Gandhi Jayanti 2021 : ‘ಭಿನ್ನಾಭಿಪ್ರಾಯಗಳು ವಿಷಯಗಳನ್ನು ಕುರಿತು ಇರಬೇಕೇ ಹೊರತು, ವ್ಯಕ್ತಿಗಳ ನಡುವೆ ಇರಬಾರದು‘

|

Updated on: Oct 02, 2021 | 11:36 AM

Gandhiji : ‘ಚಕಿತರಾದ ಕೋದಂಡರಾವ್ ಅವರು “ನಾನು ನಿಮ್ಮ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸಿ ಲೇಖನಗಳನ್ನು ಬರೆಯುತ್ತಿರುವವನು. ಅಂತಹುದರಲ್ಲಿ ನಿಮ್ಮ ಕಾರ್ಯಕ್ರಮವೊಂದರ ಪ್ರಚಾರದ ಹೊಣೆಯನ್ನು ನಾನು ಹೇಗೆ ಹೊರಲಿ” ಎಂದು ಗಾಂಧೀಜಿಯವರನ್ನು ಪ್ರಶ್ನಿಸಿದರು.’ ಆರ್. ಶ್ರೀನಾಗೇಶ್

Gandhi Jayanti 2021 : ‘ಭಿನ್ನಾಭಿಪ್ರಾಯಗಳು ವಿಷಯಗಳನ್ನು ಕುರಿತು ಇರಬೇಕೇ ಹೊರತು, ವ್ಯಕ್ತಿಗಳ ನಡುವೆ ಇರಬಾರದು‘
ಸೌಜನ್ಯ : History.com
Follow us on

Gandhi Jayanthi : ಒಂದು ಕಡೆ ಗಾಂಧೀಜಿಯ ಹೆಸರು ಹೇಳಿಕೊಂಡು ಅವರ ತತ್ವಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು, ಗ್ರಾಮೀಣ ಭಾರತದ ಅಭಿವೃದ್ದಿಗೆ, ದೇಶೀ ವೈಶಿಷ್ಟ್ಯಗಳ ಬೆಳವಣಿಗೆಗೆ ಗಾಂಧೀಜಿ ಕೊಟ್ಟ ಸಲಹೆಗಳನ್ನು ಮೂಲೆಗೆ ತಳ್ಳಿದ ರಾಜಕಾರಣಿಗಳು. ಮತ್ತೊಂದೆಡೆ, ಅವರ ಮೇಲಿನ ತಪ್ಪು ಕಲ್ಪನೆಯಿಂದ ಅವರನ್ನು ದ್ವೇಷಿಸುತ್ತಾ, ಅವರ ಕಾಣಿಕೆಯನ್ನು ತುಚ್ಛೀಕರಿಸುತ್ತಿರುವ ವರ್ಗ. ಇವರಿಬ್ಬರ ನಡುವೆ ನಲುಗಿ ಹೋಗಿರುವ ನಿಜವಾದ ಗಾಂಧೀಜಿಯನ್ನು ಇಬ್ಬರಿಂದಲೂ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುವ ಪ್ರಯತ್ನ ಈ ಬರಹ.
ಆರ್. ಶ್ರೀನಾಗೇಶ್, ಲೇಖಕರು

1971ರ ಸಾರ್ವತ್ರಿಕ ಚುನಾವಣೆ. ಚುನಾವಣಾ ಕರ್ತವ್ಯಕ್ಕೆ ನನ್ನನ್ನು ನಿಯೋಜಿಸಲಾಗಿತ್ತು. ಚನ್ನಪಟ್ಟಣ ಕ್ಷೇತ್ರದ ಒಂದು ಹಳ್ಳಿಗೆ. ಕೆಲವರಿಗೆ ಮತದಾನ ಮಾಡಲು ನೆರವು ಬೇಕಿತ್ತು. ಅದಕ್ಕೆ ನಿರ್ದಿಷ್ಟ ವಿಧಾನವಿದ್ದರೂ, ಪಕ್ಷದ ಪ್ರತಿನಿಧಿಗಳು ಅವರಿಗೆ ನೀವೇ ಯಾರಾದರೂ ನೆರವು ನೀಡಿ ಎನ್ನುತ್ತಿದ್ದರು. ಚುನಾವಣಾ ಸಿಬ್ಬಂದಿಯಲ್ಲಿ ನಾನೇ ಕಿರಿಯ! ಇನ್ನೂ ಮತದಾನ ಮಾಡಿರಲಿಲ್ಲದವನು. ನಮ್ಮ ನಾಯಕರು ನೆರವು ನೀಡುವ ಆದೇಶವನ್ನು ನನಗೇ ಕೊಟ್ಟರು.

ಪ್ರಾಯಶಃ ನಾಲ್ಕು ಜನಕ್ಕೆ ನೆರವಾದೆ ಎಂದು ನೆನಪು. ಬ್ಯಾಲಟ್ ಪೇಪರ್ ಮೇಲೆ ಮುದ್ರೆಯೊತ್ತುವ ವಿಧಾನ. ಯಾರಿಗೆ ಮತ ಕೊಡಬೇಕು ಎಂದು ಅವರನ್ನು ಕೇಳಿ, ಆ ಚಿಹ್ನೆಯ ಮೇಲೆ ಗುರುತು ಹಾಕುವುದು ನನಗೆ ಕೊಟ್ಟ ಕೆಲಸ.
“ಗಾಂಧಿ ಏಳವ್ರೆ, ಕಾಂಗ್ರೆಸ್‍ಗೇ ಹಾಕಿ ಅಂತ. ಚರಕದ ಗುರುತಿಗೆ ಒತ್ತಪ್ಪ” ಎಂದು ಅವರೆಲ್ಲರೂ ನನಗೆ ಹೇಳಿದರು.
ಕರ್ತವ್ಯದಿಂದ ವಾಪಸಾದ ನಂತರವೂ ಅದನ್ನು ಕುರಿತು ಯೋಚಿಸುತ್ತಿದ್ದೆ.

ನನ್ನ ತಂದೆ ಗಾಂಧೀಜಿಯನ್ನು ಹತ್ತಿರದಿಂದ ಕಂಡವರು. ಅವರಿಗೆ ಗಾಂಧೀಜಿಯನ್ನು ಕಂಡರೆ ಇಷ್ಟವಿರಲಿಲ್ಲ. ಹೀಗಾಗಿ ನನ್ನ ತಲೆಯಲ್ಲಿಯೂ ಗಾಂಧೀಜಿಯನ್ನು ಕುರಿತು ಅದೇ ಭಾವನೆಯನ್ನು ಮೂಡಿಸಿದ್ದರು.
ಈ ಹಿನ್ನೆಲೆಯಲ್ಲಿ ಗಾಂಧೀಜಿಯ ಮರಣದ ಎರಡು ದಶಕಗಳ ನಂತರವೂ ಅವರ ಮಾತಿಗೆ ಗೌರವ ಕೊಡುವ ಜನ ಇದ್ದಾರೆ, ಅದರಲ್ಲಿಯೂ ಚನ್ನಪಟ್ಟಣದಂತಹ ಇಲಾಖೆಗೆ ಸೇರಿದ ಹಳ್ಳಿಯೊಂದರಲ್ಲಿ, ಅಂದಮೇಲೆ ಅವರ ವ್ಯಕ್ತಿತ್ವ ಎಂತಹುದಿರಬೇಕು ಎಂದು ಯೋಚಿಸತೊಡಗಿದೆ.

ಈ ಮನಃಸ್ಥಿತಿಯಲ್ಲಿಯೇ ಅವರ ‘ಮೈ ಎಕ್ಸ್​ಪೀರಿಮೆಂಟ್ ವಿತ್ ಟ್ರುತ್’ ಪುಸ್ತಕವನ್ನು ಪುಸ್ತಕದಂಗಡಿಯಲ್ಲಿ ಕಂಡು, ಓದಲು ಪ್ರಾರಂಭಿಸಿದೆ. ಚಂಪಾರಣ್ಯದಲ್ಲಿ ನೀಲಿ ಎಸ್ಟೇಟ್‍ಗಳಲ್ಲಿ ದುಡಿಯುತ್ತಿದ್ದ ಭಾರತೀಯ ಕೂಲಿಗಳನ್ನು ಬಿಳಿಯರಾದ ಮಾಲೀಕರು ನಡೆಸಿಕೊಳ್ಳುತ್ತಿದ್ದ ರೀತಿ, ಅವರ ಪರವಾಗಿಯೇ ನಿಂತು ಶೋಷಿತರ ನೆರವಿಗೆ ಧಾವಿಸದ ಪೊಲೀಸರು ಮತ್ತು ನ್ಯಾಯಾಂಗ. ಅವರನ್ನು ನರಕಯಾತನೆಯಿಂದ ಹೊರತರಲು ಗಾಂಧೀಜಿಯಿಂದ ಮಾತ್ರ ಸಾಧ್ಯ ಎಂದು ನಂಬಿ, ಸತತ ಪ್ರಯತ್ನ ಮಾಡಿ ಗಾಂಧೀಜಿಯನ್ನು ಕರೆಸಿಕೊಂಡ ಕಾರ್ಮಿಕ ನಾಯಕ.
ಇದು ಕಾರ್ಮಿಕ ಸಮಸ್ಯೆ, ನಾನು ಸ್ವಾತಂತ್ರ್ಯದ ಹೋರಾಟದಂತಹ ದೊಡ್ಡ ಪ್ರಯತ್ನದಲ್ಲಿದ್ದಾಗ ಈ ಸಣ್ಣ ಸಮಸ್ಯೆಗೆ ಗಮನ ಹರಿಸಬೇಕೇ ಎನ್ನುವ ನಿಲುವು ಹೊತ್ತಿದ್ದ ಗಾಂಧೀಜಿ, ಒತ್ತಡವನ್ನು ಎದುರಿಸಲಾರದೆ, “ಆಯಿತು. ಅಸ್ಸಾಮಿನಿಂದ ಹಿಂತಿರುಗುವಾಗ ಒಂದು ದಿನ ನಿಮ್ಮಲ್ಲಿ ನಿಂತು ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಸಲಹೆಗಳನ್ನು ಕೊಡುವೆ” ಎಂದು ಗಾಂಧೀಜಿ ಹೇಳುತ್ತಾರೆ.

ಅಲ್ಲಿಗೆ ಭೇಟಿ ಕೊಟ್ಟು ವಸ್ತುಸ್ಥಿತಿಯನ್ನು ಪರಿಶೀಲಿಸಿದಾಗ ಸಮಸ್ಯೆ ಸರಳವಾದುದಲ್ಲ ಎಂದು ಅರಿವಾಗುವುದು. “ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಿಯೇ ಇಲ್ಲಿಂದ ಹೊರಡುವೆ” ಎಂದು ಗಾಂಧೀಜಿ ಭರವಸೆ ನೀಡುತ್ತಾರೆ.
ಅವರನ್ನು ಬಂಧಿಸಿ ನ್ಯಾಯಾಧೀಶರ ಎದುರು ನಿಲ್ಲಿಸಿದಾಗ ಯಾವ ಕಾರಣಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಎಂದು ನ್ಯಾಯಾಧೀಶರಿಗೇ ಜಿಜ್ಞಾಸೆಯಾಗುತ್ತದೆ. ಕೊನೆಗೆ ಸಂಜೆಯ ವೇಳೆಗೆ ಗಾಂಧೀಜಿಯನ್ನು ಬಿಡುಗಡೆ ಮಾಡಿ ಸಂಧಾನ ಮಾಡಿ ಎಂದು ಆದೇಶ ಕೊಟ್ಟ ವೈಸ್‍ರಾಯ್ ಸಂದೇಶವನ್ನು ಓದಿದ ನ್ಯಾಯಾಧೀಶರು ಗಾಂಧೀಜಿಯವರೊಡನೆ ಕುರಿತು ಚರ್ಚೆ ಮಾಡಿ ಶೋಷಿತ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಾರೆ.
ಗಾಂಧೀಜಿಯನ್ನು ಕುರಿತು ನನ್ನ ಯೋಚನೆಯನ್ನು ಪರಿವರ್ತಿಸಿದ ಪ್ರಸಂಗ ಇದು.

ಒಂದು ಸಣ್ಣ ಕೆಲಸಕ್ಕೆ ನಮ್ಮ ದಿನಚರಿ ಬದಲಾಯಿಸಲು ಒಪ್ಪದ ನಾವೆಲ್ಲಿ, ಸಮಸ್ಯೆಯ ಗಹನತೆ ಕಂಡು ಇದನ್ನು ಸುಧಾರಿಸಿದ ನಂತರವೇ ಇಲ್ಲಿಂದ ಹೊರಡುವೆ ಎಂದು ನಿರ್ಧರಿಸಿದ ಗಾಂಧೀಜಿ ಎಲ್ಲಿ ಎನಿಸತೊಡಗಿತು. ಅವರ ಒಂದು ತಂತಿ ಸಂದೇಶಕ್ಕೆ ಸ್ಪಂದಿಸಿ, ಅವರ ಮಾತಿಗೆ ಗೌರವ ಕೊಡುವಂತೆ ವೈಸ್‍ರಾಯ್ ನೀಡಿದ ಆದೇಶ ಗಾಂಧೀಜಿಯ ವ್ಯಕ್ತಿತ್ವವನ್ನು ಕುರಿತು ಒಳನೋಟವನ್ನು ಬೀರಿತು.

ಒಮ್ಮೆ ಗಾಂಧೀಜಿ ಸೆರೆಮನೆಯಲ್ಲಿದ್ದಾಗ, ಅವರನ್ನು ಭೇಟಿಯಾಗಲು ಕಸ್ತೂರ ಬಾ ಬರುವರು. ಅವರಿಬ್ಬರೂ ಮಾತನಾಡಿಕೊಳ್ಳುವಾಗ ನಾನೇಕೆ ಮಧ್ಯದಲ್ಲಿ ಎಂದು ಪೊಲೀಸಿನವ ದೂರ ಹೋಗಿರುವನು. ಸುಮಾರು 20 ನಿಮಿಷದ ನಂತರ ಅವನು ವಾಪಸಾದಾಗ ಆ ನಡುವೆ ಗಾಂಧೀಜಿ ಪತ್ನಿಯೊಡನೆ ಒಂದು ಮಾತೂ ಆಡಿರುವುದಿಲ್ಲ.
ಚಕಿತನಾದ ಪೊಲೀಸಿನವನು ಕಾರಣ ಕೇಳಿದಾಗ, ‘ಜೈಲಿನ ನಿಯಮಗಳ ಪ್ರಕಾರ ಖೈದಿಯನ್ನು ಭೇಟಿ ಮಾಡಲು ಬಂದವರು ಖೈದಿಯೊಡನೆ ಮಾತನಾಡುವಾಗ ಜೈಲಿನ ಸಿಬ್ಬಂದಿ ಯಾರಾದರೂ ಉಪಸ್ಥಿತರಿರಬೇಕು, ನೀನಿರಲಿಲ್ಲ. ಹೀಗಾಗಿ ಮಾತನಾಡಲು ಸಾಧ್ಯವಾಗಲಿಲ್ಲ’ ಎಂದು ಗಾಂಧೀಜಿ ಉತ್ತರಿಸಿದರು.

ಒಂದು ಕಾಲದಲ್ಲಿ ಗಾಂಧೀಜಿಯವರ ಕೆಲವು ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸುತ್ತಿದ್ದವರು ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಗಳು. ಅವರ ಬಲಗೈ ಶ್ರೀ ಪಿ. ಕೋದಂಡರಾವ್ ಅವರು. ಪುಣೆಯಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಸ್ಥಾಪಿಸಿದ್ದ ಶ್ರೀನಿವಾಸ ಶಾಸ್ತ್ರಿಗಳು ಗುರಿಯನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ನಿವಾರಿಸಿಕೊಳ್ಳಬೇಕು, ಸತ್ಯಾಗ್ರಹ, ಅಸಹಕಾರ ಚಳುವಳಿ ಮುಂತಾದವು ಕಾನೂನು ಬಾಹಿರ. ಈಗ ವಿದೇಶೀ ಸರಕಾರದ ವಿರುದ್ಧ ಅದು ಸರಿ ಎನಿಸಿದರೂ, ಅದನ್ನು ಕಲಿತ ಜನ ಮರೆಯುವುದಿಲ್ಲ. ನಮ್ಮದೇ ಸರಕಾರ ಆಯ್ಕೆಯಾದಾಗ ಅದರ ವಿರುದ್ಧವೂ ಇದೇ ಅಸ್ತ್ರಗಳನ್ನು ಬಳಸಿಕೊಳ್ಳುವರು ಎಂದು ಹೇಳುತ್ತಿದ್ದರು.

ಪಿ. ಕೋದಂಡರಾವ್ ಅವರು ಗಾಂಧೀಜಿಯ ಕೆಲವು ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸಿ ಸಂಸ್ಥೆಯ ಪತ್ರಿಕೆಯಲ್ಲಿ ಬರೆಯುತ್ತಿದ್ದ ಸಮಯದಲ್ಲಿ ಒಮ್ಮೆ ಗಾಂಧೀಜಿ ಕೋದಂಡರಾವ್ ಅವರಿಗೆ ಹೇಳಿ ಕಳುಹಿಸಿದರು. ಅಚ್ಚರಿಗೊಂಡ ಕೋದಂಡರಾವ್ ಯರವಾಡ ಸೆರೆಮನೆಯಲ್ಲಿದ್ದ ಗಾಂಧೀಜಿಯನ್ನು ಭೇಟಿಯಾದರು.
“ನಾನು ಅಸ್ಪೃಶ್ಯತೆ ವಿರುದ್ಧ ಒಂದು ಆಂದೋಲನವನ್ನು ಪ್ರಾರಂಭಿಸಬಯಸಿದ್ದೇನೆ. ಅದಕ್ಕೆ ಉತ್ತಮ ಪ್ರಚಾರ ಬೇಕಿದೆ. ದಯವಿಟ್ಟು ಆ ಹೊಣೆಗಾರಿಕೆ ಹೊರುವೆಯಾ?” ಎಂದು ಗಾಂಧೀಜಿ ವಿನಂತಿಸಿಕೊಂಡರು.

ಇದರಿಂದ ಚಕಿತರಾದ ಕೋದಂಡರಾವ್ ಅವರು “ನಾನು ನಿಮ್ಮ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸಿ ಲೇಖನಗಳನ್ನು ಬರೆಯುತ್ತಿರುವವನು. ಅಂತಹುದರಲ್ಲಿ ನಿಮ್ಮ ಕಾರ್ಯಕ್ರಮವೊಂದರ ಪ್ರಚಾರದ ಹೊಣೆಯನ್ನು ನಾನು ಹೇಗೆ ಹೊರಲಿ” ಎಂದು ಗಾಂಧೀಜಿಯವರನ್ನು ಪ್ರಶ್ನಿಸಿದರು.

“ಮೈ ಡಿಯರ್ ಯಂಗ್ ಮ್ಯಾನ್! ನಿನ್ನ ಲೇಖನಗಳನ್ನು ನಾನು ಒದುತ್ತಲೇ ಬಂದಿದ್ದೇನೆ. ನಿನಗೆ ಭಾಷೆಯ ಮೇಲೆ ಅದ್ಭುತವಾದ ಹಿಡಿತವಿದೆ. ಮನವರಿಕೆ ಮಾಡಿಕೊಡುವ ಸಾಮರ್ಥ್ಯವಿದೆ. ಓದಲು ಮುದ ಎನಿಸುತ್ತದೆ. ಈ ಕಾರ್ಯಕ್ರಮಕ್ಕೆ ನಿನ್ನ ಹಾಗೆ ಬರೆಯುವವರು ಬೇಕು. ದಯವಿಟ್ಟು ಸಹಕರಿಸುವೆಯಾ” ಎಂದು ಕೇಳಿದರು.
ಈ ಘಟನೆಯನ್ನು ನಿರೂಪಿಸುತ್ತ, “ಭಿನ್ನಾಭಿಪ್ರಾಯಗಳು ವಿಷಯಗಳನ್ನು ಕುರಿತು ಇರಬೇಕೇ ಹೊರತು, ವ್ಯಕ್ತಿಗಳ ನಡುವೆ ಇರಬಾರದು ಎನ್ನುವ ಮಹತ್ತರ ಪಾಠವನ್ನು ಅಂದು ನಾನು ಗಾಂಧೀಜಿಯವರಿಂದ ಕಲಿತೆ” ಎಂದು ಕೋದಂಡರಾವ್ ಅವರು ನನಗೆ ತಿಳಿಸಿದರು.

ವಾಸ್ತವವಾಗಿ ಅಂದು 25ರ ವಯಸ್ಸಿನವನಾಗಿದ್ದ ನನಗೆ ಇದೇ ಪಾಠ ಕೋದಂಡರಾವ್ ಮೂಲಕ ನನಗೆ ದೊರೆಯಿತು ಎಂದು ಹೇಳಿಕೊಳ್ಳುವೆ! ಅದೇ ಸಮಯದಲ್ಲಿ ಕೋದಂಡರಾವ್ ಅವರ ಹೇಳಿಕೆಯೊಂದನ್ನು ಖಂಡಿಸಿ ಪತ್ರ ಬರೆಯಬೇಕೆಂದಿದ್ದೆ. ಬರೆಯಲು ಸಮಯ ಸಿಕ್ಕಿರಲಿಲ್ಲ. ಒಂದೆರಡು ದಿನಗಳ ನಂತರ, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಯವರನ್ನು ಕುರಿತು ಆಕಾಶವಾಣಿಯಲ್ಲಿ ಮಾತನಾಡಲು ಕೇಳಿದಾಗ, ನಾನು ಖಂಡಿಸಿ ಬರೆಯದೇ ಇದ್ದುದು ಒಳ್ಳೆಯದೇ ಆಯಿತು, ಇಲ್ಲದೇ ಹೋದಲ್ಲಿ ಯಾವ ಮುಖ ಇಟ್ಟುಕೊಂಡು ಅವರ ಬಳಿಗೆ ಹೋಗಬೇಕಿತ್ತು ಎಂದುಕೊಂಡು ಅವರನ್ನು ಭೇಟಿ ಮಾಡಿದ ಮೊದಲ ದಿನ ನನಗೆ ಅವರು ಈ ಘಟನೆಯನ್ನು ನಿರೂಪಿಸಿದಾಗ, ನಾನು ಹಾಗೆ ಖಂಡಿಸಿದ್ದರೂ ಕೋದಂಡರಾವ್ ಅದೇ ನೆರವು ನೀಡುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಂಡೆ, ನನ್ನ ಜೀವನದಲ್ಲಿ ಇದನ್ನು ಅಳವಡಿಸಿಕೊಂಡೆ.

ಸೌಜನ್ಯ : Timeline.com

ದಕ್ಷಿಣ ಆಫ್ರಿಕದಲ್ಲಿ ಜನಾಂಗ ಭೇದ ಕುರಿತು ಯಶಸ್ವೀ ಹೋರಾಟ ನಡೆಸಿದ ಗಾಂಧೀಜಿಯನ್ನು ನಮ್ಮ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಲ್ಲುವಂತೆ ಕೋರಿಕೊಂಡಾಗ, ಮೊದಲು ನಾನು ಭಾರತವನ್ನು ಅರಿಯಬೇಕು ಎಂದು ತಿಳಿಸಿ, ಭಾರತದಾದ್ಯಂತ ಮೂರನೆಯ ದರ್ಜೆಯಲ್ಲಿ ಪ್ರಯಾಣ ಮಾಡುತ್ತ ನಮ್ಮ ದೇಶದ ಕಡುಬಡತನ್ನು ಗಮನಿಸಿದರು. ಒಬ್ಬ ಮಹಿಳೆ ತನ್ನ ಮೈ ಮುಚ್ಚಿಕೊಳ್ಳಲು ಪರದಾಡುತ್ತಿದ್ದುದನ್ನು ಕಂಡು ಇನ್ನುಮುಂದೆ ತಾವು ತಮ್ಮ ವಸ್ತ್ರನೀತಿಯನ್ನು ಬದಲಾಯಿಸುವ ಪಣ ತೊಟ್ಟು ತುಂಡು ಪಂಚೆ, ಹೊದಿಕೆಯನ್ನು ಉಡಲು ಪ್ರಾರಂಭಿಸಿದರು.

ಇದಕ್ಕೆ ಎಂತಹ ಮಾನಸಿಕ ಸ್ಥೈರ್ಯ ಬೇಕು ಎನ್ನುವುದನ್ನು ನಾವು ಪರಿಗಣಿಸಿಲ್ಲ ಎನ್ನುವುದು ನನ್ನ ಅನಿಸಿಕೆ. ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡುವ ನಿರ್ಧಾರವನ್ನು ಪ್ರಕಟಿಸಿದಾಗ, ಆ ಅರೆನಗ್ನ ಫಕೀರ ಏನು ಮಾಡಿಯಾನು ಎಂದು ಪ್ರಧಾನಿ ಚರ್ಚಿಲ್ ನಗೆಯಾಡಿದ. ಎರಡು ವರ್ಷಗಳ ನಂತರ ಅವನನ್ನು ಅಧಿಕಾರದಿಂದ ಕೆಳಗಿಳಿಸಿದ ಬ್ರಿಟಿಷರು ಆ ನಂತರ ನಮ್ಮ ದೇಶವನ್ನು ಬಿಟ್ಟು ಹೊರಟರು.

ಇದಕ್ಕೆ ಗಾಂಧೀಜಿ ಮಾತ್ರವಲ್ಲ, ಅನೇಕರು ಕಾರಣರು ಎಂದು ಕೆಲವರು ವಾದಿಸುತ್ತಿದ್ದಾರೆ. ಬಹುಮುಖೀ ಆಯಾಮದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿದ್ದು ನಿಜ, ಅವರೆಲ್ಲರ ಕಾಣಿಕೆಯನ್ನು ನಿರ್ಲಕ್ಷಿಸಲಾಗದು ಎನ್ನುವುದೂ ಒಪ್ಪಿಕೊಳ್ಳಬೇಕಾದ ವಿಷಯವೇ.

ಆದರೆ ನಾವು ಮರೆಯುತ್ತಿರುವುದು ಗಾಂಧೀಜಿಯ ಮಾತಿಗೆ ಇಡಿಯ ದೇಶ ಹೇಗೆ ಸ್ಪಂದಿಸುತ್ತಿತ್ತು ಎನ್ನುವುದು. ಪ್ರಾರಂಭದಲ್ಲಿ ತಿಳಿಸಿದ ಪ್ರಕರಣದಂತೆ ಮೂಲೆಮೂಲೆಯಲ್ಲಿರುವ ಜನ, ದಶಕಗಳ ನಂತರವೂ ಗಾಂಧೀಜಿಯ ಕರೆಗೆ ಓಗೊಡಬೇಕಾದರೆ, ಅವರ ವ್ಯಕ್ತಿತ್ವ ಎಷ್ಟು ಶಕ್ತಿಯುತವಾಗಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಗಾಂಧೀಜಿಯ ತತ್ವಗಳಲ್ಲಿ ನಡವಳಿಕೆಯಲ್ಲಿ ನಂಬಿಕೆಗಳಲ್ಲಿ ಲೋಪಗಳಿರಲಿಲ್ಲ ಎಂದಲ್ಲ. ಅವುಗಳ ಹೊರತಾಗಿಯೂ ಅವರು ಜನರ ವಿಶ್ವಾಸವನ್ನು ಗಳಿಸಿಕೊಳ್ಳಲು, ಅವರ ಮಾತಿಗೆ ಜನ ಆ ಮಟ್ಟದಲ್ಲಿ ಬೆಲೆ ಕೊಡಲು ಏನು ಕಾರಣ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದರೆ, ಗಾಂಧೀಜಿಯ ಆ ಶಕ್ತಿಯ ಅರಿವಾದೀತು.

ಬಹಳ ಜನರಿಗೆ ತಿಳಿಯದ ಮತ್ತೊಂದು ಘಟನೆ ಇದೆ.

ಗಾಂಧೀಜಿ ಎಲ್ಲಿಗೆ ಹೋದರೂ ದಾರಿಯುದ್ದಕ್ಕೂ ಅವರನ್ನು ಭೇಟಿಯಾಗಲು, ಮಾತನಾಡಿಸಲು ಜನ ಉತ್ಸುಕರಾಗಿರುತ್ತಿದ್ದರು. ಹೀಗಾಗಿ ಅವರು ಹೋಗುವ ರೈಲು ತೀರಾ ವಿಳಂಬವಾಗುತ್ತಿತ್ತು. ಒಮ್ಮೆ ಅವರು ಅಸ್ಸಾಮಿಗೆ ಹೋದಾಗ ಈ ವಿಳಂಬ ತಪ್ಪಿಸಲು ಅವರಿಗಾಗಿ ವಿಶೇಷ ರೈಲು ಹೊರಡಿಸುವ ನಿರ್ಧಾರವನ್ನು ರೈಲ್ವೆಯವರು ಮಾಡಿದರು. ಅದನ್ನು ಗಾಂಧೀಜಿಯವರಿಗೆ ತಿಳಿಸಿದಾಗ, “ನನ್ನ ಪ್ರಯಾಣ ಕೇವಲ ಮೂರನೆಯ ದರ್ಜೆಯಲ್ಲಿ” ಎಂದು ಹೇಳಿದರು. ಮೂರನೆಯ ದರ್ಜೆಯ ವಿಶೇಷ ರೈಲು ಹೊರಡಿಸಲು ನಿಯಮಗಳ ಪ್ರಕಾರ ಅವಕಾಶವಿರಲಿಲ್ಲ.
ಕೊನೆಗೆ ವಿಶೇಷ ಗೂಡ್ಸ್ ರೈಲನ್ನು ಹೊರಡಿಸುವ ನಿರ್ಧಾರ ತೆಗೆದುಕೊಂಡು ಅದಕ್ಕೆ ಗಾಂಧೀಜಿಯಿದ್ದ ಬೋಗಿಯನ್ನು ಜೋಡಿಸಿದರು. ಸುರಕ್ಷತೆಗೆಂದು ಇಬ್ಬರು ಎಂಜಿಯರುಗಳನ್ನೂ ಜೊತೆಗೆ ಕಳುಹಿಸಿದರು. ರೈಲು ವೇಗವಾಗಿ ಧಾವಿಸುತ್ತಿದ್ದಾಗ ಒಬ್ಬ ಎಂಜಿನಿಯರ್​ಗೆ ಏನೋ ಕೆಂಪು ಬಣ್ಣ ಕಾಣಿಸಿ, ರೈಲು ನಿಲ್ಲಿಸಲು ಡ್ರೈವರ್​ಗೆ  ಆದೇಶ ನೀಡಿದರು. ಸುಮಾರು ಎರಡು ಕಿ. ಮೀ. ಚಲಿಸಿ ರೈಲು ನಿಂತಿತು. ಇಳಿದು ನೋಡಿದರೆ, ಕೆಲವೇ ಅಡಿಗಳ ದೂರದಲ್ಲಿ ಹಳಿಗಳೇ ಇರಲಿಲ್ಲ!

ಆ ಸಮಯದಲ್ಲಿ ಯಾವ ರೈಲೂ ಬರುವ ನಿರೀಕ್ಷೆಯಿರಲಿಲ್ಲ. ಹೀಗಾಗಿ ರಿಪೇರಿಗೆಂದು ಹಳಿಗಳನ್ನು ತೆಗೆದಿದ್ದರು. ಈ ರೈಲು ಬರುವ ಕುರಿತು ಅವರಿಗೆ ಯಾರೂ ಮಾಹಿತಿಯನ್ನು ನೀಡಿರಲಿಲ್ಲ. ಸುಮಾರು ನಾಲ್ಕು ದಶಕಗಳ ನಂತರ ಆ ಎಂಜಿನಿಯರ್ ಸ್ವಲ್ಪ ಎಚ್ಚರ ತಪ್ಪಿದ್ದರೂ ಮಹಾತ್ಮ ಇರುತ್ತಿರಲಿಲ್ಲ ಎಂದು ತಿಳಿಸಿದರು. ಆಗಿನ್ನೂ ಗಾಂಧೀಜಿ ಮಹಾತ್ಮ ಎನಿಸಿಕೊಂಡಿರಲಿಲ್ಲ!

ಅವರ ಕರ್ತವ್ಯ ಪ್ರಜ್ಞೆ, ಪ್ರಬಲ ನಂಬಿಕೆಗಳು, ಶಕ್ತಿಯುತ ವ್ಯಕ್ತಿತ್ವ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತಿದ್ದ ರೀತಿ, ಮಾತುಕತೆಗೆ ಕುಳಿತಾಗ ಚೌಕಾಸಿ ಮಾಡುತ್ತಿದ್ದ ಕೌಶಲ ಈ ಎಲ್ಲ ಗುಣಗಳೂ ಜಗತ್ತಿನ ಜನರ ಚಿತ್ತವನ್ನು ಅಪಹರಿಸಿದ್ದವು.

ಗಾಂಧೀಜಿಯವರ ಈ ಮುಖವನ್ನು ನಾವು ನೆನಪಿಡಬೇಕು!

ಇದನ್ನೂ ಓದಿ : T. P. Kailasam’s Birthday ; ನಮ್ ಮಕ್ಳ್ ಇschool ನೋಡಕ್ಕೆ ನೀವಿರ್ಬೇಕಿತ್ ಪ್ರಹಸನ ಪಿತಾಮಹರೇ

Published On - 11:36 am, Sat, 2 October 21