Reporter‘s Diary: ಫೋನೋ, ನೇರಪ್ರಸಾರದ ಬಗ್ಗೆ ಮೊದಲ ಸಲ ಜನಕ್ಕೆ ಅರ್ಥವಾಯಿತು

OB Van : ನಮ್ಮ ಬಳಿ ಲ್ಯಾಪ್​ಟಾಪ್ ಮಾತ್ರ ಇತ್ತು. ಇದ್ದದ್ದು ಓಬಿ ವ್ಯಾನ್ ಅಲ್ಲ. ದೊಡ್ಡದೊಂದು ಲಾರಿ. ಅದರ ಮೇಲೆ ಹತ್ತಾರು ಅಡಿ ವ್ಯಾಸದ ಡಿಶ್. ಅದನ್ನು ನಿಗದಿತ ದಿಕ್ಕಿಗೆ ತಿರುಗಿಸಿ, ಫಿಟ್ ಮಾಡೋ ಹೊತ್ತಿಗೆ ಎಂಜಿನಿಯರ್ ಹೈರಾಣವಾಗಿ ಹೋಗುತ್ತಿದ್ದ.

Reporter‘s Diary: ಫೋನೋ, ನೇರಪ್ರಸಾರದ ಬಗ್ಗೆ ಮೊದಲ ಸಲ ಜನಕ್ಕೆ ಅರ್ಥವಾಯಿತು
Follow us
|

Updated on:Apr 23, 2022 | 10:41 AM

Reporter‘s Diary : ಇದೇ ವೇಳೆ ಕಚೇರಿಯಿಂದ ಒಂದು ಸ್ಪಷ್ಟ ಸೂಚನೆಯೂ ಬಂದಿತ್ತು, ಆ್ಯಂಕರ್ ಕೇಳೋ ಒಂದು ಪ್ರಶ್ನೆಗೆ ಕನಿಷ್ಟ ಹತ್ತು ನಿಮಿಷಗಳ ಕಾಲ ಫೋನೋ ಕೊಡಲೇಬೇಕು. ಏಕೆಂದರೆ ನಿರಂತರವಾಗಿ ಈ ಸುದ್ದಿ ಪ್ರಸಾರ ಮಾಡಲು ನಮ್ಮ ಬಳಿ ಈ ಫೋನೋ ಬಿಟ್ಟು ಬೇರೆ ಆಯ್ಕೆಗಳೇ ಇರಲಿಲ್ಲ. ಬೆಳಿಗ್ಗೆ ಆರು ಗಂಟೆಯಿಂದ ನಿರಂತರವಾಗಿ ಇದೇ ಸುದ್ದಿಯನ್ನು ತೆಗೆದುಕೊಳ್ಳೋದು ಶುರುವಾಯಿತು. ಸಂದೀಪನ ಫೋಟೋ ಮೊದಲ ಬಾರಿಗೆ ಟಿವಿ 9 ಚಾನೆಲ್​ನ ಸ್ಕ್ರೀನ್ ಮೇಲೆ ಬಂತು. ಕರಳು ಕಿವುಚುವಂಥ ಪ್ರೊಮೋ. ನಿರಂತರವಾಗಿ ಫೋನೋಗಳ ಸುರಿಮಳೆ. ಆ್ಯಂಕರ್ ಪ್ರಶ್ನೆ ಕೇಳಿದರೆ ಸಾಕು ನಾನಂತೂ ಹತ್ಹತ್ತು ನಿಮಿಷ ನಿರಂತರವಾಗಿ ಫೋನೋ ಕೊಡುತ್ತಿದ್ದೆ. ಇದೆಲ್ಲದರ ಪರಿಣಾಮವಾಗಿ ಮೂರ್ನಾಲ್ಕು ಗಂಟೆಯೊಳಗೆ ಸಾವಿರಾರು ಜನರು ದುರಂತ ನಡೆದ ಸ್ಥಳದಲ್ಲಿ ಜಮಾಯಿಸಿಬಿಟ್ಟರು. ಪೊಲೀಸರ ಪಾಲಿಗಂತೂ ಜನರ ಜಮಾವಣೆ ದೊಡ್ಡ ತಲೆನೋವಾಗಿ ಹೋಯಿತು. ಆದರೆ ಜನರ ಕುತೂಹಲ, ಆತಂಕ ಹೆಚ್ಚಾಗಿದ್ದರಿಂದ ಅವರು ಅಲ್ಲಿಂದ ತೆರಳಲು ಸಿದ್ಧರೇ ಇರಲಿಲ್ಲ. ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಹಿರಿಯ ವರದಿಗಾರ, ಧಾರವಾಡ

ರಾಯಚೂರು ಜಿಲ್ಲೆಯ ನೀರಮಾನ್ವಿಯ ಕೊಳವೆಬಾವಿಯಲ್ಲಿ ಬಿದ್ದ ಬಾಲಕ ಸಂದೀಪ ಇಹಲೋಕ ತ್ಯಜಿಸಿ ಇಂದಿಗೆ ಹದಿನೈದು ವರ್ಷ. ಈ ದುರ್ಘಟನೆಯನ್ನು ವರದಿ ಮಾಡಲು ಹೋಗಿದ್ದ ವರದಿಗಾರರು ನೆನಪಿನ ಸುರುಳಿಯನ್ನು ಬಿಚ್ಚಿದ್ದಾರೆ.

(ಭಾಗ 2) 

ಇಂಥ ಘಟನೆಗಳು ನಡೆದಾಗ ಕೆಲವೊಂದು ಕೊಡು-ತೆಗೆದುಕೊಳ್ಳುವಿಕೆ ವರದಿಗಾರರ ನಡುವೆ ನಡೆಯುತ್ತಲೇ ಇರುತ್ತವೆ. ಆದರೆ ಆಗಿನ್ನೂ ಈಗಿನಷ್ಟು ಚಾನೆಲ್​ಗಳು ಇರಲಿಲ್ಲ. ಟಿವಿ9 ಸುದ್ದಿವಾಹಿನಿ ಶುರುವಾಗಿ ಕೇವಲ ನಾಲ್ಕು ತಿಂಗಳಷ್ಟೇ ಕಳೆದಿತ್ತು. ಆದರೂ ಅದಾಗಲೇ ಹಿಂದಿ ಚಾನೆಲ್ ವರದಿಗಾರ ಬೆಳಿಗ್ಗೆಯಿಂದ ನೇರಪ್ರಸಾರ ಶುರು ಮಾಡಿಬಿಟ್ಟಿದ್ದ. ಆದರೆ ನಮ್ಮ ಬಳಿ ಲ್ಯಾಪ್​ಟಾಪ್ ಹೊರತುಪಡಿಸಿ ಏನೂ ಇರಲಿಲ್ಲ. ಒಂದು ವೇಳೆ ಓಬಿ ವ್ಯಾನ್ ಬರಬೇಕು ಅಂದರೆ ಅದಕ್ಕೆ ಕನಿಷ್ಟ ಒಂದು ದಿನ ಬೇಕಿತ್ತು. ಅಲ್ಲಿಯವರೆಗೆ ಏನು ಮಾಡಬೇಕು ಅನ್ನೋದೇ ನಮ್ಮ ಚಾನೆಲ್​ನವರಿಗೆ ದೊಡ್ಡ ಸವಾಲಾಗಿತ್ತು. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಫೋನೋ ಮೂಲಕ ಮಾತನಾಡಿಸುವಂತೆ ಮೇಲಿಂದ ಆದೇಶ ಬಂತು. ಅಲ್ಲಿ ನೆರೆದಿದ್ದ ನೂರಾರು ಜನರ ಮೊಬೈಲ್ ಸಂಖ್ಯೆಗಳನ್ನು ಕಚೇರಿಗೆ ರವಾನೆ ಮಾಡಲಾಗಿತ್ತು. ಇತ್ತ ನನಗೆ ನಿರಂತರವಾಗಿ ಫೋನೋಗಾಗಿ ಕರೆ ಬರುತ್ತಲೇ ಇತ್ತು.

ಹೀಗೆ ಮೊದಲಬಾರಿಗೆ ಜನರಿಗೆ ಫೋನೋ, ನೇರಪ್ರಸಾರದ ಬಗ್ಗೆ ನಿಧಾನವಾಗಿ ಅರ್ಥವಾಗತೊಡಗಿತು. ಏಕೆಂದರೆ ಸುದ್ದಿವಾಹಿನಿಗೆ ಸಂಬಂಧಿಸಿದ ವಿಚಾರಗಳು ಆ ತನಕ ಜನರಿಗೆ ಗೊತ್ತೇ ಇರಲಿಲ್ಲ. ಈ ಮೂಲಕ ಜನರಿಗೆ ಅನೇಕ ತಾಂತ್ರಿಕ ವಿಷಯಗಳು ಲಭ್ಯವಾದವು. ಅದರಲ್ಲಿ ಪ್ರಮುಖವಾಗಿ ಅವರನ್ನು ಹೆಚ್ಚು ಸೆಳೆದಿದ್ದು  ಫೋನೋ. ಈ ಬಗ್ಗೆ ಕುತೂಹಲ ಹುಟ್ಟಿದ್ದಕ್ಕೂ ಕಾರಣವಿದೆ. ಜನರು ಘಟನಾ ಸ್ಥಳಕ್ಕೆ ಬಂದಿದ್ದರಾದರೂ ಕಾರ್ಯಾಚರಣೆ ನಡೆಯುತ್ತಿರೋ ಸ್ಥಳಕ್ಕೆ ಅವರಿಗೆ ಅವಕಾಶವಿರಲಿಲ್ಲ. ಅವರೇನಿದ್ದರೂ ದೂರದಿಂದಲೇ ಎಲ್ಲವನ್ನು ನೋಡಬೇಕು. ಇಲ್ಲವೇ ಮನೆಗೆ ಹೋಗಿ ಟಿವಿಯಲ್ಲಿ ನೋಡಬೇಕು. ಹೀಗಾಗಿ ಅನೇಕರು ದೂರದಿಂದ ಏನನ್ನೂ ನೋಡಲಾಗದೇ ಮನೆಗೆ ಹೋಗಿ ಟಿವಿಗಳ ಮುಂದೆ ಕೂತಿದ್ದರು.

ಇದೇ ವೇಳೆ ಹಿಂದಿ ಚಾನೆಲ್ ವರದಿಗಾರ ನನ್ನ ಬಳಿ ಬಂದು ಬಾಲಕನ ಫೋಟೋ ಕೇಳಿದ. ನಾನು ಫೋಟೋ ನೀಡಲೋ ಬೇಡವೋ ಅಂತಾ ಕಚೇರಿಗೆ ಫೋನ್ ಮಾಡಿ ಕೇಳಿದೆ. ನನ್ನನ್ನು ಹೊರತುಪಡಿಸಿದರೆ ಆ ಫೋಟೋ ಯಾರಿಗೂ ಸಿಕ್ಕಿರಲಿಲ್ಲ; Exclusive. ಆದರೆ ಕಚೇರಿಯಿಂದ ಇಡೀ ವರದಿಗಾರಿಕೆಯ ಉಸ್ತುವಾರಿ ನಿಮ್ಮದೇ, ನೀವೇ ಫೋಟೋ ಕೊಡೋದರ ಬಗ್ಗೆ ನಿರ್ಧರಿಸಿ. ಇದರಲ್ಲಿ ನಮ್ಮದೇನೂ ಪಾತ್ರ ಇರೋದಿಲ್ಲ ಎಂದು ಹೇಳಿ ಫೋನ್ ಇಟ್ಟುಬಿಟ್ಟರು. ಆದರೆ ಅಷ್ಟೊತ್ತಿಗಾಗಲೇ ಹಿಂದಿ ಚಾನೆಲ್ ವರದಿಗಾರ ಸಣ್ಣ ಕ್ಯಾಮೆರಾವೊಂದನ್ನು ಬೋರ್ವೆಲ್​ನೊಳಗೆ ಇಳಿಬಿಟ್ಟು, ಅಲ್ಲಿನ ನೈಜ ಚಿತ್ರಣವನ್ನು ಶೂಟ್ ಮಾಡಿಸಿದ್ದ. ಅದರ ಫುಟೇಜ್ ಅದಾಗಲೇ ಅವರ ಟಿವಿಯಲ್ಲಿ ಬಿತ್ತರವಾಗುತ್ತಿತ್ತು. ಆದರೂ ಅದನ್ನು ಕರ್ನಾಟಕದ ಜನರು ನೋಡುತ್ತಿರಲಿಲ್ಲ. ಏಕೆಂದರೆ ಅದು ಹಿಂದಿ ಚಾನೆಲ್.

ಇದನ್ನೂ ಓದಿ : KGF2: ನಿಮ್ಮ ಟೈಮ್​ಲೈನ್; ಯೂಟ್ಯೂಬ್​ನ ಮಿಲಿಯಗಟ್ಟಲೆ ವ್ಯೂವ್ಸ್, ಕಮೆಂಟ್ಸ್ ಸ್ವಯಂಪ್ರೇರಿತವೆ?

ಆಗ ಒಂದು ಆಲೋಚನೆ ಹೊಳೆಯಿತು. ಹೇಗೂ ಇವ ಬಾಲಕನ ಫೋಟೋ ಕೇಳುತ್ತಿದ್ದಾನೆ. ನನಗೆ ಬೋರ್ವೆಲ್​ನೊಳಗಿನ ಫುಟೇಜ್ ಬೇಕು. ನೀ ಫುಟೇಜ್ ಕೊಟ್ಟರೆ ನಾನು ಫೋಟೋ ಕೊಡುವೆ ಎಂದುಬಿಟ್ಟೆ. ಅಷ್ಟಂದಿದ್ದೇ ತಡ ಆತ ಓಡೋಡಿ ಹೋಗಿ ನನ್ನ ಕೈಗೆ ಒಂದು ಕ್ಯಾಸೆಟ್ ಕೊಟ್ಟ. ನಾನು ಆತನ ಕೈಗೆ ಸಂದೀಪನ ಫೋಟೋ ಕೊಟ್ಟೆ. ಕ್ಯಾಸೆಟ್​ನಲ್ಲಿನ ವಿಡಿಯೋ ಡಂಪ್ ಮಾಡಿ, ಕಚೇರಿಗೆ ಕಳಿಸಿಕೊಟ್ಟೆ. ಅಲ್ಲಿಗೆ ರಾಜ್ಯದ ಜನತೆಯೆಲ್ಲ ಟಿವಿ9 ಚಾನೆಲ್ ಅನ್ನು ಕದಲದೇ ಕೂತು ನೋಡುವಂತಾಯಿತು. ಏಕೆಂದರೆ ಆ ಫುಟೇಜ್​ನಲ್ಲಿ ಕ್ಯಾಮೆರಾ ಸಂದೀಪನ ತಲೆಯವರೆಗೆ ಹೋಗಿ ನಿಂತಿತ್ತು. ಆತನ ತಲೆ ಮತ್ತು ಕೈ ಅದರಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಇದು ಸಹಜವಾಗಿ ಜನರ ಅಂತಃಕರಣವನ್ನು ಕಲಕಿಬಿಟ್ಟಿತು. ಇದನ್ನೆಲ್ಲಾ ನೋಡಿದ ಜನರು ಬೇರೆಬೇರೆ ಊರುಗಳಿಂದಲೂ ಘಟನಾ ಸ್ಥಳಕ್ಕೆ ಬರತೊಡಗಿದರು. ಅಲ್ಲಿ ಮತ್ತೆ ಜನರ-ಪೊಲೀಸರ ನಡುವೆ ಜಟಾಪಟಿ ಶುರುವಾಗಿತ್ತು

ಈ ಮಧ್ಯೆ ಫೋನೋ ಮೇಲೆಯೇ ಎಲ್ಲವನ್ನು ನಿಭಾಯಿಸಬೇಕಾಗಿ ಬಂದಿದ್ದರಿಂದ ಒಂದೊಂದು ಪ್ರಶ್ನೆಗೆ ನಾನು ಕನಿಷ್ಟ ಹತ್ತು ನಿಮಿಷ ಮಾತನಾಡತೊಡಗಿದ್ದೆ. ಅಲ್ಲದೇ ಆ್ಯಂಕರ್ ಕೇಳಿದ ಪ್ರಶ್ನೆಗೆ ತಾಂತ್ರಿಕವಾಗಿ ಉತ್ತರ ನೀಡುತ್ತಿದ್ದೆ. ಮೂಲತಃ ನಾನು ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದಿದ್ದ ಉಳಿದ ಎಂಜಿನಿಯರ್ ಹಾಗೂ ಅಧಿಕಾರಿಗಳೊಡನೆ ಅನೇಕ ಮಾಹಿತಿಗಳನ್ನು ಹೆಕ್ಕಿ, ಅವುಗಳನ್ನು ನನ್ನದೇ ಆದ ರೀತಿಯಲ್ಲಿ ಫೋನೋದಲ್ಲಿ ಪ್ರಸ್ತುತಪಡಿಸುತ್ತಾ ಹೋದೆ. ಇದರ ಪರಿಣಾಮ ವೀಕ್ಷಕರ ಮೇಲೆ ಹೇಗಾಯಿತು ಅಂದರೆ, ಅವರು ನನ್ನ ಹೆಸರು ಕೇಳಿಕೊಂಡು ಸ್ಥಳಕ್ಕೆ ಬರತೊಡಗಿದರು. ಹೇಗೋ ಸಂಜೆಯವರೆಗೆ ಬರೀ ಫೋನೋಗಳ ಮೇಲೆಯೇ ಪರಿಸ್ಥಿತಿಯನ್ನು ನಿಭಾಯಿಸಿದ್ದೆವು. ಅಷ್ಟೊತ್ತಿಗಾಗಲೇ ಈ ಕಾರ್ಯಾಚರಣೆ ಅಷ್ಟು ಸುಲಭವಾಗಿ ಮುಗಿಯೋದಿಲ್ಲ ಅನ್ನೋದು ಗೊತ್ತಾಗಿ ಹೋಗಿತ್ತು. ಹೀಗಾಗಿ ನಮ್ಮ ಸಂಸ್ಥೆಯಿಂದಲೂ ಓಬಿ ವ್ಯಾನ್ ಕಳಿಸಲು ನಿರ್ಧರಿಸಿದರು.

ನಿಜವಾಗಿ ಹೇಳಬೇಕೆಂದರೆ ನಮ್ಮದು ವ್ಯಾನ್ ಆಗಿರಲಿಲ್ಲ. ಬದಲಿಗೆ ದೊಡ್ಡದೊಂದು ಲಾರಿ ಆಗಿತ್ತು. ಅದರ ಮೇಲೆ ಹತ್ತಾರು ಅಡಿ ವ್ಯಾಸದ ಡಿಶ್. ಅದನ್ನು ನಿಗದಿತ ದಿಕ್ಕಿಗೆ ತಿರುಗಿಸಿ, ಫಿಟ್ ಮಾಡೋ ಹೊತ್ತಿಗೆ ಎಂಜಿನಿಯರ್ ಹೈರಾಣವಾಗಿ ಹೋಗುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆಟೋಮ್ಯಾಟಿಕ್ ಅಳವಡಿಕೆಯ ವ್ಯಾನ್ ಬಂದಿವೆ. ಅಲ್ಲದೇ ಬ್ಯಾಕ್ ಪ್ಯಾಕ್ ಕೂಡ ಬಂದಿವೆ. ಹೀಗಾಗಿ ಅಂದಿನ ವ್ಯವಸ್ಥೆಗಳ ಬಗ್ಗೆ ಈಗ ಹೇಳಿದರೆ ಅಚ್ಚರಿಯಾಗುತ್ತದೆ, ಇರಲಿ. ಇಷ್ಟೆಲ್ಲಾ ರಗಳೆ ಇದ್ದ ಮೇಲೆ ಮತ್ತು ಓಬಿ ವ್ಯಾನ್ ಬರೋವರೆಗೆ ಫೋನೋಗಳ ಮೇಲೆಯೇ ಅವಲಂಬಿತರಾಗೋದು ಅನಿವಾರ್ಯವಾಗಿತ್ತು. ಹೀಗಾಗಿ ಫೋನೋ ನಿರಂತರವಾಗಿ ನಡೆದೇ ಇತ್ತು.

ಅದು ಬೇಸಿಗೆ ಕಾಲ. ರಾಯಚೂರು ಜಿಲ್ಲೆ ಬೇರೆ. ಸುತ್ತಲೂ ಒಂದೇ ಒಂದು ಗಿಡವಿಲ್ಲ. ಘಟನೆ ನಡೆದ ಸ್ಥಳದ ಒಂದು ಭಾಗದಲ್ಲಿ ಮಾವಿನತೋಟ ಇತ್ತಾದರೂ ಅದನ್ನು ಕಾಯಲು ಮಾಲಿಕನೇ ನಿಂತಿದ್ದ. ಹೀಗಾಗಿ ಯಾರಿಗೂ ಅಲ್ಲಿ ಪ್ರವೇಶವಿರಲಿಲ್ಲ. ಇದೆಲ್ಲಕ್ಕಿಂದ ದೊಡ್ಡ ಸಮಸ್ಯೆಯೆಂದರೆ ಘಟನಾ ಸ್ಥಳದ ಪಕ್ಕದಲ್ಲಿಯೇ ಕಲ್ಲುಗುಡ್ಡ. ಏಪ್ರಿಲ್ ತಿಂಗಳ ಬಿಸಿಲಿಗೆ ಕಾದ ಕಲ್ಲಿನ ಝಳ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತಲೇ ಇತ್ತು. ಆದರೂ ಕೆಲಸ ಮಾಡಲೇಬೇಕು. ಸಂಜೆ ಹೊತ್ತಿಗೆ ಕೊಂಚ ಗಾಳಿ ಬೀಸಿತು. ಎಲ್ಲ ವರದಿಗಾರರಿಗೆ ಕೊಂಚ ಹಾಯ್ ಅನ್ನಿಸುವಂತಾಯಿತು. ಇದೇ ವೇಳೆ ತುಂಬಾನೇ ಚೆನ್ನಾಗಿ ಫೋನೋ ಕೊಡುವಂತೆಯೂ, ಅದರಲ್ಲಿಯೂ ಈ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರೋ ಅಂಶಗಳೇನು ಅನ್ನೋದನ್ನು ತಾಂತ್ರಿಕ ವಿಚಾರಗಳೊಂದಿಗೆ ಹೇಳುವಂತೆಯೂ ಸೂಚನೆ ಬಂತು.

ನಾನು ಅವುಗಳನ್ನೆಲ್ಲಾ ಚೆನ್ನಾಗಿ ಪಾಯಿಂಟ್ ಮಾಡಿಕೊಂಡು ಫೋನೋಗಾಗಿ ಕಾದೆ. ಅಷ್ಟೊತ್ತಿಗಾಗಲೇ ಅಲ್ಲಿನ ಜನರು ನನ್ನ ಹಿಂದೆಯೇ ತಿರುಗಾಡಲು ಶುರು ಮಾಡಿದ್ದರು. ಅವರಿಗೆ ನಾನು ಮಾತಾಡೋದೆಲ್ಲಾ ಟಿವಿಯಲ್ಲಿ ಬರುತ್ತಿದೆ ಅನ್ನೋದನ್ನು ನೋಡೋದೇ ಅಚ್ಚರಿಯ ಸಂಗತಿ ಆಗಿತ್ತು. ಅವರಿಗೆ ಮನೆಗೆ ಹೋಗಿ ಕುಳಿತುಕೊಂಡು ಟಿವಿ ನೋಡಲು ಆಗುತ್ತಿಲ್ಲ. ಇಲ್ಲಿಗೆ ಬಂದರೆ ಘಟನೆಯ ಸ್ಥಳಕ್ಕೆ ಯಾರನ್ನೂ ಪೊಲೀಸರು ಬಿಡುತ್ತಿಲ್ಲ. ಹೀಗಾಗಿ ಘಟನೆಯ ಕುತೂಹಲ ಹೆಚ್ಚಾಗಿ ಹೋಗಿತ್ತು.

ಭಾಗ 3 : Reporter‘s Diary: ಸತತ ಐವತ್ತಾರು ಗಂಟೆಗಳ ಕಾಲ ನಿರಂತರ ಸುದ್ದಿ ಪ್ರಸಾರವಾಗಿತ್ತು

ಈ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/reporters-diary

ಗಮನಿಸಿ : ಇಂದಿನಿಂದ ಶುರುವಾಗುವ ‘ರಿಪೋರ್ಟರ್ಸ್ ಡೈರಿ’ ಪ್ರತೀ ಪ್ರತೀ ಶನಿವಾರಕ್ಕೊಮ್ಮೆ ಪ್ರಕಟವಾಗುತ್ತದೆ. ಟಿವಿ9 ವರದಿಗಾರರು, ತಾಂತ್ರಿಕ ವರ್ಗದವರು ಇಲ್ಲಿ ತಮ್ಮ ವರದಿಗಳನ್ನು ಹಂಚಿಕೊಳ್ಳುತ್ತಾರೆ.  ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ

Published On - 9:43 am, Sat, 23 April 22

ತಾಜಾ ಸುದ್ದಿ
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ