‘ಹೆಚ್ಚು ಮಾತಿಲ್ಲದ, ಆದರೆ ಮತ್ತೆ ಮತ್ತೆ ತನಗೇ ಆಡಿಕೊಳ್ಳುತ್ತಿರುವಂತೆ ತೋರುವ ಕವಿತೆಯ ರಚನೆ ಸಂಧ್ಯಾದೇವಿಯವರದ್ದು. ಇವರ ಎಲ್ಲ ಕವನಗಳಲ್ಲೂ ಸ್ಥಾಯಿಯಾಗಿ ಇರುವ ಭಾವನೆಯನ್ನು ಯಾವ ಪದದಲ್ಲಿ ವಿವರಿಸುವಂತೆ ಹೇಳಲಿ ಎಂದು ಈಗ ಕೇಳಿಕೊಳ್ಳುತ್ತಿದ್ದೇನೆ. ‘ಪ್ರೀತಿ’ ಎನ್ನಲೆ? ಇದು ಸರಿಯಾದ ಪದ ಅಲ್ಲ. ಪ್ರೀತಿಯಲ್ಲಿ ಓಲೈಸುವುದು, ಗೆಲ್ಲುವುದು, ಸೋಲುವುದು, ಹಠಮಾರಿತನ, ಸಂಭ್ರಮ ಎಲ್ಲ ಇರುತ್ತದೆ. ಪ್ರೀತಿ ರೆಕ್ಕೆ ಬಿಚ್ಚಿ ಕುಣಿದಾಡುವ ಸಾವಿರ ಕಣ್ಣಿನ ನವಿಲು. ‘ಭಕ್ತಿ’ ಎನ್ನಲೆ? ಭಕ್ತಿಯಲ್ಲ. ಭಕ್ತಿಗೆ ತನ್ನಲ್ಲೇ ತಾನೇ ಆಗಿ ಇರುವ ಪರವಸ್ತುವಾದ ಭಗವಂತನಲ್ಲಿ ನಂಬಿಕೆಯಿರಬೇಕಾಗುತ್ತದೆ. ಭಕ್ತಿ ನಿಂದೆಗೂ, ಸ್ತುತಿಗೂ ಕಾರಣವಾಗುವ ಮಾನವ ಸ್ಥಿತಿ. ‘ಅನುರಾಗ’ ಎನ್ನಲೆ? ಹೀಗೆನ್ನಬಹುದೇನೋ. ಯಾಕೆಂದರೆ ಅನುರಾಗದ ಅಂಚಿನಲ್ಲಿ ವೈರಾಗ್ಯ ಇಣುಕುತ್ತಿರುತ್ತದೆ. ಅಹಂ ಇರುವುದಿಲ್ಲ.’
-ಡಾ. ಯು. ಆರ್. ಅನಂತಮೂರ್ತಿ
ಉಚ್ಚಾರ
ಇಷ್ಟು ವರ್ಷ ಜೊತೆಗಿದ್ದ ಸಂಪರ್ಕವನ್ನೇ ಕಡಿದುಕೊಂಡಂತೆ
ಅವರು ಆಡುತ್ತಿದ್ದ ಮಾತುಗಳು
ಒಂದಕ್ಕೊಂದು ಸಂಬಂಧ ತಪ್ಪಿದಂತಿತ್ತು.
ಮನೆ ಮಂದಿಯ ಸುಳಿವು
ಸಿಕ್ಕದ ಮುಖ ಕಳೆದು
ಹೋದಂತಿತ್ತು ಸುಮ್ಮನೆ ಮುಖ
ಮುಖ ನೋಡುವಂತಿತ್ತು ಮನಸೇ ಮನಸ
ಕಳಚುವಂತಿತ್ತು
ದೇಹದಿಂದ ಪ್ರಜ್ಞೆ
ಮುಂದಕ್ಕೆ ಹೊರಟು ಹೋಗುವಂತಿತ್ತು
ಅಥವಾ ಒಳಮುಖವಾಗಿತ್ತೆ? ಕಣ್ಣುಗಳು
ಕೈಗೆಟಕುವ ಖಾಲಿಯನ್ನೇ ಕರಿಹಲಗೆಯೆಂಬಂತೆ;
ಹೆಬ್ಬೆರಳು ತೋಕಾಬೆರಳ ತುದಿಗಳ
ಜೋಡಿಸಿ ಜ್ಞಾನ ಮುದ್ರೆಯ ಹಿಡಿದು ಬಳಪವೆಂಬಂತೆ;
ಗಾಳಿಯಲ್ಲಿ ಅಕ್ಷರಗಳ ಬರೆಯುತ್ತ ಬರೆಯುತ್ತಾ
ಉರುಟುರುಟು, ಕಲಿಸುವಂತೆ
ಮಕ್ಕಳಿಗೆ ಪಾಠ
ಸ್ವಲ್ಪ ಹೊತ್ತು
ಆಮೇಲೆ ಬರೆದುದನ್ನು ತಿದ್ದುವಂತೆ
ಮತ್ತೆ ಮತ್ತೆ ಬರೆದು
ಎಲ್ಲವನ್ನು ಒರೆಸುವಂತೆ
ಬಲವಿಲ್ಲದ ಅವರ ಬಲದ ಕೈ ಆಚೀಚೆ
ಖಾಲಿಯಲ್ಲಿ ಓಲಾಡುವಂತಿತ್ತು
ಸುಸ್ತಾಗಿ ಕೊನೆಗೊಮ್ಮೆ ಎಲ್ಲ ಮುಗಿಸುವವರಂತೆ
ಕಷ್ಟಪಟ್ಟು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ
ತಾಳ್ಮೆಯಿಂದ ನಿಧಾನವಾಗಿ
ಆದುದರಿಂದಾ… ಎಂದಷ್ಟೇ
ಉಚ್ಚರಿಸಿದರು!
ಅಲ್ಲಿಂದ ಮತ್ತೆ ಇದ್ದಕ್ಕಿದ್ದ ಹಾಗೆ
ಮಾತೇ ಬಿದ್ದು ಹೋಯಿತು
ಜಿಂಕೆಯ ನೆನಪು
ನೋಡಿ, ಹೊಳೆವ ಅಮಾಯಕ ಕಣ್ಣುಗಳ ಮೋಡಿ ಎಳಸಿ ಚಂಗನೆ
ನೆಗೆದು, ಕುಣಿದು ಕುಪ್ಪಳಿಸಿ ಓಡೋಡಿ ಬಂದು ಅಪ್ಪಿಕೊಳ್ಳುತ್ತವೆ
ಅಂದ ಚಂದದ ಬಂಗಾರದಂತಿರುವ ಎರಡು ಮುದ್ದು ಚಿಗರೆ ಮರಿಗಳು!
‘ಅಜ್ಜೀ ಐ ಲವ್ ಯೂ’ ಅನ್ನುತ್ತವೆ ಕೊರಳ ತಬ್ಬಿ
‘ಐ ಲವ್ ಯೂ ಟೂ’ ಎಂದಪ್ಪಿಕೊಳ್ಳುತ್ತೇನೆ ನಾನೂ
ಆ ಕ್ಷಣಕ್ಕೆ ಲೋಕ ಮರೆತವಳಂತೆ ಬದುಕುತ್ತೇನೆ
ಎಲ್ಲೋ ಒಮ್ಮೊಮ್ಮೆ ಮಾತ್ರ ನೀರವ ರಾತ್ರಿ ನಾನು ಒಬ್ಬಳೇ
ನನ್ನೊಳಗೆ ಸುಮ್ಮಗಿರುವಾಗ ಯಾಕೋ ನೆನಪಾಗುತ್ತದೆ ನನಗೆ
ಜಡಭರತನ ಕಥೆ:
ಹಿಂದೊಮ್ಮೆ ಅನಾಥ ಜಿಂಕೆ ಮರಿಯ ಎತ್ತಿಕೊಂಡ ಮುನಿಗೆ
ಕರುಣೆ ಉಕ್ಕಿತು ಗೊತ್ತಿಲ್ಲದಂತೆ ದಯೆಯೇ ಅವನ ಕೈಯಾಗಿ
ನೇವರಿಸಿತು ಮರಿಯ ಬಂಗಾರದ ಚುಕ್ಕಿ ಮೈಯ ಈಗಷ್ಟೇ
ತೆರೆಯುತ್ತಿರುವ ಚಂಚಲ ಕಾಡಿಗೆ ಕಪ್ಪು ಕಣ್ಣುಗಳ ನಾಜೂಕು
ಪುಟ್ಟ ಮರಿಗೆ ಬೆಚ್ಚಗಿನ ಅಪ್ಪುಗೆ ಅವನು ಆರೈಕೆ ನೀಡಿ
ಕರೆದು ಪ್ರೀತಿಸಿ ಸಾಕಿ ಬೆಳೆಸಿದ ಅದರೊಡನೆ ಒಂದಾಗಿ ಒಡನಾಡಿದ.
ಯಾವ ಗಳಿಗೆಯಲ್ಲಿ ಕರುಣೆ ಪ್ರೀತಿಯಾಯಿತೋ
ಅದೇ ಸಮಯದಲ್ಲಿ ಪ್ರೀತಿ ಮೋಹವಾಯಿತು
ತನ್ನ ಮೋಹಕ್ಕೆ ತನಗೆ ತಾನೇ ನೆಪ ಹೇಳಿದ ಮುನಿ
ಅಯ್ಯೋ ಪಾಪ ಹುಟ್ಟುವಾಗಲೆ ತಬ್ಬಲಿಯು ನಾನೇ ಈಗ ಇದಕ್ಕೆ ದಿಕ್ಕು
ನನ್ನಿಂದಾಗಿಯೇ ಇದು ಬದುಕಿತು ನಾನಿಲ್ಲವಾದರೆ ಇದು ಉಳಿಯದು
ಹೇಗೆ ಬಿಟ್ಟು ಹೋಗಲಿ ನಾನು ತಾಯಿ ಇಲ್ಲದ ಇದರ ತೊರೆದು.
ಮೋಹ ಮಾಯಕದಂತೆ ಪಾಶವಾಯಿತು ಬಿಗಿದು
ಎಲ್ಲ ಬಂಧಗಳಿಂದ ಬಿಡುಗಡೆ ಪಡೆಯ ಬಯಸಿದ
ಮುನಿ ಮೋಹದಿಂದಲೆ ಬಂಧಿಸಲ್ಪಟ್ಟ ಹಗಲಿರುಳು
ತಾನಿದ್ದಲ್ಲೆಲ್ಲ ಕಡೆ ಹಿಂದೆ ಮುಂದೆ ಸುಳಿದಾಡುವ
ಜಿಂಕೆಮರಿಯ ಅವನು ಅವನಿಲ್ಲದಂತೆ ಪ್ರೀತಿಸಿದ
ಜಿಂಕೆಗಾಗಿಯೇ ಜಿಂಕೆಯಾಗಿ ಜಿಂಕೆಯಂತೆ ಬದುಕಿದ.
ಹಾಗೆ ಎರೆದು ಪ್ರೀತಿಯ ತನ್ನ ತಾನದಕ್ಕೆ ಕೊಟ್ಟುಕೊಂಡು
ಆವಾಹಿಸಿದ ಜೀವದ ಜಿಂಕೆಯ ತನ್ನೊಳಗೆ ತಾನೇ ಅವನು
ಪ್ರಾಣ ಬಿಡುವ ಕಾಲಕ್ಕೆ ಜಿಂಕೆಯದೇ ಚಿಂತೆ ಅವನಿಗೆ
ಹೀಗೆ ಜಿಂಕೆ ಮರಿಯಿಂದಾಗಿಯೇ ಜಿಂಕೆಯಾಗಿ ಹುಟ್ಟಿದ.
ಮುನಿ ಜಿಂಕೆಗೆ ಅರ್ಥವಾಯಿತು ತನ್ನದೇ ಕತೆ ಜಿಂಕೆಯ ಮಾಯೆ
ಮೈಯ ಕಳಚಿ ಮತ್ತೆ ಹುಟ್ಟಿದ ಜಡಭರತ ಮರೆತಿರಲಿಲ್ಲ ಜಿಂಕೆಯ
ಮೋಹದ ನೆನಪನ್ನು ಮತ್ತು ಮೋಹದ ಜಿಂಕೆಯ ನೆನಪಿನಿಂದಾಗಿಯೇ ಅವನು ಜ್ಞಾನಿಯಾದ!
***
ಪರಿಚಯ: ಸಂಧ್ಯಾದೇವಿಯವರು ಪುತ್ತೂರಿನಲ್ಲಿ ವಾಸವಾಗಿದ್ದಾರೆ. ‘ಮಾತು ಚಿಟ್ಟೆ’, ‘ಬೆಂಕಿ ಬೆರಳು’, ‘ಮುರಿದ ಮುಳ್ಳಿನಂತೆ ಜ್ಞಾನ’, ‘ಅಗ್ನಿದಿವ್ಯ’, ‘ಝಳಕ್ಕೆ ಮುಖ ಬೆಳಗುತ್ತದೆ’, ‘ನೆನಪಿನ ಬೂದಿಗೆ ಜೀವ ಬರಲಿ’ ಈ ತನಕ ಪ್ರಕಟಗೊಂಡ ಇವರ ಕವಿತಾ ಸಂಕಲನಗಳು.
ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಾದಂಬರಿಕಾರ ವಿವೇಕ ಶಾನಭಾಗ
Published On - 3:54 pm, Sun, 10 January 21