Tv9 Facebook Live | ಹೊಸ ರೂಪದಲ್ಲಿ ‘ವಿದ್ಯಾಗಮ’: ಒಪ್ಪಿಕೊಳ್ತಾರಾ ಪೋಷಕರು?
ಈ ಹಿಂದೆ ವಿದ್ಯಾಗಮ ಯೋಜನೆ ಹೇಗೆ ರೂಪುಗೊಂಡಿತ್ತು? ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಸಿದ್ಧರಿದ್ದಾರಾ? ವಿದ್ಯಾಗಮ ಯೋಜನೆಯಲ್ಲಿ ಏನೆಲ್ಲಾ ಬದಲಾವಣೆಗಳಿವೆ ಪ್ರಶ್ನೆಗಳನ್ನು ಟಿವಿ9 ಡಿಜಿಟಲ್ ಆಯೋಜಿಸಿದ್ದ ಫೇಸ್ಬುಕ್ ಸಂವಾದದಲ್ಲಿ ಚರ್ಚಿಸಲಾಯಿತು.
ಬೆಂಗಳೂರು: ವಿದ್ಯಾಗಮ ಯೋಜನೆಯನ್ನು ಮತ್ತೆ ಆರಂಭಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ. ಈ ಹಿಂದೆ ವಿದ್ಯಾಗಮ ಯೋಜನೆ ಹೇಗೆ ರೂಪುಗೊಂಡಿತ್ತು? ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಸಿದ್ಧರಿದ್ದಾರಾ? ವಿದ್ಯಾಗಮ ಯೋಜನೆಯಲ್ಲಿ ಏನೆಲ್ಲಾ ಬದಲಾವಣೆಗಳಿವೆ ಪ್ರಶ್ನೆಗಳನ್ನು ಟಿವಿ9 ಡಿಜಿಟಲ್ ಆಯೋಜಿಸಿದ್ದ ಫೇಸ್ಬುಕ್ ಸಂವಾದದಲ್ಲಿ ಚರ್ಚಿಸಲಾಯಿತು.
ಟಿವಿ9 ಆ್ಯಂಕರ್ ಆನಂದ್ ಬುರ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಖಾಸಗಿ ಶಾಲೆ ಮಾಲೀಕ ಸುಪ್ರೀತ್, ಶಿಕ್ಷಣ ತಜ್ಞ ಶ್ರೀಹರಿ ಮತ್ತು ಪೋಷಕರಾದ ಐರಿನ್ ಭಾಗವಹಿಸಿದ್ದರು.
ಸಂವಾದದಲ್ಲಿ ಮೊದಲು ಮಾತನಾಡಿದ ಖಾಸಗಿ ಶಾಲೆ ಮಾಲೀಕ ಸುಪ್ರೀತ್, ಶೈಕ್ಷಣಿಕ ವ್ಯವಸ್ಥೆಯಿಂದ ಮಕ್ಕಳು ವಂಚಿತರಾಗಬಾರದೆಂದು ವಿದ್ಯಾಗಮ ಯೋಜನೆ ರೂಪುಗೊಂಡಿದೆ. ಖಾಸಗಿ ಶಾಲೆಗಳಿಗೆ ವಿದ್ಯಾಗಮ ಇಲ್ಲ, ಸರ್ಕಾರಿ ಶಾಲೆಗಳಲ್ಲಿ ಮಾತ್ರ ಆರಂಭ ಮಾಡುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಆದರೆ, ಖಾಸಗಿ ಶಾಲೆಗಳಲ್ಲಿಯೂ ವಿದ್ಯಾಗಮವನ್ನು ಜಾರಿಗೊಳಿಸಲು ಸರ್ಕಾರ ಹೇಳಿದೆ. ಸರ್ಕಾರ ಜವಾಬ್ದಾರಿಯುತವಾಗಿ ಈ ಬಾರಿ ಅನುಷ್ಠಾನಗೊಳಿಸುತ್ತದೆ ಎಂಬ ನಂಬಿಕೆ ಇದೆ’ ಎಂದರು.
ಚರ್ಚೆಯನ್ನು ಮುಂದುವರಿಸಿದ ಶಿಕ್ಷಣ ತಜ್ಞ ಶ್ರೀಹರಿ, ‘ಜೀವ ಇದ್ದರೆ ಮಾತ್ರ ಜೀವನ. ಮೂರ್ನಾಲ್ಕು ತಿಂಗಳು ತಡವಾದರೂ ಪರವಾಗಿಲ್ಲ, ಮಕ್ಕಳ ಜೀವ ನಮಗೆ ಮುಖ್ಯ. ಶೇ 80ರಷ್ಟು ಶೈಕ್ಷಣಿಕ ವರ್ಷ ಈಗಾಗಲೇ ಮುಗಿದು ಹೋಗಿದೆ. ಶಾಲೆ ಪ್ರಾರಂಭವಾದರೆ, ಮಕ್ಕಳೆಲ್ಲ ಒಂದು ಗೂಡುವುದು ಸಹಜ. ಬಸ್ಸಿನಲ್ಲಿ ಅಥವಾ ಆಟೊಗಳಲ್ಲಿ ಓಡಾಡುವ ಮಕ್ಕಳು ಗುಂಪು ಕಟ್ಟುತ್ತಾರೆ. ಶಾಲೆಯಲ್ಲಿ ಆಟವಾಡುತ್ತಾರೆ ಇದರಿಂದ ಕೊರೊನಾ ಹೆಚ್ಚು ಹರಡುತ್ತದೆ. ಒಂದು ಮಗುವಿಕೆ ಕೊರೊನಾ ಸೋಂಕು ತಗಲಿದರೆ ಸಾಕು, ಗುಂಪಿನಲ್ಲಿರುವ ಎಲ್ಲಾ ಮಕ್ಕಳಿಗೆ ಸೋಂಕು ತಗಲಿದಂತೆ’ ಎಂದರು.
‘ಚಳಿಗಾಲದಲ್ಲಿ ಕೊರೊನಾದಂಥ ವೈರಸ್ ಸೋಂಕು ಹರಡುವುದು ಹೆಚ್ಚು. ಇನ್ನೇನು ಬೇಸಿಗೆ ಆರಂಭವಾಗಲಿದೆ. ಬಿಸಿಲಿನಲ್ಲಿ ಕೊರಾನಾ ಹರಡುವಿಕೆ ಕಡಿಮೆ ಇರುತ್ತದೆ. ವಿದ್ಯಾಗಮಕ್ಕೆ ಮಕ್ಕಳನ್ನು ಕಳಿಸಲು ಮೆಡಿಕಲ್ ಸರ್ಟಿಫಿಕೇಟ್ ಇದೆಯಾ? ಸುರಕ್ಷೆಯ ಖಾತ್ರಿ ಇದೆಯಾ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮಕ್ಕಳ ಸುರಕ್ಷೆಯನ್ನು ಖಾತ್ರಿಪಡಿಸುವಂಥ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎಲ್ಲ ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳುವ ಬದಲು, 10ನೇ ತರಗತಿಗೆ ಮಾತ್ರ ಆಫ್ಲೈನ್ ತರಗತಿ ಮಾಡಬಹುದು. ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆಸಿಕೊಳ್ಳಿ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಯನ್ನು ಸರ್ಕಾರಿ ಖಾತ್ರಿಪಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪೋಷಕರ ಪ್ರತಿನಿಧಿ ಐರಿನ್ ಮಾತನಾಡಿ, ‘ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸರ್ಕಾರ ಹೇಳುತ್ತಿದೆ. ಇಂದಿನ ಮಕ್ಕಳು ಮುಂದಿನ ಭವಿಷ್ಯ. ವೈದ್ಯಕೀಯ ವ್ಯವಸ್ಥೆ ಸರಿಯಾಗಿದ್ದರೆ ಮಕ್ಕಳನ್ನು ಕಳಿಸಬಹುದು. ಆದರೆ, ಮಕ್ಕಳು ಅಂತರ ಕಾಯ್ದುಕೊಳ್ಳಲು ಗಮನ ಕೊಡುವುದಿಲ್ಲ. ಇನ್ನೊಬ್ಬರೊಂದಿಗೆ ಸಹಜವಾಗಿಯೇ ಬೆರೆಯುತ್ತಾರೆ. ಆದ್ದರಿಂದ ಶಾಲೆಗಳನ್ನು ಮುಂದೂಡುವುದು ಒಳಿತು. ಮಕ್ಕಳು ಶಾಲೆಗೆ ಹೋಗುವುದೆಂದರೆ ಪೋಷಕರಿಗೆ ಭಯವಾಗುತ್ತದೆ. ಸಂಪೂರ್ಣ ಸುರಕ್ಷೆಯಿದ್ದರೆ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಧೈರ್ಯ’ ಎಂದು ಅಭಿಪ್ರಾಯಪಟ್ಟರು.