ಸುಧೀಂದ್ರ ಹಾಲ್ದೊಡ್ಡೇರಿ ಬರಹ | ರೊದ್ದಂ ನರಸಿಂಹ ಎಂಬ ಅಭಿಜಾತ ಪ್ರತಿಭೆ

ವೈಮಾಂತರಿಕ್ಷ ಮತ್ತು ಹವಾಮಾನ ಕ್ಷೇತ್ರಗಳಲ್ಲಿ ರೊದ್ದಂ ನರಸಿಂಹ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಮೂಲ್ಯ ಎನ್ನುತ್ತಾರೆ ಡಿಆರ್​ಡಿಒ ಮತ್ತು ಎಚ್​ಎಎಎಲ್​ಗಳಲ್ಲಿ ಸೇವೆ ಸಲ್ಲಿಸಿದ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ. ರೊದ್ದಂ ನರಸಿಂಹ ಅವರ ಜೀವನ ಮತ್ತು ಸಾಧನೆಯನ್ನು ವಿಜ್ಞಾನಿಯ ಕಣ್ಣೋಟದಲ್ಲಿ ನೆನಪಿಸಿಕೊಳ್ಳುವ ಯತ್ನ ಈ ಬರಹದಲ್ಲಿದೆ.

ಸುಧೀಂದ್ರ ಹಾಲ್ದೊಡ್ಡೇರಿ ಬರಹ | ರೊದ್ದಂ ನರಸಿಂಹ ಎಂಬ ಅಭಿಜಾತ ಪ್ರತಿಭೆ
ಪ್ರೊ.ರೊದ್ದಂ ನರಸಿಂಹ
Ghanashyam D M | ಡಿ.ಎಂ.ಘನಶ್ಯಾಮ

|

Dec 15, 2020 | 8:44 PM

ವೈಮಾಂತರಿಕ್ಷ ಮತ್ತು ಹವಾಮಾನ ಕ್ಷೇತ್ರಗಳಲ್ಲಿ ರೊದ್ದಂ ನರಸಿಂಹ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಮೂಲ್ಯ ಎನ್ನುತ್ತಾರೆ ಡಿಆರ್​ಡಿಒ ಮತ್ತು ಎಚ್​ಎಎಎಲ್​ಗಳಲ್ಲಿ ಸೇವೆ ಸಲ್ಲಿಸಿದ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ. ರೊದ್ದಂ ನರಸಿಂಹ ಅವರ ಜೀವನ ಮತ್ತು ಸಾಧನೆಯನ್ನು ವಿಜ್ಞಾನಿಯ ಕಣ್ಣೋಟದಲ್ಲಿ ನೆನಪಿಸಿಕೊಳ್ಳುವ ಯತ್ನ ಈ ಬರಹದಲ್ಲಿದೆ.

ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ಯಾಸಂಸ್ಥೆ ಭಾರತೀಯ ವಿಜ್ಞಾನ ಮಂದಿರ – ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್. ಇಲ್ಲಿನ ವೈಮಾಂತರಿಕ್ಷ ಎಂಜಿನಿಯರಿಂಗ್ ವಿಭಾಗದಲ್ಲಿ ಸುದೀರ್ಘ ಕಾಲ ‘ಏರೋಡೈನಮಿಕ್ಸ್ – ವಾಯುಚಲನ ವಿಜ್ಞಾನ’ ಬೋಧಿಸಿದ ವಿಜ್ಞಾನಿ ರೊದ್ದಂ ನರಸಿಂಹ. ಕೆಲ ಕಾಲ ಅವರು ಅಲ್ಲಿನ ‘ವಾತಾವರಣ ವಿಜ್ಞಾನ ಅಧ್ಯಯನ ಕೇಂದ್ರ’ದ ಮುಖ್ಯಸ್ಥರೂ ಆಗಿದ್ದರು. ಹವಾಮಾನದಲ್ಲಿನ ಏರುಪೇರುಗಳಿಗೆ ಗಾಳಿ, ಆವಿ ಸೇರಿದಂತೆ ಅನಿಲಗಳ ಚಲನೆ ಹೇಗೆ ಕಾರಣವಾಗುವುದೆಂಬುದರ ಬಗ್ಗೆ ಗಂಭೀರ ಸಂಶೋಧನೆಗಳನ್ನು ಅವರು ಅಲ್ಲಿ ನಡೆಸಿದ್ದರು. ತಮ್ಮ ವಿಚಾರ ಮಂಡನೆಗೆ ಪೂರಕವಾದ ಕ್ಲಿಷ್ಟ ಗಣಿತ ಸೂತ್ರಗಳನ್ನು ಹುಡುಕುವಲ್ಲಿ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನ ತೋರಿದ್ದರು. ರೊದ್ದಂ ಅವರ ಕಾರ್ಯಕ್ಷೇತ್ರ ಕೇವಲ ವಾಯು ಸುರಂಗಗಳೊಳಗಿನ ಪುಟ್ಟ ವಿಮಾನ ಮಾದರಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಭೂಮಿಯ ಮೇಲೆ ಹತ್ತು-ಹದಿನೈದು ಕಿಲೋಮೀಟರ್ ಎತ್ತರದವರೆಗೆ ಹಾರುವ ಪೂರ್ಣಪ್ರಮಾಣದ ವಿಮಾನಗಳ ಸುತ್ತಲಿನ ವಾತಾವರಣದಲ್ಲಿನ ಬದಲಾವಣೆಗಳತ್ತಲೂ ವಿಸ್ತಾರಗೊಂಡಿತ್ತು. ಆಗಸದಲ್ಲಿನ ಆ ಎತ್ತರಗಳಿಗೆ ಬಲೂನ್‍ಗಳನ್ನು ಕಳುಹಿಸಿ ಅವುಗಳೊಳಗಿನ ಸೂಕ್ಷ್ಮ ಸಂವೇದಿಗಳು ಗ್ರಹಿಸಿದ ಮಾಹಿತಿಯ ಮಹಾಪೂರಕ್ಕೆ ಒಡ್ಡು ಕಟ್ಟಿದವರು ನರಸಿಂಹ. ಭಾರತ ದೇಶದ ಮೇಲೆ ಹನ್ನೊಂದರಿಂದ ಹದಿನೈದು ಕಿಲೋಮೀಟರ್ ಎತ್ತರದಲ್ಲಿನ ವಾತಾವರಣವು ಉಳಿದ ದೇಶಗಳ ಮೇಲಿರುವುದಕ್ಕಿಂತಲೂ ಹೇಗೆ ಭಿನ್ನ ಎಂದು ಗುರುತಿಸುವಲ್ಲಿ ಅವರ ನೇತೃತ್ವದ ತಂಡದ್ದೇ ಮೊದಲ ಸಾಧನೆ. ವಿಮಾನ ವಿಜ್ಞಾನ ಸಂಸ್ಥೆಗಳಿಗೆ ಒಂದು ಬಗೆಯ ಆಕರ ಗ್ರಂಥವೇ ಆಗಿರುವ ‘ನರಸಿಂಹ ಸಮಿತಿ ವರದಿ’ಯು ಇಂದಿಗೂ ಪ್ರಸ್ತುತವಾಗಿದೆ.

ಈ ಅಧ್ಯಯನದ ಮಹತ್ವವೇನು? ಎಂಬ ಪ್ರಶ್ನೆಗೆ ಆ ವರದಿಯ ಆರಂಭದಲ್ಲೇ ಉತ್ತರವಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳ ಮೇಲಿನ ಹವಾಮಾನದ ಕೂಲಂಕಷ ಅಧ್ಯಯನದಿಂದ ‘ಅಂತಾರಾಷ್ಟ್ರೀಯ ಮಾನಕ ಹವಾಮಾನವನ್ನು – International Standard Atmosphere (ISA) ಈಗಾಗಲೇ ಗುರುತಿಸಲಾಗಿದೆ. ಇದರ ಪ್ರಕಾರ ಸಮುದ್ರ ಮಟ್ಟದಲ್ಲಿ 15 ಡಿಗ್ರಿ ಸೆಲ್ಶಿಯಸ್ ಇರುವ ತಾಪಮಾನವು ಪ್ರತಿ ಕಿಲೋಮೀಟರ್ ಎತ್ತರಕ್ಕೆ 6.5 (ಆರೂವರೆ) ಡಿಗ್ರಿ ಸೆಲ್ಶಿಯಸ್ ಕಮ್ಮಿಯಾಗುತ್ತಾ ಹೋಗುತ್ತದೆ. ಈ ಇಳಿಯುವಿಕೆ ಸಮುದ್ರಮಟ್ಟದಿಂದ ಹನ್ನೊಂದು ಕಿಲೋಮೀಟರ್ ತನಕ ಇದ್ದು ಅಲ್ಲಿಂದ ಇಪ್ಪತ್ತು ಕಿಲೋಮೀಟರ್ ಎತ್ತರದ ತನಕ ಸ್ಥಿರತಾಪಮಾನವಿರುತ್ತದೆ. ಮತ್ತೆ ಇಪ್ಪತ್ತರಿಂದ ಮೂವತ್ತೆರಡು ಕಿಲೋಮೀಟರ್‌ಗಳ ತನಕ ಪ್ರತಿ ಕಿಲೋಮೀಟರ್‌ಗೆ ಒಂದು ಡಿಗ್ರಿ ಸೆಲ್ಶಿಯಸ್‍ನಷ್ಟು ತಾಪಮಾನ ಏರುತ್ತಾ ಹೋಗುತ್ತದೆ. ಈ ಲೆಕ್ಕಾಚಾರದಂತೆ ಹನ್ನೊಂದು ಕಿಲೋಮೀಟರ್ ಎತ್ತರದಲ್ಲಿ ಇರುವ ತಾಪಮಾನ (-)56.5 ಡಿಗ್ರಿ ಸೆಲ್ಶಿಯಸ್. ಈ ಎತ್ತರ ಅಥವಾ ಅದಕ್ಕಿಂತಲೂ ಎತ್ತರದಲ್ಲಿ (ಹದಿನಾರು ಕಿಲೋಮೀಟರ್) ಹಾರಾಡುವ ವಿಮಾನವೊಂದು ಅನುಭವಿಸುವ ಅತ್ಯಂತ ಕಮ್ಮಿ ತಾಪಮಾನ ಇದು. ವಿಮಾನಗಳಲ್ಲಿನ ಬಿಡಿಭಾಗಗಳಿಗೆ ಈ ಕಮ್ಮಿ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವಿದ್ದರೆ ಅವು ಹಾರಾಟ ಸಮಯದಲ್ಲಿ ಗೆದ್ದಂತೆ. ಭಾರತದ ವಾತಾವರಣದಲ್ಲಿ ಉಷ್ಣ ಹವೆಯಿರುವ ಕಾರಣ ನಮ್ಮ ತಾಪಮಾನಗಳು ಅಂತಾರಾಷ್ಟ್ರೀಯ ತಾಪಮಾನಕ್ಕಿಂತ ಕನಿಷ್ಟ 15 ಡಿಗ್ರಿ ಸೆಲ್ಶಿಯಸ್‍ನಷ್ಟು ಹೆಚ್ಚಿರುತ್ತದೆ. ಹಾಗಿದ್ದಲ್ಲಿ ನಮ್ಮ ದೇಶದ ವಾತಾವರಣದಲ್ಲಿ ಹಾರಾಡುವ ಯುದ್ಧ ವಿಮಾನಗಳು ಕೇವಲ (-)35 ಡಿಗ್ರಿ ಸೆಲ್ಶಿಯಸ್ ಕನಿಷ್ಠ ತಾಪಮಾನವನ್ನು ತಡೆದುಕೊಂಡರೆ ಸಾಕು. ಅಂದರೆ ಅಂತಾರಾಷ್ಟ್ರೀಯ ಮಾನಕ ಹವಾಮಾನಕ್ಕೆ ತಕ್ಕಂತೆ ರೂಪಿಸಿದ ವಿಮಾನವೊಂದು ನಮ್ಮ ವಾತಾವರಣದಲ್ಲಿ ಹಾರಾಡಲು ಯಾವುದೇ ತೊಂದರೆಯಿಲ್ಲ.

ಇದನ್ನೂ ಓದಿ: ವಿಜ್ಞಾನಿ ರೊದ್ದಂ ನರಸಿಂಹ ನಿಧನ

ಈ ನಂಬಿಕೆಗಳನ್ನು ಹುಸಿ ಮಾಡುವಂಥ ಅಧ್ಯಯನವೊಂದರ ನೇತೃತ್ವ ವಹಿಸಿದವರು ಪ್ರೊಫೆಸರ್ ರೊದ್ದಂ ನರಸಿಂಹ. ಪ್ರೊಫೆಸರ್ ಅನಂತಶಯನಂ ಅವರ ಸಹಯೋಗದೊಂದಿಗೆ ಹತ್ತಾರು ವರ್ಷಗಳ ಮಾಹಿತಿ ಸಂಗ್ರಹಣೆಯಲ್ಲಿ ವೇದ್ಯವಾದ ಅಂಶವೆಂದರೆ ಭಾರತವೂ ಸೇರಿದಂತೆ ಸಮಭಾಜಕ ವೃತ್ತದ ಆಸುಪಾಸಿನ ದೇಶಗಳ ಮೇಲಿನ ವಾತಾವರಣ ಅಂತಾರಾಷ್ಟ್ರೀಯ ಮಾನಕಕ್ಕಿಂತಲೂ ಭಿನ್ನವಾಗಿವೆ. ಮೊದಲಿದ್ದ ಕಲ್ಪನೆಯಂತೆ ಈ ಪ್ರದೇಶಗಳ ಮೇಲಿನ ವಾತಾವರಣದ ತಾಪಮಾನ ಅಂತಾರಾಷ್ಟ್ರೀಯ ಮಾನಕಕ್ಕಿಂತಲೂ ಹೆಚ್ಚಿರಬೇಕಿತ್ತು. ಆದರೆ ಅಧ್ಯಯನ ಹೊರಗೆಡವಿದಂತೆ ಆ ಎತ್ತರದಲ್ಲಿನ ತಾಪಮಾನ ಅಂತಾರಾಷ್ಟ್ರೀಯ ಮಾನಕಕ್ಕಿಂತಲೂ ಕಮ್ಮಿಯಾಗಿತ್ತು. ಇದಕ್ಕೆ ಕಾರಣವನ್ನೂ ಹುಡುಕಿದ ಈ ವಿಜ್ಞಾನಿದ್ವಯರು ಸಮಭಾಜಕ ವೃತ್ತದ ಸುಮಾರು ಹನ್ನೆರಡರಿಂದ ಹದಿನಾರು ಕಿಲೋಮೀಟರ್ ಮೇಲಿನ ವಾತಾವರಣದಲ್ಲಿ ಶೀತಲ ಪದರಗಳಿರುವುದನ್ನು ಪತ್ತೆ ಮಾಡಿದರು. ಇದರಿಂದಾಗಿ ಭಾರತೀಯ ವಿಮಾನಗಳು ಹತ್ತರಿಂದ ಹದಿನಾರು ಕಿಲೋಮೀಟರ್ ಎತ್ತರದಲ್ಲಿ ಹಾರಾಡುವಾಗ ಅನುಭವಿಸುವ ತಾಪಮಾನ (-)35 ಡಿಗ್ರಿ ಸೆಲ್ಶಿಯಸ್‍ನಲ್ಲಿ ಸ್ಥಿರವಾಗಿರುವ ಬದಲು (-)35 ರಿಂದ (-)74 ಡಿಗ್ರಿ ಸೆಲ್ಶಿಯಸ್‍ನ ತನಕ ಇಳಿಯುತ್ತದೆ. ಈ ಒಂದು ಶೋಧದಿಂದ ನಮ್ಮ ವಿಮಾನಗಳು ಅನುಭವಿಸಬಹುದಾದ ಕಿರಿಕಿರಿ ತಪ್ಪಿತು. ನಾವು ಖರೀದಿ ಮಾಡಿದ ಎಲ್ಲ ವಿಮಾನಗಳನ್ನು ಇಷ್ಟು ಕಠಿಣತಮ ವಾತಾವರಣದಲ್ಲಿ ಪೂರ್ವ ಪರೀಕ್ಷೆಗೊಳಗಾಗುವಂತೆ ತಯಾರಕರನ್ನು ಒತ್ತಾಯ ಮಾಡಲು ಸಾಧ್ಯವಾಯಿತು.

ಹವಾಮಾನ ಮುನ್ಸೂಚನೆಗೆ ಬೇಕಾದ ಮೂಲ ಸೌಕರ್ಯಗಳನ್ನು ಅವರು ಎನ್ಎಎಲ್ ನಿರ್ದೇಶಕರಾಗಿದ್ದ ಸಮಯದಲ್ಲಿ ಕಲ್ಪಿಸಿದರು. ಅವರ ಒತ್ತಾಸೆಯಿಂದ ದೇಶದ ಪ್ರಥಮ ‘ಪ್ಯಾರಲಲ್ ಕಂಪ್ಯೂಟರ್’ ಎನ್ಎಎಲ್​ನಲ್ಲಿ ಲಭ್ಯವಿದ್ದ ಪರಿಕರಗಳೊಂದಿಗೆ ಸ್ವದೇಶಿಯಾಗಿ ರೂಪುಗೊಂಡಿತು. ಅವರ ಕನಸಿನ ಕೂಸಾದ ಐಐಎಸ್​ಸಿಯ ‘ವಾತಾವರಣ ವಿಜ್ಞಾನ ಅಧ್ಯಯನ ಕೇಂದ್ರ’ದ ಸಹಯೋಗದೊಂದಿಗೆ ಎನ್ಎಎಲ್ ಭಾರತದ ಮುಂಗಾರು ಮಳೆ ಕುರಿತಂತೆ ಮುನ್ನೆಚ್ಚರಿಕೆ ನೀಡಬಲ್ಲ ವ್ಯವಸ್ಥೆಯೊಂದನ್ನು ರೂಪಿಸಿದರು.

ಬಾಹ್ಯಾಕಾಶ ವ್ಯವಸ್ಥೆಗಳ ಅಭಿವೃದ್ಧಿಗೆ ಸರ್ವ ಸ್ವತಂತ್ರ ‘ಬಾಹ್ಯಾಕಾಶ ಆಯೋಗ’ ಇರುವಂತೆ, ದೇಶದ ವೈಮಾನಿಕ ವ್ಯವಸ್ಥೆಗಳ ಅಭಿವೃದ್ಧಿಗೆ ‘ವೈಮಾನಿಕ ಆಯೋಗ’ ಇರಬೇಕೆಂದು ಬಲವಾಗಿ ಅವರು ಪ್ರತಿಪಾದಿಸಿದ್ದರು. ಅಧಿಕಾರಶಾಹಿಯ ನಿಧಾನಗತಿಯಿಂದಾಗಿ ದೇಶೀಯ ವಿಮಾನಗಳು ಅಭಿವೃದ್ಧಿಯಾಗುತ್ತಿಲ್ಲವೆಂಬ ಖೇದ ಅವರದಾಗಿತ್ತು. ಸ್ವದೇಶಿ ನಾಗರಿಕ ವಿಮಾನ ಅಭಿವೃದ್ಧಿ ಯೋಜನೆಯೊಂದನ್ನು ಅವರು ಹಮ್ಮಿಕೊಂಡಿದ್ದರು. ದೇಶದಲ್ಲಿ ಮಿಲಿಟರಿ ವಿಮಾನ ತಯಾರಿಕೆಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನಾಗರಿಕ ವಿಮಾನ ನಿರ್ಮಾಣಕ್ಕೆ ಒಂದು ನೀಲನಕ್ಷೆಯನ್ನು ಅವರು ರಚಿಸಿದ್ದರು.

ಸ್ವದೇಶಿ ಯುದ್ಧ ವಿಮಾನ – ಎಲ್​ಸಿಎ ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ಅನೇಕ ಪ್ರಮುಖ ವ್ಯವಸ್ಥೆಗಳ ಸ್ವದೇಶಿ ಉತ್ಪಾದನೆಗೆ ಅವರು ಒತ್ತು ನೀಡಿದ್ದರು. ದೇಶೀಯ ಖಾಸಗಿ ಕಂಪನಿಗಳಿಗೆ ಸುಗಮವಾಗಿ ತಂತ್ರಜ್ಞಾನ ವರ್ಗಾವಣೆಯಾಗಲು ಮಾರ್ಗಸೂಚಿಯನ್ನು ರಚಿಸಿದ್ದರು. ಹವಾಮಾನ ಮುನ್ಸೂಚನೆಗೆ ನೆರವಾಗುವಂಥ ಉಪಗ್ರಹಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದರು. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯಲ್ಲಿನ ತಮ್ಮ ಸುದೀರ್ಘ ಸೇವೆಯಲ್ಲಿ ವೈಮಾಂತರಿಕ್ಷ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಅಗತ್ಯವಾದ ಯೋಜನೆಗಳಿಗೆ ಚಾಲನೆ ನೀಡಿದ್ದರು.

ತಮ್ಮ ಇಳಿ ವಯಸ್ಸಿನಲ್ಲೂ ಅನೇಕ ಸಂಶೋಧನಾಲಯಗಳ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿ, ಸಂಶೋಧಕರಿಗೆ ಸ್ಪೂರ್ತಿ ನೀಡುವುದರ ಜತೆಗೆ ಮೌಲ್ಯಯುತ ಪ್ರೌಢಪ್ರಬಂಧಗಳ ರಚನೆಯಲ್ಲೂ ತೊಡಗಿಕೊಂಡಿದ್ದರು. ಇಂಗ್ಲಿಷ್, ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಸಮಾನ ಪ್ರೌಢಿಮೆ ಪಡೆದಿದ್ದ ರೊದ್ದಂ ಅವರಿಗೆ ವಿಜ್ಞಾನದಷ್ಟೇ ಆಸಕ್ತಿ ವಿಜ್ಞಾನ ಇತಿಹಾಸದಲ್ಲಿ, ತತ್ವಜ್ಞಾನದಲ್ಲಿಯೂ ಇತ್ತು. ತಮ್ಮ ಪ್ರಿಯ ವಿಷಯ ದ್ರವಚಲನ ವಿಜ್ಞಾನದಲ್ಲಿ ಸಂಶೋಧನಾ ಪ್ರಬಂಧ ಪ್ರಕಟಿಸುವುದರ ಜತೆಗೆ, ಅನೇಕ ವಿದ್ವತ್​ಗ್ರಂಥಗಳನ್ನು ರಚಿಸಿರುವ ಕೀರ್ತಿ ಅವರದು. ಅವರ ಅನುಪಸ್ಥಿತಿಯಿಂದ ದೇಶದ ವೈಮಾಂತರಿಕ್ಷ ಕ್ಷೇತ್ರ ಸ್ಪೂರ್ತಿಯ ಸೆಲೆಯನ್ನು ಕಳೆದುಕೊಂಡಿದೆಯೆಂದರೆ ಉತ್ರೇಕ್ಷೆಯಲ್ಲ.

ರೊದ್ದಂ ನರಸಿಂಹ ಬರಹ | ನಾವು ನಮ್ಮ ಪೂರ್ವಕಾಲದ ಬಗ್ಗೆ ಅಸಂಭವ ಕತೆಗಳನ್ನೇನೂ ಶೋಧಿಸಬೇಕಿಲ್ಲ, ಈಗ ಕಷ್ಟಪಟ್ಟು ಕೆಲಸ ಮಾಡಬೇಕಷ್ಟೇ

ಸಾಮಾನ್ಯ ಜನರು ವಿಮಾನ ಹತ್ತಬೇಕೆಂಬ ಕನಸಿಗಾಗಿ ಶ್ರಮಿಸಿದ್ದ ಏರೊಸ್ಪೇಸ್ ವಿಜ್ಞಾನಿ ರೊದ್ದಂ ನರಸಿಂಹ ನಿಧನ

ಕೀರ್ತಿಶನಿಯಿಂದ ದೂರವಿದ್ದ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada