National Farmers Day 2020 ಹೊಸ ಹೊಸ ಪ್ರಯೋಗಗಳೊಂದಿಗೆ ಮಾದರಿಯಾದ ರೈತ.. ಯಾರದು?

| Updated By: ಸಾಧು ಶ್ರೀನಾಥ್​

Updated on: Dec 23, 2020 | 2:31 PM

ಕಲಬುರಗಿಯಲ್ಲೊಬ್ಬ ರೈತ ಕೃಷಿಯಲ್ಲಿ ಹಲವು ಸಂಶೋಧನೆಗಳನ್ನು ಮಾಡುತ್ತಾ, ಹೊಸ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ನೆಮ್ಮದಿಯಲ್ಲಿದ್ದಾರೆ.

National Farmers Day 2020 ಹೊಸ ಹೊಸ ಪ್ರಯೋಗಗಳೊಂದಿಗೆ ಮಾದರಿಯಾದ ರೈತ.. ಯಾರದು?
ಬೆಳೆಯ ಚಿಗುರನ್ನು ಚಿವುಟುವ ಯಂತ್ರ
Follow us on

ಕಲಬುರಗಿ:  ಬಹಳಷ್ಟು ರೈತರು ಕೇವಲ ಕೃಷಿಯನ್ನು ಮಾಡಿದ್ರೆ, ಇನ್ನು ಕೆಲವರು ಕೃಷಿಯಲ್ಲಿ ಹೊಸ ಹೊಸ ಸಂಶೋಧನೆಗಳನ್ನು ನಡೆಸಿ, ಯಶಸ್ಸು  ಸಾಧಿಸುತ್ತಾ, ರೈತಾಪಿ ವರ್ಗಕ್ಕೆ ಆಸರೆಯಾಗಿದ್ದಾರೆ. ಅಂತಹದ್ದೇ ಓರ್ವ ರೈತ ಕಲಬುರಗಿ ಜಿಲ್ಲೆಯಲ್ಲಿದ್ದಾರೆ.

ರೈತರು ಮಳೆ ಜಾಸ್ತಿ ಬಂದ್ರೆ ಹೈರಾಣಾಗುತ್ತಾರೆ. ಬಾರದಿದ್ರೆ ಕಂಗಾಲಾಗುತ್ತಾರೆ. ಇದರ ಮಧ್ಯೆ ವಿದ್ಯುತ್ ಬೇರೆ ಕಣ್ಣಾಮುಚ್ಚಾಲೆ ಆಟ ಆಡುತ್ತದೆ. ಹೀಗಾಗಿ ಸಾಕಷ್ಟು ರೈತರು ಇತ್ತೀಚೆಗೆ ಕೃಷಿಗೆ ಕೈ ಮುಗಿದು ಬೇರೆ ಕೆಲಸಗಳತ್ತ ಗಮನಹರಿಸುತ್ತಿದ್ದಾರೆ. ಆದರೆ ಕಲಬುರಗಿಯಲ್ಲೊಬ್ಬ ರೈತ ಕೃಷಿಯಲ್ಲಿ ಹಲವು ಸಂಶೋಧನೆಗಳನ್ನು ಮಾಡುತ್ತಾ, ಹೊಸ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ನೆಮ್ಮದಿಯಲ್ಲಿದ್ದಾರೆ.

ಯಾವುದೇ ಸರ್ಕಾರಿ ನೌಕರನಿಗೂ ಕಮ್ಮಿಯಿಲ್ಲದಂತೆ ಜೀವನ ನಡೆಸುತ್ತಿದ್ದಾರೆ. ಕೃಷಿಯಲ್ಲಿ ಆತನ ಪ್ರಯೋಗಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಹೌದು, ಮನುಷ್ಯನಿಗೆ ಸಾಧಿಸಬೇಕು ಎನ್ನುವ ಛಲವಿದ್ದರೆ ಏನಾದರೂ ಮಾಡಬಹುದು. ಕೃಷಿಯಲ್ಲಿ ಸಾಧಿಸಿ ತೋರಿಸುತ್ತೇನೆ ಅಂತಾ ನಿರ್ಧರಿಸಿ ಯಶಸ್ಸು ಗಳಿಸಿದ ಈತನ ಛಲ ಇತರರಿಗೂ ಮಾದರಿಯಾಗಿದೆ.

ತಾಲೂಕಿನ ಹಾಲ ಸುಲ್ತಾನಪುರ ಗ್ರಾಮದ ನಿವಾಸಿಯಾಗಿರುವ ಶರಣಬಸಪ್ಪ ಪಾಟೀಲ್ ಕೃಷಿ ಮಾಡುತ್ತಾ, ಕೃಷಿಯಲ್ಲಿಯೇ ಅನೇಕ ಸಂಶೋಧನೆಗಳನ್ನು ಮಾಡುತ್ತಾ ನೆಮ್ಮದಿಯ ಜೀವನ ನಡೆಸುತ್ತಿರುವ ರೈತ. 48 ವರ್ಷದ ಈತ, ವಿವಿಧ ಸಾಧನಗಳನ್ನು ತಯಾರಿಸುವುದರಲ್ಲಿ ಬಿಝಿಯಾಗಿರುತ್ತಾರೆ.

ಇನ್ನು ಶರಣಬಸಪ್ಪ ಓದಿದ್ದು ಪಿಯುಸಿ ಮಾತ್ರ. ನಂತರ ಏಲೆಕ್ಟ್ರಿಕಲ್ ಮತ್ತು ಏಲೆಕ್ಟ್ರಾನಿಕ್ ಕೋರ್ಸ್ ಮಾಡಿದ್ದ ಶರಣಬಸಪ್ಪ ಮನಸ್ಸು ಮಾಡಿದ್ದರೆ ಕಂಪನಿಯಲ್ಲಿ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಿದ್ರೆ ಆ ಕಂಪನಿಗೆ ಮಾತ್ರ ಸೀಮಿತವಾಗಬೇಕಾಗುತ್ತದೆ ಎನ್ನುವ ಉದ್ದೇಶದಿಂದ ಯಾವುದೇ ಕೆಲಸಕ್ಕೆ ಸೇರದೆ ಕೃಷಿಯತ್ತ ಗಮನ ಹರಿಸಿದರು. ತಮ್ಮ 18 ಎಕರೆ ಜಮೀನಿನಲ್ಲಿ ಸಪೋಟಾ, ಸೀಬೆ ಕಾಯಿ, ನಿಂಬೆ ಕಾಯಿ, ತೆಂಗು, ಭತ್ತ ಸೇರಿದಂತೆ ಹತ್ತು ಹಲವು ತೋಟಗಾರಿಕೆ ಬೆಳೆಗಳನ್ನು ಮತ್ತು ಕೃಷಿ ಬೆಳೆಗಳನ್ನು ಬೆಳೆದಿದ್ದಾರೆ.

ಜಮೀನಿನಲ್ಲಿ ಸೈರನ್ ಆಳವಡಿಕೆ
ಬೆಳೆಗಳನ್ನು ದನ ಕರುಗಳು ಮತ್ತು ಪಕ್ಷಿಗಳು ಬಂದು ತಿನ್ನುತ್ತಿದ್ದವು. ತಿಂಗಳುಗಟ್ಟಲೆ ಕಷ್ಟ ಪಟ್ಟು ಬೆಳದಿದ್ದ ಬೆಳೆಯನ್ನು ಕ್ಷಣಮಾತ್ರದಲ್ಲಿಯೇ ಕಣ್ಮರೆಯಾಗುತ್ತಿತ್ತು. ಹೀಗಾಗಿ ತೋಟದಲ್ಲಿನ ಒಂದು ಕಂಬಕ್ಕೆ ಸೈರನ್ ಅಳವಡಿಸಿದರು. ಆ ಸೈರನ್ ಬೆಳಿಗ್ಗೆಯಿಂದ ಸಂಜೆವರೆಗೂ ಅಂಬುಲೆನ್ಸ್ ರೀತಿ ಕೂಗುತ್ತಲೇ ಇರುತ್ತದೆ. ಇದರ ಶಬ್ದಕ್ಕೆ ಭಯಗೊಂಡು ಯಾವುದೇ ಪಕ್ಷಿ ಮತ್ತು ಪ್ರಾಣಿಗಳು ಜಮೀನಿನ ಕಡೆ ಮುಖ ಮಾಡುತ್ತಿಲ್ಲ.

ಸೋಲರ್ ಬಳಕೆ
ಎಷ್ಟೇ ಕಾದು ಕುಳಿತರೂ ತೋಟಕ್ಕೆ ಬಂದು ಬೆಳೆ ಹಾನಿ ಮಾಡುವ ಪ್ರಾಣಿಗಳ ಕಾಟವನ್ನು ತಡೆಯಲು ಸಾಧ್ಯವಾಗದೇ ಇದ್ದಾಗ ಶರಣಬಸಪ್ಪ ತಮ್ಮ ಜಮೀನಿನ ಸುತ್ತಾ ಬೇಲಿಯನ್ನು ಆಳವಡಿಸಿದರು. ಅದಕ್ಕೆ ಸೋಲಾರ್​ನಿಂದ ವಿದ್ಯುತ್ ಕನೆಕ್ಷನ್ ನೀಡಿರುವುದರಿಂದ ಕಾಡು ಪ್ರಾಣಿಗಳು ತೋಟದತ್ತ ಸುಳಿಯುತ್ತಿಲ್ಲ.

ವಾಟರ್ ಮೀಟರ್ ಕಂಡುಹಿಡಿದ ರೈತ
ಬಿಸಿಲನಾಡು ಅಂತ ಪ್ರಸಿದ್ದವಾಗಿರುವ ಕಲಬುರಗಿಯಲ್ಲಿ ಕುಡಿಯುವ ನೀರಿಗೆ ಆಹಾಕಾರವಿದೆ. ಇಂತಹ ಸ್ಥಿತಿಯಲ್ಲಿ ನೀರಾವರಿ ಮೂಲಕ ಕೃಷಿ ಮಾಡುವುದು ತುಂಬಾ ಕಷ್ಟದ ಕೆಲಸ. ಹೀಗಾಗಿ ಇರುವ ನೀರನ್ನು ಹಿತಮಿತವಾಗಿ ಬಳಸುವ ಮೂಲಕ ಕೃಷಿಯನ್ನು ಹೇಗೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಯಾವ ಗಿಡಕ್ಕೆ ಎಷ್ಟು ನೀರು ಬೇಕು ಎನ್ನುವುದನ್ನು ಅರಿತುಕೊಂಡಿರುವ ಶರಣಬಸಪ್ಪ, ವಾಟರ್ ಮೀಟರ್ ಕಂಡುಹಿಡಿದಿದ್ದಾರೆ.

ನಿಂಬೆ ಗಿಡಗಳಿಗೆ ಮತ್ತು ತೆಂಗಿನ ಮರಗಳಿಗೆ ನೀರುಣಿಸಲು ಮೋಟಾರ್​ನಿಂದ ಪೈಪ್​ಲೈನ್​ ಮಾಡಿದ್ದಾರೆ. ಮರದ ಬದಿಯಲ್ಲಿ ಒಂದು ಬಕೆಟ್ ಇಡುತ್ತಾರೆ. ಅದಕ್ಕೊಂದು ನಲ್ಲಿ ತೊಡಿಸಿ, ಬಕೆಟ್ ಮೇಲ್ಭಾಗದಲ್ಲಿ ಟೈಮರ್ ಯಂತ್ರವನ್ನ ಕೂಡಿಸಿರುತ್ತಾರೆ. ನಲ್ಲಿಯನ್ನು ಚಿಕ್ಕದಾಗಿ ಆನ್ ಮಾಡಿದ ಬಳಿಕ ಅದು ನಿಧಾನ ಗತಿಯಲ್ಲಿ ತುಂಬುತ್ತಾ ನೀರು ಮೇಲೆ ಬರುತ್ತದೆ. ನೀರು ಮೇಲೆ ಬಂದಾಗ ಮೇಲ್ಭಾಗದಲ್ಲಿ ಕೂಡಿಸಿದ ಟೈಮರ್ ಯಂತ್ರಕ್ಕೆ ಬಂದು ತಲುಪುತ್ತದೆ. ಆಗ ಅದು ನೀರಿನಲ್ಲಿ ಮುಳುಗಿದಾಗ ತನ್ನಷ್ಟಕ್ಕೆ ತಾನೇ ಬಂದ್ ಆಗುತ್ತದೆ. ಇದರಿಂದ ನೀರು ವಿನಾಕಾರಣ ಹಾಳಾಗುವುದನ್ನು ತಡೆಗಟ್ಟಿದ್ದಾರೆ.

ಕೆಮಿಕಲ್ ಗೊಬ್ಬರಕ್ಕೆ ಗುಡ್​ ಬೈ
ಕೆಮಿಕಲ್ ಗೊಬ್ಬರಕ್ಕೆ ಸಲಾಂ ಹೇಳಿರುವ ಈತ ಎರೆಹುಳ ಗೊಬ್ಬರವನ್ನು ತಯಾರಿಸಿ ತೋಟಗಾರಿಕೆ ಬೆಳೆಗಳಿಗೆ, ಕೃಷಿ ಬೆಳೆಗಳಿಗೆ ಹಾಕಿ ಫಲವತ್ತಾದ ಫಸಲನ್ನು ಪಡೆಯುತ್ತಿದ್ದಾರೆ. ಅಲ್ಲದೇ ತಮ್ಮ ಜಮೀನಿನಲ್ಲಿ ಬೆಳೆದಂತಹ ತೊಗರಿ ಬೆಳೆಯ ಚಿಗುರನ್ನು ಚಿವುಟಿದರೆ ಬೆಳೆ ಸಮೃದ್ಧಿಯಾಗುತ್ತದೆ ಎಂದು ಕೃಷಿ ಅಧಿಕಾರಿಗಳು ಸಲಹೆ ಕೊಟ್ಟಿದ್ದರು. ಆದರೆ ಚಿವುಟುವ ಯಂತ್ರ ಖರೀದಿಸಬೇಕಾದರೆ ಹೆಚ್ಚು ಹಣ ವ್ಯಯಿಸಬೇಕೆಂದು ಯೋಚಿಸಿ, ಮನೆಯಲ್ಲಿಯೇ ಇದ್ದ ಸಣ್ಣ ನೀರು ಎತ್ತುವ ಮೋಟಾರ್ ಪ್ಲೇಟ್​ಗೆ 3 ಬ್ಲೇಡ್​ಗಳನ್ನು ಅಳವಡಿಸಿ ಅದಕ್ಕೆ ಒಂದು ಚಿಕ್ಕದಾದ ಯಂತ್ರವನ್ನು ಸೇರಿಸಿ ಬ್ಯಾಟರಿ ಮೂಲಕ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಹಲವು ಕಡೆಗಳಿಂದ ಭೇಟಿ
ವಿಶೇಷವೆಂದರೆ ಇವರ ಕೃಷಿಯನ್ನು ನೋಡಲು ರಾಜ್ಯದ ವಿವಿಧ ಕಡೆಗಳಿಂದ ಬಂದು ಮಾಹಿತಿಯನ್ನು ಪಡೆದುಕೊಂಡು ಹೋಗಿದ್ದಾರೆ. ಇವರ ಸಾಧನೆಗೆ ಕರ್ನಾಟಕ ಸರ್ಕಾರದಿಂದ ಕೃಷಿ ಪಂಡಿತ ಪ್ರಶಸ್ತಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ರೈತ ವಿಜ್ಞಾನಿ ಪ್ರಶಸ್ತಿ, ದೂರದರ್ಶನ ಚಂದನ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರಗಳು ನೀಡಿ ಗೌರವಿಸಿವೆ. ಜೊತೆಗೆ ಹಲವು ಸಂಘ ಸಂಸ್ಥೆಗಳು ಸಾಧನೆ ಮೆಚ್ಚಿ ಪ್ರಶಸ್ತಿ ನೀಡಿ ಸತ್ಕರಿಸಿವೆ.

Published On - 2:31 pm, Wed, 23 December 20