ಈ ಭೂಮಿಯನ್ನು ತನ್ನ ಲಾಭದ ದೃಷ್ಟಿಯಿಂದ ನೋಡಿ ಅದರ ಮೇಲೆ ಸ್ವಾಮ್ಯ ಸಾಧಿಸುವ ಸ್ವಾರ್ಥದ ನೆಲೆಯಿಂದ ಇತರ ಜೀವಿಗಳನ್ನು ನಗಣ್ಯವಾಗಿ ನೋಡುವ ಮನುಷ್ಯ ಕಾಲ ಮೇಲೆ ಕಲ್ಲು ಹಾಕಿಕೊಂಡು ಹೆಳವನಾಗುತ್ತಿರುವಾಗ ಪಾದಸ್ಪರ್ಶವಾಯಿತು ಕ್ಷಮಿಸು ಎನ್ನಲೂ ಎಳ್ಳು ಜೀರಿಗೆ ಬೆಳೆಯುವವಳನ್ನು ನೆನೆಯುವುದಾದರೂ ಎಲ್ಲಿ, ಹೇಗೆ. ತಾಯಿಯೆದೆಯ ಅಮೃತವುಂಡು ತಾಯಿಯ ಜೀವ ತೆಗೆಯುವ ಮಕ್ಕಳಾದರೆ ಮುಂದಿನ ಪೀಳಿಗೆಗೆ ಈ ಭೂಮಿ ತಾಯಿಯಾಗಿ, ಕಲ್ಯಾಣಕಾರಕಿಯಾಗಿ ಉಳಿಯುವುದಾದರೂ ಹೇಗೆ.
ಭೂಮಿಯನ್ನೇ ಹಾಸಿ ಆಕಾಶವನ್ನೇ ಹೊದ್ದು ನಿಸರ್ಗದ ಕ್ರಿಯೆಯೊಂದಿಗೆ ಕ್ರಿಯಾಶೀಲರಾದ ಮಾನವನ ಬದುಕಿಗೆ ಭೂಮಿಯೇ ಸರ್ವಸ್ವ.
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೋಳ | ಭೂಮ್ತಾಯ
ಎದ್ದೊಂದು ಘಳಿಗೆ ನೆನೆದೇನು
ಎನ್ನುವಲ್ಲಿ ಒಂದು ಘಳಿಗೆಯಾದರೂ ತನಗೆ ಬದುಕು ಕೊಟ್ಟವಳನ್ನು ನೆನೆಯುವ ಜನಪದರ ಜೀವಸ್ಪರ್ಶಿ ನಿಲುವು ಇದೆ.
ಸಮುದ್ರವನ್ನೆ ವಸ್ತ್ರವಾಗಿ ಧರಿಸಿದ, ಪರ್ವತಗಳೆ ಜೀವ ಪೊರೆಯುವ ಸ್ತನಗಳಾದ ವಿಷ್ಣು ಪತ್ನಿ ಪೃಥ್ವಿಗೆ ನಮಸ್ಕರಿಸುವೆ. ಪಾದದಿಂದ ನಿನ್ನನ್ನು ಸ್ಪರ್ಶಿಸಿದ್ದಕ್ಕೆ ಕ್ಷಮಿಸು ಎಂದು ಕೇಳಿಕೊಳ್ಳುತ್ತಾ ಭೂಮಿಗೆ ವಂದಿಸುವ ಶಿಷ್ಟ ಮನಸ್ಸೂ ಇಲ್ಲಿ ಇದೆ.
ಈ ಭೂಮಿಯನ್ನು ತನ್ನ ಲಾಭದ ದೃಷ್ಟಿಯಿಂದ ನೋಡಿ ಅದರ ಮೇಲೆ ಸ್ವಾಮ್ಯ ಸಾಧಿಸುವ ಸ್ವಾರ್ಥದ ನೆಲೆಯಿಂದ ಇತರ ಜೀವಿಗಳನ್ನು ನಗಣ್ಯವಾಗಿ ನೋಡುವ ಮನುಷ್ಯ ಕಾಲ ಮೇಲೆ ಕಲ್ಲು ಹಾಕಿಕೊಂಡು ಹೆಳವನಾಗುತ್ತಿರುವಾಗ ಪಾದಸ್ಪರ್ಶವಾಯಿತು ಕ್ಷಮಿಸು ಎನ್ನಲೂ ಎಳ್ಳು ಜೀರಿಗೆ ಬೆಳೆಯುವವಳನ್ನು ನೆನೆಯುವುದಾದರೂ ಎಲ್ಲಿ, ಹೇಗೆ. ತಾಯಿಯೆದೆಯ ಅಮೃತವುಂಡು ತಾಯಿಯ ಜೀವ ತೆಗೆಯುವ ಮಕ್ಕಳಾದರೆ ಮುಂದಿನ ಪೀಳಿಗೆಗೆ ಈ ಭೂಮಿ ತಾಯಿಯಾಗಿ, ಕಲ್ಯಾಣಕಾರಕಿಯಾಗಿ ಉಳಿಯುವುದಾದರೂ ಹೇಗೆ.
ಭೂಮಿಯೊಡನೆ ನಮ್ಮ ಸಂಬಂಧದ ಅನುಬಂಧ ಉಳಿಸಿ ಬೆಳೆಸುವ ದಾರಿಗಳಿಗೆ ಸ್ವಾರ್ಥ ಅಡ್ಡಿಯಾಗಬಾರದು. ಅರಿವು ಹರವಿಕೊಂಡರೆ, ನೆರಳಾಸರೆ. ನೆರಳ ಕಾಯುವ ಕೈಯಾಗಬೇಕೇ ವಿನಾ ಕೊಲ್ಲುವ ಕೈಯಾಗಬಾರದು. ಅಮೂಲ್ಯವಾದ ಈ ಭೂಮಿ ಇರುವುದೊಂದೇ. ಸ್ವರ್ಗವೇ ಭೂಮಿಯೊಳಿರದಿರೆ ಬೇರೆಲ್ಲಿಯೂ ನೀನಿಲ್ಲ ಇಲ್ಲ ಎನ್ನುವ ಕುವೆಂಪು ಆನಂದಮಯ ಈ ಜಗಹೃದಯ ಎಂದು ಹೇಳಿದ್ದಾರೆ.
ಸಹನಾಮಯಿ ಭೂಮಿ ವಾತ್ಸಲ್ಯದಿಂದ ಈ ನೆಲದ ಸಕಲೆಂಟು ಜೀವಿಗಳ ರಕ್ಷಿಸುವ ಸಂರಕ್ಷಕಿ. ಕೆ ಎಸ್ನರಸಿಂಹಸ್ವಾಮಿ ಹೇಳಿದಂತೆ ‘ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು ನಡುವೆ ಕಾಪಾಡುವುದು ತಾಯ ಕಣ್ಣು.’ ಭೂಮಿತಾಯಿ ಬಂಜೆಯಾದರೆ ಮನುಷ್ಯ ಮಾತ್ರವಲ್ಲ ಇಡೀ ಜೀವಕೋಟಿಯೇ ನಿರ್ನಾಮವಾಗುತ್ತದೆ. ಈ ವಸುಂಧರೆಯ ಮಗ ನಾನು’ ಎಂಬ ವಿನಯವಿರದೆ ಅಭಿವೃದ್ಧಿಯ ಹೆಸರಲ್ಲಿ ನಾಶಕ್ಕೆ ನಿಂತಾಗ ರಕ್ಷಕಿಯೇ ಶಿಕ್ಷಿಸುವ ಕಾಯಕಕ್ಕೆ ಇಳಿಯುವುದು ಅನಿವಾರ್ಯ. ಸರ್ವ ಜೀವರಾಶಿ ಅವಳ ಒಡಲುರಿಯಲ್ಲಿ ಬೆಂದು ಬೂದಿಯಾಗುತ್ತವೆ.
460 ಕೋಟಿ ವರ್ಷಗಳ ಹಿಂದೆ ರೂಪುಗೊಂಡ ಭೂಮಿಯನ್ನು ನಾಶಮಾಡಲು ಮನುಷ್ಯ ತೆಗೆದುಕೊಂಡದ್ದು 120 ವರ್ಷಗಳು. ಅವನಿಗೆ ಈಗ ಅವನಿ ಎಚ್ಚರಿಸುತ್ತಿದೆ. ಪ್ರಕೃತಿಯ ಸವಾಲಿನೆದುರು ಸೋತು ಸಾವಿನ ಹಾದಿ ಹಿಡಿವ ಮುನ್ನ ಸಾಮರಸ್ಯದ ಹಾದಿ ಅರಸಬೇಕು. ತನ್ನೆಲ್ಲ ಆಗು ಹೋಗುಗಳಿಗೆ ಕಾರಣಿಭೂತಳಾದ ಭೂಮಿತಾಯಿಯನ್ನು ಮರೆತರೆ ತಮ್ಮ ಸರ್ವನಾಶ ಆಗುತ್ತದೆಂದು ಅಂದಿನ ಮನುಷ್ಯ ಅರಿತುಕೊಂಡಿದ್ದ. ಈಗ ಕೂಡಾ ಭೂಮಿ ‘ತಾಯಿ’ಯೆನ್ನುವ ಭಾವ ಬದುಕನ್ನು ತುಂಬಿ, ಭೂಮಿ ಉಳಿದರೆ ಮಾತ್ರ ಉಳಿವು ಎಂಬುದನ್ನು ಇಂದಿನವರೂ ತಿಳಿಯಬೇಕಿದೆ.
ಇದನ್ನೂ ಓದಿ : Earth Day 2021 ; ‘ಶರಣು ಮಣ್ಣಿಗೆ’ : ಆಡಿಬಂದ ಹಸಿದ ಕಂದನಂತೆ ಕೊಟ್ಟಿದ್ದನ್ನೆಲ್ಲಾ ತಿನ್ನತೊಡಗಿತು ಆ ಮಣ್ಣು
Earth Day 2021 special write up by leela appaji
Published On - 3:58 pm, Thu, 22 April 21