Yearly Numerology 2025: ನ್ಯೂಮರಾಲಜಿ ಆಧಾರದಲ್ಲಿ 2025ರ ವರ್ಷ ಭವಿಷ್ಯ
ವಾರ್ಷಿಕ ಸಂಖ್ಯಾಶಾಸ್ತ್ರ 2025: ಸಂಖ್ಯೆ 1ಕ್ಕೆ ರವಿ, 2 ಅಂದರೆ ಚಂದ್ರ, 3 ಅಂದರೆ ಗುರು, 4 ಅಂದರೆ ರಾಹು, 5 ಅಂದರೆ ಬುಧ, 6 ಅಂದರೆ ಶುಕ್ರ, 7 ಅಂದರೆ ಕೇತು, 8 ಅಂದರೆ ಶನಿ ಹಾಗೂ ಸಂಖ್ಯೆ 9ಕ್ಕೆ ಕುಜ ಗ್ರಹ ಅಧಿಪತಿಯಾಗುತ್ತದೆ. ಹೀಗೆ ಗ್ರಹಾಧಿಪತ್ಯ ಇರುವಂಥ ಸಂಖ್ಯೆಗಳಿಗೆ 2025ನೇ ಇಸವಿಯು ಹೇಗಿರುತ್ತದೆ ಎಂಬುದನ್ನು ತಿಳಿಯಿರಿ.
ಜ್ಯೋತಿಷ್ಯದ ಪ್ರಮುಖ ಅಂಗ ಸಂಖ್ಯಾಶಾಸ್ತ್ರ ಅಥವಾ ನ್ಯೂಮರಾಲಜಿ. ಅದರ ಬಗ್ಗೆ ತುಂಬ ಪ್ರಾಥಮಿಕ ಸಂಖ್ಯೆ ಜನ್ಮಸಂಖ್ಯೆಯಾಗಿದೆ. ಅದರ ಅನ್ವಯ 2025ನೇ ಇಸವಿಯ ವರ್ಷ ಭವಿಷ್ಯ ಇಲ್ಲಿದೆ. ಸಂಖ್ಯಾಶಾಸ್ತ್ರದ ಆಧಾರದಲ್ಲಿ ಭವಿಷ್ಯವನ್ನು ನೀಡಲಾಗುತ್ತಿದೆ. ಅಂದರೆ ಜನ್ಮದಿನವನ್ನು ಆಧಾರವಾಗಿಟ್ಟುಕೊಂಡು, ವರ್ಷದ ಭವಿಷ್ಯ ಇಲ್ಲಿದೆ. ಯಾವುದೇ ತಿಂಗಳಿನ ನಿರ್ದಿಷ್ಟ ದಿನ ಹುಟ್ಟಿದವರಿಗೆ ಆ ದಿನದ ಆಧಾರದಲ್ಲಿ ಜನ್ಮ ಸಂಖ್ಯೆ ನಿರ್ಧಾರ ಆಗುತ್ತದೆ. ಉದಾಹರಣೆಗೆ, ಯಾವುದೇ ತಿಂಗಳಿನ 1, 10, 19, 28ನೇ ತಾರೀಕಿನಂದು ಹುಟ್ಟಿದವರ ಜನ್ಮಸಂಖ್ಯೆಯು 1 ಆಗುತ್ತದೆ. ಇದೇ ರೀತಿಯಲ್ಲಿ ಉಳಿದ ಸಂಖ್ಯೆಗಳನ್ನು ಸಹ ಗಣನೆಗೆ ತೆಗೆದುಕೊಂಡು 1ರಿಂದ 9ರ ಸಂಖ್ಯೆ ತನಕ ಯಾರಿಗೆ ಏನು ಭವಿಷ್ಯ ಎಂಬುದನ್ನು ಇಲ್ಲಿ ತಿಳಿಯಿರಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ವರ್ಷ ಆರೋಗ್ಯದ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀವು ನೀಡಬೇಕಾಗುತ್ತದೆ. ಆಸ್ತಿ ಖರೀದಿ, ಷೇರು ಪೇಟೆಯಲ್ಲಿನ ಅಪಾಯವನ್ನು ಮೈ ಮೇಲೆ ಹಾಕಿಕೊಳ್ಳುವಂಥ ಹೂಡಿಕೆ ಅಥವಾ ಸಾಲ ಮಾಡಿ ವಿಲಾಸಿ ವಸ್ತುಗಳನ್ನು ಖರೀದಿ ಮಾಡುವುದು… ಇಂಥವುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ದಂಪತಿ ಹಾಗೂ ಪ್ರೇಮಿಗಳ ಮಧ್ಯೆ ವಿರಸ- ಮಾತಿನಲ್ಲಿ ಅಭಿಪ್ರಾಯ ಭೇದಗಳು ಹೆಚ್ಚಲಿವೆ. ಯಾರು ವ್ಯಾಪಾರ ಅಥವಾ ಉದ್ಯಮವನ್ನು ಮಾಡುತ್ತಿದ್ದೀರಿ ಅಂಥವರಿಗೆ ವರ್ಷದ ದ್ವಿತೀಯಾರ್ಧದಲ್ಲಿ ಆದಾಯ ಹಾಗೂ ಲಾಭದ ಪ್ರಮಾಣದಲ್ಲಿ ಸಮಾಧಾನ ತರುವಂಥ ಬೆಳವಣಿಗೆಗಳು ಆಗಲಿವೆ. ಇನ್ನು ಇದೇ ಅವಧಿಯಲ್ಲಿ ಈಗಾಗಲೇ ಆರಂಭ ಮಾಡಿದ ಮನೆ ನಿರ್ಮಾಣ ಅಥವಾ ಫ್ಲ್ಯಾಟ್ ಖರೀದಿಗೆ/ಮನೆ ಖರೀದಿಗೆ ಹಣ ನೀಡಿದ್ದೀರಿ ಅಂತಾದಲ್ಲಿ ವ್ಯವಹಾರಗಳನ್ನು ಪೂರ್ತಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇಂಟೀರಿಯರ್ ಡಿಸೈನಿಂಗ್, ಗೃಹಾಲಂಕಾರ ವಸ್ತುಗಳನ್ನು ಜೋಡಿಸಿಕೊಳ್ಳುವುದು ಇವುಗಳಲ್ಲಿ ನೀವು ಅಂದುಕೊಂಡಂತೆ ನಡೆಯದೆ ಮನಸ್ಸಿಗೆ ಬೇಸರ ಕಾಡಲಿದೆ. ಅಥವಾ ನೀವು ಅದಕ್ಕಾಗಿ ಹಣ ಪಾವತಿಸಿದ ನಂತರದಲ್ಲೂ ನಿಮಗೆ ವಂಚನೆಗಳಾಗಬಹುದು. ಕಳಪೆ ವಸ್ತುಗಳನ್ನು ನೀಡುವ ಸಾಧ್ಯತೆ ಇದೆ. ನೀವಾಗಿಯೇ ಉದ್ಯೋಗ ಬಿಡುವ ನಿರ್ಧಾರವನ್ನು ಮಾಡಬೇಡಿ. ಒಂದು ವೇಳೆ ಉದ್ಯೋಗ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ನೀವು ಸೇರಲಿರುವ ಹೊಸ ಸಂಸ್ಥೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿ. ಏಪ್ರಿಲ್ ನಿಂದ ಆಚೆಗೆ ಬರುವಂಥ ವಿದೇಶ ಪ್ರಯಾಣ, ದೂರ ಪ್ರದೇಶಗಳಿಗೆ ತೆರಳುವ ವಿಚಾರದಲ್ಲೂ ಬಹಳ ಜಾಗ್ರತೆ ಇರಬೇಕು. ವಿವಾಹಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ಹಿಂದೆ ಬಂದಿದ್ದಂಥ ಸಂಬಂಧವೇ ಮತ್ತೊಮ್ಮೆ ಹುಡುಕಿಕೊಂಡು ಬರಲಿದೆ. ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಆಸಕ್ತಿ ಕುಂಠಿತವಾಗಲಿದೆ. ಗರ್ಭ ಧರಿಸಿದಂಥ ಅಥವಾ ಅದಕ್ಕಾಗಿ ಪ್ರಯತ್ನಿಸುತ್ತಿರುವ ಹೆಣ್ಣುಮಕ್ಕಳು ಸೂಕ್ತ ವೈದ್ಯಕೀಯ ಮಾರ್ಗದರ್ಶನ ಪಡೆದುಕೊಳ್ಳಿ. ಗಾಸಿಪ್ ಮಾತನಾಡುವವರು/ಹಬ್ಬಿಸುವವರಿಂದ ದೂರ ಇರುವುದು ಕ್ಷೇಮ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಒಂದೇ ಕೆಲಸಕ್ಕೆ ಹಲವು ಸಲ ಅಲೆದಾಡುವಂಥ ಸನ್ನಿವೇಶ ಎದುರಾಗುತ್ತದೆ. ನೀವೇ ಕೊಟ್ಟ ಮಾತಿನಂತೆ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ಮುಖ್ಯವಾಗಿ ನಿಮ್ಮ ಬಗ್ಗೆ ನಿಮಗೇ ಒಂದು ಬಗೆಯ ಅಸಮಾಧಾನ ಹಾಗೂ ನಂಬಿಕೆಯ ಕೊರತೆ ಆಗುವಂಥ ಸಮಯ ಇದಾಗಿರಲಿದೆ. ವರ್ಷದ ಮೊದಲ ನಾಲ್ಕು ತಿಂಗಳ ಸ್ವಲ್ಪ ಮಟ್ಟಿಗೆ ಹಣಕಾಸಿನ ಹರಿವಿಗೆ ಅಡ್ಡಿ ಇರುವುದಿಲ್ಲ. ಆದರೆ ನಂತರದಲ್ಲಿ ಹಣಕಾಸಿಗೆ ಒತ್ತಡ ಸೃಷ್ಟಿಯಾಗಲಿದೆ. ಸ್ನೇಹಿತರೋ ಸಂಬಂಧಿಗಳೋ ಕಾರು ಖರೀದಿಸಿದರು, ಮನೆ- ಸೈಟು ಕೊಂಡರು ಎಂಬ ಕಾರಣಕ್ಕೆ ನೀವು ಹಠಕ್ಕೆ ಬಿದ್ದು, ಸಾಲ- ಸೋಲ ಮಾಡಿಯಾದರೂ ಖರೀದಿಸುತ್ತೇನೆ ಎಂದು ಹೊರಡಬೇಡಿ. ಈ ವರೆಗೆ ಅಂದರೆ, ಈ ಹಿಂದಿನ ವರ್ಷ ನಿಮಗೆ ಕಾಡಿದ ಅನಾರೋಗ್ಯ ಸಮಸ್ಯೆಗಳು, ಮಾನಸಿಕ ಹಿಂಸೆ ಹಾಗೂ ಅದಕ್ಕೇನಾದರೂ ಮಾನಸಿಕ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯುತ್ತಿದ್ದಲ್ಲಿ ಫಾಲೋ ಅಪ್ ಚೆಕಪ್ ಗಳ ಬಗ್ಗೆ ಗಮನವನ್ನು ನೀಡಿ. ಶಿಫಾರಸು ಮಾಡಿಸಿದಲ್ಲಿ ಕೆಲಸ- ಕಾರ್ಯಗಳು ಆಗುತ್ತವೆ ಎಂಬ ಸುಳಿವು ದೊರೆತಲ್ಲಿ ಹಾಗೂ ಹಾಗೆ ಶಿಫಾರಸು ಮಾಡಿಸುವುದಕ್ಕೆ ನಿಮಗೆ ಪ್ರಭಾವಿಗಳ ಪರಿಚಯವೂ ಇದೆ ಎಂದಾದಲ್ಲಿ ಅವಕಾಶದ ಸದುಪಯೋಗ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಪೋಷಕರು ನೀಡುವಂಥ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ. ನಿಮಗೆ ಗೊತ್ತಿದ್ದೂ ತಪ್ಪುಗಳನ್ನು ಮಾಡುವುದು ದೊಡ್ಡ ಸಮಸ್ಯೆಗೆ ಗುರಿ ಮಾಡಲಿದೆ. ಈ ಹಿಂದೆ ಹಾಗೆ ಮಾಡಿದ್ದೆ ಏನೂ ಸಮಸ್ಯೆ ಆಗಿಲ್ಲ ಅಂತಲೋ ಅಥವಾ ಇಷ್ಟು ಸಣ್ಣ ತಪ್ಪನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ ಅಂತಲೋ ಹಗುರುವಾಗಿ ಪರಿಗಣಿಸಬೇಡಿ. ವೃತ್ತಿನಿರತರಿಗೆ ದೊಡ್ಡ ಪ್ರಾಜೆಕ್ಟ್ ಗಳು ಆರಂಭವಾದಂತೆಯೇ ಆಗಿ, ಮಧ್ಯದಲ್ಲಿ ನಿಂತುಬಿಡಬಹುದು. ಆದ್ದರಿಂದ ಆದಾಯ ಅಥವಾ ಲಾಭ ಪೂರ್ಣ ಪ್ರಮಾಣದಲ್ಲಿ ಕೈ ಸೇರುವ ತನಕ ಅಡ್ವಾನ್ಸ್ ನೀಡುವುದೋ ಅಥವಾ ಸಾಲ ಮಾಡಿ ದೊಡ್ಡ ದೊಡ್ಡ ಹೂಡಿಕೆ ಮಾಡುವಂಥ ನಿರ್ಧಾರಗಳು ಬೇಡ. ಕನ್ಸಲ್ಟೆನ್ಸಿಗಳ ಮೂಲಕ ವಿದೇಶಗಳಲ್ಲಿ ಉದ್ಯೋಗ- ವ್ಯಾಸಂಗಕ್ಕೆ ಪ್ರಯತ್ನ ಮಾಡುತ್ತಿರುವವರು ಅಥವಾ ಇನ್ನು ಮುಂದೆ ಮಾಡುವವರು ಯಾರೋ ಒಬ್ಬ ವ್ಯಕ್ತಿಯನ್ನು ವಿಪರೀತ ನಂಬಿಕೊಳ್ಳುವುದು ಸಮಸ್ಯೆಗೆ ಕಾರಣ ಆಗಬಹುದು. ಪ್ರೀತಿ- ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ಖರ್ಚು ಹೆಚ್ಚಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಅಂತರಂಗದ ವಿಚಾರಗಳು, ವ್ಯಾಪಾರ- ವ್ಯವಹಾರದ ಗುಟ್ಟು ಹೊರಗೆ ಹೋಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಹೂಡಿಕೆ ಹಾಗೂ ಉಳಿತಾಯದ ಬಗ್ಗೆ ನಿಮ್ಮ ಆದ್ಯತೆ ಹೆಚ್ಚಾಗಲಿದೆ. ಅದೇ ವೇಳೆ ಆದಾಯದ ಮೂಲಗಳನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ. ನಿಮ್ಮಲ್ಲಿ ಕೆಲವರು ಉದ್ಯೋಗದ ಜೊತೆಗೆ ಮತ್ತೊಂದು ಆದಾಯ ತರುವಂಥ ಫ್ರೀಲ್ಯಾನ್ಸ್ ಕೆಲಸವನ್ನೋ ಅಥವಾ ವ್ಯಾಪಾರ- ವ್ಯವಹಾರವನ್ನೋ ಆರಂಭಿಸುವ ಬಗ್ಗೆ ಗಟ್ಟಿಯಾದ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಕಂಪನಿಯ ಟಾಪ್ ಮ್ಯಾನೇಜ್ ಮೆಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರು ತಮ್ಮ ತೀರ್ಮಾನಗಳ ಮೂಲಕ ಎಲ್ಲರ ಗಮನವನ್ನು ಸೆಳೆಯುವಂಥ ಅವಕಾಶಗಳಿವೆ. ಇದನ್ನು ಮುಂದಿನ ಯಶಸ್ಸಿಗೆ ಹೇಗೆ ದಾರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚೆನ್ನಾಗಿ ಆಲೋಚನೆ ಮಾಡಿಟ್ಟುಕೊಳ್ಳಿ. ಕೂದಲು ಉದುರುವುದು, ನರಗಳ ಸಮಸ್ಯೆ, ನಿದ್ರೆಗೆ ಸಮಸ್ಯೆ ಆಗುವಂಥ ಕೆಲವು ಆರೋಗ್ಯ ಏರುಪೇರುಗಳು ನಿಮ್ಮನ್ನು ಕಾಡಬಹುದು. ಇದಕ್ಕೆ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವ ಕಡೆಗೆ ಆದ್ಯತೆಯನ್ನು ನೀಡಿ. ನಿಮ್ಮಲ್ಲಿ ಕೆಲವರಿಗೆ ಸಾಲದ ಪ್ರಮಾಣವು ಹೆಚ್ಚಾಗಲಿದೆ.
ಅದರಲ್ಲೂ ಯಾರು ಮನೆ ನಿರ್ಮಾಣ ಮಾಡುತ್ತೀರಿ ಅಥವಾ ಕೃಷಿ ಜಮೀನಿನಲ್ಲಿ ಕೆಲಸ- ಕಾರ್ಯಗಳನ್ನು ಮಾಡಿಸುವುದಕ್ಕೆ ಮುಂದಾಗುತ್ತೀರಿ, ಅಂಥವರು ಸಾಮರ್ಥ್ಯಕ್ಕೆ ಮೀರಿ ಖರ್ಚು ವೆಚ್ಚವನ್ನು ಮೈ ಮೇಲೆ ಹಾಕಿಕೊಳ್ಳದಿರುವುದು ಕ್ಷೇಮ. ವಿವಾಹಕ್ಕೆ ಪ್ರಯತ್ನಿಸುತ್ತಿರುವವರು ಏನಾದರೂ ಒಂದು ಕಾರಣಕ್ಕೆ ಸದ್ಯಕ್ಕೆ ಹುಡುಕುವುದು ನಿಲ್ಲಿಸೋಣ ಎಂಬ ತೀರ್ಮಾನಕ್ಕೆ ಬಾರದಿರುವುದು ಒಳ್ಳೆಯದು. ಇನ್ನು ಪ್ರೀತಿ- ಪ್ರೇಮದಲ್ಲಿ ಇರುವವರು “ಈಗೋ” ಕಾರಣಕ್ಕೆ ದೀರ್ಘಾವಧಿಗೆ ಮಾತು ಬಿಡುವಂಥ ಅಥವಾ ಬೇರೆಯಾಗುವ ನಿರ್ಧಾರಕ್ಕೆ ಬಂದುಬಿಡಬಹುದು. ಅಂಥ ಸನ್ನಿವೇಶ ತಲೆ ಎತ್ತದಂತೆ ಎಚ್ಚರಿಕೆ ವಹಿಸಿ. ವಿದೇಶಕ್ಕೆ ವ್ಯಾಸಂಗ- ಉದ್ಯೋಗ ಮತ್ತ್ಯಾವುದೇ ಕಾರಣಕ್ಕೆ ತೆರಳಬೇಕು ಎಂದುಕೊಂಡವರು ವೀಸಾ ಅಥವಾ ಬೇರೆ ಯಾವುದಾದರೂ ದಾಖಲೆ- ಕಾಗದ ಪತ್ರಗಳ ಸಮಸ್ಯೆ ಕಾಣುವಂತೆ ಆಗುತ್ತದೆ. ಸಿಟ್ಟೋ ಅಥವಾ ಗೊಂದಲಕ್ಕೆ ಒಳಗಾಗದೆ ಅಗತ್ಯ ಇರುವ ದಾಖಲೆ ಹೊಂದಿಸಿಕೊಳ್ಳುವುದಕ್ಕೆ ನಿಮ್ಮ ಸಮಯ ಮೀಸಲಿಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ವ್ಯಾಪ್ತಿಯಲ್ಲಿ ಏನು ಮಾಡುವುದಕ್ಕೆ ಸಾಧ್ಯವೋ ಅವುಗಳನ್ನು ಆದ್ಯತೆ ಮೇಲೆ ಮಾಡುತ್ತಾ ಸಾಗಿ. ಬಹಳ ವರ್ಷಗಳಿಂದ ಅಂದುಕೊಳ್ಳುತ್ತಾ ಬಂದಿದ್ದ ಹಲವು ಪ್ರಾಜೆಕ್ಟ್ ಗಳನ್ನು ಪೂರ್ತಿ ಮಾಡುವುದಕ್ಕೆ ಅನುಕೂಲಗಳು ಒದಗಿ ಬರಲಿವೆ. ಮದುವೆ ವಿಚಾರ ಇರಬಹುದು ಅಥವಾ ಮನೆ ಕಟ್ಟುವುದು, ಸ್ವಂತ ವ್ಯಾಪಾರ- ಉದ್ಯಮ ಆರಂಭ ಮಾಡುವುದಾಗಿರಬಹುದು, ಈ ವರ್ಷ ಬೆಳವಣಿಗೆ- ಪ್ರಗತಿ ಕಾಣುತ್ತದೆ, ಕೆಲವು ಗುರಿ ಮುಟ್ಟುತ್ತದೆ. ಇನ್ನು ಪ್ರೀತಿ- ಪ್ರೇಮದ ವಿಚಾರದಲ್ಲಿ ಯಾವುದನ್ನೂ ಅತಿ ಮಾಡುವುದಕ್ಕೆ ಹೋಗಬೇಡಿ. ನಿಮಗೆ ಗೊತ್ತಿರುವ ವಿಚಾರವೇ ಇರಬಹುದು, ಆ ಬಗ್ಗೆ ನಿಮಗೆ ತುಂಬ ವಿಶ್ವಾಸವೇ ಇರಬಹುದು. ಆದರೆ ನಾನು ಅಂದುಕೊಂಡಿದ್ದೇ ಆಗಬೇಕು ಹಾಗೂ ಅದೇ ಸರಿ ಎಂಬ ಹಠ ಯಾವ ಕಾರಣಕ್ಕೂ ಬೇಡ. ಉದ್ಯೋಗ ಸ್ಥಳದಲ್ಲಿ ಮಹತ್ತರವಾದ ಜವಾಬ್ದಾರಿಗಳು ನಿಮ್ಮ ಹೆಗಲು ಏರಲಿವೆ. ನೆನಪಿನಲ್ಲಿಡಿ, ಅದು ಒತ್ತಡ ಎಂದೆನಿಸಿ, ನಿಮ್ಮಲ್ಲಿ ಕೆಲವರು ಕೆಲಸ ಬೇಡವೇ ಬೇಡ ಎಂದುಕೊಂಡು ಬಿಡುತ್ತೀರಿ. ಮತ್ತೆ ಕೆಲವರಿಗೆ ಇದರಿಂದ ಭವಿಷ್ಯದಲ್ಲಿ ಆಗುವಂಥ ಅನುಕೂಲಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ. ನಿಮ್ಮಲ್ಲಿ ಯಾರು ಸಾಂಸ್ಕೃತಿಕ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ, ಅಂಥವರಿಗೆ ವಿದೇಶಗಳಿಂದ ಆಹ್ವಾನ ಬಂದು, ಅಲ್ಲಿಗೆ ತೆರಳುವಂಥ ಯೋಗ ಇದೆ. ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಯಾವುದಾದರೂ ಸಂಘ- ಸಂಸ್ಥೆ ಅಥವಾ ವ್ಯಕ್ತಿಗಳ ಜೊತೆಗೆ ಏನಾದರೂ ಮಾತುಕತೆ ನಡೆಸಿದ್ದಿರಿ ಅಂತಾದಲ್ಲಿ, ಈ ವರ್ಷ ನಿಮಗೆ ಅವಕಾಶಗಳು ಬರಲಿವೆ. ಆಹಾರ ಪಥ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಮುಖ್ಯ. ನಿಮಗೆ ಯಾವ ಆಹಾರ ಅಲರ್ಜಿಗೆ ಕಾರಣ ಆಗಬಹುದು ಎಂಬ ಅಂದಾಜು ಇರುತ್ತದೆಯೋ ಅಂಥವುಗಳಿಗೆ ಕಡ್ಡಾಯವಾಗಿ ದೂರ ಇದ್ದುಬಿಡುವುದು ಉತ್ತಮ. ಅಥವಾ ಪದೇಪದೇ ಅಲರ್ಜಿ ಆಗುತ್ತಿದೆ ಎಂದಾದಲ್ಲಿ ಅದು ಯಾವ ಕಾರಣಕ್ಕೆ ಎಂಬ ಬಗ್ಗೆ ಸರಿಯಾದ ವೈದ್ಯರ ಮಾರ್ಗದರ್ಶನ ಪಡೆದು, ಸಮಸ್ಯೆ ನಿವಾರಣೆ ಮಾಡಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಹಣಕಾಸಿಗೆ ಸಂಬಂಧಿಸಿದಂತೆ ನೀವು ನಡೆದುಕೊಳ್ಳುವ ರೀತಿ, ತೆಗೆದುಕೊಳ್ಳುವ ತೀರ್ಮಾನಗಳು ದಂಪತಿ ಮಧ್ಯೆ ವಿರಸಕ್ಕೆ ಕಾರಣ ಆಗಬಹುದು. ಕೂತು- ಮಾತನಾಡಿ ಬಗೆಹರಿಸಿಕೊಳ್ಳಬಹುದಾದ ಸಂಗತಿಗಳನ್ನು ಜಗಳದ ಮಟ್ಟಕ್ಕೆ ಒಯ್ಯಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ವಾಹನ ಖರೀದಿ, ಐಷಾರಾಮಿ ವಸ್ತುಗಳನ್ನು ಕೊಳ್ಳುವುದು, ವಿದೇಶಗಳಲ್ಲಿ ಭೂಮಿ- ಮನೆ ಕೊಂಡುಕೊಳ್ಳುವಂಥ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ಸಾಮಾನ್ಯವಾಗಿ ನಿಮ್ಮದಲ್ಲದ ಸ್ವಭಾವವಾದ ಆಕ್ರಮಣಕಾರಿ ಧೋರಣೆಯನ್ನು ಮಾತುಕತೆಯಲ್ಲಿ ಕಾಣುವಂತಾಗುತ್ತದೆ. ಇನ್ನು ನಿಮ್ಮಲ್ಲಿ ಯಾರು ಅರೆಕಾಲಿಕ ಉದ್ಯೋಗದಲ್ಲಿ ಇದ್ದೀರಿ ಅಂಥವರಿಗೆ ಒಂದೋ ಕಾಯಂ ಆಗಲಿದೆ ಅಥವಾ ನೀವು ಗಟ್ಟಿಯಾದ ತೀರ್ಮಾನವನ್ನು ಕೈಗೊಂಡ ಸ್ವಂತ ವ್ಯಾಪಾರ- ವ್ಯವಹಾರ ಅಥವಾ ಉದ್ಯಮ ಆರಂಭಿಸುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಕಾರ್ಯಕ್ರಮಗಳು, ಸಮಾರಂಭಗಳಲ್ಲಿ ಭಾಗವಹಿಸಿದ್ದ ವೇಳೆ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಗಾತಿ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿ, ಮದುವೆ ತನಕ ಸಾಗಲಿದೆ. ನಿಮ್ಮಲ್ಲಿ ಯಾರು ಕನ್ಸಲ್ಟೆಂಟ್ ಗಳಾಗಿ, ಅಡ್ವೈಸರ್ ಗಳಾಗಿ ಅಥವಾ ವಕೀಲರಾಗಿ ವೃತ್ತಿ ಮಾಡುತ್ತಿರುವಿರೋ ಅಂಥವರಿಗೆ ಹೊಸ ಕ್ಲೈಂಟ್ ಗಳು ದೊರೆಯಲಿದ್ದಾರೆ. ಅದರಲ್ಲೂ ಸಂಸ್ಥೆಗಳಿಗೆ ನೀವು ವಕೀಲರಾಗಿ- ಕಾನೂನು ಸಲಹೆಗಾರರಾಗಿ ನೇಮಕರಾಗುವ ಅವಕಾಶಗಳಿವೆ. ಇನ್ನು ಈಗಾಗಲೇ ಸೈಟು ಅಥವಾ ಜಮೀನು ಇದೆ ಎಂದಾದಲ್ಲಿ ಅದನ್ನು ಮಾರಾಟ ಮಾಡಿ, ನಿರಂತರವಾಗಿ ಆದಾಯ ತರುವಂಥ ಕಡೆಗೆ ಹೂಡಿಕೆ ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಇಲ್ಲದಿದ್ದರೆ ಈಗ ಇರುವ ಸೈಟು- ಜಮೀನಿನ ಮೂಲಕವೇ ಆದಾಯ ಹೆಚ್ಚು ಬರುವಂಥ ಅಥವಾ ಈಗ ಬರುತ್ತಿಲ್ಲ ಎಂದಾದಲ್ಲಿ ಬರುವಂತೆ ಮಾಡಿಕೊಳ್ಳುವುದಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡಲಿದ್ದೀರಿ. ಇನ್ನು ಕೆಲವರು ಆರೋಗ್ಯದ ಕಾರಣಕ್ಕೆ ಅಥವಾ ಮಕ್ಕಳ ಆರೈಕೆ ಅಥವಾ ಆಪ್ತರು- ಸಂಬಂಧಿಕರನ್ನು ಕಾಳಜಿ ಮಾಡುವುದಕ್ಕಾಗಿ ವಿದೇಶಕ್ಕೆ ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಈ ವರ್ಷ ಶಿಸ್ತುಪಾಲನೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ. ಇತರರ ಸಲುವಾಗಿ ನಿಮ್ಮ ಅಭ್ಯಾಸಗಳನ್ನು ಬದಲಿಸುವುದಕ್ಕೆ ಹೋಗದಿರಿ. ವಿದ್ಯಾರ್ಥಿಗಳಾಗಿದ್ದಲ್ಲಿ ಏನಾದರೊಂದು ಕಾರಣಕ್ಕೆ, ಅದು ನಿಮಗೆ ಒಳ್ಳೆಯದನ್ನು ಮಾಡುವಂಥದ್ದೇ ಇರಬಹುದು, ಅಥವಾ ಸವಾಲಿನ ಸಮಯವೇ ಇರಬಹುದು. ಒಟ್ಟಿನಲ್ಲಿ ದೀರ್ಘಾವಧಿಗೆ ರಜಾ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಬರಬೇಕಾದ ಆಸ್ತಿ- ಹಣ ಇತ್ಯಾದಿಗಳು ದೊರೆಯುವ ಸಾಧ್ಯತೆ ಹೆಚ್ಚಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನೀವು ಈಗ ವಾಸಿಸುತ್ತಿರುವ ಸ್ಥಳದಿಂದ ದೂರಕ್ಕೆ ತೆರಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಅದು ನೀವೇ ಆರಿಸಿಕೊಳ್ಳುವ ಉದ್ಯೋಗದ ಕಾರಣಕ್ಕೋ ಅಥವಾ ವ್ಯಾಪಾರ- ವ್ಯವಹಾರದ ಕಾರಣಗಳಿಗೋ ಈಗಿರುವ ಜಾಗದಿಂದ ಬೇರೆ ಕಡೆಗೆ ಹೋಗಬೇಕಾಗುತ್ತದೆ. ನಿಮ್ಮಲ್ಲಿ ಕೆಲವರು ಭವಿಷ್ಯದ ದೃಷ್ಟಿಯಿಂದ ಕೆಲವು ಕೋರ್ಸ್ ಗಳಿಗೆ ಸೇರುವ ನಿರ್ಧಾರವನ್ನು ಮಾಡುತ್ತೀರಿ. ಅದೇ ರೀತಿ ಲೋಕಸೇವಾ ಆಯೋಗ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳು, ಸರ್ಕಾರಿ ಕೆಲಸಕ್ಕಾಗಿ ಸಿದ್ಧಗೊಳ್ಳುವುದಕ್ಕೆ ಬೇಕಾದ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಕ್ಕಾಗಿ ಗಂಭೀರ ಪ್ರಯತ್ನಗಳನ್ನು ಶುರು ಮಾಡುತ್ತೀರಿ. ಈಗಾಗಲೇ ಪ್ರೀತಿ- ಪ್ರೇಮದಲ್ಲಿ ಇರುವಂಥ ಕೆಲವರಿಗೆ ಅದರಲ್ಲಿ ದುಃಖ ತರುವಂಥ ಬೆಳವಣಿಗೆಗಳು ಆಗಲಿವೆ. ದಿಢೀರ್ ಆಗಿ ಆಗುವಂತಹ ಕೆಲವು ಬೆಳವಣಿಗೆಗಳು ಮತ್ತು ಕೌಟುಂಬಿಕ ಕಾರಣಗಳಿಂದಾಗಿ ದೂರವಾಗುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಉದ್ಯೋಗ ಸ್ಥಳದಲ್ಲಿ ನೀವು ನೀಡಿದ ಸಲಹೆ ಹಾಗೂ ತೆಗೆದುಕೊಂಡು ಕೆಲವು ತೀರ್ಮಾನಗಳಿಂದಾಗಿ ಜವಾಬ್ದಾರಿ ನಿಮ್ಮ ಪಾಲಿಗೆ ಹೊರೆಯಂತೆ ಕಾಡಲಿದೆ. ಕೆಲವು ಬಾರಿ ಉತ್ಸಾಹವೇ ಇಳಿದು ಹೋಗಿ, ಕೆಲವು ದಿನ ರಜಾ ತೆಗೆದುಕೊಂಡು ಪ್ರವಾಸಕ್ಕೆ ತೆರಳಬೇಕು ಅಂದುಕೊಂಡರೂ ಅದು ಕಾಡ ಸಾಧ್ಯವಾಗದೇ ಹೋಗಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಾಣಲಿದೆ. ಹೂಡಿಕೆ ಮಾಡಬೇಕು, ಉಳಿತಾಯ ಮಾಡಬೇಕು ಎಂದು ಇಷ್ಟು ಸಮಯ ಬರೀ ಆಲೋಚನೆಯೇ ಆಗಿದೆ, ಅದನ್ನು ಕಾರ್ಯ ರೂಪಕ್ಕೆ ತರುವುದು ಸಾಧ್ಯವಾಗುತ್ತಿಲ್ಲ ಎಂದುಕೊಳ್ಳುತ್ತಿರುವವರಿಗೆ ಈ ವರ್ಷ ಅದು ಸಾಧ್ಯವಾಗಲಿದೆ. ನಿಮ್ಮಲ್ಲಿ ಯಾರು ಯೋಗ ಕಲಿಸುವುದು, ಧಾರ್ಮಿಕ ಪ್ರವಚನ, ದೇವಾಲಯ ಪಾರುಪತ್ತೆದಾರರು ಇಂಥ ವೃತ್ತಿಯಲ್ಲಿ ಇರುವಿರೋ ಅಂಥವರಿಗೆ ಗೌರವ- ಸಮ್ಮಾನಗಳು ದೊರೆಯಲಿವೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವ ಕೆಲವರಿಗೆ ಪ್ರಶಸ್ತಿಗಳು ಬರುವ ಸಾಧ್ಯತೆಗಳಿವೆ. ಮನೆ ದೇವರ ಆರಾಧನೆಯನ್ನು ಮಾಡಿಕೊಳ್ಳಿ. ಸ್ನೇಹಿತರು- ಸಂಬಂಧಿಗಳ ಮೂಲಕ ನಿಮಗೆ ಅವಕಾಶಗಳ ಬಗ್ಗೆ ಏನಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಅದಕ್ಕೆ ಪ್ರಯತ್ನಿಸುವುದು ಮುಖ್ಯವಾಗುತ್ತದೆ. ಸಮಯ- ಶಿಸ್ತುಪಾಲನೆ ನಿಮ್ಮ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೇವತಾ ಧ್ಯಾನ, ತೀರ್ಥಯಾತ್ರೆ, ಪೂಜೆ- ಪುನಸ್ಕಾರಗಳ ಕಡೆಗಿನ ಸೆಳೆತ ಹಾಗೂ ಭಾಗವಹಿಸುವಿಕೆ ಜಾಸ್ತಿ ಆಗಲಿದೆ. ಇಲ್ಲಿಯವರೆಗಿನ ಸರಿ- ತಪ್ಪುಗಳು ಯಾವುವು ಎಂಬ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳಲಿದ್ದೀರಿ. ನಿಮ್ಮ ಸ್ನೇಹಿತರಿಂದ ಹಲವು ರೀತಿಯಲ್ಲಿ ಅನುಕೂಲಗಳು ಆಗಲಿವೆ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು, ತೊಂದರೆಗಳು ಅಥವಾ ಉದ್ಯೋಗ ಕಳೆದುಕೊಂಡಿದ್ದೀನಿ, ಮತ್ತೆ ಸಿಗುತ್ತಿಲ್ಲ ಎಂದು ಆಲೋಚಿಸುತ್ತಿರುವವರಿಗೆ ಚಿಂತೆ ದೂರವಾಗಲಿದೆ. ನೀವು ಯಾವ ರೀತಿಯ ಪರಿಸರ- ವಾತಾವರಣದಲ್ಲಿ ಮನೆ ಮಾಡಿಕೊಂಡು ಇರಬೇಕು ಎಂದು ಬಯಸುತ್ತೀರೋ ಅಂಥಲ್ಲಿಯೇ ವಾಸ ಮಾಡುವಂಥ ಅವಕಾಶಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಮುಂಚಿಗಿಂತ ಶಿಸ್ತು ಹೆಚ್ಚಾಗಲಿದೆ. ಇನ್ನು ಈಗಾಗಲೇ ಮಾಡಿರುವ ಕೆಲವ ಉಳಿತಾಯ, ಹೂಡಿಕೆಗಳನ್ನು ತೆಗೆದುಕೊಳ್ಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ನಿಮ್ಮ ಮೇಲೆ ನೀವು ಹಣ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡಲಿದ್ದೀರಿ. ಸೋಷಿಯಲ್ ಮೀಡಿಯಾಗಳ ಮೂಲಕ ಆದಾಯ ಬರುವುದಕ್ಕೆ ಬೇಕಾದಂಥ ಕೆಲವು ಚಟುವಟಿಕೆಗಳನ್ನು ಆರಂಭಿಸಲಿದ್ದೀರಿ. ಇಲ್ಲಿಯ ತನಕ ನಿಮಗೆ ಯಾವುದು ಕೇವಲ ಹವ್ಯಾಸವಾಗಿ ಮಾತ್ರ ಇರುತ್ತದೋ ಅಂಥವುಗಳನ್ನು ಆದಾಯವಾಗಿ ಪರಿವರ್ತಿಸುವುದಕ್ಕೆ ಬೇಕಾದಂಥದ್ದನ್ನು ಮಾಡಲಿದ್ದೀರಿ. ಆದರೆ ನಿಮ್ಮಲ್ಲಿ ಯಾರಿಗೆ ದಾಂಪತ್ಯದಲ್ಲಿ ವಿರಸ ಇರುತ್ತದೋ ಅಥವಾ ಈಗಾಗಲೇ ಜಗಳ- ಕದನ- ಕಲಹಗಳು ಇರುತ್ತವೋ ಅದು ಡೈವೋರ್ಸ್ ತನಕ ಹೋಗಲಿವೆ. ಆದ್ದರಿಂದ ಸಾಧ್ಯವಿದ್ದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಒಳ್ಳೆಯದು. ಇನ್ನು ವಿದ್ಯಾರ್ಥಿಗಳು ತಾವು ಸೇರಿದ ಕೋರ್ಸ್ ಪದೇಪದೇ ಬದಲಿಸಿಕೊಳ್ಳುವಂತೆ ಆಗುತ್ತದೆ. ಇದರಿಂದ ತಂದೆ- ತಾಯಿಗಳಿಗೆ ನಿಮ್ಮ ಮೇಲಿನ ನಂಬಿಕೆ ಹೋಗುವಂತಾಗಬಹುದು. ಆದ್ದರಿಂದ ನಿರ್ಧಾರ ಮಾಡುವಾಗಲೇ ಸರಿಯಾದ ರೀತಿಯಲ್ಲಿ ಆಲೋಚಿಸಿ. ಈಗಾಗಲೇ ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರು ಅಲ್ಲಿಂದ ತಮ್ಮ ತಾಯ್ನಾಡಿಗೆ ಮರಳಬೇಕು ಎಂದು ತೀರ್ಮಾನ ತೆಗೆದುಕೊಳ್ಳುವಂತೆ ಆಗುತ್ತದೆ. ಇದರಿಂದ ಭವಿಷ್ಯದಲ್ಲಿ ಅನುಕೂಲವೇ ಆಗಲಿದೆ. ಇಂಥ ವಿಚಾರದಲ್ಲಿ ತಕ್ಷಣಕ್ಕೆ ದೊಡ್ಡ ಮಟ್ಟದ ಆದಾಯವನ್ನು ನಿರೀಕ್ಷೆ ಮಾಡದಿರುವುದು ಉತ್ತಮ. ಆಗ ನೆಮ್ಮದಿಯಾಗಿ ಇರಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕುಟುಂಬ ಸದಸ್ಯರ ಏಳ್ಗೆ, ಅವರ ಶಿಕ್ಷಣ, ಮದುವೆ, ಉದ್ಯೋಗ, ವ್ಯಾಪಾರ- ವ್ಯವಹಾರ ಇಂಥವುಗಳಿಗೆ ನೀವು ಶ್ರಮ ಹಾಕಿ, ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಈಗಾಗಲೇ ಸೈಟ್ ಗಾಗಿ ಹೌಸಿಂಗ್ ಸೊಸೈಟಿ ಅಂಥ ಕಡೆಗಳಲ್ಲಿ ಅರ್ಜಿ ಸಲ್ಲಿಸಿ, ಕಾಯುತ್ತಿದ್ದೀರಿ ಅಂತಾದರೆ ಅಲಾಟ್ ಆಗುವ ಸಾಧ್ಯತೆಗಳು ತುಂಬ ಹೆಚ್ಚಾಗಿವೆ. ಸ್ಕೂಟರ್, ಕಾರು ಇಂಥ ವಾಹನಗಳನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಈಗಾಗಲೇ ವಾಹನ ಇದೆ ಎಂದಾದಲ್ಲಿ ಅದಕ್ಕಿಂತ ದುಬಾರಿ ಅಥವಾ ವಿಲಾಸಿ ವಾಹನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಸರ್ಕಾರಿ ಕಾಂಟ್ರಾಕ್ಟ್ ಗಳನ್ನು ಪಡೆಯುವಂಥವರು, ಅಥವಾ ಅಂಥ ವೃತ್ತಿಯನ್ನು ಈಗಷ್ಟೇ ಶುರು ಮಾಡಿದ್ದರೂ ಪ್ರಭಾವಿಗಳ ಪರಿಚಯ, ನೆರವಿನಿಂದಾಗಿ ದೊಡ್ಡ ಮೊತ್ತದ ಟೆಂಡರ್ ಅಥವಾ ಕೆಲಸಗಳು ನಿಮಗೆ ದೊರೆಯಬಹುದು. ಈ ಹಿಂದೆ ಯಾವಾಗಲೋ ನೀವು ಸಹಾಯ ಮಾಡಿದ್ದಂಥ ವ್ಯಕ್ತಿಗಳು ನಿಮಗೆ ನೆರವು ನೀಡಲಿದ್ದಾರೆ. ನಿಮ್ಮಲ್ಲಿ ಯಾರು ಫಾರ್ಮ್ ಹೌಸ್ ಗಳನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಪಡುತ್ತಿದ್ದೀರಿ ಅಥವಾ ಈಗ ಪ್ರಯತ್ನ ಪಡುತ್ತೀರಿ ಅಂಥವರಿಗೆ ಒಳ್ಳೆ ಜಮೀನು ಸಿಗಲಿದೆ. ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವ ದಂಪತಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಒಂದು ವೇಳೆ ಐವಿಎಫ್ ನಂಥ ಕೃತಕ ಗರ್ಭಧಾರಣೆ ಮೂಲಕ ಪ್ರಯತ್ನ ಮಾಡಬೇಕು ಎಂದಿದ್ದಲ್ಲಿ ಸಹ ಇದು ಉತ್ತಮ ಸಮಯ ಆಗಿದೆ. ಒಂದು ವೇಳೆ ನೀವು ವಿವಾಹ ವಯಸ್ಕರಾಗಿದ್ದಲ್ಲಿ ನಿಮ್ಮಲ್ಲಿ ಕೆಲವರಿಗೆ ಸಂಬಂಧಿಕರಲ್ಲೇ ವಧು/ವರ ದೊರೆತು, ಅಚಾನಕ್ ಆಗಿ ಮದುವೆ ಆಗಲಿದೆ. ಆರೋಗ್ಯದ ಕಾರಣಕ್ಕೆ ಉದ್ಯೋಗದಿಂದ ತಾತ್ಕಾಲಿಕವಾದ ಬಿಡುವು ತೆಗೆದುಕೊಳ್ಳಬೇಕು ಎಂಬ ಚಿಂತನೆಯು ನಿಮ್ಮಲ್ಲಿ ಕೆಲವರಿಗೆ ಮೂಡಲಿದೆ. ಕುಟುಂಬದಲ್ಲಿನ ಶುಭ ಕಾರ್ಯಗಳನ್ನು ನೀವೇ ಮುಂದೆ ನಿಂತು ನಡೆಸಿಕೊಡ ಬೇಕಾಗಲಿದೆ. ಹಣಕಾಸಿನ ಹೊಂದಾಣಿಕೆ ಮಾಡುವಂತೆ ಹಾಗೂ ಇರುವ ಹಣವನ್ನು ನಿರ್ವಹಿಸುವಂತೆ ನಿಮಗೇ ಸೂಚಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಆಸಕ್ತಿ ಜಾಸ್ತಿಯಾಗಲಿದೆ. ಐಟಿ- ಬಿಪಿಒ, ಬಿಟಿ ಇಂಥ ಕ್ಷೇತ್ರಗಳಲ್ಲಿ ಇರುವವರು ಅಥವಾ ಸರ್ಕಾರಿ ಕೆಲಸದಲ್ಲೇ ಇರುವವರಾದರೂ ಕೆಲವು ವಾರದಿಂದ ತಿಂಗಳುಗಳ ತನಕ ತರಬೇತಿಗಾಗಿ ಅಥವಾ ಅಲ್ಲಿನ ಪ್ರಾಜೆಕ್ಟ್ ತಾವು ಉದ್ಯೋಗ ಮಾಡುತ್ತಿರುವ ಸ್ಥಳಕ್ಕೆ ತರುವುದಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾಗುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಕೈಲಿ ಇರುವುದು, ಆಪತ್ಕಾಲಕ್ಕೆ ಎಂದು ಕೂಡಿಟ್ಟುಕೊಂಡಿದ್ದು, ಮಕ್ಕಳ ಶಿಕ್ಷಣ- ಮದುವೆ ಹೀಗೆ ವಿವಿಧ ಕಾರಣಗಳಿಗಾಗಿ ಸೇರಿಸಿಟ್ಟುಕೊಂಡಿದ್ದ ಹಣವನ್ನೆಲ್ಲ ತೆಗೆಯಲಿದ್ದೀರಿ. ಇದಕ್ಕೆ ಕಾರಣ ಆಗುವುದು ಸಹ ನಿಮ್ಮದೇ ಪ್ಲಾನಿಂಗ್. ನಿಮ್ಮಲ್ಲಿ ಒಂದು ಬಗೆಯ ಅಭದ್ರತೆ ಕಾಡುವುದಕ್ಕೆ ಶುರು ಆಗಲಿದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಹಾಗಿರುವುದಿಲ್ಲ. ನಿಮಗೆ ನೀವೇ ಅಂದುಕೊಳ್ಳಲಿದ್ದೀರಿ: ಆದಾಯ ಮೂಲಗಳು ಜಾಸ್ತಿ ಮಾಡಿಕೊಳ್ಳಬೇಕು, ನಿರಂತರವಾಗಿ ಆದಾಯವನ್ನು ತರುವಂಥ ಹೂಡಿಕೆಗಳನ್ನು ಮಾಡಬೇಕು, ಭೂಮಿ ಮೇಲೆ ಹಣವನ್ನು ಹಾಕಬೇಕು. ನೀವು ಹೀಗೆ ನಾನಾ ಆಲೋಚನೆಗೆ ಬಿದ್ದು, ಇಷ್ಟು ಸಮಯದ ನಿಮ್ಮ ವೇಗದಲ್ಲೇ ಬದಲಾವಣೆಯನ್ನು ತಂದುಕೊಂಡು, ಇತರರು ಆಶ್ಚರ್ಯ ಪಡುವಂತೆ ಬದಲಾಗುತ್ತೀರಿ. ಸಂಗಾತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ಗುರಿ ಮಾಡಬಹುದು. ಒಂದಕ್ಕಿಂತ ಹೆಚ್ಚು ಕಡೆಗೆ ವೈದ್ಯರ ಬಳಿ ತಪಾಸಣೆಗೆ ತೋರಿಸಬೇಕಾದ ಹಾಗೂ ಔಷಧೋಪಚಾರ ಮಾಡಬೇಕಾದ ಪರಿಸ್ಥಿತಿ ಉದ್ಭವಿಸುವುದರಿಂದ ಸ್ವಲ್ಪ ಮಟ್ಟಿಗೆ ವಿಚಲಿತರಾಗುತ್ತೀರಿ. ವಿದ್ಯಾರ್ಥಿಗಳಿಗೆ ಮೊದಲಿಗಿಂತ ಉತ್ಸಾಹ ಹಾಗೂ ಆಸಕ್ತಿ ಹೆಚ್ಚಾಗಲಿದೆ. ಕ್ರೀಡೆಗಳಲ್ಲಿ ಹೆಸರು- ಯಶಸ್ಸು ದೊರೆಯಲಿದೆ. ಇನ್ನು ಯಾರು ಆಸ್ತಿಗೆ ಸಂಬಂಧಿಸಿದಂತೆ ಕೋರ್ಟ್- ಕಚೇರಿ ವ್ಯಾಜ್ಯಗಳನ್ನು ನಡೆಸುತ್ತಿದ್ದೀರಿ, ಅಂಥವರಿಗೆ ಅವುಗಳನ್ನು ಬಗೆಹರಿಸಿಕೊಳ್ಳುವಂಥ ವೇದಿಕೆಗಳು ದೊರೆಯಲಿವೆ. ದಂಪತಿ ಮಧ್ಯೆ ಇರುವಂಥ ಭಿನ್ನಾಭಿಪ್ರಾಯ- ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ಸಮಯ ಇದಾಗಿರಲಿದೆ. ವಿವಾಹ ವಯಸ್ಕರಿಗೆ ಸ್ನೇಹಿತರು- ಸಂಬಂಧಿಕರಲ್ಲಿಯೇ ಉತ್ತಮ ಸಂಬಂಧ ದೊರೆಯಲಿದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದು ಆಲೋಚಿಸುತ್ತಿರುವವರು ವರ್ಷದ ಮೊದಲ ಆರು ತಿಂಗಳಲ್ಲಿ ಪ್ರಯತ್ನಿಸಿ. ವಿದೇಶಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು, ಕೃಷಿ ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವವರು ದಾಖಲೆ- ಪತ್ರಗಳು, ಆದಾಯ ತೆರಿಗೆ ವಿಚಾರಗಳಲ್ಲಿ ಜಾಗ್ರತೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಬಳಿ ಇದೆ ಅಂದುಕೊಂಡು ಸುಮ್ಮನಾಗಿಬಿಟ್ಟರೂ ಅಥವಾ ಇನ್ನೂ ಸಮಯವಿದೆ ಆಮೇಲೆ ಯೋಚಿಸಿದರಾಯಿತು ಎಂಬ ಧೋರಣೆಯನ್ನು ತಳೆದರೆ ಆ ನಂತರ ಬಹಳ ಪರಿತಪಿಸುವಂಥ ಸ್ಥಿತಿ ಬರುತ್ತದೆ, ಜಾಗ್ರತೆಯನ್ನು ವಹಿಸಿ.
ಲೇಖನ- ಎನ್.ಕೆ.ಸ್ವಾತಿ
Published On - 8:11 am, Sat, 28 December 24