ಜಗತ್ತಿನಾದ್ಯಂತ ಇರುವ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸಲು ಮತ್ತು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಗಸ್ಟ್ 9 ರಂದು ವಿಶ್ವ ಸ್ಥಳೀಯ ಜನರ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ. ಸ್ಥಳೀಯ ಸಮುದಾಯಗಳ ಕೊಡುಗೆಗಳು ಮತ್ತು ಸಾಧನೆಗಳನ್ನು ಗುರುತಿಸಲು ವಿಶ್ವಸಂಸ್ಥೆಯು ಈ ದಿನವನ್ನು ಘೋಷಣೆ ಮಾಡಿತು. ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ಪ್ರಸ್ತುತಪಡಿಸಿದ ಸ್ಥಳೀಯ ಸಮಸ್ಯೆಗಳನ್ನು ವಿಶ್ಲೇಷಿಸಿದ ನಂತರ ಮಾನವ ಹಕ್ಕುಗಳ ಆಯೋಗವು 2000ರ ಏಪ್ರಿಲ್ನಲ್ಲಿ ಶಾಶ್ವತ ವಿಶ್ವಸಂಸ್ಥೆಯ ವೇದಿಕೆಯನ್ನು ಸ್ಥಾಪಿಸಲು ನಿರ್ಣಯವನ್ನು ಅಂಗೀಕರಿಸಿತು. ಪ್ರತೀ ವರ್ಷದಂತೆ ಈ ಬಾರಿಯೂ ವಿಶ್ವ ಸ್ಥಳೀಯ ಜನರ ಅಂತಾರಾಷ್ಟ್ರೀಯ ದಿನವನ್ನು ಒಂದು ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ‘ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ ಮತ್ತು ಪ್ರಸರಣದಲ್ಲಿ ಸ್ಥಳೀಯ ಮಹಿಳೆಯರ ಪಾತ್ರ’ ಎಂಬ ವಿಷಯವನ್ನು ಮುಂದಿಟ್ಟುಕೊಂಡು ಇಂದು ಸ್ಥಳೀಯ ಜನರ ದಿನವನ್ನು ಆಚರಿಸಲಾಗುತ್ತಿದೆ. ಈ ವಿಷಯವು ಸ್ಥಳೀಯ ಸಮುದಾಯಗಳ ಮಹಿಳೆಯರು ತಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಮುಂದುವರಿಸುವಲ್ಲಿ ವಹಿಸುವ ಪಾತ್ರವನ್ನು ಒತ್ತಿಹೇಳುತ್ತದೆ.
ವಿಶ್ವ ಸ್ಥಳೀಯ ಜನರ ಅಂತಾರಾಷ್ಟ್ರೀಯ ದಿನದ ಇತಿಹಾಸ:
ಜಿನೀವಾದಲ್ಲಿ 1982ರ ಆಗಸ್ಟ್ 9 ರಂದು ನಡೆದ ವಿಶ್ವಸಂಸ್ಥೆಯ ಸಭೆಯ ನಂತರ ಸ್ಥಳೀಯ ಜನಸಂಖ್ಯೆಯ ಮೊದಲ ಕಾರ್ಯತಂಡವನ್ನು ರಚಿಸಲಾಯಿತು. ಸಭೆಯಲ್ಲಿ ಸ್ಥಳೀಯ ಜನರ ಹಕ್ಕುಗಳ ಘೋಷಣೆಯನ್ನು ರಚಿಸುವ ಕಾರ್ಯತಂಡವನ್ನು ನಿಯೋಜಿಸಲಾಯಿತು. ಈ ಸಮುದಾಯಗಳ ಶಿಕ್ಷಣ, ಸಂಸ್ಕೃತಿ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಪರಿಸರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೆಲಸ ಮಾಡುವುದು ಕಾರ್ಯತಂಡದ ಮುಖ್ಯ ಉದ್ದೇಶವಾಗಿತ್ತು.
1994ರ ಡಿ.23ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ಥಳೀಯ ಜನಸಂಖ್ಯೆಯ ಯುಎನ್ ಕಾರ್ಯಕಾರಿ ಮಂಡಳಿಯ ಉದ್ಘಾಟನಾ ಅಧಿವೇಶನವನ್ನು ಗುರುತಿಸಿ ವಾರ್ಷಿಕವಾಗಿ ಆಗಸ್ಟ್ 9 ರಂದು ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನವನ್ನು ಆಚರಿಸಲು ನಿರ್ಧರಿಸಿತು.
ವಿಶ್ವ ಸ್ಥಳೀಯ ಜನರ ಅಂತಾರಾಷ್ಟ್ರೀಯ ದಿನದ ಮಹತ್ವ:
ಪ್ರತಿ ವರ್ಷ ವಿಶ್ವಸಂಸ್ಥೆಯು ಥೀಮ್‌ಗೆ ಸಂಬಂಧಿಸಿದ ವಾರ್ಷಿಕ ಯೋಜನೆಗಳು ಮತ್ತು ಚಟುವಟಿಕೆಗಳ ಬಗ್ಗೆ ಹಂಚಿಕೊಳ್ಳುವ ಮೂಲಕ ದಿನವನ್ನು ಆಚರಿಸುತ್ತದೆ. ಈ ವರ್ಷ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು (DESA) ಥೀಮ್ ಅನ್ನು ಚರ್ಚಿಸಲು ಇಂದು (9 ಆಗಸ್ಟ್ 2022) ಬೆಳಿಗ್ಗೆ 9 ರಿಂದ 11 ರವರೆಗೆ ವರ್ಚುವಲ್ ಅಧಿವೇಶನವನ್ನು ಆಯೋಜಿಸಿದೆ. ಈ ಅಧಿವೇಶನಕ್ಕೆ ಸ್ಥಳೀಯ ಜನರು, ಸದಸ್ಯ ರಾಷ್ಟ್ರಗಳು, ಯುಎನ್ ಘಟಕಗಳು, ನಾಗರಿಕ ಸಮಾಜ ಮತ್ತು ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಪ್ರಪಂಚದ ಸ್ಥಳೀಯ ಸಮುದಾಯಗಳ ಪ್ರಸ್ತುತ ಸನ್ನಿವೇಶವನ್ನು ಅಧಿಕವೇಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ.