ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಆಕ್ಸ್‌ಫರ್ಡ್ ವಿವಿ) ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳನ್ನು ಬಳಕೆ ಮಾಡಲು ಭಾರತೀಯ ಪ್ರಧಾನ ಔಷಧ ನಿಯಂತ್ರಣ ಇಲಾಖೆ (ಡಿಸಿಜಿಐ) ತುರ್ತು ಪರಿಸ್ಥಿತಿ ಬಳಕೆಯ ಅನುಮೋದನೆ ನೀಡಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ AZD1222 ಲಸಿಕೆಯ ಭಾರತೀಯ ರೂಪಾಂತರವಾದ ಕೊವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದೆ. ಈಗಾಗಲೇ ಸುಮಾರು 8 ಕೋಟಿ ಡೋಸ್ ಸಂಗ್ರಹಿಸಿರುವುದರಿಂದ ಶೀಘ್ರದಲ್ಲಿ ಇದು ಬಳಕೆಗೆ ಲಭ್ಯವಾಗಬಹುದು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಕಾರದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಲಭ್ಯವಾಗಲು ಕೆಲವು ದಿನ ಅಥವಾ ವಾರಗಳೇ ಬೇಕಾಗಬಹುದು.
@MoHFW_INDIA has been burning the midnight oil to prepare for one of the biggest #COVID19 immunisation programs in the world.
Priority beneficiaries have been identified & an advanced digital platform 'CoWIN' has been developed to ensure equitable vaccine distribution. pic.twitter.com/MkZmIwaQyM
— Dr Harsh Vardhan (@drharshvardhan) January 3, 2021
ನಿರ್ವಹಣೆ ಪ್ರಕ್ರಿಯೆ ಹೇಗೆ?
ಅಮೆರಿಕ ಮತ್ತು ಬ್ರಿಟನ್ನಲ್ಲಿ ಫೈಜರ್- ಬಯೋಎನ್ಟೆಕ್ ಮತ್ತು ಮಾಡೆರ್ನಾ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಒಂದೆರಡು ದಿನಗಳಲ್ಲಿಯೇ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಭಾರತದಲ್ಲಿಯೂ ಲಸಿಕೆ ನೀಡುವ ಪ್ರಕ್ರಿಯೆ ವೇಗವಾಗಿ ನಡೆಯುವ ಸಾಧ್ಯತೆ ಇದೆ. ಲಸಿಕೆ ಯಾವಾಗ ನೀಡಲಾಗುವುದು ಎಂಬುದರ ಬಗ್ಗೆ ಸರ್ಕಾರ ಇಲ್ಲಿಯವರೆಗೆ ಅಧಿಕೃತ ದಿನಾಂಕ ಪ್ರಕಟಿಸಿಲ್ಲ.
ಮೊದಲ ಲಸಿಕೆ ಯಾರಿಗೆ?
ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಮುಂದೆ ನಿಂತ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. 1 ಕೋಟಿ ಆರೋಗ್ಯ ಸಿಬ್ಬಂದಿ ಮತ್ತು ಕೋವಿಡ್ ಕರ್ತವ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ 2 ಕೋಟಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುವುದು. ಇವರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಜ.2ರಂದು ಹೇಳಿದ್ದಾರೆ. ಮೊದಲ ಹಂತದಲ್ಲಿ ಇತರ ಕಾಯಿಲೆ ಇರುವ 50 ವರ್ಷಕ್ಕಿಂತ ಮೇಲ್ಪಟ್ಟ 27 ಕೋಟಿ ಜನರಿಗೆ ಆಮೇಲೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುವುದು.
ಇತರರಿಗೆ ಲಸಿಕೆ ಯಾವಾಗ?
ಮೊದಲ ಹಂತದ ಲಸಿಕೆ ವಿತರಣೆಯನ್ನು ಆಗಸ್ಟ್ 2021ಕ್ಕಿಂತ ಮುಂಚೆ ಪೂರ್ಣಗೊಳಿಸಲು ಸರ್ಕಾರ ಗುರಿಯಿರಿಸಿಕೊಂಡಿದೆ. ಬಾಕಿ ಉಳಿದಿರುವ ಜನರಿಗೆ ಲಸಿಕೆ ಯಾವಾಗ ನೀಡಲಾಗುವುದು ಎಂಬುದರ ಬಗ್ಗೆ ಸರ್ಕಾರ ದಿನಾಂಕ ಪ್ರಕಟಿಸಿಲ್ಲ. ಆದಾಗ್ಯೂ, ಮೊದಲ ಹಂತದ ಲಸಿಕೆ ವಿತರಣೆ ಪೂರ್ಣಗೊಳ್ಳುವವರೆಗೆ ಇನ್ನುಳಿದ ಜನರು ಕಾಯಬೇಕು.
ಏತನ್ಮಧ್ಯೆ, ಅಗತ್ಯವಿರುವಷ್ಟು ಲಸಿಕೆ ಇದೆಯೇ ಎಂಬುದು ಮುಂದಿನ ಪ್ರಶ್ನೆ. ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಉತ್ಪಾದಿಸುವುದಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಹೇಳಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಹೊರತಾಗಿ ಮುಂದಿನ ಕೆಲ ವಾರಗಳಲ್ಲಿ ಇತರ ಲಸಿಕೆಗಳಿಗೂ ಅನುಮೋದನೆ ಸಿಗಬಹುದು. ಫೈಜರ್ ಮತ್ತು ಮಾಡೆರ್ನಾ, ರಷ್ಯಾದ ಸ್ಪುಟ್ನಿಕ್-V, ಜೈಡಸ್- ಕ್ಯಾಡಿಲ್ಲಾದ ZyCoV-D ಸೇರಿದಂತೆ ಹಲವು ಕಂಪನಿಗಳ ಲಸಿಕೆಗಳು ಪೈಪೋಟಿಯಲ್ಲಿವೆ.
ಲಸಿಕೆ ವಿತರಣೆಗೆ ಸಿದ್ಧತೆ
ಲಸಿಕೆ ವಿತರಣೆಗಾಗಿ ಈಗಾಗಲೇ ಎರಡು ಸುತ್ತಿನ ಲಸಿಕೆ ವಿತರಣೆಯ ತಾಲೀಮು ಮಾಡಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಡಿಸೆಂಬರ್ 28-29 ರಂದು ಮೊದಲ ಸುತ್ತಿನ ತಾಲೀಮು ಮತ್ತು ಜನವರಿ 2ರಂದು ದೇಶದ ಎಲ್ಲ ರಾಜ್ಯಗಳಲ್ಲಿ 2ನೇ ಸುತ್ತಿನ ತಾಲೀಮು ನಡೆದಿದೆ. ಎರಡನೇ ಸುತ್ತಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ 125 ಜಿಲ್ಲಾಡಳಿತಗಳು ಲಸಿಕೆ ವಿತರಣೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಜನರಿಗೆ ಲಸಿಕೆ ನೀಡುವುದು ಹೇಗೆ ಎಂಬುದರ ಬಗ್ಗೆ 96,000 ಮಂದಿಗೆ ತರಬೇತಿ ನೀಡಲಾಗಿದೆ. ಇದರಲ್ಲಿ 2,360 ರಾಷ್ಟ್ರೀಯ ತರಬೇತುದಾರರ ತರಬೇತಿ ಪಡೆದವರಾಗಿದ್ದಾರೆ. 719 ಜಿಲ್ಲೆಗಳಲ್ಲಿ 57,000ಕ್ಕಿಂತಲೂ ಹೆಚ್ಚು ಮಂದಿಗೆ ಈ ತರಬೇತಿ ನೀಡಲಾಗಿದೆ. 75 ಲಕ್ಷಕ್ಕಿಂತಲೂ ಹೆಚ್ಚು ಫಲಾನುಭವಿಗಳು Co-WIN ಫ್ಲಾಟ್ಫಾರಂನಲ್ಲಿ ನೋಂದಣಿ ಮಾಡಿದ್ದಾರೆ. Co-WIN ನಲ್ಲಿ ಲಸಿಕೆಯ ಸಂಗ್ರಹ ಎಷ್ಟಿದೆ, ಸಂಗ್ರಹಕ್ಕೆ ಅಗತ್ಯವಿರುವ ಉಷ್ಣತೆ ಎಷ್ಟಿರಬೇಕು ಎಂಬ ಮಾಹಿತಿಯೂ ಸಿಗುತ್ತದೆ ಎಂದು ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.
ಕೋವಿಡ್ ರೋಗದಿಂದ ಚೇತರಿಸಿಕೊಂಡವರಿಗೂ ಲಸಿಕೆ ನೀಡಲಾಗುತ್ತಿದೆಯೇ?
ಹೌದು, COVID-19 ರೋಗ ಈ ಹಿಂದೆ ಬಂದಿದೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ COVID ಲಸಿಕೆಯನ್ನು ಪಡೆಯುವುದು ಸೂಕ್ತ ಎಂದು ಕೇಂದ್ರ ಹೇಳಿದೆ. ಇದು ರೋಗದ ವಿರುದ್ಧ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಹೇಳಿದೆ.
A watershed moment in India’s famed battle against #COVID19 under the charismatic leadership of Hon’ble PM Sh @narendramodi Ji !
Our wait for #COVID19vaccine is over with COVISHIELD from @SerumInstIndia & COVAXIN from @BharatBiotech approved for emergency use in India@PMOIndia pic.twitter.com/sqjsetqHnU
— Dr Harsh Vardhan (@drharshvardhan) January 3, 2021
50 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಸರ್ಕಾರ ಹೇಗೆ ಗುರುತಿಸಲಿದೆ?
ಲೋಕಸಭೆ ಮತ್ತು ವಿಧಾನಸಭೆಯ ಮತದಾರರ ಪಟ್ಟಿಯಲ್ಲಿ ನಮೂದಿಸಿರುವ ವಯಸ್ಸು ನೋಡಿ ಸರ್ಕಾರ 50 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರನ್ನು ಗುರುತಿಸಲಿದೆ. 60ಕ್ಕಿಂತ ಹೆಚ್ಚಿನ ವಯಸ್ಸಿನವರು, 50- 60ರ ಮಧ್ಯೆ ವಯಸ್ಸಿರುವವರು ಎಂಬ ಎರಡು ಉಪ ವಿಭಾಗಗಳನ್ನು ಮಾಡಲಾಗುವುದು. ಸಾಂಕ್ರಾಮಿಕ ರೋಗದ ಪರಿಸ್ಥಿತಿ ಮತ್ತು ಲಸಿಕೆ ಲಭ್ಯತೆಯನ್ನು ಆಧರಿಸಿ ಇವರಿಗೆ ಲಸಿಕೆ ವಿತರಣೆ ಮಾಡಲಾಗುವುದು.
ಎಷ್ಟು ಡೋಸ್ ನೀಡಲಾಗುವುದು? ರೋಗ ಪ್ರತಿರೋಧ ಶಕ್ತಿ ಸಿಗಲು ಎಷ್ಟು ಸಮಯ ಬೇಕಾಗುತ್ತದೆ?
ಆರೋಗ್ಯ ಸಚಿವಾಲಯದ ಪ್ರಕಾರ 28 ದಿನಗಳ ಅಂತರದಲ್ಲಿ ಎರಡು ಡೋಸ್ ಲಸಿಕೆಯನ್ನು ತೆಗೆದುಕೊಂಡರೆ ಲಸಿಕೆಯ ಶೆಡ್ಯೂಲ್ ಪೂರ್ಣವಾಗುತ್ತದೆ. ಕೋವಿಡ್-1 ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡ 2 ವಾರಗಳ ನಂತರ ಪ್ರತಿರೋಧಕಾಯ (ಆ್ಯಂಟಿಬಾಡಿ)ದ ರಕ್ಷಣಾ ಹಂತವು ಬೆಳೆಯುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಒಂದು ಲಸಿಕೆಯ ಮೊದಲ ಡೋಸ್, ಇನ್ನೊಂದು ಲಸಿಕೆಯ ಎರಡನೇ ಡೋಸ್, ಹೀಗೆ ತೆಗೆದುಕೊಳ್ಳಬಹುದೇ?
ಖಂಡಿತಾ ಇಲ್ಲ. ಒಂದೇ ಲಸಿಕೆಯ ಎರಡು ಡೋಸ್ಗಳನ್ನು ಮಾತ್ರ ಒಬ್ಬ ವ್ಯಕ್ತಿ ತೆಗೆದುಕೊಳ್ಳಬಹುದು.
ಕೋವಿಡ್ -19 ಲಸಿಕೆ ಪಡೆಯಲು ಏನು ಮಾಡಬೇಕು?
ಕೋವಿಡ್ -19 ವ್ಯಾಕ್ಸೀನ್ ಇಂಟೆಲಿಜೆನ್ಸ್ ನೆಟ್ವರ್ಕ್ (Co-WIN) ವ್ಯವಸ್ಥೆ ಎಂಬ ಡಿಜಿಟಲ್ ಫ್ಲಾಟ್ ಫಾರಂನಲ್ಲಿ ಲಸಿಕೆಯ ಮಾಹಿತಿ ಮತ್ತು ಫಲಾನುಭವಿಗಳ ಮಾಹಿತಿಗಳು ಲಭ್ಯವಿರುತ್ತದೆ. ಲಸಿಕೆ ವಿತರಣೆ ಮಾಡುವಾಗ ಈ ಮೊದಲೇ ಲಸಿಕೆಗಾಗಿ ನೋಂದಣಿ ಮಾಡಿರುವ ವ್ಯಕ್ತಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. ತಕ್ಷಣವೇ ನೋಂದಣಿ ಮಾಡಿ ಲಸಿಕೆ ಪಡೆಯುವ ವ್ಯವಸ್ಥೆ ಇಲ್ಲ. ನೋಂದಣಿ ಮಾಡಿ ಲಸಿಕೆ ಪಡೆಯಲು ಯೋಗ್ಯವಾಗಿರುವ ವ್ಯಕ್ತಿಗಳಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಮಾಹಿತಿ ನೀಡಲಾಗುವುದು. ಲಸಿಕೆ ಎಲ್ಲಿ ನೀಡಲಾಗುವುದು? ಎಷ್ಟು ಹೊತ್ತಿಗೆ ನೀಡಲಾಗುವುದು ಎಂಬುದರ ಬಗ್ಗೆಯೂ ಮೊಬೈಲ್ ಮೂಲಕವೇ ತಿಳಿಸಲಾಗುವುದು.
ಲಸಿಕೆ ಪಡೆಯಲು ನೋಂದಣಿ ಮಾಡಬೇಕಾದರೆ ಏನೇನು ಬೇಕು?
ಡ್ರೈವಿಂಗ್ ಲೈಸನ್ಸ್, ಮನರೇಗಾ ಕೆಲಸದ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ, ಪಾಸ್ ಪೋರ್ಟ್, ಪಿಂಚಣಿ ದಾಖಲೆ, ಮತದಾರರ ಚೀಟಿ, ಸಂಸದ/ ಶಾಸಕ ಅಥವಾ ಎಂಎಲ್ಸಿಗಳ ಅಧಿಕೃತ ಗುರುತಿನ ಚೀಟಿ, ಸೇವಾನಿರತರಾಗಿದ್ದರೆ ಸರ್ಕಾರದ ಗುರುತಿನ ಚೀಟಿ, ಕಾರ್ಮಿಕರ ಸಚಿವಾಲಯದಿಂದ ಪಡೆದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ – ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸುವುದು ಅತ್ಯಗತ್ಯವಾಗಿದೆ. ಲಸಿಕೆಗಾಗಿ ನೋಂದಣಿ ಮಾಡುವಾಗ ಮತ್ತು ದೃಢೀಕರಣದ ವೇಳೆ ಫೋಟೊ ಇರುವ ಗುರುತಿನ ಚೀಟಿ ಕಡ್ಡಾಯ.
ಲಸಿಕೆ ನೀಡಲು ನಿರ್ದಿಷ್ಟ ದಿನಗಳು ಇದೆಯೇ? ಒಂದು ಹೊತ್ತಿನಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ?
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆ ವಿತರಣೆಯ ನಿರ್ದಿಷ್ಟ ದಿನವನ್ನು ನಿರ್ಧರಿಸುತ್ತವೆ. ಒಂದು ಹೊತ್ತಿಗೆ 100 ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು.
ಕೊರೊನಾ ವಿರುದ್ಧ ಹೋರಾಟಕ್ಕೆ 2 ಲಸಿಕೆಗಳು ಸಿದ್ಧ; ಕೊವಿಶೀಲ್ಡ್, ಕೊವ್ಯಾಕ್ಸಿನ್ಗೆ DCGI ಅನುಮೋದನೆ