ತೊಂಭತ್ತರ ದಶಕದಲ್ಲಿ ಯುವ ಪೀಳಿಗೆಯನ್ನು ಆಕರ್ಷಿಸಿದ ಕಪ್ಪುಸುಂದರಿ ‘ಹಾಯ್ ಬೆಂಗಳೂರು’. ಲಂಕೇಶರ ಪ್ರಭಾವ ಕಡಿಮೆ ಆಗುತ್ತಿದ್ದಂತ ಸಂದರ್ಭದಲ್ಲಿ, ಹೊಸ ಪೀಳಿಗೆಯ ಜನರಿಗೆ ತಲುಪಿದವರು ರವಿ ಬೆಳಗೆರೆ. ‘ಲಂಕೇಶ್ ಪತ್ರಿಕೆ’ಯ ನಂತರದ ಕಾಲದಲ್ಲಿ, ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡದ್ದು ‘ಹಾಯ್ ಬೆಂಗಳೂರ್’.
ಪತ್ರಿಕೆಯ ಬಣ್ಣ ಕಪ್ಪು.. ಆದ್ರೆ ಬರಹ ಕಲರ್ಫುಲ್!
ಲಂಕೇಶ್ ಮತ್ತು ಬೆಳಗೆರೆ ಇಬ್ಬರೂ ವಿಕ್ಷಿಪ್ತ, ದೈತ್ಯ ಪ್ರತಿಭೆಗಳು. ಲಂಕೇಶರು ಸರ್ಕಾರವನ್ನು ಪ್ರಶ್ನಿಸುವ, ಹಗರಣ ಬಯಲುಗೊಳಿಸುವ ಟಾಬ್ಲಾಯ್ಡ್ ಶೈಲಿಯ ಬರಹಗಳನ್ನು ಬರೆಯುತ್ತಲೇ ವೈಚಾರಿಕ ಚಿಂತನೆಗೂ ಸಾಹಿತ್ಯಕ್ಕೂ ಅವಕಾಶ ನೀಡಿದರೆ, ರವಿ ಬೆಳಗೆರೆ ಕ್ರೈಂ, ಸೆಕ್ಸ್ ವಿಚಾರಗಳ ಜೊತೆಗೆ ವ್ಯಕ್ತಿತ್ವ ವಿಕಸನಗೊಳಿಸುವ ಬರಹಗಳಿಗೆ ಮಹತ್ವ ನೀಡಿದರು. ಓದುಗರಿಗೆ ಆಪ್ತವೆನಿಸಿದರು.
‘ಬಾಟಂ ಐಟಮ್’, ‘ಖಾಸ್ ಬಾತ್’, ‘ಪಾಪಿಗಳ ಲೋಕದಲ್ಲಿ’ ಮುಂತಾದವು ಜನರ ಮನಸೂರೆಗೊಂಡವು. ಜೋಗಿ, ನಾಗತಿಹಳ್ಳಿ ಚಂದ್ರಶೇಖರ್, ಜಯಂತ ಕಾಯ್ಕಿಣಿ ಮುಂತಾದವರಿಂದ ಸಂವೇದನಾಶೀಲ ಬರಹಗಳನ್ನು ಬರೆಸಿ, ಜನರಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚುವಂತೆ ಮಾಡಿದರು. ಈ ನೆಲೆಯಲ್ಲಿ ‘ಹಾಯ್ ಬೆಂಗಳೂರು’ ಮತ್ತು ರವಿ ಬೆಳಗೆರೆ ಮುಖ್ಯ ಎನಿಸುತ್ತಾರೆ.
ರವಿ ಬೆಳಗೆರೆ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು:
-ಡಾ. ಪದ್ಮನಾಭ ಎನ್.ಕೆ
ಪತ್ರಿಕೋದ್ಯಮ ಪ್ರಾಧ್ಯಾಪಕ
ರವಿ ಬೆಳಗೆರೆಯ ಬರಹ ಒಂದು ಬಗೆಯ ಚಡಪಡಿಕೆ!:
ಯಂಡಮೂರಿ ಅವರ ಬರಹದಲ್ಲಿ ಆಕರ್ಷಣೆ ಇತ್ತು. ಆದರೆ ಚಡಪಡಿಕೆಯ ಅನುಭವ ಪಡೆಯಲು ಬೆಳಗೆರೆಯವರನ್ನು ಓದಬೇಕಿತ್ತು. ಅಂತಹ ಹಿರಿಯ ಪತ್ರಿಕೋದ್ಯಮಿಯ, ‘ಹಾಯ್ ಬೆಂಗಳೂರ್’ನಲ್ಲಿ ‘ಗುರುವಾಣಿ’ ಎಂಬ ಅಂಕಣ ಬರೆಯುವ ಅವಕಾಶ ನನ್ನದಾಗಿತ್ತು. ಅದು ಅಚಾನಕ್ ಆಗಿ ಒದಗಿದ ಭಾಗ್ಯ. ಫೇಸ್ಬುಕ್ ಮೆಸೆಂಜರ್ ಮೂಲಕ ಕಳಿಸಿದ ಬರಹ ಓದಿ, ಅಂಕಣ ಬರೆಯುವಂತೆ ಹೇಳಿದ್ದರು. ಅವರೇ ಕರೆ ಮಾಡಿ, ಭಾವಚಿತ್ರ ಪಡೆದುಕೊಂಡಿದ್ದರು. ನನ್ನ ಬರಹಗಳಿಗೆ ಹೀಗೆ ಮೊದಲ ಅವಕಾಶ ನೀಡಿದವರು ರವಿ ಬೆಳಗೆರೆ.
-ಗುರುರಾಜ ಕೊಡ್ಕಣಿ
ಬರಹಗಾರ, ಕಾದಂಬರಿಕಾರ
ಓದುಗರನ್ನು ಗೆಳೆಯರಂತೆ ಕಾಣುತ್ತಿದ್ದ ಬೆಳಗೆರೆ:
ರವಿ ಬೆಳಗೆರೆಯವರೊಂದಿಗೆ ಮಾತನಾಡಬೇಕು, ಧನ್ಯವಾದ ತಿಳಿಸಬೇಕು ಅನಿಸಿತು. ಫೇಸ್ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳಿಸಿದೆ. ‘ಸರ್, ಯು ಆರ್ ಟೂ ಎಮೋಷನಲ್. ಒಳ್ಳೆಯದಾಗಲಿ ನಿಮಗೆ. ಆಲ್ ದಿ ಬೆಸ್ಟ್’ ಎಂದು ಪ್ರತಿಕ್ರಿಯಿಸಿದ್ದರು. ಅವರ ಒಂದು ಸಂದೇಶ ನನ್ನಲ್ಲಿ ಹೊಸ ಸ್ಫೂರ್ತಿ ತುಂಬಿತ್ತು. ಓದುಗರನ್ನು ಆಪ್ತವಾಗಿ ಹಿಡಿದಿಡುವ, ಸಾಮಾನ್ಯರಲ್ಲಿ ಸಾಮಾನ್ಯ ಓದುಗನಿಗೂ ಪ್ರತಿಕ್ರಿಯೆ ನೀಡುವ ಸಹಾನುಭೂತಿ ವಿಶೇಷವಾಗಿ ಕಂಡಿತು. ಎಲ್ಲಾ ಲೇಖಕರಲ್ಲಿ ಈ ಗುಣ ಕಾಣಲು ಸಾಧ್ಯವಿಲ್ಲ ಅಲ್ಲವೇ?
-ಸುಚಿತ್ ಕೋಟ್ಯಾನ್, ಕುರ್ಕಾಲು
ಪತ್ರಿಕೋದ್ಯಮ ಪ್ರಾಧ್ಯಾಪಕ
Published On - 12:37 pm, Fri, 13 November 20