ನಾನೆಂಬ ಪರಿಮಳದ ಹಾದಿಯಲಿ: ನನ್ನನ್ನು ನಾನು ಹುಡುಕಿಕೊಂಡಿದ್ದು ಅಕ್ಷರಗಳ ಮೂಲಕ…

|

Updated on: Apr 03, 2021 | 1:52 PM

‘ಹೆಣ್ಣುಮಕ್ಕಳು ಯಾವತ್ತೂ ಸಾಂಸಾರಿಕ ಹೊಣೆಗಾರಿಕೆ ಮತ್ತು ತನ್ನ ಪ್ರತಿಭೆಯನ್ನು ಗೌರವಿಸುವ ಗಂಡನನ್ನು ಆಶಿಸುತ್ತಾರೆ. ಆದರೆ ಕೆಲವೊಮ್ಮೆ ವ್ಯವಸ್ಥೆಯ ಕಾರಣದಿಂದ ಅವರು ವಂಚಿತರಾಗುತ್ತಾರೆ. ಜಾಣರಾದ ಕೆಲವರು ಬೆಣ್ಣೆಯಿಂದ ಕೂದಲು ತೆಗೆದಂತೆ ಸಂಸಾರವನ್ನೂ ತನ್ನ ಪ್ರತಿಭೆಯನ್ನೂ ನಿಸ್ಸಂಶಯವಾಗಿ ಸಂಭಾಳಿಸಿ ಯಶ ಸಾಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಲೇಖಕಿಯೊಬ್ಬರ ಮಾತು ಸತ್ಯ; ತನ್ನ ಪ್ರತಿಭೆಗೆ ಅವಕಾಶ ಬೇಕೆಂದರೆ ಆಕೆ ತನ್ನದೇ ಆದ ಪ್ರತ್ಯೇಕ ಕೋಣೆಯನ್ನು ಹೊಂದಿರಬೇಕು.‘ ಕಾವ್ಯಶ್ರೀ ಮಹಾಗಾಂವಕರ

ನಾನೆಂಬ ಪರಿಮಳದ ಹಾದಿಯಲಿ: ನನ್ನನ್ನು ನಾನು ಹುಡುಕಿಕೊಂಡಿದ್ದು ಅಕ್ಷರಗಳ ಮೂಲಕ...
ಲೇಖಕಿ ಕಾವ್ಯಶ್ರೀ ಮಹಾಗಾಂವಕರ
Follow us on

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಕಲಬುರಗಿಯ ಲೇಖಕಿ ಕಾವ್ಯಶ್ರೀ ಮಹಾಗಾಂಕರ ಅವರ ಅನುಭವ ಬರಹ ನಿಮ್ಮ ಓದಿಗೆ

ಮೂರು ದಶಕಗಳ ಹಿಂದೆ ನೂರಾರು ಬಣ್ಣ ಬಣ್ಣದ ಕನಸ ಹೊತ್ತು ಮದುವೆಯಾದಾಗ ಕೇವಲ ಇಪ್ಪತ್ತೊಂದರ ಪ್ರಾಯ. ಹೊಸ ವಾತಾವರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಸಮಯದಲ್ಲೇ ಮಗಳು ಮಡಿಲು ತುಂಬಿದಳು. ಆ ಕ್ಷಣದಿಂದಲೇ ಕ್ರಿಯಾಶೀಲ ಜಗತ್ತಿನಲ್ಲಿದ್ದ ‘ನಾನು’ ಕಳೆದು ಹೋದೆ. ‘ಮಗಳೇ ನನ್ನ ಜಗತ್ತು’ ಆದಳು. ಒಂದು ದಶಕದವರೆಗೆ ನಿಲ್ಲದ ಅವ್ವನಾಗುವ ಸಂಭ್ರಮಕೆ ಸಂಕೋಚವೇ ಇರಲಿಲ್ಲ. ಎರಡು ಗಂಡು ಬೇಕು ಎನ್ನುವ ಬೇಡಿಕೆಯಿಂದಾಗಿ, ಮೊದಲು ಎರಡು ಹೆಣ್ಣಾದುದರಿಂದ, ನಂತರ ಎರಡು ಗಂಡಾದವು.

ಒಂದು ಮಗು ಶಾಲೆಯಲ್ಲಿ, ಒಂದು ಕೈಯಲ್ಲಿ, ಒಂದು ಸೊಂಟದಲ್ಲಿ, ಒಂದು ಹೊಟ್ಟೆಯಲ್ಲಿ ಇರುತ್ತಿದ್ದವು. ಒಂದೊ ಎರಡೊ ಮಕ್ಕಳಿರುವ ಕಾಲದಲ್ಲಿ ನಾಲ್ಕು ಹೆತ್ತ ಮಹಾತಾಯಿ ಎನ್ನುವ ಬಿರುದು. ಮದರ್ ಇಂಡಿಯಾ, ಗ್ರೇಟ್ ಮಾಮ್, ಸಹನಶೀಲೆ, ಹೊಗಳಿಕೆಗಳ ನಡುವೆ ನಾನಾರೆಂಬುದನ್ನು ಮರೆತೇ ಬಿಟ್ಟೆ. ಅಮೆರಿಕದಲ್ಲಿ ನೆಲೆಸಿರುವ ತಮ್ಮ, Anthony Robbins ಬರೆದ ‘Awaken the giant within’ ಕೃತಿಯನ್ನು ಉಡುಗೊರೆಯಾಗಿ ಕೊಟ್ಟ. ಅದೊಂದು ಅದ್ಭುತ ಪುಸ್ತಕ! ಓದುತ್ತ ಓದುತ್ತ ಆತ್ಮಾವಲೋಕನದ ಪ್ರಕ್ರಿಯೆ ಆರಂಭ.

ಈ ಜೀವನದಲ್ಲಿ ಏನು ಮಾಡಿದೆ? ಏನು ಮಾಡುತ್ತಿರುವೆ? ಏನಿದು ನಾ ಕಳೆದ ಬದುಕು? ಏನು ಸಾಧಿಸಿದೆ? ಏನೆಲ್ಲಾ ಪ್ರಶ್ನೆಗಳು ಎದ್ದಾಗ ನನ್ನೊಳಗಿನ ನಾನು ನಿರುತ್ತರಳು. ಈ ಕೃತಿ ಒಳದೈತ್ಯನನ್ನು ಎಬ್ಬಿಸಿತೊ ಇಲ್ಲವೊ? ಎಚ್ಚರಿಕೆಯನ್ನಂತೂ ಕೊಟ್ಟಿತ್ತು. ಒಂದು ದಶಕದ ಹೆಜ್ಜೆಗಳನ್ನು ಹಿಂದಿರುಗಿ ನೋಡಿದಾಗ ಕಂಡಿದ್ದು, ಏನೂ ಇಲ್ಲದ ಸೊನ್ನೆಯೊಂದಿಗೆ ಶೂನ್ಯ ಭಾವ. ಅದೇ ಮಾಮೂಲು ಸಂಸಾರ, ಗಂಡ, ಮಕ್ಕಳು, ಅತ್ತೆ, ಮಾವ, ನಾದಿನಿ, ಬಂಧುಗಳು ಮಾತ್ರ. ಎಲ್ಲರ ಸೇವೆ, ಮಕ್ಕಳ ಲಾಲನೆ, ಪಾಲನೆ ಅಷ್ಟೇ ಕಾಣಿಸಿತು. ಅನೇಕ ನಿರ್ಬಂಧಗಳ ನಡುವೆ, ಮಕ್ಕಳು ಮತ್ತವರ ಏಳ್ಗೆಗಾಗಿ ಹಕ್ಕೊತ್ತಾಯದ ಹೋರಾಟ, ಸಂಘರ್ಷ, ವಿರೋಧ, ಪ್ರತಿರೋಧ ಎಲ್ಲವನ್ನೂ ಎದುರಿಸಿದೆ. ಆದರೆ ನನ್ನ ವೈಯಕ್ತಿಕ ಹಕ್ಕೊತ್ತಾಯದ ಸ್ಥಿತಿ? ಆ ದಿಕ್ಕಿನಲ್ಲಿ ಆಲೋಚಿಸುವುದನ್ನು ಮರೆತೇ ಬಿಟ್ಟೆ. ದಿನಗಳು ಹಾಗೇ ಉರುಳುತ್ತಿದ್ದವು.

ನಾನು ಏನಿದ್ದೆ, ಈಗ ಏನಾಗಿರುವೆ? ಮನಸು ತೂಗಿ ನೋಡಿತು. ಅದೇ ಸಮಯದಲ್ಲಿ ತವರಿನಲ್ಲಿ ನನ್ನವ್ವ ಮಹಿಳಾ ಸಂಘಟನೆಯೊಂದನ್ನು ಸ್ಥಾಪಿಸಿದಳು. ಪ್ರತಿಭೆಗಳ ಬರಗಾಲವಿದ್ದ ಮರುಭೂಮಿಯಲ್ಲಿ ಹೊಸ ಬೆಳೆ, ಹೊಸ ಪೈರು ಮೂಡಿಸುವ ಉತ್ಸಾಹ. ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ಸಾಹಿತ್ಯಿಕವಾಗಿ ತೊಡಗಿಸಿಕೊಳ್ಳುವಂತೆ ಸ್ಪೂರ್ತಿ, ಪ್ರೇರಣೆ, ಉತ್ಸಾಹ ತುಂಬಿ, ಒಳ್ಳೆ ವೇದಿಕೆ ನಿರ್ಮಿಸಿದಳು. ಅಪ್ಪ ಅದಕ್ಕೆ ಬೆನ್ನೆಲುಬಾಗಿ ನಿಂತರು. ವರ್ಷಕ್ಕೊಮ್ಮೆ ಅವ್ವನಿಂದ ಲೇಖಕಿಯರ ಸಮಾವೇಶದ ಆಮಂತ್ರಣ ಬರುತ್ತಿತ್ತು. ಒಂದು ದಿನದ ಮಟ್ಟಿಗೆ ನಾಲ್ಕೂ ಮಕ್ಕಳೊಂದಿಗೆ ಹೋಗಿ ಭಾಗಿಯಾಗುತ್ತಿದ್ದೆ. ಒಮ್ಮೆ ಅವ್ವ ವೇದಿಕೆಯ ಮೇಲೆ ಹೂಗುಚ್ಛ ನೀಡಲು ಕರೆಸಿದಳು. ಧ್ವನಿವರ್ಧಕದಲ್ಲಿ ನನ್ನ ಹೆಸರು ಕೇಳಿ ಗಾಬರಿಯಾದೆ. ಹೆದರಿಕೊಂಡು ಗಡಗಡ ನಡುಗುವ ಕೈಗಳಿಂದ ಹೇಳಿದಷ್ಟು ಮಾಡಿ ಉಸ್ಸಂತ ಕುಳಿತಿದ್ದೆ. ಅದೆಷ್ಟೋ ಹೊತ್ತು ಹೃದಯ ಬಡಿತ ತಹಬದಿಗೆ ಬಂದಿರಲಿಲ್ಲ. ಸಾಮಾಜಿಕ, ಸಾಹಿತ್ಯಕ ವಾತಾವರಣದಿಂದ ಒಂದು ದಶಕದ ಕಾಲ ದೂರ ಉಳಿದ ಪರಿಣಾಮ. ಓದು, ಬರಹ, ಮಾತು ಇಲ್ಲದೆ, ಕೇವಲ ಸಂಸಾರದ ನೊಗ ಹೊತ್ತು ನಡೆದದ್ದೇ ನಡೆದದ್ದು.

ಆಶ್ಚರ್ಯ! ಒಂದು ಕಾಲದಲ್ಲಿ ವೇದಿಕೆಯ ಮೇಲೆ ನಿಂತು ಮಾತನಾಡಿ ಡಿಬೇಟ್ ಗೆದ್ದವಳು. ಗರ್ಲ್ ಗೈಡ್ಸ್ ನಲ್ಲಿ ಬಹುಮುಖ ಪ್ರತಿಭೆ ಎನಿಸಿಕೊಂಡವಳು. ಬೀದರನಿಂದ ಅನೇಕ ಕ್ಯಾಂಪ್, ಜಾಂಬೂರಿ ಎಂದೆಲ್ಲಾ ಇಡೀ ದೇಶದ ತುಂಬಾ ಓಡಾಡಿದವಳು. ಬಿಳಿ ಹಾಳೆಯ ಮೇಲೆ ಪೆನ್ಸಿಲ್ ಗೆರೆ ಎಳೆದು, ಬಣ್ಣ ತುಂಬಿಸಿ, ಚಿತ್ತಾರ ಮೂಡಿಸಿ, ಡ್ರಾಯಿಂಗ್ ಪರೀಕ್ಷೆ ತೇರ್ಗಡೆಯಾದವಳು. ಯು.ಎನ್.ಓ. ಪರೀಕ್ಷೆಯಲ್ಲೂ ಸೈ. ಹಿಂದಿ ಪ್ರಚಾರ ಪರೀಕ್ಷೆ, ರಂಗೋಲಿ ಸ್ಪರ್ಧೆ, ಕವಿತೆ, ನೃತ್ಯ, ನಾಟಕ ಎಲ್ಲದರಲ್ಲೂ ಭಾಗಿ, ಓದಿನಲ್ಲಿ ಮೊದಲ ಐದು ವಿದ್ಯಾರ್ಥಿಗಳಲ್ಲಿ ಒಬ್ಬಳು. ಸ್ಕೂಲ್, ಕಾಲೇಜ್ ಮ್ಯಾಗಝಿನ್ ಗಳಲ್ಲಿ ಕವಿತೆ, ಕತೆ, ಅನುಭವದ ಲೇಖನಗಳ ಪ್ರಕಟಣೆ. ಕಾಲೇಜಿನಲ್ಲಿದ್ದಾಗ ರಾಜ್ಯ ಮಟ್ಟದ ವಾರಪತ್ರಿಕೆಗಳಲ್ಲಿ ಸಣ್ಣಕತೆ ಪ್ರಕಟವಾದ ಹೆಮ್ಮೆ. ಹೀಗೆಲ್ಲಾ ಮಾಡಿದ್ದವಳು ಇಂದು ವೇದಿಕೆಗೆ ಹೋಗಿ ಹೂಗುಚ್ಛ ನೀಡಿ ಬರಲು ಇಷ್ಟೊಂದು ಭಯವೇ?  ಆ ಧೈರ್ಯ ಎಲ್ಲಿ ಹೋಯಿತು?  ಆ ಆತ್ಮವಿಶ್ವಾಸಕ್ಕೆ ಕೊಡಲಿ ಪೆಟ್ಟು ಹೇಗೆ ಬಿತ್ತು? ಉತ್ತರದ ಹುಡುಕಾಟದಲ್ಲಿ ಒದ್ದಾಡಿದೆ.

ನನ್ನತನದ ಬಗ್ಗೆ ಅದೇ ಮೊದಲ ಬಾರಿಗೆ ಯೋಚಿಸಲು ಶುರುಮಾಡಿದೆ. ಯಾವ ನೌಕರಿಯನ್ನೂ ಮಾಡುತ್ತಿರಲಿಲ್ಲ. ಕಡೇಪಕ್ಷ ಮನೆಯಲ್ಲೇ ಕುಳಿತು ಓದುವ, ಬರೆಯುವ ಹವ್ಯಾಸವನ್ನಾದರೂ ಉಳಿಸಿ ಬೆಳೆಸಿಕೊಳ್ಳಬಹುದಿತ್ತಲ್ಲವೆ? ಆಗ ಶುರುವಾಗಿದ್ದು ಹುಡುಕಾಟ. ಆ ಹುಡುಕಾಟದಲ್ಲಿ ಕಂಡುಕೊಂಡಿದ್ದು ಸ್ಪೂರ್ತಿದಾಯಕವಲ್ಲದ ಸಂಗತಿಗಳು. ಅಸ್ತಿತ್ವವೇ ಇಲ್ಲದ ಮೇಲೆ ಅಸ್ಮಿತೆಯ ಪ್ರಶ್ನೆ ಬಹುದೂರದ ಮಾತಾಗಿತ್ತು. ತನ್ನನ್ನು ತಾನೇ ಅಗೆಯುವ, ಬಗೆಯುವ ಸಾಹಸ. ಕಳೆದು ಹೋದ ಹವ್ಯಾಸಗಳ ಜ್ಞಾಪಿಸಿದ್ದು ಅವ್ವ ಮತ್ತು ಅಪ್ಪ. ಆಗ ತೆರೆದುಕೊಂಡದ್ದೇ ಸಾಹಿತ್ಯ ಲೋಕ.

ಎಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟರೆ ಸಂಸಾರ ಲೋಕ ದ್ವಂಸವಾಗುವುದೋ ಎನ್ನುವ ಭಯ. ಅದೇ‌ ಆತಂಕ ಸದಾ ಮನದಲ್ಲಿ ಕಾಡುತ್ತಲೇ ಇತ್ತು. ಅನೇಕ ದ್ವಂದ್ವಗಳ ಮಧ್ಯೆ, ನಲವತ್ತರ ಗಡಿ ದಾಟಿದ ಮೇಲೆ, ಪತಿಯ ಮನವೊಲಿಸಿ ಉನ್ನತ ಶಿಕ್ಷಣ ಪಡೆದ ಸಾಹಸ. ಮನೆಯಲ್ಲಿ ಅತ್ತೆ, ಮಾವ ಮರಾಠಿ ದಿನಪತ್ರಿಕೆ ತರಿಸುತ್ತಿದ್ದರು. ಕನ್ನಡ ಅಕ್ಷರ ತಹತಹಿಕೆ ಮನದಲ್ಲಿ. ತೋರಿಕೆ, ಜೋರು, ದರ್ಪಗಳ ನಡುವೆ ವಿನಯ, ವಿದ್ಯೆ, ಪ್ರತಿಭೆ ಮೌನವಾಗುತ್ತಿತ್ತು. ಕೊನೆಗೊಂದು ದಿನ ಕನ್ನಡ ದಿನಪತ್ರಿಕೆ ಮನೆಗೆ ಬರಲಾರಂಭಿಸಿತು. ಯಾರಿಗೂ ತೊಂದರೆ ಆಗಬಾರದೆಂದು ನೆನ್ನೆಯ ಪತ್ರಿಕೆ ಓದುತ್ತಿದ್ದೆ.

ಮುಂದೊಂದು ದಿನ ನಿತ್ಯ ಮುಂಜಾನೆ ಮಕ್ಕಳಿಗೆ ಶಾಲೆಗೆ ಕಳುಹಿಸಿ, ನನಗಿಷ್ಟವಾದ ‘My cup of coffee’ ಕೈಯಲ್ಲಿ ಹಿಡಿದು, ತಾಜಾ ದಿನಪತ್ರಿಕೆ ಓದುತ್ತ ಕುಳಿತರೆ ಸಾಕು, ಯಾರೂ ಡಿಸ್ಟರ್ಬ್ ಮಾಡುವಂತಿಲ್ಲ. ಅಂತಹ ‘ಮೀ ಟೈಮ್ ಸ್ಪೇಸ್’ ಕ್ರಿಯೇಟ್ ಮಾಡಿಕೊಂಡಿದ್ದೆ. ‘I created history!’ ಎಂದು ಮನಸು ಸಂತಸದ ಕೂಗು ಹಾಕಿತು.  ಐವತ್ತರ ಗಡಿಯಲ್ಲಿ ನಿಂತಾಗ ಮಕ್ಕಳು ಪ್ರಬುದ್ಧರು. ನನ್ನ ತೋರುಬೆರಳು ಹಿಡಿಯುವ ಅವಶ್ಯಕತೆ ಅವರಿಗಿರಲಿಲ್ಲ. ನಾಲ್ಕೂ ಮಕ್ಕಳು ನನ್ನ ಬೆನ್ನ ಹಿಂದೆ ನಿಂತಿದ್ದು ಇಳಿಗಾಲದ ಆತ್ಮವಿಶ್ವಾಸ ಹೆಚ್ಚಿಸಿತು. ಓದು, ಬರಹ, ಚಿಂತನೆ, ಜೀವನ ಶೈಲಿ ವಿಭಿನ್ನ, ವಿನೂತನವಾಗಿ ಸಾಗಿತು. ಆ ಆತ್ಮತೃಪ್ತಿ ಎದುರಿಗೆ ಯಾವ ಐಶಾರಾಮಿಯೂ ನಾಚಬೇಕು.

ಪಾಶ್ಚಾತ್ಯ ಲೇಖಕಿ ಒಬ್ಬಳು ಹೇಳುತ್ತಾಳೆ. ನಮ್ಮ ಪ್ರತಿಭೆಗೆ ಅವಕಾಶ ಬೇಕಾದರೆ, ನಾವು ನಮ್ಮದೇ ಆದ ಒಂದು ಪ್ರತ್ಯೇಕ ಕೋಣೆ ಮಾಡಿಕೊಳ್ಳಬೇಕೆಂದು. ಈಗ ಸಂಸಾರದ ನೊಗ ಹೊತ್ತುಕೊಂಡೇ, ನನ್ನದೊಂದು ಪುಸ್ತಕದ ಪುಟ್ಟ ಪ್ರಪಂಚವಿದೆ. ನನ್ನದೇ ಆದ ಬರಹ ಲೋಕದ ಗುಂಗಿದೆ. ಈಗ ವಿಶಾಲ ಸಾಹಿತ್ಯ ಜಗತ್ತಿನಲ್ಲಿ ನಾನೂ ಒಬ್ಬಳು. ಕನ್ನಡದ ತೇರನೆಳೆವ ಚಿಕ್ಕ ಚಿಕ್ಕ ಕೈಗಳಿವು. ಯಾವತ್ತೂ ಗದ್ಯವನ್ನೇ ಬರೆಯುತ್ತಿದ್ದವಳ ಕಾವ್ಯಾನುಸಂಧಾನಕೆ ಕಾವ್ಯನಾಮ ‘ಸಿಕಾ’ ನಾಮಕರಣ. ವಿಭಿನ್ನ ಬರಹದ ದಾರಿಗೆ ತೆರೆದುಕೊಂಡ ಹೆದ್ದಾರಿ.

ನನ್ನವ್ವ ಶಿಕ್ಷಕಿಯಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ. ಅಸಂಖ್ಯಾತ ಮಕ್ಕಳಿಗೆ ಕಲಿಸಿದ ಸೌಭಾಗ್ಯ. ಆ ಭಾಗ್ಯ ನನಗಿಲ್ಲ. ನನ್ನ ನಾಲ್ಕೂ ಮಕ್ಕಳಿಗೆ ಓದಿಸಿದ ಸಂತೃಪ್ತಿ. ಅದರೂ ಕಿಂಚಿತ್ತು ಅವಕಾಶ ಸಿಕ್ಕಾಗ ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಜಾಣ್ಮೆ ರೂಢಿಸಿಕೊಂಡೆ. ಶಾಲಾ, ಕಾಲೇಜುಗಳಿಗೆ ಅತಿಥಿಯಾಗಿ ಹೋದಾಗ ಮಕ್ಕಳ ಮನ ಗೆಲ್ಲುವ ಸಮಯ. ಸಾಹಿತ್ಯಿಕ ಕಾರ್ಯಕ್ರಮಗಳ ಸದುಪಯೋಗ. ಸಹೃದಯರ ಸಕಾರಾತ್ಮಕ ಒಡನಾಟ.

ಹೆಣ್ಣು ಯಾವತ್ತೂ ಸಾಂಸಾರಿಕ ಹೊಣೆಗಾರಿಕೆ ಮತ್ತು ತನ್ನ ಪ್ರತಿಭೆ ಸಮ್ಮತಿಸುವ ಪತಿಯನ್ನು ಆಶಿಸುತ್ತಾಳೆ. ಆದರೆ ಕೆಲವೊಮ್ಮೆ ವ್ಯವಸ್ಥೆಯ ಕಾರಣದಿಂದ ಹೆಣ್ಣು ವಂಚಿತಳಾಗುತ್ತಾಳೆ. ಜಾಣೆಯಾದವಳು ಬೆಣ್ಣೆಯಿಂದ ಕೂದಲು ತೆಗೆದಂತೆ ಸಂಸಾರದಿಂದ ತನ್ನ ಪ್ರತಿಭೆಯನ್ನು ಬೇರ್ಪಡಿಸಿ, ಎರಡರಲ್ಲೂ ನಿಸ್ಸಂಶಯವಾಗಿ ಯಶ ಸಾಧಿಸಲು ಸಾಧ್ಯ. ಇನ್ನೂ ಸ್ವಲ್ಪ ಮೊದಲೇ ಜಾಗ್ರತವಾಗಬಹುದಿತ್ತು ಎನ್ನುವ ಹಳಹಳಿಕೆ ಇದ್ದರೂ ಬೇಸರವೇನೂ ಇಲ್ಲ. ಮನೆ, ಮಕ್ಕಳು, ಸಂಬಂಧಗಳ ನಡುವೆ ಪ್ರತಿಭೆಯ ಪುನರುಜ್ಜೀವನಕ್ಕಾಗಿ ತಾಳ್ಮೆಯಿಂದ ಕಾಯಬೇಕಾಯಿತು. ಪ್ರೌಢಾವಸ್ಥೆಯಲ್ಲಿ ಜಾಗ್ರತವಾಗಿದ್ದು ತಡವೇನಲ್ಲ ಎನ್ನುವ ಸಮಾಧಾನವಷ್ಟೆ.

‘ಮಕ್ಕಳು ನನ್ನೆತ್ತರಕ್ಕೆ ಬೆಳೆದರೂ ನಿಮ್ಮ ಕಾಟ ತಪ್ಪಲಿಲ್ಲ.’
‘ಅಳಿಯ ಬಂದ ಮೇಲೆ ನಿಮ್ಮದೇನು ತಕರಾರು?’
‘ಈಗ ನೀವೇನೂ ಅನ್ನುವ ಹಾಗಿಲ್ಲ. ಯಾಕೆಂದರೆ ಮೊಮ್ಮಗ ಬಂದಿದ್ದಾನೆ? ಹುಶ್ಶಾರ್!’

ಇಂತಹ ನಿರ್ವಿವಾದದ ಕಾರಣ ನೀಡುತ್ತ ಮಾಡಿದ ಸಾತ್ವಿಕ ಹಟಕ್ಕೆ ಮೋಕ್ಷ ಸಿಕ್ಕಿತು. ಅಪ್ಪನ ಮಹತ್ವಾಕಾಂಕ್ಷೆಯಂತೆ ಸಂಶೋಧನೆ ಮಾಡಬೇಕೆಂಬ ಕನಸೂ ನನಸಾಯಿತು. ಇದೀಗ ಐವತ್ತರ ಗಡಿ ದಾಟಿದ ನಂತರ, ಮಹಾಪ್ರಬಂಧದ ಸಿದ್ಧತೆಯಲ್ಲಿ ತೊಡಗಿರುವ ಸಂತಸ. ಅಧ್ಯಯನದ ಉತ್ಸಾಹ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿದೆ. ಜೀವನೋತ್ಸಾಹ ಇಮ್ಮಡಿಸಿದೆ. ಈಗ ಯಾರ ಭಯವಿಲ್ಲದ, ಆತಂಕವಿಲ್ಲದ, ಒತ್ತಡವಿಲ್ಲದ ಓದು, ಬರಹ, ಧ್ಯಾನ, ವಾಕ್, ಹಾಡು ಕೇಳುವ ನಿತ್ಯ ಸಡಗರದ ಬದುಕು. ‘ಮೀ ಟೈಮ್ ಸ್ಪೇಸ್’ ಕ್ರಿಯೇಟ್ ಮಾಡಿಕೊಳ್ಳುವುದು ವೈಯಕ್ತಿಕ ಹೊಣೆಗಾರಿಕೆ ಎಂದು ಮನವರಿಕೆಯಾಗಿದೆ. ಇಹದಲ್ಲೇ ಕಳೆದು ಹೋಗದಂತೆ ಕಾಪಾಡಿಕೊಂಡಾಗ, ಹತ್ತಾರು ಕೃತಿಗಳ ಬರೆದ, ಬರೆಯುವ, ಬರೆಯುತ್ತಲೇ ಇರುವ ಮನಸ್ಥಿತಿ ಮೂಡಿದೆ.

ಈ ವಿಶಾಲ ಜಗತ್ತಿನಲ್ಲಿ ಯಾವುದೋ ‘ಕಾಣದ ಶಕ್ತಿ’ಯೊಂದು ಅದಮ್ಯ ಚೇತನವಾಗಿ ಲಭಿಸಿದಂತೆ ಭಾಸ. ಸಹನೆ, ಸ್ಪೂರ್ತಿ, ಪ್ರೇರಣೆ ನೆಲೆಗೊಂಡಾಗ ಬದುಕಿಗೊಂದು ವಿಶೇಷ, ವಿಶಿಷ್ಟ, ವಿನೂತನ ಅರ್ಥ ಗೋಚರಿಸುವ ಸಮಯ. ಆ ಹೊಸ ಹೊಳವಿನಲಿ ಕಾಣುವಳು ಅವಳು! ಮತ್ತವಳ ಮೀ ಟೈಮ್ ಸ್ಪೇಸ್!

***

ಪರಿಚಯ: ‘ಸಿಕಾ’ ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಅವರು ಬೀದರಿನವರು. ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮುಂದಿನ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್. ಸಾಹಿತ್ಯದ ತೀವ್ರ ಆಸಕ್ತಿಯಿಂದಾಗಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ. ‘ಪ್ರೇಮ ಕಾವ್ಯ’ ಕಾದಂಬರಿ,  ‘ಬೆಳಕಿನೆಡೆಗೆ’ ಕಥಾ ಸಂಕಲನ, ‘ಪ್ರಳಯದಲ್ಲೊಂದು ಪ್ರಣತಿ’ ಕಥಾ ಸಂಕಲನ, ‘ಜೀವಜಗತ್ತಿಗೆ ಜೇನಹನಿ’ ವಿಮರ್ಶಾ ಬರಹ,  ‘ಪಿಸುಮಾತುಗಳ ಜುಗಲ್’ ಕಾವ್ಯಾನುಸಂಧಾನ, ಕವಿ ಸಿದ್ದು ಯಾಪಲಪರವಿ ಅವರೊಡನೆ ಕಾವ್ಯ ಜುಗಲ್​ಬಂದಿ, ‘ಒಳ್ಕಲ್ಲ ಒಡಲು’ ಕಾದಂಬರಿ,  ‘ಬ್ಯಾಸರಿಲ್ಲದ ಜೀವ’ ಜೀವನ ಚರಿತ್ರೆ, ‘ಅಡುಗೆ ನಡುವೆ ಬಿಡುವು’ ವಿಮರ್ಶಾ ಬರಹ, ‘ನಾನೇ ಅವನು’ ಕಥಾಸಂಕಲನ, ‘ಅಕ್ಕನೆಡೆಗೆ’ – ಅಕ್ಕಮಹಾದೇವಿ ವಚನಾನುಸಂಧಾನ, ‘ಮೈ ಕಪ್ ಆಫ್ ಕಾಫಿ’ – ಕನಸುಗಳ ಕಲರವ (ಅಂಕಣ), ‘ವಾಸ್ತವದ ಒಡಲು’ – ಸತ್ಯ ಘಟನೆಗಳು (ಅಂಕಣ), ‘ಕಲ್ಯಾಣದಿಂದ ಕ್ಯಾಲಿಫೋರ್ನಿಯಾ’ – ಪ್ರವಾಸ ಕಥನ

ಪುರಸ್ಕಾರಗಳು: ಇವರ ಅನೇಕ ಸಣ್ಣಕತೆಗಳಿಗೆ, ಗುಲಬರ್ಗಾ ವಿಶ್ವವಿದ್ಯಾಲಯದ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಪ್ರಶಸ್ತಿ ಮೂರು ಬಾರಿ ಲಭಿಸಿದೆ. ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಕೊಡುವ ಉಮಾದೇವಿ ಶಂಕರ್ ರಾವ್ ದತ್ತಿ ಬಹುಮಾನ ದೊರೆತಿದೆ. ಪ್ರಸ್ತುತ ಕಲಬುರಗಿಯ ‘ಶರಣಬಸವೇಶ್ವರ ವಿಶ್ವವಿದ್ಯಾಲಯ’ ದಿಂದ ಪಿಎಚ್.ಡಿ ಪದವಿಗಾಗಿ ‘ಯಶೋದಮ್ಮ ಸಿದ್ದಬಟ್ಟೆ ಬದುಕು-ಬರಹ’ ಮಹಾಪ್ರಬಂಧದ ಬರಹದಲ್ಲಿ ನಿರತ.

ನಾನೆಂಬ ಪರಿಮಳದ ಹಾದಿಯಲಿ: ನನ್ನ ಅನ್ನವನ್ನು ನಾನೇ ಗಳಿಸಲು ಶುರುಮಾಡಿದಾಗ ನನಗೆ ನಲವತ್ತೊಂಬತ್ತು…

Published On - 6:38 pm, Thu, 21 January 21