ಪವರ್ ಲಿಫ್ಟರ್ 400 ಕೆಜಿ ಭಾರ ಹೊತ್ತು ಸ್ಕ್ವಾಟ್ಸ್ (ಬಸ್ಕಿ- Squats) ಮಾಡುವ ವೇಳೆ, ಪ್ರಯತ್ನ ವಿಫಲವಾಗಿ ತಮ್ಮ ಎರಡೂ ಮೊಣಕಾಲುಗಳ ಮೂಳೆ ಮುರಿದುಕೊಂಡಿರುವ ಭಯಾನಕ ಘಟನೆ ರಷ್ಯಾದಲ್ಲಿ ನಡೆದಿದೆ.
ರಷ್ಯಾದ ಮಾಸ್ಕೋ ಬಳಿ 2020ರ ಸಾಲಿನ ವರ್ಲ್ಡ್ ರಾ ಪವರ್‌ಲಿಫ್ಟಿಂಗ್ ಫೆಡರೇಶನ್ (WRPF) ಯುರೋಪಿಯನ್ ಚಾಂಪಿಯನ್‌ಶಿಪ್ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪವರ್ ಲಿಫ್ಟರ್ ಅಲೆಕ್ಸಾಂಡರ್ ಸೇದಿಕ್ 882 ಪೌಂಡ್ಸ್ ಅಂದ್ರೆ ಸುಮಾರು 400 ಕೆ.ಜಿ ಭಾರ ಹೊತ್ತು ಸ್ಕ್ವಾಟ್ಸ್ ಮಾಡುವ ವೇಳೆ ತೂಕ ತಾಳಲಾಗದೆ ಕುಸಿದು ಬಿದ್ದಿದ್ದಾರೆ.
ಈ ಪರಿಣಾಮ ಅವರ ಎರಡೂ ಕಾಲುಗಳ ಮೂಳೆ ಮುರಿದಿದೆ. ವೈಟ್ ಲಿಫ್ಟ್ ಮಾಡುವಾಗ ಅವರು ಕುಸಿದು ಬೀಳುವ ದೃಶ್ಯ ಭಯಾನಕವಾಗಿದೆ. ಈ ನೋವಿನ ವಿಡಿಯೋವನ್ನು ಸೇದಿಕ್ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಘಟನೆ ಸಂಭವಿಸಿದ ಕೂಡಲೆ ಸೇದಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ 6 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಈ ಬಗ್ಗೆ ಮಾತನಾಡಿದ ಸೇದಿಕ್ ವೈದ್ಯರು ನನ್ನ ಮೊಣಕಾಲುಗಳನ್ನು ಜೋಡಿಸಿ ಹೊಲಿಗೆ ಹಾಕಿದ್ದಾರೆ. ಎರಡು ತಿಂಗಳು ಬೆಡ್ ರೆಸ್ಟ್ನಲ್ಲಿರುವಂತೆ ಹೇಳಿದ್ದಾರೆ ಎಂದು ತಿಳಿಸಿದ್ರು.
Published On - 3:37 pm, Fri, 14 August 20