Sign In

By signing in or creating an account, you agree with Associated Broadcasting Company's Terms & Conditions and Privacy Policy.

Science and Environment: ಜೀವವೆಂಬ ಜಾಲದೊಳಗೆ; ಗೊತ್ತೇ ಈ ಜೈವಿಕ ಬೆಳಕಿನ ಗುಟ್ಟು?

Bioluminescence : ಜೈವಿಕ ಬೆಳಕೆಂಬುದು ಪ್ರಕೃತಿಯಲ್ಲಿ ಹಲವಾರು ಜೀವಿಗಳು ಸಂವಹನಿಸುವ ಮಾಧ್ಯಮ. ಕೇವಲ ಮಾತೊಂದೇ ಸಂವಹನದ ಸಾಧ್ಯತೆಯನ್ನಾಗಿಸಿಕೊಂಡಿರುವ ನಮಗೆ ಊಹಿಸಲೂ ಅಸಾಧ್ಯವೆನ್ನಿಸುವಂತಹ ಸಂವಹನ ಮಾಧ್ಯಮಗಳು ಪ್ರಕೃತಿಯಲ್ಲಿವೆ.

Science and Environment: ಜೀವವೆಂಬ ಜಾಲದೊಳಗೆ; ಗೊತ್ತೇ ಈ ಜೈವಿಕ ಬೆಳಕಿನ ಗುಟ್ಟು?
Follow us
ಶ್ರೀದೇವಿ ಕಳಸದ
|

Updated on: Apr 22, 2022 | 2:18 PM

ಜೀವವೆಂಬ ಜಾಲದೊಳಗೆ | Jeevavemba Jaaladolage : ಜೈವಿಕ ಬೆಳಕು (Bioluminescence); ಮಲೆನಾಡಿನಲ್ಲಿ ಬೆಳೆದವರಿಗೆ ಈ ವಿಷಯ ಹೊಸದಲ್ಲ. ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ರಾತ್ರಿ ಕವಿಯುವ ಕಾವಳದಲ್ಲಿ ಗಿಡಮರಗಳ ಮಧ್ಯೆ ಅಲ್ಲಲ್ಲಿ ಹಾರಾಡುವ ತಿಳಿಹಸಿರು ಬೆಳಕಿನ ಕಿಡಿಗಳನ್ನು ಎಲ್ಲರೂ ನೋಡಿಯೇ ಇರುತ್ತಾರೆ.  ಹಳ್ಳಿಗಳಲ್ಲಿ ಬೀದಿ ದೀಪಗಳು ಇನ್ನೂ ಅಡಿಯಿಡದ ಕಾಲದಲ್ಲಿ ಬಾಲ್ಯ ಕಳೆದ ನನ್ನಂಥವರಿಗೆ ಮನೆಯಂಗಳದಲ್ಲಿ ಹಾರಾಡುವ ಈ ಬೆಳಕಿನ ಕಿಡಿಗಳನ್ನು ಹಿಡಿದು ಬಾಟಲಿಯಲ್ಲಿ ತುಂಬಿಸಿ ಕತ್ತಲೆಕೋಣೆಯಲ್ಲಿಟ್ಟು ಅದು ಮಿನುಗುವುದನ್ನು ನೋಡುವುದು ಇಷ್ಟದ ಆಟಗಳಲ್ಲೊಂದಾಗಿತ್ತು. ರಾತ್ರಿ ಮಿನುಗುತ್ತಿದ್ದ ಈ ತಾರೆಗಳು ಹಗಲು ಹೊತ್ತಿನಲ್ಲಿ ಸಾಮಾನ್ಯ ಕೀಟಗಳಂತೆ ಕಾಣಿಸುತ್ತಿದ್ದವು. “ಮಿಂಚುಹುಳು” ಎಂಬ ಚೆಂದದ ಹೆಸರಿನ ಕೀಟಗಳಿವು. ಇವು ಹೊರಸೂಸುವ ಬೆಳಕು “ಜೈವಿಕ ಬೆಳಕು”. ಬೆಳಕಿನ ಕಿಡಿ ಎಂದು ನಾನು ಮೇಲೆ ಹೇಳಿದ್ದರೂ ಕಿಡಿಯಂತೆ ಇವು ಬಿಸಿಯನ್ನೇನೂ ಉತ್ಪಾದಿಸದೆ ತಣ್ಣನೆಯ ಬೆಳಕನ್ನು ಮಾತ್ರ ಸೂಸುತ್ತವೆ. ಓಡುಹುಳ (ಬೀಟಲ್)ಗಳ ಜಾತಿಗೆ ಸೇರಿದ ಕೀಟವಿದು. ಸುಮಾರು ಎರಡು ಸಾವಿರ ಪ್ರಭೇದಗಳಿದ್ದು ಅದರಲ್ಲಿ ಅನೇಕ ಪ್ರಭೇದಗಳ ಕೀಟಗಳು ಹೀಗೆ ಬೆಳಕು ಸೂಸುತ್ತವೆ. ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran) 

ಪ್ರತಿಯೊಂದು ಪ್ರಭೇದದ ಮಿಂಚುಹುಳುಗಳೂ ತಮಗೆ ಮಾತ್ರವೇ ವಿಶಿಷ್ಟವಾದ ಬೆಳಕನ್ನು ಹೊರಸೂಸುವುದು ವಿಶೇಷ. ಸಂಗಾತಿಯನ್ನು ಆಕರ್ಷಿಸುವುದು ಈ ಬೆಳಕಿನ ಮುಖ್ಯ ಉದ್ದೇಶವಾಗಿರುವುದರಿಂದ ತಮ್ಮದೇ ಜಾತಿಯ ಸಂಗಾತಿಯನ್ನು ಆಯ್ದುಕೊಳ್ಳಲು ಈ ರೀತಿ  ತಮಗೆ ಮಾತ್ರವೇ ವಿಶಿಷ್ಟವಾದ ಬೆಳಕನ್ನು ಚೆಲ್ಲುತ್ತವೆ. ಅಲ್ಲದೆ  ಬೆಳಕಿನ ಮೂಲಕವೇ ಅವು ಅನೇಕ ವಿಷಯಗಳ ಬಗ್ಗೆ ಸಂವಹಿಸುತ್ತವೆ. ಹೆಣ್ಣು, ಈ ಬೆಳಕಿನಿಂದಲೇ ಗಂಡಿನ ಸಾಮರ್ಥ್ಯವನ್ನೂ ಸಹ ಅಳೆದು ಸೂಕ್ತವಾದ ಸಂಗಾತಿಯನ್ನು ಆಯ್ದುಕೊಳ್ಳುತ್ತದೆ. ಬೇಸಿಗೆಯ ಕೊನೆಯಲ್ಲಿ ಹೆಣ್ಣು ಮಿಂಚುಹುಳ ನೆಲದ ಬಿರುಕುಗಳಲ್ಲೋ ಮರದ ಪೊಟರೆಗಳಲ್ಲೋ ಮೊಟ್ಟೆಗಳನ್ನಿಡುತ್ತದೆ. ಹೊರಬರುವ ಮರಿಗಳೂ ಸಹ ಬೆಳಕನ್ನು ಬೀರುತ್ತವೆ. ಈ ಬೆಳಕನ್ನು ಅದು ಭಕ್ಷಕಗಳಿಗೆ ತನ್ನನ್ನು ತಿಂದರೆ ಅಪಾಯವಾಗಬಹುದೆಂದು ಎಚ್ಚರಿಕೆ ನೀಡಲು ಬಳಸುತ್ತದೆ. ಬೆಳೆದ ಮರಿಗಳು ನೆಲದ ಬಿರುಕುಗಳಲ್ಲಿ ಅಥವಾ ಮರದ ಪೊಟರೆಗಳಲ್ಲಿ ಇಡೀ ಮಳೆಗಾಲ ದೀರ್ಘನಿದ್ರೆಯಲ್ಲಿದ್ದು ಡಿಸೆಂಬರ್ ನಂತರ ಬೆಳೆದ ಕೀಟವಾಗಿ ಹೊರಬರುತ್ತವೆ. ಜೀವನಚಕ್ರ ಮುಂದುವರೆಸುತ್ತವೆ.

ಇವುಗಳಲ್ಲಿ “ಲ್ಯೂಸಿಫೆರೇಸ್” ಎಂಬ ಕಿಣ್ವಗಳು “ಲ್ಯುಸಿಫೆರಿನ್” ಎಂಬ ರಾಸಾಯನಿಕದ ಮೇಲೆ ಪರಿಣಾಮ ಬೀರಿ ಬೆಳಕು ಹೊರಡಿಸುತ್ತವೆ. ಈ ಮಿಂಚುಹುಳುಗಳು ಹೊರಸೂಸುವ ಜೈವಿಕ ಬೆಳಕಿನ ಬಗ್ಗೆ ಇನ್ನೂ ಅನೇಕ ಅಧ್ಯಯನಗಳು ನಡೆಯುತ್ತಿವೆ, ಪ್ರತೀ ಬಾರಿಯೂ ಆಶ್ಚರ್ಯಕರ ಸಂಗತಿಗಳು ತಿಳಿದುಬರುತ್ತಿವೆ!

ನಮಗೆ ಸುಲಭವಾಗಿ ಕಾಣಸಿಗುವ ಮಿಂಚುಹುಳುಗಳಲ್ಲದೆ, ಪ್ರಪಂಚದಲ್ಲಿ ಇನ್ನೂ ಅನೇಕ ಜೀವಿಗಳು ವಿವಿಧ ಕಾರಣಗಳಿಗೆ ಜೈವಿಕ ಬೆಳಕನ್ನು ಉತ್ಪಾದಿಸುತ್ತವೆ. ನೆಲವಾಸಿಗಳಾದ ಕೆಲವು ಜಾತಿಯ ಎರೆಹುಳುಗಳು ರಾತ್ರಿ ಬೆಳಕನ್ನು ಹೊರಸೂಸುತ್ತವೆ. ಇದಕ್ಕೆ ಕಾರಣಗಳೇನೆಂಬುದು ಇನ್ನೂ ತಿಳಿದಿಲ್ಲ. ಕೆಲವು ಜಾತಿಯ ಶತಪಾದಿಗಳು ರಾತ್ರಿ ವೇಳೆಯಲ್ಲಿ ತಮ್ಮನ್ನು ಬೇಟೆಯಾಡಲು ಬರುವ ಭಕ್ಷಕಗಳಿಗೆ ತಾನು ವಿಷಕಾರಿ ಎಂದು ಎಚ್ಚರಿಕೆ ನೀಡಲು ಜೈವಿಕ ಬೆಳಕು ಹೊರಸೂಸುತ್ತವೆ.

ಕೆಲವು ಜಾತಿಯ ಶಿಲೀಂದ್ರಗಳು ಕೂಡ ರಾತ್ರಿ ಜೈವಿಕ ಬೆಳಕನ್ನು ಸೂಸುತ್ತವೆ. ನಿಶಾಚರ ಕೀಟಗಳನ್ನು ಆಕರ್ಷಿಸುವುದು, ಅವುಗಳ ಮೂಲಕ ತಮ್ಮ ವಂಶ ಹಿಗ್ಗಿಸುವ “ಸ್ಪೋರ್”ಗಳನ್ನು ಎಲ್ಲೆಡೆ ಪ್ರಸರಿಸುವುದು ಈ ಬೆಳಕನ್ನು ಹೊರಸೂಸಲು ಇರುವ ಕಾರಣ ಎನ್ನಲಾಗುತ್ತದೆ.

ಜೈವಿಕ ಬೆಳಕನ್ನು ಸೂಸುವ ಸಾವಿರಾರು ಜಾತಿಯ ಜೀವಿಗಳಲ್ಲಿ ಹೆಚ್ಚಿನ ಜೀವಿಗಳು ಕಂಡುಬರುವುದು ಸಮುದ್ರದಲ್ಲಿ. ಸಾಗರದಾಳದಲ್ಲಂತೂ ಇನ್ನೂ ಸಂಶೋಧನೆಗೆ ಸಿಕ್ಕದ ಬೆಳಕು ಸೂಸುವ ಅನೇಕ ಜೀವಿಗಳಿವೆ. ಮೃದ್ವಂಗಿಗಳು, ಕಂಟಕಚರ್ಮಿಗಳು, ಜೆಲ್ಲಿಫಿಶ್, ಮೊದಲಾದವುಗಳಲ್ಲಿ ಬೆಳಕನ್ನು ಸೂಸುವ ಜಾತಿಗಳಿವೆ. ಅನೇಕ ಜಾತಿಯ ಮೀನುಗಳೂ ಸಹ ಬೆಳಕನ್ನು ಚೆಲ್ಲುತ್ತವೆ. ಅವುಗಳಲ್ಲಿ ಸ್ವತಃ ಬೆಳಕನ್ನು ಉತ್ಪಾದಿಸುವ ಶಕ್ತಿ ಇಲ್ಲದಿದ್ದರೂ ಬೆಳಕನ್ನು ಉತ್ಪಾದಿಸುವ ಬ್ಯಾಕ್ಟೀರಿಯಾಗಳಿಗೆ ತಮ್ಮ ದೇಹದಲ್ಲಿ ಆಶ್ರಯ ಕೊಟ್ಟು ಅವು ಸೂಸುವ ಬೆಳಕಿನಿಂದ ಲಾಭ ಪಡೆಯುವ ಜೀವಿಗಳಿವೆ.

ಹಡಗಿನಲ್ಲಿ ಪಯಣಿಸುವ ನಾವಿಕರು ಸಮುದ್ರದ ಮಧ್ಯೆ ಒಂದಷ್ಟು ಜಾಗದಲ್ಲಿ ನೀರು  ಬೆಳಕಿನಿಂದ ಹೊಳೆಯುವುದನ್ನು ಗಮನಿಸಿ ಆಶ್ಚರ್ಯಗೊಂಡು ಅದನ್ನು ದಾಖಲಿಸಿದರು. ಸುಮಾರು 1915 ರಿಂದ 1993ರ ವೆರೆಗೂ 235 ಇಂತಹ ಘಟನೆಗಳು ನಡೆದ ಬಗ್ಗೆ ದಾಖಲೆಯಿದೆ. ಅದರ ಬಗ್ಗೆ ಸಂಶೋಧನೆ ಕೈಗೊಂಡ ವಿಜ್ಞಾನಿಗಳಿಗೆ ಆ ಹೊಳಪಿಗೆ ಕಾರಣ Vibrio harveyi ಎಂಬ ಬ್ಯಾಕ್ಟೀರಿಯಾ ಎಂದು ತಿಳಿಯಿತು. ಜೈವಿಕ ಬೆಳಕನ್ನು ಸೂಸುವ ಈ ಬ್ಯಾಕ್ಟೀರಿಯಾ ಪ್ರದೇಶವೊಂದರಲ್ಲಿ ಸಂಖ್ಯೆಯಲ್ಲಿ ಅತೀ ಹೆಚ್ಚಾದಾಗ ಬೆಳಕು ಕಾಣಿಸುತ್ತದೆ. ಆ ಬೆಳಕು ಅದೆಷ್ಟು ತೀಕ್ಷ್ಣವಾದುದೆಂದರೆ ಆಕಾಶದಿಂದ ಉಪಗ್ರಹಗಳ ಮೂಲಕ ಚಿತ್ರ ತೆಗೆದಾಗಲೂ ಸಹ ಕಾಣಿಸುತ್ತದೆ. ಸಮುದ್ರದಲ್ಲಿ ಸಹಜವಾಗಿ ನಡೆವ ಈ ಘಟನೆಗೆ “Milky seas effect” ಎಂದು ಕರೆಯುತ್ತಾರೆ.

ಇದನ್ನೂ ಓದಿ : Science and Environment : ಜೀವವೆಂಬ ಜಾಲದೊಳಗೆ: ‘ಕೆಂಪಿ ಮಾಸ ತಿಂದುಬಿಟ್ಟಿರುತ್ತೆ, ಜಾಸ್ತಿ ನಂಜಿಗೆ ಕೊಡಬೇಕು’

“ಡಿನೊಫ್ಲಾಜೆಲ್ಲೇಟ್” ಎಂಬ ಹೆಸರಿನ ಆಲ್ಗೆಗಳು ಸಮುದ್ರದ ಮೇಲ್ಮೈಯಲ್ಲಿರುತ್ತವೆ. ಬರಿಯ ಕಣ್ಣಿಗೆ ಕಾಣದ ಏಕಾಣುಜೀವಿಗಳಿವು. ಇವುಗಳಿಗೆ ಯಾವುದೇ ರೀತಿಯ ಪ್ರಚೋದನೆ ಉಂಟಾದಾಗ ಜೈವಿಕ ಬೆಳಕನ್ನು ಬೀರುತ್ತವೆ. ಪ್ರದೇಶವೊಂದರಲ್ಲಿ ಇವುಗಳ ಸಂಖ್ಯೆ ಅತೀ ಹೆಚ್ಚಿದಾಗ ಅಲೆಗಳು ದಡಕ್ಕೆ ಅಪ್ಪಳಿಸಿದಾಗಲೆಲ್ಲ ನೀರಿನಲ್ಲಿರುವ ಇವು ಬೆಳಕು ಬೀರತೊಡಗಿ ಸಂಪೂರ್ಣ ಅಲೆಗಳು ನೀಲಿ ಬೆಳಕಿನಿಂದ ಹೊಳೆಯಲು ಪ್ರಾರಂಭವಾಗುತ್ತದೆ. ಪ್ರಪಂಚದ ಹಲವಾರು ಸಮುದ್ರತೀರಗಳಲ್ಲಿ  ನಿರ್ದಿಷ್ಟ ಸಮಯದಲ್ಲಿ ಮಾತ್ರ ಈ ಆಲ್ಗೆಗಳ ಸಂಖ್ಯೆ ಹೆಚ್ಚಾಗಲು ಬೇಕಾದಂತಹ ವಾತವರಣ ನಿರ್ಮಾಣವಾಗುತ್ತದೆಯಾದ್ದರಿಂದ ಅಂತಹ ಸಮಯದಲ್ಲಿ ಮಾತ್ರ ಈ ತೀರಗಳು ರಾತ್ರಿಯಾಗುತ್ತಿದ್ದಂತೆಯೆ ಹೊಳಪಿನ ತೀರಗಳಾಗುತ್ತವೆ. ನಮ್ಮ ಕರ್ನಾಟಕದ ಕರಾವಳಿ ತೀರ ಪ್ರದೇಶಗಳಾದ, ಉಡುಪಿ, ಪಡುಕೆರೆ, ಗೋಕರ್ಣ, ಮುಲ್ಕಿ ಮೊದಲಾದ ಕಡೆಗಳಲ್ಲಿ ಕೂಡ ಅಲೆಗಳು ಹಲವಾರು ಬಾರಿ ಹೀಗೆ ಹೊಳೆದದ್ದು ದಾಖಲೆಯಾಗಿದೆ.

ಜೈವಿಕ ಬೆಳಕೆಂಬುದು ಪ್ರಕೃತಿಯಲ್ಲಿ ಹಲವಾರು ಜೀವಿಗಳು ಸಂವಹಿಸುವ ಮಾಧ್ಯಮ. ಕೇವಲ ಮಾತೊಂದೇ ಸಂವಹನದ ಸಾಧ್ಯತೆಯನ್ನಾಗಿಸಿಕೊಂಡಿರುವ ನಮಗೆ ಅಂದರೆ ಮಾನವರಿಗೆ ಊಹಿಸಲೂ ಅಸಾಧ್ಯವೆನ್ನಿಸುವಂತಹ ಸಂವಹನ ಮಾಧ್ಯಮಗಳು ಪ್ರಕೃತಿಯಲ್ಲಿವೆ.

ಬೆಂಗಳೂರಿನ ಒಂದಿಷ್ಟು ಮಕ್ಕಳಿಗೆ ಜೈವಿಕ ಬೆಳಕಿನ ಬಗ್ಗೆ ನಾವು ಬಾಲ್ಯದಲ್ಲಿ ಮಿಂಚುಹುಳುಗಳನ್ನು ಹಿಡಿದು ಆಟವಾಡಿದ ಬಗ್ಗೆ ತುಂಬ ಖುಷಿಯಿಂದ ವಿವರಿಸುತ್ತಿದ್ದಾಗ ಹುಡುಗನೊಬ್ಬ ತಾನಿದುವರೆಗೂ ಆ ರೀತಿಯ ಕೀಟವನ್ನೇ ನೋಡಿಲ್ಲವೆಂದು ನಿರಾಸೆಯಿಂದ ಹೇಳಿದ. ಮುಂದಿನಬಾರಿ ಊರಿನಿಂದ ಬರುವಾಗ ಹಿಡಿದು ತಂದು ತೋರಿಸಬೇಕೆಂದೂ ಕೇಳಿಕೊಂಡ! ಹಳ್ಳಿಯ ಹಿನ್ನೆಲೆಯಿಂದಲೇ ಬಂದ ಕುಟುಂಬ ಆತನದು, ಆಗ್ಗಾಗ್ಗೆ ಊರಿಗೆ ಹೋಗಿಬರುತ್ತಾನೆ ಕೂಡ. ಆದರೂ ಮಿಂಚುಹುಳ ನೋಡಿಲ್ಲವೆಂದ. ಊರಿಗೆ ಹೋದಾಗ ಕೇಳಿದರೂ ಕೂಡ ಅನೇಕ ಮಕ್ಕಳು ನೋಡಿಲ್ಲವೆಂದರು. ಪೇಟೆಗಳ ಝಗಮಗಿಸುವ ಲೈಟ್ ಬೆಳಕಿನಲ್ಲಿ ಇವು ಕಾಣಲಾರವೇನೋ ಆದರೆ ಹಳ್ಳಿಗಳಲ್ಲಿ ರಾತ್ರಿ ಹೊರಬಂದು ಗಿಡಮರಗಳಿರುವೆಡೆಯಲ್ಲಿ ಗಮನಿಸಿದರೆ ಇವತ್ತಿಗೂ ಇವುಗಳಿರುವನ್ನು ನೋಡಬಹುದು. ಸುಲಭವಾಗಿ ಲಭ್ಯವಿರುವ ಇಂತಹ ಸೃಷ್ಟಿಯ ಅದ್ಭುತ ಸಂಗತಿಗಳನ್ನು ಮಕ್ಕಳಿಗೆ ತೋರಿಸಬೇಕಾದುದು ಅವಶ್ಯಕವಲ್ಲವೆ? ನಮ್ಮದೇ ರಾಜ್ಯದ ಕರಾವಳಿಯ ತೀರ ಪ್ರದೇಶಗಳಲ್ಲಿ ಅಲೆಗಳು ಹೊಳೆಯುವುದು ಆಗ್ಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಹತ್ತಿರವಿರುವವರು, ಸಾಧ್ಯವಿರುವವರು ಅಂತಹ ಸಮಯದಲ್ಲಿ ಮಕ್ಕಳನ್ನೂ ಕರೆದೊಯ್ದು ತೋರಿಸುವುದು ಕರ್ತವ್ಯವಲ್ಲವೆ?

ಮುಂದಿನ ಜಾಲ :  6.5.2022

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/jeevavemba-jaaladolage

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !