Maha Shivaratri; ಕಾಯುವನೇ ಶಿವ?: ನೋಡ್ಪಾ ಕವಳೇಶ್ವರಾ ಈ ಭಕ್ತಿಪಿಕ್ತಿ ನಂಗೊತ್ತಿಲ್ಲ ನೀನಂದರ ನನಗ ಪ್ರೀತಿ ಮತ್ತ ಶಕ್ತಿ

‘ನಾವ ಹೋಗಿದ್ ಜಾಗಾದ ಹೆಸರು ಕವಳ. ದಾಂಡೇಲಿ ಹತ್ರ ಇದು ಇರೂದು. ವರ್ಷಕ್ಕ ಒಂದ ಸಲಾ ಮಾತ್ರ ಇಲ್ಲಿ ದರ್ಶನ ಸಿಗ್ತದ. ಅವತ್ತಿನಿಂದ ನಾನು ಬಹುತೇಕ ವರ್ಷ ಬಿಟ್ ವರ್ಷ ಅಲ್ಲಿ ಹೋಗೇನ ಬರ್ತೇನಿ. ಆ ಈಶಪ್ಪ ಅಂದ್ರ ನನಗ ಭಕ್ತಿಗಿಂತ ಪ್ರೀತಿ. ಮನಸಿಗೆ ಹಿತಾ ಅನ್ನಸ್ತದ. ಅಪ್ಪ ಅಮ್ಮ ಇಬ್ಬರ್ನೂ ಕಳಕೊಂಡ ನಮಗ ನಾವಷ್ಟ ಜೀವನಾ ಸಾಗಿಸಿದ್ದು ಅವತ್ತಿನ ಕಾಲಕ್ಕ ಸುಲಭ ಇರ್ಲಿಲ್ಲ. ಆಗಿಂದ ಈಗಿನತನಕಾನೂ ನಮ್ಮೊಳಗ ಶಕ್ತಿ ತುಂಬತಿರೂವ್ನೂ ಅವನ.‘ ವಿಜಯಾ ಕುಲಕರ್ಣಿ

Maha Shivaratri; ಕಾಯುವನೇ ಶಿವ?: ನೋಡ್ಪಾ ಕವಳೇಶ್ವರಾ ಈ ಭಕ್ತಿಪಿಕ್ತಿ ನಂಗೊತ್ತಿಲ್ಲ ನೀನಂದರ ನನಗ ಪ್ರೀತಿ ಮತ್ತ ಶಕ್ತಿ
ಕವಳದ ಈಶಪ್ಪನೊಂದಿಗೆ ವಿಜಯಾ
Follow us
ಶ್ರೀದೇವಿ ಕಳಸದ
|

Updated on:Mar 11, 2021 | 1:15 PM

ಮತ್ತೊಂದು ಶಿವರಾತ್ರಿಯಲ್ಲಿ ನಾವು ನೀವೆಲ್ಲ. ಕ್ಷಣಕ್ಷಣವೂ ಅಲ್ಲೆಲ್ಲಿಂದಲೋ ಘಂಟೆಗಳ ನಿನಾದ ಕೇಳಿಬರುತ್ತಿರಬಹುದು. ನೂರೆಂಟು ನಾಮಾವಳಿಗಳು ಅನುರಣಿಸುತ್ತಿರಬಹುದು. ಫಲಾಹಾರಗಳು ನಿಮ್ಮೆದುರಿಗಿರಬಹುದು. ಮೈಕುಗಳಿಂದ ನಾಮಸಂಕೀರ್ತನೆಗಳು ತೇಲಿಬರುತ್ತಿರಬಹುದು. ಉರಿಬಿಸಿಲಿನಲ್ಲಿ ಸಾಲಿನಲ್ಲಿ ತುದಿಗಾಲ ಮೇಲೆ ದರ್ಶನಕ್ಕಾಗಿ ನಿಂತಿರಬಹುದು. ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು; ಸತ್ಯ, ಶಕ್ತಿ, ಸೌಂದರ್ಯ ಸ್ವರೂಪನಾದ ಅಚಿಂತ್ಯ ನಿಮ್ಮ ಮನಸ್ಸನ್ನು ಈವತ್ತು ಹೇಗೆ ಆವರಿಸಿಕೊಂಡಿದ್ದಾನೆ, ಈ ಕ್ಷಣದಲ್ಲಿ ತೇಲಿಬಂದ ನೆನಪನ್ನು ಹಂಚಿಕೊಳ್ಳಬಹುದೇ ಎಂದು ‘ಟಿವಿ 9 ಕನ್ನಡ ಡಿಜಿಟಲ್’​ ಕೇಳಿತು. ಆಗ ಹೊಮ್ಮಿದ್ದೇ ‘ಕಾಯುವನೇ ಶಿವ?’ ಸರಣಿ. ಇಲ್ಲಿ ಅವನು ಪುಳಕಗೊಳಿಸಿದ್ದಾನೆ. ಕಳವಳಕ್ಕೆ ದೂಡಿದ್ದಾನೆ, ವಿಷಾದಕ್ಕೆ ನೂಕಿದ್ಧಾನೆ, ಆಪ್ತವಾಗಿ ಕೈಹಿಡಿದಿದ್ದಾನೆ, ಪ್ರೀತಿಯಿಂದಲೂ ಅಪ್ಪಿದ್ದಾನೆ. ಅನುಭವ ಅರಿವಿನಿಂದ ಮುನ್ನಡೆಸಿದ್ದಾನೆ. 

ಪರಿಕಲ್ಪನೆ: ಶ್ರೀದೇವಿ ಕಳಸದ

ಧಾರವಾಡದ ವಿಜಯಾ ಕುಲಕರ್ಣಿ ಅವರು ಈಶನೆಂಬ ಅಚ್ಚರಿ ತಮ್ಮನ್ನು ಎಲ್ಲಿಂದೆಲ್ಲಿಗೆ ಕರೆದುಕೊಂಡು ಹೋಯಿತು ಎನ್ನುವುದನ್ನು ಇಲ್ಲಿ ಹಂಚಿಕೊಂಡಿದ್ಧಾರೆ.

1999 ನೇ ಇಸ್ವಿ, ನಾವಿದ್ದಿದ್ದು ಧಾರವಾಡದ ಹೊಸಯಲ್ಲಾಪುರದ ಲಕ್ಕಮನಹಳ್ಳಿ ಓಣಿಯೊಳಗ. ಅಪ್ಪ ಅಮ್ಮ ಲಗೂನ ದೇವರ ಕಡೆ ಮುಖ ಮಾಡಿದ್ರು. ದಾನಪ್ಪನವರು ಎಂಬವರ ಮನಿಯೊಳಗ ಬಾಡಗೀಗೆ ನಾವು ಮೂರೂ ಮಂದಿ ಅಕ್ಕ ತಂಗಿ ಇರತಿದ್ದೆವು, ಅಕ್ಕ ಬಿಜಾಪುರಿನಲ್ಲಿ ಎಂಬಿಬಿಎಸ್ ಕಲಿಯೋದಕ್ಕ ಇದ್ದಳು. ನಾವು ಮೂರು ಹುಡುಗಿಯರು ಅನ್ನೋ ಕಾರಣಕ್ಕ ಮಾಲೀಕರು ನಮ್ಮನ್ನ ಬಹಳ ಕಾಳಜಿಯಿಂದ ನೋಡಕೋತಿದ್ರು. ಆ ವರ್ಷ ಶಿವರಾತ್ರಿ ಹಿಂದಿನ ದಿನ ಹೊರಗಡೆ ಕಟ್ಟಿಮ್ಯಾಲ ಕೂತಾಗ, ಅವ್ವಿ ಉಪಾಸ ಮಾಡತೀರೇನು ಈಶಪ್ಪಂದು ಅಂದ್ರು. ಮಾಡತೇವರೀ ಅಂದೆ. ನಮ್ಮ ಅಮ್ಮ-ಅಪ್ಪ ಇಬ್ಬರ ಮನಿಯೊಳಗೂ ವೈಷ್ಣವ ಸಂಪ್ರದಾಯ, ಆದರೂ ಅಮ್ಮ ಶಿವರಾತ್ರಿ ಉಪವಾಸ ಮಾಡುವ ರೂಢಿ ಇಟ್ಟಿದ್ದರು. ಹಂಗಂದರ ನಾಳೆ ಮುಂಜಾನೆ ಮೂರಕ್ಕೆ ಎಬಸ್ತೇನಿ. ಮೂರೂ ಮಂದಿ ಜಳಕಾ ಮಾಡಿ ರೆಡಿ ಆಗರೀ ಅಂದರು. ಎಲ್ಲಿ ಹೋಗೂದರಿ ಅಂಕಲ್ ಅಂದಾಗ, ಅವರ ಮನಿಯವರು ಮಜಾಕಡೆ ಕರಕೊಂಡ ಹೋಗತೇವಿ ರೆಡಿ ಆಗರೀ ಅಂದರು. ಅಪ್ಪ ಅಮ್ಮ ಹೋದಾಗಿಂದ, ಧಾರವಾಡ ಬಿಟ್ಟು ಹೊರಗಡೆ ಹೋಗಲಾರದ ನಾವು ಅಕ್ಕತಂಗಿ ಭಾರೀ ಉತ್ಸಾಹದಿಂದ ಕರೆಕ್ಟಾಗಿ ಎರಡೂವರಿಗೆ ಎದ್ದು ಸ್ನಾನಾ ಮಾಡಿ ಅವರು ನಮ್ಮ ಮನಿ ಬಾಗಿಲು ಬಡಿಯುವ ಮೊದಲನ ಬಾಗಲಾ ತಗದು ಕಟ್ಟಿ ಮೇಲೇ ಕೂತಿದ್ವಿ.

ನಡುರಾತ್ರಿ ಮೂರು ಹದಿನೈದಕ್ಕ ಟಾಟಾ ಸುಮೋ ಎಂಬ ಅಚ್ಚರಿಯೊಳಗ ನಾವು ಮೂರೂ ಮಂದಿ ಹಿಂದ ಕೂತು, ಎಲ್ಲಿ ನಮ್ಮನ್ನ ಕರ್ಕೊಂಡು ಹೋಗ್ತಿರಬಹುದು ಅಂತ ಗುಸುಗುಸು ಅನ್ಕೋತಿದ್ವಿ. ಅಷ್ಟರಾಗ ಆಂಟೀ, ಮಜಾಕಡೆ ಕರಕೊಂಡ ಹೊಂಟೇವಿ ಅವ್ವಿ ನಿಮಗ ಅಂದಾಗ, ನಮಗ ಮತ್ತೂ ಕುತೂಹಲ. ಹೊರಗ ರಗಡ ಕತ್ತಲ. ಎಲ್ಲ್ಯರ ಕರ್ಕೊಂಡು ಹೋಗ್ತಿರಬಹುದು? ಯಾವ ಊರಿನ ಹಾದಿ ಅಂತಾನೂ ತಿಳೀವಾಲ್ದಾಗಿತ್ತು. ಒಟ್ಟಿನೊಳಗ ನಮಗ ಸರ್​ಪ್ರೈಝ್ ಕೊಡೂದು ಅವರ ಉದ್ದೇಶ. ನನಗಂತೂ ಓಡಾಡೂ ಹುಚ್ಚು. ಕತ್ತಲಿಯೊಳಗ ಏನರ ಆ ಜಾಗಾದ ರಹಸ್ಯ ತಿಳೀತದೇನ ಅಂತ ಹಣಿಕಿ ಹಾಕಿ ನೋಡಿದ್ದ ನೋಡಿದ್ದ. ಏನೂ ಗೊತ್ತಾಗಲಿಲ್ಲ. ನಾಲ್ಕೂ ಐವತ್ತರ ಸುಮಾರು ಸುಮೋ ಹಳಿಯಾಳ ಅನ್ನೋ ಬೋರ್ಡಿನ ಕಡೆ ನಿಂತಿತು. ಎಲ್ಲರೂ ಕೆಳಗಿಳಿದ್ವಿ. ಅವರು ಫ್ಲಾಸ್ಕಿನೊಳಗ ಚಹಾ ತಂದಿದ್ರು. ಲೋಟದೊಳಗ ನಮಗೂ ಹಾಕಿ ಕೊಟ್ಟು ತಾವೂ ಕುಡಿದ್ರು. ಆದ್ರ ಈ ಊರಿಗೆ ಯಾಕ ಕರ್ಕೊಂಬಂದ್ರು ಅಂತ ಗೊತ್ತಾಗಲಿಲ್ಲ. ಆಗಿನ್ನೂ ನನ್ನ ಮದುವೆಯಾಗಿರಲಿಲ್ಲ. ಆದ್ರ ಇದ ಊರಿನ ಹುಡುಗ ನನಗ ಅಪ್ಲೀಕೇಷನ್ ಹಾಕಿ ಕೂತಿದ್ರು. ಅವರಿಗೆ ನನ್ನಿಂದ ಇನ್ನೂ ಉತ್ತರ ಹೋಗಿರಲಿಲ್ಲ. ಆ ಹುಡುಗನ ಊರಿನೊಳಗ ನಿಂತೇನಲ್ಲ ಅಂತ ಉತ್ಸಾಹ, ದುಗುಡ ಎರಡೂ ಶುರುವಾದ್ವು.

ಚಹಾ ಕುಡದ ಮತ್ ಮುಂದ ಹೊಂಟ್ವಿ. ಪೋಣೆ ಆರಾಗಿತ್ತು. ಚುಮು ಚುಮು ಬೆಳಗು. ಮತ್ ಇಣಕಿ ಹಾಕಲಿಕ್ಕೆ ಶುರು ಮಾಡಿದ್ವಿ ನಾವು ಮೂರೂ ಮಂದಿ. ಎಲ್ಲಿ ಹೊಂಟೇವೋ ಅಂತ. ಸೂರ್ಯಾ ಹಗರ್ಕ ಹೊರ ಬಂದ. ಸುತ್ತಾಮುತ್ತಾ ಕಾಡು. ತೇಗದ ಮರ, ಬಿದರಿನ ಗಳ, ಕಾಡುದಾರಿಯೊಳಗ ನಮ್ ಸುಮೋ ಅನ್ನೋ ಅಚ್ಚರಿ ಹೊಂಟಿತ್ತು. ನಮ್ಮ ಬೆರಗಂತೂ ಮಾತಲ್ಲಿ ಹೇಳೂವಂಥದ್ದಲ್ಲ. ಬಹುಶಃ ಅದ ಮೊದಲು ನಾವು ದಟ್ಟ ಕಾಡು ಕಂಡದ್ದು. ಖುಷೀನ ಖುಷಿ. ಅಂಕಲ್ ಎಲ್ಲಿ ಹೊಂಟೇವಿ ಈಗರ ಹೇಳ್ರಲಾ ಅಂದ್ವಿ. ತಡೀರೀ ತಡೀರೀ, ಕಾಡ ಎಷ್ಟ ಛಂದದ ನೋಡರೀ ಅಂದರು. ಎತ್ತರೆತ್ತರ ಮರಾ, ಅದರೊಳಗಿಂದ ಹಾದ ಬರೂ ಸೂರ್ಯಾನ ಕಿರಣಾ, ಮರಕ್ಕ ಅಪ್ಕೊಂಡ ಬಳ್ಳಿಗೋಳು, ನಮ್ಮ ಕೊನೀ ತಂಗ್ಯಂತೂ ಕುಂತಲ್ಲೇ ಕುಣದಾಡಿಬಿಟ್ಲು. ಕೊನೀಗೆ ಸುಮೋ ಕಾಡಿನ ನಟ್ಟನಡಕ್ಕ ನಿಂತಿತು. ಆಜು ಬಾಜು ಬಹಳ  ಗಾಡಿಗಳು ಇದ್ವು. ಸಿನೆಮಾದೊಳಗ ಮುಗಿಲಿನ ಎತ್ತರದ ಮರ, ದಟ್ಟಅಡವಿ ನೋಡ್ತಿದ್ವಿ. ಈಗಂತೂ… ಆಂಟೀ ನಮ್ಮನ್ನೆಲ್ಲ ಅವಸರದಿಂದ ಕರ್ಕೊಂಡು ಹೋದ್ರು. ಬಿಸಲೇರೂದರೊಳಗ ದರ್ಶನ ಆಗಬೇಕು ಅಂತ. ಕಾಡಿನ್ಯಾಗ ಈಶಪ್ಪ!? ಅಂದೆ.  ಹೌದು ಬರೇ ಎಂಟ ಕಿ.ಮೀ. ಮತ್ ಮ್ಯಾಲ 375 ಮೆಟ್ಟಲಾ ಹತ್ತಬೇಕು ಮತ್ ಇಳೀಬೇಕು ಅಂದ್ರು. ಆರೂವರೀಗೆ ನಡೀಲಿಕ್ಕೆ ಶುರು. ವಯಸ್ಸು ಹುಮ್ಮಸ್ಸು ಎರಡೂ ಇದ್ದಿದ್ದರಿಂದ ಆಯಾಸನ್ನೂದ ಇರಲಿಲ್ಲ ನಮಗ. ಜೇನುಗೂಡು, ಬಳ್ಳಿ, ಹೂ, ಝರೀ, ನಡಕ್ಕ ಕಾಲುದಾರಿ ಸವೆದಿದ್ದ ಗೊತ್ತಾಗಲಿಲ್ಲ. ಕೊನೆಯ ಮೆಟ್ಟಿಲವರೆಗೂ ಮಂದಿ ಪಾಳೆ ಹಚ್ಚಿ ನಿಂತಿದ್ರು ನಾವು ಮ್ಯಾಲ ಹತ್ತಿ ನಿಂತಾಗ. ಭಾವಪರವಶರಾದ ಮಂದಿ ಓಂ ನಮಃ ಶಿವಾಯ ಓ೦ ನಮಃ ಶಿವಾಯ. ನಾವೂ ಅಂದು ಸಂಭ್ರಮಿಸಿದ್ವಿ.

ಮಾಲಕರ ಅಂಕಲ್ -ಆಂಟಿ ಇಬ್ಬರೂ ಹೆಂಗದ ಮಜಾ ಜಾಗ ಅಂದರು. ಮಸ್ತರೀ ಅಂದ್ವಿ. ಮೆಟ್ಟಲಾ ಇಳೀತಿದ್ದಂಗ ಕಣ್ಣ ಮುಂದ  ಬೃಹದಾಕಾರದ ಗುಹಾ. ಭಾರೀ ಆಶ್ಚರ್ಯ ಅನ್ನಿಸ್ತು. ಸಿನೆಮಾದಾಗಿನ ದೃಶ್ಯ ನೋಡಿದಂಗಿತ್ತು. ರಮ್ಯ ರಮಣೀಯ. ತೊಂಬತ್ತು ಡಿಗ್ರೀಯೊಳಗ ಬಾಗಿಕೊಂಡ ಗುಹೆಯೊಳಗ ಹೋದ್ವಿ. ಬಾಗಿದಷ್ಟೂ ನಮಗ ಆಕಾಶ ಮೂರೇ ಗೇಣು ಅನ್ನಿಸ್ತಿತ್ತು. ಅಷ್ಟ್ ಖುಷೀ. ಹತ್ತನಿಮಿಷದೊಳಗೆ ನಮ್ಮಷ್ಟನ ಎತ್ತರ ಇದ್ದ ಈಶ್ವರನ ಲಿಂಗಕ್ಕೆ ಧನ್ಯತಾದಿಂದ ಕೈಮುಗದ್ವಿ. ಆವತ್ ನಾವು ಅಗದೀ ಭಾವುಕರಾದ್ವಿ. ಮನೆಯ ಮಾಲೀಕರು ಎಂದೂ ಕಾಣಲಾರದ ಕಾಡಿನ ನಡಕ್ ಇರೋ ಮತ್ತ ನಾವು ನಂಬಿರೋ ಈಶಪ್ಪನ ದರ್ಶನ ಭಾಗ್ಯ ಒದಗೀಸಿದ್ರು. ಗುಹಾದಿಂದ ಹೊರ ಬಂದಾಗ ಆಂಟೀನ್ನ ತಬ್ಬಿಕೊಂಡ್ವಿ. ನಮ್ಮ ನಡಕ್ಕ ಮಾತಿರಲಿಲ್ಲ.

ಅಂದಹಂಗ ನಾವ ಹೋಗಿದ್ ಜಾಗಾದ ಹೆಸರು ಕವಳ. ದಾಂಡೇಲಿ ಹತ್ರ ಇದು ಇರೂದು. ವರ್ಷಕ್ಕ ಒಂದ ಸಲಾ ಮಾತ್ರ ಇಲ್ಲಿ ದರ್ಶನ ಸಿಗ್ತದ. ಅವತ್ತಿನಿಂದ ನಾನು ಬಹುತೇಕ ವರ್ಷ ಬಿಟ್ ವರ್ಷ ಅಲ್ಲಿ ಹೋಗೇನ ಬರ್ತೇನಿ. ಆ ಈಶಪ್ಪ ಅಂದ್ರ ನನಗ ಭಕ್ತಿಗಿಂತ ಪ್ರೀತಿ. ಮನಸಿಗೆ ಹಿತಾ ಅನ್ನಸ್ತದ. ಅಪ್ಪ ಅಮ್ಮ ಇಬ್ಬರ್ನೂ ಕಳಕೊಂಡ ನಮಗ ನಾವಷ್ಟ ಜೀವನಾ ಸಾಗಿಸಿದ್ದು ಅವತ್ತಿನ ಕಾಲಕ್ಕ ಸುಲಭ ಇರ್ಲಿಲ್ಲ. ಆಗಿಂದ ಈಗಿನತನಕಾನೂ ನಮ್ಮೊಳಗ ಶಕ್ತಿ ತುಂಬತಿರೂವ್ನೂ ಅವನ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ನೌಕರಿ ಮಾಡೂ ಜಗಾದಾಗ ಎಂದೂ ಮನಿ ಪರಿಸ್ಥಿತಿ ಹೇಳಬಾರದರೀ

Published On - 1:04 pm, Thu, 11 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ