ಶ್ರೀನಿವಾಸ ರಾಮಾನುಜನ್ರನ್ನು The Man Who Knew Infinity ಸಿನಿಮಾ, ಪುಸ್ತಕದಲ್ಲಿ ಕಂಡಂತೆ
ರಾಮಾನುಜನ್ ಅವರನ್ನು ‘ಅನಂತ ಅರಿತ ಮನುಷ್ಯ’ (The Man Who Knew Infinity) ಎಂದು ಜಗತ್ತು ಗುರುತಿಸಿದೆ. ಆ ಹೆಸರಿನಲ್ಲಿ ರಾಬರ್ಟ್ ಕನಿಗೆಲ್ ಎಂಬ ಅಮೆರಿಕಾದ ಲೇಖಕ ರಾಮಾನುಜನ್ ಆತ್ಮಕಥೆಯನ್ನು ಬರೆದಿದ್ದಾರೆ. ಅದೇ ಪುಸ್ತಕ ಆಧರಿಸಿ ಚಲನಚಿತ್ರವೂ ಬಂದಿದೆ.
ಇಂದು ಶ್ರೀನಿವಾಸ ರಾಮಾನುಜನ್ ಹುಟ್ಟಿದ ದಿನ. ಈ ದಿನವನ್ನು ಗಣಿತ ದಿನವನ್ನಾಗಿ ನಾವು ಆಚರಿಸುತ್ತೇವೆ. ರಾಮಾನುಜನ್ ಅವರನ್ನು ‘ಅನಂತ ಅರಿತ ಮನುಷ್ಯ’ (The Man Who Knew Infinity) ಎಂದು ಜಗತ್ತು ಗುರುತಿಸಿದೆ. ಆ ಹೆಸರಿನಲ್ಲಿ ರಾಬರ್ಟ್ ಕನಿಗೆಲ್ ಎಂಬ ಅಮೆರಿಕಾದ ಲೇಖಕ ರಾಮಾನುಜನ್ ಆತ್ಮಕಥೆಯನ್ನು ಬರೆದಿದ್ದಾರೆ. ಅದೇ ಪುಸ್ತಕ ಆಧರಿಸಿ ಚಲನಚಿತ್ರವೂ ಬಂದಿದೆ.
ಅಪ್ಪಟ ಭಾರತೀಯ ಸಾಂಪ್ರದಾಯ ಮನೆತನದ ಶ್ರೀನಿವಾಸ ರಾಮಾನುಜನ್, 1900ರ ಸುಮಾರಿಗೆ ಇಂಗ್ಲೆಂಡ್ಗೆ ಹೋದದ್ದು ವಿಶೇಷ. ಅಲ್ಲಿ ತಮ್ಮ ಸಂಪ್ರದಾಯವನ್ನು ಕಷ್ಟಪಟ್ಟಾದರೂ ಉಳಿಸಿಕೊಂಡು ಬದುಕಿದ್ದು ಇನ್ನೂ ವಿಶೇಷ. ಅವರು ಸಸ್ಯಾಹಾರಿಯಾಗಿದ್ದವರು. ಆಹಾರದ ವಿಚಾರದಲ್ಲಿ ಎಂದೂ ಹೊಂದಾಣಿಕೆ ಮಾಡಿಕೊಂಡವರಲ್ಲ. ಇತರರಿಗೆ ಸೆಲ್ಯೂಟ್ ಹೊಡೆದು ಬದುಕಿದವರಲ್ಲ. ಆ ಕಾರಣದಿಂದ ತಮ್ಮ ಮೇಲೆ ಅಥವಾ ತಾವು ನೆಚ್ಚಿಕೊಂಡಿದ್ದ ಶಕ್ತಿಯ ಮೇಲೆ (ದೇವರೂ ಹೌದು) ಬಲವಾದ ನಂಬಿಕೆ ಇರಿಸಿದ್ದ ರಾಮಾನುಜನ್ ತುಸು ಒರಟರಂತೆಯೇ ಕಂಡರು. ಹಠವಾದಿ ಅನಿಸಿದರು. ಅದು ಅವರ ಶಕ್ತಿ ಅಥವಾ ಅವರ ನಂಬಿಕೆಗಿದ್ದ ಶಕ್ತಿ.
ಅವರ ಮಡದಿ ಮತ್ತು ತಾಯಿಯ ಬಗೆಗಿದ್ದ ಮಮಕಾರ ಕಂಡಾಗ ರಾಮಾನುಜನ್ ಆಂತರ್ಯದಲ್ಲಿ ಬಹಳ ಮೃದು ಸ್ವಭಾವದ ವ್ಯಕ್ತಿಯಾಗಿದ್ದಿರಬಹುದು ಅನಿಸಿತು. ರಾಮಾನುಜನ್ ತಮ್ಮ ಜೀವನವನ್ನು ಎದುರಿಸಿದ ರೀತಿ, ತಮ್ಮ ಸೂತ್ರ, ಗಣಿತ, ಲೆಕ್ಕಾಚಾರಗಳು ಎಲ್ಲವನ್ನೂ ದೇವರು ಕೊಟ್ಟದ್ದು, ಕನಸಲ್ಲಿ ದೇವರು ಹೇಳಿದ್ದು ಎಂಬಂತೆ ಪ್ರಕಟ ಪಡಿಸುತ್ತಿದ್ದ ರೀತಿ, ನಡವಳಿಕೆ, ನಂಬಿಕೆಗಳ ಬಗ್ಗೆ ಗೌರವಭಾವ ಮೂಡಿತು. ಇಷ್ಟು ದೊಡ್ಡ ಗಣಿತಜ್ಞ ನಮ್ಮ ದೇಶದವರು ಎಂಬುದೇ ನಮಗೆ ಹೆಮ್ಮೆ. ಇದು ‘The Man Who Knew Infinity’ ಸಿನಿಮಾ ನೋಡಿ ಶ್ರೀನಿವಾಸ್ ರಾಮಾನುಜನ್ ಬಗ್ಗೆ ಅರ್ಪಣಾ ಹೆಚ್.ಎಸ್. ಅಭಿವ್ಯಕ್ತಿಸಿದ ಮಾತುಗಳು.
ಗಣಿತ ದಿನವಾದ ಇಂದು, ‘The Man Who Knew Infinity’ ಪುಸ್ತಕ ಮತ್ತು ಸಿನಿಮಾದ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ತಂಡ ಸಂವಾದ ನಡೆಸಿತು. ಪುಸ್ತಕದ ಕುರಿತಾಗಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಪ್ರಕಾಶ್ ನಾಯಕ್ ಮತ್ತು ಸಿನಿಮಾದ ಬಗ್ಗೆ ಬರಹಗಾರ್ತಿ, ಬೆಂಗಳೂರು ಶಾರ್ಟ್ ಫಿಲ್ಮ್ ಫೆಸ್ಟಿವಲ್ನ ಪ್ರೈಮರಿ ಜ್ಯೂರಿ ಅರ್ಪಣಾ ಹೆಚ್.ಎಸ್. ಮಾತನಾಡಿದರು.
The Man Who Knew Infinityಯನ್ನು ಒಂದು ಅತ್ಯುತ್ತಮ ಆತ್ಮಕಥೆ ಎಂದು ಪರಿಗಣಿಸಬಹುದು. ಅಮೆರಿಕಾದ ಖ್ಯಾತ ಬಯೋಗ್ರಾಫರ್ ಈ ಪುಸ್ತಕದ ಲೇಖಕರು. ಗಣಿತವನ್ನು, ರಾಮಾನುಜನ್ ಅವರ ಸೂತ್ರಗಳನ್ನು ಹಾಗೂ ರಾಮಾನುಜನ್ ಬದುಕನ್ನು ಜೊತೆಯಾಗಿ ವಿವರಿಸುವುದು ಅಷ್ಟು ಸುಲಭವಲ್ಲ. ಅದನ್ನು ಓದುಗನಿಗೆ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಹಿಡಿದಿಟ್ಟದ್ದು ಈ ಕೃತಿ ಎಂದು ಪ್ರಕಾಶ್ ನಾಯಕ್ ತಿಳಿಸಿದರು. ಪುಸ್ತಕದಲ್ಲಿನ ರಾಮಾನುಜನ್ ಬದುಕಿನ ಚಿತ್ರಣವನ್ನು ನಮ್ಮೊಂದಿಗೆ ಮೆಲುಕು ಹಾಕಿದರು.
ಗಣಿತದ ಕಲಿಕೆಯಲ್ಲಿ ಮುಂದಿದ್ದ ರಾಮಾನುಜನ್, ಇತರ ವಿಷಯಗಳಲ್ಲಿ ಅಷ್ಟಾಗಿ ಆಸಕ್ತಿ ಹೊಂದಿರಲಿಲ್ಲ. ಆರೋಗ್ಯದಲ್ಲಿ ಅವರಿಗೆ ಮತ್ತು ಅವರ ಸಹೋದರರಿಗೆ ಸಮಸ್ಯೆಗಳು ಬಾಧಿಸುತ್ತಲೇ ಇತ್ತು. ಬಡತನ, ಕಲಿಕೆ, ಗಣಿತದ ಬಗೆಗಿನ ಆಸಕ್ತಿ, ಇತರ ವಿಷಯಗಳ ಮೇಲೆ ನಿರಾಸಕ್ತಿ, ಆರೋಗ್ಯ ತೊಂದರೆ ಎಲ್ಲಾ ಸೇರಿ ರಾಮಾನುಜನ್ ಬಾಲ್ಯದಲ್ಲಿ ಸಂಕೀರ್ಣ ಪರಿಸ್ಥಿತಿ ಇದ್ದದ್ದನ್ನು ಅರ್ಥಮಾಡಿಕೊಳ್ಳಬಹುದು ಎಂದು ಪ್ರಕಾಶ್ ನಾಯಕ್ ವಿವರಿಸಿದರು.
ಹಾರ್ಡಿ ಎಂಬ ಗಣಿತಜ್ಞ ರಾಮಾನುಜನ್ರನ್ನು ಗಂಭೀರವಾಗಿ ಪರಿಗಣಿಸಿದ್ದು, ಹಾರ್ಡಿ ಎಷ್ಟು ನಾಸ್ತಿಕರೋ ರಾಮಾನುಜನ್ ಅಷ್ಟೇ ಆಸ್ತಿಕರಾಗಿದ್ದಿದ್ದು, ರಾಮಾನುಜನ್ಗೆ ಈ ಗಣಿತ ಲೆಕ್ಕಾಚಾರಗಳೆಲ್ಲಾ ಹೇಗೆ ಗೊತ್ತಾಗುತ್ತಿದೆ ಎಂದು ಹಾರ್ಡಿಗೂ ಗೊಂದಲವಾದದ್ದು ಹೀಗೆ ಹಾರ್ಡಿ-ರಾಮಾನುಜನ್ ಘಟನಾವಳಿಗಳನ್ನು ತಿಳಿಸಿದರು.
ಸಿನಿಮಾಕ್ಕೆ ಹೋಲಿಸಿದರೆ ಪುಸ್ತಕ ಹೆಚ್ಚು ಪರಿಣಾಮಕಾರಿ ಎಂದು ಪ್ರಕಾಶ್ ಅಭಿಪ್ರಾಯಪಟ್ಟರು. ತಂಜಾವೂರು ಮರುಸೃಷ್ಟಿ ಸಿನಿಮಾದಲ್ಲಿ ಪರಿಪೂರ್ಣವಾಗಿ ಸಾಧ್ಯವಾಗಿಲ್ಲ. ಸಿನಿಮಾಕ್ಕೆ ಎಷ್ಟು ಸಾಧ್ಯವೋ ಅಷ್ಟು ವಿಚಾರಗಳನ್ನು ಅದು ಒಳಗೊಂಡಿದೆ. ಆದರೆ ಪುಸ್ತಕ ಓದುವ ಅನುಭವಕ್ಕೆ ಹೋಲಿಸಿದರೆ ಸಿನಿಮಾ ಪುಸ್ತಕದ ಟ್ರೈಲರ್ ಇದ್ದಂತಿದೆ ಎಂದು ಹೇಳಿದರು.
The Man Who Knew Infinity ಸಿನಿಮಾ ಅದ್ಭುತ ಆತ್ಮಕಥನ ಅಂತಲ್ಲ. ಇದಕ್ಕಿಂತ ಒಳ್ಳೆಯ ಬಯೊಪಿಕ್ಗಳು ಬಂದಿವೆ. ಆದರೆ, ರಿಯಲಿಸ್ಟಿಕ್ ಮಾದರಿಯಲ್ಲಿ ಚಿತ್ರತಂಡದ ಪ್ರಾಮಾಣಿಕ ಪ್ರಯತ್ನವನ್ನು ನಾವು ಕಾಣಬಹುದು. ವಿಷಯವನ್ನು ನಾಟಕೀಯವಾಗಿ, ವಿಜೃಂಭಿಸಿ ತೋರಿಸಿಲ್ಲ ಎಂದು ಅರ್ಪಣಾ ಅಭಿಪ್ರಾಯಪಟ್ಟರು.
ಒಂದೊಮ್ಮೆ ಬೇಸರ, ವಿಷಾದ ಭಾವಗಳೇ ಹೆಚ್ಚಾಗಿರುವ ಸಿನಿಮಾ ಇದು ಎಂದು ಅನಿಸುತ್ತದೆ. ಮದುವೆ ಆದ ತಕ್ಷಣ ರಾಮಾನುಜನ್ ಇಂಗ್ಲೆಂಡ್ಗೆ ಹೋಗುತ್ತಾರೆ. ಮಡದಿ, ತಾಯಿ, ಮನೆ ಮತ್ತು ದೇಶವನ್ನು ತೊರೆದ ಸನ್ನಿವೇಶ ಕಾಡುತ್ತದೆ. ಒಟ್ಟಂದದಲ್ಲಿ ಕಥೆಗೆ ತಕ್ಕುದಾದ ಚಿತ್ರಕತೆ, ಛಾಯಾಗ್ರಹಣ ಸಿನಿಮಾ ಅನುಭವವನ್ನು ಸುಂದರವಾಗಿ ಕಟ್ಟಿಕೊಡುತ್ತದೆ. ಭಾರತ-ಇಂಗ್ಲೆಂಡ್ನ ಸಾಂಸ್ಕೃತಿಕ ಭಿನ್ನತೆಯನ್ನು ಸಿನಿಮಾದಲ್ಲಿ ತೋರಿಸಿದ್ದು ತುಂಬಾ ಚೆನ್ನಾಗಿತ್ತು ಎಂದು ಅರ್ಪಣಾ ಹೇಳಿದರು.
ಆರೋಗ್ಯ ಸಮಸ್ಯೆ ರಾಮಾನುಜನ್ರನ್ನು ದೈಹಿಕವಾಗಿ ಕಾಡಿದರೆ, ಗೆಳೆತನ, ಕುಟುಂಬದಿಂದ ದೂರವಾಗಿ, ಸಾಂಸ್ಕೃತಿಕ ಭಿನ್ನ ಸನ್ನಿವೇಶದಲ್ಲಿ ಬದುಕಿದ್ದು ಅವರನ್ನು ಮಾನಸಿಕವಾಗಿ ಕಾಡಿರಬಹುದು. ಆ ಚಿತ್ರಣಗಳನ್ನು ಸಿನಿಮಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತು. ರಾಮಾನುಜನ್ ಸಾಧನೆ ಅರ್ಥವಾಗುವಂತಿತ್ತು. ಭಾರತೀಯರು ಈ ಸಿನಿಮಾ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
The Man Who Knew Infinity ಪುಸ್ತಕದ ವಿವರಗಳು ಪುಸ್ತಕವನ್ನು ರಾಬರ್ಟ್ ಕನಿಗೆಲ್ ಎಂಬ ಯುಎಸ್ ಲೇಖಕ ಬರೆದಿದ್ದಾರೆ. 1991ರಲ್ಲಿ ಮೊದಲ ಪ್ರಕಟಣೆ ಕಂಡಿರುವ ಈ ಕೃತಿಯನ್ನು, ವಾಷಿಂಗ್ಟನ್ ಸ್ಕ್ವೇರ್ ಪ್ರೆಸ್ ಪ್ರಕಟಿಸಿದೆ. ಇದೇ ಕೃತಿಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ.
The Man Who Knew Infinity ಸಿನಿಮಾ ವಿವರಗಳು ಬಯೋಗ್ರಾಫಿಕಲ್ ಡ್ರಾಮಾ ಜಾನರ್ನ ಇಂಗ್ಲಿಷ್ ಭಾಷೆಯ ಈ ಸಿನಿಮಾ, 2015ರಲ್ಲಿ ತೆರೆಕಂಡಿತು. ದೇವ್ ಪಟೇಲ್ ರಾಮಾನುಜನ್ ಪಾತ್ರದಲ್ಲಿ ಮತ್ತು ಜೆರೆಮಿ ಐರನ್ಸ್ ಹಾರ್ಡಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾಥ್ಯೂ ಬ್ರೌನ್ ಎಂಬವರು ನಿರ್ದೇಶಿಸಿದ ಚಿತ್ರಕ್ಕೆ ಕೋಬಿ ಬ್ರೌನ್ ಸಂಗೀತ ಮತ್ತು ಲ್ಯಾರಿ ಸ್ಮಿತ್ ಛಾಯಾಗ್ರಹಣ ಮಾಡಿದ್ದಾರೆ. ಪ್ರೆಸ್ಮ್ಯಾನ್ ಫಿಲ್ಮ್ ಚಿತ್ರ ನಿರ್ಮಿಸಿದೆ. ಇಂಗ್ಲೆಂಡ್ ಮತ್ತು ಭಾರತದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದುಕೊಂಡಿದೆ.
Explainer | ಶ್ರೀನಿವಾಸ ರಾಮಾನುಜನ್ ಯಾರು? ಡಿ.22ರಂದು ರಾಷ್ಟ್ರೀಯ ಗಣಿತ ದಿನ ಆಚರಿಸುವುದು ಏಕೆ?
Published On - 5:40 pm, Tue, 22 December 20