Maha Shivaratri; ಕಾಯುವನೇ ಶಿವ? : ಶಿವಾರಗುಡ್ಡದ ಶಿವನಿಗೆ ನನ್ನ ನಾಟಕ ಗೊತ್ತಾಗಿ ಹೋಯಿತೇ!

|

Updated on: Mar 11, 2021 | 6:09 PM

'ಎಲ್ಲರೂ ಬೆಟ್ಟ ಹತ್ತಲು ಸಜ್ಜಾಗುತ್ತಿದ್ದಾಗ ನಾನೂ ಎದ್ದು ನಮ್ಮ ಹೌಸ್ ಮಿಸ್ ಕುಸುಮಾದೇವಿಗೆ, ನಾನೀಗ ಅರಾಮಿದ್ದೇನೆ. ಮಿಸ್, ನಾನೂ ಬರ್ತೀನಿ ಎಂದೆ. ತಕ್ಷಣವೇ ಬೆಚ್ಚಿದ ಅವರು, ಛೆ ಛೆ ಎಲ್ಲಾದರೂ ಉಂಟೇ? ರೆಸ್ಟ್ ತಗೋ. ಈ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಹೋಗ್ತಾರಾ? ನಿನಗೆ ಪ್ರಸಾದ ಯಾರಾದರೂ ತರುತ್ತಾರೆ ಎಂದು ಗದರಿದರು! ಬಹಳ ನೋವು, ನಿರಾಸೆಯಾದ ನನಗೆ ಹಲವು ವರ್ಷಗಳ ನಂತರ ಗೊತ್ತಾಯಿತು, ಹೆಣ್ಣುಮಕ್ಕಳು ಹೊಟ್ಟೆ ನೋವೆಂದರೆ ಏನು ಅರ್ಥ ಎಂದು.' ಪೂರ್ಣಿಮಾ ಮಾಳಗಿಮನಿ

Maha Shivaratri; ಕಾಯುವನೇ ಶಿವ? : ಶಿವಾರಗುಡ್ಡದ ಶಿವನಿಗೆ ನನ್ನ ನಾಟಕ ಗೊತ್ತಾಗಿ ಹೋಯಿತೇ!
ಪೂರ್ಣಿಮಾ ಮಳಗಿಮನಿ
Follow us on

ಮತ್ತೊಂದು ಶಿವರಾತ್ರಿಯಲ್ಲಿ ನಾವು ನೀವೆಲ್ಲ. ಕ್ಷಣಕ್ಷಣವೂ ಅಲ್ಲೆಲ್ಲಿಂದಲೋ ಘಂಟೆಗಳ ನಿನಾದ ಕೇಳಿಬರುತ್ತಿರಬಹುದು. ನೂರೆಂಟು ನಾಮಾವಳಿಗಳು ಅನುರಣಿಸುತ್ತಿರಬಹುದು. ಫಲಾಹಾರಗಳು ನಿಮ್ಮೆದುರಿಗಿರಬಹುದು. ಮೈಕುಗಳಿಂದ ನಾಮಸಂಕೀರ್ತನೆಗಳು ತೇಲಿಬರುತ್ತಿರಬಹುದು. ಉರಿಬಿಸಿಲಿನಲ್ಲಿ ಸಾಲಿನಲ್ಲಿ ತುದಿಗಾಲ ಮೇಲೆ ದರ್ಶನಕ್ಕಾಗಿ ನಿಂತಿರಬಹುದು. ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು; ಸತ್ಯ, ಶಕ್ತಿ, ಸೌಂದರ್ಯ ಸ್ವರೂಪನಾದ ಅಚಿಂತ್ಯ ನಿಮ್ಮ ಮನಸ್ಸನ್ನು ಈವತ್ತು ಹೇಗೆ ಆವರಿಸಿಕೊಂಡಿದ್ದಾನೆ, ಈ ಕ್ಷಣದಲ್ಲಿ ತೇಲಿಬಂದ ನೆನಪನ್ನು ಹಂಚಿಕೊಳ್ಳಬಹುದೇ ಎಂದು ‘ಟಿವಿ 9 ಕನ್ನಡ ಡಿಜಿಟಲ್’​ ಕೇಳಿತು. ಆಗ ಹೊಮ್ಮಿದ್ದೇ ‘ಕಾಯುವನೇ ಶಿವ?’ ಸರಣಿ. ಇಲ್ಲಿ ಅವನು ಪುಳಕಗೊಳಿಸಿದ್ದಾನೆ. ಕಳವಳಕ್ಕೆ ದೂಡಿದ್ದಾನೆ, ವಿಷಾದಕ್ಕೆ ನೂಕಿದ್ಧಾನೆ, ಆಪ್ತವಾಗಿ ಕೈಹಿಡಿದಿದ್ದಾನೆ, ಪ್ರೀತಿಯಿಂದಲೂ ಅಪ್ಪಿದ್ದಾನೆ. ಅನುಭವ ಅರಿವಿನಿಂದ ಮುನ್ನಡೆಸಿದ್ದಾನೆ. 

ಪರಿಕಲ್ಪನೆ: ಶ್ರೀದೇವಿ ಕಳಸದ

ಅಂದು ಶಿವಾರಗುಡ್ಡದ ನವೋದಯ ಶಾಲೆಯಲ್ಲಿ ನೆಪಹೂಡಿದ್ದ ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರಿಗೆ ರಸಾಯನದ ಖಾಲಿ ದೊನ್ನೆಯ ದರ್ಶನವೂ ಆಗಲಿಲ್ಲ.

ಕೆಲವು ವಾಸನೆಗಳು ಕೆಲವು ವ್ಯಕ್ತಿಗಳನ್ನೋ, ಊರುಗಳನ್ನೋ, ದೃಶ್ಯಗಳನ್ನೋ ಪದಗಳನ್ನೋ ನೆನಪಿಸುತ್ತವೆ. ಆದರೆ ಕೆಲವು ಪದಗಳಿಗೆ, ವಾಸನೆ ಮತ್ತು ಶಬ್ದದ ನೆನಪುಗಳಿರುತ್ತವೆ ಎನ್ನುವುದು ನಿಮ್ಮ ಅನುಭವಕ್ಕೆ ಬಂದಿದೆಯಾ? ಉದಾಹರಣೆಗೆ ನನಗೆ ಕುಕೀಸ್ ಎಂದರೆ ಓರಿಯನ್ ಮಾಲ್, ಕಾಫಿ ಎಂದರೆ ಮಲ್ಲೇಶ್ವರಂ ಮಾರ್ಕೆಟ್, ಅವರೆಕಾಯಿ ಎಂದರೆ ಬಾಲ್ಯದಲ್ಲಿ ಅಜ್ಜಿಯ ಗೊರಕೆ ಮತ್ತು ಆಕೆಯ ಸೀರೆ ಸೆರಗು ಹಿಡಿದು ಪಕ್ಕ ಮಲಗುತ್ತಿದ್ದ ನೆನಪಾಗುತ್ತವೆ.

ಹಾಗೆ ಶಿವರಾತ್ರಿ ಎಂದೊಡನೆ ನೆನಪಾಗುವುದು ನಮ್ಮ ನವೋದಯ ವಿದ್ಯಾಲಯ ವಸತಿ ಶಾಲೆಯಲ್ಲಿ ಶಿವಾರಗುಡ್ಡದ ಮೇಲಿನ ಶಿವಲಿಂಗ, ಗುಡಿಯೊಳಗಿನ ಎಣ್ಣೆ, ಸುಟ್ಟಬತ್ತಿ, ಕಮಟು; ಘಂಟೆಯ ಸಣ್ಣ ಸದ್ದು, ಪೂಜೆಯ ನಂತರ ಮಕ್ಕಳಿಗೆ ಕೊಡುತ್ತಿದ್ದ ಮಾವು, ಹಲಸು, ಬಾಳೆ, ಜೇನು ಮತ್ತು ಹಾಲು ಹಾಕಿ ಮಾಡಿದ ರಸಾಯನದ ಘಮಲು! ಅದೆಂತಹ ಅದ್ಭುತವಾದ ಪ್ರಸಾದ ಎಂದರೆ ಹೊಟ್ಟೆ ತುಂಬಿ ಬಿರಿಯುವಂತಾದರೂ ದೊನ್ನೆಯಲ್ಲಿ ಹಾಕಿ ಕೊಟ್ಟಿದ್ದಷ್ಟನ್ನೂ ತಿಂದು ಮುಗಿಸುತ್ತಿದ್ದೆವು. ನಮ್ಮ ಶಾಲೆ ಮಂಡ್ಯ ಜಿಲ್ಲೆಯ ಬೆಸಗರಹಳ್ಳಿ ಹತ್ತಿರದ ಶಿವಾರಗುಡ್ಡ ಎಂಬ ಪುಟ್ಟಹಳ್ಳಿಯಲ್ಲಿ ಗುಡ್ಡದ ತಪ್ಪಲಿನಲ್ಲಿತ್ತು. ಈಗ ಆರು ತಿಂಗಳಿಗೋ, ವರ್ಷಕ್ಕೋ ಒಮ್ಮೆ ಎಲ್ಲಾದರೂ ಟ್ರೆಕಿಂಗ್ ಹೋಗಿ ಬಂದರೆ ದೊಡ್ಡ ಸಾಹಸ ಮಾಡಿದಂತೆ ಫೇಸ್ಬುಕ್ನಲ್ಲಿ ಫೋಟೋ ಹಾಕಿಕೊಂಡು ಬೀಗುವ ನಾನು ಬಾಲ್ಯದಲ್ಲಿ ವಾರಕ್ಕೊಮ್ಮೆಯಾದರೂ ನಮ್ಮ ಪಿ.ಟಿ ಶಿಕ್ಷಕರ ಒದೆಗೆ ಮತ್ತು ಒತ್ತಾಯಕೆ ಬೇರೆ ವಿಧಿಯಿಲ್ಲದೆ ಸ್ನೇಹಿತರೊಂದಿಗೆ ಹತ್ತಿ ಬುಡು ಬುಡು ಇಳಿಯುತ್ತಿದ್ದುದು ನಿಜವಾ ಎಂದು ಆಶ್ಚರ್ಯ ಪಡುವಂತಾಗಿದೆ.

ಪ್ರತಿ ವರ್ಷ ಶಿವರಾತ್ರಿಯನ್ನು ಶಿಕ್ಷಕರೊಂದಿಗೆ ನಾವೆಲ್ಲಾ ಮಕ್ಕಳು ಅಲ್ಲಿಯೇ ಆಚರಿಸುತ್ತಿದ್ದೆವು. ಆ ಬೆಟ್ಟದ ಮೇಲೆ ಒಂದು ಪುಟ್ಟ ಗುಹೆಯಿತ್ತು. ಅದರೊಳಗೆ ಒಂದು ಪುಟ್ಟ ಶಿವಾಲಯವಿತ್ತು. ಸುತ್ತ ಮುತ್ತಲಿನ ಹಳ್ಳಿಯವರು ಬಹಳಷ್ಟು ಜನ ಅಲ್ಲಿಗೆ ಬರುತ್ತಿದ್ದರು. ಅಲ್ಲಿ ಬಂಡೆಗಳ ಸುತ್ತ ಬೆಳೆಯುತ್ತಿದ್ದ ಎರಡಡಿ ಎತ್ತರದ ಹಳದಿ ಹುಲ್ಲಿಗೆ ತನ್ನದೇ ವಿಶೇಷವಾದ ವಾಸನೆಯಿತ್ತು. ಈಗಲೂ ಅದು ಆ ಜಾಗಕ್ಕಷ್ಟೇ ಸೀಮಿತವಾದ ವಾಸನೆ ಅನಿಸುತ್ತದೆ. ಹತ್ತುವಾಗ ಎಷ್ಟೇ ಕಷ್ಟ ಪಟ್ಟು ಬೇಸರದಿಂದ ಹತ್ತಿದರೂ ಒಮ್ಮೆ ಮೇಲೇರಿ ತಣ್ಣನೆಯ ಬಂಡೆಯೊಂದರ ಮೇಲೆ ಕುಳಿತು ಸುತ್ತಲಿನ ಹಳ್ಳಿ, ಕಬ್ಬಿನ ಗದ್ದೆಗಳನ್ನು ನೋಡಿದಾಗ ಒಂದಲ್ಲ ಒಂದು ದಿನ ಈ ವಸತಿ ಶಾಲೆಯ ವಾಸ ಮುಗಿಯುವುದು; ನಾವೂ ಹೊರಗಿನ ಪ್ರಪಂಚವನ್ನು ನೋಡಿ, ಮುಟ್ಟಿ ಮಾತನಾಡಿಸುತ್ತೇವೆ ಎನ್ನುವ ಆಶಾವಾದ ಮತ್ತೆ ಜೀವಂತವಾಗುತ್ತಿತ್ತು. ಸುಮಾರು ಜನ ನನ್ನಂತೆಯೇ ಬಹಳ ಹೋಮ್ ಸಿಕ್ ಆಗಿರುತ್ತಿದ್ದೆವು. ಕೆಲವು ಭಂಡ ಧೈರ್ಯದ ಹುಡುಗರು ಹೇಗೆ ತಪ್ಪಿಸಿಕೊಂಡು ಮನೆಗೆ ಹೋಗಬಹುದು, ಅಲ್ಲಿ ಕಾಣುವ ಊರು ಯಾವುದು, ಅಲ್ಲಿಂದ ನಮ್ಮ ಊರು ಎಷ್ಟು ದೂರ ಇರಬಹುದು ಎಂದೆಲ್ಲಾ ಸ್ಕೆಚ್ ಹಾಕುತ್ತಿದ್ದರು. ಅತ್ತ ತಕ್ಕಡಿಗೆ ಹಾಕಿದ ಕಪ್ಪೆಗಳಂತೆ ಜಿಗಿಯುತ್ತಿದ್ದ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಕ್ರಿಯವಾಗಿ ಕಾಯುತ್ತಿದ್ದ ಶಿಕ್ಷಕರು ದೂರದಿಂದಲೇ ಎಲ್ಲರ ಮನವನ್ನು ಅರಿತವರಂತೆ ಬೆದರುತ್ತಿದ್ದರು.

ನಮ್ಮ ಸಂಗೀತದ ಮೇಷ್ಟ್ರು ಹಾಡು ಹೇಳ್ತಿರಾ ಎಂದು ಕೇಳಿದರೆ ಸಾಕು, ಕೀ ಕೊಟ್ಟ ಗೊಂಬೆಗಳಂತೆ ಶುರು ಹಚ್ಚಿಕೊಂಡು ಬಿಡುತ್ತಿದ್ದ ಹುಡುಗಿಯರ ಒಂದು ಗುಂಪನ್ನು ತಯಾರಿ ಮಾಡಿದ್ದರು. ಗಾಯನದ ಅಭ್ಯಾಸಕ್ಕಾಗಿ ಎಷ್ಟೋ ಬಾರಿ ಬೆಳಗಿನ ಜಾಗಿಂಗ್ ಮತ್ತು ವ್ಯಾಯಾಮ ತಪ್ಪಿಸಿಕೊಳ್ಳ ಬಹುದು ಎನ್ನುವ ದೂರಾಲೋಚನೆಯಿಂದ ಅಷ್ಟೇನೂ ಚೆನ್ನಾಗಿ ಹಾಡಲು ಬರದಿದ್ದರೂ ನಾನೂ ಆ ಗುಂಪನ್ನು ಸೇರಿಕೊಂಡಿದ್ದೆ.

ಸರಿ ಪೂಜೆಯಾದೊಡನೆ ರಸಾಯನದ ವಾಸನೆಗೆ ಹಿಗ್ಗಿಹಿಗ್ಗಿ, ಸಾಕಾಗಿ ಇನ್ನೂ ಅರಳಲಾರೆ ಎಂದು ಮೂಗಿನ ಹೊಳ್ಳೆಗಳು ಮುದುಡಿ, ಅದರ ಮೇಲಿನ ಎಲ್ಲರ ಕಣ್ಣುಗಳು ನೋಯಲು ಆರಂಭವಾಗುವ ತನಕ ಪ್ರಾರ್ಥನೆ ಗೀತೆಗಳನ್ನು ಹಾಡಿ ಮುಗಿಸುತ್ತಿದ್ದೆವು. ನಂತರ ರಸಾಯನ ವಿತರಣೆ ಮಾಡುತ್ತಿದ್ದರು. ಎಲ್ಲಾರೂ ಅದರಲ್ಲಿ ಮುಳುಗಿ ಸೈಲೆಂಟ್ ಆಗಿ ಸವಿಯುತ್ತ ಮೋಕ್ಷ ಸಿಕ್ಕಂತೆ ಬೀಗುತ್ತಿದ್ದೆವು.

ಒಮ್ಮೆ ಏನಾಯಿತೆಂದರೆ, ನನಗೆ ಹೌದೋ ಅಲ್ಲವೋ ಎನ್ನುವಂತೆ ಹೊಟ್ಟೆ ನೋಯತೊಡಗಿತ್ತು. ಇದೇ ಚಾನ್ಸ್ ಎಂದು ನಾನು ಸಿಕ್ಕಾ ಪಟ್ಟೆ ಹೊಟ್ಟೆ ನೋವು ಎಂದು ನೆಪ ಮಾಡಿ ಕ್ಲಾಸ್ ತಪ್ಪಿಸಿಕೊಂಡೆ. ಪಿಟಿಯಿಂದಲೂ ಮುಕ್ತಿ ಸಿಕ್ಕಿತು. ಸ್ನೇಹಿತೆಯರು ರೂಮಿಗೇ ಊಟ ತಂದು ಕೊಟ್ಟರು. ಅಹೋ ಭಾಗ್ಯವೇ ಎಂದು ನಾನು ಬೀಗುತ್ತಿರುವಾಗ ಮರುದಿನ ಶಿವರಾತ್ರಿ ಹಬ್ಬ!

ಎಲ್ಲರೂ ಬೆಟ್ಟ ಹತ್ತಲು ಸಜ್ಜಾಗುತ್ತಿದ್ದಾಗ ನಾನೂ ಎದ್ದು, ನಮ್ಮ ಹೌಸ್ ಮಿಸ್ ಕುಸುಮಾ ದೇವಿಗೆ ‘ನಾನೀಗ ಅರಾಮಿದ್ದೇನೆ. ಮಿಸ್, ನಾನೂ ಬರ್ತೀನಿ’ ಎಂದೆ. ತಕ್ಷಣವೇ ಬೆಚ್ಚಿದ ಅವರು ‘ಛೆ ಛೆ ಎಲ್ಲಾದರೂ ಉಂಟೇ? ರೆಸ್ಟ್ ತಗೋ. ಈ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಹೋಗ್ತಾರಾ? ನಿನಗೆ ಪ್ರಸಾದ ಯಾರಾದರೂ ತರುತ್ತಾರೆ.’ ಎಂದು ಗದರಿದರು! ಬಹಳ ನೋವು, ನಿರಾಸೆಯಾದ ನನಗೆ ಹಲವು ವರ್ಷಗಳ ನಂತರ ಗೊತ್ತಾಯಿತು, ಹೆಣ್ಣುಮಕ್ಕಳು ಹೊಟ್ಟೆ ನೋವೆಂದರೆ ಏನು ಅರ್ಥ ಎಂದು.

ಅದೇ ಕೊನೆಯ ಬಾರಿ ನಾನು ವಸತಿ ಶಾಲೆಯಲ್ಲಿ ಅನಾರೋಗ್ಯದ ನೆಪ ಮಾಡಿದ್ದು. ಒಂದೆರಡು ದಿನ ಮಲಗಿ ಮಜಾ ಮಾಡುವ ನನ್ನ ಯೋಜನೆ ಬೆಟ್ಟದ ಮೇಲಿನ ಒಂದು ಸುಂದರ ಶಿವರಾತ್ರಿಯನ್ನೂ, ಈಗಲೂ ಬಾಯಲ್ಲಿ ನೀರೂರಿಸುವ ರಸಾಯನವನ್ನೂ ಕಳೆದುಕೊಳ್ಳುವಂತೆ ಮಾಡಿತ್ತು. ನನ್ನ ಹೆಸರು ಹೇಳಿ ಐದಾರು ಜನ ಹುಡುಗಿಯರು ಎಕ್ಸ್ಟ್ರಾ ಪ್ರಸಾದ ಕೇಳಿ ತಗೊಂಡಿದ್ದರು. ನನ್ನ ತನಕ ಮಾತ್ರ ಖಾಲಿ ದೊನ್ನೆಯೂ ತಲುಪಲಿಲ್ಲ. ಎಷ್ಟೋ ಬಾರಿ ಆ ರಸಾಯನವನ್ನು ಮನೆಯಲ್ಲಿ ಮಾಡುವ ವಿಫಲ ಯತ್ನ ಮಾಡಿದ್ದೇನೆ. ಆದರೆ ಶಿವಾರಗುಡ್ಡದ ಮೇಲಿನ ರುಚಿ ಇಂದಿಗೂ ಸಿಕ್ಕಿಲ್ಲ.

ಇದನ್ನೂ ಓದಿ : Maha Shivaratri; ಕಾಯುವನೇ ಶಿವ? : ಹತ್ತು ರೂಪಾಯಿ ಕಿತ್ತುಕೊಂಡ 

Published On - 5:53 pm, Thu, 11 March 21