ಉಡುಪಿ: ಕಾಲುಗಳಿಗೆ ಕೋಳ ಬಿಗಿದು, ಪದ್ಮಾಸನ ಭಂಗಿಯಲ್ಲಿ ಕಟ್ಟಿ, ಕಡಲಿಗೆ ಎಸೆದುಬಿಟ್ಟರೆ ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಉಡುಪಿಯಲ್ಲಿ ಸಾಟಿಯಿಲ್ಲದ ಈಜುಗಾರರೊಬ್ಬರು ಇದೇ ಭಂಗಿಯಲ್ಲಿ ಈಜಿ ದಡ ಸೇರಿದ್ದಾರೆ. ಕೈಗಳನ್ನು ಕೂಡಾ ಬಳಸದೆ ಈಜಿ ಹೊಸ ದಾಖಲೆ ಬರೆದಿದ್ದಾರೆ.
ಮೀನಿನ ಈಜಿಗೆ ಸೆಡ್ಡು ಹೊಡೆಯುವ ಈಜುಗಾರರು ಕರಾವಳಿಯಲ್ಲಿದ್ದಾರೆ. ಅಂತಹ ಅಪರೂಪದ ಸಾಹಸಿ ಈಜುಗಾರರೊಬ್ಬರು ಅರಬ್ಬಿ ಸಮುದ್ರದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಸಮುದ್ರದ ಅಬ್ಬರದ ಅಲೆಗಳ ನಡುವೆ ಇಣುಕಿದಂತೆ ಬಂದು ಮಾಯವಾಗುವ ಅಪರೂಪದ ಈಜುಗಾರನ ಹೆಸರು ಗಂಗಾಧರ ಜಿ.
ಮಲ್ಪೆ ಭಾಗದಲ್ಲಿ ಸಾವಿರಾರು ಮಂದಿಗೆ ಈಜು ಕಲಿಸಿರುವ ಮಹಾಗುರು ಇವರು. ವಿಶಿಷ್ಟ ಈಜುಗಾರ ಈಗ ನೂತನ ದಾಖಲೆ ಬರೆದಿದ್ದಾರೆ. ಕಾಲುಗಳಿಗೆ ಕೋಳ ಬಿಗಿದ ಸ್ಥಿತಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತು ಕೈಗಳನ್ನು ಕೂಡ ಬಳಸದೆ ಈಜಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್
1.4 ಕಿಲೋಮೀಟರ್ ದೂರದ ಇವರ ಈಜು ಸದ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಈ ಸಾಹಸಮಯ ಈಜುಗಾರನ ವಯಸ್ಸು 65. ಈ ಸೀನಿಯರ್ ಸಿಟಿಜನ್ ಅರಬ್ಬಿ ಸಮುದ್ರದಲ್ಲಿ ವಂಡರ್ ಬಾಯ್ ಆಗಿ ಹೊರಹೊಮ್ಮಿದ್ದಾರೆ.
ಗಂಗಾಧರ್ ಮಾಡಿರುವುದು ನೂತನ ದಾಖಲೆ. ಇವರ ವಯಸ್ಸನ್ನು ಗಮನಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ನವರು 800 ಮೀಟರ್ ಈಜಿದರೆ ಸಾಕು ಎಂದಿದ್ದರು. ಆದರೆ ಈ ಸಾಹಸಿ ಈಜುಗಾರ 1400 ಮೀಟರ್ ಈಜಿ ತನ್ನ ದಾಖಲೆ ಪೂರ್ಣಗೊಳಿಸಿದ್ದಾರೆ. ಲೋಟಸ್ ಫ್ಲೋಟ್ ಶೈಲಿಯಲ್ಲಿ ಈಜಿದ ಗಂಗಾಧರ್, ಒಂದು ಗಂಟೆ 13 ನಿಮಿಷ ಏಳು ಸೆಕೆಂಡಿನಲ್ಲಿ ದಾಖಲೆ ಪೂರೈಸಿದ್ದಾರೆ. ಬೆಳಗ್ಗೆ 8.36 ಸಮುದ್ರಕ್ಕೆ ಧುಮ್ಮಕ್ಕಿ ಈಜು ಆರಂಭಿಸಿದ್ದು, ಈ ವೇಳೆ ಜಿಲ್ಲಾಡಳಿತದ ಪ್ರತಿನಿಧಿಗಳು, ಗಣ್ಯರು, ಪೊಲೀಸರು ಸಾಕ್ಷಿಯಾಗಿದ್ದರು. ಬೆಳಿಗ್ಗೆ 9.40 ಕ್ಕೆ ದಡ ಸೇರುವಾಗ ಸಾವಿರಾರು ಅಭಿಮಾನಿಗಳು ಸಂತಸಪಟ್ಟರು. ವಯಸ್ಸಿಗೆ ಮೀರಿದ ಇವರ ಸಾಧನೆಗೆ ಕಂಡು ಕಡಲ ತೀರದ ಜನರು ಶಹಬ್ಬಾಸ್ ಎಂದು ಬೆನ್ನು ತಟ್ಟುತ್ತಿದ್ದಾರೆ.
ಈಜು ಎನ್ನುವುದೇ ಒಂದು ಸಾಹಸ ಕ್ರೀಡೆ. ಅದರಲ್ಲೂ ಅಲೆಗಳ ಅಬ್ಬರಿಸುವ ಸಮುದ್ರದಲ್ಲಿ ಈಜುವುದು ಸುಲಭದ ಮಾತಲ್ಲ. ಈ ನಡುವೆ ಮೀನಿನ ಗತಿಯನ್ನು ಅನುಸರಿಸಿದಂತೆ ಈಜಿದ ಗಂಗಾಧರ್ ಹೊಸ ದಾಖಲೆಯ ಪುಟ ಸೇರಿದ್ದಾರೆ.
ಉತ್ತಮ ಆರೋಗ್ಯಕ್ಕಾಗಿ ಈಜಬೇಕು ಎನ್ನುವುದು ಗಂಗಾಧರ್ ಅಭಿಪ್ರಾಯ. ಇದೇ ಉದ್ದೇಶ ಇಟ್ಟುಕೊಂಡು ಪ್ರತಿದಿನ ನೂರಾರು ಯುವಕ-ಯುವತಿಯರಿಗೆ ಉಚಿತವಾಗಿ ಈಜು ಕಲಿಸುತ್ತಿದ್ದಾರೆ. ವಿಕಲಚೇತನರು ಇವರಿಂದ ಈಜು ಕಲಿತು ವಿಶಿಷ್ಟ ಚೇತನರಾಗಿದ್ದಾರೆ. ಇಂದು ತನ್ನ ಶಿಷ್ಯರ ಎದುರೆ ಹೊಸ ದಾಖಲೆ ಬರೆದ ಮಹಾಗುರು ಹೆಮ್ಮೆಯಿಂದ ಬೀಗುತ್ತಿದ್ದಾರೆ.
ಈ ಬಾರಿ ಗಣರಾಜ್ಯೋತ್ಸವಕ್ಕೆ ಕರ್ನಾಟಕದಿಂದ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ!