Maha Shivaratri; ಕಾಯುವನೇ ಶಿವ? : ಹತ್ತು ರೂಪಾಯಿ ಕಿತ್ತುಕೊಂಡ ‘ಶಿವ’

‘ಅಲ್ಲಿರುವವರು ಒಂಟಿಜೋಡಿ ಕಟ್ಟಿಕೊಳ್ಳುವಾಗ ನಾನು ನನ್ನಲ್ಲೇ ಈಗ ಒಂಟಿ ಈಗ ಜೋಡಿ ಎಂದು ಅಂದುಕೊಳ್ಳುತ್ತಿದ್ದೆ. ಬಡ್ಡೀಮಗಂದು ನಾನಂದುಕೊಂಡದ್ದೇ ಬೀಳುತ್ತಿತ್ತು. ನಾನು ಈಗ ನೂರು ಕಟ್ಟಿದ್ದರೆ ಎಷ್ಟೊಂದು ದುಡ್ಡು ಬಂದುಬಿಡುತ್ತಿತ್ತಲ್ಲ ಅಂದುಕೊಳ್ಳುತ್ತಿದ್ದೆ. ಹೀಗೆ ಅನೇಕ ಬಾರಿ ಆಯಿತು. ನಾನು ಒಂಟಿ ಅಂದರೆ ಒಂಟಿ. ಜೋಡಿ ಎಂದರೆ ಜೋಡಿ.‘ ಚಂದ್ರು ಎಂ. ಹುಣಸೂರು

Maha Shivaratri; ಕಾಯುವನೇ ಶಿವ? : ಹತ್ತು ರೂಪಾಯಿ ಕಿತ್ತುಕೊಂಡ 'ಶಿವ'
ಚಂದ್ರು ಎಂ. ಹುಣಸೂರು
Follow us
ಶ್ರೀದೇವಿ ಕಳಸದ
|

Updated on: Mar 11, 2021 | 5:23 PM

ಮತ್ತೊಂದು ಶಿವರಾತ್ರಿಯಲ್ಲಿ ನಾವು ನೀವೆಲ್ಲ. ಕ್ಷಣಕ್ಷಣವೂ ಅಲ್ಲೆಲ್ಲಿಂದಲೋ ಘಂಟೆಗಳ ನಿನಾದ ಕೇಳಿಬರುತ್ತಿರಬಹುದು. ನೂರೆಂಟು ನಾಮಾವಳಿಗಳು ಅನುರಣಿಸುತ್ತಿರಬಹುದು. ಫಲಾಹಾರಗಳು ನಿಮ್ಮೆದುರಿಗಿರಬಹುದು. ಮೈಕುಗಳಿಂದ ನಾಮಸಂಕೀರ್ತನೆಗಳು ತೇಲಿಬರುತ್ತಿರಬಹುದು. ಉರಿಬಿಸಿಲಿನಲ್ಲಿ ಸಾಲಿನಲ್ಲಿ ತುದಿಗಾಲ ಮೇಲೆ ದರ್ಶನಕ್ಕಾಗಿ ನಿಂತಿರಬಹುದು. ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು; ಸತ್ಯ, ಶಕ್ತಿ, ಸೌಂದರ್ಯ ಸ್ವರೂಪನಾದ ಅಚಿಂತ್ಯ ನಿಮ್ಮ ಮನಸ್ಸನ್ನು ಈವತ್ತು ಹೇಗೆ ಆವರಿಸಿಕೊಂಡಿದ್ದಾನೆ, ಈ ಕ್ಷಣದಲ್ಲಿ ತೇಲಿಬಂದ ನೆನಪನ್ನು ಹಂಚಿಕೊಳ್ಳಬಹುದೇ ಎಂದು ‘ಟಿವಿ 9 ಕನ್ನಡ ಡಿಜಿಟಲ್’​ ಕೇಳಿತು. ಆಗ ಹೊಮ್ಮಿದ್ದೇ ‘ಕಾಯುವನೇ ಶಿವ?’ ಸರಣಿ. ಇಲ್ಲಿ ಅವನು ಪುಳಕಗೊಳಿಸಿದ್ದಾನೆ. ಕಳವಳಕ್ಕೆ ದೂಡಿದ್ದಾನೆ, ವಿಷಾದಕ್ಕೆ ನೂಕಿದ್ಧಾನೆ, ಆಪ್ತವಾಗಿ ಕೈಹಿಡಿದಿದ್ದಾನೆ, ಪ್ರೀತಿಯಿಂದಲೂ ಅಪ್ಪಿದ್ದಾನೆ. ಅನುಭವ ಅರಿವಿನಿಂದ ಮುನ್ನಡೆಸಿದ್ದಾನೆ. 

ಪರಿಕಲ್ಪನೆ: ಶ್ರೀದೇವಿ ಕಳಸದ

ಪಚ್ಚೆಯಾಟದಲ್ಲಿ ತನ್ನ ಹತ್ತು ರೂಪಾಯಿಯನ್ನು ಶಿವ ಹೇಗೆ ಕಿತ್ತುಕೊಂಡ ಎಂಬುದನ್ನು ಹೇಳಿಕೊಂಡಿದ್ಧಾರೆ ಕವಿ ಚಂದ್ರು ಎಂ. ಹುಣಸೂರು

ಇಡೀ ರಾತ್ರಿ ಜಾಗರಣೆ ಮಾಡಬೇಕೆಂದು ಶಿವರಾತ್ರಿಯಲ್ಲಿ ನಾವು ಮಾಡಿಕೊಳ್ಳುತ್ತಿದ್ದ ಪ್ರತಿಜ್ಞೆ. ಆದರೆ ಯಾವ ಶಿವರಾತ್ರಿಯಲ್ಲೂ ಇಡೀ ರಾತ್ರಿ ಎಚ್ಚರವಾಗಿದ್ದಿಲ್ಲ. ಹೆಚ್ಚೆಂದರೆ ಹನ್ನೆರಡು ಗಂಟೆ. ಆಮೇಲೆ ಮೈಮೇಲೆ ಶಿವ ಬಂದುಬಿಡುತ್ತಿದ್ದ.

ಯಾವ ಹಬ್ಬವೊ ಯಾವ ಜಾತ್ರೆಯೊ ನಮ್ಮ‌ ಮನೆಯಲ್ಲಿ ತೋಟದ ಕೆಲಸ ಮಾತ್ರ ಇದ್ದೇ ಇರುತ್ತಿತ್ತು. ಸಂಜೆಯ ತನಕ ಹೊಲದಲ್ಲೇ ಶಿವರಾತ್ರಿಯನ್ನು ಸ್ವಾಗತಿಸಿ ಮನೆಗೆ ಬಂದು ಸ್ನಾನ ಮಾಡಿ ಉಪ್ಪಿಟ್ಟು, ತಂಬಿಟ್ಟು, ಹೆಸರುಬೇಳೆ ಪಲ್ಯ ತಿಂದು ಜಾಗರಣೆಗೆ ಸಿದ್ಧವಾಗುತ್ತಿದ್ದೆವು. ನಮ್ಮ ಮನೆ ಊರಿನ ಮಾರೀಗುಡಿಯ ಮಗ್ಗುಲಲ್ಲೇ ಇದ್ದುದರಿಂದ ಮಾರೀಗುಡಿಯ ಜಗ್ಗುಲಿ ಶಿವರಾತ್ರಿಗಾಗಿ ಸಿದ್ದಗೊಳ್ಳುತ್ತಿದ್ದ ಪರಿ ಕುತೂಹಲಮಯವಾಗಿರುತ್ತಿತ್ತು.

ರಾತ್ರಿ ಹತ್ತಕ್ಕೆಲ್ಲ ಅಲ್ಲಿ ಊರಿನ ಮುದುಕರು ಯುವಕರೆಲ್ಲ ಸೇರುತ್ತಿದ್ದರು. ಲ್ಯಾಟೀನುಗಳ ವ್ಯವಸ್ಥೆಯಿರುತ್ತಿತ್ತು. ಶಿವರಾತ್ರಿಗೆ ಪಚ್ಚೆ ಆಡುವುದೇ ನಮ್ಮ ಊರಿನ ವೈಶಿಷ್ಟ್ಯ. ನೂರು ಇನ್ನೂರು ರೂಪಾಯಿಗಳ ಒಂಟಿ-ಜೋಡಿ ಪಂದ್ಯಾವಳಿ ಬಹಳಾ ಚುರುಕಾಗಿರುತ್ತಿತ್ತು. ಈ ಹುಣಸೇಬೀಜವನ್ನು ಒಂದು ಭಾಗದಲ್ಲಿ ಚೆನ್ನಾಗಿ ಉಜ್ಜಿ ತೀಡಿ ಬೆಳ್ಳಗೆ ಮಾಡಿರುತ್ತಿದ್ದರು. ಆ ಹುಣಸೇ ಬೀಜಗಳು ತಮಗಿಷ್ಟ ಬಂದ ಹಾಗೆ ಬಿದ್ದರೂ ಅದರಿಂದ ಅದ್ಯಾರ ತೆಕ್ಕೆಗೋ ಗರಿ ಗರಿ ನೋಟು. ಹಣ ಕಳಕೊಂಡವನಿಗೆ ಇನ್ನೊಂದು ಕೈ ನೋಡುವ ಅಭಿಲಾಷೆ. ಪೂರ್ತಿ ಕಳಕೊಂಡವನ ಹ್ಯಾಪ್​ಮೋರೆ. ಪಡೆದುಕೊಂಡವನ ಹಿಗ್ಗು- ಇವನ್ನೆಲ್ಲ ದೂರ ನಿಂತು ನೋಡಿ ಆನಂದಿಸುವುದರಲ್ಲಿ ನನಗೇನೊ ಬಹಳಾ ಖುಷಿ. ನನಗೆ ಹಣ ಬಂದಂತೆ ಹಿಗ್ಗುತ್ತಿದ್ದೆ. ಇಂತಹ ಆಟಗಳನ್ನೆಲ್ಲ ನಮ್ಮ‌ ಮನೆಯಲ್ಲಿ ಕಟುವಾಗಿ ನಿಷಿದ್ಧಿಸಿದ್ದರಿಂದ ಈ ಆಟವನ್ನೂ ದುಷ್ಚಟಗಳ ಸಾಲಿನಲ್ಲೇ ನೋಡುತ್ತಿದ್ದೇನಾದರೂ ಈ ಶಿವರಾತ್ರಿಯ ಒಂದು ದಿನ ಎಲ್ಲ ಮರೆತು ಅರೆಕ್ಷಣ ನೋಡುವ ಮನಸ್ಸಾಗುತ್ತಿತ್ತು. ಆಗೆಲ್ಲ ನನ್ನ ಜೇಬಲ್ಲಿ ಹತ್ತು ರೂಪಾಯಿ ಇದ್ದರೆ ಅದೇ ಹೆಚ್ಚು. ಅದನ್ನೂ ಬೇವಿನಬೀಜಗಳನ್ನು ಆಯ್ದು ಸೇರಿಗೆ ಐದು ರೂಪಾಯಿಯಂತೆ ಮಾರಿದ್ದೊ, ಅಪ್ಪನ ಜೇಬಿನಿಂದ ಎಗರಿಸಿದ್ದೊ ಆಗಿರುತ್ತಿತ್ತು.

ಮನೆಗೆ ಮಾರೀಗುಡಿಯ ಜಗುಲಿಯಲ್ಲಿ ಪಚ್ಚೆ ಆಟ ಪ್ರಾರಂಭವಾಗಿದ್ದು ತಕ್ಷಣ ಗೊತ್ತಾಗುತ್ತಿತ್ತು. ಅಲ್ಲೆಲ್ಲ ಎಲ್ಲಿಯೂ ಸಿಗದ ಸಂಭ್ರಮದ ಕಿಚ್ಚಿರುತ್ತಿತ್ತು. ಯಾರು ಯಾರಿಗೂ ಹೀಗೇ ಮಾತನಾಡಬೇಕೆಂಬ ನಿರ್ಬಂಧಗಳಿರದೇ ಹೆಚ್ಚುಹೆಚ್ಚು ಮೋಜಿರುತ್ತಿತ್ತು. ನಾನು ನಿಂತು ಒಂದೈದು ನಿಮಿಷ ಆಟ ನೋಡಿದೆ. ಆಟ ಬಹಳಾ ಇಷ್ಟವಾಗಿಬಿಟ್ಟಿತು. ಜೇಬಲ್ಲಿರೋ ಹತ್ತು ರೂಪಾಯಿ ಆಚೆ ಬರಲು ಹವಣಿಸುತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಅಲ್ಲಿರುವವರು ಒಂಟಿಜೋಡಿ ಕಟ್ಟಿಕೊಳ್ಳುವಾಗ ನಾನು ನನ್ನಲ್ಲೇ ಈಗ ಒಂಟಿ ಈಗ ಜೋಡಿ ಎಂದು ಅಂದುಕೊಳ್ಳುತ್ತಿದ್ದೆ. ಬಡ್ಡೀಮಗಂದು ನಾನಂದುಕೊಂಡದ್ದೇ ಬೀಳುತ್ತಿತ್ತು. ನಾನು ಈಗ ನೂರು ಕಟ್ಟಿದ್ದರೆ ಎಷ್ಟೊಂದು ದುಡ್ಡು ಬಂದುಬಿಡುತ್ತಿತ್ತಲ್ಲ ಅಂದುಕೊಳ್ಳುತ್ತಿದ್ದೆ. ಹೀಗೆ ಅನೇಕ ಬಾರಿ ಆಯಿತು. ನಾನು ಒಂಟಿ ಅಂದರೆ ಒಂಟಿ. ಜೋಡಿ ಎಂದರೆ ಜೋಡಿ.

ಯೋಚಿಸಿದೆ. ಇರೋ ಹತ್ತು ರೂಪಾಯಿ ಕಟ್ಟೋಣ. ಅಷ್ಟೂ ದುಡ್ಡು ನನಗೇ ಬರುತ್ತದಲ್ಲ ಹೇಗಿದ್ದರೂ ಎಂದು ಧೈರ್ಯ ಮಾಡಿದೆ. ಮುಜುಗರದಲ್ಲೆ ಆಟದ ಬಳಿ ಹೋಗಿ ಪಕ್ಕದಲ್ಲಿ ನಿಂತಿದ್ದ ಗೆಳೆಯ ದಶರಥನಿಗೆ ‘ನಂದೂ ಒಂಟಿ, ಹತ್ತು ರೂಪಾಯಿ ತಗೊ ಎಂದೆ. ಅವನು ಏನೂ ಮಾತಾಡದೆ ನಗುತ್ತಲೇ ಹಣ ಈಸುಕೊಂಡ. ಪಟಾರನೇ ಜೋಡಿ ಬಿದ್ದಿತು. ನನಗೆ ಕನಸೋ ನನಸೋ ತಿಳಿಯದಾಯಿತು. ಕಾದವನ ಹೆಂಡತಿಯನ್ನು ಕಳ್ಳ ಹೊತ್ತುಕೊಂಡು ಹೋದಂತೆ ಅವನ ಜೇಬಲ್ಲಿ ನನ್ನ ಹತ್ತು ರೂಪಾಯಿ ವಿಲೀನವಾಯಿತು. ಏನೊ ಮಾಡಲು ಹೋಗಿ ಏನೋ ಆಯಿತು‌. ನನ್ನ ಮುಖವನ್ನೂ ಅವನು ಮತ್ತೊಮ್ಮೆ ನೋಡಲಿಲ್ಲ. ಮುಖ ಇಳಿಬಿಟ್ಟುಕೊಂಡು ಈ ಆಟವನ್ನು ಅಲ್ಲಗಳೆಯುತ್ತಾ ಮನೆ ಕಡೆಗೆ ಹೆಜ್ಜೆ ಹಾಕಿದೆ. ನನ್ನ ಕೆಟ್ಟ ಶಿವರಾತ್ರಿ ಅದಾಗಿತ್ತು. ಪಂದ್ಯ ಶುರುವಾದಾಗ ಶಿವನನ್ನೂ ಧ್ಯಾನಿಸಿದ್ದೆ. ‘ನಿನ್ನನ್ನೆ ನಂಬಿದ್ದೇನೆ ಶಿವ’ ಅಂದಿದ್ದೆ. ಶಿವ ಕೈಕೊಟ್ಟುಬಿಟ್ಟ. ಹತ್ತು ರೂಪಾಯಿ ಕಿತ್ತುಕೊಂಡುಬಿಟ್ಟ.

ಇದನ್ನೂ ಓದಿ : Maha Shivaratri; ಕಾಯುವನೇ ಶಿವ?: ನೋಡ್ಪಾ ಕವಳೇಶ್ವರಾ ಈ ಭಕ್ತಿಪಿಕ್ತಿ ನಂಗೊತ್ತಿಲ್ಲ ನೀನಂದರ ನನಗ ಪ್ರೀತಿ ಮತ್ತ ಶಕ್ತಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ