AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಟೈಮ್​ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ

Kaliyuga : ಹೆಂಗಸರು ಮಾತು ಕೇಳುವುದಿಲ್ಲ, ಗಂಡನ ಸೇವೆ ಮಾಡುವುದಿಲ್ಲ, ಗಂಡಸರಂತೆ ಬಿರುಬೀಸಾಗಿ ತಿರುಗುತ್ತಾಳೆ. ಗಂಡನಿಂದ ಸುಖ ಸಿಗದಿದ್ದರೆ ಬಿಟ್ಟು ಹೋಗುತ್ತಾಳೆ. ವಿಧವೆಯರು ಮತ್ತೆ ಮೋಹಿಸಿ ಮದುವೆಯಾಗುತ್ತಾರೆ. ಗಂಡಸು ಹೆಂಗಸರೆಲ್ಲ ಸಾಮಾಜಿಕವಾಗಿ ನಿರಾತಂಕವಾಗಿ ಬೆರೆಯುತ್ತಾರೆ.

ನಿಮ್ಮ ಟೈಮ್​ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ
ಲೇಖಕಿ ವೈಶಾಲಿ ಹೆಗಡೆ
Follow us
ಶ್ರೀದೇವಿ ಕಳಸದ
|

Updated on:Apr 21, 2022 | 10:22 AM

ನಿಮ್ಮ ಟೈಮ್​ಲೈನ್ | Nimma Timeline : ಜಗವೆಲ್ಲ ರಾಮರಾಜ್ಯಕ್ಕೆ ಕಾಯುತ್ತಿದೆ, ನಾನೋ ಈ ಕಲಿಯುಗ ಯಾವಾಗ ಬರುವುದೋ ಎಂದು ಎದುರು ನೋಡುತ್ತಿದ್ದೇನೆ! ಯಾಕೆ ಎಲ್ಲರೂ ಸುಭಿಕ್ಷ ಸಮೃದ್ಧ ಸುಖೀ ಸಮಾಜವನ್ನು ರಾಮರಾಜ್ಯಕ್ಕೆ ಹೋಲಿಸುತ್ತಾರೋ ಇಂದಿಗೂ ಅರ್ಥವಾಗಿಲ್ಲ. ನಾವೆಲ್ಲಾ ಕೊಚ್ಚಿಕೊಳ್ಳುವ ಭಾರತೀಯ ಸಂಸ್ಕೃತಿಗೆ ರಾಮರಾಜ್ಯವೊಂದು ಸುಂದರ ಕಲ್ಪನೆ. ಅಲ್ಲಿ ಸರ್ವರೂ ಸುಖಿಗಳಂತೆ! ರಾಮನ ರಾಜ್ಯದಲ್ಲಿ ಸುಖೀ ಹೆಂಗಸರು ಯಾರಿದ್ದರೋ, ಆ ರಾಮನೇ ಬಲ್ಲ. ಆದರೂ ಎಲ್ಲರಿಗೂ ರಾಮರಾಜ್ಯವೊಂದು ಬಂದುಬಿಡಬೇಕು. ತಾಯಿ ಕೌಸಲ್ಯೆಗೆ ಇಲ್ಲದ ಸುಖ, ಪರಿಪರಿಯಾಗಿ ನೋವು ತಿಂದ ಹೆಂಡತಿ ಸೀತೆಗೆ ಬೆಂಕಿಯಲ್ಲಿ ನಡೆದು ಬಂದರೂ ಸಿಗದ ಸುಖ, ನಮಗೆಲ್ಲ ಸಿಗುವುದಂತೆ. ಕೊನೆಗೂ ಕಾಡು ಪಾಲಾದ ಸೀತೆ ತಡೆಯಲಾರದೆ ಭೂಮಿ ಪಾಲಾದಳು. ಸೀತೆಯ ಪುಣ್ಯ, ರಾಮನಿಗೆ ಹೆಣ್ಣುಮಕ್ಕಳು ಹುಟ್ಟಲಿಲ್ಲ, ಇಲ್ಲದಿರೆ ಅವರಿನ್ನೆಷ್ಟು ಅನುಭವಿಸಬೇಕಿತ್ತೋ! ಮರೆಯಲ್ಲಿ ನಿಂತು ವಾಲಿಯನ್ನು ತರಿದು ತಾರೆಯನ್ನು ಸುಗ್ರೀವನಿಗೆ ಒಪ್ಪಿಸಿಬಿಟ್ಟ ರಾಮನ ರಾಜ್ಯದಲ್ಲಿ ಸರ್ವರಿಗೂ ಸಮಾನ ನ್ಯಾಯ ಸಿಗುವುದಂತೆ! ವೈಶಾಲಿ ಹೆಗಡೆ, ಲೇಖಕಿ (Vaishali Hegde)

ಹದಿಹರೆಯದ ಅಹಲ್ಯೆಯನ್ನು ವರಿಸಿದ ಮುದುಕ ಮಹರ್ಷಿ ಗೌತಮರಿಗೆ ಸಿಗದ ಶಿಕ್ಷೆ, ಆಕೆಯನ್ನು ಮೋಹಿಸಿದ ಇಂದ್ರನಿಗೆ ಸಿಗದ ಶಿಕ್ಷೆ ಸಿಕ್ಕಿದ್ದು ಮಾತ್ರ ಬಾಲೆ ಅಹಲ್ಯೆಗೆ! ಅವಳ ಬಿಡುಗಡೆಗೆ ರಾಮ ಬರಬೇಕಾಯ್ತು. ಅವಳ ತಪ್ಪೇನಿತ್ತು? ತಪ್ಪೇ ಮಾಡಿರದ ಸಹಸ್ರಾರು ಮಹಿಳೆಯರು ಇಂದೂ ರಾಮರಾಜ್ಯಕ್ಕೆ ಕಾಯುತ್ತಿದ್ದಾರೆ! ಯಾಕೆ ರಾಮ ಬರಬೇಕು ಇವರಿಗೆಲ್ಲ? ಕಲ್ಲಾಗಿ ಹೋಗಿರುವರೇ ಇವರೂ ಎಲ್ಲ?

ಹೆಜ್ಜೆ ಹೆಜ್ಜೆಗೂ ಕಟ್ಟುಪಾಡುಗಳನ್ನೇ ಹೊತ್ತು ನಡೆದ ಭಾರತೀಯ ನಾರಿಗೆ ಸಂಸ್ಕೃತಿಯ ಕಹಳೆಯೂದುವ ಕೆಲಸ ಬೇರೆ! ಕತ್ತಲಲ್ಲಿ ಇಂದಿಗೂ ನೆರಳೊಂದು ಕಂಡರೆ ಗಂಡಸರೆಲ್ಲ ಭೂತವೋ ಪ್ರೇತವೋ ಆಗದಿರಲಿ ದೇವರೇ ಎಂದುಕೊಂಡರೆ ನಾವು ಹೆಂಗಸರು, ಅದು ಗಂಡಸಾಗಿರದಿರಲಿ ದೇವರೇ ಭೂತವಾದರೂ ಆದೀತು ಎಂದುಕೊಳ್ಳುತ್ತೇವೆ. ರಾಮರಾಜ್ಯ ಬರಬೇಕಂತೆ ನಮಗೆ. ರಾಮನೇ ಯಾವತ್ತೂ ಹೆಂಗಸರಿಗೆ ನ್ಯಾಯ ಕೊಡಲಿಲ್ಲ, ಇನ್ನು ಈಗ ರಾಮರಾಜ್ಯ ಬಂದರೆ ನ್ಯಾಯ ದೊರಕಿಬಿಡುವುದೇ? ನ್ಯಾಯ ಕೊಡುವವ “ರಾಮ” ಎನ್ನುವ ಗಂಡಸು ತಾನೇ. ಆ ಅಹಂ ಎಲ್ಲಿ ಹೋದೀತು. ಭಾರತೀಯ ಸಂಸ್ಕೃತಿಯ ನರನಾಡಿಗಳಲ್ಲಿ ಹಾಸುಹೊಕ್ಕಾಗಿ ಹರಿದು ಹೆಮ್ಮರವಾಗಿ ಬೆಳೆದಿರುವ ಪುರುಷಪ್ರಧಾನ ಮನಸ್ಥಿತಿಗೆ ರಾಮರಾಜ್ಯ ಎಂದರೆ ಸುಖವೇ. ಗಂಡಸರೆಲ್ಲ ಸುಖವಾಗಿದ್ದರೆ ಆಯಿತಲ್ಲ, ಮತ್ತಿನ್ನೇನು ಬೇಕು ಸುಖೀ ಸಮಾಜಕ್ಕೆ? ಅಂದಿಗೂ ಇಂದಿಗೂ ರಾಮರಾಜ್ಯ ಎಂಬ ಸುಖೀ ಸಮಾಜ, ಪುರುಷ ಪ್ರಧಾನವೇ!

ನಮ್ಮ ಪುರಾಣಗಳಲ್ಲಿ ಕಲಿಯುಗ ಎಂದರೆ ಕೆಟ್ಟ ಯುಗ ಎಂಬ ಮಾತಿದೆ. ಕಲಿಯುಗ ಎಂದರೆ ನಮ್ಮ ಸಂಸ್ಕೃತಿ ನಾಶ ಎಂಬ ಪರಿಕಲ್ಪನೆಯಿದೆ. ಕಲಿಯುಗ ಬಂತೆಂದರೆ ವಿನಾಶ ಬಂದಂತೆ ಎಂಬ ಭವಿಷ್ಯವಾಣಿಯಿದೆ. ಹಾಗಿದ್ದರೆ ಈ ಕಲಿಯುಗ ಎಂದರೆ ಏನು? ಈ ಸಂಸ್ಕೃತಿ ನಾಶ ಎಂದರೆ ಕಲಿಯುಗದಲ್ಲಿ ಏನೇನಾಗಲಿದೆ ಮುಂದೆ ? ಅವೆಲ್ಲದರ ಭವಿಷ್ಯವಾಣಿಯಿದೆ.

ಗೊತ್ತೇ? ಕಲಿಯುಗದಲ್ಲಿ “ಹೆಂಗಸರು ಮಾತು ಕೇಳುವುದಿಲ್ಲ” “ಹೆಂಡತಿ ಗಂಡನ ಸೇವೆ ಮಾಡುವುದಿಲ್ಲ, ಮನೆಗೆಲಸ ಮಾಡುವುದಿಲ್ಲ” “ಗಂಡಸರಂತೆ ಹೆಣ್ಣು ಬಿರುಬೀಸಾಗಿ ತಿರುಗುತ್ತಾಳೆ” “ಗಂಡನಿಂದ ಸುಖ ಸಿಗದಿದ್ದರೆ ಬಿಟ್ಟು ಹೋಗುತ್ತಾಳೆ, ಅವನ ಅಧೀನಳಾಗುವುದಿಲ್ಲ” “ಹುಡುಗಿಯರು ಮದುವೆಯ ಮುಂಚಿನ ಸಂಬಂಧ ಹೊಂದುತ್ತಾರೆ, ಕೌಮಾರ್ಯಕ್ಕೆ ಬೆಲೆ ಕೊಡುವುದಿಲ್ಲ” “ಹೆಂಗಸು ಎದುರುತ್ತುರ ಕೊಡುತ್ತಾಳೆ, ವಾದಿಸುತ್ತಾಳೆ” “ಗಂಡಸು ಹೆಂಗಸರೆಲ್ಲ ಸಾಮಾಜಿಕವಾಗಿ ನಿರಾತಂಕವಾಗಿ ಬೆರೆಯುತ್ತಾರೆ” “ವಿಧವೆಯರು ಮತ್ತೆ ಮೋಹಿಸಿ ಮದುವೆಯಾಗುತ್ತಾರೆ” “ವಿಧವೆಯರು ಅಲಂಕರಿಸಿಕೊಳ್ಳುತ್ತಾರೆ” “ಹೆಂಡತಿ ಗಂಡನ ಮೇಲೆ ಅಧಿಕಾರ ಚಲಾಯಿಸುತ್ತಾಳೆ” ಅದೆಲ್ಲ ಇರಲಿ, ಮುಖ್ಯವಾಗಿ ಮಹಾ ಪಾಪಕರ ಭವಿಷ್ಯವಾಣಿ ಒಂದಿದೆ, ಅದೇನೆಂದರೆ “ಹೆಂಗಸು ಗಂಡಸಿನ ಅಂಕೆಯಿಲ್ಲದೆ ಅಲೆಯುತ್ತಾಳೆ ”

ಇದನ್ನೂ ಓದಿ : ನಿಮ್ಮ ಟೈಮ್​ಲೈನ್ : ಅದ್ವೈತದಲ್ಲಿರುವುದು ಬರೀ ಚೈತನ್ಯ! ಇನ್ನು ಹಿಂದೂಮುಸ್ಲಿಂ, ಗಂಡುಹೆಣ್ಣು ಎಲ್ಲಿ ನುಸಳಬೇಕು ಮಣ್ಣು?

ಇದಲ್ಲವೇ ಪುರುಷಪ್ರಧಾನ ಸಮಾಜದ ಭಯಾನಕ ಕನಸು? ಅಂಕೆಯಿಲ್ಲದೆ ಅಲೆಯುವ ಹೆಣ್ಣು! ಆದರೆ ಆಹಾ ಇದಲ್ಲವೇ ಸುಖೀ ಸಮಾಜ? ಯಾರ ಅಂಕೆಯಲ್ಲಿ ಯಾರು ಯಾಕಿರಬೇಕು? ಯಾವನಿಗೆ ಬೇಕು ರಾಮರಾಜ್ಯ? ಕಲಿಯುಗ ಬರಲಿ ದೇವರೇ ಕಲಿಯುಗ. ಎಲ್ಲಿದೆ ಈ ಭವಿಷ್ಯವಾಣಿಯ ಕಲಿಯುಗ ? ಇನ್ನೂ ಜನ ರಾಮರಾಜ್ಯಕ್ಕೆ ಕಾಯುತ್ತಿದ್ದಾರಲ್ಲ? ಎಂಥ ಹುಚ್ಚು ಇದು? ಹೆಣ್ಣು ಅಲೆದರೆ ಅದು ಪಾಪ. ಅಂಕೆ ಹಾಕುವುದು ಪುರುಷಧರ್ಮ! ಎಂಥ ಕಲ್ಪನೆ ಆಗಿನದು ?! ಆಗಿನದೇಕೆ , ಈಗನದೂ ಕೂಡ! ಸಂಬಂಧವೇ ಇಲ್ಲದ ಗಂಡಸರೆಲ್ಲ ಬೀದಿಯಲ್ಲಿ ಬಂದು ಹಕ್ಕು ಚಲಾಯಿಸುವ ಈ ಸಮಾಜಕ್ಕೆ ಇನ್ನೂ ಕಲಿಯುಗ ಯಾಕೆ ಬರುತ್ತಿಲ್ಲ? ನಾವೆಲ್ಲಾ ಅಂಕೆಯಿಲ್ಲದೆ ಬಿಡಿ, ಹೋಗಲಿ, ನೆಮ್ಮದಿಯಾಗಿ ಅಲೆಯುವ ಕಾಲವಾದರೂ ಬಂದೀತೆ?

ಹಾಗೆ ನೋಡಿದರೆ, ಧರ್ಮದಿಂದ ಅಧರ್ಮದೆಡೆಗೆ ಸಾಗುವ ಕಲ್ಪನೆಯ ನಮ್ಮ ಯುಗಗಳಲ್ಲಿ ಹೆಣ್ಣು ಕಟ್ಟುಪಾಡುಗಳಿಂದ ಸ್ವಾತಂತ್ರ್ಯದೆಡೆಗೆ ಸಾಗುತ್ತಿದ್ದಾಳೆ. ಧರ್ಮವೆಂದರೆ ಬರೀ ಹೆಣ್ಣನ್ನು “ಅಂಕೆ” ಯಲ್ಲಿಡುವ ಸಾಧನವೇ? ಈ ಅಧರ್ಮದ ಕಲಿಯುಗದಲ್ಲೊಂದೇ ಹೆಣ್ಣಿಗೆ ನ್ಯಾಯ ಸಿಗುವುದಾದಲ್ಲಿ, ಬರಲಿ ಆ ಕಲಿಯುಗ. ಎಲ್ಲ ಅಸಮಾನತೆ ಅನ್ಯಾಯಗಳ ಧರ್ಮದ ಹೆಸರಲ್ಲಿ ಹೊಟ್ಟೆಯಲ್ಲಿಟ್ಟು ಪೋಷಿಸುವ ನಮ್ಮ ಧಾರ್ಮಿಕ ಪರಿಕಲ್ಪನೆಯೆಲ್ಲ ಬದಲಾಗಿ ಹೋಗಲಿ. ಸತ್ಯಯುಗದಲ್ಲಿ ತನ್ನ ಹಕ್ಕಿಗಾಗಿ ಸತಿ ಹೋಗಬೇಕಾಯ್ತು ದಾಕ್ಷಾಯಣಿಗೆ. ತ್ರೇತಾಯುಗದ ಜಾಹ್ನವಿಗೆ ಜಗದೆಲ್ಲೆಲ್ಲೂ ಜಾಗ ಸಿಗದೇ ಜರ್ಜರಿತಳಾಗಿ ಹೋದಳು. ದ್ವಾಪರೆಯ ದ್ರೌಪದಿಯನ್ನು ನೋಡಿ ಬಹುಷಃ ಜನ ಕಲಿಯುಗದ ಭವಿಷ್ಯವಾಣಿ ಬರೆದಿರಬೇಕು. ಸಣ್ಣಗೆ ನಡುಕ ಹುಟ್ಟಿರಬೇಕು. ಅದಕ್ಕೆಂದೇ ಹೀಗೆಲ್ಲ ಮುಂದಾಲೋಚನೆ ಮಾಡಿ ಬರೆದರೇನೋ ಕಲಿಯುಗ ಬರಲಿದೆ ಕಲಿಯುಗ ಎಂದು! ಇಷ್ಟೆಲ್ಲಾ ಗೊತ್ತಿದ್ದೂ ಸುಮ್ಮನಿರಲಾದೀತೇ? ಕಲಿಯ ಆಗಮನವನ್ನು ಸಾಕಷ್ಟು ತಪ್ಪಿಸುತ್ತಲೆ ನಡೆದಿದ್ದಾರೆ ಎಲ್ಲ. ಈ ಕಣ್ಣಲ್ಲಿ ಆ ಭವಿಷ್ಯವಾಣಿಯ ಕಲ್ಪನೆ ಮಾಡಿಕೊಡರೆ ಸಾಕು ಎಂಥ ಸುಂದರ ಜಗತ್ತು ಎನಿಸುತ್ತಿದೆ. ಎಂದು ಬರಲಿದೆಯೋ ಆ ಕನಸಿನ ಕಲಿಯುಗ!

ಓ ಕಲ್ಕಿಯೇ ಬೇಗ ಬಾ, ನಿನ್ನ ಯುಗ ತಾರ ಬಾ. ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ. ಯಾರ ಭಯವಿಲ್ಲದೆ ಅಲೆಸು ಬಾ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಗಮನಿಸಿ: ‘ನಿಮ್ಮ ಟೈಮ್​ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

ಇದನ್ನೂ ಓದಿ : Woman Scientist: ನಿಮ್ಮ ಟೈಮ್​ಲೈನ್; ‘ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿತು’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

Published On - 10:15 am, Thu, 21 April 22