‘ಅಡುಗೆಮನೆಗೆ ಬೀಗ ಜಡಿದುಬಿಡು’ ಆಕೆಯ ತಾಯಿ ಯಾಕೆ ಹೇಳಿದ್ದಿರಬಹುದು

| Updated By: Digi Tech Desk

Updated on: Mar 15, 2023 | 10:31 PM

Feminism : ಬ್ಯಾಗಿನ ತುಂಬಾ ದುಡ್ಡು, ಎದೆ ತುಂಬಾ ಧೈರ್ಯವಿದ್ದೂ, ಗಂಡ ಬೇಗ ಮನೆಗೆ ಬಾರದಿದ್ದರೆ ತನ್ನ ಸ್ಥೈರ್ಯ, ಚೈತನ್ಯವೇ ಉಡುಗಿ ಹೋದಂತೆ ಮಾಡಿ, ಇದ್ದಬಿದ್ದವರ ಮೇಲೆ ಪ್ರಹಾರವೆಸಗಿ ರಣರಂಪ ಮಾಡುವುದು ಯಾವ ತರಹದ ಸ್ತ್ರೀವಾದ?

‘ಅಡುಗೆಮನೆಗೆ ಬೀಗ ಜಡಿದುಬಿಡು’ ಆಕೆಯ ತಾಯಿ ಯಾಕೆ ಹೇಳಿದ್ದಿರಬಹುದು
Couple
Follow us on

Husband and Wife : ಆಕೆ ದೂರವಾಣಿಯಲ್ಲಿ ಹಾಗೊಂದು ಮಾತು ಕೇಳಬಹುದು ಎಂದು ನಿರೀಕ್ಷಿಸಿರಲಿಲ್ಲ. ‘ನಮ್ಮ ಮನೆಯಲ್ಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ?’ ಈಕೆಗೆ ಗಂಟಲು ಒಣಗಿ ಬಂತು. ಆತ ನನ್ನನ್ನು ಪ್ರೀತಿಸುತ್ತೀಯಾ ಎಂದೂ ಕೇಳಿಲ್ಲ ಮತ್ತು ಹಾಗೆಂದು ಹೇಳಿಯೂ ಇಲ್ಲ. ಆದರೆ ಟೇಕನ್ ಫಾರ್ ಗ್ರ್ಯಾಂಟೆಡ್ ಎನ್ನುವಂತೆ ತೆಗೆದುಕೊಳ್ಳುತ್ತಿದ್ದಾನೆ. ಏನೋ ವಿಚಾರ ಮಾಡುತ್ತಲೇ ಹು ಎಂದಾಕೆಗೆ, ಮತ್ತೊಂದು ಧಿಗಿಕ್ಕಿಸುವ ಮಾತು, ‘ನೀನು ಹೀಗೆಯೇ ಹೊರಗೆ ಓಡಾಡುತ್ತಿರುತ್ತೀಯಾ, ಈ ಸಮಾರಂಭ ಆ ಪಂಕ್ಷನ್ ಅದು ಇದು ಎಂದು, ನನ್ನನ್ನು ನೋಡಿಕೊಳ್ಳುವವರು ಯಾರು?’ ಆಕೆಗೆ ಈ ಮಾತನ್ನು ಕೇಳುತ್ತಲೇ ಆತನ ಬಗ್ಗೆ ಇದ್ದಿದ್ದ ಭಾವನೆಯೇ ಬದಲಾಗಿ ಹೋಯಿತು. ತನ್ನ ಬಗ್ಗೆ ತನ್ನ ಮನೆಯವರ ಬಗ್ಗೆ ಮಾತ್ರ ವಿಚಾರ ಮಾಡುತ್ತಿದ್ದನೇ ಹೊರತು, ಅದರ ಹೊರತಾಗಿ ಏನೂ ಇರುತ್ತಿರಲಿಲ್ಲ. ಆತನನ್ನು ಆಕೆ ವಿಶಾಲ ಸಮುದ್ರ ಎಂದು ತಿಳಿದಿದ್ದಳು, ಇಷ್ಟು ಸಂಕುಚಿತ ಬಾವಿ ಎಂದು ತಿಳಿದ ಕ್ಷಣ ತನ್ನಷ್ಟಕ್ಕೆ ತಾನೇ ಬೆವೆತುಹೋದಳು.

ಆದರೆ ಇದು ತನ್ನ ಅರಿವಿಗೆ ಬಂದ ಆ ಕ್ಷಣದಿಂದ ಆಕೆ ಎಲ್ಲವನ್ನೂ ನಿಲ್ಲಿಸಿದ್ದಳು, ಎಷ್ಟೆಂದರೆ ಪರರಿಗೆಲ್ಲ ಸೋಜಿಗವಾಗುಷ್ಟು! ಯಾವುದೇ ಸಮಾರಂಭದಲ್ಲಿ ಆಕೆ ಗೈರು. ಇನ್ವಿಟೇಶನ್ ಕಾರ್ಡ್​ನಲ್ಲಿ ಆಕೆಯೇ ಹೆಸರಿದ್ದರೂ ಅಲ್ಲಿ ಆಕೆಯ ಅನುಪಸ್ಥಿತಿ. ಕಾಲಿಗೆ ಗೆಜ್ಜೆ ಕಟ್ಟಿದ್ದರೂ ಹೋಗಿ ಕುಣಿಯಲಾರದಂಥ ಪರಿಸ್ಥಿತಿ. ಹೌದು, ಆತ ಆಕೆಯನ್ನು ಆಕೆಯ ಕಾಲನ್ನು ಆಕೆಯ ಕೈಗಳನ್ನು ಮಾತನಾಡಲು ಬಾರದಂತೆ ಬಾಯಿಯನ್ನೂ ಕಟ್ಟಿಹಾಕಿದ್ದ. ಅದು ಆತನೇ ಹೌದಾ? ಅಥವಾ ಆತನ ರೂಪದಲ್ಲಿ ತನ್ನ ಅಸ್ತಿತ್ವವನ್ನೇ ಹಾಳು ಮಾಡಲು ಬಂದ ಗಿಡುಗವಾ? ಎಂಬಂತೆ ಕುಸಿದುಹೋಗಿದ್ದಳು. ತನ್ನ ತಾಯಿಯ ಬಳಿ ಇದನ್ನು ಹಂಚಿಕೊಂಡಾಗ, ‘ನನಗೆ ಈ ಗಂಡಸರ ಬುದ್ಧಿ ಗೊತ್ತು. ನೀನು ಜೀವನದಲ್ಲಿ ಅಡುಗೆಮನೆಗೆ ಬೀಗವನ್ನು ಜಡಿದುಬಿಡಬೇಕು. ಅಡುಗೆ ಮಾಡುವವರನ್ನು ನಾನು ನೇಮಿಸುತ್ತೇನೆ.’ ಯಾವ ತಾಯಿಯೂ ಮಗಳಿಗೆ ಹೀಗೆ ಹೇಳುವುದಿಲ್ಲ. ಆದರೆ ಆಕೆ ಹೇಳಿದ್ದಳು.

ಇತ್ತ ತಾಯಿಯೂ ಆಕೆಯನ್ನು ಕಟ್ಟಿ ಹಾಕಿದ್ದಳು, ಆಕೆಯ ಕಾಲನ್ನು, ಕೈಗಳನ್ನು, ಬಾಯಿಯನ್ನು ಕೂಡ. ಒಂದು ಕಡೆ ವಿಶಾಲ ಸಮುದ್ರವೆಂದು ತಿಳಿದುಕೊಂಡಿದ್ದ ಸಂಕುಚಿತ ಹುಡುಗ. ಇನ್ನೊಂದು ಕಡೆ ಸ್ತ್ರೀವಾದಿತನದ ಬಗ್ಗೆ ಹುಸಿಪ್ರಭಾವಕ್ಕೊಳಪಟ್ಟ ತಾಯಿ.

ಆಕೆಗೆ ಎಲ್ಲರಿಂದ ಪ್ರಶ್ನೆಗಳ ಮೇಲೆ ಪ್ರಶ್ನೆಗಳು! ‘ಹೇ ಏಕೆ ನೀನು ನಿನ್ನೆ ಡ್ಯಾನ್ಸ್ ಕ್ಲಾಸಿಗೆ ಬರಲೇ ಇಲ್ಲ?, ಏಕೆ ಮೊನ್ನೆ ನೀನು ಆ ಸಮಾರಂಭಕ್ಕೆ ಬರಲೇ ಇಲ್ಲ? ಯಾಕೆ ನೀನು ಕಾಲೇಜಿಗೆ ಬಂದೆ ಇಲ್ಲವಂತೆ ಒಂದು ವಾರದಿಂದ, ಕಾಲೇಜಿನಲ್ಲಿ ಎಲ್ಲಾ ಸೆಮಿಸ್ಟರ್​ಗಳಲ್ಲಿ ನಿನ್ನ ಅಂಕಗಳೇ ಹೆಚ್ಚಿದೆ. ಕಾಲೇಜಿನಲ್ಲಿ ನೀನೇ ಜನರಲ್ ಸೆಕ್ರೆಟರಿ ಎಂದು ಮಾತನಾಡುತ್ತಿದ್ದಾರೆ. ಅಯ್ಯೋ ಜನರಲ್ ಸೆಕ್ರೆಟರಿ ಹುದ್ದೆಗೆ ನೀನು ರಾಜಿನಾಮೆ ಕೊಟ್ಟುಬಂದೆ ಅಂತೆ ನಿಜವೇ? ಏಕೆ ಏನಾಯ್ತೇ ನಿನಗೆ?’

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ

ಈ ಎಲ್ಲ ಪ್ರಶ್ನೆಗಳನ್ನು ಆಕೆ ಒಮ್ಮೆ ಅವಲೋಕಿಸಿದಳು. ಏನಾಗಿದೆ ತನಗೆ. ತನ್ನ ಚೈತನ್ಯವೆಲ್ಲಿ ಹೋಯಿತು? ಛೀ ಇದು ಪ್ರೇಮವೇ? ಕೈಕಾಲುಗಳನ್ನು ಬಿಡದೆ ಕಟ್ಟಿ ಹಾಕಿ, ಮಾತನಾಡಲು ಬಾಯನ್ನು ಕೂಡ ಕಟ್ಟಿ ಹಾಕಿ, ಇಂಚಿಂಚೂ ಮುಂದೆ ಹೋಗಲು ಬಿಡದೆ ಮೆದುಳನ್ನು ತಿಂದು ಹಾಕುವುದು. ಇದು ಪ್ರೇಮವಲ್ಲ! ಪ್ರೇಮವಾಗಿದ್ದರೆ ನನ್ನನ್ನು ಹೀಗೆ ಕಟ್ಟಿಹಾಕುತ್ತಿರಲಿಲ್ಲ. ಬರಿ ತನ್ನ ಬಗ್ಗೆಯೇ ಮಾತನಾಡುತ್ತಿದ್ದಾನೆ. ನನ್ನ ಅಸ್ತಿತ್ವದ ಬಗ್ಗೆಯಾಗಲಿ, ನನ್ನ ಸಂತೋಷದ ಬಗೆಗಾಗಲೀ ಆತನಿಗೆ ಯೋಚನೆಯೇ ಇಲ್ಲ. ಇದು ಎಂತಹ ಪ್ರೇಮ? ಅರವತ್ನಾಲ್ಕು ಕಲೆಗಳ ಬಗ್ಗೆ ಮಾಹಿತಿ ಇದ್ದರೂ, ಪ್ರೇಮವೆಂದರೆ ತನಗೆ ತಿಳಿಯದೆಂದು, ತನಗೆ ಪ್ರೇಮಿಸಲು ಕೂಡ ಬರುವುದಿಲ್ಲವೆಂದು ಹತಾಶೆಗೊಳಪಟ್ಟು ಅವನಿಂದ ದೂರವಾದಳು.

ಆದರೆ ಇತ್ತ ತಾಯಿಯದು ನಿಜವಾದ ಸ್ತ್ರೀವಾದವೇ? ಬ್ಯಾಗಿನ ತುಂಬಾ ದುಡ್ಡು, ಎದೆ ತುಂಬಾ ಧೈರ್ಯವಿದ್ದೂ ಸಹ, ಗಂಡ ಬೇಗ ಮನೆಗೆ ಬಾರದಿದ್ದರೆ ತನ್ನ ಸ್ಥೈರ್ಯ ಧೈರ್ಯ ಕಳೆದುಕೊಂಡು, ಚೈತನ್ಯವೇ ಉಡುಗಿ ಹೋದಂತೆ ಮಾಡಿಕೊಂಡು, ಇದ್ದಬಿದ್ದವರ ಮೇಲೆ ಪ್ರಹಾರವೆಸಗಿ ರಣರಂಪ ಮಾಡುವುದು. ಇದು ಯಾವ ತರಹದ ಸ್ತ್ರೀವಾದ? ತಾಯಿಯ ಈ ನಡೆಯ ಬಗ್ಗೆ ಗೊಂದಲ. ತನ್ನ ಮನಸ್ಸಿನಲ್ಲಿಯೂ ಗೊಂದಲ, ತುಮುಲ, ಕೋಪ.

ಮತ್ತೆ ಈಕೆ ತನ್ನತನವನ್ನು, ಅದಕ್ಕೆ ಬೇಕಾದ ಶಾಂತಿ, ಸಂತೋಷವನ್ನು ಭರ್ತಿಯಾಗಿಸಿಕೊಂಡಿದ್ದು ಯೂನಿವರ್ಸಿಟಿಗೆ ಜಿಗಿದ ಮೇಲೆಯೇ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿಎಚ್.ಡಿ ಗಳಿಸಿ ಬಂದರೂ, ಹನ್ನೊಂದು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಕಲೆಯನ್ನು ಹೊಂದಿದ್ದರೂ, ಮಗುವಿನಂಥ ಮನಸ್ಸುಳ್ಳ, ಅತಿಯಾಗಿ ಮಾತನಾಡದ, ತಮ್ಮ ಬಗೆಗೆ ಅತಿಯಾಗಿ ಹೇಳಿಕೊಳ್ಳದ, ನಿಜವಾದ ಸ್ತ್ರೀವಾದದ ಅಂಶಗಳನ್ನು ಅಳವಡಿಸಿಕೊಂಡಿದ್ದ ಮಂದಸ್ಮಿತ ಪ್ರಾಧ್ಯಾಪಕಿಯನ್ನು ನೋಡಿದಾಗ!

ಸ್ತ್ರೀವಾದ ಪ್ರತಿಪಾದಿಸುವವರಿಗೆ ಗಂಡಸಿಲ್ಲದೆಯೂ ತಾನು ಬದುಕಬಲ್ಲೆ ಎಂಬ ದಿಟ್ಟತೆ, ಧೈರ್ಯವೂ ಇರಬೇಕಾಗುತ್ತದೆ. ಆ ಧೈರ್ಯ ಹೊಮ್ಮುವುದು ಪ್ರೀತಿಸುವುದು ಗೊತ್ತಿದ್ದಾಗ ಮಾತ್ರ. ಪ್ರೀತಿ ಲಿಂಗಾತೀತ. ಪ್ರೀತಿ ಇದ್ದಲ್ಲಿ ಗೌರವ ಇದ್ದೇ ಇರುತ್ತದೆ. ಮನುಷ್ಯ ಮನುಷ್ಯರ ನಡುವೆ ಚೈತನ್ಯದ ನದಿ ನಿರಂತರ ಹರಿವು ಇದ್ದಾಗಲೇ ಅರಿವು ಮೂಡುವುದು.  ಹರಿಯುವಿಕೆ ಎಂದಾಗ ಎಲ್ಲ ರೀತಿಯ ತೇಲುಮುಳುಗು ಇದ್ದದ್ದೇ. ಇದೊಂದು ಮುಗಿಯದ ಈಜು. ಪೀಳಿಗೆಯಿಂದ ಪೀಳಿಗೆಗೆ ನವೀಕರಣಗೊಳ್ಳುತ್ತಲೇ ಇರುವ ಹಾಡು. ಒಬ್ಬ ವ್ಯಕ್ತಿ ಯಾಕೆ ಹಾಗೆ ವರ್ತಿಸುತ್ತಾರೆ ಎನ್ನುವುದಕ್ಕೆ ಅವರದೇ ಆದ ಹಿನ್ನೆಲೆ ಇರುತ್ತದೆ. ಆ ಹಿನ್ನೆಲೆಯ ತೊಡಕುಗಳನ್ನು ಬಿಡಿಸುವುದು, ಬಿಡಿಸಿಕೊಳ್ಳುವುದು ಎಣೆಯಿಲ್ಲದ್ದು. ಈ ಬಿಡಿಸಿಕೊಳ್ಳಲು ಹೋದಾಗಲೇ ಹುಸಿವಾದಗಳು ಬೆಳಕಿಗೆ ಬರುವುದು. ಬರುವುದೆಲ್ಲಾ ಬರಲಿ ಅರಿವಿನಿಂದ, ಅಂತಃಕರಣದಿಂದ ಬೆಳಕಾಗಿಸಿಕೊಳ್ಳುವತ್ತ ನಮ್ಮ ಗುರಿಯಿರಲಿ. ಅಲ್ಲವೆ

Published On - 1:34 pm, Sat, 23 April 22