ರೊದ್ದಂ ನರಸಿಂಹ ಬರಹ | ನಾವು ನಮ್ಮ ಪೂರ್ವಕಾಲದ ಬಗ್ಗೆ ಅಸಂಭವ ಕತೆಗಳನ್ನೇನೂ ಶೋಧಿಸಬೇಕಿಲ್ಲ, ಈಗ ಕಷ್ಟಪಟ್ಟು ಕೆಲಸ ಮಾಡಬೇಕಷ್ಟೇ

2015ರ ಜನವರಿ 3ರಿಂದ 7ರವರೆಗೆ ಮುಂಬೈನಲ್ಲಿ ನಡೆದ 102ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​​ನ ವಿಚಾರ ಗೋಷ್ಠಿಯಲ್ಲಿ ಭಾರತೀಯ ಪರಂಪರೆ ಬಗ್ಗೆ ವಿವಾದಗಳೆದ್ದಿದ್ದವು. ಈ ಬಗ್ಗೆ 'ಕರೆಂಟ್ ಸೈನ್ಸ್' ಪತ್ರಿಕೆಯಲ್ಲಿ ಪ್ರಕಟವಾದ ರೊದ್ದಂ ನರಸಿಂಹ ಅವರ ಅತಿಥಿ ಸಂಪಾದಕೀಯದ ಅನುವಾದ ಇಲ್ಲಿದೆ.

ರೊದ್ದಂ ನರಸಿಂಹ ಬರಹ | ನಾವು ನಮ್ಮ ಪೂರ್ವಕಾಲದ ಬಗ್ಗೆ ಅಸಂಭವ ಕತೆಗಳನ್ನೇನೂ ಶೋಧಿಸಬೇಕಿಲ್ಲ, ಈಗ ಕಷ್ಟಪಟ್ಟು ಕೆಲಸ ಮಾಡಬೇಕಷ್ಟೇ
ಪ್ರೊ.ರೊದ್ದಂ ನರಸಿಂಹ (Image courtesy https://connect.iisc.ac.in)
Follow us
ರಶ್ಮಿ ಕಲ್ಲಕಟ್ಟ
|

Updated on:Dec 15, 2020 | 7:31 PM

2015ರ ಜನವರಿ 3ರಿಂದ 7ರವರೆಗೆ ಮುಂಬೈನಲ್ಲಿ ನಡೆದ 102ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​​ನ ವಿಚಾರ ಗೋಷ್ಠಿಯಲ್ಲಿ ಭಾರತೀಯ ಪರಂಪರೆ ಬಗ್ಗೆ ವಿವಾದಗಳೆದ್ದಿದ್ದವು. ಈ ಬಗ್ಗೆ ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ರೊದ್ದಂ ನರಸಿಂಹ ಅವರ ಅತಿಥಿ ಸಂಪಾದಕೀಯದ ಅನುವಾದ ಇಲ್ಲಿದೆ.

ವಿಚಾರಗೋಷ್ಠಿಯ ಮುಖ್ಯ ವಿಷಯ ಸಂಸ್ಕೃತದ ಮೂಲಕ ಪ್ರಾಚೀನ ವಿಜ್ಞಾನ ಎಂಬುದಾಗಿತ್ತು. ವಿಜ್ಞಾನ ಸಮ್ಮೇಳನದಲ್ಲಿ ಭಾಗಿಯಾಗಿರುವ ಸಂಸ್ಕೃತ ತಜ್ಞರು ಮತ್ತು ಸಂಶೋಧಕರಿಗಾಗಿ ಈ ಗೋಷ್ಠಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಚರ್ಚೆಯಾದ ವಿಷಯದ ಬಗ್ಗೆ ಮಾತನಾಡೋಣ.

ನಮ್ಮ ಪೂರ್ವಜರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಹಲವು ಶಾಖೆಗಳ ಬಗ್ಗೆ ಅರಿತಿದ್ದರು. ರಿಲೇಟಿವಿಟಿ ಮತ್ತು ಕ್ವಾಂಟಂ ಮೆಕ್ಯಾನಿಕ್ಸ್​ನಿಂದ ಹಿಡಿದು ಸ್ಟೆಮ್ ಸೆಲ್ ಬಯಾಲಜಿ ಮತ್ತು ಏರೋಸ್ಪೇಸ್ ಟೆಕ್ನಾಲಜಿ ಬಗ್ಗೆ ಅವರಿಗೆ ತಿಳಿದಿತ್ತು. ಈ ವಾದವನ್ನು ವ್ಯಂಗ್ಯವಾಗಿ ತಳ್ಳಿಹಾಕಿದ ಇನ್ನೊಂದು ಗುಂಪು ಹಿಂದಿನ ಕಾಲದ ಸಾಧನೆಗಳೆಲ್ಲವೂ ಸಂದೇಹಾಸ್ಪದ ಅಥವಾ ಅಸಂಬದ್ಧ ಎಂದವು. ಇಂಥಾ ಚರ್ಚೆಗಳು ಸಾಮಾನ್ಯವಾಗಿ ತತ್ವಶಾಸ್ತ್ರಕ್ಕೆ ಸಂಬಂಧ ಕಲ್ಪಿಸುತ್ತವೆ. ಜವಾಹರ್ ಲಾಲ್ ನೆಹರು ಅವರು ವೈಜ್ಞಾನಿಕ ಮನಸ್ಥಿತಿ ಎಂದು ಕರೆಯುವ ಆ ಮನಸ್ಥಿತಿ ಭಾರತೀಯರಿಗೆ ಈಗ (ಅಥವಾ ಈ ಮೊದಲೇ) ಇದೆಯೇ? ಈ ಎರಡೂ ತಂಡಗಳು ಈ ವಿಷಯದಲ್ಲಿ ಬಹಳಷ್ಟು ಚರ್ಚೆ ನಡೆಸಿವೆ ಎಂದು ನನಗನಿಸುತ್ತದೆ. ಅಚ್ಚರಿಯೇನೆಂದರೆ, ಶಾಸ್ತ್ರೀಯ ಭಾರತೀಯ ವಿಜ್ಞಾನದ ಬಗ್ಗೆ ಹಲವಾರು ಅಧಿಕೃತ ವಿಷಯಗಳು ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚೆಚ್ಚು ಪ್ರಕಟವಾಗುತ್ತಿದೆ.

ಸಮ್ಮೇಳನದಲ್ಲಿ ನಡೆದ ಈ ಚರ್ಚೆಗಳು ಮೂರು ವಿವಾದಗಳನ್ನು ಹುಟ್ಟು ಹಾಕಿವೆ. ಅವುಗಳು ಹೀಗಿವೆ

ಭಾರತದ ಪುರಾತನ ವೈಮಾನಿಕ ತಂತ್ರಜ್ಞಾನ ಮಹರ್ಷಿ ಭಾರದ್ವಾಜರ ಬೃಹತ್ ವಿಮಾನ ಶಾಸ್ತ್ರ ಮತ್ತು ಜಿ.ಆರ್. ಜೋಸೆಯರ್ ಅವರ ವೈಮಾನಿಕ ಶಾಸ್ತ್ರ ಕೃತಿಗಳನ್ನು ಆಧರಿಸಿ ಬೃಹತ್ ವಿಮಾನ ಶಾಸ್ತ್ರದ ಬಗ್ಗೆ ವಿಚಾರ ಮಂಡನೆ ಮಾಡಲಾಗಿತ್ತು. ಈ ಪ್ರಾಚೀನ ಪುಸ್ತಕಗಳಲ್ಲಿ ಮೂರು ವಿಧದ ವಿಮಾನಗಳ ಬಗ್ಗೆ ವಿವರಣೆ ಇದೆ. ಈ ವಿಮಾನಗಳಲ್ಲಿ ಒಂದು ವಿಮಾನವು ಮಾರ್ಚ್ 10ರಂದು ಹಾರಾಟ ನಡೆಸಲಿದೆ. ಇನ್ನೊಂದು ವಿಮಾನದ ತಳಭಾಗದ ವ್ಯಾಸ 300ರಷ್ಟಿದೆ. ಆದರೆ ಅದರ ತೂಕದ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗಿಲ್ಲ.

ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ (ಎಚ್ ಎಸ್ ಮುಕುಂದ, ಎಸ್ಎಂ ದೇಶ್ ಪಾಂಡೆ, ಎ .ಪ್ರಭು, ಎಚ್ ನಾಗೇಂದ್ರ, ಎಸ್ ಪಿ ಗೋವಿಂದರಾಜು – ಇವರೆಲ್ಲರೂ ಸಂಸ್ಕೃತಪ್ರಿಯರಾಗಿದ್ದಾರೆ) ಏರೋಸ್ಪೇಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ನುರಿತ ವಿಜ್ಞಾನಿಗಳ ತಂಡವು ವಿಮಾನ ಶಾಸ್ತ್ರದ ವಿಮರ್ಶಾತ್ಮಕ ವಿಶ್ಲೇಷಣೆಯಲ್ಲಿ (Scientific Opinion, 1974) ಈ ವಿನ್ಯಾಸಗಳಿಗೆ ವೈಜ್ಞಾನಿಕವಾಗಿ ಆಧಾರವಿಲ್ಲ ಎಂದು ಹೇಳಿತ್ತು.

ಉದಾಹರಣೆಗೆ ಈ ವಿನ್ಯಾಸಗಳು ನ್ಯೂಟನ್​ನ ನಿಯಮವನ್ನು ಉಲ್ಲಂಘಿಸುತ್ತದೆ. ಸ್ವಯಂ ಕಲಿಕೆಯಿಂದ ಕಲಿತುಕೊಂಡವರು ಹೇಳಿಕೊಟ್ಟ ರೀತಿಯನ್ನು ನಕಲು ಹೊಡೆದು ಅದನ್ನು ಸ್ವಲ್ಪ ಸುಧಾರಣೆ ಮಾಡಿಕೊಂಡಂತೆ ಇದು ಕಾಣುತ್ತದೆ. 1900-1922ರ ಅವಧಿಯಲ್ಲಿ ಕರ್ನಾಟಕದಲ್ಲಿದ್ದ ಸಂಸ್ಕೃತ ಅಧ್ಯಯನಕಾರರು ಯಾವುದೇ ಮಾನದಂಡದಿಂದ ವೈದಿಕರಾಗಿರಲಿಲ್ಲ. ಭಾರತೀಯ ವಿಜ್ಞಾನದ ಬಗ್ಗೆ ಸುಳ್ಳು ಇತಿಹಾಸವನ್ನು ರಚಿಸುವ ಈ ಪ್ರಯತ್ನವು ನಮ್ಮ ಪ್ರಾಚೀನ ಕಾಲದ ಕಾರ್ಯಗಳನ್ನು ವೈಭವೀಕರಿಸುವುದಕ್ಕಾಗಿ ಮಾಡಿದ ಕೆಟ್ಟ ಉದಾಹರಣೆಯಾಗಿದೆ.

ಇನ್ನುಳಿದ ಎರಡು ವಿವಾದಗಳು ಭಿನ್ನವಾದವು. ಇದರಲ್ಲಿ ಒಂದು ಪೈಥಾಗರಸ್  ಪ್ರಮೇಯಕ್ಕೆ ಸಂಬಂಧಿಸಿದ್ದಾಗಿದೆ. ಆದಾಗ್ಯೂ ಇಲ್ಲಿ ಪೈಥಾಗರಸ್ ಪ್ರಮೇಯದ ಬಗ್ಗೆ ಎಲ್ಲಿಯೂ ದಾಖಲೆ ಇಲ್ಲ. ಈಜಿಪ್ಟಿಯನ್ನರು ಮತ್ತು ಬಾಬಿಲೋನಿಯನ್ನರು 2ನೇ ಶತಮಾನದಲ್ಲಿ ಪೈಥಾಗರೀಯ ತ್ರಿವಳಿ ಸಂಖ್ಯೆಗಳನ್ನು ಲೆಕ್ಕಾಚಾರಗಳಲ್ಲ ಬಳಸುತ್ತಿದ್ದರು. ಆದರೆ ಅದನ್ನು ಪ್ರತಿಪಾದಿಸಲು ಸಾಧ್ಯವಾಗಿಲ್ಲ. ಆದರೆ ‘ಬೌಧಾಯನ’ದ ‘ಸುಲ್ವ ಸೂತ್ರ’ದಲ್ಲಿನ (ವೈದಿಕ ಅಗ್ನಿ ಕುಂಡಗಳ ನಿರ್ಮಾಣಕ್ಕೆ ಅಗತ್ಯವಾದ ಸಾಂಪ್ರದಾಯಿಕ ಜ್ಯಾಮಿತಿ ಕುರಿತ ಒಂದು ಕೈಪಿಡಿ) ಇದೇ ಪ್ರಮೇಯವನ್ನು ಹೋಲುವ ಖಚಿತ ಹೇಳಿಕೆಯಲ್ಲಿ ‘ಆಯತವೊಂದರ ಕರ್ಣದ ವರ್ಗವು ಅದರ ಉದ್ದ ಮತ್ತು ಅಗಲದ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಉಲ್ಲೇಖವು ಕ್ರಿ.ಪೂ.5ಮತ್ತು 8ನೇ ಶತಮಾನದ್ದು ಎಂದು ದಾಖಲಾಗಿದೆ. ‘ಬೌಧಾಯನ’ ಉಲ್ಲೇಖಿಸಿದ ಈ ಪುರಾತನ ಜ್ಯಾಮಿತಿ ನಿಯಮವು ‘ಪೈಥಾಗರಸ್’ ಪ್ರತಿಪಾದನೆಗೂ ಮುಂಚೆ ಲಭ್ಯವಿರುವ ಜಗತ್ತಿನ ಪ್ರಾಚೀನ ದಾಖಲೆಗಳಲ್ಲಿ ಸೇರಿತ್ತು.

ಇದನ್ನೂ ಓದಿ: ವಿಜ್ಞಾನಿ ರೊದ್ದಂ ನರಸಿಂಹ ನಿಧನ

ಹಿರಿಯ ವಿಜ್ಞಾನಿ ರೊದ್ದಂ ನರಸಿಂಹ

ಪ್ಲಾಸ್ಟಿಕ್ ಸರ್ಜರಿ

ಮೂರನೇ ವಿವಾದವು ಪ್ಲಾಸ್ಟಿಕ್ ಸರ್ಜರಿಗೆ ಸಂಬಂಧಿಸಿದ್ದಾಗಿದೆ. ಮುರಿದ ಮೂಗು ಹಾಗೂ ಸೀಳಿದ ತುಟಿಗಳನ್ನು ಸರಿಪಡಿಸುವುದರ ಬಗ್ಗೆ ಮೊದಲ ಉಲ್ಲೇಖವು ಕ್ರಿ.ಪೂ.3000ದಿಂದ 2500ರ ನಡುವಿನ ಈಜಿಪ್ಟಿನ ದಾಖಲೆಗಳಲ್ಲಿ ಸಿಕ್ಕಿದೆ. ಕ್ರಿ.ಪೂ.6ನೇ ಶತಮಾನದಲ್ಲಿ ಸುಶ್ರುತನು ಭಾರತೀಯ ಆಯುರ್ವೇದ ಜ್ಞಾನಸಂಪತ್ತನ್ನು ‘ಸುಶ್ರುತ ಸಂಹಿತೆ’ ಎಂಬ ಒಂದು ವಿಶ್ವಕೋಶ ಹಾಗೂ ಮೂಲಪಠ್ಯ ಪುಸ್ತಕದಲ್ಲಿ ಸಂಗ್ರಹಿಸಿದ್ದನು. ಇದರಲ್ಲಿ ‘ಪ್ಲಾಸ್ಟಿಕ್ ಸರ್ಜರಿ’ಯೂ ಸೇರಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆಧುನಿಕ ಪಾಶ್ಚಿಮಾತ್ಯ ಜಗತ್ತಿನಲ್ಲಿ ಇಡೀ ಮೂಗನ್ನು  ಹೊಲಿದು ಸರಿಪಡಿಸಿದ ಮೊದಲ ಶಸ್ತ್ರಚಿಕಿತ್ಸೆಯನ್ನು ಕ್ರಿ.ಶ.1815ರಲ್ಲಿ ಮಾಡಿದ್ದು ಬ್ರಿಟಿಷ್ ವೈದ್ಯ. ಇವರು ಭಾರತದಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದರು. ಈ ವೈದ್ಯರಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಲು ಪ್ರೇರಣೆ ನೀಡಿದ್ದು ಆಂಗ್ಲರ ವಿರುದ್ಧ ನಡೆದ ಯುದ್ಧದಲ್ಲಿ ಮೂಗು ಕತ್ತರಿಸಿಕೊಂಡಿದ್ದ ಮರಾಠಾ ಯೋಧರು.  ಈ ಯೋಧರಿಗೆ  ಪುಣೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದರ ಬಗ್ಗೆ ಬ್ರಿಟನ್​ನ ಪತ್ರಿಕೆಗಳು ವರದಿ  ಮಾಡಿದ್ದವು. ಭಾರತೀಯರ ಮೂಗು (Indian Nose) ಎಂದು ಕರೆಯಲ್ಪಟ್ಟ ಈ ಪಾಸ್ಟಿಕ್ ಸರ್ಜರಿಗೆ ಯಾವುದೇ ಐರೋಪ್ಯ ರಾಷ್ಟ್ರಗಳ ಪೈಪೋಟಿ ಇರಲಿಲ್ಲ. ಹೀಗಾಗಿ ಪ್ಲಾಸ್ಟಿಕ್ ಸರ್ಜರಿ ಕುರಿತ ಭಾರತದ ಹೆಗ್ಗಳಿಕೆಗೆ ಭದ್ರ ಬುನಾದಿಯಿದೆ ಎನ್ನಬಹುದು.

ವೈಜ್ಞಾನಿಕ ಮನೋಭಾವ ಕುರಿತು ಚರ್ಚಿಸುವಾಗ ಭಾರತದ ಶಾಸ್ತ್ರೀಯ ತತ್ತ್ವಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗಳತ್ತ ಗಮನ ಹರಿಸಿದರೆ ಪ್ರಬಲ ವಿಚಾರವಾದ ನಮ್ಮ ನಾಗರಿಕತೆಯ ಆರಂಭ ಕಾಲಘಟ್ಟದ ಉಲ್ಲೇಖಗಳಲ್ಲಿಯೇ ಪತ್ತೆಯಾಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ 20ನೇ ಶತಮಾನದ ವಿಜ್ಞಾನಿ ಜೆ.ಬಿ.ಎಸ್.ಹಾಲ್ಡೇನ್ ಅವರು ಮೆಚ್ಚಿಕೊಂಡಿರುವ ಅತ್ಯಂತ ಪುರಾತನ ಹಾಗೂ ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವ ‘ಸಾಂಖ್ಯ ತತ್ತ್ವಜ್ಞಾನ’. ಇದರಲ್ಲಿ ‘ನಿರೀಶ್ವರ’ ವಾದವು ಅದೆಷ್ಟು ಪ್ರಬಲವಾಗಿ ಮಂಡನೆಯಾಗಿತ್ತೆಂದರೆ ದೇವರ ಇರುವಿಕೆಗೆ ಯಾವುದೇ ದಾಖಲೆಗಳಿಲ್ಲ ಎನ್ನುವಷ್ಟರ ಮಟ್ಟಿಗೆ. ‘ನ-ಅವಸ್ತುನಾ ವಸ್ತು-ಸಿದ್ಧಿಃ’ (ಯಾವುದೇ ವಸ್ತು ಇಲ್ಲದೆ ವಸ್ತುಗಳನ್ನು ಸೃಷ್ಟಿಸಲಾಗುವುದಿಲ್ಲ) ಎಂದು ಅವರು ವಾದಿಸಿದರು. ಸಾಂಖ್ಯರ ಪ್ರಕಾರ, ಪ್ರಕೃತಿಯು ಕೇವಲ ತನ್ನ ಒಳ ಚಲನೋತ್ಕರ್ಷದಿಂದ ಮಾತ್ರ ವಿಕಸನವನ್ನು ಅನುಭವಿಸುತ್ತದೆ. ಆದ್ದರಿಂದ ಸೃಷ್ಟಿವಾದಕ್ಕೆ ಯಾವುದೇ ಅವಕಾಶವಿರುವುದಿಲ್ಲ. ಖ್ಯಾತ ಗುರು ಆದಿಶಂಕರರಂಥವರ ಕಟು ವಿಮರ್ಶೆಗಳ ಹೊರತಾಗಿಯೂ ಈ ಚಿಂತನೆಗಳು ಭಾರತದಲ್ಲಿ ಸಾವಿರಾರು ವರ್ಷಗಳ ಕಾಲ ಉಳಿದವು.

ಸಾಂಖ್ಯ ತತ್ತ್ವಜ್ಞಾನವು ಭಾರತದ ಶಾಸ್ತ್ರೀಯ ವಿಜ್ಞಾನ ಚಿಂತನೆಯ ಮೇಲೆ ಪ್ರಬಲವಾದ ಪರಿಣಾಮ ಬೀರಿತ್ತು. ಆಯುರ್ವೇದದ ಮೂಲಪುರುಷನಾದ ಅಗ್ನಿವೇಷನು ತನ್ನನ್ನು ಸುತ್ತುವರಿದಿದ್ದ ‘ಸಾಂಖ್ಯ ತತ್ತ್ವಜ್ಞಾನಿಗಳ’ ಜತೆಗಿನ ಚರ್ಚೆಯಲ್ಲಿ ಹೇಗೆ ಸಕ್ರಿಯವಾಗಿ ಭಾಗಿಯಾಗುತ್ತಿದ್ದನೆಂಬುದ ಬಗ್ಗೆ ಚರಕ (ಕ್ರಿ.ಶ.1ನೇ ಶತಮಾನ?) ಬರೆದಿದ್ದಾನೆ. ತನ್ನ ಜನಪ್ರಿಯ ಗಣಿತ ಪ್ರತಿಪಾದನೆಯದ ‘ಬೀಜ ಗಣಿತ’ದ ಮುನ್ನುಡಿಯಲ್ಲಿ ಭಾಸ್ಕರನು (12ನೇ ಶ.) ಸಂಖ್ಯೆಗಳನ್ನು ಅಥವಾ ಸಾಂಖ್ಯರನ್ನೋ ಲೇವಡಿ ಮಾಡುವ ಚರಣಗಳನ್ನು ಸೇರಿಸಿದ್ದಾನೆ.

ಸಾರ್ವಜನಿಕ ಸಂವಾದಗಳಲ್ಲಿ ವಿಜ್ಞಾನ ಮತ್ತು ತತ್ವಶಾಸ್ತ್ರ, ಸಂಸ್ಕೃತದಲ್ಲಿರುವ ಸಿದ್ಧಾಂತ ಮತ್ತು ಪುರಾಣಗಳು ಇಂದಿಗೂ ಪರಸ್ಪರ ಬೆರೆಸಲ್ಪಡುತ್ತವೆ. ಆದರೆ ಭಾರತದಲ್ಲಿ ಅವುಗಳ ನಡುವಿನ ಚರ್ಚೆಗೆ ದೀರ್ಘ ಇತಿಹಾಸವಿದೆ. ಅಂಥಾ  ಚರ್ಚೆಗಳಲ್ಲಿ ವಾದಗಳು ಭಿನ್ನವಾಗಿವೆ. ಈ ರೀತಿಯ ವಾದಗಳಲ್ಲಿ ಪುರಾಣಗಳು ಮೋಕ್ಷಕ್ಕಾಗಿ ಮತ್ತು ಸಿದ್ಧಾಂತಗಳು ಲೌಕಿಕ ವ್ಯವಹಾರಗಳಿಗೆ (ವ್ಯವಹಾರ) ಎಂದು ಹೇಳಲಾಗುತ್ತದೆ. ಆದರೆ ಅದರ ಮೂಲವು ಭಿನ್ನವಾಗಿರುತ್ತವೆ. ಪುರಾಣದ ಟೀಕೆ ಮತ್ತು ಸಿದ್ಧಾಂತದ ಲೆಕ್ಕಾಚಾರಗಳನ್ನು ಇಲ್ಲಿ ಪುರಾವೆಗಳಾಗಿ ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: ಕೀರ್ತಿಶನಿಯಿಂದ ದೂರವಿದ್ದ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ

ಶಾಸ್ತ್ರೀಯ ವಿಜ್ಞಾನವನ್ನು ದೂರುವ ಹಾಗಿಲ್ಲ

‘ಗ್ರಹಣಗಳು ಬೆಳಕಿನ ಪಥಕ್ಕೆ ಅಡ್ಡ ಬಂದ ನೆರಳುಗಳು’ ಎಂದು ಪ್ರತಿಪಾದಿಸಿದ ಆರ್ಯಭಟ (ಕ್ರಿ.ಶ.5ನೇ ಶತಮಾನ) ಹಾಗೂ ಪುರಾಣದ ರಾಹು-ಕೇತು ವಾದವನ್ನು ಎತ್ತಿ ಹಿಡಿಯುವುದರ ಜತೆಗೆ ನೆರಳಿನ ಸಿದ್ಧಾಂತವನ್ನೂ ಒಪ್ಪಿಕೊಂಡಿದ್ದ ಪ್ರಕಾಂಡ ಗಣಿತಜ್ಞ ಬ್ರಹ್ಮಗುಪ್ತ (ಕ್ರಿ.ಶ.7ನೇ ಶತಮಾನ) ನಡುವೆ ನಡೆದ ಆಸಕ್ತಿಕರ ಸಂಗತಿಯೊಂದಿದೆ. ಕೇರಳದ ಖಗೋಳಜ್ಞ-ಗಣಿತಜ್ಞ-ತತ್ತ್ವಶಾಸ್ತ್ರಜ್ಞ ನೀಲಕಂಠನು (1444-1545) ತನ್ನ ಕೃತಿಗಳ ಆಧಾರ ‘ಯುಕ್ತಿ’ಯೇ (ಕೌಶಲ್ಯ ಮತ್ತು ತರ್ಕ) ಹೊರತು ಪವಿತ್ರ ಗ್ರಂಥಗಳಲ್ಲ ಎಂದಿದ್ದ. ಇದಾದ ನಂತರ ಫ್ರಾನ್ಸಿಸ್ ಬೇಕನ್ (1561-1626) ದೇವರು ಮತ್ತು ಬೈಬಲ್ ಅನ್ನು ಪದೇಪದೇ ಉಲ್ಲೇಖಿಸಿದ. ಇನ್ನೊಂದು ಶತಮಾನದ ನಂತರ ನ್ಯೂಟನ್ ಗುಟ್ಟಾಗಿ ವಿಜ್ಞಾನಕ್ಕಿಂತಲೂ ದೈವತ್ವವಾದದ ಬಗ್ಗೆಯೇ ಹೆಚ್ಚು ಬರೆದ ಎಂಬುದು ಅಚ್ಚರಿಯ ವಿಷಯ. ಆದ್ದರಿಂದ ಭಾರತದ ಶಾಸ್ತ್ರೀಯ ವಿಜ್ಞಾನವನ್ನು ಹುರುಳಿಲ್ಲದ್ದೆಂದು ದೂರುವ ಹಾಗಿಲ್ಲ.

ಕೊನೆಯಲ್ಲಿ, ಭಾರತದ ಗಣಿತ ವಿಜ್ಞಾನದ ಬಗ್ಗೆ ಕೆಲ ಮಾತುಗಳನ್ನು ಹೇಳುತ್ತಿದ್ದೇನೆ. ಇವು ಅರ್ಹವಾದ ಜಾಗತಿಕ ಅಥವಾ ದೇಶೀಯ ಮಾನ್ಯತೆಯನ್ನು ಇನ್ನೂ ಗಳಿಸಿಲ್ಲ ಎಂಬುದು ನನ್ನ ಅನಿಸಿಕೆ. ಖ್ಯಾತ ಸಂಖ್ಯಾಪದ್ದತಿಯ ಹೊರತಾಗಿ ಅಲ್ಗೋರಿಥಮಿಕ್/ ಕಂಪ್ಯೂಟೇಷನಲ್ ಕ್ರಾಂತಿಕಾರಿ ಗಣಿತ ಪದ್ಧತಿಗಳು ಯೂರೋಪಿನಲ್ಲಿ (ಪುನಃ) ಆವಿಷ್ಕಾರಗೊಳ್ಳುವ ಮುಂಚೆ ಭಾರತದಲ್ಲಿ ಚಾಲ್ತಿಯಲ್ಲಿದ್ದವು. ಅದೇ ರೀತಿ ಬೀಜಗಣಿತದ ಬಹುಭಾಗ, ಆರ್ಯಭಟ ಹಾಗೂ ಬ್ರಹ್ಮಗುಪ್ತರ ರೇಖೀಯ ಹಾಗೂ ವರ್ಗೀಯ ಅನಿರ್ಧರಣೀಯ ಸಮೀಕರಣಗಳು (linearand quadratic indeterminate equations); ದ್ವಿಪದಿ ಪ್ರಮೇಯ (binomial theorem ), ಕಾಂಬಿನಟೋರಿಯಲ್ ಸೂತ್ರ ಮತ್ತು ಪಾಸ್ಕೆಲ್ ನ ತ್ರಿಭುಜ (3ನೇ ಶತಮಾನದ ಪಿಂಗಳ), ಸೆಕೆಂಡ್ ಆರ್ಡರ್ ಇಂಟರ್‌ಪೊಲೇಶನ್ ಫಾರ್ಮುಲಾ ಹಾಗೂ ನ್ಯೂಟನ್-ರಾಫ್ಸನ್ ಪದ್ಧತಿ (ಬ್ರಹ್ಮಗುಪ್ತ), ಫಿಬೊನಾಚಿ ಸಂಖ್ಯೆಗಳು (ವಿರಹಾಂಕ ಕ್ರಿ.ಶ.7ನೇ ಶತಮಾನ, ಹೇಮಚಂದ್ರ ಕ್ರಿ.ಶ.1150); ಅವಕಲನಗಳ (differentials ) ಮೂಲ, ಮ್ಯಾಕ್ಸಿಮಾ ಫಂಕ್ಷನ್‌ಗಳು, ಮೀನ್ ವ್ಯಾಲ್ಯೂ ಥಿಯರೆಮ್ ಇತ್ಯಾದಿ. (ಭಾಸ್ಕರ 12ನೇ ಶತಮಾನ, ಮುಂಜಾಲ ಕ್ರಿ.ಶ.800), ಅನಂತ ಸರಣಿಗಳು (infinite series ), ನಂತರದ ದಿನಗಳಲ್ಲಿ ಪ್ರಸಿದ್ಧವಾದ ಕಲನಶಾಸ್ತ್ರದ (calculus ) ಪ್ರಮುಖ ಭಾಗಗಳು ಹಾಗೂ ವಿಶ್ಲೇಷಣೆ (14ನೇ ಶತಮಾನದ ಮಾಧವ)- ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವೆಲ್ಲಾ ಕೊಡುಗೆಗಳು ಕೇವಲ ‘ಅಲ್ಪ ಮಟ್ಟದ’ ಗಣಿತ ಆಗಿರಲಿಲ್ಲ. ಜಗತ್ತಿನ ಮೇಲೆ ಇವುಗಳ ಒಟ್ಟಾರೆ ಪರಿಣಾಮವನ್ನು ಹರ್ಮನ್ ವೇಯ್ಲ್ 1928ರಲ್ಲಿ ರಚಿಸಿದ ತನ್ನ ಗ್ರಂಥ ‘The Theory of Groups and Quantum Mechanics’ದ ಮುನ್ನುಡಿಯಲ್ಲಿ ಬರೆದಿದ್ದು ಹೀಗೆ-

‘ಕಳೆದ ಶತಮಾನಗಳ ಪಾಶ್ಚಿಮಾತ್ಯ ಗಣಿತವು ಗ್ರೀಕರ ದೃಷ್ಟಿಕೋನದಿಂದ ಹೊರಬಂದಿದೆ. ಇದು ಭಾರತೀಯ ಮೂಲವನ್ನು ಅನುಸರಿಸಿದೆ ಎನ್ನಲಾಗಿದ್ದು, ಅರಬ್​ರಿಂದ ಮತ್ತಷ್ಟು ಸೇರ್ಪಡೆಯಾಗಿ ಪ್ರಸಾರವಾಯಿತು. ಸಂಖ್ಯೆಯ ಪರಿಕಲ್ಪನೆಯು ಜ್ಯಾಮಿತಿಯ ಪರಿಕಲ್ಪನೆಗಿಂತಲೂ ಮೊದಲೇ ಬಿಂಬಿತವಾಗಿರಬೇಕುಎಂಬುದೇ ಇಲ್ಲಿನ ಪರಿಕಲ್ಪನೆ’.

ಅರಬ್ಬರ ಮೂಲಕ ಭಾರತೀಯ ಗಣಿತ ಕಲ್ಪನೆಗಳು ನಿಧಾನವಾಗಿ, ಸದ್ದಿಲ್ಲದೆ ಯೂರೋಪಿನಲ್ಲಿ ಹಬ್ಬಿ ನಾಲ್ಕು ಶತಮಾನಗಳ ಹಿಂದಿನ ಗಣಿತಕ್ಕೆ ಹೊಸ ಭಾಷ್ಯ ಬರೆಯಿತು. ಈ ರೀತಿಯ ಪರಂಪರೆಯನ್ನು ಹೊಂದಿರುವ ನಾವು ನಮ್ಮ ಪೂರ್ವಕಾಲದ ಬಗ್ಗೆ ಅಸಂಭವ ಕತೆಗಳನ್ನೇನೂ ಶೋಧಿಸಬೇಕಿಲ್ಲ. ಪ್ರಸ್ತುತ ಕಾಲದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಷ್ಟೆ.

ವ್ಯತ್ಯಾಸ ಗುರುತಿಸುವುದು ಮತ್ತೊಮ್ಮೆ ಕಲಿಯಬೇಕಿದೆ

ವಿಜ್ಞಾನ ಮತ್ತು ಪುರಾಣ, ಸಾಕ್ಷ್ಯಸಹಿತವಾದ ತರ್ಕ ಹಾಗೂ ವೈಚಾರಿಕತೆ ಮತ್ತು ಮೌಢ್ಯಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವುದನ್ನು ನಾವು ಮತ್ತೊಮ್ಮೆ ಕಲಿಯಬೇಕಾಗಿದೆ. ಇವೆಲ್ಲವೂ ಸಾಧ್ಯವಾಗಬೇಕಾದರೆ ಎಲ್ಲರೊಂದಿಗೆ ಬೆರೆತು ಕೆಲಸ ಮಾಡಬಲ್ಲ ಜವಾಬ್ದಾರಿಯನ್ನು ವಿಜ್ಞಾನಿಗಳು ಸ್ವೀಕರಿಸಬೇಕಾಗುತ್ತದೆ. ಪೂರ್ವಿಕರ ಸಂವೇದನಾಶೀಲ ಜ್ಞಾನವನ್ನು ಅರಿಯುವ ಹಸಿವು ನಮ್ಮ ಯುವಜನಾಂಗಕ್ಕಿದೆ. ಆದರೆ ವಿಜ್ಞಾನದ ಇತಿಹಾಸವನ್ನೇ ಪಠ್ಯದಲ್ಲಿ ಸೇರಿಸದಿರುವ ಶೈಕ್ಷಣಿಕ ವ್ಯವಸ್ಥೆಯಿಂದಾಗಿ ಅವರಿಗೆ ಪಾರಂಪರಿಕ ಜ್ಞಾನವನ್ನು ಅರಿಯುವ ಅವಕಾಶ ಕೈ ತಪ್ಪಿದೆ. ಅದೇ ವೇಳೆ ಭಾರತೀಯ ವಿಜ್ಞಾನ ಕಲ್ಪನೆಗಳ ಇತಿಹಾಸದ ಬಗ್ಗೆ ಆಕರ್ಷಕವೂ ವಿಶ್ವಾಸಾರ್ಹವೂ ಆದ ದಾಖಲೆಗಳ ಕೊರತೆ ನಮ್ಮಲ್ಲಿದೆ. ನಮ್ಮ ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು, ವಸ್ತು ಸಂಗ್ರಹಾಲಯಗಳು ಹಾಗೂ ಇತರ ಸಂಬಂಧಿತ ಸಂಸ್ಥೆಗಳು ಒಂದು ರಾಷ್ಟ್ರೀಯ ಕ್ರಿಯಾಯೋಜನೆಯನ್ನು ಇದಕ್ಕಾಗಿ ರೂಪಿಸಬೇಕಾಗಿದೆ. ಇಲ್ಲದಿದ್ದರೆ ನಮ್ಮ ಅನನ್ಯ ಭಾರತೀಯ ಪರಂಪರೆಯ ಬಗ್ಗೆಯೇ ಕುರುಡುತನ ಪ್ರದರ್ಶಿಸಿದಂತಾಗುತ್ತದೆ.

ಸಾಮಾನ್ಯ ಜನರು ವಿಮಾನ ಹತ್ತಬೇಕೆಂಬ ಕನಸಿಗಾಗಿ ಶ್ರಮಿಸಿದ್ದ ಏರೊಸ್ಪೇಸ್ ವಿಜ್ಞಾನಿ ರೊದ್ದಂ ನರಸಿಂಹ ನಿಧನ

ಕೀರ್ತಿಶನಿಯಿಂದ ದೂರವಿದ್ದ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ

Published On - 6:11 pm, Tue, 15 December 20