ನುಗ್ಗಿಬಂದ ವಿಶ್ವ ಪಾಸ್​ ಫೇಲ್​ ದಿನದ ನೆನಪು ಮತ್ತು ಹುಂಡುಕೋಳಿ ಶಭಿ ಕಥೆ

| Updated By: ಶ್ರೀದೇವಿ ಕಳಸದ

Updated on: Apr 24, 2022 | 11:32 AM

Birds : ಅವುಗಳನ್ನ ಹಿಡಿಬೇಕು ಅಂದ್ರೆ ಶಭಿ ಹಾಕ್ಬೇಕು. ಈ ಶಭಿಯಲ್ಲಿ ಎರಡು ಟೈಪ್​. ಒಂದು ದೊಡ್ಡ ಶಭಿ ಇನ್ನೊಂದು ಸಣ್ಣ ಶಭಿ. ಗಟ್ಟಿಯಾದ ಮರ ಅಥವಾ ಕಂಬವನ್ನು ಬಾಗಿಸಿ ಈ ಶಭಿ ಕಟ್ಟಿ ಹಕ್ಕಿಯ ತಲೆಯಷ್ಟೇ ನುಸುಳುವಂತೆ ಹಗ್ಗವನ್ನು ಕುಣಿಕೆಗೆ ಹಾಕಿಡುವುದು.

ನುಗ್ಗಿಬಂದ ವಿಶ್ವ ಪಾಸ್​ ಫೇಲ್​ ದಿನದ ನೆನಪು ಮತ್ತು ಹುಂಡುಕೋಳಿ ಶಭಿ ಕಥೆ
ನಿತಿನ್ ಶೆಟ್ಟಿ, ಕುಂದಾಪುರ
Follow us on

Memories of Childhood : ಕರಾವಳಿಯ ಉಡುಪಿ ಸಮೀಪದ ಪುಟ್ಟ ಊರು ನನ್ನದು. ನಮ್ಮ ಕುಂದಾಪುರ ತಾಲೂಕನ್ನು ಬಡಗು ದೇಶ ಎನ್ನುವ ವಾಡಿಕೆಯು ಇದೆ. ಬಾಲ್ಯದ ನೆನಪಿನ ಜೋಳಿಗೆ ತುಂಬಿಸಿದ್ದು ಇದೇ ಪುಟ್ಟ ಹಳ್ಳಿ. ಶಾಲೆಯಿಂದ ಮನೆಗೆ ಸುಮಾರು 5 ಮೈಲಿ. ಆಕಾಶವಾಣಿ ಮಂಗಳೂರು ಎನ್ನುವ ಸ್ವರದೊಂದಿಗೆ ಶುರುವಾದ ನಂಟು, FM ನಲ್ಲಿ ಸಕತ್ hot ಮಗಾ ಎನ್ನುವಾಗ ಮುಗಿಯುತಿತ್ತು. ಟಿವಿ, ಸಿನೆಮಾ, ಬಾಲ ಮಾಸಪತ್ರಿಕೆಗಳ ಆರಂಭದ ನೆನಪು ಒಂಚೂರು ಕದಲಿಸದಂತಿದೆ. ಮನೆಯಲ್ಲಿ ‘ಹೋಯಿ ಬಾ’ ಅನ್ನುವುದು ಟಾಟಾ ಬಾಯ್ ಬಾಯ್ ಅನ್ನುವಷ್ಟರ ಮಟ್ಟಿಗಂತೂ ಬದಲಾಗಿತ್ತು. ಏಪ್ರಿಲ್ 10 ಶಾಲಾ ವಿದ್ಯಾರ್ಥಿಗಳ ವಿಶೇಷ ದಿನ. ವಿಶ್ವ ಪಾಸ್ ಫೇಲ್ ದಿನ ಅನ್ನುವಷ್ಟು ಮಟ್ಟಿಗೆ ಫೇಮಸ್. ದುಗುಡದ ನಡುವೆ ಎರಡು ಖುಷಿ ಅವಾಗ, ಒಂದು ಬೇಸಿಗೆ ರಜೆ ಮತ್ತೆ ಅತೀ ಹೆಚ್ಚು ಚಾಕೋಲೇಟ್ ಕೊಂಡುಕೊಳ್ಳುವಿಕೆ. ಆ ಹೊತ್ತಿನ ದಿನಚರಿ ಮುಗಿಸಿ ಓಡಿಬಂದು ದೀರ್ಘ ನಿಟ್ಟುಸಿರು ಬಿಟ್ಟಾಗ ಅದೇನೋ ಖುಷಿ. ಮಾರನೇ ದಿನದಿಂದ ಶುರು ಎಕ್ಸ್ಟ್ರಾ ಟ್ಯಾಲೆಂಟ್​ನ ಡೇರ್​ಫುಲ್ ಮತ್ತು ಸುಂದರ ಕಥಾಹಂದರಗಳು. ಅದರಲ್ಲಿ ಒಂದು ಹಕ್ಕಿ ಜೊತೆ ನನ್ನ ಕಥೆ.
ನಿತಿನ್ ಶೆಟ್ಟಿ, ಕುಂದಾಪುರ 

 

ಹುಂಡುಕೋಳಿ ಹಕ್ಕಿ ಇದು ನಮ್ಮ ಕರಾವಳಿ ಕಡೆ ಹೇಳುವ ಒಂದು ಜಾತಿ ಪಕ್ಷಿ. ಹೆಸರಲ್ಲೇ ಇರುವ ಹಾಗೆ ಕೋಳಿ ಪ್ರಭೇದಗಳಲ್ಲಿ ಒಂದು. ಮೈಮೇಲೆ ಹುಂಡು (ಚುಕ್ಕಿ ಚುಕ್ಕಿ) ಇರುದ್ರಿಂದ ಹಾಗೆ ಕರೆಯುತ್ತಾರೇನೋ ಗೊತಿಲ್ಲ. ಸಾಮಾನ್ಯ ಕೋಳಿಗಳಿಗಿಂತ ವೇಗವಾಗಿ ಓಡುತ್ತವೆ ಮತ್ತು ಸ್ವಲ್ಪ ಕುಬ್ಜ, ತೀಕ್ಷ್ಣ ಗ್ರಹಿಕೆ. ಬೇಸಿಗೆ ಸಮಯದಲ್ಲಿ ಕಟಾವು ಮಾಡಿದ ಭತ್ತ ತಿನ್ನಲು ತಪ್ಪದೆ ಹಾಜರಿರುತ್ತವೆ. ಎಲ್ಲೋ ಮರದ ಮೇಲೆ ಕುಳಿತರೆ ಹಕ್ಕಿಗಳನ್ನು ಹುಡುಕಬಹುದೇನೋ, ಆದರೆ ಹುಲ್ಲುಗಳ ನಡುವೆ, ಪೊದೆಗಳ ಮಧ್ಯೆ ಅಡಗಿ ಕುಳಿತ ಅವುಗಳನ್ನು ಹುಡುಕಲು ಕಷ್ಟ. ಇವು ಸ್ವಲ್ಪದೂರ ಹಾರಿ, ಸ್ವಲ್ಪ ದೂರ ಓಡಿ ಪೊದೆಗಳಲ್ಲಿ ಮರೆಯಾಗುತ್ತವೆ. ಕೆಲವೊಮ್ಮೆ ಹತ್ತಿರ ಹೋಗುವವರೆಗೂ ಸುಮ್ಮನಿದ್ದು, ತುಂಬಾ ಹತ್ತಿರ ಹೋದಾಗ ಪುರ್ ಎಂದು ಸದ್ದು ಮಾಡಿ ಹಾರುತ್ತವೆ.

ಅದು ಬೇಸಿಗೆ ರಜೆ ಮಟಮಟ ಮಧ್ಯಾಹ್ನ ನಾನು ಮತ್ತು ಸಂಗಡಿಗರು ಏನಾದ್ರೂ ಮಾಡಿ ಆ ಹುಂಡಿಕೋಳಿ ಹಕ್ಕಿನ ಹಿಡಿಬೇಕು ಅಂತ ಪ್ಲ್ಯಾನಿಂಗ್ ಮಾಡಿಬಿಟ್ಟೆವು. ಅವುಗಳನ್ನ ಹಿಡಿಬೇಕು ಅಂದ್ರೆ ಶಭಿ (ಉರುಳು) ಹಾಕ್ಬೇಕು. ಈ ಶಭಿ ಅಲ್ಲಿ ಎರಡು ಟೈಪ್​. ಒಂದು ದೊಡ್ಡ್ ಶಭಿ ಇನ್ನೊಂದು ಸಣ್ಣ (ಅಟ್ಟಿ) ಶಭಿ. ಗಟ್ಟಿಯಾದ ಮರ ಅಥವಾ ಕಂಬವನ್ನು ಬಾಗಿಸಿ ಈ ಉರುಳನ್ನು ಕಟ್ಟಿ ಹಕ್ಕಿಯ ತಲೆಯಷ್ಟೇ ನುಸುಳುವಂತೆ ಹಗ್ಗವನ್ನು ಕುಣಿಕೆಗೆ ಹಾಕಿ ಇಡುವುದು. ಅದರ ಸುತ್ತ ಸ್ವಲ್ಪ ಕಾಳುಗಳನ್ನೆಸೆದು ಅದು ತೋರದ ಹಾಗೆ ಹಸಿರು (ಅಥವಾ ದರಲೆ) ಎಲೆಗಳಿಂದ ಮುಚ್ಚುವುದು. ಇದನ್ನು ನಮ್ಮ ಕರಾವಳಿ ಕಡೆ ದೊಡ್ಡ ಶಭಿ ಅಂತಾರೆ.

ಸಾಮಾನ್ಯವಾಗಿ ಹುಂಡುಕೋಳಿ ಹಕ್ಕಿ ಹಿಡಿಯಲು ಸಣ್ಣ ಶಭಿ ಸಾಕು. ಸಣ್ಣ ದಾರಕ್ಕೆ ಒಂದು ಗಟ್ಟಿಯಾದ ಕೋಲು ಕಟ್ಟಿ, ಪಕ್ಕದಲ್ಲಿ ಎರಡು ಕಬೆ ಕೋಲು ನೆಟ್ಟು 10 -15 ಸೆಂ.ಮೀ ನಷ್ಟು ಗುಂಡಿ ತೋಡಿ ಅದರ ಸುತ್ತ ಬೀಣಿ ಹಗ್ಗದ ಉರುಳು ರೆಡಿ ಮಾಡಿದೆವು. ಸಹಜವಾಗಿ ಕಾಳು ತಿನ್ನಲು ಮುನ್ನುಗ್ಗುವ ಕೋಳಿ ಉರುಳಿನೊಳಗೆ ತಲೆಯಿಟ್ಟು ಓಡಲಾರದೆ, ಬಿಡಿಸಿಕೊಳ್ಳಲಾಗದೆ ಸಿಕ್ಕಿಹಾಕಿಕೊಳ್ಳುತ್ತವೆ. ಎರಡು ಮೂರು ಹಕ್ಕಿಗಳು ಉರುಳಿಗೆ ಸಿಕ್ಕಿದರೂ ಶಭಿ ಸಮೇತ ಕಿತ್ತು ಹಾರುತ್ತಿದ್ದವು. ಸುಮಾರು ಬಾರಿ ಹೀಗೆಯೇ ಪ್ರಯತ್ನಿಸಿ ಸೋಲುವುದೇ ನಮ್ಮ ಕೆಲಸವಾಗಿ ಹೋಗಿತ್ತು.
ನಂತರ ಪ್ಲ್ಯಾನಿಂಗ್​ನಲ್ಲಿ ಕೊಂಚ ಬದಲಾವಣೆ ತಂದ ಮೇಲೆ, ಅಂತೂ ಇಂತೂ ಹಿಡಿದೆಬಿಟ್ಟೆವು. ಇದು ಹುಂಡುಕೋಳಿ ಶಭಿ ಕಥೆ.

ಇದು ಕಳೆದ ಲಾಕ್​ಡೌನ್​ನಲ್ಲಿ ನುಗ್ಗಿಬಂದ ನೆನಪು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Poetry: ಅವಿತಕವಿತೆ; ಲೆಕ್ಕಕ್ಕೆ ಸಿಗದ ಪಾಪದ ಹೂವುಗಳ ಪರಿಮಳದ ನೀರೆಲ್ಲ ನದಿಯಾಗಿ ಹರಿಯುತ್ತಿದೆ

Published On - 11:21 am, Sun, 24 April 22