Earth Day 2021: ಭೂ ದಿನದ ಉದ್ದೇಶ, ಮಹತ್ವ ಮತ್ತು ಪ್ರಾಮುಖ್ಯತೆ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ

| Updated By: Lakshmi Hegde

Updated on: Apr 22, 2021 | 8:16 AM

ವಿಶ್ವ ಭೂ ದಿನಾಚರಣೆ ಎನ್ನುವುದು ಯಾವುದೋ ಒಂದು ಸಂಸ್ಥೆಗೆ ಮೀಸಲಾದ ದಿನಾಚರಣೆಯಲ್ಲ. ಈ ಭೂಮಿಯನ್ನು ಹಾಳುಗೆಡವಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾಗಿರುವ ಪ್ರತಿ ಮನುಷ್ಯನೂ ಇದರ ಮಹತ್ವವನ್ನು ಅರಿತು ತನ್ನನ್ನು ತಾನು ತಿದ್ದಿಕೊಂಡು ಮುನ್ನೆಡೆಯಲು ಈ ದಿನಾಚರಣೆ ಒಂದು ಮಾರ್ಗ.

Earth Day 2021: ಭೂ ದಿನದ ಉದ್ದೇಶ, ಮಹತ್ವ ಮತ್ತು ಪ್ರಾಮುಖ್ಯತೆ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ
ಸಂಗ್ರಹ ಚಿತ್ರ
Follow us on

ಭೂಮಿ ನಮಗೆ ಬದುಕು ಕೊಟ್ಟಿರುವ ತಾಣ. ಮನುಷ್ಯ ಬೆಳೆದಂತೆಲ್ಲಾ, ತಂತ್ರಜ್ಞಾನದ ಬೆನ್ನು ಹತ್ತಿದಂತೆಲ್ಲಾ ಭೂಮಿಯನ್ನು ಹೊರತುಪಡಿಸಿ ಬೇರಾವ ಗ್ರಹದಲ್ಲಿ ಬದುಕಲು ಯೋಗ್ಯವಾದ ತಾಣವಿದೆ ಎಂಬುದನ್ನು ಅನ್ವೇಷಿಸುತ್ತಲೇ ಇದ್ದಾನೆ. ಆದರೆ, ಇಲ್ಲಿಯ ತನಕ ಭೂಮಿಯಷ್ಟು ಹಿತವಾದ ಜಾಗ ಬೇರೊಂದು ಸಿಕ್ಕಿಲ್ಲ. ಇಷ್ಟಾದರೂ ನಾವು ಬದುಕಿಗೆ ಆಸರೆಯಾದ ಭೂಮಿಯನ್ನು ಎಷ್ಟರ ಮಟ್ಟಿಗೆ ಸರಿಯಾಗಿ ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಯೋಚಿಸಿದರೆ ಕೊಂಚ ಬೇಸರವಾಗುತ್ತದೆ. ಹೆಚ್ಚುತ್ತಿರುವ ಮಾಲಿನ್ಯ, ಏರುತ್ತಿರುವ ಜಾಗತಿಕ ತಾಪಮಾನ, ಪರಿಸರ ನಾಶ ಎಲ್ಲವೂ ಸೇರಿ ಈ ಭೂಮಿಯನ್ನು ನಿರಂತರವಾಗಿ ಹದಗೆಡಿಸುತ್ತಲೇ ಇದೆ. ಈ ಕುರಿತು ಜಾಗೃತಿ ಮೂಡಿಸಲೆಂದು ಶುರುವಾದ ಪರಿಕಲ್ಪನೆಯೇ ವಿಶ್ವ ಭೂ ದಿನ.

ಪ್ರತಿ ವರ್ಷವೂ ಏಪ್ರಿಲ್ 22ರಂದು  ಭೂ ದಿನ ಆಚರಿಸಲಾಗುತ್ತಿದೆ. ವಿಶ್ವದ ಎಲ್ಲಾ ಅಂಚಿನಲ್ಲಿರುವ ಜನರ ಗಮನವನ್ನೂ ಒಂದೆಡೆ ಸೆಳೆದು ಭೂಮಿಯ ಪ್ರಾಮುಖ್ಯತೆ ಏನು? ಅದನ್ನು ಕಾಪಾಡುವಲ್ಲಿ ನಮ್ಮ ಹೊಣೆಗಾರಿಕೆ ಏನು? ನಮ್ಮ ಮುಂದಿನ ಪೀಳಿಗೆಗೆ ಭೂಮಿಯನ್ನು ಸುರಕ್ಷಿತವಾಗಿ ಉಳಿಸಲು ಏನು ಮಾಡಬೇಕು? ಎಂಬಿತ್ಯಾದಿ ವಿಚಾರಗಳನ್ನು ಈ ದಿನಾಚರಣೆಯ ಮುಖೇನ ಮುನ್ನೆಲೆಗೆ ತಂದು ನೆನಪಿಸಲಾಗುತ್ತದೆ. 1990ರ ಹೊತ್ತಿನಲ್ಲಿ ಒಂದು ಪರಿಸರ ಆಂದೋಲನವಾಗಿ ರೂಪುಗೊಂಡ ಭೂ ದಿನಾಚರಣೆಯನ್ನು ಇಂದು ಬಹುತೇಕ ರಾಷ್ಟ್ರಗಳಲ್ಲಿ ಪರಿಸರ ಪರ ಚಿಂತನೆಯನ್ನು ಬಿತ್ತುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ.

ವಿಶ್ವ ಭೂ ದಿನ 2021ರ ಉದ್ದೇಶ
ಪ್ರತಿ ವರ್ಷವೂ ಭೂ ದಿನಾಚರಣೆಯನ್ನು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಆಚರಿಸಲಾಗುತ್ತದೆ. ಅಂದಿನಿಂದ ಮುಂದಿನ ಭೂ ದಿನಾಚರಣೆಯ ತನಕ ಅದರ ಉದ್ದೇಶವನ್ನು ಜನರಿಗೆ ತಲುಪಿಸಿ, ಜಾಗೃತಿ ಮೂಡಿಸಲಾಗುತ್ತದೆ. ಅಂತೆಯೇ ಈ ಬಾರಿಯ ವಿಶ್ವ ಭೂ ದಿನಾಚರಣೆಯನ್ನು ‘ಭೂಮಿಯನ್ನು ಪುನರ್​ ನಿರ್ಮಿಸೋಣ’ ಎಂಬ ಸದುದ್ದೇಶದೊಂದಿಗೆ ಆಚರಿಸಲಾಗುತ್ತಿದೆ.

ಈ ಬಾರಿಯ ಭೂ ದಿನದ ಮಹತ್ವ
1970ರ ಏಪ್ರಿಲ್ 22ರಂದು ಚಾಲ್ತಿಗೆ ಬಂದ ಭೂ ದಿನಾಚರಣೆ ಪರಿಕಲ್ಪನೆಗೆ ಪ್ರತಿ ವರ್ಷವೂ ವಿಭಿನ್ನ ಆಯಾಮವನ್ನು ನೀಡಿಕೊಂಡು ಬರಲಾಗುತ್ತಿದೆ. ಅಂತೆಯೇ ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ನಡುವಲ್ಲಿಯೂ ಭೂ ದಿನಾಚರಣೆಯ ಮಹತ್ವವನ್ನು ಸಾರುವ ಸಲುವಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಆಲೋಚನೆಯನ್ನು ಪರಿಸರ ಪ್ರೇಮಿಗಳು ಮುಂದಿಟ್ಟುಕೊಂಡಿದ್ದಾರೆ.

ನೀವೇನು ಮಾಡಬಹುದು?
ವಿಶ್ವ ಭೂ ದಿನಾಚರಣೆ ಎನ್ನುವುದು ಯಾವುದೋ ಒಂದು ಸಂಸ್ಥೆಗೆ ಮೀಸಲಾದ ದಿನಾಚರಣೆಯಲ್ಲ. ಈ ಭೂಮಿಯನ್ನು ಹಾಳುಗೆಡವಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾಗಿರುವ ಪ್ರತಿ ಮನುಷ್ಯನೂ ಇದರ ಮಹತ್ವವನ್ನು ಅರಿತು ತನ್ನನ್ನು ತಾನು ತಿದ್ದಿಕೊಂಡು ಮುನ್ನಡೆಯಲು ಈ ದಿನಾಚರಣೆ ಒಂದು ಮಾರ್ಗ. ನಮ್ಮ ಸುತ್ತಮುತ್ತಲೂ ಭೂಮಿಗೆ ಮಾರಕವಾಗುವಂತಹ ಅದೆಷ್ಟೋ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಅದನ್ನು ನಿಲ್ಲಿಸಲು ಪ್ರಯತ್ನಿಸಿ, ಅದರಲ್ಲಿ ತೊಡಗಿಸಿಕೊಂಡವರಲ್ಲಿ ತಿಳುವಳಿಕೆ ಮೂಡಿಸಿದರೆ ಅದು ಕೂಡಾ ನಾವು ಮಾಡಬಹುದಾದ ಅತ್ಯುತ್ತಮ ಕಾರ್ಯ. ಅಲ್ಲದೇ ಪ್ರಸ್ತುತ ಸಂದರ್ಭದಲ್ಲಿ ಭೂಮಂಡಲಕ್ಕೆ ಮಾರಕವಾಗಿರುವ ಅಂಶಗಳತ್ತ ಗಮನಹರಿಸಿ ಅದನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನೂ ಕೈಗೊಂಡು ವರ್ಷಪೂರ್ತಿ ವಿಶ್ವ ಭೂ ದಿನಾಚರಣೆಯ ಉದ್ದೇಶವನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಬಹುದು.

ಇದನ್ನೂ ಓದಿ:
ಮಂಗಳನ ಮೇಲೆ ಚೀನಾ ದೇವತೆಯ ಹೆಸರಲ್ಲಿ ನಗರ ನಿರ್ಮಾಣ; ಭೂಮಿ ಮೇಲಿನ ಸಿಟಿಯಂತೆ ಇರಲಿದೆ ಅಲ್ಲಿನ ಪಟ್ಟಣ, ಎಬಿಬೂ ಸಂಸ್ಥೆಯಿಂದ ವಿನ್ಯಾಸ ಬಿಡುಗಡೆ