ಕೋಡಿಹಳ್ಳಿ ಚಂದ್ರಶೇಖರ ಸಂದರ್ಶನ | ನಾನು ಸೂಟ್ಕೇಸ್ ಗಿರಾಕಿ ಅಲ್ಲ, ಹಾಗಾಗಿ ಪ್ರಭುತ್ವ ಹೆದರುತ್ತೆ
ಚಳವಳಿ ಮಾಡುವ ಎಲ್ಲರೂ ಒಂದಲ್ಲ ಒಂದು ಬಾರಿ ತೀವ್ರ ಟೀಕೆಗೆ ಒಳಗಾಗುವುದು ಸಾಮಾನ್ಯ. ಕರ್ನಾಟಕ ರೈತ ಸಂಘದ ನೇತಾರ, ಕೋಡಿಹಳ್ಳಿ ಚಂದ್ರಶೇಖರ ಅವರು ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದು ತೀವ್ರ ಟೀಕೆಗೆ ಒಳಗಾಯಿತು. ಟಿವಿ9 ಡಿಜಿಟಲ್ಗೆ ನೀಡಿದ ಸಂದರ್ಶನದಲ್ಲಿ ಈ ಟೀಕೆಯ ಕುರಿತೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಕೋಡಿಹಳ್ಳಿ ಚಂದ್ರಶೇಖರ ಮುಖಾಮುಖಿಯಾದರು.
ಕೋಡಿಹಳ್ಳಿ ಚಂದ್ರಶೇಖರ ಇತ್ತೀಚೆಗೆ ಬಹಳ ಸುದ್ದಿ ಮಾಡಿದ ವ್ಯಕ್ತಿ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಗೆ ಬೆಂಬಲ ನೀಡಿ ಬೆಂಗಳೂರಿನಲ್ಲೂ ರೈತರ ಚಳುವಳಿ ಹಮ್ಮಿಕೊಂಡ ಮುಖಂಡರಲ್ಲಿ ಕೋಡಿಹಳ್ಳಿ ಪ್ರಮುಖರು. ಆಮೇಲೆ ಇದ್ದಕ್ಕಿದ್ದಂತೆ ರೈತ ಚಳವಳಿ ಬಿಟ್ಟು ಅವರು ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿಕೊಂಡರು. ಅಷ್ಟೇ ಅಲ್ಲ, ಸಾರಿಗೆ ನೌಕರರಿಗೆ ನ್ಯಾಯ ಕೊಡಿಸಿದೆ ಎಂದು ಎದೆ ತಟ್ಟಿಕೊಂಡರು. ಇದೇ ಕಾರಣಕ್ಕಾಗಿ ಆಡಳಿತ ಪಕ್ಷ ಬಿಜೆಪಿ ಮತ್ತು ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾದರು. ಇದು ಯಾವುದರ ಬಗ್ಗೆಯೂ ಕೋಡಿಹಳ್ಳಿ ತಲೆಕೆಡಿಕೊಂಡಂತೆ ಕಾಣುತ್ತಿಲ್ಲ. ‘ಟಿವಿ9 ಡಿಜಿಟಲ್’ಗೆ ನೀಡಿದ ಸಂದರ್ಶನದಲ್ಲಿ ಸಾರ್ವಜನಿಕರು ಎತ್ತಿದ ಪ್ರಶ್ನೆಗಳನ್ನೇ ಕೇಳಲಾಯಿತು. ಮೂಲಭೂತವಾಗಿ ಅವರು ಹೇಳೋದು ಒಂದೇ: ‘ನನ್ನ ನೈತಿಕತೆ ಸರಿ ಇರೋದರಿಂದ ನಾನು ಯಾವ ಟೀಕೆ ಬಗ್ಗೆಯೂ ತಲೆಕೆಡಿಸಿಕೊಳ್ಳೋಲ್ಲ’. ಇದು ಸರಿಯೋ ಅಥವಾ ತಪ್ಪೋ ಒದುಗರೇ ನಿರ್ಧರಿಸಬೇಕು.
ಅವರ ಸಂದರ್ಶನದ ಅಯ್ದ ಭಾಗ ಇಲ್ಲಿದೆ.
ಪ್ರ: ರೈತ ಮುಖಂಡರಾಗಿ ತಾವು, ಸಾರಿಗೆ ನೌಕರರ ಮುಷ್ಕರಕ್ಕೆ ಧುಮುಕಿದಿರಿ. ನಿಮ್ಮ ವಿರುದ್ಧ ಅಡಳಿತ ಪಕ್ಷ ಮತ್ತು ಸಾರ್ವಜನಿಕರು ತುಂಬಾ ಟೀಕೆ ಮಾಡಿದರು. ಇದನ್ನು ಕೇಳಿದಾಗ ಏನನ್ನಿಸುತ್ತೆ?
ಉ: ಪ್ರಭುತ್ವದ ಪರ ಒಂದಿಷ್ಟು ಜನ ಯಾವಾಗಲೂ ಇರುತ್ತಾರೆ. ಯಾವಾಗ ನಾವು ಪ್ರಭುತ್ವದ ವಿರುದ್ಧ ದನಿ ಎತ್ತಿದಾಗ ನಮ್ಮನ್ನು ಬಯ್ಯೋದು, ಟೀಕಿಸುವುದು ಇದ್ದಿದ್ದೆ. ಈ ಬಾರಿ ಅದು ಎದ್ದು ಕಂಡಿದೆ. ಇದಕ್ಕೆ ನಾನು ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ.
ಪ್ರ: ಆದರೆ, ಈ ಬಾರಿ ಟೀಕೆ ಬರೀ ರಾಜಕಾರಣಿಗಳಿಂದ ಮಾತ್ರ ಬಂದಿರಲಿಲ್ಲ. ಸಾರ್ವಜನಿಕರು ಸಾಮಾಜಿಕ ಜಾಲ ತಾಣದ ಮೂಲಕ ತಮ್ಮ ಸಿಟ್ಟನ್ನು, ಟೀಕೆಯನ್ನು ಹರಿಬಿಟ್ಟಿದ್ದನ್ನು ತಾವು ಗಮನಿಸಿರಬಹುದು. ಅದು ತೀವ್ರವಾಗಿತ್ತು..
ಉ: ನಾನು ಎಲ್ಲರಿಗೂ ಉತ್ತರ ಕೊಡುತ್ತ ಇರೋಕ್ಕಾಗಲ್ಲ. ನೀವು ಏನೇ ಮಾಡಿದರೂ, ಟೀಕೆ ಮಾಡುವವರು ಇದ್ದೇ ಇರುತ್ತಾರೆ. ಅದೇನೇ ಇರಲಿ. ನಿಮಗೊಂದು ಮಾತು ಹೇಳ್ತೀನಿ. ಎಲ್ಲೀತನಕ ನನ್ನ ನೈತಿಕತೆ ಬಗ್ಗೆ ಯಾವ ಸಂದೇಹ ಅಥವಾ ಪ್ರಶ್ನೆಗಳು ನನ್ನೊಳಗೆ ಇರುವುದಿಲ್ಲವೋ ಅಲ್ಲೀವರೆಗೆ ನಾನು ಈ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ.
ಪ್ರ: ತಾವು ವಿರೋಧ ಪಕ್ಷದ ಸೂಟ್ಕೇಸಿಗೆ ಮಾರುಹೋಗಿ ಸಾರಿಗೆ ನೌಕರರ ಮುಷ್ಕರಕ್ಕೆ ಇಳಿದಿರಿ..
ಉ: ಹಹಹ..ಒಂದು ಮಾತನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ; ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಅತ್ಯಂತ ಹೆಚ್ಚಿನ ಹೋರಾಟ ಮಾಡಿದ್ದೇ ನಾನು. ಆಗ ಇದೇ ಯಡಿಯೂರಪ್ಪ ಬಂದು ನೈತಿಕ ಬೆಂಬಲ ಸೂಚಿಸಿದ್ದರು. ನಿಮ್ಮ ಮಾತಿನ ಪ್ರಕಾರವೇ ಹೋದರೆ, ನಾನು ಯಡಿಯೂರಪ್ಪನವರಿಂದಲೂ ಸೂಟ್ಕೇಸ್ ತೆಗೆದುಕೊಂಡೆ ಅಂತಾನಾ? ನನ್ನ ಕೈ ಮತ್ತು ಬಾಯಿ ಸ್ವಚ್ಛ ಇರುವಾಗ ನಾನು ಇಂಥ ಟೀಕೆಗೆ ಹೆದರೋಲ್ಲ. ಈ ರೀತಿ ಆರೋಪ ಯಾಕೆ ಬಂದಿರಬಹುದು ಎಂದರೆ, ಕೋಡಿಹಳ್ಳಿಯನ್ನು ಹೊರಗೆ ಇಟ್ಟು, ಮುಷ್ಕರ ನಿರತ ಸಾರಿಗೆ ನೌಕರರ ಜೊತೆ ಡೀಲ್ ಮಾಡಲು ಸರಕಾರದ ಪ್ರಯತ್ನ ನಡೆದಿತ್ತು. ಆದರೆ ನಾವ್ಯಾರು ಇದಕ್ಕೆ ಬಲಿಯಾಗಲಿಲ್ಲ. ಆ ಕಾರಣಕ್ಕಾಗಿ, ಇಂಥ ಆರೋಪ ಮಾಡುತ್ತಿದ್ದಾರೆ. ಇನ್ನೊಂದು ವಿಚಾರವನ್ನು ಇಲ್ಲಿ ಹೇಳಿಬಿಡುತ್ತೇನೆ. ನಾನು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಂಡಿದ್ದೇನೆ. ನನ್ನಲ್ಲಿ ಇರೋದು ಒಂದೇ: ನೈತಿಕ ಅಸ್ತ್ರ. ಹಾಗಾಗಿ ಈ ಸರಕಾರ ಹೆದರೋದು.
ಇದನ್ನೂ ಓದಿ: ಕೋ. ಚಂದ್ರಶೇಖರ ಸ್ವಯಂ ನಾಯಕತ್ವ? ಮುಷ್ಕರದ ಬಗ್ಗೆ ಮಾತುಕತೆ ನಡೆಸುವುದು ಯಾರ ಜೊತೆ? ದಾರಿ ಕಾಣದೇ ಸರಕಾರ ಕಂಗಾಲು
ಪ್ರ: ಹಿಂದಿನ ಪ್ರಶ್ನೆ ಕೇಳೋಕ್ಕೆ ಒಂದು ಉದ್ದೇಶ ಇದೆ. ಹಿಂದೆಂದೂ ಸಾರಿಗೆ ಮುಷ್ಕರಕ್ಕೆ ವಿರೋಧ ಪಕ್ಷಗಳು ಈ ರೀತಿ ನೇರವಾಗಿ ಬೆಂಬಲ ನೀಡಿರಲಿಲ್ಲ. ನೀವು ಈ ಮುಷ್ಕರ ಮಾಡುವಾಗ ವಿರೋಧ ಪಕ್ಷದ ನಾಯಕರು ಮತ್ತು ಆ ಪಕ್ಷದ ಅಧ್ಯಕ್ಷರು ಮುಷ್ಕರದಲ್ಲಿ ಭಾಗಿಯಾದರು. ಈ ಸಾಂದರ್ಭಿಕ ಸಾಕ್ಷ್ಯಗಳನ್ನು (circumstantial evidence) ನೋಡಿದ್ರೆ ನಿಮ್ಮ ಮೇಲೆ ಸಂಶಯ ಬರೋದು ಸಹಜ ಅಲ್ಲವೇ?
ಉ: ಇಲ್ಲ. ನೀವು ಸೂಕ್ಷ್ಮವಾಗಿ ನೋಡಿ. ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವಂಥ ಮುಷ್ಕರ ಅಥವಾ ಚಳವಳಿಯಲ್ಲಿ ವಿರೋಧ ಪಕ್ಷದ ನಾಯಕರು ಭಾಗವಹಿಸೋದು ಸಾಮಾನ್ಯ. ಅಷ್ಟೇ ಅಲ್ಲ, ಅವರು ಅದರಿಂದ ರಾಜಕೀಯ ಲಾಭ (encash) ಪಡೆಯೋಕೆ ನೋಡ್ತಾರೆ. ಇದು ಡೆಮಾಕ್ರಸಿನಲ್ಲಿ ಸಾಮಾನ್ಯ.
ಪ್ರ: ನೀವು ರಾಜ್ಯದ ಯಾವ ಸಾರಿಗೆ ಸಂಸ್ಥೆಯ ನೌಕರ ಅಲ್ಲ. ಇದ್ದಕ್ಕಿದ್ದಂತೆ ಹೋಗಿ ಆ ಮುಷ್ಕರದ ನೇತೃತ್ವ ಹಿಡಿಯೋದು ಕಾನೂನಿನ ಪ್ರಕಾರ ಅದೆಷ್ಟು ಸರಿ? ನಾಳೆ ಇನ್ನ್ಯಾರೋ ಕರೀತಾರೆ. ಆಗ ಅಲ್ಲಿಗೂ ಹೋಗ್ತೀರಾ?
ಉ: ನಂಜುಂಡಸ್ವಾಮಿ ಅವರು ಕಾನೂನು ಪ್ರೊಫಸರ್. ಅವರು ರೈತ ಸಂಘ ಕಟ್ಟಿದವರು. ಅವರು ರೈತರಾಗಿದ್ದರಾ? ಅನಂತ ಸುಬ್ಬರಾವ್ ಯಾವ ಸಾರಿಗೆ ಸಂಸ್ಥೆ ನೌಕರರು? ಈ ಅರೋಪ ಸರಿಯಲ್ಲ. ಒಂದು ಚಳವಳಿಯನ್ನು ಅಥವಾ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಪ್ರಾಮಾಣಿಕವಾಗಿ ಅದನ್ನು ಗುರಿ ಮುಟ್ಟಿಸೋದು ಮುಖ್ಯವಾಗುತ್ತೇ ವಿನಃ ಮತ್ಯಾವ ವಿಚಾರ (ಇಶ್ಯೂ) ಬರೋಲ್ಲ. ನಾನು ಸಾರಿಗೆ ನೌಕರರ ಮುಷ್ಕರದ ವಿಚಾರದಲ್ಲಿ ಮಾಡಿದ್ದು ಕೂಡ ಅದೇ. ನನಗೆ ಖುಷಿ ಇದೆ: ತೆಗೆದುಕೊಂಡ ಹೋರಾಟವನ್ನು ಗುರಿ ತಲುಪಿಸಿದ ಸಾರ್ಥಕತೆ ಇದೆ.
ಪ್ರ: ಈ ಸಾರಿಗೆ ಮುಷ್ಕರ ನಡೆದಿದ್ದೇ ಕೋಡಿಹಳ್ಳಿ ಅವರ ಅಹಂನಿಂದ (ego) ಎಂಬ ಆರೋಪ ಇದೆ. ಇದೂ ಕೂಡ ಮೇಲ್ನೋಟಕ್ಕೆ ಸತ್ಯವೆಂದೇ ತೋರುತ್ತದೆ. ಉದಾಹರಣೆಗೆ, ರವಿವಾರ ಸಂಜೆ ಸಾರಿಗೆ ಮಂತ್ರಿಗಳ ಕೊಠಡಿಯಲ್ಲಿ ಸಭೆ ನಡೆಯಿತು. ಆಗ, ನೌಕರರ ಸಂಘದ ಪ್ರತಿನಿಧಿಗಳು ಮಾತುಕತೆ ಫಲಪ್ರದ ಅಂತ ಒಪ್ಪಿಕೊಂಡರು. ತಿರುಗಿ ಫ್ರೀಡಂ ಪಾರ್ಕ್ಗೆ ಹೋದಾಗ, ಅವರ ಧ್ವನಿ ಬದಲಾಯಿತು. ಯಾಕೆಂದ್ರೆ, ನೀವು ನಿಮ್ಮ ನೇತೃತ್ವದಲ್ಲಿ ಮಾತುಕತೆ ನಡೆದಿಲ್ಲ ಎಂದು ಅವರು ಒಪ್ಪಿಕೊಂಡು ಬಂದದ್ದಕ್ಕೆ ತಡೆ ನೀಡಿದ್ರಿ. ಅಲ್ಲವೇ?
ಉ: ಇಲ್ಲ. ಇದು ತಪ್ಪು ಅಭಿಪ್ರಾಯ. ಅವರು ಆ ಸಭೆಯಲ್ಲಿ ತಮ್ಮ ಒಪ್ಪಿಗೆ ಕೊಟ್ಟಿರಲಿಲ್ಲ. ‘ನಾವು ಹಿಂದಕ್ಕೆ ಹೋಗಿ ಮಾತುಕತೆ ಮಾಡುತ್ತೇವೆ. ಆಮೇಲೆ ನಮ್ಮ ನಿರ್ಧಾರ ತಿಳಿಸುತ್ತೇವೆ’ ಎಂದು ಸಭೆಯಲ್ಲಿ ಹೇಳಿ ಬಂದಿದ್ದರು. ನಾವು ಚರ್ಚೆ ಮಾಡಿ ಮುಷ್ಕರ ಮುಂದುವರಿಸಬೇಕು ಅಂತ ಆ ದಿನ ಒಟ್ಟಾಗಿ ನಿರ್ಧಾರ ತೆಗದುಕೊಂಡ್ವಿ.
ಇದನ್ನೂ ಓದಿ: ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ
ಉ: ಮತ್ತೆ ನಂಜುಂಡಸ್ವಾಮಿ ಅವರ ಉದಾಹರಣೆ ಕೊಡ್ತೀನಿ. ಅವರೇನು ರೈತರಾಗಿರಲಿಲ್ಲ. ಆದರೆ ತುಂಬಾ ಯಶಸ್ವಿಯಾಗಿ ಈ ಚಳವಳಿ ನಡೆಸಿದರು. ಹಾಗೆ, ಹೊಲದಲ್ಲಿ ಇರೋನು ರಾಜ್ಯ ಸುತ್ತೋಕೆ ಆಗಲ್ಲ. ನಾನು ಹೊಲದಲ್ಲಿ ಕೆಲಸ ಮಾಡ್ತಾ ಇದ್ರೆ ಈ ಕೆಲಸ ಮಾಡೋಕ್ಕೆ ಆಗಲ್ಲ. ಹಾಗಾಗಿ ನಾನು ಅವರ ಪರವಾಗಿ ಇಲ್ಲಿ ಕೆಲಸ ಮಾಡ್ತೀನಿ. ತಪ್ಪೇನು?
ಪ್ರ: ಕಳೆದ ವಾರದ ಪ್ರಾರಂಭದಲ್ಲಿ ರೈತ ಚಳುವಳಿ ಪ್ರಾರಂಭ ಮಾಡಿದಾಗ ನೀವು ಹೇಳಿದ್ದೇನು? ದೆಹಲಿಯಲ್ಲಿ ನಡೆಯುವ ಚಳುವಳಿಗೆ ಬೆಂಬಲ ಸೂಚಿಸಿ ತೀವ್ರವಾಗಿ ಇಲ್ಲೀ ಚಳವಳಿ ಮಾಡ್ತೀವಿ ಅಂತ. ಮೂರೇ ದಿನಕ್ಕೆ ನೀವು ರೈತರ ವಿಚಾರವನ್ನೇ ಬಿಟ್ರಿ. ಇದು ಹೇಗೆ ಸರಿ?
ಉ: ಬೆಳೆ ಕಟಾವಿನ ಕಾಲ ಈಗ. ರೈತರು ಈಗ ಬರೋಕ್ಕೆ ಆಗಲ್ಲ. ಗ್ರಾಮ ಪಂಚಾಯತಿ ಚುನಾವಣೆ ನಡೀತಿದೆ. ಹಾಗಾಗಿ ಅವರೆಲ್ಲ ಸ್ವಲ್ಪ ಬ್ಯುಸಿ. ನಾವು ರೈತರ ಚಳವಳಿಯನ್ನು ನಿಲ್ಲಿಸಿಲ್ಲ, ಮುಂದುವರಿಸ್ತೀವಿ.
ಪ್ರ: ಕೆಲವು ರೈತ ಮುಖಂಡರು ನಿಮ್ಮನ್ನು ತೀವ್ರವಾಗಿ ಟೀಕಿಸಿದ್ದಾರೆ. ಉಳಿದವರೆಲ್ಲ ಸೇರಿ ನಿಮ್ಮನ್ನ ಹೊರಗಿಟ್ಟು ರೈತ ಚಳವಳಿ ಮುಂದುವರಿಸಿದರೆ ಏನು ಮಾಡುತ್ತೀರಾ?
ಉ: ಇದೇನು ಹೊಸದಲ್ಲ. ಈ ಹಿಂದೆ ಅದೆಷ್ಟೋ ಬಾರಿ ರೈತ ಸಂಘಟನೆಗಳ ನೇತೃತ್ವ ಬದಲಾವಣೆ ಆಗಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸಹಜ. ಎಲ್ಲೀತನಕ ನನ್ನ ಕೈ ಬಾಯಿ ಚೊಕ್ಕವಾಗಿರತ್ತೋ, ಅಲ್ಲೀತನಕ ನಾನು ಹೆದರಲ್ಲ. ಹೋರಾಟ ಮುಂದುವರಿಸಿಕೊಂಡು ಹೋಗ್ತಾ ಇರ್ತೀನಿ.
ಕೋ. ಚಂದ್ರಶೇಖರ ಸ್ವಯಂ ನಾಯಕತ್ವ? ಮುಷ್ಕರದ ಬಗ್ಗೆ ಮಾತುಕತೆ ನಡೆಸುವುದು ಯಾರ ಜೊತೆ? ದಾರಿ ಕಾಣದೇ ಸರಕಾರ ಕಂಗಾಲು
Published On - 4:01 pm, Wed, 16 December 20