Facebook : ನಿಮ್ಮ ಟೈಮ್​ಲೈನ್; ಅಲ್ಪಸಂಖ್ಯಾತರ ಪೀಡಕ ಇದಿ ಅಮೀನ್

|

Updated on: Apr 06, 2022 | 2:58 PM

Idi Amin : ಇಂದು ವೆಸ್ಟರ್ನ್ ಡೆಮಾಕ್ರಸಿಗಳು ಅಷ್ಟೊಂದು ಯಶಸ್ವಿಯಾಗಿರುವುದಕ್ಕೆ ಅವರು ಭ್ರಾತೃತ್ವಕ್ಕೆ, ಅನ್ಯರನ್ನ ಒಳಗೊಳ್ಳುವಿಕೆಗೆ, ಸಹಾನುಭೂತಿಗೆ ನೀಡಿರುವ ಆದ್ಯತೆ ಪ್ರಮುಖವೆನ್ನಿಸುತ್ತದೆ. ನಾವು ವರುಷ ಕಳೆದಂತೆ ಹೆಚ್ಚೆಚ್ಚು ಡೆಮಾಕ್ರೆಟಿಕ್ ಆಗುತ್ತಾ ಹೋಗಬೇಕಾಗಿದೆ.

Facebook : ನಿಮ್ಮ ಟೈಮ್​ಲೈನ್; ಅಲ್ಪಸಂಖ್ಯಾತರ ಪೀಡಕ ಇದಿ ಅಮೀನ್
ಲೇಖಕ ಡಾ. ಹರೀಶ ಗಂಗಾಧರ ಮತ್ತು ಉಗಾಂಡಾದ ಮಾಜಿ ರಾಷ್ಟ್ರಪತಿ ಇದಿ ಅಮೀನ್
Follow us on

ನಿಮ್ಮ ಟೈಮ್​ಲೈನ್ | Nimma Timeline : ಆತ ಆರೂವರೆ ಅಡಿ ಎತ್ತರದ ದೈತ್ಯ. ಬ್ರಿಟಿಷರ ಸೇನೆಯಲ್ಲಿ ಕುಕ್ ಆಗಿದ್ದವನು. ನಂತರ ಸೇನೆ ತರಬೇತಿ ಪಡೆದು ಬ್ರಿಟಿಶ್ ಕಿಂಗ್ಸ್ ಆಫ್ರಿಕನ್ ರೈಫಲ್​ನ ಭಾಗವಾದ. ಅತ್ಯುತ್ತಮ ಕ್ರೀಡಾ ಪಟು ಕೂಡ. ನಿಧಾನವಾಗಿ ಬ್ರಿಟಿಷ್ ಸೇನೆಯಲ್ಲಿ ಬೆಳೆದ. ಕಾಲ ಕ್ರಮೇಣ ಒಬ್ಬ ಆಫ್ರಿಕನ್ ಕಪ್ಪುವರ್ಣದವನಿಗೆ ಯಾವ ಅತ್ಯುನ್ನತ ಪದವಿ ಸಿಕ್ಕಬೇಕಿತ್ತೋ ಅದೆಲ್ಲಾ ಅವನಿಗೆ ಸಿಕ್ಕಿಬಿಟ್ಟಿತ್ತು. ಬ್ರಿಟಿಷ್ ಸೇನೆ ಅವನಿಂದ ನಿರೀಕ್ಷೆ ಮಾಡಿದ್ದು ನಿಷ್ಠೆಯನ್ನ, ಜನರ ಮನದಲ್ಲಿ ಭಯೋತ್ಪಾದನೆ ಮಾಡುವಂತಹ ಬರ್ಬರತೆಯನ್ನ. ದೇಶದಲ್ಲಿ ಎಲ್ಲಾದರೂ ದಂಗೆಯೆದ್ದಾಗ, ಆಂತರಿಕ ಕಲಹಗಳು ಮಿತಿಮೀರಿದಾಗ ಅಲ್ಲಿಗೆ ಈತನನ್ನು ಬ್ರಿಟಿಷ್ ಸೇನೆ ಕಳುಹಿಸಿಬಿಡುತಿತ್ತು. ಅಲ್ಲಿ ಈತ ನಡೆಸುತ್ತಿದ್ದ ನರಮೇಧ, ಪ್ರದರ್ಶಿಸುತ್ತಿದ್ದ ಕ್ರೌರ್ಯ, ಲೂಟಿ, ದಾಂಧಲೆ, ಅತ್ಯಾಚಾರ ಎಂತಹವರನ್ನು ನಡುಗಿಸಿಬಿಡುತ್ತಿತ್ತು. ದಂಗೆ ಕ್ರಾಂತಿಗಳನ್ನ ಹತ್ತಿಕ್ಕಿ ಎಲ್ಲರನ್ನು ಅಧೀನರನ್ನಾಗಿ ಮಾಡುತ್ತಿದ್ದ ಈ ದೈತ್ಯ.
ಡಾ. ಹರೀಶ ಗಂಗಾಧರ, ಇಂಗ್ಲಿಷ್ ಪ್ರಾಧ್ಯಾಪಕ, ಚನ್ನಪಟ್ಟಣ

 

ಬ್ರಿಟಿಷರ ಕೋಲ್ಡ್ ಬ್ಲಡೆಡ್ attitude, ನಡಿಗೆ, ನಿಲುವು, ಮಾತುಗಾರಿಗೆ ಎಲ್ಲವನ್ನು ಅನುಕರಣೆಯಿಂದ ಕಲಿತ ಈತ ಸ್ವಾತಂತ್ರ್ಯ ನಂತರದ ದಿನಗಳಲಿ ಜನಪ್ರಿಯ ಸೇನಾನಾಯಕನಾದ. ಸೇನೆಯಲ್ಲಿ ತನಗಿಷ್ಟವಾದ ಬುಡಕಟ್ಟು ಜನರಿಗೆ ಮಾತ್ರ ಅವಕಾಶ ಕೊಟ್ಟು ದೇಶದ ಸೇನೆಯಲ್ಲಿ ಅತ್ಯಂತ ಪ್ರಭಾವಿಯಾದ. ಹೊಂಚು ಹಾಕಿ ಅಧಿಕಾರಕ್ಕಾಗಿ ಕಾದಿದ್ದ ಈತ ಸೇನೆ ಸಹಾಯ ಪಡೆದು ದೇಶದ ರಾಷ್ಟ್ರಪತಿ ವಿದೇಶ ಪ್ರವಾಸದಲ್ಲಿದ್ದಾಗ (ಸಿಂಗಾಪುರದ ಕಾಮನ್ ವೆಲ್ತ್ ಸಭೆ) ಅಧಿಕಾರ ಲಪಟಾಯಿಸಿದ. ಚುನಾವಣೆ ನಡೆಸಿ ದೇಶದ ಅಬಾಧಿತ ನಿರಂಕುಶಾಧಿಕಾರಿಯಾದ. ಈತ ಮತ್ತಾರೂ ಅಲ್ಲ ಉಗಾಂಡಾ ದೇಶದ ಮಾಜಿ ರಾಷ್ಟ್ರಪತಿ ಇದಿ ಅಮೀನ್ (Idi Amin)

ಅಮೀನ್ ಆಳ್ವಿಕೆ ನಡೆಸಿದ್ದು ತನ್ನ ಕಟ್ಟಳೆಗಳಿಂದ ಆಜ್ಞೆಗಳಿಂದ. ಅವನು ಹೇಳಿದ್ದೇ ಶಾಸನ. ಮೊದಮೊದಲು ದೇಶೋದ್ದಾರಕ ಅಧಿಕಾರಕ್ಕೆ ಬಂದಿದ್ದಾನೆಂದು ಸಂತಸಪಟ್ಟ ಸಾಮಾನ್ಯ ಜನರು ಅವನಿಗೆ ಸಂಪೂರ್ಣ ಬೆಂಬಲ ಸೂಚಿಸಿದರು. ಆತನ ನಿಲುವು, ಆಜ್ಞೆಗಳನ್ನ ಚಾಚು ತಪ್ಪದೆ ಪಾಲಿಸಿದರು. ಆತನ ಆಜ್ಞೆಯನ್ನ ಪ್ರಶ್ನಿಸಿದವರನ್ನ ಕಂಪಾಲನಗರದ ನಕಸೆರೋ ಕ್ಯಾಂಪ್​ನಲ್ಲಿ ಚಿತ್ರವಿಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಗುತ್ತಿತ್ತು. ಮಾಜಿ ರಾಷ್ಟ್ರಪತಿ ಒಬೋತೆ ಅವರ ಬೆಂಬಲಿಗರನ್ನ, ಅಚ್ಹೊಲಿ ಮತ್ತು ಲಂಗೋ ಬುಡಕಟ್ಟು ಜನಾಂಗದವರನ್ನ ವ್ಯವಸ್ಥಿತವಾಗಿ  ಕೊಲ್ಲಲಾಯಿತು. ಸುಮಾರು ಐದು ಲಕ್ಷ ಜನರನ್ನು ಕೊಂದ ಅಮೀನ್ ತನ್ನ ಸರ್ಕಾರ ಮತ್ತು ಸೇನೆಯಲ್ಲಿ ತನ್ನ ಬುಡಕಟ್ಟು ಜನಾಂಗದವರಿಗೆ (ಕಕ್ವ) ಮಾತ್ರ ಅವಕಾಶ ನೀಡಿದ.

ನನಗೆ ಈ ಕ್ಷಣಕ್ಕೆ ಇದಿ ಅಮೀನ ನೆನಪಾಗುವುದಕ್ಕೆ ಒಂದು ಪ್ರಬಲ ಕಾರಣ ಆತ ಆಗಸ್ಟ್ 1972ರಲ್ಲಿ ದೇಶದ ಅಲ್ಪಸಂಖ್ಯಾತರ ಕುರಿತಾಗಿ ತೆಗೆದುಕೊಂಡ ನಿರ್ಧಾರಗಳು. ಆಜ್ಞೆ, ಕಟ್ಟಳೆ, ಕಗ್ಗೊಲೆ, ನರಮೇಧಗಳಿಂದ ಉತ್ಪಾದನೆಯಾದ ಭಯ ದೇಶವನ್ನ ಹತೋಟಿಯಲ್ಲಿಡಲು ಸಾಕಾಗದಿದ್ದಾಗ, ಆತನ ಜನಪ್ರಿಯತೆ ಕುಗ್ಗಿದಾಗ, ಜನರ ಓಲೈಕೆಯತ್ತ ಗಮನ ಹಾರಿಸುತ್ತಾನೆ ಇದಿ ಅಮೀನ್. ಜನರೊಡನೆ ಬೆರೆತು ಕುಣಿಯುತ್ತಾನೆ, ಫುಟ್ಬಾಲ್ ಆಡುತ್ತಾನೆ ಎಲ್ಲಕ್ಕಿಂತ ಹೆಚ್ಚಾಗಿ ಉಗಾಂಡಾದಲ್ಲಿ ನೂರಾರು ವರ್ಷಗಳಿಂದ ಶಾಂತಿಯುತವಾಗಿ ನೆಲೆಸಿ, ವ್ಯಾಪಾರ ನಡೆಸುತ್ತಿದ ಭಾರತೀಯರ ಮತ್ತು ಮತ್ತಿತರ ಏಶಿಯನ್ನರನ್ನ ಟಾರ್ಗೆಟ್ ಮಾಡಲು ಶುರುಹಚ್ಚಿಕೊಳ್ಳುತ್ತಾನೆ. “ಉಗಾಂಡಾದ ಸಾಧಾರಣ ಪ್ರಜೆಯನ್ನ ನಿಜವಾದ ಒಡೆಯನನ್ನಾಗಿ ಮಾಡಲು ಹೊರಟಿದ್ದೇನೆ. ಉಗಾಂಡಾದ ಸಂಪತ್ತು, ಲಾಭ ಉಗಾಂಡಾದವರಿಗೆ ಮಾತ್ರ ಸೀಮಿತವಾಗಬೇಕು. ಉಗಾಂಡಾದ ಅರ್ಥಿಕ ವ್ಯವಸ್ಥೆ ಉಗಾಂಡಾದವರ ಹಿಡಿತದಲ್ಲಿರಬೇಕು. ಅಂತಹ ನೀತಿಗಳನ್ನ ನಾನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ತರಲಿದ್ದೇನೆ” ಎಂದು ಘೋಷಿಸುತ್ತಾನೆ.

ಭಾರತೀಯರು ಉಗಾಂಡಾದಲ್ಲಿ ನೂರಾರು ವರ್ಷಗಳಿಂದ ನೆಲೆಸಿ ಬೃಹತ್ ಉದ್ಯಮಗಳನ್ನ, ಮಳಿಗೆಗಳನ್ನ. ಅಂಗಡಿಗಳನ್ನ ತೆರೆದು ಉತ್ತಮ ವ್ಯಾಪಾರ ಮಾಡುತ್ತಿದ್ದವರು. ಅವರು ಉಗಾಂಡಾ ದೇಶದ ಅರ್ಥಿಕ ವ್ಯವಸ್ಥೆಯ ಬೆನ್ನೆಲುಬು ಎಂದರೆ ತಪ್ಪಾಗದಷ್ಟು ದೇಶಕ್ಕಾಗಿ ದುಡಿಯುತ್ತಿದ್ದವರು. ಉಗಾಂಡಾದ ರಾಜಧಾನಿ ಕಂಪಾಲದಲ್ಲಿ ಹಿಂದಿ ಮಾತನಾಡೋದು ಸಾಮಾನ್ಯವಾಗಿತ್ತು. ಕಪ್ಪು ವರ್ಣದ ಸ್ಥಳೀಯ ಜನರಿಗೂ ಕೂಡ ಭಾರತೀಯರ ಮೇಲೆ ಯಾವುದೇ ದ್ವೇಷವಿರಲಿಲ್ಲ. ಸಾಮರಸ್ಯದ ಜೀವನ ಅವರದು.

ಇದನ್ನೂ ಓದಿ : Facebook: ನಿಮ್ಮ ಟೈಮ್​ಲೈನ್; ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!

ಹೀಗಿದ್ದ ಉಗಾಂಡಾದಲ್ಲಿ ಇದಿ ಅಮೀನ್ ಭಾರತೀಯರಿಗೆ, ಏಶಿಯನ್ನರಿಗೆ ಸೇರಿದ ಆಸ್ತಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಆಜ್ಞೆ ಮಾಡಿದ. ಸುಮಾರು 80,000 ಭಾರತೀಯರನ್ನ ದೇಶ ಬಿಟ್ಟು ತೊಲಗುವಂತೆ ಕಟ್ಟಪ್ಪಣೆ ಮಾಡಿದ. ಹುಚ್ಚು ದೊರೆ ಇದಿ ಅಮೀನ್ ದೇಶದ ಅಲ್ಪಸಂಖ್ಯಾತರ ವಿರುದ್ದ ಹೊರಡಿಸಿದ ಈ ಆದೇಶದಿಂದ ಆತಂಕಗೊಂಡ ಉಗಾಂಡಾ ದೇಶದಲ್ಲೇ ಹುಟ್ಟಿ ಬೆಳೆದಿದ್ದ ಭಾರತೀಯರು ರಾತ್ರೋರಾತ್ರಿ ಗುಳೆ ಹೊರಟು ಕೀನ್ಯಾ, ಫಿಜಿ, ಆಸ್ಟ್ರೇಲಿಯ, ಇಂಗ್ಲೆಂಡ್ ದೇಶಗಳಲ್ಲಿ ಆಶ್ರಯ ಪಡೆದುಕೊಂಡರು. ಕೆಲವರು ಭಾರತಕ್ಕೆ ವಾಪಸಾದರು. ಉಗಾಂಡಾ ಜನರ ಕಣ್ಣಲ್ಲಿ ಇದಿ ಅಮೀನ್ ದೇವತಾ ಮನುಷ್ಯನಾದ. ಸ್ಥಳೀಯರು ಧನಿಕರಾಗುವ ಕನಸಲ್ಲಿ ತೇಲಿ ಹೋದರು. ಅವರದೇ ವ್ಯಾಪಾರ ನಡೆಸುವ ಅವಕಾಶ ಸಿಕ್ಕಿದ್ದರಿಂದ ಪುಳಕ.

ಆದರೆ ಕೆಲವೇ ದಿನಗಳಲ್ಲಿ ಸ್ಥಳಿಯರಿಗೆ ವ್ಯಾಪಾರ ನಡೆಸಲು ಬೇಕಾದ ಅರಿವು, ಜ್ಞಾನ, ಸಂಪರ್ಕ, ಕೌಶಲ ಇಲ್ಲದೆ ಪರದಾಡಿದರು. ಉಗಾಂಡಾ ಅರ್ಥಿಕ ವ್ಯವಸ್ಥೆಯೇ ಕುಸಿದು ನೆಲಕಚ್ಚಿತು. ಅದೊಂದು ಉಗಾಂಡಾ ಇತಿಹಾಸದ ಡಿಸಾಸ್ಟರ್. ಇದಿ ಅಮೀನ್ ಅವನತಿ ಕೂಡ ಅಲ್ಲಿಂದಲೇ ಆರಂಭವಾಯಿತು. ನಿರುದ್ಯೋಗ, ಹಣದುಬ್ಬರ, ಬೇಡದ ಯುದ್ದಗಳಿಂದ ಬೇಸತ್ತು ಹೋಗಿದ್ದ ಜನರು ಅಮೀನ್ ಯುಗಕ್ಕೆ ಅಂತ್ಯವಾಡಲೇಬೇಕೆಂದು ತೀರ್ಮಾನಿಸಿದ್ದರು. ಕೊನೆಗೊಂದು ದಿನ ಪಕ್ಕದ ಟಾಂಜಾನಿಯಾ ಪಡೆಗಳು ಉಗಾಂಡಾ ದೇಶದ ಮೇಲೆ ದಾಳಿಯಿತ್ತಾಗ, ಉಗಾಂಡಾ ದೇಶದ ಪ್ರಜೆಗಳು ಆ ಸೇನೆಯನ್ನು ಬರಮಾಡಿಕೊಂಡರು. ಅಮೀನ್ ತನ್ನ ಖಾಸಗಿ ಹೆಲಿಕಾಪ್ಟರ್ ಏರಿ ಸೌದಿಗೆ ಪರಾರಿಯಾದ. He lived in Exile. ಈತ ಎಸೆಗಿದ ಪಾಪಗಳಿಗೆ, ಮಾನವ ಹಕ್ಕು ಉಲ್ಲಂಘನೆಗಳಿಗೆ ಯಾವುದೇ ಶಿಕ್ಷೆ ಅನುಭವಿಸದೆ 2003ರಲ್ಲಿ ಪ್ರಾಣಬಿಟ್ಟ. ಪಕ್ಕದ ಆಫ್ರಿಕನ್ ರಾಷ್ಟ್ರವಾದ ಜಿಂಬಾಬ್ವೆ ಕೂಡ ಇದೆ ಹಾದಿ ಹಿಡಿಯಿತು. ಅಲ್ಲಿನ ತಿಕ್ಕಲು ದೊರೆ ರಾಬರ್ಟ್ ಮುಗಾಬೆ.

ಯಾವುದೇ ದೇಶ ಅಭಿವೃದ್ದಿ ಪಥದಲ್ಲಿ ನಡೆಯಬೇಕಾದರೆ ಎಲ್ಲಕ್ಕಿಂತ ಹೆಚ್ಚಾಗಿ ಭ್ರಾತೃತ್ವವನ್ನು ಪಾಲಿಸಬೇಕು. ಅಲ್ಪಸಂಖ್ಯಾತರನ್ನೂ ಸಹೋದರರಂತೆ ಕಾಣಬೇಕಾಗುತ್ತದೆ. ಭ್ರಾತೃತ್ವ ಪಾಲಿಸದೆ ಸಮಾನತೆ ಮತ್ತು ಸ್ವಾತಂತ್ರ್ಯ ಫಲ ನೀಡದೆಂದು ಅಂಬೇಡ್ಕರ್ ಹೇಳಿದ್ದರು. (Without fraternity, neither equality nor liberty would amount to much.) ಅಂಬೇಡ್ಕರ್ ಅವರಿಗೆ ದಿಟವಾಗಿ ತಿಳಿದಿದ್ದ ವಿಚಾರವೆಂದರೆ ಮಾನವ ಸಹಜ ಗುಣವಾದ ನಾನು-ಅವನು, ನಾವು- ಅವರು ಎಂದು ನೋಡುವ ಪರಿ. The human tendency, as anthropology has taught us, spontaneously distances cultures and people into ‘us’ and ‘Them’ (Dipankar Gupta).

ನಾವು vs ಅವರು ಎಂಬ ಬೈನರಿಯಲ್ಲೇ ನೋಡುವ ಗುಣ ಸಹಜವಾಗಿಯೇ ಬಂದಿರುವುದರಿಂದ, ಈ ಬೈನರಿಗಳ ಆಧಾರದ ಮೇಲೆ ರಾಜಕೀಯ ನಡೆಸುವವರು ಜನಪ್ರಿಯರು ಮತ್ತು ಯಶಸ್ವಿಯಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಆದರೆ ಇಡಿಯ ಪ್ರಜಾತಂತ್ರವೆ ಭ್ರಾತೃತ್ವದ ಮೇಲೆ ನಿಂತಿದೆ. ಭ್ರಾತೃತ್ವ ಎಂಬುದು ಡೆಮಾಕ್ರಸಿಯ ತಳಹದಿ ಎಂಬುದು ಅಂಬೇಡ್ಕರ್ ಅವರ ಅಚಲ ನಂಬಿಕೆಯಾಗಿತ್ತು ಕೂಡ. ಭ್ರಾತೃತ್ವ ಪಾಲಿಸಲು ಸಹಾನುಭೂತಿ (Empathy) ಅತ್ಯಾವಶ್ಯಕ. ಸಹಾನುಭೂತಿ ನಮಗೆ ಸಹಜವಾಗಿ ಬರುವಂತದ್ದಲ್ಲ. ಅದನ್ನ ಪ್ರಜ್ಞಾಪೂರ್ವಕವಾಗಿ ನಾವು ದಿನನಿತ್ಯ ಪ್ರಾಕ್ಟಿಸ್ ಮಾಡಬೇಕಾಗುತ್ತದೆ. ದುರಿತ ಕಾಲದಲ್ಲಿ ಸಮಾಜಕ್ಕೆ ಭ್ರಾತೃತ್ವ, ಸಹಾನುಭೂತಿ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ನಾಗರೀಕ ಸಮಾಜದ್ದು, ಸುಶಿಕ್ಷಿತರದ್ದು.

ಇಂದಿಗೆ Western ಡೆಮಾಕ್ರಸಿಗಳು ಅಷ್ಟೊಂದು ಯಶಸ್ವಿಯಾಗಿರುವುದಕ್ಕೆ ಅವರು ಭ್ರಾತೃತ್ವಕ್ಕೆ, ಅನ್ಯರನ್ನ ಒಳಗೊಳ್ಳುವಿಕೆಗೆ, ಸಹಾನುಭೂತಿಗೆ ನೀಡಿರುವ ಆದ್ಯತೆ ಪ್ರಮುಖವೆನ್ನಿಸುತ್ತದೆ. ನಾವು ವರುಷ ಕಳೆದಂತೆ ಹೆಚ್ಚೆಚ್ಚು ಡೆಮಾಕ್ರೆಟಿಕ್ ಆಗುತ್ತಾ ಹೋಗಬೇಕಾಗಿದೆ. Contrary to our understanding ಪೊಲಿಟಿಕಲ್ ಆರ್ಡರ್​ಗಳಾಗಳಾದಂತಹ monarchy, ethnicity, dictatorship, apartheid, theocracy ಗಳೆಲ್ಲವೂ ಪಾಲಿಸುವುದು ಅತಿಸುಲಭ ಆದರೆ ಎಲ್ಲರನ್ನೂ ಒಳಗೊಳ್ಳುತ್ತಾ ಡೆಮಾಕ್ರೆಟಿಕ್ ಆಗುತ್ತಾ ಮುಂದೆ ಸಾಗೋದು ನಿರಂತರವಾದ ಹೋರಾಟ. ಅದೊಂದು ನಿಲ್ಲದ ಪ್ರಕ್ರಿಯೆ. ಡೆಮಾಕ್ರಸಿ ಮರೆತು, ಭ್ರಾತೃತ್ವ ಮರೆತು ದೇಶದ ಅಲ್ಪಸಂಖ್ಯಾತರನ್ನ ಸದಾ ಗುರಿಯಾಗಿಸಿದ ಯಾವ ದೇಶವೂ ಉದ್ದಾರವಾಗಿಲ್ಲ. ಇದಿ ಅಮೀನ್ ಸತ್ತು ದಶಕಗಳೇ ಕಳೆದರು ಇಂದಿಗೂ ಯಾವುದೇ ಚೇತರಿಕೆ ಕಾಣದೆ, persecution of minorityಯಿಂದ ಆಗುವ ಪ್ರಮಾದಗಳಿಗೆ ಸಾಕ್ಷಿಯಾಗಿ ಉಗಾಂಡಾ ನಿಂತಿದೆ.

(ಹೆಚ್ಚಿನ ಮಾಹಿತಿಗಾಗಿ- ಕ್ಯೆಂಬ ಬರೆದ A State of Blood ಮತ್ತು ಕೆವಿನ್ ಮ್ಯಾಕ್ ಡೊನಾಲ್ಡ್ ನಿರ್ದೇಶನದ ಚಿತ್ರ ದ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್ ನೋಡಿ)

ಗಮನಿಸಿ: ‘ನಿಮ್ಮ ಟೈಮ್​ಲೈನ್’ ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com 

ಇದನ್ನೂ ಓದಿ :  Ramadan 2022: ನಿಮ್ಮ ಟೈಮ್​ಲೈನ್; ಉಪವಾಸದ ಮಾಸದಲಿ ಕರುಣೆ ತುಳುಕಲಿ ಉದಾರವಾಗಿರಿ, ಮೌನದಲಿ ಧ್ಯಾನಿಸಿ

Published On - 2:56 pm, Wed, 6 April 22