ನಾನೆಂಬ ಪರಿಮಳದ ಹಾದಿಯಲಿ: ನಾನು ಅವಳನ್ನು ಒಮ್ಮೆಯೂ ಅಮ್ಮಾ ಎನ್ನಲೇ ಇಲ್ಲ

| Updated By: Skanda

Updated on: Jan 30, 2021 | 6:45 PM

ಅಪ್ಪ ಅಮ್ಮನ ನಡುವೆ ಏನು ನಡೆಯಿತೋ ತಿಳಿಯದಷ್ಟು ಸಣ್ಣ ವಯಸ್ಸು, ಅವರು ಬೇರೆಬೇರೆಯಾದರು. ಮುಂದೆ ಮೊದಲ ಬಾರಿ ನಾನು ಮುಟ್ಟಾದಾಗ, ಅಪ್ಪ ತನ್ನ ಲುಂಗಿಯನ್ನು ಹರಿದು ಬಟ್ಟೆಯ ಮಡಿಕೆ ಮಾಡಿಕೊಟ್ಟಾಗ, ಆ ಬಿರುಸು ಬಟ್ಟೆಯಿಂದ ತೊಡೆಯಲ್ಲಿ ಗೀರು ಮೂಡಿದಾಗ, ಅಮ್ಮ ಎಂಬುವವಳು ಇದ್ದಿದ್ದರೆ ಮೆತ್ತನೆಯ ಸೀರೆಯ ಮಡಿಕೆ ಸಿಗುತ್ತಿತೇನೋ, ಇದಕ್ಕಾಗಿಯಾದರೂ ಅಮ್ಮ ಇರಬೇಕಿತ್ತು ಎಂದು ಅದೊಂದೇ ಸಲ ಅನಿಸಿತ್ತು.‘ ಸಂಗೀತಾ ಚಚಡಿ

ನಾನೆಂಬ ಪರಿಮಳದ ಹಾದಿಯಲಿ: ನಾನು ಅವಳನ್ನು ಒಮ್ಮೆಯೂ ಅಮ್ಮಾ ಎನ್ನಲೇ ಇಲ್ಲ
ಸಂಗೀತಾ ಚಚಡಿ
Follow us on

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಬೆಂಗಳೂರಿನ ಶೋಭಾ ಲಿಮಿಟೆಡ್​ನಲ್ಲಿ ಜನರಲ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿರುವ ಸಂಗೀತಾ ಚಚಡಿ ಅವರು ಲೇಖಕಿಯೂ ಹೌದು. ಅವರ ಅಂತರಂಗದ ಒಂದು ತುಣುಕು ನಿಮ್ಮ ಓದಿಗೆ…

ಫ್ಯಾಮಿಲಿ ಕೋರ್ಟ್ : ಮಗೂ ನೀನು ಅಮ್ಮನ ಹತ್ತಿರ ಇರುತ್ತೀಯೋ ಅಥವಾ ಅಪ್ಪನ ಹತ್ತಿರ ಇರುತ್ತೀಯೋ?
ನನ್ನಣ್ಣ : ನಾನು ಅಪ್ಪನ ಹತ್ತಿರಾನೇ ಇರತೀನಿ.
ಫ್ಯಾಮಿಲಿ ಕೋರ್ಟ್: ಮಗು ನೀನು ಯಾರ ಹತ್ತಿರ ಇರುವೆ ?
ನಾನು : ನಾನೂ ಅಪ್ಪನ ಹತ್ತಿರಾನೇ ಇರತೀನಿ.
ಫ್ಯಾಮಿಲಿ ಕೋರ್ಟ್: ಅಮ್ಮನ ಹತ್ತಿರ ಯಾಕೆ ಬೇಡ ?
ನಾನು : ನೀವು ಇನ್ನೊಮ್ಮೆ ಏನಾದರೂ ಅಮ್ಮನ ಹತ್ತಿರ ಹೋಗು ಅಂದರೆ ಈ ಬೂಟು ಕಾಲಿಂದ  (ಅವತ್ತು ಕಾಲಿನಲ್ಲಿ ಹೊಸ ಬೂಟ್ ಗಳಿದ್ದದ್ದು ಕಾಕತಾಳೀಯವೇನೋ ) ಒದ್ದು ಬಿಡತೀನಿ!

ಒಮ್ಮೆಲೇ ನ್ಯಾಯಾಲಯದಲ್ಲಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ಧ. ಅಪ್ಪ ಮತ್ತು ಆತನ ವಕೀಲರಿಗೆ ಥರಥರ ನಡುಕ. ನ್ಯಾಯಾಧೀಶರ ಮುಂದಿನ ನಡೆಯನ್ನು ಎದುರು ನೋಡುತ್ತಾ ಗಾಬರಿಯಾಗಿ ನಿಂತ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ, ಸಮಾಧಾನವಾಗಿ ಎದ್ದು ನಿಂತ ನ್ಯಾಯಾಧೀಶರು ಯಾವಾಗ ಇಷ್ಟು ಚಿಕ್ಕ ಮಗುವಿನ ಮನಸ್ಸಿನಲ್ಲಿ ತಾಯಿಯ ಬಗ್ಗೆ ಇಷ್ಟೊಂದು ಕಹಿಭಾವನೆ ಇದೆ ಅಂದ ಮೇಲೆ ಬೇರೆ ಯೋಚನೆ ಸಾಧ್ಯವೇ ಇಲ್ಲ, ಮಕ್ಕಳು ತಂದೆಯ ಹತ್ತಿರವೇ ಇರಲಿ ಎಂಬ ಒಂದೇ ಮಾತಿನಲ್ಲಿ ತೀರ್ಪು ಕೊಟ್ಟಾಗಿತ್ತು.

ಸಮಾಧಾನದ ನಿಟ್ಟುಸಿರು ಬಿಟ್ಟ ಅಪ್ಪನ ಎರಡೂ ಕೈಯನ್ನು ಹಿಡಿದು ಹೊರಟ ಮಕ್ಕಳಿಬ್ಬರಿಗೂ ಅಮ್ಮನ ಹತ್ತಿರ ಹೋಗಿ ಎಂದು ಹೇಳುವ ಧೈರ್ಯವನ್ನು ಮುಂದೆ ಯಾರೂ ಮಾಡಲಿಲ್ಲ.

ಅವರಿಬ್ಬರ ನಡುವೆ ಏನು ಹೊಂದಾಣಿಕೆ ಆಗಲಿಲ್ಲವೋ ತಿಳಿಯದಷ್ಟು ಚಿಕ್ಕ ವಯಸ್ಸು ನನ್ನದು. ತನ್ನ ಜೀವ ತೇಯ್ದು ನಮ್ಮನ್ನು ಬೆಳೆಸುತ್ತಿರುವ ಅಪ್ಪನನ್ನು ಆಕೆ ಬಿಟ್ಟು ಹೋಗಿದ್ದು ದೊಡ್ಡ ತಪ್ಪು ಎಂದೇ ನನಗೆ ಅನ್ನಿಸುತ್ತಿತ್ತು. ಆದರೆ ನನಗೆ ತಿಳಿವಳಿಕೆ ಬರುವ ಹೊತ್ತಿಗೆ ಅವರಿಬ್ಬರೂ ಬೇರೆಬೇರೆ ಆಗಿಬಿಟ್ಟಿದ್ದರು. ‘ಅಮ್ಮ ಇರಲೇಬೇಕು’ ಎನ್ನುವುದಕ್ಕೆ ಅಪವಾದದಂತೆ ‘ಅಮ್ಮ ಇರಲೇಬೇಕೆ?’ ಎಂಬಂತೆ ಬೆಳೆಸುತ್ತೇನೆ ಎಂದು ಹೊರಟಿದ್ದ ಅಪ್ಪನನ್ನೇ ನಾನು ನೆಚ್ಚಿಕೊಂಡುಬಿಟ್ಟೆ. ಆದರೂ ಈ ವಿಷಯವಾಗಿ ಬಂಧುಬಳಗದವರ ಅನುಕಂಪದ ನೋಟಗಳನ್ನು ಕಂಡಾಗ ನನಗೇ ಅನಿಸದ ಕೊರತೆ ಇವರಿಗೇಕೆ ಭಾದಿಸುತ್ತದೆ ಎಂಬ ಪ್ರಶ್ನೆಗಳು ಕಾಡುತ್ತಿದ್ದಲೇ ಇದ್ದವು. ಅಥವಾ ಅಪ್ಪನಿಗೆ ನೋವಾಗುತ್ತದೆ ಎಂಬ ಒಂದೇ ಕಾರಣಕ್ಕೆ ಅಮ್ಮನ ಕೊರತೆ ಅನಿಸಿದರೂ ತೋರಗೊಡುತ್ತಿರಲಿಲ್ಲವೋ ನೆನಪಿಲ್ಲ. ಒಟ್ಟಿನಲ್ಲಿ ತರಗತಿಯಲ್ಲಿ ‘ತಾಯಿಗಿಂತ ಬಂಧುವಿಲ್ಲ’ ಎಂಬ ಗಾದೆ ಮಾತು ಸುಳ್ಳು ಎಂದು ವಾದಿಸುತ್ತಿದ್ದೆ. ಟೀಚರ್ ಕಣ್ಣಂಚಿನಲ್ಲಿ ಮೂಡಿದ ಕಂಬನಿಯ ಒಂದು ಬಿಂದು ನನಗೆ ಕಾಣಿಸಿಲ್ಲ ಎಂದು ಅವರಂದುಕೊಂಡಂತೆ ನಾನೂ ಇರುತ್ತಿದ್ದೆ.

ಮೊದಲ ಬಾರಿ ಮುಟ್ಟಾದಾಗ, ಅಪ್ಪ ತನ್ನ ಲುಂಗಿಯನ್ನು ಹರಿದು, ಬಟ್ಟೆಯ ಮಡಿಕೆ ಮಾಡಿಕೊಟ್ಟಾಗ, ಆ ಬಿರುಸು ಬಟ್ಟೆಯಿಂದ ತೊಡೆಯಲ್ಲಿ ಗೀರು ಮೂಡಿದಾಗ, ಅಮ್ಮ ಎಂಬುವವಳು ಇದ್ದಿದ್ದರೆ ಮೆತ್ತನೆಯ ಸೀರೆಯ ಮಡಿಕೆ ಸಿಗುತ್ತಿತೇನೋ, ಇದಕ್ಕಾಗಿಯಾದರೂ ಅಮ್ಮ ಇರಬೇಕಿತ್ತು ಎಂದು ಅದೊಂದೇ ಸಲ ಅನಿಸಿತ್ತು. ಓದು, ಪರೀಕ್ಷೆ, ಭಾಷಣ, ನಿಬಂಧ ಹೀಗೆ ಒಂದಿಲ್ಲೊಂದು ಚಟುವಟಿಕೆಗಳ ಭಾಗವಾಗಿ, ಕಾಲಚಕ್ರ ತಿರುಗಿದ್ದೇ ಗೊತ್ತಾಗದಂತೆ, ತಾಯಿ ಇಲ್ಲದ ಹುಡುಗಿ ಹದಿಹರೆಯದ ಯಾವ ತಪ್ಪು ಮಾಡದಂತೆ ಹುಚ್ಚುಖೋಡಿ ವಯಸ್ಸು ದಾಟಿ ಹೋಗಿತ್ತು (ಅಥವಾ ಬೇಕಂತಲೇ ಯಾವುದೇ ಆಕರ್ಷಣೆಗೆ ಸಿಲುಕದಂತೆ ದಾಟಿಸಿದ್ದೆ). ಇನ್ನೇನು ಒಂದೇ ವರ್ಷ. ಕಲಿಯುವದು ಮುಗಿಯುತ್ತಿದ್ದಂತೆ ಬಿಳಿಕುದುರೆಯ ಮೇಲೊಬ್ಬ ರಾಜಕುಮಾರ ಬರುತ್ತಾನೆ ಎಂದು ಹಗಲುಗನಸು ಕಾಣದೇ (ಓದಿದ್ದ ಕಾದಂಬರಿಗಳ ಪ್ರಭಾವ ಸಾಕಷ್ಟಿದ್ದರೂ), ನನ್ನ ಕನಸಿನ ಸಾಮ್ರಾಜ್ಯವನ್ನು ನಾನೇ ಕಟ್ಟಿಕೊಳ್ಳಬೇಕು ಎಂದು ಕಾತುರದಿಂದಿರುವಾಗಲೇ ನನಗಿಂತ ಬರೀ ಒಂದೂವರೆ ವರ್ಷ ದೊಡ್ಡವನಾದ ಅಣ್ಣನಿಗೆ ತಂಗಿಯ ಕೈ ಬಿಡಬೇಡ, ಅವಳನ್ನೊಂದು ದಂಡೆಗೆ ತಲುಪಿಸು ಎಂದು ಹೇಳಿ ಗಡಿಬಿಡಿ ಮಾಡಿ ಅಪ್ಪ ಮೇಲೆ ಹೊರಟೇಬಿಟ್ಟಿದ್ದ. ಒಮ್ಮೆಲೇ ಜಗತ್ತೇ ಶೂನ್ಯವಾಗಿತ್ತು.

ಇನ್ನೂ ಕಲಿಯುವ, ನೌಕರಿ ಮಾಡುವ ಏನೇನೋ ಕನಸುಗಳಿಗೆ ಕಡಿವಾಣ ಹಾಕಿ ಗೆಳತಿಯ ಕಡೆಯಿಂದ ಬಂದ ಒಂದು ಸಂಬಂಧಕ್ಕೆ ತಲೆಯಾಡಿಸಿದ್ದೆ. ನನಗಿಂತ ನೂರು ಪಾಲು ಹೆಚ್ಚು ಕನಸುಗಳ ತುಂಬಿಕೊಂಡಿರುವ, ಅವನ್ನೆಲ್ಲ ನನಸಾಗಿಸುವ ಕ್ಷಮತೆಯುಳ್ಳ ಅಣ್ಣನಿಗೆ ಯಾವುದೇ ರೀತಿಯಲ್ಲಿ ಭಾರವಾಗಬಾರದು ಎಂಬ ಒಂದೇ ಮಿಡಿತ ಮನದಲ್ಲಿ.

ಹಿರಿಯ ಲೇಖಕಿ ನೇಮಿಚಂದ್ರ ಅವರೊಂದಿಗೆ ಸಂಗೀತಾ

ಪಕ್ಕಾ ನಾಸ್ತಿಕನಾದ ಅಪ್ಪನೊಂದಿಗೆ ಬೆಳೆದ ಮೇಲೆ ಬೇರೆ ಯಾವ ಮನೆಯಾದರೂ ಹೊಂದಾಣಿಕೆ ಕಷ್ಟವೇ. ಇನ್ನು ಮಡಿ, ಮೈಲಿಗೆ, ಹಬ್ಬ ಹರಿದಿನ, ಸುತ್ತ ನೂರೆಂಟು ನೆಂಟರು ಇದ್ದ ಮನೆಗೆ ಹೋದ ಮೇಲೆ ಕೇಳಬೇಕೆ ? ಶುಕ್ರವಾರ ಶನಿವಾರದ ಹಾಡುಗಳು, ಅರಿಶಿಣ ಕುಂಕುಮ, ಗಣಪತಿ ಗೌರಿ, ನವರಾತ್ರಿ ಶಿವರಾತ್ರಿ ಎನ್ನುತ್ತಿರುವಾಗಲೇ ಮಗಳೆಂಬ ಕುಡಿ ಮೂಡಿದ್ದೂ ಆಯಿತು. ಮದುವೆಯ ಮೊದಲ ವಾರ್ಷಿಕೋತ್ಸವದಲ್ಲಾಗಲೇ ಅವಳಿಗೊಂದು ತಿಂಗಳು. ಮೊದಲ ಬಾರಿಗೆ ಅಮ್ಮ ಎಂದರೇನು ಎನ್ನುವ ಅನುಭವ. ಅಮ್ಮನ ಪ್ರೀತಿ ಹೇಗಿರುತ್ತದೆ ಎಂಬುದನ್ನೇ ತಿಳಿಯದ ನಾನು ಒಬ್ಬ ಒಳ್ಳೆಯ ಅಮ್ಮನಾಗಬಲ್ಲೆನೇ? ಹೀಗೆ ಏನೇನೋ ಯೋಚನೆಗಳು .

ಇತ್ತ ಕಷ್ಟಪಟ್ಟು ಕಲಿತ ವಿದ್ಯೆಗೆ ನ್ಯಾಯ ಒದಗಿಸುತ್ತಿಲ್ಲ ಎಂಬ ತಳಮಳ. ಅಷ್ಟರಲ್ಲೇ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯೊಂದು ಸೃಷ್ಟಿಯಾಗಿಯೇ ಬಿಟ್ಟಿತ್ತು. ನಾಲ್ಕು ತಿಂಗಳ ಮಗಳನ್ನು ಬಿಟ್ಟು ಬೆಳಿಗ್ಗೆ ಹೊರಡುವಾಗ, ಸಂಜೆ ಎದೆ ತುಂಬಿ ಬಂದಾಗ, ಮರಳಿ ಬಂದು ಗಟ್ಟಿಯಾಗಿ ಅಪ್ಪಿಕೊಂಡಾಗ, ಅಮ್ಮನ ಪ್ರೀತಿ ಪಡೆಯದೇ ಇದ್ದರೂ ನಾನು ಅಮ್ಮನ ಪ್ರೀತಿ ಕೊಡಬಲ್ಲೆ ಎಂಬ ಭಾವ ತೇಲಿ ಹೋಗಿತ್ತಾದರೂ, ಮಗುವನ್ನು ನೋಡಿಕೊಳ್ಳುವುದು ನಾವೇ ಎಂದು ಮನೆ ಹಿರಿಯರು ಬಂದವರೆದುರೆಲ್ಲಾ ಹೇಳಿಕೊಳ್ಳುತ್ತಿದ್ದರೆ, ನಾನು ಕರುಳ ಕುಡಿಯನ್ನು ಬಿಟ್ಟು ಹೋಗುತ್ತಿರುವದು ನಿಮ್ಮ ಕರುಳಕುಡಿಯ ಆಧಾರಕ್ಕಾಗಿ, ಚಿಂತೆಯಿಲ್ಲದೆ ಕಳೆಯಬೇಕಾದ ನಿಮ್ಮ ಸಂಧ್ಯಾಕಾಲದ ಜೀವನಕ್ಕಾಗಿ ಎಂದು ಕೂಗಿಕೂಗಿ ಹೇಳಬೇಕೆನಿಸುತ್ತಿತ್ತು. ಗೊತ್ತಿರದೇ ಇರುವವರಿಗೆ ತಿಳಿಹೇಳಬಹುದು. ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುವವರಿಗೆ ಏನು ಹೇಳುವದೆಂದು ತುಟಿ ಅವುಡುಗಚ್ಚಿ ಸಾಗಿಸಿದ ದಿನಗಳು ಅಸಂಖ್ಯ. ಆದರೆ ಡಿಗ್ರಿ ಮುಗಿದು ಎರಡು ವರ್ಷಗಳಾದ ಮೇಲೆ ಕೆಲಸ ಶುರು ಮಾಡಿದ್ದರಿಂದ ಇದ್ದ ಅವಶ್ಯಕತೆಯ ಮಟ್ಟಕ್ಕೆ ಹೋಲಿಸಿದರೆ ಸಿಕ್ಕ ನೌಕರಿ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿತ್ತು. ಮುಂದಿನದೆಲ್ಲ ಬರೀ ನಾಗಾಲೋಟ.

ಮಗಳಿಗೆ ಎರಡು ವರ್ಷವಾದಾಗ ಎಂ.ಟೆಕ್ ಮಾಡಿಕೊಂಡದ್ದು, ಅವಳ ಕಣ್ಣು ತಪ್ಪಿಸಿ ಮನೆಯ ಮಾಲೀಕರ ಮನೆಯಲ್ಲಿ ಕುಳಿತು ಓದುತ್ತಿದ್ದದ್ದು, ಬೆಳಗಾವಿಯಿಂದ ನೌಕರಿಯ ಬೆಂಬತ್ತಿ ಬೆಂಗಳೂರಿಗೆ ಬಂದದ್ದು, ರಾತ್ರಿ ಎರಡು ಗಂಟೆಯವರೆಗೆ ಕಚೇರಿಯ ಕೆಲಸ ಮನೆಯಲ್ಲೂ ಮಾಡಿದ್ದು, ಮುಂದೆ ಮಗಳಿಗೆ ಜೊತೆಯಾಗಲಿ ಎಂದು ಅವಳಿಗೊಬ್ಬ ತಮ್ಮನನ್ನು ಕೊಟ್ಟಿದ್ದು, ಆತನಿಗೆ ಎರಡೇ ತಿಂಗಳು ಆದಾಗ (ಅದೂ ಸಂಬಳ ರಹಿತ ಎರಡು ತಿಂಗಳು ) ತೊಟ್ಟಿಲ ಜೊತೆಗೇ ಆಫೀಸಗೆ ಹೋಗಿ ಕೆಲಸ ಮಾಡಿದ್ದು, ಪುರುಷ ಪ್ರಧಾನವಾದ ಕ್ಷೇತ್ರದಲ್ಲಿ ಕಾಲೆಳೆಯುವರಿಗೆ ಹೆದರದೇ, ಕಣ್ಣಂಚಿನ ಕಂಬನಿ ತೋರಿಸಿ ಮರುಕ ಗಿಟ್ಟಿಸದೇ, ಇತ್ತ ಹಬ್ಬ ಹರಿದಿನ ಯಾವೊಂದನ್ನೂ ಆಗದು ಎನ್ನದೇ, ಇಪ್ಪತ್ತೈದು ವರ್ಷಗಳ ಕಾಲ ಓಡಿದ್ದೇ ಓಡಿದ್ದು. ಇದೊಂದೇ ವರ್ಷ, ಇನ್ನೊಂದೇ ವರ್ಷ ಎನ್ನುತ್ತಾ ಚಕ್ರವ್ಯೂಹದಲ್ಲಿ ಸಿಲುಕಿ ಹಗಲೂ ರಾತ್ರಿ ಪಟ್ಟ ಶ್ರಮಕ್ಕೆ ಇಂದೇನೋ ಅಲ್ಪ ಸ್ವಲ್ಪ ಫಲ ಸಿಕ್ಕಿದೆ ಎಂಬ ಧನ್ಯ ಭಾವ .

ಒಂದು ಕ್ಷಣ ನಿಂತು, ಹಿಂದೆ ತಿರುಗಿ ನೋಡಿ, ಮತ್ತೆ ಮುಂದೆ ಹೋಗುವ ಅವಕಾಶ ಇದೆ ಎನ್ನುವ ಸಮಾಧಾನ. ಯಾವುದೇ ಕೆಲಸ ಕೊಟ್ಟರೂ ಮಾಡಿ ತೋರಿಸುವೆ ಎಂಬ ಹೆಮ್ಮೆ, ಆತ್ಮವಿಶ್ವಾಸ. ಅಲ್ಲೊಂದು ಪುಸ್ತಕ ಪ್ರಕಾಶನಕ್ಕೆ, ಇಲ್ಲೊಂದು ಕಾವ್ಯ ಕಮ್ಮಟಕ್ಕೆ, ಮತ್ತೊಂದು ದಾಸೋಹಕ್ಕೆ ಅಲ್ಪ ಸ್ವಲ್ಪ ಸಹಾಯ ಹಸ್ತ ಚಾಚುತ್ತಿರುವ ಹೆಮ್ಮೆ. ದೂರ ದೇಶಗಳಿಗೆ ಹೋದರೂ ಕಲಿಸಿದ ಕೆಲಸವನ್ನು ನೆನೆಪಿಟ್ಟುಕೊಂಡು ಕರೆ ಮಾಡುವ ಮಾಜಿ ಸಹೋದ್ಯೋಗಿಗಳು, ಅಮ್ಮ ಆಲೂ ಪರಾಠಾನೂ ಮಾಡಬಲ್ಲಳು, ಕ್ಯಾಲ್ಕ್ಯುಲಸ್ ಅನ್ನೂ ಕಲಿಸಬಲ್ಲಳು ಎಂದು ಜಂಬದಿಂದ ಹೇಳಿಕೊಳ್ಳುವ ಮಕ್ಕಳು, ಅತಿಥಿ ಉಪನ್ಯಾಸಕ್ಕೆ ಕರೆಯುವ ಯೂನಿವರ್ಸಿಟಿಗಳು, ಮೆಹನತ್​ ಕಾ ಫಲ್ ಮೀಠಾ ಹೋತಾ ಹೈ ಎಂದು ಸಾರಿ ಹೇಳುವಂತಿದೆ.

ಎಲ್ಲಕ್ಕೂ ಮಿಗಿಲಾಗಿ ಮುಷ್ಟಿಯಷ್ಟು ಆಕಾಶವನ್ನು ನನಗಾಗಿ ಇಟ್ಟುಕೊಂಡು, ದೂರದಿಂದಲೇ ಅಪ್ಪುಗೆಯ ಸ್ನೇಹ ಸಿಂಚನ ನೀಡುವ ಬೆರಳೆಣಿಕೆಯ ಗೆಳತಿಯರನ್ನು ಪಡೆದ ಬದುಕು ಈಗ ಭವ್ಯವೆನಿಸುತ್ತಿದೆ.

ಆದರೂ ಮನಸಲ್ಲಿ ಉಳಿಯುವುದು ಅಮ್ಮನ ಕೊನೆಯ ದಿನಗಳು. ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದ ಅಮ್ಮನನ್ನು ಕೊನೇ ದಿನಗಳಲ್ಲಿ ಆಶ್ರಮಕ್ಕೆ ಸೇರಿಸಿದೆವು. ಆಗಾಗ ಹೋಗಿ ಭೇಟಿಯಾಗಿ ಬರುತ್ತಿದ್ದೆವು. ಕರ್ತವ್ಯ ಎನ್ನುವ ರೀತಿಯಲ್ಲಿ ಮೆಲ್ಲಗೆ ಆಕೆಯೊಂದಿಗೆ ಮಾತನಾಡಲು ಶುರುಮಾಡಿದೆ. ಆಕೆಗೂ ಮೊದಲಿನಂತೆ ಕೋಪ, ಜಗಳ ಬೇಕಿರಲಿಲ್ಲ. ಅಣ್ಣನಿಗೆ ಮೊದಲಿನಿಂದಲೂ ಅಮ್ಮನ ಬಗ್ಗೆ ಮೃದುಧೋರಣೆ. ಅಮೆರಿಕವನ್ನು ಸುತ್ತಾಡಿಸಿಕೊಂಡು ಬಂದ. ಆಕೆ ಸಾಯುವ ಎರಡು ವಾರಗಳ ಮೊದಲು ಆಶ್ರಮಕ್ಕೆ ಹೋದೆ. ಸಿಟ್ಟಿಗೇಳಬೇಡ ಅಪ್ಪಾ, ಅಮ್ಮನೊಂದಿಗೆ ಮಾತನಾಡಬೇಕೆನ್ನಿಸುತ್ತಿದೆ ನನ್ನನ್ನು ಕ್ಷಮಿಸು ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತ ಅಮ್ಮನ ಕೈಹಿಡಿದೆ, ಅಪ್ಪಿದೆ. ನನ್ನ ಸ್ಪರ್ಶದಲ್ಲಿ ಪ್ರೀತಿಯಿದೆ ಎಂದು ನನಗೇ ಅನ್ನಿಸಿತು. ಆಕೆಯ ಮುಖದಲ್ಲಿ ಮಿಂಚು ಸುಳಿಯಿತು. ಅವಳ ನೋಟದಲ್ಲಿ ಅಂತಃಕರಣ ತುಂಬಿತ್ತು. ಮೊದಲ ಸಲ ಮಗಳಾಗಿ ಮಾತನಾಡಿಸಿದೆ. ಮುಂದೆ ಎರಡು ವಾರದಲ್ಲಿ ಅಮ್ಮ ತೀರಿ ಹೋದ ಸುದ್ದಿ ಬಂದಿತು. ಒಟ್ಟಿನಲ್ಲಿ ಇನ್ನಾದರೂ ಮೇಲೆ ಅಪ್ಪ ಅಮ್ಮ ಕೂಡಿಯೇ ಇರಲಿ ಎಂದು ಅಣ್ಣ ನಾನು ಮಾತನಾಡಿಕೊಂಡೆವು. ಆದರೂ ನನ್ನ ಬಾಯಿಯಿಂದ ಅವಳೆದುರು ಒಮ್ಮೆಯೂ ಅಮ್ಮಾ ಎಂಬ ಪದ ಬರಲೇ ಇಲ್ಲ.

ನಾನೆಂಬ ಪರಿಮಳದ ಹಾದಿಯಲಿ: ಸ್ವಾವಲಂಬನೆಗಿಂತ ದೊಡ್ಡ ಸುಖವುಂಟೆ?

 

Published On - 5:58 pm, Sat, 30 January 21