತ್ ತಗಂಡು ಹೊರಟದ್ದು. ಎಷ್ಟ್ ದಿನಕ್ಕೆ ಮುಟ್ತಿವಿ, ಏನು ಬೇಕು ಏನೂ ಗೊತ್ತಿಲ್ಲ.

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಬರ್ತ ಒಂದೂರಲ್ಲಿ ಟೀವೀಲಿ ನೋಡ್ತಿವಿ, ಅದೆಲ್ಲೊ ಟ್ರ್ಯಾಕ್ ಮೇಲೆ ಜನಾ ಸತ್ತು ಬಿದ್ದಿದಾರೆ. ಅವ್ರ ಬ್ಯಾಗಲ್ಲಿದ್ದ ಬಿಸ್ಕತ್ತು ಚಪಾತಿ ತುಂಡಾಗಿ ಬಿದ್ದಿದಾವೆ. ನೋಡಿ ಒಂಥರ ಚಳಿ ನಡ್ಕ ಬಂದಂಗಾತು. ಯಾವ ಕಾರಣಕ್ಕೂ ಟ್ರ್ಯಾಕಿನ ಮೇಲೆ ಮಲಗಬಾರ್ದು ಅಂತ ಡಿಸೈಡ್ ಮಾಡಿದ್ವಿ. ಊರು ಬಂದ್ರೆ ಟ್ರ್ಯಾಕಿಂದ ಇಳಿದು ಊರೊಳಗೆ ಹೋಗ್ತಿದ್ವಿ. ಹಗಲು ಪೋಲೀಸ್ನರ ಕಣ್ಗೆ ಕಾಣ್ದಂಗೆ ಅಡುಕ್ಕಳದು, ರಾತ್ರಿ ಹೊತ್ತು ನಡಿಯದು. ಊರ್ನಿಂದ ಹೊರಗೆ ಇರೊ ಮನೇಲಿ ಏನಾರ ಬೇಡ್ತ ಇದ್ವಿ. ನೀವ್ ನಂಬ್ತಿರೊ ಇಲ್ಲೊ, ದುಡ್ಡಿರೋರು ಹೆದ್ರಿ ಬಾಗ್ಲೇ ತೆಗಿಲಿಲ್ಲ. ನಾವ್ ಬೇಡಿದ್ದೆಲ್ಲ ಬಡುವ್ರ ಹತ್ರನೆ. ನಮ್ಗೆ ಕೊಟ್ಟೋರೆಲ್ಲ ಬಡುವ್ರೆ. ಪಾಪ, ಇದ್ದಿದ್ರಲ್ಲೆ ಏನೋ ಕೊಟ್ಟಿರೋರು. ಒಂದ್ಕಡೆ ಅಂತೂ ಆ ಅಜ್ಜಿ ಹತ್ರ ಇದ್ದಿದ್ದೇ ಇಷ್ಟ್ ಮುಗ್ಗಲು ಅಕ್ಕಿ, ನಂ ಕತೆ ಕೇಳಿದ್ದೇ ಗಂಜಿ ಮಾಡಿ ಕೊಟ್ಳು. ಅಂಥವ್ರ ಹೆಸ್ರು, ಊರ್ನೆಲ್ಲ ನೆನಪಿಟ್ಕಂಡಿದಿವಿ. ಬದ್ಕಿದ್ರೆ ಮುಂದೊಂದಿನ ಅವ್ರಿಗೆ ಥ್ಯಾಂಕ್ಸ್ ಹೇಳಕ್ಕೆ ಹೋಗ್ಬೇಕು ಅಂತ.’

ಅವರು ಯಾಕೋ ಮೌನವಾದರು. ಆಗಿಹೋದದ್ದು ನೆನಪಿಸಿಕೊಳ್ಳಲು ಕಷ್ಟವಾಗುತ್ತಿರಬೇಕು. ಇದ್ದಕ್ಕಿದ್ದಂತೆ ಬದಲಾದ ವರ್ತಮಾನವು ಎದೆಯೊಳಗೆ ಘನೀಭವಿಸಿರುವಾಗ ಭವಿಷ್ಯದ ಅಸ್ಪಷ್ಟತೆ ದಿಗಿಲಾಗಿ ಎದೆಯೊಳಗೆ ಬೆಳೆಯುತ್ತಿರಬಹುದು. ಅವರು ಒಂದೇಸಮ ನಡೆದಿದ್ದರು. ಊರು ಬರುವವರೆಗೂ ಹೇಗಾದರೂ ನಡೆಯಬೇಕು ಎಂದು ದೇಹ ಎಳೆದುಕೊಂಡು ಬಂದಿದ್ದರು. ನಡುವೆ ಸುಸ್ತು, ಕಾಲುನೋವು, ಜ್ವರ ಬಂದಂತೆ ಆದರೂ ಅನ್ನ ಬೇಡಿದಂತೆ ಮನೆಗಳಲ್ಲಿ ಮಾತ್ರೆಯನ್ನೂ ಬೇಡಿ ತಿಂದರು.

‘ಎಷ್ಟು ದೂರ ಬಂದ್ವಿ ಗೊತ್ತಾಗ್ತಿರ್ಲಿಲ್ಲ ಮೇಡಂ. ನಡಿತ ನಡಿತ ಘಟ್ಟ ಬಂತು. ಊರಿಲ್ಲ, ಮನೆಯಿಲ್ಲ. ಬಿಸ್ಕೀಟು ಖಾಲಿಯಾಗಿತ್ತು. ಒಂದು ಸುರಂಗದ ಬಾಯಿ ಬಂತು. ಒಳಗೆ ಬೆಳಕಿಲ್ಲ. ಮೊಬೈಲು ಚಾರ್ಜು ಕೇಳಬಾರ್ದು. ಕಗ್ಗತ್ತಲ ಗವೀಲಿ ನಡಿವಾಗ ಯಾವ್ದಾರೂ ಹುಲಿಪಲಿ ಹಿಡ್ದು ಹಾಕಿದ್ರೆ ನಂ ಕತೆ ಇಲ್ಲೆ ಪಡ್ಚ ಅನ್ಸಿತ್ತು. ಆದ್ರೂ ಏನೋ ಧೈರ್ಯ ಮಾಡ್ಕಂಡು ಒಟ್ಟೊಟ್ಗೆ ನಡದ್ವಿ. ನಡಿತಾ ನಡಿತಾ ದೇವ್ರು ದಿಂಡ್ರು ಯಾರಿಲ್ಲ ಅನ್ಸೋಯ್ತು ಮೇಡಂ. ಮನುಷ್ಯರಿಗೆ ಮನುಶ್ರೇ ಆಗಬೇಕು. ಭೂಮ್ತಾಯಿ, ಪ್ರಾಣಿಪಕ್ಷಿ ಗಿಡಮರಗಳೇ ಸಹಾಯ ಮಾಡಬೇಕು. ಒಂದ್ಕಡೆ ಅಂತೂ ಎಷ್ಟು ಹೋದ್ರೂ ಬರೀ ಕಾಡು. ಒಂದೂರು ಸಹ ಬರ್ತಿಲ್ಲ. ದೊಡ್ಡ ಗುಡ್ಡಗಳ ಮಧ್ಯ ಎತ್ರನೆ ಬ್ರಿಜ್ ಮೇಲೆ ಟ್ರ್ಯಾಕ್ ಹೋಯ್ತು, ನಾವೂ ಅದ್ರಮೇಲೇ ನಡೆದ್ವಿ. ನೋಡಕ್ಕೆ ಎಂತಾ ಒಳ್ಳೇ ಸೀನ್ಸ್, ಆದ್ರೆ ನಮ್ಗೆ ಏನೂ ಬ್ಯಾಡ. ಎಂಥಾ ಬಾಯಾರ್ಕೆ ಅಂದ್ರೆ ಅದನ್ನ ಹೇಳಕ್ಕಾಗಲ್ಲ. ಇದುವರ್ಗೆ ಅಂಥ ಅನುಭವ ಆಗಿರ್ಲಿಲ್ಲ. ಗುಡ್ಡ ಕಳದ ಮೇಲೆ ಕೆಳಗೆ ಅಲ್ಲೆಲ್ಲೋ ಹರಿಯೋ ಹಳ್ಳ ಕಂಡತು. ಅದನ್ನ ಹುಡುಕ್ಕಂಡು ಹೆಂಗೆ ಓಡಿದ್ವಿ ಗೊತ್ತಾ? ನೀರು ಕಂಡಿಲ್ಲದವರಂಗೆ ಒಂದೇ ಸಮ ಕುಡಿದ್ವಿ. ಮುಂದೆ ಸಿಕ್ಕದಿದ್ರೆ ಅಂತ ಅದನೇ ಬಾಟಲಲ್ಲಿ ತುಂಬಿಕೊಂಡ್ವಿ. ಶೆಂಗಾ ಹೊಲ ಕಂಡು ಅದ್ನೆ ಕಿತ್ಕಂಡು ತಿಂದ್ವಿ. ಮಾವಿನಮರ ಕಂಡ್ರೆ ಮಾವಿನ ಹಣ್ಣು. ಬಾಯಾರ್ಕೆ ಆದ್ರೆ ಗೇರು ಹಣ್ಣು. ಏನು ತಿಂದ್ವೊ ಹ್ಯಾಗೆ ಬಂದ್ವೊ ಒಂಥರ ನೆನಪು ಮಾಡ್ಕಂಡ್ರೆ ಚಳಿ ಹುಟ್ಟುತ್ತೆ ಮೇಡಂ. ಇಂಥಾ ಒಂದಿನ ಲೈಫಲ್ಲಿ ನಮ್ಗೆ ಬರಬೋದಂತ ಕನಸಲ್ಲೂ ಅಂದ್ಕಂಡಿರಲಿಲ್ಲ.’

ಹೌದು. ಯಾರು ತಾನೇ ಅಂದುಕೊಂಡಿದ್ದರು? ಇಂಥಾ ಒಂದು ಕಾಯಿಲೆ ಬಂದು ಲೋಕಕ್ಕೆ ಲೋಕವನ್ನೇ ನಡುಗಿಸಿ ಕೋಟ್ಯಂತರ ಜನರನ್ನು ಬಾಧಿಸೀತು ಎಂದು ಯಾರು ಊಹಿಸಿದ್ದರು? ಎಷ್ಟು ಜನರ ಕಳೆದುಕೊಂಡೆವೋ? ಬದುಕಿರುವವರ ಹಸಿವಿನ, ನೋವಿನ, ಅಗಲಿಕೆಯ, ಹತಾಶೆಯ ಇಂಥ ಎಷ್ಟು ಕಥೆಗಳೋ?

‘ಗೋವಾ ಗಡಿ ದಾಟಿದ್ವಿ. ನಂ ಊರ್ಗೆ ಸ್ವಲ್ಪ ಹತ್ರ ಬಂದ್ವಿ ಅಂತ ಸಮಾಧಾನ. ಕನ್ನಡ ಅಕ್ಷರ ನೋಡಿ ಏನ್ ಆನಂದ ಆಯ್ತೋ. ಆದ್ರೆ ಯಾವ್ದೋ ಊರು ಕಂಡತು ಅಂತ ಹೋದ್ರೆ ಎಲ್ಲ ಕಡೆ ‘ಯಾರಿಗೂ ಪ್ರವೇಶವಿಲ್ಲ. ಊರೊಳಗೆ ಬರಬೇಡಿ’ ಅಂತ ಬೋರ್ಡು! ದಾರಿಗಡ್ಡವಾಗಿ ಮುಳ್ಳುಗಿಡ, ಕಲ್ಲು, ಮರದ ದಿಮ್ಮಿ, ಸೊಪ್ಪು ಹಾಕಿಟ್ಟಿದಾರೆ. ಮೊದ್ಲು ಸುಸ್ವಾಗತ ಅನ್ನೋ ಬೋರ್ಡು ಇರ್ತಿತ್ತು, ಇದೇನಾಗೋಯ್ತು ಅಂತ ಬಾರೀ ಬೇಜಾರಾಯ್ತು.

ರೈಲು ದಾರಿ ಬಿಟ್ ರಸ್ತೆ ಹಿಡಿದ್ವಿ. ಎಷ್ಟಂದ್ರು ನಂ ರಾಜ್ಯ ಅಂತ ಒಂತರ ಧೈರ್ಯ. ಹಗಲು ಹೊತ್ತು ಅಲ್ಲಿಲ್ಲಿ ಮಲಗಿ ರಾತ್ರಿ ಹೊತ್ತು ನಡದಿದ್ದೇ ಹೆಚ್ಚು. ರಾತ್ರಿ ರಸ್ತೆ ಮೇಲೆ ಆವಾಗೀವಾಗ ಪೊಲೀಸ್ ಜೀಪು ಬಿಟ್ಟು ಏನೂ ಇಲ್ಲ. ಮನುಶ್ರೇ ಇಲ್ಲ. ಪೆಟ್ರೋಲು ಬಂಕಾದ್ರು ಇದೆಯ, ಅದೂ ಇಲ್ಲ. ಡಾಬಾ ಇಲ್ಲ. ಚಾ ಅಂಗ್ಡಿ ಸೈತ ಇಲ್ಲ. ಒಂಥರಾ ಭಯ. ಪೊಲೀಸ್ ಜೀಪು ಕಂಡಕೂಡ್ಲೆ, ಲೈಟು ಬಂದಕೂಡ್ಲೆ ತಲೆ ಮರೆಸ್ಕತಿದ್ವಿ. ಅಡಕ್ಕತಿದ್ವಿ. ಒಂದೂರಲ್ಲಿ ಸಿಕ್ಕಾಪಟ್ಟೆ ಹಸಿವಾಗಿ ಅನ್ನ ಕೇಳಿದ್ರೆ ನಾಯಿ ಬೆರಸಿದಂಗೆ ಬೆರೆಸಿದ್ರು. ಅವ್ರೇ ಪೊಲೀಸ್ನೋರನ್ನ ಕರೆಸಿದ್ರು. ತಲೆ ಸುತ್ತಿ ಬಂದು ಬಿದ್ವಿ. ಸರೀ ಹೊಡ್ತ ತಿಂದ್ವಿ. ಇಷ್ಟು ಕಷ್ಟ, ಅವಮಾನ, ಹೊಡೆತ ಯಾಕೆ? ನಾವ್ ಮಾಡಿದ್ ತಪ್ಪಾದ್ರು ಏನು? ಅನ್ನ ನೀರಿಲ್ದೆ ಏಳುನೂರು ಮೈಲಿ ನಡೆದಿದ್ದು ತಪ್ಪಾ? ಸುರಂಗದಾಗೆ ಕತ್ಲು, ಕೈಲಿರೋ ಬಿಸ್ಕೀಟ್ ಖಾಲಿ.

ನಂಗನ್ಸುತ್ತೆ, ಊರಲ್ಲೇ ಏನೋ ಗದ್ದೆ ತೋಟ ಬಿಸ್ನೆಸ್ ಮಾಡದ್ ಬಿಟ್ಟು ಸಿಟೀಲಿರೋ ಆಸೆಗೆ ಇಲ್ಲಿಂದ ಅಲ್ಲಿಗ್ ಹೋದ್ದೇ ತಪ್ಪಾಯ್ತ ಅಂತ. ನನ್ ಹೆಣ್ತಿ ಯಾವಾಗೂ ಹೇಳೋಳು, ಬಾರಿನಲ್ಲಿ ದುಡ್ದಿದ್ ಸಾಕು. ಮಕ್ಳು ದೊಡ್ಡಾಗ್ತ ಇದಾರೆ, ಅವ್ರಿಗೆ ಅಪ್ಪನ ನೆನಪೇ ಇರಲ್ಲ, ಬರ್ರಿ ಬರ್ರಿ ಅಂತ. ಅವ್ಳ ಮಾತು ಕೇಳಿ ಆಗ್ಲೇ ಬಂದಿದ್ರೆ ಸರಿಯಾಗ್ತಿತ್ತೋ ಏನೋ. ಇರ್ಲಿ, ಎಲ್ಲ ಹಣೆಬರ.’

ತಮ್ಮಂತೆ ಎಷ್ಟೋ ಲಕ್ಷ ಜನ ನಡೆದೇ ಊರು ಮುಟ್ಟಿದ್ದು ಅವರಿಗೆ ಗೊತ್ತಿತ್ತು. ಅವರು ಹೇಳಿದ ಮುಂಬೈ ಕತೆಗಳ ಕೇಳುತ್ತ ನಮ್ಮ ಎದೆ ಭಾರವಾಯಿತು.

‘ತನಗೆ ಬೇಕಾದಾಗ ಸಿಟಿ ದುಡಿಸಿಕೊಳುತ್ತೆ. ತಮಗೇ ತತ್ವಾರ ಆದಾಗ ಎಲ್ಲೆಂಲ್ಲಿಂದಲೋ ಬಂದು ಅವರ ಸೇವೆ ಮಾಡೋ ಬಡವರು, ಕೂಲಿಗಳನ್ನ ಹೋಗಿ ಅನ್ನುತ್ತೆ. ಮುಂಬೈ ಇರಲಿ, ದುಬೈ ಇರಲಿ, ನಗರಗಳು ನಡೀತಿರದೆ ಪರಸ್ಥಳಗಳಿಂದ ಬಂದು ಸೇವೆ ಮಾಡೋರಿಂದ. ಆದರೆ ಅವರಿಗೆ ಆ ನೆನಪೇ ಇಲ್ಲವಲ್ಲ? ಇದು ಸರಿಯಲ್ಲ’ ಎಂದೆ ತಡೆಯಲಾರದೇ.

‘ನಮ್ಮ ಹೊಟ್ಟೆಪಾಡಿಗೆ ಅಂತ ನಾವ್ ಅಲ್ಲಿಗೆ ಹೋದ್ದು, ಆ ಊರನ್ನ ಉದ್ಧಾರ ಮಾಡಕ್ಕಲ್ಲ. ಹಂಗೇ ಅವ್ರೂ. ತಮ್ಮ ಕೆಲಸಕ್ಕೆ ಅಂತ ನಮ್ಮನ್ನ ಇಟ್ಕಂಡ್ರು, ನಮ್ಮೇಲಿನ ಪ್ರೀತಿಗಲ್ಲ. ಆದ್ರೆ ನಮ್ಮ ರಾಜ್ಯ, ನಮ್ಮೂರು, ನಮ್ಮನೆ ಜನಾನೇ ನಮ್ಮನ್ನ ದೂರ ಮಾಡ್ತ ಇದಾರಲ? ಇಷ್ಟ್ ದಿನ ನಾವು ಕಳಿಸಿದ ಹಣದಲ್ಲಿ ಬದುಕಿ ಈಗ ಬರ್ತಿವಿ ಅಂದ್ರೆ ಬಾಯ್ತುಂಬ ಬಾ ಅಂತ್ಲು ಹೇಳಲ್ಲವಲ್ಲ? ನಂ ಸರ್ಕಾರನೂ ಗಡಿ, ರೈಲು, ಬಸ್ ಬಂದ್ ಮಾಡಿ ಕೂತ್ಕತಾರಲ್ಲ? ಇದು ನ್ಯಾಯನಾ?’

ಉದ್ವೇಗದಲ್ಲಿ ಹೇಳಿದ ಆ ಮಾತುಗಳು ಸ್ವಾನುಭವದ ವಿಷಾದದಿಂದ ಹುಟ್ಟಿದವು ಎಂದು ಅವರ ಕಣ್ಣಂಚಿನ ನೀರು ಹೇಳಿಬಿಟ್ಟಿತು.

*
ಪದ ಅರ್ಥ
ಪಡ್ಚ = ಇಲ್ಲ
*
ಫೋಟೋ : ಎಸ್. ವಿಷ್ಣುಕುಮಾರ್
*
ನಾಳೆ ನಿರೀಕ್ಷಿಸಿ: ಕವಲಕ್ಕಿ ಮೇಲ್-6 ; ‘ನಿಂ ತಾಲೂಕಿನ ಟೆಸ್ಟ್ ಟಾರ್ಗೆಟ್ ರೀಚ್ ಆಗಿಲ್ಲ, ಯಾಕಯ್ಯಾ?’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಇದ್ನ ನಿಮುಗ್ ಕೊಡ್ದೆ ಹ್ಯಾಂಗ್ ತಿಂಬುದು ಅಮಾ?’

Published On - 1:33 pm, Sat, 5 June 21