Maha Shivaratri; ಕಾಯುವನೇ ಶಿವ?: ಕಣ್ಣು ಬಿಡಡ ಬಿಟ್ರೆ ಮತ್ತೆ ಶುರುವಿನಿಂದ ಮಾಡಕಾಗ್ತು ರಾತ್ರಿ ಎಲ್ಲ ಇಲ್ಲೇ ಕೂರಕ್ಕು ಒಬ್ಬಳೇ

‘ಭಯ ಭಕ್ತಿಯಿಂದ ಅಕ್ಕಾ ಹೇಳಿದಂತೆ, ಸಕ್ಕರೆ ನೀರನ್ನು ಮಾಡುವುದು, ತಂದು ತಂದು ಸುರಿಯುವುದು. ಒಣಗಿಡದ ಮುಂದೆ ಪದ್ಮಾಸನ ಹಾಕಿ ಕುಳಿತು, ಓಂ ನಮಃ ಶಿವಾಯ ಎಂದು ತಪಸ್ಸು ಮಾಡುವುದು. ಮಧ್ಯೆ ಮಧ್ಯೆ ಚಾಕೊಲೇಟ್ ನ ಚಿಗುರು ಅಥವಾ ಮೊಗ್ಗು ಬಂದಿರಬಹುದಾ ಎಂದು ನಿಧಾನಕ್ಕೆ ಒಕ್ಕಣ್ಣಿನಲ್ಲಿ ನೋಡುವುದು. ಕಾಣದಿದ್ದಾಗ ಮತ್ತೆ ಜೋರಾಗಿ ಓಂ ನಮಃ ಶಿವಾಯ ಎಂದು ತಪಸ್ಸು ಮುಂದುವರೆಸುವುದು...' ಸೌಮ್ಯ ಬೀನಾ

Maha Shivaratri; ಕಾಯುವನೇ ಶಿವ?: ಕಣ್ಣು ಬಿಡಡ ಬಿಟ್ರೆ ಮತ್ತೆ ಶುರುವಿನಿಂದ ಮಾಡಕಾಗ್ತು ರಾತ್ರಿ ಎಲ್ಲ ಇಲ್ಲೇ ಕೂರಕ್ಕು ಒಬ್ಬಳೇ
ಸೌಮ್ಯ ಬೀನಾ
Follow us
ಶ್ರೀದೇವಿ ಕಳಸದ
|

Updated on:Mar 11, 2021 | 4:00 PM

ಮತ್ತೊಂದು ಶಿವರಾತ್ರಿಯಲ್ಲಿ ನಾವು ನೀವೆಲ್ಲ. ಕ್ಷಣಕ್ಷಣವೂ ಅಲ್ಲೆಲ್ಲಿಂದಲೋ ಘಂಟೆಗಳ ನಿನಾದ ಕೇಳಿಬರುತ್ತಿರಬಹುದು. ನೂರೆಂಟು ನಾಮಾವಳಿಗಳು ಅನುರಣಿಸುತ್ತಿರಬಹುದು. ಫಲಾಹಾರಗಳು ನಿಮ್ಮೆದುರಿಗಿರಬಹುದು. ಮೈಕುಗಳಿಂದ ನಾಮಸಂಕೀರ್ತನೆಗಳು ತೇಲಿಬರುತ್ತಿರಬಹುದು. ಉರಿಬಿಸಿಲಿನಲ್ಲಿ ಸಾಲಿನಲ್ಲಿ ತುದಿಗಾಲ ಮೇಲೆ ದರ್ಶನಕ್ಕಾಗಿ ನಿಂತಿರಬಹುದು. ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು; ಸತ್ಯ, ಶಕ್ತಿ, ಸೌಂದರ್ಯ ಸ್ವರೂಪನಾದ ಅಚಿಂತ್ಯ ನಿಮ್ಮ ಮನಸ್ಸನ್ನು ಈವತ್ತು ಹೇಗೆ ಆವರಿಸಿಕೊಂಡಿದ್ದಾನೆ, ಈ ಕ್ಷಣದಲ್ಲಿ ತೇಲಿಬಂದ ನೆನಪನ್ನು ಹಂಚಿಕೊಳ್ಳಬಹುದೇ ಎಂದು ‘ಟಿವಿ 9 ಕನ್ನಡ ಡಿಜಿಟಲ್’​ ಕೇಳಿತು. ಆಗ ಹೊಮ್ಮಿದ್ದೇ ‘ಕಾಯುವನೇ ಶಿವ?’ ಸರಣಿ. ಇಲ್ಲಿ ಅವನು ಪುಳಕಗೊಳಿಸಿದ್ದಾನೆ. ಕಳವಳಕ್ಕೆ ದೂಡಿದ್ದಾನೆ, ನಗಿಸಿದ್ದಾನೆ, ವಿಷಾದಕ್ಕೆ ನೂಕಿದ್ಧಾನೆ, ಆಪ್ತವಾಗಿ ಕೈಹಿಡಿದಿದ್ದಾನೆ, ಪ್ರೀತಿಯಿಂದಲೂ ಅಪ್ಪಿದ್ದಾನೆ. ಅನುಭವ ಅರಿವಿನಿಂದ ಮುನ್ನಡೆಸಿದ್ದಾನೆ. 

ಪರಿಕಲ್ಪನೆ: ಶ್ರೀದೇವಿ ಕಳಸದ

ಅಕ್ಕ ಹೇಳಿದಂತೆ, ಒಣತುಳಸೀಗಿಡದ ಮುಂದೆ ಕುಳಿತು ಓಂ ನಮಃ ಶಿವಾಯ ಹೇಳಿದ ಬೆಂಗಳೂರಿನ ಚಿತ್ರಕಲಾವಿದೆ ಸೌಮ್ಯ ಬೀನಾ ಅವರಿಗೆ ಶಿವ ಚಾಕೊಲೇಟ್ ಕೊಟ್ಟನಾ?

ಬಾಲ್ಯದಲ್ಲಿ ಈಶ್ವರನ ಸಾಕ್ಷಾತ್ಕಾರವಾಗಿದ್ದು ಹಿರಿಯರ ಕಥೆಗಳಿಂದ ಮತ್ತು ಟಿವಿಗಳಿಂದ.  ‘ಓಂ ನಮಃ ಶಿವಾಯ’ ಎಂದು ಕಠಿಣವಾಗಿ ತಪಸ್ಸು ಮಾಡಿದರೆ ಋಷಿಮುನಿಗಳ ಅಭಿಲಾಷೆಗಳು ನೆರವೇರುವುದನ್ನು ನೋಡಿ, ಆಶ್ಚರ್ಯಪಡುತ್ತಿದ್ದೆವು. ಎಂತೆಂತಹ ಬಲಶಾಲಿ ದೇವರುಗಳೂ ಸಂಕಟ ಬಂದಾಗ ಈಶ್ವರನ ಬಳಿ ಸಹಾಯ ಬೇಡಿ ಹೋಗುವ ಹಲವು ದೃಷ್ಟಾಂತಗಳನ್ನು ಕಥೆಗಳಲ್ಲಿ ಕೇಳಿ ನೋಡಿದವರಿಗೆ, ‘ಹೌದಪ್ಪ, ಇಂವ ದೇವಾಧಿದೇವ’ ಎಂಬ ನಂಬಿಕೆ ಬಲವಾಗಿ ಬೇರೂರಿತ್ತು. ನಮ್ಮ ಅದೆಷ್ಟೋ  ಹರಸಾಹಸದ ಆಟಗಳಿಗೂ ‘ಓಂ ನಮಃ ಶಿವಾಯ’ ವೇ ಶಕ್ತಿ ಮತ್ತು ಧೈರ್ಯದ ಮೂಲಮಂತ್ರವಾಗಿತ್ತು.

ಅಕ್ಕ ನನಗಿಂತ ಮೂರು ವರ್ಷ ಹಿರಿಯಳು. ಚಿಕ್ಕವರನ್ನು ನಂಬಿಸಿ ಆಟವಾಡವಾಡುವುದು ಹಿರಿಯ ಮಕ್ಕಳ ಜನ್ಮಸಿದ್ಧ ಹಕ್ಕು. ಮಹಾಶಿವರಾತ್ರಿ ಸಮಯದಲ್ಲೆಲ್ಲ, ಟಿವಿಯಲ್ಲಿ ಶಿವನ ಕುರಿತಾದ ಕಾರ್ಯಕ್ರಮ-ಸಿನಿಮಾಗಳೇ ನೋಡಲು ಸಿಗುತ್ತಿದ್ದರಿಂದ, ತಪಸ್ಸು ಮಾಡಿದರೆ ಏನಾದರೂ ಸಿಗುತ್ತದೆ ಎಂಬುದು ನಮ್ಮಲ್ಲಿ ಅಚ್ಚರಿಯುಂಟು ಮಾಡಿತ್ತು. ಹೀಗಿರುವಾಗ ಒಂದು ಮಹಾಶಿವರಾತ್ರಿ ದಿನ ನಮ್ಮ ಅಕ್ಕ ಉಪಾಯವೊಂದನ್ನು ಹೂಡಿದಳು. ಒಣಗಿದ ತುಳಸೀಗಿಡವನ್ನು ಕಿತ್ತು, ಮತ್ತೆ ನೆಟ್ಟು ಮಣ್ಣೂರಿದಳು. ನನ್ನನ್ನು ಕರೆದು, ‘ನೋಡೇ, ಈ ಗಿಡಕ್ಕೆ ದಿನಕ್ಕೆ ಮೂರು ಸಲ ಸಕ್ಕರೆ ನೀರನ್ನು ಎರೆದು, ಅದರೆದುರು ಕೂತು ತಪಸ್ಸು ಮಾಡಿದರೆ ಈ ಗಿಡದಲ್ಲಿ ಚಾಕೊಲೇಟ್ ಬಿಡುತ್ತದೆ’ ಅಂದಳು. ಮನಸ್ಸಿನಲ್ಲಿ ಗುಮಾನಿಯೊಂದು ಹುಟ್ಟಿದ್ದರೂ, ಚಿಕ್ಕವಳಾದ್ದರಿಂದ, ಈಶ್ವರನ ಕಥೆಗಳನ್ನು ಕನಸು ಮನಸ್ಸಿನಲ್ಲೂ ನೆನೆಸಿಕೊಳ್ಳುತ್ತಿದ್ದವಳಿಗೆ, ಅದರಲ್ಲೂ ಹುಟ್ಟಿ ಬರುವುದು ‘ಚಾಕೊಲೇಟ್’ ಎಂದರೆ ಹೇಗಿರಬೇಡ? ಭಯ ಭಕ್ತಿಯಿಂದ ಅಕ್ಕಾ ಹೇಳಿದಂತೆ, ಸಕ್ಕರೆ ನೀರನ್ನು ಮಾಡುವುದು, ತಂದು ತಂದು ಸುರಿಯುವುದು. ಒಣಗಿಡದ ಮುಂದೆ ಪದ್ಮಾಸನ ಹಾಕಿ ಕುಳಿತು, ‘ಓಂ ನಮಃ ಶಿವಾಯ’ ಎಂದು ತಪಸ್ಸು ಮಾಡುವುದು. ಮಧ್ಯೆ ಮಧ್ಯೆ ಚಾಕೊಲೇಟ್ ನ ಚಿಗುರು ಅಥವಾ ಮೊಗ್ಗು ಬಂದಿರಬಹುದಾ ಎಂದು ನಿಧಾನಕ್ಕೆ ಒಕ್ಕಣ್ಣಿನಲ್ಲಿ ನೋಡುವುದು. ಕಾಣದಿದ್ದಾಗ ಮತ್ತೆ ಜೋರಾಗಿ ‘ಓಂ ನಮಃ ಶಿವಾಯ’ ಎಂದು ತಪಸ್ಸು ಮುಂದುವರೆಸುವುದು…

shivaratri special

ಉಗ್ರತಪಸ್ಸಿನ ಸೂತ್ರಧಾರಿಣಿ ಸುಮಕ್ಕನೆಂಬ ಪುಕ್ಕದೊಂದಿಗೆ ತಂಗಿ ಸೌಮ್ಯ

ಉಂಹೂ… ಮಧ್ಯಾಹ್ನ ಆದರೂ, ಯಾಕೋ ತಪಸ್ಸು ವರ್ಕ್ ಆಗುತ್ತಲೇ ಇರಲಿಲ್ಲ. ‘ಕಠಿಣ ತಪಸ್ಸು ಮಾಡಬೇಕು ನೀನು, ಹಿಂಗೆಲ್ಲ ಸುಮ್ಮನೆ ಕೂತು ಓಂ ನಮಃ ಶಿವಾಯ ಅಂದ್ರೆ ಈಶ್ವರನಿಗೆ ಗೊತ್ತೂ ಆಗದಿಲ್ಲೆ’ ಅನ್ನೋ ಅಕ್ಕನ ಒತ್ತಿಕೆ ಮಾತು ಬೇರೆ. ಅದೆಷ್ಟೋ ಜನ ತಮ್ಮ ಇಷ್ಟಾರ್ಥಗಳಿಗೆ ಈಶ್ವರನ ಕುರಿತು ತಪಸ್ಸು ಮಾಡುತ್ತಿರುತ್ತಾರೆ, ಅವರೆಲ್ಲರಿಗಿಂತ ‘ಕಠಿಣ’ ತಪಸ್ಸು ಮಾಡಿ, ಅವನ ಗಮನ ನನಗೆ ಚಾಕೊಲೇಟ್ ನೀಡುವ ಕಡೆಗೆ ತರಬೇಕಾದ ಮಹತ್ತರ ಜವಾಬ್ಧಾರಿಯ ಅರಿವು ನನಗಾಗಿ, ತೆಂಗಿನ ಮರದ ನೆರಳಲ್ಲಿ ಆರಾಮಾಗಿ ಕೂತು ತಪಸ್ಸು ಮಾಡಿದರೆ ವರ್ಕ್ ಆಗ್ಲಿಕ್ಕಿಲ್ಲ ಎಂದು, ಬಿಸಿಲು ಯಾವ ಕಡೆ ಜಾರುತ್ತಿತ್ತೋ ಆ ಕಡೆಗೆ ಓಡಿ ಹೋಗಿ ಕುಳಿತು ‘ಉರಿ ಬಿಸಿಲಲ್ಲಿ’ ತಪಸ್ಸು ಮಾಡುವ ಪ್ಲ್ಯಾನ್ ಮಾಡಿದೆ. ‘ಉಗ್ರ ತಪಸ್ಸು’ ಅದು. ನೆತ್ತಿ ಸುಡಲಾರಂಭಿಸಿತು, ಹೊಟ್ಟೆ ಚುರುಗುಡುತ್ತಿತ್ತು. ಕಣ್ಣು ಬಿಸಿಲಿನ ಝಳಕ್ಕೆ ಪ್ರಯತ್ನ ಪಡದಿದ್ದರೂ ಮುಚ್ಚಿಕೊಂಡಿತ್ತು. ಬಿಸಿಲಲ್ಲಿ ಕುಳಿತು ತಪಸ್ಸು ಮಾಡುವ ನನ್ನ ಭಕ್ತಿಗೆ, ಕರುಣೆ ಉಕ್ಕಿ, ಅಕ್ಕಾ ‘ಅಡ್ಡಿಲ್ಲೆ ಸ್ಟ್ರಾಂಗ್ ತಪಸ್ಸು ಮಾಡ್ತಾ ಇದ್ದೆ, ಯಾವುದೇ ಕಾರಣಕ್ಕೂ ಕಣ್ಣು ಬಿಡಡ, ಬಿಟ್ರೆ ಮತ್ತೆ ಶುರುವಿನಿಂದ ಮಾಡಕಾಗ್ತು. ರಾತ್ರಿ ಎಲ್ಲ ಇಲ್ಲೇ ಕೂರಕ್ಕು ಒಬ್ಬಳೇ’ ಎಂಬ ಅಶರೀರ ವಾಣಿಯ ವಾರ್ನಿಂಗ್ ಕೊಟ್ಟು, ತುಳಸಿ ಕೊಂಬೆಗಳಿಗೆಲ್ಲ ಮೊದಲೇ ರೆಡಿ ಮಾಡಿಟ್ಟು ಕೊಂಡಿದ್ದ ದಾರ ಕಟ್ಟಿದ್ದ ಕೇಸರಿ ಪೆಪ್ಪರುಮೆಂಟುಗಳನ್ನು ಗಿಡದ ತುಂಬಾ ಪ್ರಸಾದವಾಗಿಸಿದಳು. ಮತ್ತೆ ಜೋರಾಗಿ ಕೂಗಿ ಕರೆದು, ‘ಸೌಮ್ಯ ನೋಡಿಲ್ಲಿ… ಈಶ್ವರ ನಿನ್ನ ತಪಸ್ಸಿಗೆ ಮೆಚ್ಚಿ ಯಪ್ಪಾ! ಎಂತ ಅದ್ಭುತ ಇದು’ ಎಂದೆಲ್ಲ ಉದ್ಗಾರ ಮಾಡಿ ಕರೆಯಲು, ಕಣ್ಣು ಬಿಟ್ಟ ನನಗೆ ರೋಮಾಂಚನ. ಒಂದು ಕಡೆ ಅಕ್ಕನ ಮೇಲೆ ಅನುಮಾನ ಇದ್ದರೂ, ಸದ್ಯದಲ್ಲಷ್ಟೇ ನೋಡಿದ್ದ ಭಕ್ತ ಮಾರ್ಕಂಡೇಯ ಸಿನಿಮಾದ ಉಳಿಕೆಯಲ್ಲಿದ್ದವಳಿಗೆ, ಈ ಮ್ಯಾಜಿಕ್ ಕಂಡು ಅತ್ಯಾಶ್ಚರ್ಯ! ಖುಷಿಯಿಂದ ಕುಣಿದುಬಿಟ್ಟಿದ್ದೆ. ಸ್ವಲ್ಪ ಹೊತ್ತು ಸಂಪೂರ್ಣ ನಂಬಿಕೊಂಡಿದ್ದವಳಿಗೆ ನಂತರಕ್ಕೆ ಸತ್ಯತೆ ತಿಳಿಸಲಾಗಿತ್ತು ಎನಿಸುತ್ತದೆ. ಆನಂತರಕ್ಕೆ, ಶಿವನ ಕಿಂಕರರಾಗಿ ಅಕ್ಕನ ಕ್ರೈಂ ಪಾರ್ಟನರ್​ಶಿಪ್​ನಲ್ಲಿ ಚಿಕ್ಕಮ್ಮನ ಮಗ, ತಮ್ಮನಿಗೆ ಚಾಕೊಲೇಟ್ ಗಿಡದ ಮಹಿಮೆ ತೋರಿಸಿದ ಅರ್ಧಂಬರ್ಧ ನೆನಪು ಇಂದಿಗೂ ಮಾಸಿಲ್ಲ.

ಶಿವನ ಮೆಚ್ಚಿಸಿ ವರ ಪಡೆಯುವ ಬಗ್ಗೆ ಅಲ್ಲದಿದ್ದರೂ, ಶಿವನೆಂಬ ಶಕ್ತಿಯ ಎದುರು ತಲೆಬಾಗಿ ಭಜಿಸುವುದರಲ್ಲೋ, ಚಿತ್ರ ಬಿಡಿಸುವುದರಲ್ಲೋ, ನಮ್ಮ ನಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳುವುದರಲ್ಲೋ ನಮ್ಮ ಶ್ರದ್ಧೆ ಅಡಗಿದೆ ಭಕ್ತಿ ಅಡಗಿದೆ. ಶಿವ ಸರಳತೆ ಮತ್ತು ನಿಷ್ಕಲ್ಮಶ ಮನಸ್ಸಿನ ಪ್ರತೀಕ; ಆಡಂಬರ ಆಚೆಗಿರಲಿ.

Published On - 3:54 pm, Thu, 11 March 21

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ