ಗದಗ: ಕೇವಲ ರೈಲು ನಿಲ್ದಾಣವಷ್ಟೇ ಆಗಿದ್ದ ಈ ಜಾಗ ಈಗ ಪ್ರವಾಸಿಗರ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕಪ್ಪತಗುಡ್ಡ, ಪ್ರಾಣಿ ಸಂಗ್ರಹಾಲಯದಂತೆ ಇದೂ ಸಹ ಈಗ ಜನರನ್ನು ಆಕರ್ಷಣೆಯತ್ತ ಕೊಂಡೊಯ್ಯುತ್ತಿದೆ. ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತವಾಗದೆ, ರೈಲಿಗಾಗಿ ಕಾಯುವ ಪ್ರಯಾಣಿಕರಿಗೆ ಮುದ ನೀಡುವ ನಿಲ್ದಾಣವನ್ನಾಗಿ ಆಕರ್ಷಣೆ ಮಾಡಲಾಗಿದೆ.
ಹೌದು, ಗದಗ ರೈಲು ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಲಾಗಿದ್ದು, ಇಷ್ಟು ದಿನ ಕೇವಲ ಕಪ್ಪತಗುಡ್ಡದ ಸೌಂದರ್ಯದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದ ಜನ ಈಗ ಈ ನಿಲ್ದಾಣದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಗದಗದ ರೈಲ್ವೆ ನಿಲ್ದಾಣದಲ್ಲಿ ವಿವಿಧ ರೀತಿಯ ಆಕರ್ಷಣೆಗಳಿದ್ದು, ರೈಲಿನ ನಿಲ್ದಾಣದ ಗೋಡೆಗಳ ಸುತ್ತಲೂ ಬಣ್ಣದ ಅಲಂಕಾರ ಮಾಡಲಾಗಿದೆ. ಒಂದು ಪ್ಲಾಟ್ ಫಾರ್ಮ್ನಿಂದ ಇನ್ನೊಂದು ಪ್ಲಾಟ್ ಫಾರ್ಮ್ಗೆ ಹೋಗಲು ಮಾಡಿರುವ ಸೇತುವೆಯ ಮೆಟ್ಟಿಲುಗಳನ್ನು ಹುಲಿಯ ಥ್ರೀಡಿ ಎಫೆಕ್ಟ್ ಕೊಡುವ ಚಿತ್ರದಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಮುಖ್ಯವಾಗಿ ಚಿಕ್ಕದೊಂದು ಮಾದರಿ ರೈಲು ನಿಲ್ದಾಣದ ವಸ್ತು ಸಂಗ್ರಹಾಲಯ ತೆರೆಯಲಾಗಿದ್ದು, ನಿಲ್ದಾಣದ ಸುತ್ತಲೂ ಮರಗಿಡಗಳಿಂದ ಕಂಗೊಳಿಸುವ ಚಿತ್ರಗಳನ್ನು ಬಿಡಿಸಲಾಗಿದ್ದು, ಪಕ್ಕದಲ್ಲೇ ಮಿನಿ ಗಾರ್ಡನ್ ಮಾಡಲಾಗಿದ್ದು ಮರ ಮತ್ತು ಕಲ್ಲಿನ ಮಂಚಗಳನ್ನು ಇಡಲಾಗಿದೆ. ಗಾರ್ಡನ್ ಒಳಗಡೆ ವಿವಿಧ ರೀತಿಯ ಕಲರ್ ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಜೊತೆಗೆ ಈ ಮಾದರಿ ಗಾರ್ಡನ್ನಲ್ಲಿ ಗದಗದವರಾದ ಸಂಗೀತ ದಿಗ್ಗಜ ಪಂಡಿತ ಭೀಮಸೇನ್ ಜೋಶಿಯವರ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಿದ್ದಾರೆ. ಹೀಗಾಗಿ ಗದಗದ ಜನರು ಹಾಗೂ ಪ್ರಯಾಣಿಕರು ತಾವು ಸುಮ್ಮನೆ ರೈಲಿಗಾಗಿ ಕಾಯುವ ಸಮಯದಲ್ಲಿ ಇವುಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ ಎಂದು ನಿಲ್ದಾಣಕ್ಕೆ ಭೇಟಿ ನೀಡಿದ ಉದ್ಯಮಿ ಅಶೋಕ್ ಬಾಗಮಾರ ಹೇಳಿದ್ದಾರೆ.
ಈ ರೈಲು ನಿಲ್ದಾಣಕ್ಕೆ ಬೇಕಾಗುವ ವಿದ್ಯುತ್ ಅನ್ನು ಶೇ.70 ರಷ್ಟು ಸೋಲಾರ್ ಮೂಲಕ ಉತ್ಪಾದನೆ ಮಾಡಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಿಲ್ದಾಣದ ಮೇಲ್ಛಾವಣಿಯಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿದ್ದು, ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಿದೆ. ಜೊತೆಗೆ ಗದಗ ರೈಲು ನಿಲ್ದಾಣದಿಂದ ಗುಂಡಕಲ್ವರೆಗೆ ವಿದ್ಯುತ್ ಚಾಲಿತ ರೈಲು ಓಡಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಹಾಗಾಗಿ ಇಂದು ಗದಗ ನಗರಕ್ಕೆ ಆಗಮಿಸಿದ ನೈರುತ್ಯ ವಲಯದ ಜನರಲ್ ಮ್ಯಾನೇಜರ್ ಶ್ರೀ ಅಜಯ್ ಕುಮಾರ್ ಸಿಂಗ್ ಅವರು ಗದಗ ರೈಲು ನಿಲ್ದಾಣ ಅಧಿಕಾರಿಗಳನ್ನ ಮುಕ್ತವಾಗಿ ಕೊಂಡಾಡಿದರು. ಇಡೀ ರೈಲು ನಿಲ್ದಾಣದಲ್ಲಿ ಸ್ವಚ್ಛತೆಯ ಜೊತೆಗೆ ಸುಂದರಗೊಳಿಸಿದ್ದಾರೆ. ಜೊತೆಗೆ ಆದಷ್ಟು ಬೇಗ ವಿದ್ಯುತ್ ಚಾಲಿತ ರೈಲುಗಳು ಓಡಾಟ ಮಾಡುತ್ತವೆ ಎಂದು ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಬಹುತೇಕ ರೈಲು ನಿಲ್ದಾಣಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಅದರಲ್ಲೂ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿರುತ್ತದೆ. ಆದರೆ ಗದಗದ ರೈಲು ನಿಲ್ದಾಣವನ್ನು ಒಮ್ಮೆ ನೋಡಿದರೆ ಇಲ್ಲಿನ ಅಧಿಕಾರಿಗಳ ಪ್ರಾಮಾಣಿಕ ಕೆಲಸದ ಅರಿವಾಗುತ್ತದೆ.
ರೈಲ್ವೇ ನಿಲ್ದಾಣದ ಮೆಷಿನ್ ಮೇಲೆ ಹಿಂದಿ ಫಲಕ: Twitterನಲ್ಲಿ ಶುರುವಾಯ್ತು ಭಾಷಾ ಸಮರ