Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿ 28ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಏನಾಯಿತೋ ಏನೋ, ಈ ಪ್ರಾಜೆಕ್ಟ್ ಮುಂದುವರಿಯಬಹುದಾ ಅಥವಾ ಈ ವ್ಯವಹಾರ ಕೈ ಹಿಡಿಯಬಹುದಾ ಹೀಗೆ ಹಲವು ಗೊಂದಲಗಳನ್ನು ಎದುರಿಸುತ್ತಾ ಇದ್ದೀರಿ ಅಂತಾದಲ್ಲಿ ಸ್ಪಷ್ಟತೆ ಸಿಗಲಿದೆ. ಮನಸ್ಸಿಗೆ ಸಮಾಧಾನ ದೊರೆಯಲಿದೆ. ನಿಮ್ಮ ಆದಾಯವನ್ನು ಜಾಸ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಕುಟುಂಬ ಸದಸ್ಯರು, ಸ್ನೇಹಿತರು ಈ ವಿಷಯದಲ್ಲಿ ನಿಮ್ಮನ್ನು ನಿರುತ್ಸಾಹಗೊಳಿಸಬಹುದು. ಆದರೆ ನೀವು ಈ ವಿಚಾರದಲ್ಲಿ ಅಚಲವಾಗಿ ಇರಲಿದ್ದೀರಿ. ಉದ್ಯೋಗವನ್ನು ಬಿಟ್ಟೋ ಅಥವಾ ಕಳೆದುಕೊಂಡೋ ಕೆಲವು ತಿಂಗಳಾಗಿದೆ, ಮತ್ತೆ ಉದ್ಯೋಗಕ್ಕೆ ಗಂಭೀರವಾಗಿ ಪ್ರಯತ್ನಿಸಲೇಬೇಕು ಎಂದಿರುವವರಿಗೆ ಮುಖ್ಯವಾದ ದಿನ ಇದಾಗಿರುತ್ತದೆ. ಒಂದೋ ಪ್ರಮುಖ ಸಂಸ್ಥೆಗಳಿಂದ ಅಥವಾ ಜಾಬ್ ಕನ್ಸಲ್ಟೆನ್ಸಿಯಿಂದ ಇಂಟರ್ ವ್ಯೂ ಬರಲಿದೆ. ನಿಮ್ಮ ಆತ್ಮಸ್ಥೈರ್ಯ ವೃದ್ಧಿ ಆಗುವಂಥ ಘಟನೆಗಳು ನಡೆಯಲಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮಾನಸಿಕವಾಗಿ ತುಂಬ ಗಟ್ಟಿಯಾಗಿ ಇರುವುದಕ್ಕೆ ಪ್ರಯತ್ನಿಸಿ. ಏಕೆಂದರೆ ಭಾವನಾತ್ಮಕವಾಗಿ ಆಲೋಚಿಸುತ್ತಲೋ ಅಥವಾ ನಿಮಗೆ ಏನೋ ಸಹಾಯ ಮಾಡಬೇಕು ಎಂದೆನಿಸಿ, ಮಾತು ನೀಡಿ, ಆ ನಂತರ ಪರಿತಪಿಸುವಂಥ ಸ್ಥಿತಿ ನಿಮ್ಮದಾಗಲಿದೆ. ಮೊದಲನೆಯದಾಗಿ ನಿಮಗಿರುವ ಕೆಲಸ, ಜವಾಬ್ದಾರಿ ಇತ್ಯಾದಿ ವಿಚಾರಗಳನ್ನು ಲೆಕ್ಕ ಮಾಡಿಕೊಂಡು, ಆ ನಂತರ ಇತರರಿಗೆ ಮಾತು ಕೊಡಿ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸವೊಂದರಲ್ಲಿ ಕೆಲವು ದಾಖಲೆ- ಪತ್ರಗಳನ್ನು ಮತ್ತೆ ನೀಡಬೇಕಾಗಿ ಬರಬಹುದು. ಇನ್ನೇನು ಎಲ್ಲ ಆಗಿಹೋಯಿತು ಎಂದುಕೊಂಡು, ಪ್ರಾಜೆಕ್ಟ್ ಶುರು ಮಾಡುವುದಕ್ಕೆ ದಿನ ನಿಗದಿ ಮಾಡಿಕೊಂಡವರು ಅದನ್ನು ಮುಂದಕ್ಕೆ ಹಾಕ ಬೇಕಾಗಬಹುದು. ನಿಮ್ಮ ಜತೆಗೆ ಇರುವಂಥ ಸ್ನೇಹಿತರು, ಆಪ್ತರು ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಕಾರಣಕ್ಕೂ ಹುಂಬತನ ಬೇಡ. ಏನನ್ನಾದರೂ ಸರಿ, ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಾಮಾಜಿಕವಾಗಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೀರಿ. ಅನಿರೀಕ್ಷಿತವಾಗಿ ತುಂಬ ಪ್ರಭಾವಿ ವ್ಯಕ್ತಿಗಳ ಸಂಪರ್ಕಕ್ಕೆ ಬರಲಿದ್ದೀರಿ. ಇದರ ಜತೆಗೆ ಈ ದಿನ ದೈವಿಕವಾಗಿ ತುಂಬ ಮುಖ್ಯವಾದ ಅನುಭವವೊಂದು ನಿಮಗೆ ಆಗಲಿದೆ. ಹಳೆಯ ಸಂಗತಿ ಎಂದುಕೊಂಡು ನೀವೇ ಮರೆತುಹೋಗಿದ್ದ ಕೆಲಸವೊಂದು ಮತ್ತೆ ಹುಡುಕಿಕೊಂಡು ಬರಬಹುದು. ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲಿಕ್ಕೆ ದಾರಿಗಳು ಗೋಚರ ಆಗಲಿವೆ. ಕೃಷಿಕರಾಗಿದ್ದು, ಜಮೀನು ಅಥವಾ ನಿಮ್ಮದೇ ಯಾವುದಾದರೂ ಕೆಲಸಕ್ಕಾಗಿ ಸೂಕ್ತವಾದ ಜನರ ಹುಡುಕಾಟ ನಡೆಸುತ್ತಿದ್ದಲ್ಲಿ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅಂದ ಹಾಗೆ ನಿಮ್ಮಲ್ಲಿ ಕೆಲವರು ಗುತ್ತಿಗೆಗೆ ಭೂಮಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳು ಸಹ ಕಂಡುಬರುತ್ತಿದೆ. ದೀರ್ಘಕಾಲೀನ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಇದಕ್ಕೆ ನಿಮ್ಮ ಕುಟುಂಬ ಸದಸ್ಯರಿಂದ ಸಹ ಬೆಂಬಲ ದೊರೆಯಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮಗೆ ಒಂದಿಷ್ಟು ಕೂಡ ಇಷ್ಟವಾಗದಂಥ ಬದಲಾವಣೆಗಳನ್ನು ಸ್ನೇಹಿತರು, ಸಂಬಂಧಿಕರು, ಕುಟುಂಬ ಸದಸ್ಯರಲ್ಲಿ ಕಾಣಲಿದ್ದೀರಿ. ಆ ಬಗ್ಗೆ ಹೇಳಬೇಕು ಎಂದು ನಿಮ್ಮ ಮನಸ್ಸಿಗೆ ಬರಬಹುದು. ಊಟ- ತಿಂಡಿ ವಿಚಾರದಲ್ಲಿ ಮಾತಿಗೆ ಮಾತು, ವಾಗ್ವಾದಗಳು ನಡೆಯಲಿವೆ. ಸುಮ್ಮನಿದ್ದಿದ್ದರೆ ಆಗುತ್ತಿತ್ತು ಎಂಬ ಯೋಚನೆ ಆ ನಂತರ ಹೊಳೆಯುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿರುತ್ತದೆ. ಕಚೇರಿಗಳನ್ನು ನಡೆಸುತ್ತಿರುವವರು ಅಥವಾ ಏಜೆನ್ಸಿಗಳನ್ನು ತೆಗೆದುಕೊಂಡವರು, ಫ್ರಾಂಚೈಸಿ ತೆಗೆದುಕೊಂಡು ವ್ಯವಹಾರ ನಡೆಸುತ್ತಿರುವವರಿಗೆ ವಸ್ತುಗಳೋ ಹಣವೋ ಕಳುವಾಗುವಂಥ ಯೋಗ ಈ ದಿನ ಇದೆ. ಆದ್ದರಿಂದ ಸಾಧ್ಯವಾದಷ್ಟೂ ಪ್ರಮುಖ ಜವಾಬ್ದಾರಿಗಳನ್ನು ನೀವೇ ತೆಗೆದುಕೊಳ್ಳಿ. ಹಾಗೂ ಈ ರೀತಿಯಾದದ್ದು ಆಗದಂತೆ ಏನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದೊ ಎಂದು ಯೋಚನೆ ಮಾಡಿಟ್ಟುಕೊಳ್ಳಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಯವಾದ ಮಾತುಗಳು ಹಾಗೂ ಎದುರಿನಲ್ಲಿ ಇರುವಂಥ ವ್ಯಕ್ತಿ ಕರಗಿ ಹೋಗುವಂಥ ಮಾತುಗಳನ್ನು ಆಡುವ ಮೂಲಕ ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಳ್ಳಲಿದ್ದೀರಿ. ಈಗಾಗಲೇ ಎಫ್.ಡಿ. ಮಾಡಿದ್ದಲ್ಲಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಉಳಿತಾಯವನ್ನು ಮಾಡಿದ್ದಲ್ಲಿ ಅದನ್ನು ತೆಗೆದು, ಬೇರೆ ಕಡೆಗೆ ಹೂಡಿಕೆ ಮಾಡುವ ಕುರಿತು ಯೋಜನೆಯನ್ನು ರೂಪಿಸಲಿದ್ದೀರಿ. ಸಂತಾನದ ನಿರೀಕ್ಷೆಯಲ್ಲಿ ಇರುವಂಥವರಿಗೆ ಸಮಾಧಾನ ದೊರೆಯುವಂಥ ಸುದ್ದಿ ಕೇಳಿಬರಲಿದೆ. ನಿಮಗಾಗಿ ಅಂತಲೇ ಮನೆಯೋ ಅಥವಾ ರೂಮನ್ನೋ ಕಟ್ಟಿಸುವುದಕ್ಕೆ ಯೋಚನೆ ಮಾಡಲಿದ್ದೀರಿ. ಅಥವಾ ನಿಮ್ಮ ಕೆಲಸಕ್ಕೆ ಅನುಕೂಲವಾಗುವುದನ್ನೇ ಗಮನದಲ್ಲಿ ಇರಿಸಿಕೊಂಡು, ಕಟ್ಟಡ ನಿರ್ಮಾಣ ಮಾಡುವ ಕುರಿತು ಮಾತುಕತೆ ನಡೆಸಲಿದ್ದೀರಿ. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಅತ್ಯುತ್ತಮ ಸಂಸ್ಥೆಗಳಿಂದ ಇಂಟರ್ನ್ ಷಿಪ್ ಅವಕಾಶಗಳು ದೊರೆಯಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ನಿರೀಕ್ಷೆಯಂತೆ ಆಗದೆ ಚಿಂತೆಗೆ ಗುರಿ ಆಗಬೇಕಾದ ಸ್ಥಿತಿ ನಿರ್ಮಾಣ ಆಗುತ್ತದೆ. ಹೆಚ್ಚಿನ ಮನಸ್ತಾಪ, ಅಭಿಪ್ರಾಯ ಭೇದಗಳೇನೂ ಆಗುವುದಿಲ್ಲ, ಸ್ವಲ್ಪ ಮಟ್ಟಿಗೆ ಬೇಜಾರಾಗಬಹುದು ಎಂದು ಭಾವಿಸಿ ನೀವು ಆಡುವ ಮಾತುಗಳು ತೀರಾ ಕೈ- ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಬಹುದು. ನಿಮ್ಮ ವಾಹನ ಇನ್ನೊಂದು ವಾಹನಕ್ಕೆ ತಾಗಿತು, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿ, ಪೊಲೀಸರ ಜತೆಗೆ ಮಾತುಕತೆಗೆ ಕಾರಣವಾಯಿತು, ಹೀಗೆ ಇನ್ಯಾವುದೇ ಸಂದರ್ಭ ಬಂದರೂ ಮಾತಿಗೆ ಮಾತು ಬೆಳೆಸಲಿಕ್ಕೆ ಹೋಗಬೇಡಿ. ಅದೇ ರೀತಿ ಇಬ್ಬರ ಮಧ್ಯೆ ಜೋರು ಮಾತುಕತೆ ನಡೆಯುತ್ತಿದೆ ಎಂದರೂ ಅವರನ್ನು ಬಿಡಿಸುವುದಕ್ಕೂ ಹೋಗಬೇಡಿ. ಏಕೆಂದರೆ ಇಂಥ ಸನ್ನಿವೇಶದಲ್ಲಿ ನೀವು ಸಮಸ್ಯೆಗೆ ಸಿಲುಕಿಕೊಳ್ಳುವಂತೆ ಆಗುತ್ತದೆ. ಬಾಡಿಗೆ ಮನೆಯಲ್ಲಿ ವಾಸವಿದ್ದು, ಮನೆ ಬದಲಾಯಿಸಬೇಕು ಎಂದಿದ್ದಲ್ಲಿ ಅಂಥವರಿಗೆ ಈ ದಿನ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಯಾರಿಂದ ನಿಮಗೆ ಏನು ಅನುಕೂಲ ಆಯಿತು ಎಂದು ಚಿಂತಿಸಬೇಡಿ. ಇದೇ ವೇಳೆ ನೀವು ಇತರರ ಬಗ್ಗೆ ತೆಗೆದುಕೊಂಡ ಕಾಳಜಿಗೆ ಪ್ರತಿಯಾಗಿ ನಿಮ್ಮ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಎನಿಸುವುದಕ್ಕೆ ಶುರು ಆಗುತ್ತದೆ. ಮುಖ್ಯವಾಗಿ ನಿಮ್ಮ ಆರೋಗ್ಯ ವಿಚಾರದಲ್ಲಿಯೇ ಹೀಗೆ ಆಗಲಿದೆ. ಯಾವುದಾದರೂ ಆರೋಗ್ಯ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿದ್ದೀರಿ ಅಂತಾದಲ್ಲಿ ವೈದ್ಯರನ್ನು ಅಥವಾ ಔಷಧೋಪಚಾರ ವಿಧಾನವನ್ನು ಬದಲಿಸಬೇಕು ಎಂದೆನಿಸಲಿದೆ. ಉದ್ಯೋಗ ವಿಚಾರವಾಗಿ ಇತರರು ಅಚ್ಚರಿ ಪಡುವ ರೀತಿಯಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ಕೆಲವು ವಾರದಿಂದ ತಿಂಗಳ ತನಕ ಕೆಲವು ವೃತ್ತಿ ವ್ಯವಹಾರ, ವ್ಯಾಪಾರ ಅಥವಾ ಉದ್ಯೋಗದಿಂದ ಬಿಡುವು ತೆಗೆದುಕೊಳ್ಳೋಣ ಅಂತನಿಸಬಹುದು. ಒಂಟಿಯಾಗಿ ಕೆಲ ಸಮಯವನ್ನು ಕಳೆಯಬೇಕು ಎಂದುಕೊಳ್ಳುತ್ತೀರಿ, ಭವಿಷ್ಯದ ವಿಚಾರವಾಗಿ ಒಂದು ಮುಖ್ಯ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಗುರು- ಹಿರಿಯರ ಅನುಗ್ರಹ ಆಗಲಿದ್ದು, ದೇವತಾ ಕಾರ್ಯಗಳಲ್ಲಿ ಭಾಗೀ ಆಗುವಂಥ ಯೋಗ ನಿಮ್ಮ ಪಾಲಿಗೆ ಇದೆ. ಈ ಹಿಂದೆ ನೀವು ಯಾವ ಸೇವೆ ಮಾಡಿಸಬೇಕು ಎಂದು ಬಹಳ ಹಿಂದಿನಿಂದ ಅಂದುಕೊಂಡಿದ್ದಿರೋ ಅದನ್ನು ಈ ದಿನ ಮಾಡಿಸಲಿದ್ದೀರಿ. ಮಕ್ಕಳ ಸಲುವಾಗಿ ಕೆಲವು ಗ್ಯಾಜೆಟ್ ಖರೀದಿ ಮಾಡಲಿದ್ದೀರಿ. ಮನೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದಲ್ಲಿ ಅಥವಾ ಪಾರ್ಕಿಂಗ್ ಜಾಗ ಕಡಿಮೆ ಇದ್ದಲ್ಲಿ ಅದನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತೀರಿ. ಇನ್ನು ನಿಮ್ಮಲ್ಲಿ ಯಾರು ಬಾಡಿಗೆ ಕಾರು ಅಥವಾ ಆಟೋಗಳ ಚಾಲನೆ ಮಾಡುತ್ತಿದ್ದೀರಿ, ಅಂಥವರು ಸ್ವಂತ ಕಾರು ಅಥವಾ ಆಟೋ ಖರೀದಿ ಮಾಡುವ ತೀರ್ಮಾನವನ್ನು ಮಾಡಲಿದ್ದೀರಿ. ಅದಕ್ಕೆ ಹಣಕಾಸಿನ ಅಗತ್ಯ ಇದ್ದಲ್ಲಿ ಅದಕ್ಕೆ ಸಂಬಂಧಿಕರು, ಸ್ನೇಹಿತರು ನೆರವಿಗೆ ಬರಲಿದ್ದಾರೆ. ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರಿಗೆ ಅದು ಇನ್ನೂ ತೀವ್ರವಾಗಲಿದೆ. ಸೂಕ್ತ ವೈದ್ಯರಲ್ಲಿ ಹಾಕಿಸಿಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಯಾರು ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರೋ ಅಂಥವರು ಈಗ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲೇ ಬೇರೆ ಪ್ರಾಜೆಕ್ಟ್ ಗೆ ಅಥವಾ ವಿಭಾಗಕ್ಕೆ ತೆರಳುವ ಬಗ್ಗೆ ಸೂಚನೆ ದೊರೆಯಲಿದೆ. ನಿಮಗೆ ಅಲ್ಲಿಗೆ ತೆರಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಆದರೆ ಇದರಿಂದ ಭವಿಷ್ಯದಲ್ಲಿ ಅನುಕೂಲ ಒದಗಿ ಬರಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ವೈವಾಹಿಕ ವೆಬ್ ಸೈಟ್ ಮೂಲಕ ಸೂಕ್ತ ಸಂಬಂಧ ದೊರೆಯುವ ಅವಕಾಶ ಇದೆ. ತಂದೆ- ತಾಯಿ ಅಥವಾ ಕುಟುಂಬ ಸದಸ್ಯರಿಗೆ ಎಲ್ಲ ಸೇರಿ ಆರೋಗ್ಯ ವಿಮೆ ಖರೀದಿಸುವ ಸಾಧ್ಯತೆ ಇದೆ. ತೀರ್ಥಕ್ಷೇತ್ರಕ್ಕೆ ತೆರಳುವುದಕ್ಕಾಗಿ ಯೋಜನೆಯನ್ನು ರೂಪಿಸಲಿದ್ದೀರಿ. ನೆಂಟರೊಂದಿಗೆ ಸೇರಿ ಔತಣ ಕೂಟವನ್ನು ಆಯೋಜಿಸುವುದಕ್ಕೆ ಎಲ್ಲರನ್ನೂ ಒಪ್ಪಿಸುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ. ಕ್ರೀಡಾ ಕ್ಷೇತ್ರದಲ್ಲಿ ಇರುವಂಥವರಿಗೆ ಪ್ರಾಯೋಜಕತ್ವ ದೊರೆಯುವ ಬಗ್ಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಭರವಸೆ ಸಿಗಲಿದೆ.
ಲೇಖನ- ಎನ್.ಕೆ.ಸ್ವಾತಿ