ಕನ್ನಡ ರಾಜ್ಯೋತ್ಸವ 2023: ಮಕ್ಕಳಿಗೆ ಕನ್ನಡ ಕಲಿಸಿ, ಮನೆಯಿಂದಲೇ ಶುರುವಾಗಲಿ ಭಾಷಾ ಪ್ರೇಮ

|

Updated on: Nov 01, 2023 | 8:10 PM

Kannada Rajyotsava 2023: ಇಲ್ಲಿ ಮಾತೃಭಾಷೆ ಕನ್ನಡ ಅಂತ ಉದಾಹರಣೆಗೆ ತೆಗೆದುಕೊಂಡರೆ, ಪ್ರತಿ ಸನ್ನಿವೇಶಗಳಲ್ಲೂ ಭಾಷೆಯ ಕಲಿಕೆಯ, ಬಳಕೆಯ ಪ್ರಮಾಣ/ಪರಿಮಾಣ ಬೇರೆ ಬೇರೆಯಾಗಿರತ್ತೆ. ಕನ್ನಡ ಭಾಷೆ ಸ್ಕೂಲಿನಲ್ಲಿ ಕಲಿಯುವ ಭಾಷೆಯಷ್ಟೇ ಆಗಬಾರದೆಂಬ ಆಲೋಚನೆ ಆಗೀಗ ಕಾಡುತ್ತದೆ. ಹೀಗಿರುವಾಗ ಕನ್ನಡವನ್ನ ಮಕ್ಕಳಿಗೆ ಹೇಳಿಕೊಡುವುದು ಸಹ ತಂದೆ ತಾಯಿಯ ಜವಾಬ್ದಾರಿ ಅಲ್ಲವೇ?

ಕನ್ನಡ ರಾಜ್ಯೋತ್ಸವ 2023: ಮಕ್ಕಳಿಗೆ ಕನ್ನಡ ಕಲಿಸಿ, ಮನೆಯಿಂದಲೇ ಶುರುವಾಗಲಿ ಭಾಷಾ ಪ್ರೇಮ
ಮನೆಯಿಂದಲೇ ಹುಟ್ಟಲಿ ಭಾಷಾ ಪ್ರೇಮ
Follow us on

ಮಕ್ಕಳು ಕನ್ನಡ (Kannada) ಭಾಷೆಯನ್ನು ಬಳಸುವುದಿಲ್ಲ, ಶಾಲೆಯಲ್ಲಿ ಒಂದು ವಿಷಯಕ್ಕೆ ಅಷ್ಟೇ ಮಾತೃಭಾಷೆ (mother tongue) ಸೀಮಿತ ಆಗಿರುವಾಗ ಮಕ್ಕಳಲ್ಲಿ ಭಾಷಾ ಪ್ರೇಮ ಹುಟ್ಟಿಸುವುದು ಹೇಗೆ ಎಂದು ಚಿಂತಿಸದೇ ಇರುವ ಹೆತ್ತವರು ಇರಲಾರರು. ಮುಂದಿನ ಪೀಳಿಗೆಗೆ ನಾವು ನಮ್ಮ ಭಾಷೆಯನ್ನು ದಾಟಿಸಬೇಕು. ಅಂಥಾ ಪ್ರಯತ್ನಗಳು ಮನೆಯಿಂದಲೇ ಶುರು ಆಗಬೇಕು. ಮಕ್ಕಳಿಗೆ ಕನ್ನಡ ಭಾಷೆ, ಪುಸ್ತಕಗಳಲ್ಲಿ ಒಲವು ಹುಟ್ಟುವಂತೆ ಮಾಡುವುದು ಹೇಗೆ? ಕನ್ನಡ ರಾಜ್ಯೋತ್ಸವದ (kannada Rajyostava) ಸಂದರ್ಭದಲ್ಲಿ ಈ ಪ್ರಶ್ನೆಯನ್ನು ನಾವು ಕೇಳಿದಾಗ  ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸವಿತಾ ಎಸ್. ಆರ್ ತಮ್ಮ ಅನುಭವ, ಅಭಿಪ್ರಾಯಗಳನ್ನು ನಮ್ಮ ಜತೆ ಈ ರೀತಿ ಹಂಚಿಕೊಂಡಿದ್ದಾರೆ. 

ಐಟಿ ಕಂಪೆನಿಯಲ್ಲಿ ಕೆಲಸ ಮಾಡುವವರಿಗೆ ಜೀವನವೆಲ್ಲವೂ ಒಂತರ ಪ್ರಾಜೆಕ್ಟ್​​ಮಯ ಆಗಿರುತ್ತದೆ. ಮಾಡೋ ಎಲ್ಲಾ ಕೆಲಸಗಳಿಗೂ ಟೈಮ್ಬ್ಯಾಕ್ಸ್ ಇರತ್ತೆ. ಅಂದ್ರೆ ಒಂದು ಸ್ಟಾರ್ಟ್ ಡೇಟ್, ಎಂಡ್ ಡೇಟ್, ಇನ್ಪುಟ್, ಪ್ರೋಸೆಸ್ & ಔಟ್ಪುಟ್ ಅಂತ ಪ್ರತಿದಿನದ ಎಲ್ಲಾ ಕೆಲಸಗಳೂ ಔಟ್ಲುಕ್ಕಿನ ಕ್ಯಾಲೆಂಡರಿನಲ್ಲಿ ದಾಖಲಾಗಿರುತ್ತವೆ, ಕೊನೆಗೆ ಊಟ, ವ್ಯಾಯಾಮ, ಮಕ್ಕಳ ಹೊಂವರ್ಕ್ ಮಾಡಿಸೋ ಸಮಯ ಸಹ. ನೀವು ನಂಬಲಿಲ್ಲ ಅಂದ್ರೆ ನೀವೇ ಐಟಿಯಲ್ಲಿ ಕೆಲಸ ಮಾಡುವವರನ್ನ ಮಾತಾಡಿಸಿ ನೋಡಿ.

ಐಟಿ ರೆವಲ್ಯೂಷನ್ನಿಂದಾಗಿ ಈಗ ಬಹಳಷ್ಟು ವಿಚಾರಗಳು ಸಾದ್ಯವಾಗಿವೆ. ಮನೆ ಸೈಟುಗಳು, ರೆಂಟುಗಳು, ಸ್ಕೂಲ್ ಫೀಸುಗಳು ಗಗನಕ್ಕೇರಿವೆ
ಸಂಬಳಗಳು ಸಾವಿರಗಳಿಂದ ಲಕ್ಷಗಳಾಗಿವೆ. ಬೇಕೆನಿಸುವ ವಸ್ತುಗಳೆಲ್ಲ ಆನ್ಲೈನ್ನಲ್ಲಿ ಕ್ಷಣಾರ್ಧದಲ್ಲಿ ದೊರೆಯುತ್ತವೆ. ವಾರ ಮತ್ತು ವಾರಂತ್ಯ ಅಂತ ಜೀವನ ಎರಡು ಭಾಗಗಳಾಗಿವೆ. ಪ್ರತೀ ರೋಡಿಗೂ ನೂರಾರು ರೆಸ್ಟೋರೆಂಟುಗಳು ಓಪನ್ ಆಗಿವೆ. ಸಾವಿರಾರು ವರ್ಚುಯಲ್ ಫ್ರೆಂಡ್ಸ್​​​​ಗಳಿದ್ದರೂ ನಿಜವಾದ ಸ್ನೇಹಿತರು ಕಡಿಮೆಯಾಗಿದ್ದಾರೆ. ಇಂಟರ್ನೆಟ್​​ನಿಂದಾಗಿ ಇಡೀ ಪ್ರಪಂಚವೇ ನಮ್ಮ ಕೈಬೆರಳ ತುದಿಯಲ್ಲಿದೆ
ಹೀಗೆ ಬರೀತಾ ಹೋದ್ರೆ ಮುಗಿಯದಷ್ಟು pros & cons ಇವೆ. ಇಂಟೆರೆಸ್ಟಿಂಗ್ ವಿಚಾರ ಅಂದ್ರೆ ಗ್ಲೋಬಲೈಸಷನ್ ಪ್ರಭಾವದಿಂದ ಪ್ರಪಂಚದ ಯಾವ ಮೂಲೆಗಾದರೂ ನಾವು ಭಯವಿಲ್ಲದೆ ಟ್ರಾವೆಲ್ ಮಾಡುವ, ಯಾವುದೋ ದೇಶದಲ್ಲಿ ಹೋಗಿ ಜೀವನ ಶುರು ಮಾಡಲು ಸಾಧ್ಯವಾಗಿದೆ.

ಹಾಗೆ ಕೆಲಸಕ್ಕೋಸ್ಕರ ಬೆಂಗಳೂರು, ಚೆನ್ನೈ, ಹೈದರಾಬಾದ್, ಡೆಲ್ಲಿ… ಹೀಗೆ ಬೇರೆ ಪ್ರದೇಶಗಳಿಗೆ ಹೋಗುವ ಅಲ್ಲಿ ನೆಲೆಯೂರಿ ಬದುಕನ್ನ ಕಟ್ಟಿಕೊಳ್ಳುವುದು ಈಗ ಸಾಧ್ಯವಾಗಿದೆ. ಹೀಗೆ ಐಟಿ ಕಂಪೆನಿಗಳಲ್ಲಿ ಎಲ್ಲಾ ರಾಜ್ಯಗಳ ಭಾಷೆಗಳ ಜನರಿರುವ ಮತ್ತು ಯುನಿಟಿ ಇನ್ ಡೈವರ್ಸಿಟಿಯನ್ನ ಗೌರವಿಸುವ ನಾವು ಆಲ್ಮೋಸ್ಟ್ ಎಲ್ಲಾ ಮೇಜರ್ ಹಬ್ಬಗಳನ್ನ ಆಫೀಸಿನಲ್ಲೂ ಆಚರಿಸುತ್ತೇವೆ. ಪೊಂಗಲ್, ಯುಗಾದಿ, ದಾಂಡಿಯಾ , ಹ್ಯಾಲೋವೀನ್, ಕನ್ನಡ ರಾಜ್ಯೋತ್ಸವ, ಸೀಕ್ರೆಟ್ ಸ್ಯಾಂಟಾ, ನ್ಯೂ ಇಯರ್ ಮತ್ತು ಆಗೀಗ ಟೀಮ್ ಔಟಿಂಗಳು ಮತ್ತು ಡಿನ್ನರ್ಗಳು.

ನವೆಂಬರ್ ತಿಂಗಳು ಬಂತಂದ್ರೆ ಕನ್ನಡ ರಾಜ್ಯೋತ್ಸವವನ್ನ ಯಾವುದೇ ಮನೆಯ ಹಬ್ಬಕ್ಕೆ ಕಮ್ಮಿಯಿಲ್ಲದಂತೆ ಆಚರಿಸಿ ಸಂಭ್ರಮಿಸುತ್ತೇವೆ. ಅಮೆರಿಕದಲ್ಲಿರಲಿ, ಆಸ್ಟ್ರೇಲಿಯಾದಲ್ಲಿರಲಿ, ನಮ್ಮ ದೇಶದ ಯಾವುದೇ ಕೊನೆಯಲ್ಲಿದ್ದರೂ ಮಾತೃಭಾಷೆಯಾದ ಕನ್ನಡದ ಬಗ್ಗೆ ನಮ್ಮ ಒಲವು ನೂರುಪಟ್ಟು ಸಾವಿರಪಟ್ಟು. ನವೆಂಬರ್ ಒಂದರಂದು ರಜೆಯಿರುವುದರಿಂದ ತಿಂಗಳಲ್ಲಿ ಯಾವುದಾದರೊಂದು ದಿನವೋ ಇಲ್ಲ ಇಡೀ ವಾರವೆಲ್ಲಾ ಆಚರಿಸುತ್ತೇವೆ. ಕನ್ನಡ/ಕರ್ನಾಟಕದ ಬಗ್ಗೆ ಕ್ವಿಜ್, ಸಂಪೂರ್ಣವಾಗಿ ೨-೩ ನಿಮಿಷ ಕನ್ನಡ ಮಾತಾಡುವ ಹಲವಾರು ರೀತಿಯ ಸ್ಪರ್ಧೆಗಳು, ಧ್ವಜಾರೋಹಣ, ನಾಡಗೀತೆ, ಕನ್ನಡದ ಹಾಡುಗಳು, ನೃತ್ಯ, ನಾಟಕಗಳು, ಕನ್ನಡದ ಪುಸ್ತಕಗಳ, ಆಟಿಕೆಗಳ, ತಿನಿಸುಗಳ, ಕರ ಕುಶಲ ವಸ್ತುಗಳ ಸ್ಟಾಲ್​​​ಗಳು. ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಹೀಗೆ ಹಲವಾರು ಕಲಾವಿದರನ್ನ ಕರೆತಂದು ಪ್ರೋಗ್ರಾಮ್ ಮಾಡಿಸಿ ನೂರಾರು ಫೋಟೋಗಳನ್ನ ಹೊಡೆಸಿಕೊಂಡು, ಸೆಲ್ಫಿಗಳನ್ನ ತೆಗೆದುಕೊಂಡು ಸೋಶಿಯಲ್ ಮೀಡಿಯಾದ ಗೋಡೆಯಲ್ಲಿ ಹಾಕಿ, ಕೊನೆಗೆ “ಫ್ಲೋರ್ ಈಸ್ ಓಪನ್ ಫಾರ್ ಆಲ್” ಅಂತಂದಾಗ ಸತ್ಯ ಹರಿಶ್ಚಂದ್ರ ಸಿನೆಮಾದ “ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ” ಸಾಂಗಿಗೆ ಸ್ಟೆಪ್ ಹಾಕದೆ ಸಂಭ್ರಮ ಮುಗಿಯುವುದಿಲ್ಲ. ಅದಾದ ನಂತರ ಮತ್ತೆ ಮುಂದಿನ ವರ್ಷಕ್ಕೆ ಮತ್ತೊಂದಷ್ಟು ಹೊಸತನದೊಂದಿಗೆ!

ಇದಿಷ್ಟು ನಮ್ಮ ಜೆನರೇಷನ್ನಿನ ಬಗ್ಗೆ. ಇನ್ನು ನಮ್ಮ ನೆಕ್ಸ್ಟ್ ಜೆನರೇಷನ್ನಿನ ನಮ್ಮ ಮಕ್ಕಳ ಜೀವನಕ್ಕೆ ಇಣುಕು ಹಾಕಿದರೆ ಹಲವಾರು ರೀತಿಯ ಸನ್ನಿವೇಶಗಳಿವೆ.
೧. ಮಾತೃಭಾಷೆ ಮತ್ತು ಪಿತೃಭಾಷೆ ಒಂದೇ ಆಗಿದ್ರೆ
೨. ಮಾತೃಭಾಷೆ ಮತ್ತು ಪಿತೃಭಾಷೆ ಬೇರೆ ಬೇರೆಯಾಗಿದ್ರೆ
೩. ಜೊತೆಗೆ ನಾವಿರುವ ಪ್ರದೇಶದ ಭಾಷೆಯು ಮಾತೃ ಮತ್ತು ಪಿತೃಭಾಷೆಗಿಂತ ಬೇರೆಯಾಗಿದ್ರೆ
೪. ಮಾತೃಭಾಷೆಯು ಶಾಲೆಯಲ್ಲಿ ಕಲಿಯುವ ಸಬ್ಜೆಕ್ಟ್ಗಳಲ್ಲಿ ಇದ್ದರೆ ಮತ್ತು ಇರದಿದ್ದರೆ

ಇಲ್ಲಿ ಮಾತೃಭಾಷೆ ಕನ್ನಡ ಅಂತ ಉದಾಹರಣೆಗೆ ತೆಗೆದುಕೊಂಡರೆ, ಪ್ರತಿ ಸನ್ನಿವೇಶಗಳಲ್ಲೂ ಭಾಷೆಯ ಕಲಿಕೆಯ, ಬಳಕೆಯ ಪ್ರಮಾಣ/ಪರಿಮಾಣ ಬೇರೆ ಬೇರೆಯಾಗಿರತ್ತೆ. ಕನ್ನಡ ಭಾಷೆ ಸ್ಕೂಲಿನಲ್ಲಿ ಕಲಿಯುವ ಭಾಷೆಯಷ್ಟೇ ಆಗಬಾರದೆಂಬ ಆಲೋಚನೆ ಆಗೀಗ ಕಾಡುತ್ತದೆ.
ಹೀಗಿರುವಾಗ ಕನ್ನಡವನ್ನ ಮಕ್ಕಳಿಗೆ ಹೇಳಿಕೊಡುವುದು ಸಹ ತಂದೆ ತಾಯಿಯ ಜವಾಬ್ದಾರಿ ಅಲ್ಲವೇ?

ಈಗಿನ ಟೆಕ್ನಾಲಾಜಿಯ ಪ್ರಭಾವದಿಂದ ಹೊಸ ಭಾಷೆಗಳನ್ನು ಕಲಿಯಲು ಹಲವಾರು ಪ್ಲಾಟ್ಫಾರ್ಮ್ಗಳಿವೆ, ಫ್ರೀ ಗೇಮಿಫೈಡ್ ಅಪ್ಪ್ಲಿಕೇಷನ್ಸ್ಗಳಿವೆ.
ಪ್ರೈಮರಿ, ಮಿಡ್ಲ್ ಸ್ಕೂಲಲ್ಲಿರುವ ನನ್ನ ಮಕ್ಕಳು ಜರ್ಮನ್, ಕೋರಿಯನ್, ಫ್ರೆಂಚ್, ರಷಿಯನ್, ಚೈನೀಸ್ ಭಾಷೆಗಳನ್ನ ಕಲಿಯುವ ಸ್ಪೀಡಿನಲ್ಲಿ ನಾ ಹೇಗೆ ಇವರಿಗೆ ಕನ್ನಡವನ್ನ ಹೇಳಿಕೊಡಲಿ ಮಾತೃಭಾಷೆಯ ಬಗ್ಗೆಪ್ರೀತಿಯನ್ನ ಬೆಳೆಸೋದು ಹೇಗೆ ಅನ್ನೋದೇ ದೊಡ್ಡ ಪ್ರಾಜೆಕ್ಟ್ ಆಗಿದೆ
ನಿಮಗೂ ಯಾವಾಗಲಾದರೂ ಹೀಗೆ ಅನ್ನಿಸಿದೆಯೇ?

ನಮ್ಮ ಬಾಲ್ಯದಲ್ಲಿ ಕೆಲವೇ ಚಾನೆಲ್ಗಳಿದ್ದ ಟಿವಿಯಲ್ಲಿ, ಕೆಲವೇ ಪ್ರೋಗ್ರಾಮ್ಗಳಿಗೆ, ಕೆಲವೇ ಗಂಟೆಗಳ ಆಕ್ಸೆಸ್ ಇದ್ದದ್ದರಿಂದ ನ್ಯಾಚುರಲ್ಲಾಗಿ ಪುಸ್ತಕ, ಓದುವಿಕೆ, ಚಿತ್ರಕಲೆ, ಗ್ರಂಥಾಲಯ, ಆ ಸ್ಪರ್ಧೆ ಈ ಸ್ಪರ್ಧೆ ಅಂತ ಇದ್ದ ಅವಕಾಶಗಳನ್ನ ಬಳಸಿಕೊಂಡು ನಮ್ಮ ಕುತೂಹಲವನ್ನ ಬಳಸಿ, ಬೆಳೆಸಿಕೊಳ್ಳುತ್ತಿದ್ವಿ . ಈಗ ಪರಿಸ್ಥಿತಿ ಬೇರೆಯೇ ಇದೆ, ಸಾವಿರಾರು ಚಾನೆಲ್ಗಳಿರುವ ಟಿವಿ, ಹಲವಾರು ಸೋಶಿಯಲ್ ಮೀಡಿಯಾಗಳು, ಓಟಿಟಿ ಸ್ಟ್ರೀಮಿಂಗ್ಗಳು, ಇಡೀ ಪ್ರಪಂಚಕ್ಕೇ ಅಕ್ಸೆಸ್ ಕೊಡುವ ಇಂಟರ್ನೆಟ್, ರೀಲ್ಸ್, ಟ್ವೀಟ್ಸ್, ಪೋಸ್ಟ್, ಚಾಟ್ಸ್ ಗಳ ಅಬ್ಬರದಲ್ಲಿ ಪುಸ್ತಕ ಓದೋದು ಅದರಲ್ಲೂ ಕತೆ, ಕವನ, ಸಾಹಿತ್ಯದ ಪುಸ್ತಕ ಮುಟ್ಟೋದು ಅತಿ ದೂರದ ಮಾತಾಗಿದೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಕನ್ನಡ ನುಡಿಯನ್ನು ನನ್ನ ವಿದ್ಯಾರ್ಥಿಗಳಲ್ಲಿ ಗಟ್ಟಿಗೊಳಿಸುವುದೇ ಮೊದಲ ಆದ್ಯತೆ

ಮಕ್ಕಳನ್ನ ಬಿಡಿ ನಮ್ಮನ್ನೇ ಒಮ್ಮೆ ಅವಲೋಕಿಸಿಕೊಳ್ಳೋಣ, ನೀವು ಕಡೆಯ ಬಾರಿ ಕನ್ನಡದಲ್ಲಿ ಬರೆದದ್ದು ಯಾವಾಗ ಹೇಳಿ?
ನ್ಯೂಸ್ ಪೇಪರಿನಾಚೆ ಕನ್ನಡ ಪುಸ್ತಕಗಳನ್ನ ಓದುತ್ತಿದ್ದೇವಾ?

ಸ್ಕೂಲಿನ ಸಿಲಬಸ್ಸಿನಿಂದಾಚೆ ನಮ್ಮ ಮಕ್ಕಳಿಗೆ ಕನ್ನಡದ ಪದ್ಯಗಳನ್ನ, ವಚನಗಳನ್ನ, ದಾಸರ ಪದಗಳನ್ನ, ಜಾನಪದ ಗೀತೆಗಳನ್ನ ಕೇಳುವ,ಓದುವ, ಹಾಡುವ,ಕಲಿಯುವ ಬಗ್ಗೆ ಅಭಿರುಚಿಯನ್ನ ಬೆಳೆಸುವುದಾದರೂ ಹೇಗೆ? ಆಡುಭಾಷೆಯಾದ ಹೊಸಗನ್ನಡ ಕತೆಯೇ ಹೀಗಾದರೆ ಹಳಗನ್ನಡದ ಕಥೆಯೇನು? ಕುಮಾರವ್ಯಾಸ ಭಾರತ, ರನ್ನ, ಪಂಪರನ್ನ ಓದೋವ್ರು ಯಾರು? ಕುವೆಂಪು, ಕಾರಂತ, ಬೇಂದ್ರೆ ಅಜ್ಜನ ಕವನಗಳನ್ನ, ನರಸಿಂಹ ಸ್ವಾಮಿಯವರ ರೊಮ್ಯಾಂಟಿಕ್ ಪದ್ಯಗಳನ್ನ, ಟಿಪಿ ಕೈಲಾಸಂರ ಹಾಸ್ಯ ನಾಟಕಗಳನ್ನ ಓದೋವ್ರ್ಯಾರು? ಪೂರ್ಣ ಚಂದ್ರ ತೇಜಸ್ವಿಯವರ ಪುಸ್ತಕಗಳನ್ನ ಕುತೂಹಲದಿಂದ ಓದಿ ಯುಎಫ್ಓ ಗಳ ಕಾಣುವಿಕೆಗಾಗಿ ನೋಡೋವ್ರ್ಯಾರು?

ಹೀಗೇ ಹಲವಾರು ದಿನಗಳಿಂದ ಈ ವಿಚಾರಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಾ ಇದ್ದದ್ದರಿಂದ ಕೊನೆಗೆ ನಾನೇನು ಮಾಡಬಹುದು ಅಂತ ಒಂದಷ್ಟು ಪಾಯಿಂಟ್​​​ಗಳನ್ನು ಬರೆದಿದ್ದಾಯ್ತು, ನೀವೂ ನಿಮ್ಮ ಸಲಹೆಗಳನ್ನ ಜೋಡಿಸಿ, ಮಕ್ಕಳೊಂದಿಗೆ ಒಂದಷ್ಟು ಹೆಚ್ಚು ಹೊತ್ತು ಕಳೆಯೋಣ, ಜೊತೆಗೆ ಕಲಿಯೋಣ, ನಲಿಯೋಣ, ಕನ್ನಡ ಭಾಷೆಯನ್ನ, ಸಾಹಿತ್ಯವನ್ನ ಜೋಪಾನಮಾಡಿ ಮುಂದಿನ ಪೀಳಿಗೆಗೆ ಕಲಿಸಿ, ಬೆಳೆಸಿ, ಉಳಿಸೋಣ

  • ಪ್ರತಿದಿನ ಕನ್ನಡದಲ್ಲಿ ಮಕ್ಕಳೊಟ್ಟಿಗೆ ಮಾತಾಡಿ
  • ಕನ್ನಡದ ಪುಸ್ತಕಗಳನ್ನ ಕೊಳ್ಳಿರಿ, ಮಕ್ಕಳ ಜೊತೆ ಕೂತು ಪುಸ್ತಕ ಓದಿ, ಅದ್ರಲ್ಲಿನ ಕುತೂಹಲದ ಸಂಗತಿಗಳನ್ನ ಹೇಳಿ
    ಪದ್ಯಗಳನ್ನು,ವಚನಗಳನ್ನು ಜೊತೆಗೆ ಹಾಡಿ
  • ಕನ್ನಡದಲ್ಲಿ ಕತೆಗಳನ್ನ ಹೇಳಿ
  • ಹಳಗನ್ನಡ ಪದ್ಯಗಳನ್ನ, ಗಮಕಗಳನ್ನ ಹಾಡಿ ಮಕ್ಕಳಿಗೆ ಕೇಳಿಸಿ
  • ಕನ್ನಡದ ನಾಟಕಗಳನ್ನು ತೋರಿಸಿ
  • ಅವರ ಜನರೇಷನ್ನಿನ ಹಾಡುಗಳನ್ನ ಅವರ ಜೊತೆ ಹಾಡುವುದರೆ ಜೊತೆ ನಮ್ಮ ಜನರೇಷನ್ನಿನ ಹಳೆಯ ಚಿತ್ರ ಗೀತೆಗಳನ್ನ ಹೇಳಿಕೊಡಿ ಮತ್ತು ಒಟ್ಟಿಗೇ ಹಾಡಿ
  • ಪ್ರತಿ ವಿಕೆಂಡು ಮಾಲ್​​ಗಳಿಗೆ ಕರೆದೊಯ್ಯುವ ಬದಲು ಕರ್ನಾಟಕದ ಐತಿಹಾಸಿಕ ಸ್ಥಳಗಳಿಗೆ ಮಕ್ಕಳನ್ನ ಕರೆದುಕೊಂಡು ಹೋಗಿ
  • ಹಳೆಯ ಚಲನ ಚಿತ್ರಗಳನ್ನ ನೋಡಿ
  • ಮಕ್ಕಳೊಟ್ಟಿಗೆ ಆಗೀಗ ಕನ್ನಡದಲ್ಲಿ ಒಂದೆರಡು ಪುಟಗಳಷ್ಟಾದರೂ ಬರೆಯಿರಿ

ಇಡೀ ಪ್ರಪಂಚದಲ್ಲಿ ನಾವೇಲ್ಲರೂ we are part of the Evolution which happens everyday in a minute way. ಡಾರ್ವಿನ್​​ವ ಪ್ರಿನ್ಸಿಪಲ್ ಪ್ರಕಾರದಂತೆಯೇ ನಾವು ಏನನ್ನ ಬಳಸಲ್ವೊ ಅದು ನಶಿಸಿಹೋಗತ್ತೆ. ಇದಕ್ಕೆ ಭಾಷೆಯೂ ಹೊರತಲ್ಲ, ಭಾಷೆಯನ್ನ ಬಳಸಿ, ಬೆಳೆಸಿದರೆ ಉಳಿಯುತ್ತದೆ ಇಲ್ಲದಿದ್ದರೆ ನಾಶವಾಗುತ್ತದೆ. ಭಾಷೆಯ ಕಲಿಕೆಯೆಲ್ಲಿ ಓದುವುದು, ಬರೆಯುವುದು, ಮಾತನಾಡುವುದು ಮೂರೂ ಸರಾಗವಾಗಿ ಬಂದರೇ ಚೆಂದ. ಮಾತೃಭಾಷೆಯ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸುವಲ್ಲಿ ಟೀಚರ್​​ಗಳ ಜೊತೆಗೆ ನಮ್ಮ ಪಾತ್ರವೂ ಹೆಚ್ಚಾಗಿದೆ. ಯಾಕಂದ್ರೆ ಮನೆಯೇ ಮೊದಲ ಪಾಠಶಾಲೆ.

ಮತ್ತಷ್ಟು ವಿಶೇಷ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ