Explainer | ನೂತನ ಕೃಷಿ ಕಾನೂನು 2020 ಹೇಳುವುದೇನು? ವಿವಾದವೇಕೆ? ರೈತರಲ್ಲಿ ಏಕಿಷ್ಟು ಆತಂಕ?
2020 ಸೆಪ್ಟೆಂಬರ್ 14ರಂದು ಕೃಷಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು ಸೆಪ್ಟೆಂಬರ್ 17ಕ್ಕೆ ಮಸೂದೆಗೆ ಅಂಗೀಕಾರ ಲಭಿಸಿತ್ತು. ಇದೇ ತಿಂಗಳು 20ರಂದು ರಾಜ್ಯಸಭೆಯಲ್ಲಿಯೂ ಅಂಗೀಕಾರ ಲಭಿಸಿ ಸೆಪ್ಟೆಂಬರ್ 27ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮೂರು ಮಸೂದೆಗಳಿಗೂ ಅಂಕಿತ ಹಾಕಿದ್ದರು.
ಕೇಂದ್ರ ಸರ್ಕಾರವು ಈ ವರ್ಷ ಜಾರಿ ಮಾಡಿರುವ ನೂತನ ಕೃಷಿ ಕಾನೂನುಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಕೃಷಿ ಕಾನೂನುಗಳ ಪರ-ವಿರೋಧ ಚರ್ಚೆಗಳ ನಡುನಡುವೆ ತಪ್ಪು ಮಾಹಿತಿಗಳ ಮಹಾಪೂರವೂ ಹರಿದುಬರುತ್ತಿದೆ, ಈ ಕಾನೂನುಗಳ ಬಗ್ಗೆ ಸಮಾಜದಲ್ಲಿರುವ ಗೊಂದಲಗಳನ್ನು ಇಂಥ ತಪ್ಪು ಮಾಹಿತಿಗಳು ಹೆಚ್ಚಿಸಿವೆ.
‘ರೈತರ ಅನುಕೂಲಕ್ಕಾಗಿ ಹೊಸ ಕೃಷಿ ಕಾನೂನುಗಳನ್ನು ತರಲಾಗಿದೆ’ ಎಂಬುದು ಪ್ರಧಾನಿ ನರೇಂದ್ರ ಮೋದಿ ಮಾತು. ‘ಕಾರ್ಪೊರೇಟ್ ಲಾಬಿಗೆ ಮಣಿಗೆ ಈ ಕಾನೂನು ಜಾರಿ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಧಕ್ಕೆಯಾಗಲಿದೆ’ ಎನ್ನುವುದು ರೈತರ ಆಕ್ಷೇಪ.
ಕೃಷಿ ಕಾನೂನು ಎಂದು ರೂಢಿಯಲ್ಲಿರುವ ಪಾರಿಭಾಷಿಕ ಪದವು ವಾಸ್ತವವಾಗಿ ಮೂರು ಕಾಯ್ದೆಗಳನ್ನು ಧ್ವನಿಸುತ್ತದೆ. ಕಳೆದ ಸೆ.14ರಂದು ಕೃಷಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು, 17ಕ್ಕೆ ಮಸೂದೆಗೆ ಅಂಗೀಕಾರ ಲಭಿಸಿತ್ತು. ಸೆ.20ಕ್ಕೆ ರಾಜ್ಯಸಭೆಯಲ್ಲಿಯೂ ಅಂಗೀಕಾರ ಲಭಿಸಿ, 27ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮೂರು ಮಸೂದೆಗಳಿಗೂ ಅಂಕಿತ ಹಾಕಿದ್ದರು. ಆ ಮೂಲಕ ಈ ಮಸೂದೆಗಳು ಕಾಯ್ದೆಗಳಾಗಿ ಚಾಲ್ತಿಗೆ ಬಂದವು.
ಇದನ್ನೂ ಓದಿ: ಎಂ.ಎಸ್. ಶ್ರೀರಾಮ್ ಸಂದರ್ಶನ | ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ
ಸಂಸತ್ತಿನಲ್ಲಿ ಅಂಗೀಕಾರವಾದ ಮೂರು ಮಸೂದೆಗಳು 1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, 2020- Farmers’ Produce Trade and Commerce (Promotion and Facilitation) Act, 2020 2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020 -Farmers (Empowerment and Protection) Agreement on Price Assurance and Farm Services Act, 2020 3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020 – Essential Commodities (Amendment) Act, 2020
ಏನಿದು ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ? 2020
ಹೊಸ ಕಾಯ್ದೆಯು ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಸ್ವಾತಂತ್ರ್ಯವನ್ನು ನೀಡುವ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಈ ಕಾಯ್ದೆಯು ರಾಜ್ಯ ಕೃಷಿ ಉತ್ಪಾದನಾ ಮಾರುಕಟ್ಟೆ ಕಾಯ್ದೆಗಳ (APMC) ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ ಜಿಲ್ಲೆ ಮತ್ತು ರಾಜ್ಯಗಳ ನಿರ್ಬಂಧವಿಲ್ಲದ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುತ್ತದೆ.
ರೈತರಿಗೆ ತಮ್ಮ ವಾಣಿಜ್ಯ ವಲಯಗಳಿಂದ ಹೊರಗೆ ಅಂದರೆ ಫಾರ್ಮ್‌ಗೇಟ್, ಕೋಲ್ಡ್ ಸ್ಟೋರೇಜ್, ಗೋದಾಮು, ಸಂಸ್ಕರಣಾ ಘಟಕಗಳಲ್ಲಿ ವ್ಯಾಪಾರ ಮಾಡುವ ಸ್ವಾತಂತ್ರ್ಯ ದೊರೆಯುತ್ತದೆ. ಈ ಹಿಂದೆ ಎಪಿಎಂಸಿ ಯಾರ್ಡ್ ಅಥವಾ ಮಂಡಿಗಳಲ್ಲಿ ಮಾತ್ರ ರೈತರಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿತ್ತು. ಪರ್ಯಾಯ ವಾಣಿಜ್ಯ ಮಾರ್ಗದ ಮೂಲಕ ರೈತರಿಗೆ ಇದು ಲಾಭದಾಯಕ ಬೆಲೆಯನ್ನು ಒದಗಿಸುತ್ತದೆ. ಅಂದರೆ ಅಂತರ ರಾಜ್ಯ ಮತ್ತು ಅಂತರ್ ರಾಜ್ಯ ಕೃಷಿ ಉತ್ಪನ್ನಗಳ ಮಾರಾಟವನ್ನು ಇದು ಉತ್ತೇಜಿಸುತ್ತದೆ.
ನಿಗದಿತ ವ್ಯಾಪಾರ ಪ್ರದೇಶದಲ್ಲಿ ನಿಗದಿತ ರೈತರ ಉತ್ಪನ್ನಗಳ ಎಲೆಕ್ಟ್ರಾನಿಕ್ ವ್ಯಾಪಾರವನ್ನು (ಯಾವುದೇ ರಾಜ್ಯ ಎಪಿಎಂಸಿ ಕಾಯ್ದೆಯಡಿ ನಿಯಂತ್ರಿಸಲಾಗುವ ಕೃಷಿ ಉತ್ಪನ್ನಗಳನ್ನು) ಇದು ಅನುಮತಿಸುತ್ತದೆ. ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಅಂತರ್ಜಾಲದ ಮೂಲಕ ಕೃಷಿ ಉತ್ಪನ್ನಗಳನ್ನು ನೇರ ಮತ್ತು ಆನ್‌ಲೈನ್ ಖರೀದಿಸಲು ಮತ್ತು ಮಾರಾಟ ಮಾಡಲು ಸಹ ಇದು ಅನುಕೂಲವಾಗಲಿದೆ. ಈ ಕಾಯ್ದೆ ಪ್ರಕಾರ ರೈತರು, ವ್ಯಾಪಾರಿಗಳು ಮತ್ತು ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳಿಗೆ ರಾಜ್ಯ ಸರ್ಕಾರಗಳು ಯಾವುದೇ ಮಾರುಕಟ್ಟೆ ಶುಲ್ಕ ಅಥವಾ ಸೆಸ್ ವಿಧಿಸುವಂತಿಲ್ಲ.
ಇದನ್ನೂ ಓದಿ: Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?
ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020
ಯಾವುದೇ ಜಮೀನಿನ ಉತ್ಪಾದನೆ ಅಥವಾ ಪಾಲನೆಯ ಮೊದಲು ರೈತ ಮತ್ತು ಖರೀದಿದಾರರ ನಡುವಿನ ಒಪ್ಪಂದದ ಮೂಲಕ ಗುತ್ತಿಗೆ ಕೃಷಿಗೆ ಇದು ರಾಷ್ಟ್ರೀಯ ಚೌಕಟ್ಟನ್ನು ನೀಡುತ್ತದೆ.
ಈ ಕಾಯ್ದೆಯಲ್ಲಿ ಬಳಕೆಯಾಗಿರುವ ಪಾರಿಭಾಷಿಕ ಪದಗಳ ಅರ್ಥವಿವರಣೆ ಇದು..
1) ಕೃಷಿ ಒಪ್ಪಂದ: ಈ ಕಾಯ್ದೆ ಯಾವುದೇ ಉತ್ಪನ್ನವನ್ನು ರೈತ ಉತ್ಪಾದನೆ ಮಾಡುವ ಮುನ್ನ ಅಥವಾ ಬೆಳೆಯುವ ಮುನ್ನ ರೈತರು ಮತ್ತು ವ್ಯಾಪಾರಿಗಳ ನಡುವಿನ ಒಪ್ಪಂದಕ್ಕೆ ಅನುಮತಿ ನೀಡುತ್ತದೆ. 2) ಕೃಷಿ ಒಪ್ಪಂದದ ಕನಿಷ್ಠ ಅವಧಿ: ಕೃಷಿ ಒಪ್ಪಂದದ ಕನಿಷ್ಠ ಕಾಲಾವಧಿಯು ಒಂದು ಬೆಳೆ ಬೆಳೆಯುವ ಅವಧಿ ಅಥವಾ ಉತ್ಪಾದನೆಯ ಕಾಲಾವಧಿಯಾಗಿದೆ. 3) ಕೃಷಿ ಉತ್ಪನ್ನದ ಬೆಲೆ: ಕೃಷಿ ಉತ್ಪನ್ನಗಳ ಬೆಲೆ ಮತ್ತು ಬೆಲೆ ನಿರ್ಧರಿಸುವ ಪ್ರಕ್ರಿಯೆಯನ್ನು ಒಪ್ಪಂದದಲ್ಲಿ ನಮೂದಿಸಬೇಕು. ಉತ್ಪನ್ನಗಳಿಗೆ ಖಾತರಿಪಡಿಸಿದ ಬೆಲೆ ಮತ್ತು ಖಾತರಿಪಡಿಸಿದ ಬೆಲೆಗಿಂತ ಹೆಚ್ಚಿನ ಮೊತ್ತದ ಸ್ಪಷ್ಟ ಉಲ್ಲೇಖವನ್ನು ಒಪ್ಪಂದದಲ್ಲಿ ನಿರ್ದಿಷ್ಟಪಡಿಸಬೇಕು. 4) ವಿವಾದದ ಇತ್ಯರ್ಥ: ಈ ಕಾಯ್ದೆಯು ಮೂರು ಹಂತದ ವಿವಾದ ಇತ್ಯರ್ಥ ವ್ಯವಸ್ಥೆಯನ್ನು ಒದಗಿಸುತ್ತದೆ – ಸಂಧಾನ ಮಂಡಳಿ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಮೇಲ್ಮನವಿ ಪ್ರಾಧಿಕಾರ.
ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ, 2020
ಕೆಲವು ಸರಕುಗಳು ಅಥವಾ ಉತ್ಪನ್ನಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು 1955ರಲ್ಲಿ ಸಂಸತ್ತು ಈ ಕಾಯ್ದೆಯನ್ನು ಜಾರಿ ಮಾಡಿತ್ತು. ಉತ್ಪನ್ನಗಳ ವಿತರಣೆಗೆ ಅಕ್ರಮ ದಾಸ್ತಾನು ಅಥವಾ ಬ್ಲಾಕ್ ಮಾರ್ಕೆಟ್ನಿಂದ ಅಡಚಣೆಯಾದರೆ ಅದು ಜನರ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಪದಾರ್ಥಗಳು, ಔಷಧಗಳು, ಇಂಧನ (ಪೆಟ್ರೋಲಿಯಂ ಉತ್ಪನ್ನಗಳು) ಸೇರಿದಂತೆ ಕೆಲ ಜೀವನಾವಶ್ಯಕ ವಸ್ತುಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ.
ಈ ಕಾಯ್ದೆಯಡಿ ಕೇಂದ್ರ ಸರ್ಕಾರವು ಅತ್ಯವಶ್ಯಕ ವಸ್ತುಗಳೆಂದು ಪರಿಗಣಿಸಿದ ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ವಿತರಣೆಯನ್ನು ನಿಯಂತ್ರಿಸುವ ಮೂಲಕ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಅತ್ಯವಶ್ಯಕ ಉತ್ಪನ್ನ ಎಂದು ಪರಿಗಣಿಸಿರುವ ಪ್ಯಾಕೇಜ್ಡ್ ಉತ್ಪನ್ನಕ್ಕೆ ಸರ್ಕಾರ ಎಂಆರ್ಪಿ ನಿಗದಿಪಡಿಸಬಹುದಾಗಿದೆ. ಯಾವುದೇ ಉತ್ಪನ್ನಗಳಿಗೆ ಅವಶ್ಯಕತೆ ಹೆಚ್ಚಾದಾಗ ಅವುಗಳನ್ನು ಅವಶ್ಯಕ ಉತ್ಪನ್ನಗಳ ಪಟ್ಟಿಗೆ ಸೇರಿಸಬಹುದು. ಅವಶ್ಯಕತೆ ಕಡಿಮೆಯಾದಾಗ ಅದನ್ನು ಪಟ್ಟಿಯಿಂದ ತೆಗೆಯಬಹುದು. ಯಾವುದಾದರೊಂದು ಸರಕುಗಳ ಕೊರತೆ ಕಂಡು ಬಂದು ಅದರ ಬೆಲೆ ಏರಿಕೆಯಾಗುತ್ತಿದ್ದರೆ ಸರ್ಕಾರವು ನಿರ್ದಿಷ್ಟ ಅವಧಿವರೆಗೆ ಆ ಸರಕುಗಳ ಮೇಲೆ ಸಂಗ್ರಹ ಮಿತಿ ಹೇರಬಹುದಾಗಿದೆ.
ಕೇಂದ್ರ ಸರ್ಕಾರದ ನಿಬಂಧನೆಗಳ ಹೇರಿಕೆ ಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಒಂದು ವೇಳೆ ಈ ನಿರ್ಬಂಧಗಳನ್ನು ಹೇರಿದರೆ, ವ್ಯಾಪಾರಿಗಳು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಸಂಗ್ರಹ ಮಾಡಿಟ್ಟಿದ್ದರೆ ತಕ್ಷಣವೇ ಅದನ್ನು ಮಾರುಕಟ್ಟೆಗೆ ಮಾರಲೇಬೇಕಾದ ಒತ್ತಡವನ್ನು ಸರ್ಕಾರ ಹೇರುತ್ತದೆ. ಹೀಗೆ ಮಾಡುವ ಮೂಲಕ ಸರಕುಗಳ ಪೂರೈಕೆ ಹೆಚ್ಚಿಸಿ ಬೆಲೆಯನ್ನು ಕಡಿಮೆ ಮಾಡಬಹುದು.
ಯುದ್ಧ, ಬರಗಾಲ, ಹೆಚ್ಚಿನ ಬೆಲೆ ಏರಿಕೆ ಅಥವಾ ನೈಸರ್ಗಿಕ ವಿಕೋಪಗಳ ಹೊತ್ತಿನಲ್ಲಿ ಮಾತ್ರ ಕೇಂದ್ರ ಸರ್ಕಾರ ಪಟ್ಟಿಯಲ್ಲಿರುವ ನಿರ್ದಿಷ್ಟ ಸರಕುಗಳನ್ನು ಪೂರೈಕೆ ಮತ್ತು ಬೆಲೆಯನ್ನು ನಿಯಂತ್ರಿಸುತ್ತದೆ. ಆಹಾರ ಪದಾರ್ಥಗಳು, ಕಾಳು, ಧಾನ್ಯಗಳು, ಆಲೂಗೆಡ್ಡೆ, ಈರುಳ್ಳಿ, ಎಣ್ಣೆ ಬೀಜಗಳು ಮತ್ತು ಎಣ್ಣೆ ಇವು ನಿಯಂತ್ರಣಕ್ಕೊಳಪಡುವುದಿಲ್ಲ.
ತಿದ್ದುಪಡಿಯ ಪ್ರಕಾರ ಯಾವುದೇ ಕೃಷಿ ಉತ್ಪನ್ನದ ಸಂಗ್ರಹ ಮಿತಿ ಮೇಲಿನ ನಿರ್ಬಂಧವು ಆ ಉತ್ಪನ್ನದ ಬೆಲೆ ಏರಿಕೆಯನ್ನು ಆಧರಿಸಿರುತ್ತದೆ. ತೋಟಗಾರಿಕೆ ಕೃಷಿ ಉತ್ಪನ್ನಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ಶೇ.100 ಏರಿಕೆಯಾದರೆ ಮತ್ತು ಕೊಳೆಯದ ಆಹಾರ ವಸ್ತುಗಳ ಚಿಲ್ಲರೆ ಮಾರುಕಟ್ಟೆ ಬೆಲೆಯು ಶೇ. 50 ಏರಿಕೆ ಆದರೆ ಮಾತ್ರ ಈ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. 12 ತಿಂಗಳಿನಿಂದ ಚಾಲ್ತಿಯಲ್ಲಿರುವ ಬೆಲೆ ಅಥವಾ ಕಳೆದ ಐದು ವರ್ಷಗಳಲ್ಲಿನ ಚಿಲ್ಲರೆ ಮಾರುಕಟ್ಟೆ ಬೆೆಲೆಯ ಸರಾಸರಿಯಲ್ಲಿ ಯಾವುದು ಕಡಿಮೆ ಇರುತ್ತದೋ ಅದನ್ನು ಆಧರಿಸಿ ಬೆಲೆ ಏರಿಕೆಯನ್ನು ಲೆಕ್ಕಹಾಕಲಾಗುತ್ತದೆ.
ದೇಶದಲ್ಲಿ ಸಾರ್ವಜನಿಕ ವಿತರಣೆಗಾಗಿ ಸಂಗ್ರಹಿಸಿರುವ ಆಹಾರ ಉತ್ಪನ್ನಗಳಿಗೆ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ.
ಇದನ್ನೂ ಓದಿ: Delhi Chalo | ರೈತರ ಪ್ರತಿಭಟನೆಗೆ ಪಂಜಾಬ್, ಹರ್ಯಾಣದ ಗೃಹಿಣಿಯರ ಬೆಂಬಲ
ರೈತರು ಪ್ರತಿಭಟಿಸುತ್ತಿರುವುದೇಕೆ?
ಕೇಂದ್ರ ಸರ್ಕಾರದ ಕೃಷಿ ಕಾನೂನಿನಿಂದ ಲಾಭದ ಬದಲು ನಷ್ಟಗಳೇ ಜಾಸ್ತಿ ಎಂಬುದು ರೈತರ ವಾದ. ಭಾರತದಲ್ಲಿ ಶೇ 86ಕ್ಕಿಂತ ಹೆಚ್ಚು ಕೃಷಿಭೂಮಿ ರೈತರ ಸುಪರ್ದಿಯಲ್ಲಿದೆ. ಇವರ ಪೈಕಿ ಬಹುತೇಕರಿಗೆ 5 ಎಕರೆಗಿಂತ ಕಡಿಮೆ ಕೃಷಿಭೂಮಿ ಹೊಂದಿರುವರಾಗಿದ್ದಾರೆ ಇವರು. ಹೀಗಿರುವಾಗ ದೊಡ್ಡ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರುವಾಗ ಅಲ್ಲಿ ತಮಗೆ ಅಗತ್ಯವಾದ ಬೆಲೆ ಸಿಗುವುದಿಲ್ಲ ಎಂಬ ಆತಂಕ ರೈತರದ್ದು.
ಹೊಸ ಕಾನೂನಿನಲ್ಲಿ ವ್ಯಾಪಾರಿ ಮತ್ತು ರೈತರ ನಡುವಿನ ಗುತ್ತಿಗೆ ವ್ಯವಹಾರ ಲಿಖಿತ ರೂಪದಲ್ಲಿರಬೇಕು ಎಂಬುದು ಕಡ್ಡಾಯ ಮಾಡಿಲ್ಲ. ಮಾರಾಟ ಪ್ರಕ್ರಿಯೆಯಲ್ಲಿ ನಿಯಮಗಳು ಉಲ್ಲಂಘನೆಯಾದರೆ ರೈತರು ವಾದಿಸಿ ಜಯಿಸುವುದು ಕಷ್ಟವಾಗಲಿದೆ. ವರ್ಷದಿಂದ ವರ್ಷಕ್ಕೆ ರಸಗೊಬ್ಬರ ಮತ್ತು ಬೀಜಗಳ ಬೆಲೆ ಏರಿಕೆಯೂ ರೈತರಿಗೆ ಹೊರೆ ಆಗಿದೆ.
ಯಾವುದೇ ಉತ್ಪನ್ನಕ್ಕೆ ಇಂತಿಷ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಇದೆ ಎಂಬುದನ್ನು ಹೊಸ ಕಾನೂನು ಖಾತ್ರಿ ಪಡಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಸಂಪೂರ್ಣವಾಗಿ ನಿಂತು ಹೋಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಗೋಧಿ-ಭತ್ತದಂಥ ಎಂಎಸ್ಪಿ ಆಧರಿತ ಬೆಳೆಗಳನ್ನು ಬೆಳೆಯುವ ರೈತರಿಗೆ ಇದರಿಂದಾಗಿ ಹೆಚ್ಚಿನ ಹೊಡೆತ ಬೀಳಲಿದೆ.
Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?
Published On - 2:48 pm, Wed, 23 December 20