ಇಸ್ರೋ ಸಂಸ್ಥೆಯ ಪ್ರತಿಷ್ಠಿತ ಇನ್ಸಾಟ್ ಯೋಜನೆ ಕಾರ್ಯರೂಪಕ್ಕೆ ಬಂದಾಗ ಆಕಾಶವಾಣಿಯಲ್ಲಿ ವರದಿಗಾರರಾಗಿದ್ದ ಹಿರಿಯ ಪತ್ರಕರ್ತ ಶೇಷಚಂದ್ರಿಕ ಈ ಬರಹದಲ್ಲಿ ವಿಜ್ಞಾನಿ ರೊದ್ದಂ ನರಸಿಂಹ ಅವರ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
—
ಪ್ರಾಮಾಣಿಕತೆ, ಕಡುನಿಷ್ಠೆ, ಅಧ್ಯಯನಶೀಲತೆ ಮತ್ತು ರಾಷ್ಟ್ರಪ್ರೇಮಕ್ಕೆ ಆದರ್ಶದಂತಿದ್ದವರು ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ. ಪ್ರಚಾರ ಜಗತ್ತಿನಿಂದ ಬಹುದೂರವಿದ್ದ ವಿಜ್ಞಾನಿ ಅವರು. ವಿಶ್ವವಿಖ್ಯಾತರಾದರೂ ಮಾಧ್ಯಮದಲ್ಲಿ ಅತಿ ಕಡಿಮೆ, ಕೈಬೆರಳೆಣಿಕೆಯಷ್ಟು ಪತ್ರಕರ್ತರಿಗೆ ಮಾತ್ರ ಇವರು ಪರಿಚಿತರಾಗಿದ್ದರು ಎಂದರೆ ಅಚ್ಚರಿಯೆನಿಸಬಹುದು.
ರಾಷ್ಟ್ರಕವಿ ಕುವೆಂಪು ಅವರ ಮಾತು ರೊದ್ದಂ ನರಸಿಂಹರಿಗೆ ಅನ್ವಯಿಸುವ ಗುಣ ವಿಶೇಷಣ. ‘ತೊಲಗಾಚೆ ಕೀರ್ತಿಶನಿ..’ ಎಂದರು ಕುವೆಂಪು. ಬದುಕಿನುದ್ದಕ್ಕೂ ಕೀರ್ತಿ-ಪ್ರಚಾರಗಳನ್ನು ದೂರವಿಟ್ಟರವರು ಪ್ರೊ.ನರಸಿಂಹ. ಅವರು ಅಚ್ಚಕನ್ನಡಿಗರು ಎಂದು ಕನ್ನಡನಾಡಿನ ಬಹುತೇಕರಿಗೆ ತಿಳಿದದ್ದು ರೊದ್ದಂರವರು ಕೀರ್ತಿಶೇಷರಾದ ನಂತರವೇ..!
ಹಾಗೆಂದ ಮಾತ್ರಕ್ಕೆ ಮಾಧ್ಯಮವನ್ನು ಈ ನಮ್ಮ ಮಹಾನ್ ವಿಜ್ಞಾನಿ ದೂರವಿಟ್ಟರು ಎಂದು ಅರ್ಥವಲ್ಲ. ವಿಜ್ಞಾನ ಪ್ರಯೋಗಗಳ ಬಗೆಗೆ ಪ್ರಶ್ನಿಸುವಾಗ ವರದಿಗಾರ ಅಂತಹ ವಿಷಯದ ಕುರಿತು ಕನಿಷ್ಠ ಪ್ರಮಾಣದಲ್ಲಿಯಾದರೂ ಪೂರ್ವಸಿದ್ಧತೆ-ಹೋಂ ವರ್ಕ್ ಮಾಡಿರಲಿ ಎಂಬ ವೈಜ್ಞಾನಿಕ ಮನೋಭಾವ ರೊದ್ದಂ ನರಸಿಂಹರಲ್ಲಿತ್ತು.
ಇದನ್ನೂ ಓದಿ: ಏರೊಸ್ಪೇಸ್ ವಿಜ್ಞಾನಿ ರೊದ್ದಂ ನರಸಿಂಹ ನಿಧನ
ವಿಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಪಂಕ್ತಿಪಂಕ್ತಿಯಾಗಿ ವಿವರಿಸುತ್ತಿದ್ದ ಜ್ಞಾನ ಔದಾರ್ಯ ಇವರದು. ಪ್ರೊ. ರೊದ್ದಂರವರ ವ್ಯಾಖ್ಯಾನ ಮತ್ತು ನಿರ್ಣಯ ವಾಯುಚಲನೆ ವಿಜ್ಞಾನದ ವೇದವಾಕ್ಯದಂತೆ ಇರುತ್ತಿತ್ತು. ಭಾರತದ ಉಪಖಂಡದ ಮೇಲೆ ಮೋಡಗಳ ಚಲನೆಯ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಅಭ್ಯಸಿಸಲು ಅಹರ್ನಿಶಿ ಅವರು ನಡೆಸಿದ ಪ್ರಯೋಗಗಳು ಮತ್ತು ಸಿದ್ಧಾಂತ ಇಂದಿಗೂ ಅಂತಿಮ. ಇಂಗ್ಲಿಷ್ ನಲ್ಲಿ ಹೇಳುವಂತೆ ultimate ಆಗಿರುತ್ತಿತ್ತು.
ಹಾಗೊಮ್ಮೆ ವರದಿಗಾರ ತನ್ನ ವಿವರಣೆಯನ್ನು ಅಸಮರ್ಪಕವಾಗಿ ಇಲ್ಲವೇ ತಪ್ಪಾಗಿ ಅರ್ಥೈಸಿಕೊಂಡಲ್ಲಿ ಆಯಾ ಪತ್ರಿಕೆ ಅಥವಾ ಚಾನಲ್ ಗಳಿಗೆ ಮುದ್ದಾಂ ಫೋನ್ ಮಾಡಿ ತಿದ್ದುಪಡಿಗೆ ಅನುವು ಮಾಡಿಕೊಡುತ್ತಿದ್ದರು ಪ್ರೊ. ರೊದ್ದಂ. ಸತ್ಯನಿಷ್ಠುರವಾದ ಈ ವಿಜ್ಞಾನಿಯನ್ನು ಕಂಡರೆ ಮಾಧ್ಯಮಕ್ಕೆ ಭಯವಿತ್ತು. ಇದೇ ರೀತಿ ಪ್ರಚಾರಕ್ಕಷ್ಟೆ ಮೀಸಲಾಗುವ ವಿಜ್ಞಾನಿಗಳು ರೊದ್ದಂ ಅವರ ಬಳಿ ಹೋಗಲು ಹಿಂಜರಿದದ್ದೂ ಉಂಟು.
ಇನ್ಸಾಟ್ ಉಪಗ್ರಹಗಳ ಸಂಯೋಜಿತ ಅಭಿವೃದ್ಧಿ ಪ್ರಯೋಗಗಳ ಹಂತದಲ್ಲಿ ಅಕಾಶವಾಣಿಯ ವರದಿಗಾರನಾಗಿದ್ದ ನನಗೆ ಮತ್ತು ಯುಎನ್ಐ ವರದಿಗಾರ ಫಡ್ನೀಸ್ ಅವರಿಗೆ ಪ್ರೊ.ಧವನ್ರ ಮೂಲಕ ರೊದ್ದಂ ನರಸಿಂಹರು ಪರಿಚಯವಾದದ್ದು ನಮ್ಮಿಬ್ಬರ ಸೌಭಾಗ್ಯ. ಕನ್ನಡದಲ್ಲಿ ಇನ್ಸಾಟ್ ಉಡಾವಣೆಯ ಬಹುಕ್ಲಿಷ್ಟ ಇಂಗ್ಲಿಷ್ ಪದಗಳಿಗೆ ಸರಿಸಮನಾದ ಕನ್ನಡ ಪರ್ಯಾಯ ಪದಗಳನ್ನು ಹುಡುಕಲು ತಡಬಡಿಸುತ್ತಿದ್ದ ನನ್ನ ನೆರವಿಗೆ ಬಂದ ವಿಜ್ಞಾನಿ ಇವರು. ಇಸ್ರೊ ಸಂಸ್ಥೆಯ ವಿಜ್ಞಾನಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ದಿವಂಗತ ಕೃಷ್ಣಮೂರ್ತಿ ಶ್ರೀಹರಿಕೋಟಾ ಉಡಾವಣಾ ಕ್ಷೇತ್ರದಲ್ಲಿ ವಿಜ್ಞಾನ ಕನ್ನಡ ಕುರಿತು ಪುಟ್ಟ ಸಂವಾದ ಸಮ್ಮೇಳನ ನಡೆಸುತ್ತಿದ್ದುದನ್ನು ನಾನು ಎಂದಿಗೂ ಮರೆಯಲಾರೆ.
ಅಂದಿನ ರಕ್ಷಣಾ ವಿಷಯಗಳ ತಜ್ಞ ವರದಿಗಾರ ಸೋಮನಾಥ ಸಸ್ರು ಮತ್ತು ಪ್ರೊ.ರೊದ್ದಂ ನರಸಿಂಹರ ನಡುವೆ ನಡೆಯುತ್ತಿದ್ದ ಪ್ರಸ್ನೋತ್ತರಗಳು ನನ್ನಂತಹ ಸಾಮಾನ್ಯ ವರದಿಗಾರನಿಗೆ ಪುನಶ್ಚರಣ ತರಗತಿಗಳಾಂತಾಗುತ್ತಿತ್ತು.
ಪ್ರೊ.ರೊದ್ದಂ ಕನಸುಗಳು
ರೊದ್ದಂ ನರಸಿಂಹರಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ರಾಷ್ಟ್ರೀಯ ವಿಜ್ಞಾನ ವಿಷಯಗಳ ಉನ್ನತ ಅಧ್ಯಯನ ಕೇಂದ್ರದ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್) ಬಗ್ಗೆ ಅಪಾರ ಅಭಿಮಾನ. 1980-90ರ ದಶಕದ ಮತ್ತು ನವಯುಗದ ಆದಿಯಲ್ಲಿ ವಿದ್ಯಾರ್ಥಿಗಳು ಮೂಲಭೂತ ವಿಜ್ಞಾನ ವಿಷಯಗಳ ಅಧ್ಯಯನವನ್ನು ಅಸಡ್ಡೆ ಮಾಡುತ್ತಿದ್ದುದರ ಬಗೆಗೆ ಅಪಾರವಾಗಿ ನೊಂದ ವಿಜ್ಞಾನಿ ಇವರು.
ಭಾರತದ ವಿಜ್ಞಾನ ಕ್ಷೇತ್ರ ವಿಕಸಿತಗೊಂಡು ಜನಸಾಮಾನ್ಯರಿಗೆ ವೈಜ್ಞಾನಿಕ ಪ್ರಯೋಗಗಳು ಹಾಗೂ ಸಂಶೋಧನೆಯ ಫಲ ಸಿಗಬೇಕಾದರೆ ಫಂಡಮೆಂಟಲ್ ಸೈನ್ಸ್ ಅಧ್ಯಯನ ವ್ಯಾಪಕವಾಗಿ ಸ್ಥಿರಗೊಳ್ಳಬೇಕೆಂಬುದು ಪ್ರೊ.ರೊದ್ದಂ ಅವರ ವಾರದ. ಇದೇ ರೀತಿ ನಿರ್ಣಾಯಕ ಹಂತದ ಪ್ರಯೋಗಗಳನ್ನು ನಡೆಸುವ ವಿಜ್ಞಾನಿಗಳಿಗೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಆರ್ಥಿಕ ಸೌಲಭ್ಯ ಇದ್ದಲ್ಲಿ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿದ ವಿಜ್ಞಾನಿ (ಬಹುಶಃ ಏಕೈಕ ಎಂದರೂ ತಪ್ಪಲ್ಲ) ಪ್ರೊ.ರೊದ್ದಂ ನರಸಿಂಹ.
ವಿಧಿವಶರಾದ ಪ್ರೊ.ರೊದ್ದಂ ನರಸಿಂಹರಿಗೆ ನಾಡಿನ ಜನತೆ ಶ್ರದ್ಧಾಂಜಲಿ ಅರ್ಪಿಸುತ್ತದೆ.
-ಶೇಷಚಂದ್ರಿಕ
ಸಾಮಾನ್ಯ ಜನರು ವಿಮಾನ ಹತ್ತಬೇಕೆಂಬ ಕನಸಿಗಾಗಿ ಶ್ರಮಿಸಿದ್ದ ಏರೊಸ್ಪೇಸ್ ವಿಜ್ಞಾನಿ ರೊದ್ದಂ ನರಸಿಂಹ ನಿಧನ
Published On - 2:29 pm, Tue, 15 December 20