ಓದು ಮಗು ಓದು: ತಮ್ಮಣ್ಣ ಸರ್ ಕ್ಲಾಸ್ ಖಂಡಿತ ವಿದ್ಯಾರ್ಥಿಗಳಿಗಲ್ಲ!

|

Updated on: Jan 13, 2021 | 5:23 PM

’ಒಬ್ಬ ಹುಡುಗ ತನ್ನ ತೋಟದಲ್ಲಿ ಬಿದ್ದು ಹೋದ ಮರದ ಬಗ್ಗೆ ದುಃಖಿತನಾಗಿದ್ದರೆ... ಇನ್ನೊಬ್ಬಳು ತಾನು ತೋಟದಲ್ಲಿ ಕಂಡ ಬಗೆಬಗೆಯ ಕಪ್ಪೆಗಳ ಬಗ್ಗೆ ಹೇಳಿದ್ದಳು. ಇನ್ನೊಬ್ಬನು ಅಪ್ಪನಿಂದಾಗಿ ತನ್ನ ತಾಯಿಗಾದ ಕಷ್ಟ ಹೇಳಿಕೊಂಡರೆ ಮತ್ತೊಬ್ಬ ಜಾತ್ರೆಯ ಸಂಗತಿ ಹೇಳಿದ್ದ. ಹೀಗೆ ಇವುಗಳನ್ನೇ ಹಿಗ್ಗಿಸಿ ಅವರು ಕಥೆಯನ್ನೂ ಮಾಡುತ್ತಿದ್ದರು. ಕಥೆಗಳಲ್ಲಿ ಬರಬೇಕಾದ ಪಾತ್ರಗಳನ್ನು ಮೋದಲೇ ನೀಡಿ ಅವನ್ನೊಳಗೊಂಡ ಕಥೆ ರೂಪಿಸಲೂ ಹೇಳುತ್ತಿದ್ದೆ.’ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ತಮ್ಮಣ್ಣ ಬೀಗಾರ.

ಓದು ಮಗು ಓದು: ತಮ್ಮಣ್ಣ ಸರ್ ಕ್ಲಾಸ್ ಖಂಡಿತ ವಿದ್ಯಾರ್ಥಿಗಳಿಗಲ್ಲ!
ಬಿದ್ರಕಾನಿನ ಸರ್ಕಾರಿ ಶಾಲೆಯ ಮಕ್ಕಳು ತಮ್ಮ ತಮ್ಮ ಸಂಪತ್ತಿನೊಂದಿಗೆ!
Follow us on

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್  tv9kannadadigital@gmail.com

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ತಮ್ಮಣ್ಣ ಬೀಗಾರ ಅವರ ವೃತ್ತಿಬದುಕನ್ನು ಆಧರಿಸಿದ ಈ ಬರಹವನ್ನು ಇಂದಿನ ಶಿಕ್ಷಕರು ಲಕ್ಷ್ಯಗೊಟ್ಟು ಓದಬೇಕು ಮತ್ತು ಅಳವಡಿಸಿಕೊಳ್ಳಲೇಬೇಕು!

***

‘ಆಗಲೇ ಚಳಿಗಾಲ ಪ್ರಾರಂಭವಾಗಿದೆ. ದಟ್ಟ ಮಂಜು ಬಿದ್ದಿದೆ. ಗಿಡಗಳಿಂದ ಪಟ್ ಪಟ್ ಎಂದು ನೀರ ಹನಿಗಳು ಉದುರುತ್ತಿವೆ. ಆಗಲೇ ಒಂದಿಷ್ಟು ಹಕ್ಕಿಗಳು ಮರದಿಂದ ಮರಕ್ಕೆ ಹಾರುತ್ತ, ಹಾಡುತ್ತ ಮಧುರವಾದ ಗದ್ದಲ ಎಬ್ಬಿಸಿದ್ದರೆ… ಉಳಿದಂತೆ ಯಾವ ಗದ್ದಲವೂ ಇಲ್ಲ. ಸೂರ್ಯ ಆಗಲೇ ಎದ್ದು ನೀರ ಹನಿಗಳಿಂದ ತುಂಬಿಹೋದ ಮರಗಳ ಎಲೆಗಳ ಸಂದಿಯಲ್ಲಿ ಇಣುಕಿ ಆ ಕತ್ತಲೆಯ ಹಾದಿಗೆ ಯಾರೋ ಟಾರ್ಚ್​ ಬಿಟ್ಟ ಹಾಗೆ ಅಲ್ಲಲ್ಲಿ ಬೆಳಕಿನ ಕೋಲುಗಳನ್ನು ಹರಿಬಿಟ್ಟಿದ್ದರಿಂದ ದಾರಿಯಲ್ಲೆಲ್ಲ ನೆರಳು ಬೆಳಕಿನ ಆಟ. ಮಕ್ಕಳಾದ ನಮಗೆ ನೋಡಲು ಮೋಜು. ಆ ಬೆಳಕಿನ ಚಿತ್ತಾರದಲ್ಲೇ ಕಾಲಿಡುತ್ತ ಒಬ್ಬರನ್ನೊಬ್ಬರು ದೂಡುತ್ತ ಸಾಗುವಾಗ ಅಲ್ಲಲ್ಲಿ ಹುಲ್ಲಿನ ಮೇಲೆ ಹರಡಿರುವ ಜೇಡರ ಬಲೆ ಹಾಗೂ ಅದರ ಮೇಲೆ ಕುಳಿತಿರುವ ನೀರಿನ ಹನಿಗಳ ಹೊಳಪು ಕಾಣುತ್ತದೆ. ನಾನು ತಿರುಗಿ ದಾರಿಯ ಎಡಕ್ಕೆ ಸರಿದು ಬೆರಳನ್ನು ಮುಂದೆ ಮಾಡಿ ಮೃದುವಾಗಿ ಆ ಜೇಡರ ಬಲೆಯನ್ನು ಮುಟ್ಟಿದಾಗ ಅದು ಆ ನಯವಾದ ಮುಟ್ಟುವಿಕೆಗೇ ಹರಿದು ವೃತ್ತಾಕಾರದ ಒಂದು ರಂದ್ರವಾಗಿ ಸರಿಯಿತು. ಹಾಂ, ಅಲ್ಲಿ ಬಲೆಯ ಅಡಿಯಲ್ಲಿ ಒಂದು ಪುಟ್ಟ ಜೇಡ ಬೆಚ್ಚಗೆ ಕುಳಿತಿರುವುದು ಕಂಡು ನಾವು ಮಕ್ಕಳೆಲ್ಲ ಅದನ್ನು ನೋಡುತ್ತ ಒಂದಿಷ್ಟು ಹೊತ್ತು ಹಾಗೇ ಮೈಮರೆತೆವು.’

ಇಂತಹ ಅದೆಷ್ಟೋ ಚಿತ್ರಗಳೆಲ್ಲ ನಮ್ಮ ಮಲೆನಾಡಿನ ಮಕ್ಕಳ ತಲೆಯಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಹೌದು, ಪರಿಸರವು ನಮ್ಮನ್ನೆಲ್ಲ ಹೇಗೆ ಆವರಿಸಿಕೊಂಡಿರುತ್ತದೆ ನಮಗೆ ಗೊತ್ತು. ಮಕ್ಕಳಾಗಿದ್ದಾಗ ನಾವು ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಯಾವುದೇ ಪರಿಸರದಲ್ಲಿ ಬೆಳೆದಿರಲಿ ಅಲ್ಲಿಯ ಪರಿಸರದ ಆಗು ಹೋಗುಗಳನ್ನೆಲ್ಲ ನಮ್ಮದೇ ಕಣ್ಣಿಂದ ನೋಡುತ್ತ… ಆ ಪರಿಸರವನ್ನೇ ನಮ್ಮ ಕುತೂಹಲದ ಕಲಿಕೆಯ ಓದಾಗಿಸಿಕೊಳ್ಳುತ್ತ… ಆಟದ ಬಯಲಾಗಿಸಿಕೊಳ್ಳುತ್ತ ನಾವು ಬೆಳೆದಿರುತ್ತೇವೆ. ನಾವು ಯಾವುದೋ ಬರಹವನ್ನು ಓದುತ್ತ ಅದನ್ನು ಮನಸ್ಸಿಗೆ ಇಳಿಸಿಕೊಳ್ಳುವುದು, ಅಲ್ಲಿನ ಪಾತ್ರಗಳನ್ನು ಹೃದಯದಲ್ಲಿ ಬೆಳೆಸಿಕೊಳ್ಳುವುದು, ನಾವೂ ಪಾತ್ರಗಳಾಗಿ ಅನುಭವಿಸುವುದು ಎಲ್ಲ ತನ್ನಿಂದ ತಾನೇ ನಡೆಯುವಂತೆ ದಾಖಲಾಗುತ್ತ ಹೋಗುತ್ತದೆ ಮತ್ತು ಬರಹ ಪ್ರೀತಿಯ ಓದಿನೊಂದಿಗೆ ನಮ್ಮದಾಗಿಬಿಡುತ್ತದೆ.

ಮಕ್ಕಳೇ ತಯಾರಿಸಿದ ಕಥೆ, ಕವನ, ಚಿತ್ರಕಥೆಗಳ ಪುಸ್ತಕಗಳು

ಮಕ್ಕಳು ಏನೆಲ್ಲಾ ತುಂಬಿಕೊಳ್ಳುತ್ತಿರುತ್ತಾರೆ ಹಾಗೂ ಅವರು ಹೇಗೆಲ್ಲಾ ವಿಸ್ತರಿಸಿಕೊಳ್ಳುತ್ತಿರುತ್ತಾರೆ ಎನ್ನುವುದು ನಮಗೆ ಮೇಲಿನ ಸಂಗತಿಗಳು ಕೆಲವು ಸುಳುಹುಗಳನ್ನು ಕೊಡುತ್ತವೆ. ದಾರಿಯಲ್ಲಿ ಬರುವಾಗ ಮಕ್ಕಳು ಯಾವುದೋ ಮಂಗನನ್ನೊ, ಚಿಟ್ಟಯನ್ನೊ, ಅಥವಾ ಅಪರಿಚಿತ ಒಬ್ಬ ವ್ಯಕ್ತಿಯನ್ನೊ, ದೊಡ್ಡ ಕಟ್ಟಡವನ್ನೋ ನೋಡುತ್ತ ಅದಕ್ಕೆಲ್ಲ ವಿವರ ಹುಡುಕುತ್ತ ತಮ್ಮದೇ ಆದ ರೀತಿಯಲ್ಲಿ ವಿಷಯ ಸಂಗ್ರಹಿಸುತ್ತ ಒಂದಿಷ್ಟು ಹೊತ್ತು ಕಳೆದು ಬಿಡುತ್ತಾರೆ. ಯಾವು ಯಾವುದೋ ಸಂಗತಿಗೆ ವಾದಕ್ಕಿಳಿದು ತಮ್ಮದೇ ಆದ ನಿಲುವನ್ನು ಮಂಡಿಸುತ್ತಾರೆ. ಹತ್ತಿರದ ದಾರಿ ಹುಡುಕುವ, ಎತ್ತರದ ಹಣ್ಣು ಸುಲಭವಾಗಿ ಇಳಿಸುವ, ಅಂಗಡಿಯ ಅಜ್ಜನನ್ನು ದೋಸ್ತಿ ಮಾಡುವ, ತನಗೆ ಖುಷಿಕೊಟ್ಟ ಪುಸ್ತಕ ಮತ್ತೆ ಮತ್ತೆ ಓದುವ, ಅದನ್ನು ಯಾರಿಗೂ ಕೊಡದೆ ಜೋಪಾನವಾಗಿ ಇಟ್ಟುಕೊಳ್ಳುವ ಮಕ್ಕಳೆಲ್ಲರನ್ನೂ ನಾವು ನೋಡಿದ್ದೇವೆ. ಅಂದರೆ ಮಕ್ಕಳಿಗೆ ಸುತ್ತಲಿನ ಜಗತ್ತಿನಲ್ಲಿ ಅಪಾರ ಆಸಕ್ತಿ, ಹೊಸತರಲ್ಲಿ ಕುತೂಹಲ, ಲಾಭ ಹಾಗೂ ರಂಜನೀಯವಾದುದರ ಕಡೆಗೆ ಗಮನ, ಖುಷಿಕೊಟ್ಟವನ್ನು ಅಪಾರವಾಗಿ ಪ್ರೀತಿಸುವಿಕೆ, ಪರಿಸರದ ಮೂಲಕ ತನ್ನದೇ ಆದ ವ್ಯಕ್ತಿತ್ವ ಕಟ್ಟಿಕೊಳ್ಳುವ ಹಂಬಲ ಇವೆಲ್ಲ ಸುಪ್ತವಾಗಿ ಇರುತ್ತವೆ ಎಂದೆಲ್ಲ ಗುರುತಿಸಬಹುದು ಎಂದೆನಿಸುತ್ತದೆ. ಇದೆಲ್ಲ ಯಾಕೆ ಬರೆದೆನೆಂದರೆ ಮಕ್ಕಳನ್ನು ಆಪ್ತವಾಗಿ ಪ್ರೀತಿಸುವ ನಾವು ಅವರು ಪುಸ್ತಕ ಓದದೆ ಆಟದಲ್ಲಿ ಕಾಲಕಳೆಯುತ್ತಾರೆ, ಮೊಬೈಲ್ ಮುಂತಾದವುಗಳ ಅತಿಯಾದ ಬಳಕೆಯಿಂದ ಹಾಳಗುತ್ತಿದ್ದಾರೆ ಎಂದೆಲ್ಲಾ ಅಂದುಕೊಳ್ಳುತ್ತ… ಅವರ ಆಟಕ್ಕೆ, ಅವರ ಪ್ರೀತಿಯ ಓದಿಗೆ, ಅವರ ಕುತೂಹಲಕ್ಕೆ, ಅವರ ಪ್ರಾಕೃತಿಕ ವಿಸ್ತರಣೆಗೆ ಏನೆಲ್ಲಾ ಮಾಡಬಹುದು ಎಂಬ ಯೋಚನೆಗೆ ಇಳಿಯದೇ ನಾವೇ ನಮ್ಮನ್ನು ಕಟ್ಟಿ ಹಾಕಿಕೊಳ್ಳುತ್ತ ಇರುತ್ತೇವೆ ಎಂದೆಲ್ಲಾ ಅನಿಸಲುತೊಡಗುತ್ತದೆ.

ಅದೆಲ್ಲಾ ಏನೇ ಇರಲಿ. ನಾನು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದೆ. ಆಗಲೂ ಈಗಲೂ ನಾನು ಮಕ್ಕಳಿಗಾಗಿ ಬರೆಯುತ್ತ ಅವರ ಲೋಕದಲ್ಲಿ ಒಂದಾಗುತ್ತ ಖುಷಿಯಾಗಿದ್ದೇನೆ. ಮೂವತ್ತೇಳು ವರ್ಷ ಶಿಕ್ಷಕ ವೃತ್ತಿ ಪೂರೈಸಿ ಕಳೆದ ವರ್ಷ ನಿವೃತ್ತನಾದೆ. ನನ್ನ ಶಿಕ್ಷಕ ವೃತ್ತಿಯ ಉದ್ದಕ್ಕೂ ಖುಷಿಯ ಮೂಟೆ, ಚೈತನ್ಯದ ಚಿಲುಮೆ, ಸದಾ ಹೊಳೆಯುವ ಕಣ್ಣು, ಆಪ್ತ ನೋಟ, ಸಿಟ್ಟು ಹಟಗಳ ಒಳಗೆಲ್ಲಾ ಪ್ರೀತಿಯನ್ನೇ ಕಾರಣವಾಗಿಸಿಕೊಂಡಿರುವ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತ ಅವರ ಆಗು ಹೋಗುಗಳಿಗೆಲ್ಲ ಸ್ಪಂದಿಸುತ್ತ ಬಂದಿರುವುದರಿಂದಲೇ ಈಗಲೂ ಅವರ ಲೋಕಕ್ಕೆ ಇಳಿಯಲು ಹಾಗೂ ಅವರಿಗೆ ಖುಷಿಕೊಡುವಂತೆ ಬರೆಯುವುದೆಲ್ಲ ಸಾಧ್ಯವಾಗಿದೆ ಅನಿಸುತ್ತದೆ. ನಾನು ಹಿಂದೆ ನೋಡಿದಾಗ ನಾನು ಬರೆದ ಕಥೆಗಳು, ಪದ್ಯಗಳು, ಲಲಿತ ಬರಹ ಹಾಗೂ ಕಾದಂಬರಿಗಳೆಲ್ಲ ಮಕ್ಕಳ ತೋಟದಲ್ಲಿ ಬೆಳೆದ ಫಲಗಳಂತೆ ನನಗೆ ಕಾಣತೊಡಗುತ್ತವೆ. ಇಲ್ಲಿ ನಾನು ಮಕ್ಕಳೊಂದಿಗೆ ಹೇಗೆಲ್ಲಾ ಸಂವಹನ ನಡೆಸಿದ್ದೆ, ಈ ಸಂವಹನ ನನಗೆ ಹಾಗೂ ಮಕ್ಕಳಿಗೆ ಯಾವುದೇ ಒತ್ತಡವಿಲ್ಲದೆ ಏನೆಲ್ಲಾ ಲಾಭ ತಂದು ಕೊಟ್ಟಿತು ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳುತ್ತಿದ್ದೇನೆ.

ನನ್ನ ಶಾಲೆಯಲ್ಲಿ ಮಕ್ಕಳು ರಚಿಸಿದ ಕವನಗಳ ಹತ್ತಾರು ಪುಸ್ತಕಗಳಿವೆ, ಮಕ್ಕಳೆ ಬರೆದ ಕಥೆಗಳ ಕಟ್ಟುಗಳಿವೆ, ಮಕ್ಕಳು ರಚಿಸಿದ ಚಿತ್ರ ಪುಸ್ತಕಗಳಿವೆ, ಅವರೇ ರಚಿಸಿದ ಎಲೆಗಳ ಕಲಾಕೃತಿಗಳು, ಗೊಂಬೆಗಳು, ಪೆನ್ಸಿಲ್ ಕೆತ್ತನೆಯ ಕಲಾಕೃತಿ, ಗರಟೆ, ಅಣಬೆ, ಅಡಿಕೆ ಹಾಳೆ ಮುಂತಾದ ಅನೇಕ ವಸ್ತುಗಳ ಕಲಾಕೃತಿಗಳಿವೆ, ಮಕ್ಕಳಿಗೆ ಪ್ರಿಯವಾಗುವ ಪುಸ್ತಕಗಳ ಸಂಗ್ರಹವಿದೆ. ಇದೆಲ್ಲ ಹೇಗೆ ಬಂತು, ಮಕ್ಕಳು ಏಕೆ ಓದುತ್ತಾರೆ… ಅವರೇ ಕಥೆ ಕವನ ಅಥವಾ ತಾವು ನೋಡಿದ ಯಾವುದೇ ಸಂಗತಿ ಬರೆದು ಒಪ್ಪವಾಗಿ ಇಡುತ್ತಾರೆ, ಪುಸ್ತಕ ಓದುತ್ತ  ಡಾ.ಆನಂದ ಪಾಟೀಲರಂತಹ ಹಿರಿಯ ಸಾಹಿತಿಗಳ ಮುಂದೆ ಪುಸ್ತಕದ ಕುರಿತಾದ ತಮ್ಮ ಅಭಿಪ್ರಾಯವನ್ನು ಅಂತರಂಗಕ್ಕಿಳಿಸಿಕೊಂಡು ಹೇಳಿ ಭೇಷ್ ಅನ್ನಿಸಿಕೊಳ್ಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಮಕ್ಕಳ ಪಾಲಕ ಪೋಷಕರು ಶಾಲೆಗೆ ಬಂದು ಮಕ್ಕಳ ಸಂಭ್ರಮ ಹಾಗೂ ಅವರ ವಿಸ್ತರಣೆ ನೋಡುತ್ತ ನಮ್ಮೊಂದಿಗೆ ಮಕ್ಕಳ ಒಳಿತಿನ ಕಾರ್ಯಗಳಲ್ಲಿ ಒಂದಾಗುತ್ತಾರೆ ಎನ್ನುವುದೆಲ್ಲ ಖುಷಿಯಾಗಿ ಮಾತ್ರ ಕಾಣುತ್ತದೆ.

ಹೌದು ನಾನು ಮೊದಲಿನಿಂದಲೂ ನನ್ನ ವೃತ್ತಿಯನ್ನು ಹಾಗೂ ಮಕ್ಕಳನ್ನು ಪ್ರೀತಿಸುತ್ತಾ ಬಂದೆ. ಪ್ರೀತಿಯ ಮೂಲಕವೇ ಸ್ವಾಭಾವಿಕವಾಗಿ ಮಕ್ಕಳು ಅರಿವಿನ ಹಾದಿಗೆ ತೆರೆದುಕೊಳ್ಳಲು ಪ್ರಯತ್ನಿಸುವುದು ನನ್ನ ಆಶಯವಾಗಿತ್ತು. ನಾನು ಮೊದಲಿನಿಂದಲೂ ವ್ಯಂಗ್ಯ ಚಿತ್ರ ಬರೆಯುತ್ತಿದ್ದೆ. ಕಥೆ ಕವನ ಬರೆಯುತ್ತಿದ್ದೆ, ಪುಸ್ತಕ ಓದುತ್ತಿದ್ದೆ… ಇವೆಲ್ಲ ನನ್ನ ಮಕ್ಕಳ ಪ್ರೀತಿಗೆ ಪೂರಕವಾಯಿತು ಎಂದು ನನಗೆ ಅನಿಸುತ್ತದೆ.

ಮಕ್ಕಳೊಂದಿಗೆ ತಮ್ಮಣ್ಣ ಬೀಗಾರ

ಆರು ವರ್ಷದ ಪುಟ್ಟ ಮಕ್ಕಳು ಒಂದನೇ ತರಗತಿಗೆ ಬರುತ್ತಾರೆ. ಅಂತಹ ಪುಟ್ಟ ಮಕ್ಕಳಿಗೆ ಅವರ ಪಠ್ಯದ ಭಾಗ ಎನ್ನುವುದನ್ನು ನಾನು ಬೋಧಿಸಿದ್ದು ಕಡಿಮೆ. ಆದರೆ ನಾನು ಬಿಡುವು ಸಿಕ್ಕಾಗೆಲ್ಲ ಅವರ ತರಗತಿಗೆ ಹೋಗುತ್ತಿದ್ದೆ. ಅಲ್ಲಿ ಹೋದಾಗ ಬ್ಲ್ಯಾಕ್ ಬೋರ್ಡ ಮೇಲೆ ಅವರು ಸುಲಭವಾಗಿ ಬಿಡಿಸಬಹುದಾದ ಮತ್ತು ಅವರಿಗೆ ಗೊತ್ತಿರುವ ವಸ್ತುಗಳ ಚಿತ್ರ ಚಿತ್ರಿಸುತ್ತಿದ್ದೆ. ಮಾವಿನ ಹಣ್ಣು, ಗೇರು ಹಣ್ಣು, ಬದನೆಕಾಯಿ, ಹೂವು ಮುಂತಾದವುಗಳನ್ನು ಬರೆದು ಅವುಗಳಿಗೆ ಕಣ್ಣು, ಮೂಗು, ಬಾಯಿ ಚಿತ್ರಿಸಿ ಜೀವಂತಗೊಳಿಸುತ್ತಿದ್ದೆ. ಅದನ್ನೆಲ್ಲ ಅವರು ಏನೇನೋ ಹೇಳುತ್ತ ನಗೆಯಾಡುತ್ತ ಚಿತ್ರಿಸಲು ತೊಡಗುತ್ತಿದ್ದರು. ಅಭಿನಯದೊಂದಿಗೆ ಕಥೆ ಹೇಳುವುದು, ದೊಡ್ಡದಾಗಿ ಶಿಶುಪ್ರಾಸ ಹೇಳಿಕೊಡುವುದು ಇವೆಲ್ಲ ಮಾಡುತ್ತಿದ್ದೆ. ನಂತರ ಆ ಪುಟ್ಟ ಮಕ್ಕಳು ನನ್ನನ್ನು ಕಂಡಾಗೆಲ್ಲ ಸರ್ ಸರ್ ಚಿತ್ರ ಬಿಡಿಸಿ, ಕಥೆ ಹೇಳಿ ಎನ್ನುತ್ತ ನನ್ನ ಬೆನ್ನ ಹಿಂದೇ ಸುತ್ತಿದ್ದರು. ಅಂದರೆ ಮಕ್ಕಳಿಗೆ ನಾವು ನಿರ್ಮಿಸುವ ಪರಿಸರ ಬಹಳ ಮುಖ್ಯ. ನಂತರ ಬೆಳೆದಂತೆ ಅವರು ಬಣ್ಣ ಬಣ್ಣದ ಚಿತ್ರವಿರುವ ಪುಟ್ಟ ಪುಟ್ಟ ಕಥೆಗಳ ಪುಸ್ತಕ ತಿರುವಿ ಹಾಕಲು ಹಾಗೂ ಆ ಚಿತ್ರಗಳನ್ನು ನೋಡುತ್ತಾ ತಮ್ಮದೇ ವಿವರಗಳನ್ನು ಹೇಳುವುದೆಲ್ಲಾ ಮಾಡುತ್ತಿರುತ್ತಾರೆ.

ಮಕ್ಕಳು ಓದಿನ ಖುಷಿಗೆ ತೆರೆದುಕೊಳ್ಳಲು ನಾವು ಓದುವುದು ಬಹಳ ಮುಖ್ಯ. ನನ್ನದೀಗ ಹತ್ತು ಮಕ್ಕಳ ಕಥಾ ಸಂಕಲನಗಳು ಬಂದಿವೆ. ಇವೆಲ್ಲವೂ ನಾನು ಮೊದಲು ನಮ್ಮ ಶಾಲಾ ಮಕ್ಕಳ ಮುಂದೆ ಓದುತ್ತ ಅವರ ಭಾವನೆಗಳನ್ನೆಲ್ಲಾ ಗ್ರಹಿಸುತ್ತ… ಅವರ ಕಣ್ಣು ಮೂಗು ಮುಖ ಎಲ್ಲ ನೋಡಿ ಸಂತೋಷದಿಂದ ಅವರ ಖುಷಿಯ ಪ್ರತಿಕ್ರಿಯೆಯ ಉಮೇದಿನಿಂದ ಪ್ರಕಟಿಸಿದವು. ನಾನು ಬರೆದ ಪದ್ಯಗಳಾಗಲಿ, ಲಲಿತ ಬರಹಗಳಾಗಲಿ ಅವನ್ನು ಮಕ್ಕಳ ಮುಂದೆ ಓದಿ ಅವರ ಪ್ರತಿಕ್ರಿಯೆಯ ಒರೆಗೆ ಹಚ್ಚಿಯೇ ಬೆಳಕಿಗೆ ಬಂದಿವೆ. ಇದರಿಂದ ಅವರಲ್ಲಿ ಓದಿನ ಪ್ರೀತಿ ಬೆಳೆದರೆ… ನನ್ನ ಬರಹಕ್ಕೆ ತುಂಬಾ ಲಾಭವಾಗಿದೆ.

ಪಾಠಗಳನ್ನು ಹೇಳುವಾಗಲೂ ಅಷ್ಟೆ. ಕನ್ನಡ, ವಿಜ್ಞಾನ, ಗಣಿತ ಯಾವುದೇ ವಿಷಯ ಬೋಧಿಸುವಾಗ ಅವರ ಮನೆಯ, ತೋಟದ, ತಿಂಡಿತಿನಿಸಿನ ಅಥವಾ ನಾವು ಓದಿದ ಯಾವುದೋ ಪುಸ್ತಕದ ಉದಾಹರಣೆಗಳನ್ನು, ಚಿತ್ರಗಳನ್ನು ಅವರ ಮುಂದೆ ತಂದಿಡುತ್ತಿದ್ದೆ. ಆಗ ಮಕ್ಕಳು ತಾವು ತೋಟದಲ್ಲಿ ಹಾವು ಕಂಡಿದ್ದು, ಅಂಗಡಿಯಲ್ಲಿ ತಪ್ಪಾಗಿ ಹಣ ನೀಡಿದ್ದು, ಅಪ್ಪನೊಂದಿಗೆ ವಾದಕ್ಕಿಳಿದದ್ದು, ತಮ್ಮ ಊರಿನಲ್ಲಿರುವ ದೊಡ್ಡ ಮರ, ಸೈಕಲ್ ಕೆಳಗೆ ಬಿದ್ದ ಪ್ರಸಂಗ, ಅಜ್ಜಿಗೆ ಆರಾಮ ಇಲ್ಲದಾಗ ಮಾಡಿದ ಸಹಾಯ, ಈ ದಿನ ತಿಂದ ಆಹಾರ ಹಾಗೂ ಅದರ ಪೋಷಕಾಂಶದ ಲೆಕ್ಕಾಚಾರ, ವಿಪರೀತ ಮಳೆ ಬಂದ ದಿನದ ಕಥೆ, ಮಾವಿನ ಹಣ್ಣಿಗಾಗಿ ಜಗಳ ಆಡಿದ್ದು ಹೀಗೆ ಅವರು ಏನೇನೋ ಹೇಳ ತೊಡಗುವುದಿತ್ತು. ಅವನ್ನು ಸಮನ್ವಯ ಗೊಳಿಸುವ ಕಾರ್ಯವೆಲ್ಲ ನಮ್ಮದೆ. ಇಲ್ಲೆಲ್ಲ ನಮಗೆ ಮತ್ತು ಮಕ್ಕಳಿಗೆ ಅರಿವಿಲ್ಲದಂತೆ ಯಾವು ಯಾವುದೋ ಸಂಗತಿಗಳ ಅರಿವು ಹಾಗೂ ಅದನ್ನು ಅಭಿವ್ಯಕ್ತಿಪಡಿಸುವ ವಿಧಾನಗಳು ಬೆಳೆಯುತ್ತ ಇರುತ್ತವೆ.

ಮಕ್ಕಳಿಗೆ ನ್ಯಾಶನಲ್ ಬುಕ್ ಟ್ರಸ್ಟ್​, ಚಿಲ್ಡ್ರನ್ ಬುಕ್ ಟ್ರಸ್ಟ್​ನಂತರ ಪ್ರಕಟಣೆಯ ಪುಟ್ಟ ಪುಟ್ಟ ಪುಸ್ತಕಗಳನ್ನು ತಂದು ಅವರ ಮುಂದೆ ಇಡುವುದು. ಒಂದೆರಡು ಪುಸ್ತಕ ಆಕರ್ಷಕವಾಗಿ ಓದಿ ಹೇಳುವುದು ಎಲ್ಲಾ ಇತ್ತು. ಮಕ್ಕಳು ಪುಸ್ತಕ ಓದಿದ ನಂತರ ಅವರಿಗೆ ಏನನಿಸಿತು ಅನ್ನುವುದನ್ನು ಶಾಲಾ ಪ್ರಾರ್ಥನಾ ವೇಳೆಯಲ್ಲಿ ಎಲ್ಲರ ಮುಂದೆ ಹೇಳಿಸುವುದು… ಚೆನ್ನಾಗಿ ಹೇಳಲು ಪ್ರೋತ್ಸಾಹಿಸುವುದು, ಬೆನ್ನು ತಟ್ಟುವುದು ಎಲ್ಲಾ ನಡೆಯುತ್ತಿತ್ತು. ವರ್ಷದಲ್ಲಿ ಒಂದೆರಡುಸಾರಿ ಮಕ್ಕಳು ತಾವು ಓದಿದ ಪುಸ್ತಕದ ಕುರಿತೇ ಮಾತಾಡುವ ಕಾರ್ಯಕ್ರಮ ಕೂಡಾ ಮಾಡುತ್ತಿದ್ದೆ. ಆಗ ಪುಸ್ತಕ ಬರೆದವರೇ ಬಂದು ನಮ್ಮ ಮಕ್ಕಳೊಂದಿಗೆ ಸಂವಾದಕ್ಕಿಳಿದದ್ದೂ ಇದೆ. ನಾ. ಡಿಸೋಜಾ ಅವರೊಂದಿಗೆ ಮಕ್ಕಳು ದೂರವಾಣಿಯ ಮೂಲಕ ಅವರ ಪುಸ್ತಕದ ಓದಿನಕುರಿತು ಮಾತಾಡಿದರೆ… ಡಾ.ಬಸು ಬೇವಿನಗಿಡದ, ಡಾ.ಆನಂದ ಪಾಟೀಲ, ಗಣೇಶ ನಾಡೋರ ಮೊದಲಾದ ಬರಹಗಾರರೊಂದಿಗೆ ಅವರ ಕಥೆ ಓದಿ ಮುಖತಃ ಮಾತಿಗಿಳಿದಿದ್ದರು.

ಪ್ರತಿವರ್ಷ ಮಕ್ಕಳು ಬರೆದ ಕವನಗಳ ಪುಸ್ತಕ, ಅವರು ಬರೆದ ಕಥೆಗಳ ಪುಸ್ತಕ, ಚಿತ್ರ ಪುಸ್ತಕ ಮುಂತಾದವನ್ನು ನಾವು ಮಕ್ಕಳು ಎಲ್ಲ ಬಹಳ ಪ್ರೀತಿಯಿಂದ ಮಾಡುತ್ತಿದ್ದೆವು. ಮಕ್ಕಳು ಕಥೆ ಕವನಗಳನ್ನು ಬರೆಯಲು ತೊಡಗುವುದೆಂದರೆ ಅವರ ಅಭಿವ್ಯಕ್ತಿಯ ವಿಸ್ತಾರ ಮತ್ತು ಭಾಷಾ ಹಿಡಿತ ಅವರಲ್ಲಿ ಬೆಳೆಯುತ್ತಿದೆ ಎಂದೇ ಅರ್ಥ. ನಾನು ಆಗಾಗ ಸಂದರ್ಭ ಸಿಕ್ಕಾಗೆಲ್ಲ ಅವರ ಸುತ್ತಲಿನ ಯಾವುದಾದರೂ ಘಟನೆಗಳನ್ನು ಬರೆದು ತರಲು ಹೇಳುತ್ತಿದ್ದೆ. ಆಗೆಲ್ಲ ಅವರು ಬರೆಯುತ್ತಿದ್ದದು ನನಗೆ ಕುತೂಹಲ ಹಾಗೂ ಬೆರಗನ್ನು ಮೂಡಿಸುತ್ತಿತ್ತು. ಅವರು ಬರೆದ ಪ್ರಸಂಗಗಳ ಎಳೆಗಳೇ ನನ್ನಲ್ಲಿ ಕಥೆಯಾಗಿ ಹರಡಿದ್ದೂ ಇದೆ. ಆಗ ಒಂದು ಘಟನೆ ಹೇಗೆಲ್ಲ ಕಥೆ ಆಯಿತು ಎಂದು ಓದಿ ಹೇಳುತ್ತಿದ್ದೆ.

ಒಬ್ಬ ಹುಡುಗ ತನ್ನ ತೋಟದಲ್ಲಿ ಬಿದ್ದು ಹೋದ ಮರದ ಬಗ್ಗೆ ದುಃಖಿತನಾಗಿದ್ದರೆ… ಇನ್ನೊಬ್ಬಳು ತಾನು ತೋಟದಲ್ಲಿ ಕಂಡ ತರತರಹದ ಕಪ್ಪೆಗಳ ಬಗ್ಗೆ ಹೇಳಿದ್ದಳು. ಇನ್ನೊಬ್ಬನು ಅಪ್ಪನಿಂದಾಗಿ ತನ್ನ ತಾಯಿಗಾದ ಕಷ್ಟ ಹೇಳಿಕೊಂಡರೆ ಮತ್ತೊಂದು ಜಾತ್ರೆಯ ಸಂಗತಿಯಾಗಿತ್ತು. ಹೀಗೆ ಇವುಗಳನ್ನೇ ಹಿಗ್ಗಿಸಿ ಅವರು ಕಥೆಯನ್ನೂ ಮಾಡುತ್ತಿದ್ದರು. ಕಥೆಗಳಲ್ಲಿ ಬರಬೇಕಾದ ಪಾತ್ರಗಳನ್ನು ಮೋದಲೇ ನೀಡಿ ಅವನ್ನೊಳಗೊಂಡ ಕಥೆ ರೂಪಿಸಲೂ ಹೇಳುತ್ತಿದ್ದೆ. ಉದಾಹರಣೆಗೆ ನಗುವ ಚಂದ್ರ, ಕತ್ತಲೆ ಕಾಡು, ಪುಟ್ಟಿ ಮೊಲ, ಅಜ್ಜಿ ಹಾಗೂ ಪುಟಾಣಿ ಪುಟ್ಟಿ. ಈ ಪಾತ್ರಗಳೆಲ್ಲ ಕಥೆಯಲ್ಲಿ ಬರುವಂತೆ ಮಕ್ಕಳು ಕಲ್ಪಿಸಿ ಬರೆಯ ಬೇಕು. ಇದರ ಹೊರತಾಗಿಯೂ ಅವರು ಪಾತ್ರಗಳನ್ನು ಸೇರಿಸಿಕೊಳ್ಳ ಬಹುದು. ಆಗ ಮಕ್ಕಳು ಈ ಗುಂಪುಗಳನ್ನು ಬಳಸಿ ಪ್ರತಿಯೊಬ್ಬರೂ ವಿಭಿನ್ನವಾಗಿ ಬರೆಯುತ್ತಿದ್ದರು.

ಮಕ್ಕಳು ಪುಸ್ತಕ ಕಂಡ ತಕ್ಷಣ ತಮ್ಮದೇ ಆದ ಆಲೋಚನೆಗೆ ಇಳಿದು ಆಯ್ದುಕೊಳ್ಳುವುದು, ಪುಟ್ಟ ಪುಟ್ಟ ಮಕ್ಕಳು ಕಥೆ ಓದಿ ಹೇಳಿ ಎಂದು ಪೀಡಿಸುವುದು, ಚಿಕ್ಕ ಕವನ ಕಥೆಗಳನ್ನು ಬರೆದು ನನ್ನ ಮುಂದೆ ಹಿಡಿದು ನಾನೇನನ್ನುತ್ತೇನೆ ಎಂದು ಮುಖವನ್ನು ನೋಡುವುದು, ದೊಡ್ಡವರು ಅಂದರೆ ಆರು ಏಳನೇ ತರಗತಿಯ ಮಕ್ಕಳು ತಾವು ಓದಿದ ಪುಸ್ತಕದ ಸಂದರ್ಭಗಳನ್ನು ಒಬ್ಬರಿಂದೊಬ್ಬರಿಗೆ ಹಂಚಿಕೊಳ್ಳುವುದು ಹಾಗೂ ಪುಸ್ತಕ ಓದಿಗಾಗಿ ಹಂಬಲಿಸುವುದು ಎಲ್ಲ ಕಣ್ಣ ಮುಂದೆ ಬರುತ್ತಾ ಹೋಗುತ್ತದೆ.

ಅಂದರೆ ನಾವು ಏನನ್ನು ಪ್ರೀತಿಯಿಂದ ಧ್ಯಾನಿಸುತ್ತೇವೆಯೋ ಅಲ್ಲೆಲ ಸಾಫಲ್ಯದ ಮಾರ್ಗಗಳು ಸಫಲತೆಗಳು ತೆರೆಯುತ್ತಾ ಹೋಗುತ್ತವೆ. ಮಕ್ಕಳ ಲೋಕವನ್ನು ಹೇಗೆಲ್ಲಾ ಅವರ ಮುಂದೆ ತೆರೆದಿಡಬೇಕು ಹಾಗೂ ಅದು ಒಳಿತಿನ ದಾರಿಯಾಗ ಬೇಕೆಂಬುದೆಲ್ಲ ನಾವು ತಿಳಿದಿರಬೇಕು. ನಮ್ಮ ಹವ್ಯಾಸ, ನಾವು ಪ್ರೀತಿಸುವ ಸಂಗತಿ, ನಾವು ಕಳೆಯುವ ವೇಳೆ, ನಾವು ಪದೇ ಪದೇ ತಂದಿಡುವ ವಸ್ತುಗಳು, ಆಟಿಕೆ ಮೊದಲಾದವುಗಳೆಲ್ಲವೂ ಮಕ್ಕಳ ಪರಿಸರವೇ. ಅದೆಲ್ಲ ಅವರ ಮೇಲೆ ಸುಪ್ತವಾಗಿ ಪ್ರಭಾವ ಬೀರುತ್ತಿರುತ್ತವೆ. ಅಂದರೆ ಮಕ್ಕಳು ಓದನ್ನು ಪ್ರೀತಿಸಬೇಕು ಹಾಗೂ ಒಳ್ಳೆಯದಕ್ಕೆ ತೆರೆಯಬೇಕು ಅಂದರೆ ನಾವೂ ಪುಸ್ತಕ ಪ್ರೀತಿಸಬೇಕು ಹಾಗೂ ಅವರ ಮುಂದೆ ಒಳ್ಳೆಯ ಪುಸ್ತಕ ತಂದಿಡಬೇಕಾಗುತ್ತದೆ.

ಈಗ ಕನ್ನಡದಲ್ಲೂ ಮಕ್ಕಳದೇ ಆದ ಲೋಕದ ಹೊಸಮಾದರಿಯ ಕಥೆಗಳು, ಕಾದಂಬರಿಗಳು ಎಲ್ಲ ಪ್ರಕಟವಾಗುತ್ತಿವೆ. ಜಾನಪದ ಮಾದರಿಯ, ರಾಜ ರಾಣಿಗಳ ಕಥೆಗಳಿಂದ ತುಂಬಿ ಹೋಗಿದ್ದ ಕನ್ನಡದ ಮಕ್ಕಳ ಸಾಹಿತ್ಯ ಈಗ ಬದಲಾಗುತ್ತಿದೆ. ಪದ್ಯಗಳೂ ಹೊಸತನ್ನು ಹೇಳುತ್ತಿವೆ. ವಿವಿಧ ಪ್ರದೇಶದ ಮಕ್ಕಳ ಸುತ್ತಲಿನ ಪರಿಸರ, ಮಕ್ಕಳ ಖುಷಿ, ಅವರ ಬೇರೆ ಬೇರೆ ರೀತಿಯ ಕಷ್ಟಗಳು, ಕುತೂಹಲಗಳು, ಬೆರಗು, ಅಚ್ಚರಿಗಳೆಲ್ಲ ಮಕ್ಕಳ ಸಾಹಿತ್ಯ ಒಳಗೊಳ್ಳುತ್ತಿದೆ. ಅದು ಮೊದಲಿನಂತೆ ಕಟ್ಟುಪಾಡಿಗೆ ಒಳಗಾಗದೇ ನೈಸರ್ಗಿಕವಾಗಿ ರಚನೆಗೆ ಇಳಿದು ಕಲಾತ್ಮಕತೆಯೊಂದಿಗೆ ರೂಪುಗೊಂಡಿದೆ. ಇದೆಲ್ಲಾ ಯಾಕೆ ಹೇಳಿದೆನೆಂದರೆ ಮಕ್ಕಳು ಓದಿನ ಖುಷಿಗೆ ತೆರೆದುಕೊಳ್ಳಲು ನಾವು ನಿರ್ಮಿಸುವ ಮತ್ತು ಪ್ರೀತಿಸುವ ಪರಿಸರ ಮುಖ್ಯ ಎಂದು ಆಗಲೇ ಹೇಳಿದ್ದೇನೆ. ಅಂತಹ ಪರಿಸರ ನಿರ್ಮಿಸಲು ನಾವು ಒಂದಿಷ್ಟೂ ಹವಣಿಸದೆ ಮಕ್ಕಳನ್ನು ದೂರುವುದು ವ್ಯರ್ಥ. ನಾವೆಲ್ಲಾ ಅಂದರೆ ಮಕ್ಕಳನ್ನು ಪ್ರೀತಿಸುವ ಎಲ್ಲರೂ ಮಕ್ಕಳಿಗೆ ಒಳ್ಳೊಳ್ಳೆಯ ಪುಸ್ತಕ ಸಿಗುವ… ಅದನ್ನು ಅವರಿಗೆ ಪರಿಚಯಿಸುವ ಕಾರ್ಯ ಮಾಡಬೇಕು. ಮಕ್ಕಳಾಗಿದ್ದಾಗ ಪುಸ್ತಕಗಳನ್ನು, ಓದನ್ನು ಆಪ್ತವಾಗಿಸಿಕೊಂಡರೆ ಅವರು ಬೆಳೆದಂತೆ ಅದೂ ಬೆಳೆಯುತ್ತ ಹೋಗುತ್ತದೆ. ಇದೊಂದು ಸಮಾಜದ ಒಳಿತಿನ ಬೆಳಕಾಗಿ ಪಸರಿಸುತ್ತದೆ.

ತಮ್ಮಣ್ಣ ಬೀಗಾರ ಅವರ ಕೃತಿಗಳು

ಪರಿಚಯ: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ತಮ್ಮಣ್ಣ ಬೀಗಾರರು ಮಲೆನಾಡಿನ ಪರಿಸರ ಹಾಗೂ ಮಕ್ಕಳ ವಾಸ್ತವ ಬದುಕನ್ನು ತಮ್ಮ ಸಾಹಿತ್ಯದಲ್ಲಿ ಚಿತ್ರಿಸಿದವರು. ಕನ್ನಡ ಮಕ್ಕಳ ಸಾಹಿತ್ರದ ಹೊಸ ಚಲನೆಯ ಪಾಲುದಾರರಾದ ಇವರ ಇಪ್ಪತ್ತೈದು ಕೃತಿಗಳು ಬಂದಿವೆ. ಇವರು ವ್ಯಂಗ್ಯಚಿತ್ರಕಾರರೂ ಹೌದು. 

ಓದು ಮಗು ಓದು: ಶ್​! ಇದು ಸ್ಮಶಾನದ ಪುಸ್ತಕ…

 

Published On - 5:16 pm, Wed, 13 January 21