ಹಬ್ಬ ಹರಿದಿನಗಳು ಬಂದ್ರೆ ಸಾಕು ಮನೆಗಳಲ್ಲಿ ಭಕ್ಷ ಭೋಜನಗಳ ಸುಗಂಧ, ಸ್ವಾದ ಮನಸನ್ನು ಉಲ್ಲಾಸಮಯವಾಗಿಸುತ್ತದೆ. ವಿಧ ವಿಧವಾದ ಬಣ್ಣ ಬಣ್ಣದ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತವೆ. ಸದ್ಯ ಈಗ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಇನ್ನೇನು ಸನಿಹದಲ್ಲಿದೆ ಈಗಾಗಲೇ 27 ಉಪವಾಸ ದಿನಗಳು ಮುಗಿಯುತ್ತಿವೆ. ಹೀಗಾಗಿ ನಾವು ಇವತ್ತು ರಂಜಾನ್ ಹಬ್ಬದ ವಿಶೇಷವಾಗಿ ಹಲೀಮ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಿದ್ದೇವೆ. ನೀವು ನಿಮ್ಮ ಮನೆಯಲ್ಲಿ ಹಲೀಮ್ ಮಾಡಿ ಲಾಕ್ಡೌನ್ ಸಮಯವನ್ನು ರುಚಿಯಾಗಿಸಿ.
ಹಲೀಮ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಒಂದು ಕೆಜಿ ಮಟನ್
2 ಚಮಚ ಶುಂಠಿ ಪೇಸ್ಟ್
ಒಂದು ಕಪ್ ತೊಗರಿ ಬೇಳೆ
ಒಂದು ಚಮಚ ಖಾರದ ಪುಡಿ
2 ಕಪ್ ಮೊಸರು
½ ಕಪ್ ಗೋಡಂಬಿ
ಅರ್ಧ ಚಮಚ ಕಾಳುಮೆಣಸು
½ ಚಮಚ ತುಪ್ಪ
½ ಕಪ್ ಪುದೀನಾ
3 ಕಪ್ ನುಚ್ಚು ಗೋಧಿ
2 ಚಮಚ ಬೆಳ್ಳುಳ್ಳಿ ಪೇಸ್ಟ್
ಒಂದು ಕಪ್ ಕಡಲೆ ಬೇಳೆ
¼ ಚಮಚ ಅರಿಶಿಣ ಪುಡಿ
ಒಂದು ಕಪ್ ಈರುಳ್ಳಿ
ಒಂದು ಚಮಚ ಗರಂ ಮಸಾಲ
ಸ್ವಲ್ಪ ಚಕ್ಕೆ
½ ಕಪ್ ಕೊತ್ತಂಬರಿ ಸೊಪ್ಪು ಹಾಗೂ 6 ಹಸಿಮೆಣಸಿನಕಾಯಿ
ಹಲೀಮ್ ಮಾಡುವ ವಿಧಾನ
ಮೊದಲು ನುಚ್ಚು ಗೋಧಿಯನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಬೋನ್ಲೆಸ್ ಮಟನ್ನನ್ನು ಖೈಮಾ ಮಾದರಿ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಸ್ವಚ್ಛ ಮಾಡಿಡಬೇಕು. ನಂತರ ಮಟನ್ಗೆ ಅರ್ಥ ಚಮಚ ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಶುಂಠಿ ಪೇಸ್ಟ್, ಅರ್ಧ ಚಮಚ ಉಪ್ಪು, ಖಾರದ ಪುಡಿ, ಅರ್ಧ ಚಮಚ ಗರಂ ಮಸಾಲ, ಸ್ವಲ್ಪ ಅರಿಶಿಣ ಪುಡಿ, ಪುದೀನಾ ಹಾಕಿ ಮಿಕ್ಸ್ ಮಾಡಿ ನಂತರ ಕುಕ್ಕರ್ಗೆ ಹಾಕಿ, ಅದು ಬೇಯುವಷ್ಟು ನೀರು ಹಾಕಿ 10-12 ವಿಶೆಲ್ ಬರುವವರೆಗೆ ಬೇಯಿಸಿ.
ಬಳಿಕ ನುಚ್ಚು ಗೋಧಿಯನ್ನು ತೊಗರಿ ಬೇಳೆ ಮತ್ತು ಕಡಲೆ ಬೇಳೆ, ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಶುಂಠಿ ಪೇಸ್ಟ್, ಅರಿಶಿಣ, 2-3 ಹಸಿ ಮೆಣಸಿನಕಾಯಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 8-10 ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿ.
ಇಷ್ಟೆಲ್ಲಾ ಆದ ಬಳಿಕ ಈಗ ದೊಡ್ಡ ಪ್ಯಾನ್ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದ ಬಳಿಕ ಚಕ್ಕೆ, ಉಳಿದ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2-3 ಹಸಿ ಮೆಣಸಿನಕಾಯಿ, ಬೇಯಿಸಿದ ಮಟನ್ ಹಾಕಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ 2-3 ನಿಮಿಷ ಫ್ರೈ ಮಾಡಿ, ನಂತರ ಮೊಸರು ಹಾಕಿ ಮತ್ತೆ 10-15 ನಿಮಿಷ ಸೌಟ್ನಿಂದ ಆಡಿಸುತ್ತಾ ಬೇಯಿಸಿ. ಬಳಿಕ ಒಂದು ಕಪ್ ನೀರು ಹಾಕಿ ಕುದಿಸಿ. ಇದಕ್ಕೆ ಬೇಯಿಸಿದ ಗೋಧಿ ಮಿಶ್ರಣವನ್ನು ಸೇರಿಸಿ, ಒಂದು ಚಮಚ ತುಪ್ಪ ಹಾಕಿ, ಉಪ್ಪು ಬೇಕಿದ್ದರೆ ಸೇರಿಸಿ ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿ.
ಈಗ ಮತ್ತೊಂದು ಚಿಕ್ಕ ಪ್ಯಾನ್ಗೆ ಒಂದು ಚಮಚ ತುಪ್ಪ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫೈ ಮಾಡಿ, ಗೋಡಂಬಿ ಹಾಕಿ ಸ್ವಲ್ಪ ನಿಂಬೆರಸ ಹಾಕಿ ಮಿಶ್ರಣವನ್ನು ರೆಡಿಯಾಗುತ್ತಿರುವ ಹಲೀಮ್ಗೆ ಹಾಕಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿ ರುಚಿಯಾದ ಹಲೀಮ್ ರೆಡಿ. ಮನೆಯವರೆಲ್ಲ ಒಟ್ಟಿಗೆ ಕೂತು ಹಲೀಮ್ ಸವಿಯಿರಿ.
ಇದನ್ನೂ ಓದಿ: Sheer Khurma Recipe ರಂಜಾನ್ ವಿಶೇಷ ಶೀರ್ ಕುರ್ಮಾ ಈಗ ನಿಮ್ಮ ಮನೆಯಲ್ಲೂ ತಯಾರಿಸಿ
Published On - 4:05 pm, Mon, 10 May 21