ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಡಾ. ರಾಜ್ಕುಮಾರ್. ಇವರ ಜೊತೆ ಒಂದಲ್ಲ ಎರಡಲ್ಲ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ಕಲಾವಿದನಾಗಿ ನಟಿಸಿದ ಖ್ಯಾತಿ ಶನಿ ಮಹದೇವಪ್ಪ ಅವರಿಗಿದೆ. ಇಂಥ ಕಲಾವಿದನನ್ನು ನಾವು ಇಂದು ಕಳೆದುಕೊಂಡಿದ್ದೇವೆ.
ಕನ್ನಡದಲ್ಲಿ 500ರಕ್ಕೂ ಹೆಚ್ಚು ಚಿತ್ರಗಳಲ್ಲಿ ಶನಿ ಮಹದೇವಪ್ಪ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟರುಗಳ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಇವರಿಗಿದೆ. ಪೋಷಕ ಪಾತ್ರದಲ್ಲಿ ಬಣ್ಣ ಹಚ್ಚಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಹೆಸರು ಮಾಡಿದ ಖ್ಯಾತಿ ಶನಿ ಮಹಾದೇವಪ್ಪ ಅವರದ್ದು.
ಸಿನಿಮಾ ಪಟ್ಟಿ
1978ರಲ್ಲಿ ತೆರೆಕಂಡ ಶಂಕರ ಗುರು, 1983ರಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಕವಿರತ್ನ ಕಾಳಿದಾಸ, ಶ್ರೀನಿವಾಸ ಕಲ್ಯಾಣ, ಶಿವಶಂಕರ್, ಗುರು ಬ್ರಹ್ಮ ಚಿತ್ರಗಳಲ್ಲಿ ಶನಿ ಮಹದೇವಪ್ಪ ಬಣ್ಣ ಹಚ್ಚಿದ್ದಾರೆ. 2008ರ ಮೂರನೇ ಕ್ಲಾಸ್ ಮಂಜ ಬಿ.ಕಾಮ್ ಭಾಗ್ಯ ಚಿತ್ರದಲ್ಲಿ ಇವರು ಕೊನೆಯದಾಗಿ ಬಣ್ಣ ಹಚ್ಚಿದ್ದರು.
ಗೌರಿ ಗಣೇಶ (1991), ಆತ್ಮ ಬಂಧನ (1992), ಮನ ಮೆಚ್ಚಿದ ಸೊಸೆ (1992), ಶಿವಶಂಕರ್ (1990), ರಾಮರಾಜ್ಯದಲ್ಲಿ ರಾಕ್ಷಸರು (1990), ಒಂಟಿ ಸಲಗ (1989), ಜಯ ಸಿಂಹ (1987), ಸತ್ಯಮ್ ಶಿವಂ ಸುಂದರಂ (1987), ಜೀವನ ಜ್ಯೋತಿ (1987), ಮದುವೆ ಮಾಡು ತಮಾಶೆ ನೋಡು (1986), ಪ್ರೇಮದ ಕಾಣಿಕೆ (1976), ತ್ರಿಮೂರ್ತಿ (1975) ಇವು ಇವರು ನಟಿಸಿದ ಪ್ರಮುಖ ಚಿತ್ರಗಳಾಗಿವೆ.
ಅರಸಿ ಬಂದಿತ್ತು ಪ್ರಶಸ್ತಿ
ಶನಿ ಮಹದೇವಪ್ಪ ಅವರು ಕನ್ನಡ ಚಿತ್ರರಂಗಕ್ಕೆ ನಿರಂತರವಾದ ಕೊಡುಗೆ ನೀಡಿದ್ದಾರೆ. ಅವರ ಕಲೆಗೆ ಗೌರವ ನೀಡುವ ಉದ್ದೇಶದಿಂದ ಶನಿ ಮಹದೇವಪ್ಪ ಅವರಿಗೆ ಎರಡು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ವರದರಾಜು ಅವಾರ್ಡ್ 2009’, ‘ರಾಜ್ಕುಮಾರ್ ಸೌಹಾರ್ದ ಅವಾರ್ಡ್’ ದೊರೆತಿದೆ.
ಈ ಹೆಸರು ಬರಲು ಕಾರಣವೇನು ಗೊತ್ತಾ?
ಇವರಿಗೆ ಶನಿ ಮಹದೇವಪ್ಪ ಎನ್ನುವ ಹೆಸರು ಬರಲೂ ಒಂದು ಕಾರಣವಿದೆ. ಇವರ ಹುಟ್ಟಿನ ಹೆಸರು ಮಹದೇವಪ್ಪ ಎಂದು. ರಾಜವಿಕ್ರಮ ನಾಟಕದಲ್ಲಿ ಸತತವಾಗಿ ಮಹದೇವಪ್ಪ ಶನಿ ದೇವರ ಪಾತ್ರ ನಿರ್ವಹಿಸಿದ್ದರು. ಹೀಗಾಗಿ, ಅವರನ್ನು ಎಲ್ಲರೂ ಪ್ರೀತಿಯಿಂದ ಶನಿ ಮಹದೇವಪ್ಪ ಎಂದು ಕರೆಯಲು ಆರಂಭಿಸಿದ್ದರು.
ಕೊನೆಯ ಸಮಯದಲ್ಲಿ ಎದುರಾಗಿತ್ತು ಸಂಕಷ್ಟ
ಕನ್ನಡ ಚಿತ್ರರಂಗ ಬೆಳೆಯುತ್ತಾ ಬಂದಂತೆ ಮಹದೇವಪ್ಪ ಅವರಿಗೆ ಅವಕಾಶ ಕಡಿಮೆ ಆಗುತ್ತಾ ಬಂದಿತ್ತು. ಕಮರ್ಷಿಯಲ್ ಸಿನಿಮಾಗಳ ಅಬ್ಬರ ಹೆಚ್ಚಾದಂತೆ, ಇವರಿಗೆ ಸಿನಿಮಾಗಳಲ್ಲಿ ನಟಿಸಲು ಯಾರೂ ಆದ್ಯತೆ ನೀಡಿಲ್ಲ. ನಟನೆಯನ್ನೇ ಉಸಿರಾಗಿಸಿಕೊಂಡಿದ್ದ ಇವರಿಗೆ ಕೊನೆಯ ದಿನಗಳಲ್ಲಿ ಸಮಯ ಸಾಗಿಸೋದು ಕಷ್ಟವಾಗಿತ್ತು.
Published On - 7:31 pm, Sun, 3 January 21