ಹೆಣ್ಣು ಮಕ್ಕಳನ್ನು ಜಾಸ್ತಿ ಹಡೆದು ಜಾತಿ ಉಳಿಸಿ ಎಂದು ಕೇಳಿಕೊಳ್ಳುವ ಅಥವಾ ಹೆಣ್ಣು ಮಕ್ಕಳಿಗೆ ಮದುವೆಯಲ್ಲಿ ಸಂವಿಧಾನದಿಂದ ಸಿಕ್ಕಿರುವ ಆಯ್ಕೆಯನ್ನು ನಿಯಂತ್ರಿಸಿ ಜಾತಿ ಉಳಿಸಿ ಎನ್ನುವ ಕನಿಕರದ ಬೇಡಿಕೆಯ ಸ್ಥಿತಿಗೆ ಯಾವುದೇ ಜಾತಿ ಇಳಿದಿದ್ದರೆ ಅಂತಹ ಹೇರುವಿಕೆಯಿಂದ, ನಿಯಂತ್ರಣದಿಂದ ಉಳಿಯುವ ಜಾತಿಯ ಮೇಲೆ ಹೆಮ್ಮೆಯೇ? ನಾವು ಕಾಡು ಮನುಷ್ಯರಾಗಿದ್ದಾಗ ಪ್ರಾಯಶಃ ಒಂದು ಗುಂಪಿನಲ್ಲಿಇದ್ದ ಎಲ್ಲ ಹೆಣ್ಣು ಗಂಡುಗಳೂ ತಮ್ಮತಮ್ಮ ಆಯ್ಕೆಯಂತೆ ಸಂಗಾತಿಗಳನ್ನು ಆರಿಸಿಕೊಳ್ಳುತ್ತಿದ್ದಿರಬೇಕು. ಕೃಷಿಯಲ್ಲಿ ತೊಡಗಿ ಮಾನವ ಸಮಾಜಗಳು ನೆಲೆಸಲು ಆರಂಭಿಸಿದಾಗ ಮಕ್ಕಳು ಆಸ್ತಿಯಾದಾಗ ಆ ಆಸ್ತಿಯ ಮೇಲೆ ಹಕ್ಕು ಚಲಾಯಿಸಿ ನಿಯಂತ್ರಿಸಲು, ಹೆಣ್ಣಿನ ಸಂಬಂಧವನ್ನೂ ನಿಯಂತ್ರಿಸಲು ಆರಂಭವಾಗಿರಬೇಕು. ಅದು ಈ ಡಿಜಿಟಲ್ ಕಾಲಘಟ್ಟದಲ್ಲೂ ಮದುವೆಯ ಆಯ್ಕೆಗಳ ಮೇಲೆ ಬಗೆಬಗೆಯ ನಿಯಂತ್ರಣಗಳು ನಡೆಯುತ್ತಿವೆಯೇ?
ಸಿ. ರಾಜಗೋಪಾಲಾಚಾರಿಯವರ ರಾಮಾಯಣವನ್ನು ಜೀವನದ ಪ್ರತಿಯೊಂದು ಘಟ್ಟದಲ್ಲೂ, ಅಂದರೆ ಮಕ್ಕಳ ಅನಾರೋಗ್ಯ, ಪರೀಕ್ಷೆಗಳು, ಕುಟುಂಬದ ಏಳುಬೀಳು ಇತ್ಯಾದಿ ಸಂದರ್ಭಗಳಲ್ಲಿ ನನ್ನ ಅಮ್ಮ ಓದುತ್ತಿದ್ದರು. ನನ್ನ ಮದುವೆಯಾದಾಗ ನನಗೂ ಒಂದು ಪ್ರತಿ ಕೊಟ್ಟಿದ್ದರು, ಓದುತ್ತಿದ್ದೆ. ಅದರಲ್ಲಿ ನನಗೆ ಮನದಟ್ಟಾದ ಒಂದು ಅಂಶ; ರಾಮ ಒಮ್ಮೆ ತನ್ನ ಅಳಲನ್ನು ಹೀಗೆ ತೋಡಿಕೊಳ್ಳುತ್ತಾನೆ, ‘ನಾನು ಇನ್ನು ಎಷ್ಟು ಅವತಾರ ಎತ್ತಿ ಬಂದು ಎಷ್ಟು ಶಬರಿ ಎಷ್ಟು ಗುಹರೊಂದಿಗೆ ಸಖ್ಯವಹಿಸಿ ತೋರಿಸಿಕೊಡಬೇಕೋ, ಆಗಲಾದರೂ ಈ ಅನಿಷ್ಟ ಜಾತಿ ಭ್ರಮೆ ಕಳೆಯುವುದೋ ಎಂದು.’
ಮುಂದೆ 22 ವರ್ಷಗಳ ತರುವಾಯ ಒಂದು ಅನಿರೀಕ್ಷಿತ ದುಃಖಕರ ಆರೋಗ್ಯ ಸಂಬಂಧಿತ ಸಂಗತಿಗಾಗಿ ನಾನು ನನ್ನ ಪತಿಯೊಂದಿಗೆ ಇದ್ದಕ್ಕಿದ್ದಂತೆ ಕುವೈತ್ ಬಿಟ್ಟು ಲಂಡನ್ನಿಗೆ ಹೋಗಬೇಕಾಯಿತು. ಹದಿನಾರು ವರ್ಷದ ಮಗಳೊಬ್ಬಳನ್ನೇ ಅಲ್ಲಿ ಬಿಟ್ಟು ಹೋಗಬೇಕಿತ್ತು. ಅವಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ನಮ್ಮ ಗೆಳೆಯರಾಗಿದ್ದ ‘ಜಾತಿ’ಯವರು ಉಪಜಾತಿಯವರೂ ಹಿಂದೆಗೆದಾಗ ಇನ್ನೊಬ್ಬ ಗೆಳತಿ (ಸಸ್ಯಾಹಾರಿಯಲ್ಲ) ಓಡಿ ಬಂದು ಆಶ್ವಾಸನೆಯಿತ್ತು ಹಾಗೇ ನಡೆಸಿಕೊಟ್ಟಳು. ಮುಂದೆ ಮೈಸೂರಿನಲ್ಲಿ ನಾನು ಮನೆಗೆ ಮಹಡಿ ಕಟ್ಟಿ ಬಾಡಿಗೆಗೆ ಕೊಡಬೇಕಾದಾಗ ನನ್ನ ಜಾತಿಯವರು ಕೇಳಿದ ಪ್ರಶ್ನೆ , ‘ಮಾಂಸಾಹಾರಿಗಳಿಗೆ ಕೊಡುವುದಿಲ್ಲ ತಾನೇ?’ ನಾನು ಕೇಳಿದೆ, ಹಾಗೆ ಮಾಡಿ ನಾನು ಆ ನನ್ನ ಗೆಳತಿಗೆ ಹೇಗೆ ಮುಖ ತೋರಿಸಲಿ? ಬಾಡಿಗೆಗೆ ಅಲ್ಲ, ಯಾವುದೇ ಜಾತಿಯವರನ್ನು ನನ್ನ ಮಕ್ಕಳು ಮದುವೆಯಾದರೂ ನನಗೆ ಅದು ಒಪ್ಪಿಗೆ.’ ಮಾಡುವ ಊಟ, ಹುಟ್ಟಿದ ಜಾತಿಯಿಂದ ಒಳ್ಳೆಯತನ ಬರುವುದಿಲ್ಲ ಎಂದು ನಮ್ಮ ಜೀವನದಲ್ಲೇ ಸಾಬೀತಾದ ಮೇಲೂ ನಾವ್ಯಾಕೆ ಜಾತಿಗೆ ಜೋತು ಬೀಳುತ್ತೇವೆ?
ಸದ್ಗುರು, ಸಾಯಿಬಾಬಾ, ಮತ್ತೆಲ್ಲಾ ಸ್ವಾಮಿಗಳ ಪಕ್ಕದಲ್ಲಿ ಬಿಳಿಜನಾಂಗದ ಹಿಂಬಾಲಕರಿರುತ್ತಾರಲ್ಲಾಅದು ಪರವಾಗಿಲ್ವಾ? ಅವರ ಹಾಡು ಕುಣಿತಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ‘ಗುರುಗಳು’ ದಲಿತರನ್ನೆಂದಾದರೂ ಪಕ್ಕ ಇಟ್ಟಿದ್ದನ್ನು ನೋಡಿದ್ದೀರಾ? ನಮ್ಮ ಮಠಗಳ ಸನ್ಯಾಸಿಗಳು ಆಧುನಿಕ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿ ರಕ್ತ, ಗ್ಲೂಕೋಸು ಹನಿಯನ್ನು ಸೀದಾ ರಕ್ತನಾಳದೊಳಗೇ ಇಳಿಸುವಾಗ ಚುಚ್ಚುವವರ, ಆ ರಕ್ತದ ಒಡೆಯರ ಹೆಸರಾದರೂ ಗೊತ್ತಿರತ್ತಾ? ಆಗ ತಮ್ಮಆರೋಗ್ಯಕ್ಕಾಗಿ ಅನುಕೂಲಸಿಂಧುವಾಗಿ ಎಲ್ಲವನ್ನೂ ಸೈ ಎನ್ನುವ ಆಷಾಢಭೂತಿಗಳಲ್ಲವೇ ನಾವು? ಆಮೇಲೆ ಆ ಜಾತಿಯವರನ್ನು ಮದುವೆಯಾಗಬೇಡಿ, ಈ ಜಾತಿಯವರನ್ನು ಸೇರಿಸಬೇಡಿ ಎನ್ನಲು ಬಾಯಿಯಾದರೂ ಹೇಗೆ ಬರುತ್ತದೆ?
ಹೆಣ್ಣು ಮಕ್ಕಳನ್ನು ಜಾಸ್ತಿ ಹಡೆದು ಜಾತಿ ಉಳಿಸಿ ಎಂದು ಕೇಳಿಕೊಳ್ಳುವ ಅಥವಾ ಹೆಣ್ಣು ಮಕ್ಕಳಿಗೆ ಮದುವೆಯಲ್ಲಿ ಸಂವಿಧಾನದಿಂದ ಸಿಕ್ಕಿರುವ ಆಯ್ಕೆಯನ್ನು ನಿಯಂತ್ರಿಸಿ ಜಾತಿ ಉಳಿಸಿ ಎನ್ನುವ ಕನಿಕರದ ಬೇಡಿಕೆಯ ಸ್ಥಿತಿಗೆ ಯಾವುದೇ ಜಾತಿ ಇಳಿದಿದ್ದರೆ ಅಂತಹ ಹೇರುವಿಕೆಯಿಂದ, ನಿಯಂತ್ರಣದಿಂದ ಉಳಿಯುವ ಜಾತಿಯ ಮೇಲೆ ಹೆಮ್ಮೆಯೇ? ನಾವು ಕಾಡು ಮನುಷ್ಯರಾಗಿದ್ದಾಗ ಪ್ರಾಯಶಃ ಒಂದು ಗುಂಪಿನಲ್ಲಿಇದ್ದ ಎಲ್ಲ ಹೆಣ್ಣು ಗಂಡುಗಳೂ ತಮ್ಮತಮ್ಮ ಆಯ್ಕೆಯಂತೆ ಸಂಗಾತಿಗಳನ್ನು ಆರಿಸಿಕೊಳ್ಳುತ್ತಿದ್ದಿರಬೇಕು. ಕೃಷಿಯಲ್ಲಿ ತೊಡಗಿ ಮಾನವ ಸಮಾಜ ನೆಲೆಸಲು ಆರಂಭಿಸಿದಾಗ ಮಕ್ಕಳು ಆಸ್ತಿಯಾದಾಗ ಆ ಆಸ್ತಿಯ ಮೇಲೆ ಹಕ್ಕು ಚಲಾಯಿಸಿ ನಿಯಂತ್ರಿಸಲು, ಹೆಣ್ಣಿನ ಸಂಬಂಧವನ್ನೂ ನಿಯಂತ್ರಿಸಲು ಆರಂಭವಾಗಿರಬೇಕು. ಅದು ಈ ಡಿಜಿಟಲ್ ಕಾಲಘಟ್ಟದಲ್ಲೂ ಮದುವೆಯ ಆಯ್ಕೆಗಳ ಮೇಲೆ ಬಗೆಬಗೆಯ ನಿಯಂತ್ರಣಗಳು ನಡೆಯುತ್ತಿವೆಯೇ?
ನನಗೆ ತಿಳಿದವರೊಬ್ಬರ ಇತ್ತೀಚಿನ ಅಳಲು. ಮಗನಿಗಾಗಿ ವಧು ಹುಡುಕುತ್ತಿದ್ದರು ಮದುವೆ ಏರ್ಪಡಿಸುವ ಸಲುವಾಗಿ. ಆದರೆ ಬಹುತೇಕ ಸ್ವತಂತ್ರರಾದ ಹುಡುಗಿಯರು ತಂದೆತಾಯಿಯರ ಕಟ್ಟುಪಾಡಿಗೆ ಒಪ್ಪಿ ಹುಡುಗನನ್ನು ನೋಡಿ ನಂತರ ಸಬೂಬು ಹೇಳಿ ಮದುವೆಗೆ ಒಪ್ಪುತ್ತಿರಲಿಲ್ಲ. ಒಂದೆರಡು ವರ್ಷಗಳೇ ಕಳೆದು ಹೋದವು. ಎಲ್ಲಾ ಮದುವೆ ವೆಬ್ಸೈಟುಗಳಲ್ಲೂ ರಿಜಿಸ್ಟರ್ ಮಾಡಿಸಿಯಾಗಿತ್ತು. ಅವರ ಅರಿವಿಗೆ ಬಂದಿದ್ದೇನೆಂದರೆ, ಆರ್ಥಿಕ ಸ್ವಾತಂತ್ರ್ಯ ದೊರೆತ ಬಹುತೇಕ ಹೆಣ್ಣುಮಕ್ಕಳು ಹಿರಿಯರು ಅಥವಾ ಪೋಷಕರು ನಿಶ್ಚಯಿಸಿದ ಮದುವೆಯನ್ನು ಒಪ್ಪುವುದಿಲ್ಲ.
ಅಂದರೆ, ಒಂದೇ ಜಾತಿಯ ಹುಡುಗರನ್ನು ಮದುವೆಯಾಗಿ ಎಂದು ನಿರ್ಬಂಧಿಸಬೇಕಾದರೆ ಹುಡುಗಿಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗದಂತೆ ನೋಡಿಕೊಳ್ಳಬೇಕು. ಅಂದರೆ ಭಾರತೀಯ ಸ್ತ್ರೀ ಹಿನ್ನಡೆಯಬೇಕು. ಆಗಷ್ಟೇ ಪುರುಷ ಪ್ರಧಾನ ಸಮಾಜದಲ್ಲಿ ತಲೆತಗ್ಗಿಸಿ ಕುರಿಯಂತೆ ಹುಡುಗಿಯರು, ಕೆಲವು ಬಾರಿ ವರದಕ್ಷಿಣೆ ಕೊಟ್ಟೂ ಮದುವೆಯಾಗುತ್ತಾರೆ ಹಾಗೂ ಗಂಡಸರು ಮತ್ತೆ ವಿರಾಜಿಸಬಹುದು.
ಒಮ್ಮೆ ರುಚಿ ಹತ್ತಿದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಅಷ್ಟು ಸುಲಭವಲ್ಲ. ನಮ್ಮ ಮಕ್ಕಳಿಗೆ ಜಾತಿಯೂ ಮುಖ್ಯವಾಗಲಾರದು, ಮದುವೆಯೂ ಮುಖ್ಯವಾಗದಿರಬಹುದು. ತಮ್ಮತಮ್ಮ ಕಾರ್ಯಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸುವುದು ಮದುವೆ ಮಕ್ಕಳು ಎಲ್ಲಕ್ಕಿಂತ ಮುಖ್ಯವಾಗಬಹುದು. ಕ್ರಮೇಣ ಸಮಾಜ ಬದಲಾಗುತ್ತಿದೆ. ಬದಲಾವಣೆಯನ್ನು ಗುರುತಿಸದ ಮತ್ತು ಆದರಿಸದ ಕೂಪಮಂಡೂಕಗಳನ್ನು ನಿರ್ಲಕ್ಷಿಸಿ ಯುವಪ್ರಜೆಗಳು ನವನವೀನ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ಆ ಹೊಸ ಹಾದಿಯಲ್ಲಿಅವರು ನೆಮ್ಮದಿ ಸಂತೋಷ ಗಳಿಸಲಿ ಎಂದು ಹಾರೈಸುವುದನ್ನು ಬಿಟ್ಟು ನಿರ್ಬಂಧಿಸಿ ನಾಚಿಕೆಗೀಡಾಗುವ ‘ವೃದ್ಧತನ’ ಬೇಕಾ?
ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲೇ ಬೆಳೆದ ನಾವೆಲ್ಲಾ ಮುಮ್ಮುಖವಾದ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದೆವು. ಹೊಸಹೊಸ ವಿಚಾರಗಳು, ತಂತ್ರಜ್ಞಾನಗಳು ಆವಿಷ್ಕಾರಗಳು ನಮ್ಮ ಮುಂದಿನ ಭವಿಷ್ಯದಲ್ಲಿವೆ ಮತ್ತು ಅವುಗಳ ಅನಾವರಣದಲ್ಲಿ ನಮ್ಮ ಮುಂದಿನ ಕಾರ್ಯಕ್ಷೇತ್ರವಿದೆ ಎಂದು ನಂಬಿ ಆಶಾವಾದಿಗಳಾಗಿದ್ದೆವು. ಇಂದಿನ ಯುವಜನತೆಗೆ ನಾವು ನಮ್ಮ ಭೂತಕಾಲದಲ್ಲಿ ಯಾವುದೋ ರಾಮರಾಜ್ಯವಿತ್ತು; ಅಲ್ಲಿಎಲ್ಲವೂ ಸುಖಕರವಾಗಿ ಈಗಿರುವುದಕ್ಕೂ ಹೆಚ್ಚಿನ ತಂತ್ರ ಕೌಶಲವಿತ್ತು ಎಂಬ ಭ್ರಮೆಯನ್ನು ಹತ್ತಿಸಿಬಿಟ್ಟಿದ್ದೇವೆ. ಹಿಂದೂ ನಡೆಯಲಾಗದ ಮುಂದೂ ಹೋಗಲಾಗದ ಗೊಂದಲದಲ್ಲಿಅವರನ್ನುಕೆಡವಿದ್ದೇವೆ.
ಅವರು ಗೋಮೂತ್ರದಲ್ಲಿ ಔಷಧವನ್ನು ಅಲ್ಲಗೆಳೆಯಬೇಕೇ ಅಥವಾ ಲಸಿಕೆಯನ್ನು ಹೊಗಳಿ ಹಾಡಬೇಕೇ? ಯಾವುದನ್ನು ಮಾಡಿದರೆ ರಾಷ್ಟ್ರಪ್ರೇಮಿಯಾಗುತ್ತೇವೆ, ಧರ್ಮಭ್ರಷ್ಟರಾಗುತ್ತೇವೆ? ಸತಿಗೂ ಗ್ರಹಣದ ನಂಬಿಕೆಗಳಿಗೂ ವೈಜ್ಞಾನಿಕ ಅರ್ಥ ಹುಡುಕುವ ತಳಮಳದಲ್ಲಿದ್ದಾರೆ. ಹಿಂದಿನದೆಲ್ಲಾ ಒಳ್ಳೆಯದು ಎಂದರೆ ವರ್ಣಾಶ್ರಮಧರ್ಮವನ್ನೂ ಒಪ್ಪಬೇಕಾಗುತ್ತದೆ. ಸ್ತ್ರೀಸ್ವಾತಂತ್ರ್ಯವನ್ನೂ ಅಲ್ಲಗೆಳೆಯಬೇಕಾಗುತ್ತದೆ. ಸಮಾಜವನ್ನು ನಾವು ವಿಭಾಗಿಸುತ್ತಿದ್ದೇವೆ. ಹಿಂದಿನದೆಲ್ಲವೂ ವ್ಯರ್ಥ ಎನ್ನುವ , ಗೇಲಿ ಮಾಡುವ ಒಂದು ಗುಂಪು, ಪ್ರಾಚೀನಕ್ಕೆ ಮರಳುವುದೇ ಪರಮಸುಖಕ್ಕೆ ದಾರಿ ಎನ್ನುವುದು ಇನ್ನೊಂದು. ಮಧ್ಯೆ ತ್ರಿಶಂಕು ಸ್ವರ್ಗದಲ್ಲಿ ಮಾನಸಿಕವಾಗಿ ನರಳುವ ಕಿರಿಯರು.
ವಾಸ್ತವವನ್ನು ಒಪ್ಪಿಕೊಳ್ಳದಿದ್ದರೆ ಮುಕ್ತಿಯಿಲ್ಲ. ಜಾತಿ ಯಾವುದಾದರೇನು, ಶಾಂತಿ ನೆಮ್ಮದಿಯಿಲ್ಲದಿದ್ದರೆ?
ಇದನ್ನೂ ಓದಿ : ಹೆಣ್ಣಿನ ಮುಟ್ಟು ಮದುವೆ ಬಸಿರು ಸಂಗಾತಿ ಆಯ್ಕೆಗಳೆಲ್ಲದರ ಬಗ್ಗೆ ಸನ್ಯಾಸಿಗಳಿಗೇಕೆ ಚಿಂತೆ?