ಅಂಬೇಡ್ಕರ್ ಕೇವಲ ಪೂಜನೀಯ ವ್ಯಕ್ತಿಯಾಗಬಾರದು. ಆಟೋ ಡ್ರೈವರ್, ಕೃಷಿ ಕಾರ್ಮಿಕ, ದಿನಪತ್ರಿಕೆ ಹಂಚುವವ.. ಹೀಗೆ ಪ್ರತಿಯೊಬ್ಬ ಸಾಮಾನ್ಯರಲ್ಲೂ ಅಂಬೇಡ್ಕರ್ ಚಿಂತನೆ ಪ್ರವಹಿಸಬೇಕು. ಅವರನ್ನು ದೈವಿಕ ಸ್ಥಾನಕ್ಕೇರಿಸಿ ಪೂಜೆಗೆ ಸೀಮಿತಗೊಳಿಸುವುದಕ್ಕಿಂತ ಅವರ ಚಿಂತನೆ ತಿಳಿಯುವುದು ಮುಖ್ಯ. ಈ ಉದ್ದೇಶ ಮತ್ತು ಅದನ್ನು ಸಾಕಾರಗೊಳಿಸಿಕೊಳ್ಳುವ ಓರ್ವ ತರುಣನ ಇಚ್ಛಾಶಕ್ತಿಯ ಫಲವೇ ಅಂಬೇಡ್ಕರ್ ಓದು ಸರಣಿ. ಯೂಟ್ಯೂಬ್ನಲ್ಲಿ Arun Jolad Kudligi ಚಾನಲ್ ಸಬ್ಸ್ಕ್ರೈಬ್ ಮಾಡಿದರೆ ಪ್ರತಿದಿನ ಬೆಳಗು 6 ಘಂಟೆಗೆ ಫಟ್ ಅಂತ ನಿಮ್ಮ ನಿಮ್ಮ ಮೊಬೈಲ್ಗಳಲ್ಲಿ ಅಂಬೇಡ್ಕರ್ ಸುಪ್ರಭಾತ ಕೇಳಿಸುತ್ತದೆ.
ಡಾ.ಬಿ.ಆರ್.ಅಂಬೇಡ್ಕರ್ರ ಚಿಂತನೆಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಆದರೆ, ಇದನ್ನು ಭಾಷಣದಲ್ಲಿ ಘೋಷಿಸುತ್ತ, ಜೈಕಾರ ಕೂಗಿದರೆ ಏನು ಪಡೆದಂತಾಯಿತು? ಅವರ ಚಿಂತನೆ, ಯೋಚನೆಗಳನ್ನು ಅರಿಯಬೇಕು. ಅರಿತು ಬಾಳಬೇಕು. ಬೃಹತ್ ಗ್ರಂಥಗಳಿಂದ ಅವರ ವಿಚಾರಗಳು ನಮ್ಮ ಪ್ರತಿದಿನಗಳಿಗೆ ಇಳಿಯುವುದು ಇಂದಿನ ಅವಶ್ಯಕ. ಸಾಹಿತ್ಯ – ಅಕಾಡೆಮಿಕ್ ವಲಯದಿಂದ ಮಹಾನ್ ಮಾನವೀಯತಾವಾದಿಯನ್ನು ಶ್ರೀಸಾಮಾನ್ಯರಿಗೆ ಪರಿಚಯಿಸಲು ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅರುಣ್ ಜೋಳದಕೂಡ್ಲಿಗಿ ಅಂಬೇಡ್ಕರ್ ಓದು ಸರಣಿ ರೂಪಿಸಿದರು.
ಶುರುವಾದ ಕಾರಣ ಕೇಳಿ
ಖಾಸಗಿ ವಾಹಿನಿಯಲ್ಲಿ ಅಂಬೇಡ್ಕರರ ಜೀವನ ಆಧರಿಸಿ ಮಹಾನಾಯಕ ಧಾರಾವಾಹಿ ಪ್ರಸಾರವಾಯಿತು. ಆಗಲೇ, ಸುಮ್ಮನೆ ಕುತೂಹಲಕ್ಕೆಂದು ಅಂತರ್ಜಾಲದಲ್ಲಿ ‘ಅಂಬೇಡ್ಕರ್’ ಎಂದು ಹುಡುಕಿದರು. ಅವರ ಕುರಿತು ಪ್ರಾಥಮಿಕ ಮಾಹಿತಿಗಳು ದೊರೆತವಷ್ಟೇ. ಅಂಬೇಡ್ಕರ್ ಅವರ ಚಿಂತನೆಗಳು ಸಿಕ್ಕಿದ್ದು ತೀರಾ ಕಡಿಮೆ. ಅಂಬೇಡ್ಕರ್ ಕುರಿತು ರಾಜಕೀಯ ಮುಖಂಡರ ಮಾತುಗಳು, ಪರಿನಿರ್ವಾಣ ದಿನ ಉದ್ಘಾಟನೆ, ಅಂಬೇಡ್ಕರ್ ಜಾತಿ.. ಇಂತಹ ವಿಷಯಗಳೇ ಕಾಣಿಸುತ್ತಿದ್ದವು. ಆಗಲೇ ಅರುಣ್ ಜೋಳದಕುಡ್ಲಿಗಿ ಅಂಬೇಡ್ಕರ್ ಅವರ ಮಾತು, ಬರಹಗಳನ್ನು ಕನ್ನಡದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮುನ್ನೆಲೆಗೆ ತರಲು ನಿರ್ಧರಿಸಿದರು.
ಸೆಪ್ಟೆಂಬರ್ 2020ರಲ್ಲಿ ಆರಂಭವಾದ ಅಂಬೇಡ್ಕರ್ ಓದು ಸರಣಿಯಲ್ಲಿ ಈವರೆಗೆ 145 ವಿಡಿಯೋ ನಿರ್ಮಾಣವಾಗಿದೆ. ಸದ್ಯ 35 ಗಂಟೆಗಳಷ್ಟು ಅಂಬೇಡ್ಕರ್ ಚಿಂತನೆಗಳು ದಾಖಲೀಕರಣವಾಗಿದ್ದು, 100 ಗಂಟೆಯನ್ನು ತಲುಪುವ ಗುರಿ ಅರುಣ್ ಅವರದ್ದು.
ಮೊದಮೊದಲು ಹಿಂಜರಿಕೆ..ಈಗ ಅವಕಾಶಕ್ಕಾಗಿ ಬೇಡಿಕೆ
ಅರುಣ್ ಜೋಳದಕೂಡ್ಲಿಗಿ ಅವರು ಈ ಸರಣಿಯನ್ನು ರೂಪಿಸಿದಾಗ ಹೆಚ್ಚು ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಗೆಳೆಯರು, ಪರಿಚಯಸ್ಥರ ಬಳಿ ಓದಿಸಿದರು. ಅಂಬೇಡ್ಕರ್ ಕುರಿತು ‘ಓದಿಕೊಂಡ ಸಾಹಿತ್ಯ-ಅಕಾಡೆಮಿಕ್ ಬಳಗದ ಬಳಿ ಕೇಳಿಕೊಂಡರು. ಆದರೆ, ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಬರಲಿಲ್ಲ. ಆದರೆ, ಯೋಜನೆ ಶುರುವಾಗಲೇಬೇಕು, ಮಧ್ಯೆ ನಿಲ್ಲಬಾರದು. ಪಟ್ಟು ಬಿಡದೇ ಒಮ್ಮೊಮ್ಮೆ ತಾವೇ ಓದಿದರು. ಜನಸಾಮಾನ್ಯರ ಬಳಿ ಓದಿಸಿದರು. ಅವರ ಅಂಬೇಡ್ಕರ್ ಓದು ಸರಣಿಗೆ ಪ್ರಚಾರದ ಹಂಗಿರಲಿಲ್ಲ. ಅರುಣ್ ಅವರ ಯೂಟ್ಯೂಬ್ ಚಾನಲ್ ಮೂಲಕ ಅಂಬೇಡ್ಕರ್ ಗೃಹಿಣಿ, ಆಟೋ ಡ್ರೈವರ್, ದಿನಗೂಲಿ ಕಾರ್ಮಿಕ.. ಕ್ಯಾಬ್ ಡ್ರೈವರ್ ಮುಂತಾದ ಜನಸಾಮಾನ್ಯರ ಕೆಲಸಗಳ ಮಧ್ಯೆಯೇ ನಿಧಾನವಾಗಿ ಝರಿಯಂತೆ ಹರಿದರು.
ಓದಿದ್ದು ಯಾರು?
ಈವರೆಗೆ ಅಂಬೇಡ್ಕರ್ ಓದು ಸರಣಿಯಲ್ಲಿ ಓದಲು ಹೆಚ್ಚು ಆಸಕ್ತಿ ವಹಿಸಿದ್ದು ಮಹಿಳೆಯರು.. ಅಂಬೇಡ್ಕರ್ ಕುರಿತು ತೋರಿಕೆಯ ಅಭಿಮಾನ ಹೊಂದಿಲ್ಲದ ಇವರು ದಿನದ ಸಾವಿರ ಜವಾಬ್ದಾರಿಗಳ ನಡುವೆಯೇ ಈ ಸರಣಿಗಾಗಿ ಅಂಬೇಡ್ಕರ್ರನ್ನು ಓದಿದರು. ಒಂದು ವಿಡಿಯೋಗಾಗಿ ಹತ್ತು ಚಿಂತನೆ ಓದಿದರು. ಅಂಬೇಡ್ಕರ್ ವಿಚಾರ ಅರಿತರು.
ಪ್ರಚಲಿತ ಘಟನೆಗಳಿಗೆ ಹೊಂದಿಕೆಯಾಗುವ ಚಿಂತನೆಗಳನ್ನು ಓದಿಸಲು ಆದ್ಯತೆ ನೀಡಿದ್ದಾರೆ ಅರುಣ್ ಜೋಳದಕೂಡ್ಲಿಗಿ. ಗೋಹತ್ಯೆ ನಿಷೇಧ ಕಾಯ್ದೆ ಚರ್ಚೆಯಾದಾಗ ಅಂಬೇಡ್ಕರ್ರ ಗೋವಿನ ಕುರಿತ ಚಿಂತನೆಗಳು, ರೈತರ ಹೋರಾಟ ಆರಂಭವಾದಾಗ ರೈತರ ಕುರಿತು ಅಂಬೇಡ್ಕರ್ ಏನಂದಿದ್ದರು.. ಹೀಗೆ ಆದಷ್ಟು ಪ್ರಸ್ತುತಕ್ಕೆ ಹೊಂದುವ ಚಿಂತನೆಗಳನ್ನು ಈ ಸರಣಿಯಲ್ಲಿ ಓದಲಾಗಿದೆ.
1.60 ಲಕ್ಷಕ್ಕೂ ಹೆಚ್ಚು ವೀಕ್ಷಣೆ, 2750 ಚಂದಾದಾರರು ಅರುಣ್ ಅವರ ಯೂಟ್ಯೂಬ್ ಚಾನಲ್ಗಿದೆ. ತಮ್ಮ ಪ್ರಯತ್ನದಿಂದ ಸಾಮಾಜಿಕ ತಾಣಗಳಲ್ಲಿ ಧನಾತ್ಮಕ ವಿಷಯಗಳ ಪ್ರಮಾಣ ಹೆಚ್ಚಲಿದೆ ಎಂಬ ಖುಷಿಯೂ ಅವರಿಗಿದೆ. ನಿಮ್ಮ ಮನೆಗೂ ಅಂಬೇಡ್ಕರ್ ಬರಬೇಕೇ.. ಅರುಣ್ ಜೋಳದಕುಡ್ಲಿಗಿ ಅವರ ಯೂಟ್ಯೂಬ್ ಚಾನಲ್ಗೆ ಭೇಟಿಕೊಡಿ..
ಜನ ಸಾಮಾನ್ಯರಿಂದಲೂ ಸಂವಿಧಾನ ಕರ್ತೃವಿನ ಸ್ಮರಣೆ: #BharathRatna ಟ್ರೆಂಡಿಂಗ್
Published On - 6:29 pm, Sun, 24 January 21