ಮದುವೆ ಮನೆಯಲ್ಲಿ ಹಣ್ಣುಗಳ ಸಂಭ್ರಮ! ಹಾಡು ಹೇಳುತ್ತಲೇ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದಾರೆ ವಂದನಾ ಟೀಚರ್
ಮದುವೆ ಮನೆಯಲ್ಲಿ ಹಣ್ಣುಗಳೆಲ್ಲಾ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತದೆ.. ಹಣ್ಣುಗಳಿಗೆ ಮದುವೆ ಮಾಡಿಸುತ್ತಲೇ ಮಕ್ಕಳಿಗೆ ಕಲಿಕೆಯ ಪಾಠ ಹೇಳಿಕೊಡುತ್ತಿದ್ದಾರೆ ಟೀಚರ್. ಈಗ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್ ಆಗಿದ್ದಾರೆ ಮಕ್ಕಳ ಅಚ್ಚುಮೆಚ್ಚಿನ ವಂದನಾ ಟೀಚರ್.
ತರಗತಿಯ ತುಂಬ ಮಕ್ಕಳು. ಅವರ ಉಜ್ವಲ ಭವಿಷ್ಯಕ್ಕಾಗಿ ಕನಸು ಹೊತ್ತು ಪಾಠ ಹೇಳಿಕೊಡುವ ಶಿಕ್ಷಕರು. ಶಾಲೆ ಎಂಬ ದೇಗುಲದಲ್ಲಿ ಪ್ರತಿ ಮಗುವಿನಲ್ಲಿ ಉಜ್ವಲ ಭವಿಷ್ಯದ ಅಡಿಪಾಯ. ಕೈಹಿಡಿದು ತಿದ್ದುತ್ತಾ ‘ಅ’ ಅಕ್ಷರದ ಪ್ರಾರಂಭದಿಂದ ಅಭ್ಯಾಸದ ಮೊದಲ ಹೆಜ್ಜೆ ಇಡುತ್ತಾ, ಶಿಕ್ಷಣದ ಹಾದಿಯಲ್ಲಿ ಬಿದ್ದರೆ ಕೈಹಿಡಿದು ಮೇಲೆತ್ತಿ ಸಂತೈಸುತ್ತಾ, ಗೆದ್ದರೆ ಹುರಿದುಂಬಿಸುತ್ತಾ ಕರೆದೊಯ್ಯುತ್ತಾರೆ. ಆದರೆ ಇದು ಲಾಕ್ಡೌನ್ ಸಮಯ. ಇದರ ಸದುಪಯೋಗ ಬಹಳ ಮುಖ್ಯ. ಹೀಗಾಗಿ ಒಂದು ಹೊಸ ಉದ್ದೇಶದೊಂದಿಗೆ ಮಕ್ಕಳಿಗೆ ಪಾಠದ ಜತೆಗೆ ಹಾಡು-ನೃತ್ಯ-ಸಂಗೀತದ ಒಲವು ಬರುವಂತೆ ಮಾಡುತ್ತಿದ್ದಾರೆ ಈ ಶಿಕ್ಷಕಿ. ಹಣ್ಣುಗಳಿಗೆ ಮದುವೆ ಮಾಡಿಸುತ್ತಲೇ ಮಕ್ಕಳಿಗೆ ಕಲಿಕೆಯ ಪಾಠ ಹೇಳಿಕೊಡುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್ ಆಗಿದ್ದಾರೆ ಮಕ್ಕಳ ಅಚ್ಚುಮೆಚ್ಚಿನ ವಂದನಾ ಟೀಚರ್.
ಶಾಲೆಯಲ್ಲಿ ನನ್ನ ತರಗತಿಯ ವಿದ್ಯಾರ್ಥಿಗಳೆಲ್ಲ ಎಲ್ಕೆಜಿ ಅಥವಾ ಅಂಗನವಾಡಿ ಹೋಗುವ ವಯಸ್ಸಿನವರು. ಅಷ್ಟು ಚಿಕ್ಕವಯಸ್ಸಿನವರನ್ನು ಸಂಬಾಳಿಸುವುದು ದೊಡ್ಡ ಸಾಹಸವೇ ಸರಿ. ಅವರಿಗೆ ‘ಶಿಕ್ಷಣ’ ಎಂಬ ಪದದ ಅರ್ಥವೂ ಗೊತ್ತಿಲ್ಲದ ತಿಳಿ ವಯಸ್ಸು. ಇದ್ದಕಿದ್ದಂತೆಯೇ ಲಾಕ್ಡೌನ್ ಜಾರಿಯಾಗಿದೆ ಆನ್ಲೈನ್ ಮೂಲಕ ಪಾಠ ಮಾಡಬೇಕು ಅಂದುಬಿಟ್ಟಿದ್ದಾರೆ! ನನಗೆ ತುಂಬಾ ಯೋಚನೆ ಕಾಡತೊಡಗಿತ್ತು ಎನ್ನುತ್ತಲೇ ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಿಕ್ಷಕಿ ವಂದನಾ ರೈ ಟಿವಿ9 ಡಿಜಿಟಲ್ ಜತೆ ಮಾತು ಪ್ರಾರಂಭಿಸಿದರು.
ಎದುರಿಗೆ ಇದ್ದಾಗಲೇ ಮಾತು ಕೇಳಿಸುವುದು ಕಷ್ಟ. ಹಾಗಿದ್ದಾಗ ಅಲ್ಲೆಲ್ಲೋ ದೂರದಲ್ಲಿ ಕುಳಿತು ಕ್ಯಾಮರಾದ ಮುಂದೆ ಇರುವ ನಾನು ಅವರಿಗೆ ಶಿಕ್ಷಕಿಗಿಂತ ತಲೆಯಾಡಿಸುತ್ತಿರುವ ಬೊಂಬೆಯಂತೆ ಕಾಣ ತೊಡಗಿಸಿ ಬಿಡುತ್ತೇನೋ! ಈ ಚಿಂತೆಯಲ್ಲಿಯೇ ನನಗೆ ಹೊಸ ಯೋಚನೆಯೊಂದು ಹೊಳೆದದ್ದು. ಅವರ ಮನಸ್ಥಿತಿಗೆ ನಾವಿಳಿಯಬೇಕು. ಅವರ ಜತೆ ಅವರಂತೆಯೇ ವರ್ತಿಸಬೇಕು. ಆಗ ಮಾತ್ರ ಅವರು ನಮ್ಮನ್ನು ನಂಬುತ್ತಾರೆ. ಹಾಡು-ನೃತ್ಯದ ಮೂಲಕ ಅಕ್ಷರಭ್ಯಾಸ ಮಾಡಿದರೆ ಮಕ್ಕಳು ಇಷ್ಟಪಡಬಹುದೆಂಬ ಸಣ್ಣ ನಂಬಿಕೆಯಿಂದ ‘ಎ’ ಫಾರ್ ಆ್ಯಪಲ್ ಎಂಬ ಹಾಡು ಶುರು ಮಾಡಿದ್ದು. ವಿಡಿಯೋ ಮಾಡಿ ಮಕ್ಕಳಿಗೆ ಕಳುಹಿಸತೊಡಗಿದೆ. ಮಕ್ಕಳಿಗೆ ಆಟದ ಜತೆ ಪಾಠ ಕಲಿಯುವುದೆಂದರೆ ಇಷ್ಟ. ಅವರ ಮನಸ್ಥಿತಿಯನ್ನ ನಾವು ಅರ್ಥೈಸಿಕೊಂಡು ತಿಳಿಸಿ ಹೇಳುವ ಕೆಲಸ ಶಿಕ್ಷಕರದ್ದು. ಪುಸ್ತಕದಲ್ಲಿದ್ದ ಪದ್ಯವನ್ನು ಸುಮ್ಮನೇ ಬಾಯ್ ಪಾಠ ಮಾಡಿಸುವುದಕ್ಕಿಂತ ಹಾಡು ಹೇಳುತ್ತಾ, ನೃತ್ಯದ ಮೂಲಕ ಅಭಿನಯ ಮಾಡುತ್ತಾ ಅಕ್ಷರ ಕಲಿಸಿದರೆ ಚಿಕ್ಕ ಮಕ್ಕಳು ಬಹುಬೇಗ ಕಲಿಯುತ್ತಾರೆ ಎನ್ನುತ್ತಾರೆ ಶಿಕ್ಷಕಿ ವಂದನಾ.
ಮೊದಲು ಎ ಫಾರ್ ಆ್ಯಪಲ್ .. ಬಿ ಫಾರ್ ಬಾಲ್ ಎಂಬ ಪದ್ಯವನ್ನು ಹಾಡುತ್ತಾ.. ನನಗೂ ಮಕ್ಕಳಷ್ಟೇ ವಯಸ್ಸು ಅಂದುಕೊಳ್ಳುತ್ತಾ ಅಭಿನಯಿಸಲು ಪ್ರಾರಂಭಿಸಿದೆ. ಪದ್ಯದ ಮಧ್ಯದಲ್ಲಿ ಪದಗಳ ಉಚ್ಛಾರಣೆ ಮತ್ತು ಅಕ್ಷರಗಳನ್ನು ಸೇರಿಸಿಕೊಂಡು ಹೇಳಿಕೊಡುತ್ತಾ ಹಾಡಲು ಪ್ರಾರಂಭಿಸಿದೆ. ಇದರಿಂದ ಮಕ್ಕಳು ನನ್ನ ಹಾಡನ್ನು ಕೇಳಲಾರಂಭಿಸಿದರು. ಹಾಡು ಅಂದಾಕ್ಷಣ ಮಕ್ಕಳು ಬಹುಬೇಗ ಆಕರ್ಷಿತರಾಗ್ತಾರೆ. ಹಾಗೆಯೇ ನಾನು ಹೇಳಿಕೊಡುತ್ತಿದ್ದಂತೆಯೇ ಅವರೂ ಸ್ಪಂದಿಸಲು ಶುರು ಮಾಡಿದ್ರು. ಹೀಗೆ ಆರಂಭಗೊಂಡಿತು ನನ್ನ ಈ ಹೊಸ ಪ್ರಯತ್ನದ ಬುನಾದಿ ಎಂದು ವಂದನಾ ಹೇಳುತ್ತಾರೆ.
ಡಿಜಿಟಲ್ ಯುಗದಲ್ಲಿ ಕನ್ನಡ ಬಳಕೆಯೇ ಕಡಿಮೆಯಾಗುತ್ತಿದೆ- ವಂದನಾ ರೈ
ಈಗಿನ ಡಿಜಿಟಲ್ ಯುಗದಲ್ಲಿ ಕನ್ನಡ ಬಳಕೆಯೇ ಕಡಿಮೆಯಾಗುತ್ತಿದೆ. ಹಾಗಾಗಿ ಕನ್ನಡಕ್ಕೂ ಹೆಚ್ಚು ಪ್ರಾಶಸ್ತ್ಯ ಕೊಡಬೇಕು.ಎಂಬ ಯೋಚನೆ ಬಹಳ ಕಾಡತೊಡಗಿತ್ತು. ಕನ್ನಡದ ಹಾಡುಗಳಿಗೆ ತರಕಾರಿಗಳ ಹೆಸರು, ಹಣ್ಣುಗಳ ಹೆಸರನ್ನು ಸೇರಿಸಿಕೊಂಡು ಹಾಡುತ್ತಾ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ ಹೋದೆ. ಕೇವಲ ಆನ್ಲೈನ್ನಲ್ಲಿ ಹೇಳಿ ಕೊಡಬಹುದಷ್ಟೇ! ಆದರೆ ಮಕ್ಕಳು ಇದರ ಅಭ್ಯಾಸ ಹೇಗೆ ಮಾಡುತ್ತಾರೆ? ಎಂಬ ಪ್ರಶ್ನೆ ನನ್ನಲ್ಲಿಯೇ ನನಗೆ ಕಾಡಿತು. ಹಾಗಾಗಿ ವಿವಿಧ ಹಣ್ಣುಗಳನ್ನು ದೂರದಿಂದ ಹೋಗಿ ಕಿತ್ತು ತಂದು, ಹಣ್ಣುಗಳನ್ನು ತೋರಿಸುತ್ತಾ ಜತೆಜತೆಗೆ ಅಭಿನಯ ಮಾಡುತ್ತಾ ವಿಡಿಯೋ ಮಾಡಿದೆ. ಇದನ್ನು ನನ್ನ ವಿದ್ಯಾರ್ಥಿಗಳಿಗೆ ವಾಟ್ಸ್ಯಾಪ್ ಮೂಲಕ ಕಳುಹಿಸಿಕೊಡುತ್ತಿದೆ. ಅದನ್ನು ಒಂದು ದಿನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಷ್ಟೇ! ವಿಡಿಯೋ ಒಂದು ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿತು ಎಂದು ಶಿಕ್ಷಕಿ ವಂದನಾ ಖುಷಿಯನ್ನು ಹಂಚಿಕೊಂಡರು.
ಮಕ್ಕಳೂ ಕೂಡಾ ಹೆಚ್ಚು ಇಷ್ಪಡುತ್ತಿದ್ದಾರೆ ಎಂಬ ಆ ಒಂದು ಮಾತು ನನ್ನ ಮನ ತಣಿಸಿತು. ಅಂದೇ ನಿರ್ಧರಿಸಿದೆ ಇಂತಹ ಅನೇಕ ವಿಡಿಯೋಗಳನ್ನು ಮಾಡಿ ಮಕ್ಕಳು ನೋಡುವುದರಿಂದ ಬಹುಬೇಗ ಅಕ್ಷರಗಳನ್ನು ಕಲಿಯುತ್ತಾರೆ. ಹಾಡು-ನೃತ್ಯದ ಜತೆಗೆ ಶಿಕ್ಷಣ ಬಹುಬೇಗ ತಲೆಗೆ ಹತ್ತುತ್ತದೆ ಎಂಬ ಭರವಸೆ ಗಟ್ಟಿಯಾಯಿತು. ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡುವಂತೆ ಪೋಷಕರು ಒತ್ತಾಯಿಸಿದರು ಇದು ನನಗೊಂದು ರೀತಿಯ ಹೆಮ್ಮೆ ಎನ್ನುತ್ತಾರೆ ವಂದನಾ ರೈ.
ನಿಮ್ಮ ಚಿಕ್ಕ ವಯಸ್ಸಿನ ವಿದ್ಯಾಭ್ಯಾಸ ಹೇಗಿತ್ತು?
ನನ್ನ ಕಾಲದಲ್ಲಿ ಅಕ್ಷರಾಭ್ಯಾಸ ಹೇಗಿತ್ತು ಎಂಬುದನ್ನೆ ನಾನು ಇಂದು ಪ್ರಯೋಗಿಸುತ್ತಿದ್ದೇನೆ ಅಷ್ಟೇ. ನಾನು ಶಾಲೆಗೆ ಹೋಗುವಾಗ ಕ್ರೀಡಾಂಗಣದಲ್ಲೇ ನಮಗೆ ಆಟ ಪಾಠ ಎಲ್ಲವೂ. ಹೀಗಾಗಿ ಬಹುಬೇಗ ಅಕ್ಷರಗಳನ್ನು ಕಲಿತೆವು. ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಲ್ಲಿಯೂ ಸಾಧಿಸಿದೆವು. ಆದರೆ ಈಗಿನ ಮಕ್ಕಳನ್ನು ನೋಡಿದರೆ ಪಂಜರದಲ್ಲಿ ಕೂಡಿ ಹಾಕಿದ ಪಕ್ಷಿಗಳಂತೆ ಕಾಣುತ್ತಾರೆ. ನಾಲ್ಕು ಗೋಡೆಯ ಮಧ್ಯದಲ್ಲಿ ಪಾಠ. ಹಾಗಾಗಿ ಎಲ್ಲ ಶಿಕ್ಷಕರಲ್ಲಿಯೂ ಹೇಳುವುದಿಷ್ಟೆ.. ವಿದ್ಯೆಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಕ್ಕಳಿಗೆ ಕಳುಹಿಸಿಕೊಡಿ. ಆದಷ್ಟು ಶಾಲೆಯ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಂಡು ಕಲಿಸುವತ್ತ ಹೆಚ್ಚಿನ ಗಮನ ಕೊಡಿ ಮತ್ತು ಮಕ್ಕಳ ಮನಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಿ ಎಂದು ಅಭಿಪ್ರಾಯಪಟ್ಟಿದ್ದಾರೆ ವಂದನಾ ಟೀಚರ್.
ಪೋಷಕರಿಗೆ ಕಿವಿಮಾತು
ಲಾಕ್ ಡೌನ್ ಸಮಯ ಮಕ್ಕಳೆಲ್ಲ ಮನೆಯಲ್ಲಿಯೇ ಇರುತ್ತಾರೆ. ಪೋಷಕರೂ ಸಹ ಮನೆಯಲ್ಲಿರುತ್ತಾರೆ. ಹಾಗಾಗಿ ಮಕ್ಕಳಿಗೆ ಮನೆ ಸುತ್ತ ಮುತ್ತ ವಾತಾವರಣದಲ್ಲಿ ಬೆಳೆಸಿ. ಕೇವಲ ಮನೆಯ ನಾಲ್ಕು ಗೋಡೆಯ ಪ್ರಪಂಚ ಮಾತ್ರ ಎನ್ನುತ್ತಾ ಉಸಿರುಗಟ್ಟಿಸುವ ಚೌಕಟ್ಟು ಬೇಡ. ಚಿಕ್ಕ ಮಗುವು ಆಟವಾಡಲು ಬಯಸುತ್ತದೆ, ಮಣ್ಣಿನಲ್ಲಿ ಆಡುತ್ತದೆ, ಹಾಡುತ್ತದೆ, ಕುಣಿಯುತ್ತದೆ ಅವಕಾಶ ಬೇಕು. ಚಿಕ್ಕವರಿದ್ದಾಗಲೇ ಅವುಗಳಿಗೆ ಔಕಟ್ಟು ಹಾಕಿಬಿಟ್ಟರೆ ಮುಂದೆಲ್ಲಿ ಪ್ರತಿಭೆ ಹೊರಬರಲು ಸಾಧ್ಯ? ಎಂದು ಶಿಕ್ಷಕಿಯಾಗಿ, ಪೋಷಕಿಯಾಗಿ ಸಂದೇಶ ಸಾರಿದ್ದಾರೆ.
4 ತಿಂಗಳಿಂದ ಸಂಬಳವಿಲ್ಲ- ಶಿಕ್ಷಕರನ್ನು ಕೈಬಿಡಬೇಡಿ
ನಾವು ಶಿಕ್ಷಕರು ಸ್ವಾಲಂಬಿಗಳು. ಯಾರ ಬಳಿಯೂ ಕೈಚಾಚುವ ಮನಸ್ಸಿಲ್ಲ. ಖಾಸಗೀ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಸಲ್ಲಿಸುತ್ತಿದ್ದೇನೆ 4 ತಿಂಗಳಿನಿಂದ ಸಂಬಳಗಳಿಲ್ಲ. ಸರ್ಕಾರಿ ಶಿಕ್ಷಕರಿಗೆ ಒಂದಿಷ್ಟಾದರೂ ಸಂಬಳ ಸಿಗುತ್ತಿದೆ. ನಮ್ಮಂತಹ ಖಾಸಗೀ ಸಂಸ್ಥೆಯಲ್ಲಿ ಕೆಲಸ ಮಾಡುವ ಅದೆಷ್ಟೋ ಸ್ವಾವಲಂಬಿ ಶಿಕ್ಷಕರನ್ನು ಕೈಬಿಡಬೇಡಿ ಎಂಬ ಬೇಸರದ ಜತೆಗೆ ತಮ್ಮ ಹೊಸ ಯೋಚನೆಗೆ ಸಿಕ್ಕ ಪ್ರತಿಫಲದ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಪರಿಚಯ ವಂದನಾ ರೈ ಮೂಲತಃ ಕಾರ್ಕಳ ತಾಲೂಕಿನ ನೆಲ್ಲುರಿನವರು. ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ಕೆಜಿ ಮಕ್ಕಳಿಗೆ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಂದಿಗೂ ಮಕ್ಕಳ ಏಳಿಗೆಯನ್ನೇ ಬಯಸುವ ಶಿಕ್ಷಕಿ ಇವರು. ಕೊರೊನಾ ಸಾಂಕ್ರಾಮಿಕ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಮನೆಯಲ್ಲಿಯೇ ಆನ್ಲೈನ್ ಪಾಠ ಮಾಡುವ ಸಂದರ್ಭವನ್ನು ಹೇಗೆ ನಿಭಾಯಿಸುವುದು ಎಂಬ ಯೋಚನೆಗೆ ಇದ್ದಾಗ ಈ ರೀತಿಯ ಹೊಸ ಮಾರ್ಗವನ್ನು ಕಂಡುಕೊಂಡು ಮಕ್ಕಳ ಅಚ್ಚು-ಮೆಚ್ಚಿನ ಶಿಕ್ಷಕಿಯಾಗಿದ್ದಾರೆ. ಯಕ್ಷಗಾನ ಕಲಾವಿದೆ, ನೃತ್ಯ-ಸಂಗೀತ- ಹಾಡಿನ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಕ್ಕಳಿಗೆ ಫೇವರೇಟ್ ಶಿಕ್ಷಕಿಯಾಗಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಕೇವಲ ಅವರ ಶಾಲೆಯ ಮಕ್ಕಳೊಂದೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಮಕ್ಕಳೆಲ್ಲ ಖುಷಿ ಪಡುತ್ತಿದ್ದಾರೆ. ಇವರ ಈ ಹೊಸ ಪ್ರತಿಭೆಯ ರುಚಿ ಕಂಡ ಮಕ್ಕಳು ಮನೆಯಲ್ಲಿದ್ದರೂ ಅಕ್ಷರಾಭ್ಯಾಸದ ಜತೆ ಹಾಡು-ಸಂಗೀತ-ನೃತ್ಯದ ಕಡೆಗೆ ಒಲವು ತೋರುತ್ತಿರುವುದು ಖುಷಿತ ವಿಚಾರ.