ಕನ್ನಡದಲ್ಲೇ ಕಲಿಯಿರಿ ಗಣಿತದ ಕಾಗುಣಿತ.. ದತ್ತಾ ಮೇಷ್ಟ್ರ ನಿರರ್ಗಳ ಕಂಠದಲ್ಲಿ ಪಾಠ ಕೇಳೋದೇ ಬಲುಹಿತ!
ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಥೇಟ್ ಹಳ್ಳಿ ಮಾಸ್ತರರ ಗೆಟಪ್ನಲ್ಲಿ ಫೇಸ್ಬುಕ್ ಮೂಲಕ ಪಾಠ ಆರಂಭಿಸಿದ ದತ್ತಾ ಅವರಿಗೆ ಆರಂಭದಲ್ಲೇ ಪ್ರಶಂಸೆಯ ಮಹಾಪೂರ ಹರಿದುಬಂತು. ಸಿಕ್ಕ ಪ್ರತಿಕ್ರಿಯೆಗಳಿಂದ ಉತ್ಸುಕರಾಗಿ ದತ್ತಾ ಟ್ಯುಟೋರಿಯಲ್ಸ್ ಹೆಸರಿನ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಇಂದು ಗಣಿತ ದಿನಾಚರಣೆ. ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರನ್ನು ಸ್ಮರಿಸಿಕೊಳ್ಳುವ ದಿನ. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಭಾಗಲಬ್ಧ, ಶೇಷ, ಭಿನ್ನರಾಶಿ, ಅಂಶ, ಛೇದ.. ಇತ್ಯಾದಿ ಪದಗಳನ್ನು ಮರೆತಿದ್ದರೆ ಈ ನೆಪದಲ್ಲಾದರೂ ಒಮ್ಮೆ ನೆನಪು ಮಾಡಿಕೊಳ್ಳಿ.
ಗಣಿತದ ಅಂಕೆ-ಸಂಖ್ಯೆಗಳಿಗೆ ಭಾಷೆಯ ಹಂಗಿಲ್ಲದೇ ಇರಬಹುದು. ಆದರೆ, ಗಣಿತವನ್ನು ಕಲಿಸಲು, ಅದನ್ನು ಅರ್ಥ ಮಾಡಿಸಲು ಭಾಷೆ ಬೇಕು. ನೀವು ಅಚ್ಚ ಕನ್ನಡ ಮೀಡಿಯಮ್ಮಿನ ವಿದ್ಯಾರ್ಥಿಯಾಗಿದ್ದರೆ ಒಂದೊಂದ್ಲಿ ಒಂದಾ.. ಎರಡೆರಡ್ಲಿ ನಾಲ್ಕಾ.. ಎನ್ನುವ ರಾಗದ ಮುಂದೆ One One za One, Two two za Four ಸಪ್ಪೆ ಎನಿಸಬಹುದು. Subtractionಗಿಂತ ವ್ಯವಕಲನ ಅಥವಾ ಕಳೆಯುವ ಲೆಕ್ಕವೇ ಸುಲಭ ಎನಿಸಬಹುದು. ಇದಕ್ಕೆ ಕಾರಣ ಕಲಿಸುವ ಭಾಷೆ ಮತ್ತು ಗಣಿತಕ್ಕೆ ಇರುವ ಪರಸ್ಪರ ನಂಟು. ಗಣಿತವನ್ನು ಸುಲಭವಾಗಿಸುವುದರಲ್ಲಿ ಭಾಷೆಯ ಕೊಡುಗೆ ಮಹತ್ವದ್ದು ಎಂಬುದನ್ನು ಮರೆಯುವಂತಿಲ್ಲ.
ಈ ವರ್ಷ ಕೊರೊನಾದಿಂದ ಶಾಲೆಗಳು ಮುಚ್ಚಿದಾಗ ಕನ್ನಡ ಮಾಧ್ಯಮದಲ್ಲಿ ಕಲಿಯುವ ಬಹುತೇಕ ಮಕ್ಕಳಿಗೆ ಎದುರಾದ ಸಮಸ್ಯೆ ಭಾಷೆಯದ್ದು. ಮನೆಯಲ್ಲಿ ಮೊಬೈಲ್ ಇದ್ದು, ನೆಟ್ವರ್ಕ್ ಸಿಕ್ಕರೂ ಆನ್ಲೈನ್ ಮೂಲಕ ಕನ್ನಡದಲ್ಲಿ ಪಾಠ ಕಲಿಸುವವರ ಸಂಖ್ಯೆ ವಿರಳವಾಗಿತ್ತು.
ಇಂಗ್ಲೀಷಿನಲ್ಲಿ Arithmetic ಸಿಕ್ಕರೂ ಕನ್ನಡದ ಅಂಕಗಣಿತಕ್ಕಾಗಿ ಮಕ್ಕಳು ಹುಡುಕುವಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ, ಈ ಕೊರತೆಯನ್ನು ಬಹುಬೇಗನೆ ಅರ್ಥೈಸಿಕೊಂಡು ಅನೇಕರು ಕನ್ನಡ ಭಾಷೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಬೋಧಿಸುವುದಕ್ಕೆ ಒತ್ತುಕೊಟ್ಟರು.
ದತ್ತಾ ಟ್ಯುಟೋರಿಯಲ್ಸ್ – ಹೆಗಲ ಮೇಲೆ ಟವೆಲ್ ಹಾಕಿಕೊಂಡು ಪಾಠ ಮಾಡುವ ಹಳ್ಳಿಮೇಷ್ಟ್ರು ಈ ಪೈಕಿ ಬಹುಮುಖ್ಯವಾಗಿ ಗಮನ ಸೆಳೆದವರು ಸಜ್ಜನ ರಾಜಕಾರಣಿ ಎಂದೇ ಹೆಸರಾದ ವೈ.ಎಸ್.ವಿ.ದತ್ತಾ. ರಾಜಕೀಯ ರಂಗದಲ್ಲಿ ನಿರತರಾಗಿದ್ದ ದತ್ತಾ ಕೊರೊನಾದಿಂದ ಮತ್ತೆ ಮೇಷ್ಟ್ರಾಗಿದ್ದಾರೆ. 50 ವರ್ಷಗಳ ಹಿಂದೆ ಟ್ಯೂಷನ್ ಸೆಂಟರ್ನಲ್ಲಿ ಸೀಮೆಸುಣ್ಣ ಹಿಡಿದು ಬ್ಲ್ಯಾಕ್ಬೋರ್ಡ್ ಮೇಲೆ ಬರೆದು ಪಾಠ ಮಾಡುತ್ತಿದ್ದ ದತ್ತಾ ಮೇಷ್ಟ್ರು ಈಗ ಆನ್ಲೈನ್ ಲೋಕಕ್ಕೆ ಬಂದಿದ್ದಾರೆ.
ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಥೇಟ್ ಹಳ್ಳಿ ಮಾಸ್ತರರ ಗೆಟಪ್ನಲ್ಲಿ ಫೇಸ್ಬುಕ್ ಮೂಲಕ ನಿರರ್ಗಳವಾಗಿ ಪಾಠ ಆರಂಭಿಸಿದ ದತ್ತಾ ಅವರಿಗೆ ಆರಂಭದಲ್ಲೇ ಪ್ರಶಂಸೆಯ ಮಹಾಪೂರ ಹರಿದುಬಂತು. ಸಿಕ್ಕ ಪ್ರತಿಕ್ರಿಯೆಗಳಿಂದ ಉತ್ಸುಕರಾದ ಅವರೀಗ ತಮ್ಮದೇ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ದತ್ತಾ ಟ್ಯುಟೋರಿಯಲ್ಸ್ ಹೆಸರಿನ ಆ್ಯಪ್ನಲ್ಲಿ ಸದ್ಯಕ್ಕೆ SSLC ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳ ವಿದ್ಯಾರ್ಥಿಗಳಿಗೆ ಗಣಿತ ಪಾಠ ಲಭ್ಯವಿದೆ. ಆರಂಭದಲ್ಲಿ ವರ್ಷಕ್ಕೆ ಒಬ್ಬ ವಿದ್ಯಾರ್ಥಿಗೆ 1,500 ರೂಪಾಯಿಯಂತೆ ಇದ್ದ ಶುಲ್ಕವನ್ನು ಇದೀಗ 999 ರೂಪಾಯಿಗಳಿಗೆ ಇಳಿಸಲಾಗಿದೆ. ಇದರೊಂದಿಗೆ ಶೀಘ್ರದಲ್ಲಿಯೇ ವಿಜ್ಞಾನ ವಿಷಯದ ಪಾಠವನ್ನೂ ಆರಂಭಿಸಲು ದತ್ತಾ ಯೋಜನೆ ರೂಪಿಸಿಕೊಂಡಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನ, ಅನಿಮೇಷನ್, ಗ್ರಾಫಿಕ್ಸ್, ವೀಡಿಯೋಗಳನ್ನು ಬಳಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಬೇಕು ಎಂಬುದು ದತ್ತಾ ಮೇಷ್ಟ್ರ ಆಸೆ. ಇದರೊಂದಿಗೆ ಕನ್ನಡ ಮಾಧ್ಯಮದ ಮಕ್ಕಳಿಗೆ ಅತಿ ಸರಳ ಭಾಷೆಯಲ್ಲಿ ಗಣಿತ ಕಲಿಸುವುದು ಅವರ ಉದ್ದೇಶ. ಈ ಕಾರಣಗಳಿಂದಾಗಿಯೇ ದತ್ತಾ ಮೇಷ್ಟ್ರು ವಿದ್ಯಾರ್ಥಿಗಳಿಗೆ ಹತ್ತಿರಾಗಿದ್ದಾರೆ.
ಕರ್ನಾಟದಾದ್ಯಂತ ತಲುಪಿದವರು ಬಲು ವಿರಳ ಇದೇ ರೀತಿ ಕನ್ನಡ ಭಾಷೆಯಲ್ಲಿ ಗಣಿತವನ್ನು ಕಲಿಸುವ ಇನ್ನಿತರ ಆನ್ಲೈನ್ ವೇದಿಕೆ, ಯೂಟ್ಯೂಬ್ ಚಾನೆಲ್ಗಳು ಇವೆಯಾದರೂ ಬಹುತೇಕ ಚಾನೆಲ್ಗಳು ಆಯಾ ಪ್ರದೇಶಕ್ಕೆ ಸೀಮಿತವಾಗಿವೆ. ನಗರ ಪ್ರದೇಶದ ಕೆಲ ಖಾಸಗಿ ವಿದ್ಯಾಸಂಸ್ಥೆಗಳು ಆರಂಭಿಸಿದ ಯೂಟ್ಯೂಬ್ ಚಾನೆಲ್ಗಳು ಆರಂಭದಲ್ಲಿ ಒಂದಷ್ಟು ವೀಕ್ಷಕರನ್ನು ಗಳಿಸಿಕೊಂಡಿವೆ.
ವೈ.ಎಸ್.ವಿ ದತ್ತಾ ಅವರ ನಂತರ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದ್ದು ಸರ್ಕಾರಿ ವಾಹಿನಿ ದೂರದರ್ಶನ ಚಂದನದ ಸೇತುಬಂಧ ಕಾರ್ಯಕ್ರಮ. ಇದಿಷ್ಟು ಹೊರತುಪಡಿಸಿದರೆ ಕರ್ನಾಟಕದಾದ್ಯಂತ ಜನಪ್ರಿಯವಾದ ಇನ್ನಿತರೆ ಕಾರ್ಯಕ್ರಮಗಳು ಕಾಣಿಸುತ್ತಿಲ್ಲ.
ಆದರೆ, ಆನ್ಲೈನ್ ಮೂಲಕವೂ ಗಣಿತವನ್ನು ಎಷ್ಟು ಸರಳವಾಗಿ ಪಾಠ ಮಾಡಬಹುದು ಎಂದು ತೋರಿಸಿಕೊಟ್ಟ ವೈ.ಎಸ್. ವಿ. ದತ್ತಾ ಸರ್ ಇತರರಿಗೆ ಖಂಡಿತಾ ಮಾದರಿಯಾಗಿದ್ದಾರೆ. ಆ ಮೂಲಕ ಸುಲಭ ಮತ್ತು ಪರಿಣಾಮಕಾರಿಯಾಗಿ ಪಾಠ ಕಲಿಸಲು ಇನ್ನಿತರರಿಗೆ ಪ್ರೇರಣೆಯೂ ಆಗಿದ್ದಾರೆ.
ಇದರ ಹೊರತಾಗಿ ಗಣಿತದ ಬಗ್ಗೆ ಹೇಳುತ್ತಾ ಹೋದರೆ ಅಗಣಿತ ವಿಚಾರಗಳು ತೆರೆದುಕೊಳ್ಳುತ್ತವೆ. ಗಣಿತ ಬದುಕಿನ ಅವಿಭಾಜ್ಯ ಅಂಗ. ನೀವು ಅದೆಷ್ಟೇ ದ್ವೇಷಿಸಿದರೂ ಗಣಿತ ನಿಮ್ಮನ್ನು ಬಿಟ್ಟು ಹೋಗಲಾರದು. ಕಡೆಯ ಪಕ್ಷ ನಿಮ್ಮ ಬೆರಳಿನಲ್ಲಾದರೂ ಅಡಗಿ ಕೂತುಕೊಳ್ಳುತ್ತದೆ.. ಸಂದೇಹವಿದ್ದರೆ ನಿಮ್ಮ ಅಷ್ಟೂ ಬೆರಳುಗಳನ್ನೊಮ್ಮೆ ಎಣಿಸಿ ನೋಡಿ!
ಕಬ್ಬಿಣದ ಕಡಲೆ ಎಂದೇ ಪರಿ‘ಗಣಿತ’ವಾಗಿರುವ ಗಣಿತ ಪರೀಕ್ಷೆ ನಾಳೆ, ದತ್ತಾ ಮೇಷ್ಟ್ರು ಟಿಪ್ಸ್ ಕೊಟ್ಟಿದ್ದಾರೆ ವೀಕ್ಷಿಸಿ