Love : ಏಸೊಂದು ಮುದವಿತ್ತು ; ಮಾಮಾ ಮಾಮಿ ಸಕ್ಕಾಸರಿಗೀ ಹಗ್ಗಾಮುರಿಗೀ

Husband and Wife : ‘ಮಾಮಾ ಸಿಟ್ಟಬೆಂಕಿ ಆದಾ. ಬಂದಂವನs ಅಕೀ ಕಪಾಳಿಗೆ ಜೋರಲೇ ಒಂದೇಟ ಬಿಗದಾ. ನಾ ನಮ್ಮ ಮಾಮೀಗೆ ಹೊಡತ ಬಿದ್ದಕೂಡ್ಲೇ ನನಗs ಏಟ ಬಿದ್ದಂಗ ಆಗಿ ದೊಡ್ಡ ದನಿಲೇ ಅಳಲಿಕ್ಕತ್ತೆ. ನನ್ನ ಜೋಡೀ ಅವ್ವೀನೂ. ಅಕೀ ಜೋಡೀ ಮಾಮೀಯಂತೂ ಸೈಯ ಸೈ! ನಮ್ಮ ಮೂರೂ ಮಂದೀ ಅಳೂದು ಕೇಳಿ ಗೋದೂ ಮಾವಶೀ ಓಡಿಬಂದ್ಲು.’ ಮಾಲತಿ ಮುದಕವಿ

Love : ಏಸೊಂದು ಮುದವಿತ್ತು ; ಮಾಮಾ ಮಾಮಿ ಸಕ್ಕಾಸರಿಗೀ ಹಗ್ಗಾಮುರಿಗೀ
ಲೇಖಕಿ ಮಾಲತಿ ಮುದಕವಿ
Follow us
ಶ್ರೀದೇವಿ ಕಳಸದ
|

Updated on: Jun 04, 2021 | 6:12 PM

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

* ಧಾರವಾಡದ ಲೇಖಕಿ, ಅನುವಾದಕಿ ಮಾಲತಿ ಮುದಕವಿ ಅವರು, ಬಾಲ್ಯ ಅನ್ನೂ ಕಣ್ಣಾಗಿನ ಗೊಂಬಿಯೊಳಗಿನ ಒಂದs ಒಂದ ಪಕಳಿ ಇಲ್ಲಿ ಕಿತ್ತಿಟ್ಟಾರು. * ಒಬ್ಬರಿಗೊಬ್ಬರು. ಕೈ ಹಿಡಕೊಂಡೋ, ಒಬ್ಬರ ಹೆಗಲ ಮ್ಯಾಲ ಇನ್ನೊಬ್ಬರು ತಲಿ ಇಟಗೊಂಡು ಹೊರ ಜಗತ್ತಿನ ಪರಿವೇ ಇಲ್ಲಧಂಗ ಪಾರ್ಕ್, ಸಿನಿಮಾ ಎಲ್ಲಾ ಕಡೆ ತಿರಗಾಡಿದರ ಅದಕ್ಕ ಪ್ರೀತಿ ಅಂತಾರ! ಹಂಗಾರ ಇದು ಏನು? ಆಗ ನಾವು ಅಂದ್ರ ನಾನು, ನನ್ನ ಗೆಳತಿ ಅವ್ವಿ. ಇಬ್ಬರೂ ಸುಮಾರು ಐದೈದು ವರ್ಷದವರು. ನಮ್ಮಿಬ್ಬರ ಅನ್ಯೋನ್ಯತೆಗೆ ಪುಟ ಕೊಟ್ಟಂಗ ನಮ್ಮ ಇಬ್ಬರ ಅವ್ವಂದ್ರೂ ಅಗದೀ ಗಳಸ್ಯ ಕಂಠಸ್ಯ ಗೆಳತ್ಯಾರು. ಸಾಲಿ ಸೂಟೀ ಆದ್ರಂತೂ ಮುಗೀತು. ಜೋಡೀನs ಊಟಾ. ಜೋಡೀನs ಆಟಾ.

ಅವ್ವಿಗೆ ಒಬ್ಬಾಂವ ಮಾಮಾ ಇದ್ದಾ. ಅಂವಂದು ಹೊಸದಾಗಿ ಲಗ್ನ ಆಗಿತ್ತು. ಅವನ ಹೆಂಡ್ತಿ ಪಾಪದ ಪ್ರಾಣಿ. ಭಾಳ ಮುಗ್ಧ. ಮುಗ್ಧ ಅನ್ನೋದಕ್ಕಿಂತಾ ಮಬ್ಬ ಅಂದ್ರ ಬರೋಬ್ಬರೀ ಆಗತದೋ ಏನೋ. ಆದ್ರ ನೋಡಲಿಕ್ಕೆ ಅಂಥಾ ಛಂದ ಅಂತಲ್ಲದೇದ್ರೂ ಅಸಹ್ಯವಾಗೇನೂ ಇದ್ದಿದ್ದಿಲ್ಲಾ. ಮಾಮಾ ಅಕಿನ್ನ ಯಾಕ ಲಗ್ನಾಗಿದ್ನೋ ಗೊತ್ತಿಲ್ಲಾ. ಆದ್ರ ಅಂವಗ ಅಕಿನ್ನ ಕಂಡ್ರ ಆಗತಿದ್ದಿಲ್ಲಾ. ಹಿರೇರೆಲ್ಲಾ ಮಾತಾಡೂ ಪ್ರಕಾರ ಅಕೀ ಅಪ್ಪಾ ಭಾಳಷ್ಟ ರೊಕ್ಕಾ ಕೊಟ್ಟಿದ್ನಂತ. ಅಕಿನ್ನ ಅವ್ವೀ ಮನ್ಯಾಗನ ಅಂದ್ರ ತನ್ನ ಅಕ್ಕನ ಹತ್ರನ ಇಟ್ಟಿದ್ದಾ.

ಅಕೀಗೆ ಅವ್ವೀ ಅವ್ವಾ ಅಂದ್ರ ಗೋದುಮಾವಶೀ ಅಡಿಗೀ ಕಲಸ್ತಿದ್ಲು. ಕಾಯಿಪಲ್ಯಾ, ಭಕ್ರಿ ಎಲ್ಲಾ ಮಾಡೋದ ಹೇಳಿ ಕೊಡ್ತಿದ್ಲು. ನಮಗು ಈ ಮಾಮಿ ಅಂದ್ರ ಭಾಳ ಪ್ರೀತಿ. ಅಕೀ ಜೋಡೀ ಆಣೀಕಲ್ಲು, ಕುಂಟಲಿಪೀ, ಸಕ್ಕಾಸರಿಗೀ ಹಗ್ಗಾಮುರಿಗೀ ಎಲ್ಲಾ ಆಡತಿದ್ಲು. ಆಣೀಕಲ್ಲ ಆಡೋದ್ರಾಗಂತೂ ಅಕಿನ್ನ ಸರಿಗಟ್ಟವ್ರs ಯಾರೂ ಇರ್ಲಿಲ್ಲಾ. ಅವ್ವೀ ಮನ್ಯಾಗ ಒಂದ ಅಟ್ಟ ಇತ್ತು. ಅದಕ್ಕ ಮೆಟ್ಟಲಾ ಇದ್ದಿದ್ದಿಲ್ಲಾ. ಒಂದ ನಿಚ್ಚಣಿಕೀ ಇಟ್ಟಿರತಿದ್ರು. ಮಾಮಾ ಅಲ್ಲೇ ಮಲಕೋತಿದ್ದಾ. ಅಂವಾ ಕಂಡಕ್ಟರ್ ಇದ್ದಾ. ಒಮ್ಮೊಮ್ಮೆ ರಾತ್ರೀಪಾಳಿನೂ ಇರತಿತ್ತು. ಆವಾಗೆಲ್ಲಾ ಅಂವಾ ಡ್ಯೂಟೀಗೆ ಹೋಗಿಬಂದು ಮಲಕೊಂಡ್ನಂದ್ರ ನಾವು ಯಾರೂ ಗದ್ದಲಾ ಮಾಡಲಾರಧಂಗ ಆಟಾ ಆಡಬೇಕಾಗತಿತ್ತು.

ಅದು ಮೇ ತಿಂಗಳಾ. ನಮ್ಮ ಸಾಲೀ ಸೂಟಿ. ಒಂದ ಸರ್ತೆ ಅಂವಾ ಹಿಂಗs ಡ್ಯೂಟೀ ಮಾಡಿಬಂದ ಮಲಕೊಂಡಿದ್ದಾ. ಮಧ್ಯಾಹ್ನದ ಎರಡಗಂಟೆ ಆಗಿತ್ತೇನೋ. ಎಲ್ಲಾರದೂ ಊಟ ಆಗಿ ಅಡ್ಡಾಗಿದ್ರು. ನಮ್ಮ ಆಣೀಕಲ್ಲ ಆಟಾ ಜೋರದಾರ ನಡದಿತ್ತು. ಮಾಮೀ ಅಗದೀ ಕಡೀ ಘಟ್ಟದಾಗಿದ್ದಳು. ನಾವಿಬ್ರೂ ನಾಲ್ಕನೇ ಘಟ್ಟಕ್ಕ ಬರೊದ್ರಾಗs ಆಟಾ ಕಳಕೊಂಡು ಮುಂದಿನ ಪಾಳೀ ಕಾಯ್ದಕೊಂಡ ಕೂತಿದ್ವಿ. ಮಾಮಾ ಕೆಳಗಿಳದ ಬಂದಾಂವಾ ಮಾಮೀಗೆ ,‘ಏ ಬಾ ಮ್ಯಾಲೆ, ನನಗ ತಲಿ ನೊಯಲಿಕ್ಕತ್ತೇದ’ ಅಕ್ಕನ ಕಡೆ ಅಮೃತಾಂಜನಾ ಇಸ್ಕೊಂಡವನ ಆರ್ಡರ್ ಮಾಡಿದಾ. ಮಾಮೀಗರೆ ಆಟಾ ಬಿಟ್ಟ ಬರೂ ಮನಸಿಲ್ಲಾ. ನಮಗೂ ಅಕಿನ್ನ ಕಳಸೂ ಮನಸಿಲ್ಲಾ. ‘ತಡೀರಿ. ಆಟಾ ಮುಗಿಲಿಕ್ಕ ಬಂದsದ’ ಅಂದ್ಲು. ಮಾಮಾ ಸಿಟ್ಟಬೆಂಕಿ ಆದಾ. ಬಂದಂವನs ಅಕೀ ಕಪಾಳಿಗೆ ಜೋರಲೇ ಒಂದೇಟ ಬಿಗದಾ. ನಾ ನಮ್ಮ ಮಾಮೀಗೆ ಹೊಡತ ಬಿದ್ದಕೂಡ್ಲೇ ನನಗs ಏಟ ಬಿದ್ದಂಗ ಆಗಿ ದೊಡ್ಡ ದನಿಲೇ ಅಳಲಿಕ್ಕತ್ತೆ. ನನ್ನ ಜೋಡೀ ಅವ್ವೀನೂ. ಅಕೀ ಜೋಡೀ ಮಾಮೀಯಂತೂ ಸೈಯ ಸೈ! ನಮ್ಮ ಮೂರೂ ಮಂದೀ ಅಳೂದು ಕೇಳಿ ಗೋದೂ ಮಾವಶೀ ಓಡಿಬಂದ್ಲು. ಮಾಮಾಗ ಒಂಥರಾ ಅವಮಾನ ಆಧಂಗ ಆತು. ಧಡಧಡಾ ಮ್ಯಾಲೆ ಹೋಗಿಬಿಟ್ಟಾ. ಆದರ ಅವತ್ತ ಇದು ಇಷ್ಟಕ್ಕನ ಮುಗೀಲಿಲ್ಲಾ. ಗೋದೂ ಮಾವಶಿ ಮಾಮಾನ್ನ ಬೈಯೂದ ಬಿಟ್ಟ ಮಾಮೀನ್ನs ಬೈಲಿಕ್ಕತ್ತಿದ್ಲು.

‘ಅಂವಾ ರಾತ್ರಿಡೀ ದುಡದಬಂದ ಮಲಿಗ್ಯಾನ. ತಲಿ ನೋಯಲಿಕ್ಕತ್ತೇದ. ಅಮೃತಾಂಜನಾ ಹಚ್ಚು ಅಂದ್ರೂ ಹೋಗಲಿಕ್ಕಾಗ್ಲಿಲ್ಲs ನಿನಗ? ಆಟಾನs ಹೆಚ್ಚಾತಲ್ಲs? ತಡೀ, ನಿಮ್ಮಪ್ಪಗ ಹೇಳಿ ಕಳಸ್ತೇನಿ, ಬಂದ ಏನ ಬುದ್ಧೀ ಹೇಳತಾರ ಹೇಳ್ಲಿ ಮಗಳಿಗಿ.’

ಮಾಮಿ ಸುಮ್ಮನs ಮುಳುಮುಳು ಅಳಕೋತ ನಿಂತ್ಲು. ನಾವಿಬ್ರೂ ಗೆಳತ್ಯಾರು ನಮ್ಮನೀಗೆ ಓಡಿದ್ವಿ. ನಮ್ಮ ಅವ್ವಗ ಎಲ್ಲಾ ಸುದ್ದೀ ವರದೀ ಮಾಡಿದ್ವಿ. ಅವ್ವನೂ ಗೋದೂ ಮಾವಶೀ ಮನೀಗೆ ಬಂದು ಏನೇನಾತು ಅಂತೆಲ್ಲಾ ತಿಳಕೊಂಡ್ಲು. ಮಾಮೀಗೆ ಸಮಾಧಾನ ಮಾಡಿದ್ರು ಇಬ್ರೂ ಕೂಡಿ. ಆಮ್ಯಾಲೆ ನಮ್ಮಿಬ್ಬರನೂ ಹೊರಗ ಆಡಲಿಕ್ಕ ಕಳಿಸಿ ಏನೇನೋ ಮಾತಾಡಿದ್ರು.

(ಮುಂದಿನ ಸುದ್ದಿ ಎಲ್ಲಾ ಗೋದೂಮಾವಶಿ ಅವ್ವನ ಮುಂದ ಹೇಳಿದ್ದು)

ಮಾರನೆ ದಿನಾ ಮಧ್ಯಾಹ್ನದಾಗ ಮಾಮಾಗ ಊಟಕ್ಕ ಬಡಸೂಮುಂದ ಗೋದೂ ಮಾವಶೀ, ’ಶೇಷಾ, ಈ ಹುಡುಗಿಗೆ ಒಂದ ಅಡಿಗಿ ಬರಂಗಿಲ್ಲಾ, ಒಂದ ಹಾಡು ಹಸೀ ಏನ ಬರತದ ಹೇಳು. ಅಕಿನ್ನ ತವರಮನೀಗೆ ಬಿಟ್ಟಬಂದಬಿಡು. ಅವರಪ್ಪಗ ಎಲ್ಲಾ ಹೇಳಿ’ ಅಂತ ಹೇಳಿದ್ಲು. ಮಾಮಾ ಮಾವಶಿ ಕಡೆ ಆಶ್ಚರ್ಯದಿಂದ ನೋಡಿದಾ. ಅಲ್ಲೇ ಕೂತು ಬಿಸಿ ಭಕ್ರಿ ಮಾಡಲಿಕ್ಕೆ ಹತ್ತಿದ್ದ ಮಾಮೀ ಕಡೇನೂ ನೋಡಿದಾ.

‘ಇಕೀಗೆ ಕೆಲಸಾ ಬಗಸಿ ಅಂತೂ ಏನಂದ್ರ ಏನೂ ಬರಂಗಿಲ್ಲಾ. ಆದ್ರ ಸಿಟ್ಟೂ ಸೆಡವು ಮಾಡೂದ್ರಾಗೇನ ಕಡಿಮಿ ಇಲ್ಲಾ. ನಿನ್ನೆ ಮಧ್ಯಾಹ್ನದಾಗ ನೀ ಹೊಡದಾಗಿಂದ ಚಹಾ ಸೈತ ಕುಡದಿಲ್ಲಾ. ರಾತ್ರಿನೂ ಒಂದ ಹನಿ ನೀರ ಕುಡದಿಲ್ಲಾ. ಈಗ ಊಟಾನೂ ಮಾಡಂಗಿಲ್ಲಂತ. ಏನರೆ ಹೆಚ್ಚು ಕಡಿಮಿ ಆದ್ರ ನಮ್ಮ ತಲಿಗೆನs ಅಲ್ಲೇನು?’ ಅದಕ್ಕ ಮಾಮಾ,  ’ಏನ ಭಕ್ರಿ ಇವೂ ಕೊಡತಿ ಆಗ್ಯಾವು. ನೀವs ತಿನ್ರೀ ಅತಿಗೀ ನಾದಿನೀ’ ಎಂದವ ಅರ್ಧಾ ಊಟಕ್ಕೇ ಎದ್ದು ಹೋಗಿಬಿಟ್ಟ.

ಅಡಿಗೀಮನೀ ಕೆಲಸಾ ಎಲ್ಲಾ ಮುಗಿಸಿ ಮಾವಶೀ ಅವ್ವನ ಜೋಡಿ ಕಟ್ಟೀ ಮ್ಯಾಲ ಹರಟಿಗಿ ಅಂತ ಬರೋಹೊತ್ತಿಗೆ ಮಾಮಾ ಮ್ಯಾಲಿಂದನs,

‘ಅಕ್ಕಾs, ನನಗ ಹಸಿವಿ ಆಗೇದ… ಅಕೀ ಕೈಯಾಗ ಒಂದಿಷ್ಟ ಮಸರನ್ನಾ ಕಲಿಸಿ ಕೊಟ್ಟಕಳಸೂ’ ಅಂತ ಹೇಳಿದಾ.

ನಮ್ಮದು ವಠಾರದಲ್ಲಿಯ ಆಜುಬಾಜೂ ಮನಿ. ನಾವಿಬ್ಬರೂ ಅಲ್ಲೇ ಅಂಗಳದಾಗ ಕೂತು ಅಭ್ಯಾಸ ಮಾಡಲಿಕ್ಕೆ ಹತ್ತಿದವ್ರು ಒಬ್ಬರೊಬ್ಬರು ಮಾರೀ ನೋಡಿಕೊಂಡ್ವಿ. ಮತ್ತ ಈ ಜಂಗ್ಲೀ ಮಾಮಾ ನಮ್ಮ ಪಾರ್ಟನರ್​ಗ ಹೊಡದಗಿಡದಾನಂತ ಹೆದರೀಕಿ. ಅದರಾಗ ಬ್ಯಾರೆ ನಾಳೆ ಅಕಿನ್ನ ನರಸಜ್ಜಾನ ಮನೀಗೆ ಬಿಟ್ಟಬರತೇನೀ ಅಂತ ಮಾವಶೀ ಬಾಂಬ್ ಹಾಕಿ ನಮಗ ಹೆದರಿಸಿಬಿಟ್ಟಿದ್ಳಲ್! ಅದೂ ಮನಸಿಗೆ ಬ್ಯಾಸರ ಆಗಿತ್ತು.

ಗೋದೂ ಮಾವಶೀ ಮತ್ತ ಅವ್ವಾ ಇಬ್ರೂ ಒಬ್ಬಿಗೊಬ್ರು ನೋಡಿ ನಕ್ರು. ಗೋದೂ ಮಾವಶೀ ಮಾಮಿನ್ನ ಕರದು ‘ಈಗ ಕೆಲಸಾ ಮುಗಿಸಿ ಹೊರಗಬಂದ ಕೂತೇನಿ. ನಿಮ್ಮ ಮಾಮಾ ಬಂದ್ರ ಮತ್ತ ಅಡಿಗೀ ಬಿಸಿ ಮಾಡಬೇಕೂ, ಊಟಕ್ಕ ಹಾಕಬೇಕೂ, ಅರ್ಧಾ ಊಟಕ್ಕ ಎದ್ದಹೋಗ್ಯಾನ. ಈಗ ನಿನ್ನ ಗಂಡಗ ಹಸಿವಿ ಆಗೇದಂತ. ಒಂದ ಡಬರಿ ಮಸರನ್ನಾ ಕಲಸಿಕೊಂಡಹೋಗಿ ಕೊಟ್ಟಬಾರವಾ’ ಎಂದು ಆರ್ಡರ್ ಮಾಡಿ, ಇಬ್ಬರೂ ತಮ್ಮ ಹರಟೆಯಲ್ಲಿ ಮೈಮರೆತರು. ನಮ್ಮ ಲಕ್ಷ್ಯವೆಲ್ಲವೂ ಅಡಿಗೆಮನೆ ಹಾಗೂ ಮಾಮಿಯತ್ತಲೇ ಇತ್ತು. ಮಾಮಿ ಮೇಲೆ ಹೋದೊಡನೆ ಏಣಿ ಅಂದ್ರೆ ನಿಚ್ಚಣಿಕಿ ಮತ್ತೆ ಯಥಾಪ್ರಕಾರ ಮೇಲೆ ಹೋಗಿತ್ತು. ನಾವಿಬ್ಬರೂ ಮೆಲ್ಲಗೆ ಒಳಗೆ ಹೋದವರು ಅವಳ ಬೆನ್ನು ಹತ್ತಲಿಕ್ಕಾಗದೆ ನಿರಾಶೆಯಿಂದ ಕೆಳಗೇ ನಿಂತೆವು, ಅಲ್ಲಿ ಬರುವ ಸಪ್ಪಳಗಳ ಮೇಲೆ ನಿಗಾ ಇಡುತ್ತ. ಆದರೆ ಮಾಮಿ ಕೆಳಗೆ ಬರಲೇಯಿಲ್ಲ. ಆಕೆ ಬಂದದ್ದು ಮಾರನೆಯದಿನ ಬೆಳಿಗ್ಗೆಯೇ! ಅವ್ವಿ ಹೇಳಿದ ವರದಿಯಂತೆ ಮಾಮಿ ತಮ್ಮಿಬ್ಬರ ಮುಂಜಾನಿ ಚಹಾಸೈತ ಮ್ಯಾಲೇ ಒಯ್ದಿದ್ದಳಂತೆ!

ಅಷ್ಟ ಅಲ್ಲ, ಇನ್ನು ಮುಂದೆ ನಮ್ಮೊಂದಿಗೆ ಆಟಾಪಾಟಾ ಎಲ್ಲಾ ಮಾಮಾ ಡ್ಯೂಟೀ ಮ್ಯಾಲ ಹೋದಾಗ ಅಷ್ಟss ಅನ್ನೋ ರೆಸಲ್ಯೂಷನಕ್ಕ ಮಾಮೀ ಹೂಂಗುಟ್ಟಿದ್ದೂ ಆಗಿತ್ತು. ಮಾಮಾ ಮಾರನೇದಿನಾ ತನ್ನ ಡ್ಯೂಟೀ ಮುಗಿಸಿಬರೂಮುಂದ ನಮಗೆಲ್ಲಾ ಧಾರವಾಡ ಪೇಢೇ ಡಬ್ಬೀ ತಂದಿದ್ದ!

ಪ್ರೀತಿ ಅಂದ್ರ ಇದ ಏನು?

* ಪರಿಚಯ : ಇಪ್ಪತ್ತೆರಡು ವರ್ಷಗಳ ಕಾಲ ವಿಜಯಪುರದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದ ಮಾಲತಿ ಮುದಕವಿ ಮೂಲತಃ ಧಾರವಾಡದವರು. ಈಗ ನೆಲೆಸಿದ್ದೂ ಇಲ್ಲಿಯೇ. ಪ್ರಕಟಿತ ಕಥಾಸಂಕಲನಗಳು; ಚಿತ್ತ ಚಿತ್ತಾರ, ಗಂಧವತೀ ಪೃಥ್ವಿ, ಜೀವನ ಸಂಧ್ಯಾ ರಾಗ. ಪ್ರಬಂಧ ಸಂಕಲನ; ಹಾಸ್ಯ ರಂಗೋಲಿ. ಮರಾಠಿಯಿಂದ ಅನುವಾದಿತ ಕೃತಿಗಳು; ಕಾದಂಬರಿಗಳು- ಮೇನಕಾ (ಇಂದ್ರಾಯಿಣಿ ಸಾವಕಾರ), ಅಶೋಕ (ಮಂಜೂಷಾ ಮುಳೆ), ಸಿಕಂದರ್ (ಇಂದ್ರಾಯಣಿ ಸಾವಕಾರ), ಜೀವನ ಚರಿತ್ರೆ- ಜೆ ಕೃಷ್ಣಮೂರ್ತಿ(ಮಂಜೂಷಾ ಅಮಡೇಕರ್), ಅನುಭವ ಕಥನ- ಶ್ಯಾಮನ ಅವ್ವ (ಸಾನೆ ಗುರೂಜಿ), ಅಚ್ಚಿನಲ್ಲಿರುವ ಕೃತಿಗಳು; ಮಾನಿನಿಯ ಮನದಳಲು, ಪ್ರೇಮಸಾಫಲ್ಯ ಮತ್ತು ಇತರ ಕಥೆಗಳು. * ಇದನ್ನೂ ಓದಿ : Dharwad : ಏಸೊಂದು ಮುದವಿತ್ತು : ಮಸಾಲಿದ್ವಾಸಿ ತಿಂದಾಗೆಲ್ಲಾ ಯಾಕ ಛಂದಂಗೆ ಕೈ ತಕ್ಕೋತಿರ್ಲಿಲ್ಲ ಹೇಳ್ರಿ? 

Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್