ಬೆಂಗಳೂರು: ಕೊವಿಡ್-19 ಸಂಕಷ್ಟ ಮುಗಿಯಿತು ಅನ್ನುವಷ್ಟರಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಕೊರೊನಾ ಎರಡನೇ ಅಲೆಯ ಬಗ್ಗೆ ಚರ್ಚೆ ಆರಂಭವಾಗಿದೆ. ವರ್ಷದ ಆರಂಭದಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ಕೊವಿಡ್-19 ಮತ್ತೆ ಹರಡಿದರೆ ಉಂಟುಮಾಡಬಹುದಾದ ಪರಿಣಾಮಗಳೇನು? ಜನರು ಏನು ಸುರಕ್ಷತೆ ಕೈಗೊಳ್ಳಬಹುದು? ಕೊರೊನಾ ರೂಪಾಂತರ ಅಂದರೇನು? ಅದು ತಂದೊಡ್ಡುವ ಅಪಾಯ, ತೀವ್ರತೆ ಎಷ್ಟು? ಹೇಗೆ? ಹರಡುವಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾಗಲಿದೆಯಾ? ಈ ಎಲ್ಲಾ ಪ್ರಶ್ನೆಗಳು ಜನರ ಮನದಲ್ಲಿ ಮೂಡಿರಬಹುದು.
ಈ ವಿಚಾರಗಳನ್ನು ಕೇಂದ್ರೀಕರಿಸಿ ಮಂಗಳವಾರ, ಟಿವಿ9 ಫೇಸ್ಬುಕ್ ಲೈವ್ ಸಂವಾದ ನಡೆಸಿತು. ಶ್ವಾಸಕೋಶ ತಜ್ಞ ಡಾ. ಚೇತನ್, ವೈದ್ಯರಾದ ಡಾ. ಅಂಜನಪ್ಪ ಹಾಗೂ ಸಾಂಕ್ರಾಮಿಕ ರೋಗತಜ್ಞ ಡಾ. ಸುನಿಲ್ ಸಂವಾದದಲ್ಲಿ ಭಾಗವಹಿಸಿದ್ದರು. ಆ್ಯಂಕರ್ ಆನಂದ್ ಬುರ್ಲಿ ಕಾರ್ಯಕ್ರಮ ನಡೆಸಿಕೊಟ್ಟರು.
ಕೊರೊನಾ ಪ್ರಮಾಣ ಜಾಸ್ತಿಯಾಗಲಿದೆ, ರೋಗದ ತೀವ್ರತೆ ಕಡಿಮೆಯಾಗಿರುತ್ತದೆ ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ವಾಸಕೋಶ ತಜ್ಞ ಡಾ. ಚೇತನ್, ಎಲ್ಲಾ ದೇಶಗಳಲ್ಲೂ ಕೊರೊನಾ ವೈರಾಣು ರೂಪಾಂತರ ಆಗಿರುತ್ತದೆ. ಬದಲಾದ ರೂಪದ ವೈರಾಣು ಶೇ. 70ರಷ್ಟು ವೇಗವಾಗಿ ಹಬ್ಬುತ್ತದೆ ಎಂಬುದು ಗಮನಿಸಬೇಕಾದ ಅಂಶ. ಆದರೆ ವೈರಸ್ನ ಶಕ್ತಿ ಕಡಿಮೆಯಾಗಿರುತ್ತದೆ. ಕೊವಿಡ್-19 ಹರಡುವ ಪ್ರಮಾಣ ಕಡಿಮೆ ಮಾಡುವ ಪ್ರಯತ್ನಕ್ಕಿಂತ, ಹರಡಿದ ಮೇಲೆ ಏನು ಮಾಡಬೇಕು ಎಂಬ ಬಗ್ಗೆ ಗಮಹರಿಸಬೇಕು. ರೋಗಲಕ್ಷಣಗಳ ಬಗ್ಗೆ ಯೋಚಿಸಬೇಕು. ತಪ್ಪು ತಿಳುವಳಿಕೆ ಕಡಿಮೆಯಾಗಬೇಕು ಎಂದು ಹೇಳಿದರು.
ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ನಿಯಮಾವಳಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಮ್ಮ ಜನರ ಆರ್ಥಿಕ ಶಕ್ತಿ, ಜೀವನಶೈಲಿ ನೋಡಿ ಪ್ರೊಟೊಕಾಲ್ ರೂಪುರೇಷೆ ನಿರ್ಧಾರ ಕೈಗೊಳ್ಳಬೇಕು. ಇನ್ನೂ ಕಾಂಟಾಕ್ಟ್ ಟ್ರೇಸಿಂಗ್ ವಿಧಾನ ಅನುಸರಿಸುವುದು ಕಷ್ಟ. ಹಾಗಾಗಿ ಕೊವಿಡ್-19 ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ ಪಲ್ಸ್ ಆಕ್ಸಿಮೀಟರ್ ಬಳಸುವ ಅಭ್ಯಾಸವನ್ನು ಎಲ್ಲರೂ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ಗೊಂದಲಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಕೊರೊನಾ ಎರಡನೇ ಅಲೆಯಿಂದ ರೋಗಲಕ್ಷಣಗಳಲ್ಲಿ ಬದಲಾವಣೆ ಆಗಲಿದೆಯೇ ಎಂಬ ಬಗ್ಗೆ ಡಾ. ಚೇತನ್ ಉತ್ತರಿಸಿದರು. ಶೇ. 95ರಷ್ಟು ಅದೇ ಲಕ್ಷಣಗಳಿರುತ್ತವೆ. ಸಣ್ಣಪುಟ್ಟ ಬದಲಾವಣೆ ಆಗಬಹುದು. ಮನೆ ಔಷಧ, ಸಾಮಾಜಿಕ ಜಾಲತಾಣಗಳನ್ನು ಎಂದು ಜನರು ಸಮಯ ಹಾಳುಮಾಡಬಾರದು. ರೋಗಲಕ್ಷಣಗಳು ಕಂಡುಬಂದರೆ ಒಂದೆರಡು ದಿನಗಳಲ್ಲೇ ಆಸ್ಪತ್ರೆಗೆ ಬಂದು ಔಷಧೋಪಚಾರ ಪಡೆದುಕೊಳ್ಳಬೇಕು ಎಂದು ಜನರಿಗೆ ಮಾಹಿತಿ ನೀಡಿದರು.
ಸಂವಾದದಲ್ಲಿ ಭಾಗವಹಿಸಿದ ಸಾಂಕ್ರಾಮಿಕ ರೋಗತಜ್ಞ ಡಾ. ಸುನಿಲ್ ವೈರಾಣು ರೂಪಾಂತರದ ಬಗ್ಗೆ ಮಾಹಿತಿ ನೀಡಿದರು. ಕೊವಿಡ್-19 ಹರಡುವ ಪ್ರಮಾಣ ಶೇ. 70ರಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಆದರೆ ಇದು ಮ್ಯಾಥಮ್ಯಾಟಿಕಲ್ ಮಾಡ್ಯೂಲ್ ಮೂಲಕ ತಿಳಿದ ಮಾಹಿತಿ. ಪ್ರಯೋಗಾಲಯ ಪರೀಕ್ಷೆ ಮೂಲಕ ಅಲ್ಲ. ಆದರೆ, ಹರಡುವ ವೇಗ ಹೆಚ್ಚಾಗುತ್ತದೆ ಎಂಬುದು ಸತ್ಯ ಎಂದು ಹೇಳಿದರು.
ರೋಗ ಹರಡುವ ಪ್ರಮಾಣ ಹೆಚ್ಚಾದರೂ ರೋಗದಿಂದ ಉಂಟಾಗುವ ಅಪಾಯ ಕಡಿಮೆಯಾಗಿದೆ. ವೈರಾಣುವಿನ ಶಕ್ತಿ ಕಡಿಮೆ ಆಗಿದೆ. ಸಾವು ನೋವುಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಆದರೆ, ನಾವು ನಿರ್ಲಕ್ಷ್ಯ ವಹಿಸಬಾರದು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳಿದರು.
ಹಿರಿಯ ವೈದ್ಯರಾದ ಡಾ. ಅಂಜನಪ್ಪ ಮಾತನಾಡಿ, ಪ್ರತಿಯೊಂದು ವೃರಾಣುವಿಗೆ ಒಂದು ಗುಣಲಕ್ಷಣ ಇರುತ್ತದೆ. ಅವುಗಳು ಕೂಡ ಡ್ರಿಫ್ಟ್ ಅಥವಾ ಶಿಫ್ಟ್ (ರೂಪಾಂತರ) ಆಗುತ್ತವೆ. ಕೊರೊನಾ ವೈರಾಣು ರೂಪಾಂತರ ಹೊಂದಿದರೂ ಅದು ಶ್ವಾಸಕೋಸಕ್ಕೆ ಸಂಬಂಧಿಸಿದ ಹಾನಿಯನ್ನೇ ಮಾಡುತ್ತದೆ. ಅಂದರೆ, ಅದು ರೆಸ್ಪಿರೇಟರಿ ವೈರಾಣುವೇ ಆಗಿರಲಿದೆ. ಈ ಮೊದಲು ನಾವು ತಿಳಿದುಕೊಂಡಂತೆ, ಮೂಗು, ಕೈ, ಬಾಯಿ, ಕಣ್ಣುಗಳಿಂದಲೇ ವೈರಾಣು ಹರಡುತ್ತದೆ. ಹಾಗಾಗದಂತೆ ನಾವು ಜಾಗ್ರತೆ ವಹಿಸಬೇಕು. ನಮ್ಮನ್ನು ನಾವು ರಕ್ಷಿಸಬೇಕು ಎಂದು ತಿಳಿಸಿದರು.
ಕೊರೊನಾ ರೂಪಾಂತರ: ಬ್ರಿಟನ್ನಿಂದ ಆಗಮಿಸುವವರ ತಪಾಸಣೆಗಾಗಿ ಕೇಂದ್ರದಿಂದ ನಿಯಮಾವಳಿ ಬಿಡುಗಡೆ
Published On - 7:25 pm, Tue, 22 December 20