ಯುವಕರು ಜಿಮ್ಗಳಿಗೆ ಎಡತಾಕಿ ದೇಹಗಳನ್ನು ಸಾಮುಗೊಳಿಸಿಕೊಳ್ಳಲು ಪ್ರಯತ್ನಿಸುವುದು ಕಳೆದೆರಡು-ಮೂರು ದಶಕಗಳಿಂದ ಟ್ರೆಂಡಿಂಗ್ನಲ್ಲಿರುವ ಸಂಗತಿಯಾಗಿದೆ. ಅವರಲ್ಲಿ ಒಂದು ಪರಿಕಲ್ಪನೆ ಇದೆ, ಉತ್ತಮ ದೇಹದಾರ್ಢ್ಯ ಹೊಂದಿರುವವರನ್ನು ಯುವತಿಯರು ಇಷ್ಟಪಡುತ್ತಾರೆ, ಅವರನ್ನು ಇಂಪ್ರೆಸ್ ಮಾಡಬೇಕಾದರೆ ಸಲ್ಮಾನ್ ಖಾನ್, ಜಾನ್ ಅಬ್ರಹಾಂ ಮೊದಲಾದ ಬಾಲಿವುಡ್ ನಟರಂತೆ ಬಾಡಿ ಇರಬೇಕು. ಅದು ನಿಜವೋ ಸುಳ್ಳೋ ಅಂತ ಹುಡುಗಿಯರೇ ದೃಢೀಕರಿಸಬೇಕು. ಒಂದು ಪಕ್ಷ ಅದು ನಿಜ ಅಂತಾದರೂ ಸರ್ವಕಾಲಿಕ ಸತ್ಯ ಮಾತ್ರ ಆಗಲಾರದು. ಇದನ್ನು ನಾವು ಬಾಡಿ ಬಿಲ್ಡ್ರ್ಗಳನ್ನು ನಿರಾಶೆಗೊಳಿಸಲು ಹೇಳುತ್ತಿಲ್ಲ ಸ್ವಾಮೀ, ಒಂದು ದೇಶದ ಬುಡಕಟ್ಟು ಜನಾಂಗದಲ್ಲಿರುವ ಪರಂಪರೆಯನ್ನು ಆಧರಿಸಿ ಹೇಳುತ್ತಿದ್ದೇವೆ.
ಯುವಕ ದಢೂತಿಯಾಗಿದ್ದರೆ, ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ, ಇದು ಸತ್ಯ. ಹಾಗಂತ ಡುಮ್ಮಗಳೆಲ್ಲ ಬ್ಯಹ್ಮಚಾರಿಗಳಾಗಿರುವುದಿಲ್ಲ. ಪ್ರತಿಯೊಂದು ಗಂಡು ಹೆಣ್ಣಿಗೆ ಒಬ್ಬ ಸಂಗಾತಿಯನ್ನು ಮೇಲಿನವನು ಸೃಷ್ಟಿಸಿರುತ್ತಾನೆ ಅಂತ ಎಲ್ಲ ಸಮುದಾಯದವರು ನಂಬುವುದರಿಂದ ಅದು ನಶ್ಚಿತವಾಗಿಯೂ ಸಾರ್ವತ್ರಿಕ ಸತ್ಯ. ಆದರೆ ಅಷ್ಟೇ ಸತ್ಯವಾದ ವಿಷಯವೆಂದರೆ, ಯುವತಿಯರ ಆದ್ಯತೆ ಪಟ್ಟಿಯಲ್ಲಿ ಡುಮ್ಮಗಳಿಗೆ ಕೊನೆಯ ಸ್ಥಾನ.
ಯುವಕರನ್ನು ಅವರ ದೊಡ್ಡ ಹೊಟ್ಟೆಯ ಆಧಾರದ ಮೇಲೆ ಸ್ಫುರದ್ರೂಪಿ ಎಂದು ಪರಿಗಣಿಸುವ ಸಮುದಾಯವೊಂದು ಇಥಿಯೋಪಿಯಾ ದೇಶದಲ್ಲಿದೆ ಎಂದರೆ ನೀವು ನಂಬುತ್ತೀರಾ? ಈ ದೇಶದ ಒಮೋ ಕಣಿವೆ ಪ್ರದೇಶದಲ್ಲಿ ವಾಸವಾಗಿರುವ ಬೋಡಿ ಬುಡಕಟ್ಟು ಜನಾಂಗದಲ್ಲಿ ಒಬ್ಬ ಯುವಕನ ಹೊಟ್ಟೆ ಎಷ್ಟು ದೊಡ್ಡದೋ ಅವನು ಅಷ್ಟು ಹ್ಯಾಂಡ್ಸಮ್! ಈ ಸಮುದಾಯದಲ್ಲಿ ಪ್ರತಿವರ್ಷ ಅತಿ ಧಡೂತಿ ವ್ಯಕ್ತಿಯನ್ನು ಆರಿಸಲು ಸ್ಪರ್ಧೆ ಏರ್ಪಡಿಸುತ್ತಾರೆ. ಗೆದ್ದವನನ್ನು ಆ ಪ್ರದೇಶದ ಅತಿ ಸುಂದರ ವ್ಯಕ್ತಿಯೆಂದು ಘೋಷಿಸಲಾಗುತ್ತದೆ.
ವಿಷಯ ಅಷ್ಟೇ ಅಗಿದ್ದರೆ ನಾವು ಇದನ್ನೆಲ್ಲ ಚರ್ಚಿಸುವ ಪ್ರಮೇಯ ಪ್ರಾಯಶಃ ಉದ್ಭವಿಸುತ್ತಿರಲಿಲ್ಲ. ಅವನನ್ನು ವರಿಸಲು ಅಲ್ಲಿನ ಯುವತಿಯರ ನಡುವೆ ಕಾದಾಟ ಶುರುವಾಗುತ್ತದೆ. ನಾ ಮುಂದು ತಾ ಮುಂದು ಅಂತ ಅವನ ಹಿಂದೆ ಸುತ್ತಲಾರಂಭಿಸುತ್ತಾರೆ.
ಸರಿ, ಹೊಟ್ಟೆ ಬೆಳೆಸಿ ಸ್ಪರ್ಧೆ ಗೆಲ್ಲಲು ಮತ್ತು ಹುಡುಗಿಯರ ಕನಸಿನ ರಾಜನಾಗಲು ಯುವಕರು ಆರು ತಿಂಗಳಿಂದ ತಯಾರಿ ನಡೆಸುತ್ತಾರೆ, ಡುಮ್ಮನಾಗಲು ಸಕಲ ಪ್ರಯತ್ನಗಳನ್ನು ಮಾಡುತ್ತಾರೆ. ಎಲ್ಲರಿಗಿಂತ ಧಡೂತಿಯಾಗಿ ತಯಾರಾಗುವ ಕೆಲಸ ಯಾವ ದೃಷ್ಟಿಯಿಂದಲೂ ಸುಲಭ ಅಲ್ಲ ಅಂತ ಯುವಕರು ಹೇಳುತ್ತಾರೆ. ಅದಕ್ಕಾಗಿ ಅವರು ಆಕಳ ಹಾಳಿನ ಜೊತೆ ಅದರ ರಕ್ತವನ್ನೂ ಕುಡಿಯುತ್ತಾರೆ!
ಹೀಗೆ ಮಾಡುವುದರಿಂದ ಹೊಟ್ಟೆ ಮತ್ತು ಅದರ ಸುತ್ತಲಿನ ಭಾಗದಲ್ಲಿ ಕೊಬ್ಬಿನಾಂಶ ಶೇಖರಣೆ ಆಗಲಾರಂಭಿಸುತ್ತದೆ. ಸ್ಪರ್ಧೆಗೆ ತಯಾರಾಗುವುದಕ್ಕಾಗಿಯೇ ಅವರು 6 ತಿಂಗಳು ಕಾಲ ಪ್ರತ್ಯೇಕ ಗುಡಿಸಲುಗಳಲ್ಲಿ ವಾಸ ಮಾಡಲಾರಂಭಿಸುತ್ತಾರೆ. ಈ ಅವಧಿಯಲ್ಲಿ ಅವರು ಸುತಾರಾಂ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತಿಲ್ಲ. ಅವರ ಪ್ರತಿದಿನದ ಆಹಾರ ಆಕಳ ಹಾಲು ಮತ್ತು ಅದರ ರಕ್ತ. ಈ ಕಸರತ್ತಿನಲ್ಲಿ ತೊಡಗುವ ಯುವಕರಿಗೆ ಯುವತಿಯರನ್ನು ಆಕರ್ಷಿಸಲು ಸುವರ್ಣಾವಕಾಶ ಎಂದು ಜನಾಂಗದ ಹಿರಿಯರು ಹೇಳುತ್ತಾರೆ. ಯುವಕರು ಹಾಲಿಗೆ ರಕ್ತ ಬೆರೆಸಿದ ಕೂಡಲೇ ಅದನ್ನು ಗಂಟಲಿಗಿಳಿಸುತ್ತಾರಂತೆ. ಅವರು ವಾಸಿಸುವ ಸ್ಥಳಗಳಲ್ಲಿ ಅನೇಕ ವಿಧದ ರೋಗಗಳು ಕಾಣಿಸುತ್ತವೆ ಎಂದು ಹೇಳಲಾಗುತ್ತದೆ.
ಆದರೆ ಆ ಜನ ನಿರಾತಂಕದಿಂದ ರಕ್ತಮಿಶ್ರಿತ ಹಾಲನ್ನು ಕುಡಿಯುತ್ತಾರೆ. ತಯಾರಿಗಿಳಿದವರೆಲ್ಲ ಈ ಆಹಾರ ಪದ್ಧತಿಗೆ ಒಗ್ಗಿಕೊಳ್ಳುತ್ತಾರೆ ಅಂತೇನೂ ಇಲ್ಲ. ಅರ್ಧಕ್ಕೆ ಅದನ್ನು ಬಿಟ್ಟು ಊರು ಸೇರಿಕೊಳ್ಳುವ ಯುವಕರೂ ಇರುತ್ತಾರೆ. ಗೆಲ್ಲಲೇಬೇಕೆಂಬ ಸಂಕಲ್ಪ ಮಾಡಿಕೊಂಡಿರುವವರು 6ತಿಂಗಳು ಕಳೆದ ನಂತರ ಅವರು ಗುಡಿಸಲುಗಳಿಂದ ಹೊರಬಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಯಾವನು ಎಲ್ಲರಿಗಿಂತ ದಢೂತಿಯಾಗಿ ದೊಡ್ಡ ಹೊಟ್ಟೆಯನ್ನು ಹೊಂದಿರುತ್ತಾನೋ ಅವನು ಸುರಸುಂದರಾಂಗ ಎನಿಸಿಕೊಳ್ಳುತ್ತಾನೆ. ಆ ಜನಾಂಗದವರು ಅವನಿಗೆ ವಿಜಯೀ ಎಂದು ಘೋಷಿಸಿ ಸನ್ಮಾನ ಮಾಡುತ್ತಾರೆ.
ಬೋಡಿ ಬಡಕಟ್ಟು ಜನಾಂಗದಲ್ಲಿ ಸೌಂದರ್ಯಕ್ಕೆ ವಿಭಿನ್ನವಾದ ವ್ಯಾಖ್ಯಾನವಿದೆ. ಪುರುಷರ ವಿಷಯ ಹೀಗಾದರೆ, ಮಹಿಳೆಯರದ್ದು ಮತ್ತೊಂದು ಬಗೆಯ ಅತಿರೇಕ. ಯಾವ ಯುವತಿಯ ದೇಹದ ಮೇಲೆ ಹೆಚ್ಚು ಗಾಯದ ಗುರುತುಗಳಿರುತ್ತವೆಯೋ ಅವಳೇ ಅಲ್ಲಿ ಸೌಂದರ್ಯದ ಖನಿ. ಯುವತಿಯರು ಸುಂದರಿಯೆನಿಸಿಕೊಳ್ಳಲು ಚಾಕು ಮತ್ತು ಬ್ಲೇಡ್ಗಳಿಂದ ದೇಹದ ಮೇಲೆ ಗಾಯಗಳನ್ನು ಮಾಡಿಕೊಳ್ಳುತ್ತಾರಂತೆ!
ದೇಹದ ಮೇಲೆ ಹೆಚ್ಚು ಗಾಯಗಳನ್ನಿರುವ ಯುವತಿಯರನ್ನು ಯುವಕರು ಇಷ್ಟಪಡುತ್ತಾರೆ. ಹಾಗೆಯೇ, ದೊಡ್ಡ ಹೊಟ್ಟೆಯಿರುವ ಯುವಕನನ್ನು ಯುವತಿಯರು ವರಿಸಲು ಇಷ್ಟಪಡುತ್ತಾರೆ.
ಇದನ್ನೂ ಓದಿ: Viral Video: ಕಲಿಯುಗದಲ್ಲೂ ನಡೆಯಿತು ಸೀತಾಸ್ವಯಂವರ; ಬಿಲ್ಲು ಎತ್ತಿ ಮದುಮಗಳನ್ನು ವರಿಸಿದ ಹುಡುಗ! ವಿಡಿಯೋ ನೋಡಿ