ಚೆನ್ನೈ: ನವಂಬರ್ 8, 2016. ಆ ಒಂದು ದಿನ ಭಾರತೀಯರ ನೆನಪಿನಿಂದ ಎಂದೂ ಮಾಸದ ದಿನ. ಆ ಒಂದು ದಿನ ಪ್ರಧಾನಿ ಮೋದಿ ಮಾಡಿದ ಘೋಷಣೆ ಇಡೀ ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು. ಆದರೆ, ಇಡೀ ದೇಶದಲ್ಲೇ ತಲ್ಲಣ ಉಂಟುಮಾಡಿದ ಆ ಒಂದು ದಿನ ತಮಿಳುನಾಡಿನ ಈ ದಂಪತಿಗೆ ಗೊತ್ತೇ ಇಲ್ಲವಂತೆ. ಹೌದು, ಇದು ನಂಬೋಕೆ ಸ್ವಲ್ಪ ಕಷ್ಟವಾದ್ರೂ ತಮಿಳುನಾಡಿನ ಪೋತಿಯಾ ಮೂಪನೂರೆ ಎಂಬ ಕುಗ್ರಾಮದಿಂದ ವರದಿಯಾಗಿರೋ ರಿಯಲ್ ಸ್ಟೋರಿ ಇದು.
ಜೀವನೋಪಾಯಕ್ಕಾಗಿ ಊದುಬತ್ತಿ ತಯಾರಿಸುತ್ತಿದ್ದ ಗ್ರಾಮದ ನಿವಾಸಿ 58 ವರ್ಷದ ಸೋಮು ಹಾಗೂ ಪಳನಿ ಅಮ್ಮಾಳ್ ದಂಪತಿಗೆ ನೋಟ್ ಬ್ಯಾನ್ ಬಗ್ಗೆ ತಿಳಿದುಬಂದಿದ್ದೇ ಕಳೆದ ಶುಕ್ರವಾರ. ಅದು ತಮ್ಮ ಬಳಿಯಿದ್ದ ಹಳೇ 500 ಮತ್ತು 1,000 ಮೌಲ್ಯದ ನೋಟ್ಗಳನ್ನ ಬ್ಯಾಂಕ್ಗೆ ಕಟ್ಟಲು ಹೋದ ವೇಳೆ.
ಅಷ್ಟಕ್ಕೂ, ಇವರಿಗೆ ನೋಟ್ ಬ್ಯಾನ್ ಬಗ್ಗೆ ಯಾಕೆ ತಿಳಿಯಲಿಲ್ಲ ಎಂಬುದೇ ಕುತೂಹಲಕಾರಿ ಸಂಗತಿ. ಕಳೆದ 10 ವರ್ಷಗಳಿಂದ ಊದುಬತ್ತಿ ಮತ್ತು ಕರ್ಪೂರ ತಯಾರಿಸಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಈ ದಂಪತಿ ಮಾರುತ್ತಿದ್ದರು. ಬಂದ ಸಂಪಾದನೆಯ ಒಂದು ಭಾಗವನ್ನ ಸೋಮು ತಮ್ಮ ತಾಯಿಗೆ ನೀಡುತ್ತಿದ್ದರಂತೆ. ಜೊತೆಗೆ, ಆಗಾಗ ತಮ್ಮ ತಾಯಿ ಬಳಿಯಿದ್ದ 500 ಮತ್ತು 1,000 ನೋಟುಗಳಿಗೆ ಚಿಲ್ಲರೆ ಮಾಡಿಸಿ ಬಳಸಿಕೊಳ್ಳುತ್ತಿದ್ದರಂತೆ. ಆದರೆ, ಈ ಮಧ್ಯೆ ಅದರ ಅವಶ್ಯಕತೆ ಬೀಳದೆ ಕೆಲವು ವರ್ಷಗಳಿಂದ ತಮ್ಮ ಅನಕ್ಷರಸ್ಥ ತಾಯಿ ಬಳಿ ಕೇಳಿರಲಿಲ್ಲವಂತೆ.
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಪಾದನೆಗೆ ಕಲ್ಲುಬಿದ್ದಾಗ..
ಆದರೆ, ಇತ್ತೀಚೆಗೆ ಕೊರೊನಾ ಹರಡುವಿಕೆಯನ್ನ ತಡೆಯಲು ಕೇಂದ್ರ ಘೋಷಿಸಿದ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಪಾದನೆಯ ದಾರಿಗೆ ಕಲ್ಲುಬಿತ್ತಂತೆ. ಜೀವನ ನಡೆಸಲು ಕಷ್ಟವಾದಾಗ ಸೋಮುಗೆ ನೆನಪಾಗಿದ್ದು ಆತನ ತಾಯಿಯ ಬಳಿ ಕೊಟ್ಟಿದ್ದ ಹಣ. ಅದನ್ನು ಪಡೆದು ಬ್ಯಾಂಕ್ನಲ್ಲಿ ಜಮಾ ಮಾಡಲು ಹೋದ ಸೋಮುಗೆ ಆಗಲೇ ತಿಳಿದಿದ್ದು ಆ ನೋಟುಗಳನ್ನ ಸರ್ಕಾರ ಬಹಳ ಹಿಂದೆಯೇ ಅಮಾನ್ಯೀಕರಣ ಮಾಡಿತ್ತು ಎಂದು.
ಸುದ್ದಿ ಕೇಳಿ ಸ್ವಲ್ಪ ಶಾಕ್ ಆದ ಸೋಮು ಇದೀಗ ಸಿಎಂ ಪಳನಿಸ್ವಾಮಿಗೆ ನೆರವು ಕೋರಿ ಪತ್ರ ಬರೆದಿದ್ದಾರೆ. ಜೊತೆಗೆ, ಪೊಲೀಸರ ಸಹಾಯ ಕೇಳಿದ್ದಾರೆ. ಆದರೆ, ಇವರಿಗೆ ಎಷ್ಟರ ಮಟ್ಟಿಗೆ ಸರ್ಕಾರ ನೆರವು ನೀಡಲು ಸಾಧ್ಯ ಎಂಬುದು ಕಾದು ನೋಡಬೇಕಿದೆ.