Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ

Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
ಅನುವಾದಕ ಕೆ.ಕೆ. ಗಂಗಾಧರನ್, ಮಲಯಾಳದ ಕಥೆಗಾರ ಸಂತೋಷ ಏಚ್ಚಿಕಾನಂ

Santhosh Echikkanam‘s Malayalam Story : ‘ಲೋ ಈ ಜಗತ್ತಿನಲ್ಲಿ ನಿನ್ನ ವೇದಾಂತಕ್ಕೆ ದೊಡ್ಡ ಮಾರುಕಟ್ಟೆಯೇನೂ ಇಲ್ಲ. ಸಮಯ ವ್ಯರ್ಥ ಮಾಡಲಾರೆ. ನನ್ನ ಪ್ರಕಾರ ಭೂತ, ಭವಿಷ್ಯತ್‍ಗಳು ಇಲ್ಲ. ವರ್ತಮಾನವಷ್ಟೇ ಇರೋದು. ನಾನು ನಿನ್ನನ್ನು ನುಂಗುತ್ತೇನೆ.’

ಶ್ರೀದೇವಿ ಕಳಸದ | Shridevi Kalasad

|

Apr 22, 2022 | 10:48 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಲೇಖಕ ಸಂತೋಷ್ ಏಚ್ಚಿಕಾನಂ ಹುಟ್ಟಿದ್ದು ಕೇರಳದ ಕಾಸರಗೋಡಿನ ಬೇಡಡ್ಕದಲ್ಲಿ. ಬರೆವಣಿಗೆಯ ಮೂಲಕ ಕಿರುತೆರೆ ಹಿರಿತೆರೆಗಳಲ್ಲಿಯೂ ಖ್ಯಾತರಾಗಿರುವ ಇವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಈತನಕ ಸುಮಾರು 16 ಕಥಾ ಸಂಕಲನಗಳು ಪ್ರಕಟಗೊಂಡಿವೆ. ಪ್ರಸ್ತುತ ಕಥೆ, ಊರಿನ ತೋಟದಮನೆಯ ಬಾವಿಯಲ್ಲಿ ಬಿದ್ದ ಕಪ್ಪೆ ಮತ್ತು ನೀರುಹಾವುಗಳ ಮಧ್ಯೆ ಅರಳುತ್ತಾ ಹೋಗುತ್ತದೆ. Struggle for Existence ಎಂಬ ಜೀವನ ತತ್ವವನ್ನು ಇದು ಪ್ರತಿಫಲಿಸುತ್ತದೆ. ‘ಹಾವಿನ ದವಡೆಯಿಂದ ಪಾರಾಗಲು ಬಯಸುವ ಕಪ್ಪೆಯ ಸ್ಥಿತಿ ಮತ್ತು ಅದು ಶತ್ರುವನ್ನೇ ಮುಗಿಸುವ ರೀತಿ ತುಂಬಾ ಇಷ್ಟವಾಯಿತು. ಪರಿಸ್ಥಿತಿಯನ್ನು ಧೈರ್ಯದಿಂದ ನಿಭಾಯಿಸುವ ಕಪ್ಪೆಯ ರೀತಿಯೂ ಅನನ್ಯ’ ಎನ್ನುವ ಅನುವಾದಕ ಕೆ. ಕೆ. ಗಂಗಾಧರನ್ ಕಾಸರಗೋಡಿನ ಹಳ್ಳಿಯೊಂದರಲ್ಲಿ ಹುಟ್ಟಿ ಕೊಡಗಿನ ಸೋಮವಾರಪೇಟೆಯ ಕಬ್ಬಿಣಸೇತುವೆ ಎಂಬಲ್ಲಿ ಬಾಲ್ಯ ಕಂಡವರು. ಮಾತೃಭಾಷೆ ಮಲಯಾಳಂ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ. ಮಲಯಾಳದಿಂದ ಕನ್ನಡಕ್ಕೆ ಒಟ್ಟು 24 ಕೃತಿಗಳು ಅನುವಾದಗೊಂಡಿವೆ. ಕುವೆಂಪು ಭಾಷಾ‌ ಭಾರತಿ ಪ್ರಾಧಿಕಾರದ ಅತ್ಯುತ್ತಮ ಅನುವಾದ ಪ್ರಶಸ್ತಿ ಮತ್ತು ಪ್ರಾಧಿಕಾರದ ಗೌರವ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇಲ್ಲಿರುವ ಈ ಕಥೆಯು ಅಚ್ಚಿನಲ್ಲಿರುವ ಹೊಸ ಕಥಾಸಂಕಲನದಲ್ಲಿ ಅಡಕವಾಗಿದೆ.

ಕಥೆ : ಉಭಯ ಜೀವನ | ಮಲಯಾಳ ಮೂಲ : ಸಂತೋಷ ಏಚಿಕಾನಂ | ಕನ್ನಡಕ್ಕೆ : ಕೆ.ಕೆ. ಗಂಗಾಧರನ್ 

(ಭಾಗ 1)

ದೇಹದ ಅರ್ಧಭಾಗವನ್ನು ನೀರಿನ ಹರಿವಿನ ಎಳೆಬಿಸಿಯಲ್ಲಿ ಮುಳುಗಿಸಿದ ಸಾಮಾನ್ಯ ಗಾತ್ರದ ಕಪ್ಪೆಯೊಂದು ತೇವಗೊಂಡ ಹುಲ್ಲರಾಶಿಯ ಸಂದಿಯಿಂದ ಶೈತ್ಯ ಕಾಲಾರಂಭದ ಆಕಾಶದತ್ತ ದಿಟ್ಟಿಸುತ್ತಿತ್ತು.

ನಸುಕಿನಲ್ಲಿಯೇ ಹೋರಾಟ ಉಳುಮೆ ಎತ್ತುಗಳ ಗೊರಸುಗಳ ಹೊಡೆತಕ್ಕೆ ಪುಡಿಪುಡಿಯಾಗುತ್ತಿದ್ದ ಮಣ್ಣಿನ ಹೆಂಟೆಗಳಿಂದ ಭೂಮಿಯ ನಿಶ್ವಾಸ ಹೊರಬಂದು ಕಪ್ಪೆಯನ್ನು ಕವಿಯಿತು. ಅದರ ಸ್ಫಟಿಕದಂತಹ ಕಣ್ಣುಗಳು ಅಜ್ಞಾತ ನಿರ್ವೃತ್ತಿಯತ್ತ ರೆಕ್ಕೆ ಬಿಚ್ಚಿತು. ಆತ್ಮ ದೇಹದಿಂದ ಬೇರ್ಪಟ್ಟ ಕಡಲಗಿಡಗಳ ಸಂದಿಯಿಂದ ಸಂಚರಿಸುತ್ತಿರುವಂತೆ ಅದಕ್ಕನಿಸಿತು.

ಬೆಳಕು, ಬಯಲಿನ ನಾನಾ ರೀತಿಯ ಹಸಿರುಗಳ ಮೇಲೆ ಪಸರಿಸುವ ಮೊದಲು ತೋಡಿನ ಬದಿಯ ಕಾಡುಗಿಡಗಳ ನಡುವೆಯಿಂದ ಏನೋ ಅಲುಗಾಡಿದಂತಾಗಿ ಕಪ್ಪೆ ಅತ್ತ ನೊಡಿತು.

ಕಣ್ಣುಗಳು, ಉದ್ದಕ್ಕೂ ವಾಲಾಡುತ್ತಾ ಹಸಿದು ಬರುತ್ತಿರುವ ಶತ್ರುವಿನತ್ತ ಸರಿಯಿತು. ಕನಸುಗಳೆಲ್ಲವನ್ನು ಬದಿಗೊತ್ತಿ ಮರುನಿಮಿಷವೇ ಅಪಾಯಕರವಾದ ಗಾಢಕತ್ತಲೆಯತ್ತ ಕಪ್ಪೆ ಜೀವದ ಹಂಗು ತೊರೆದು ಜಿಗಿಯಿತು. ಅನಂತರ ಕೆಲವಾರು ನಿಮಿಷಗಳ ಪ್ರಾಣಭಯದ ಓಟ. ಅಷ್ಟೂ ಹೊತ್ತು ಕಪ್ಪೆಯ ಆಕುಲತೆಗಳೆಲ್ಲವೂ ತನ್ನ ದೇಹದ ಕುರಿತು ಮಾತ್ರವಾಗಿತ್ತು. ತನ್ನ ರಕ್ಷಣೆಗೆ ದಡವೇ ನೀರೇ ಎಂಬುದರ ಆಯ್ಕೆಗೂ ಕಪ್ಪೆಗೆ ಅವಕಾಶವಿರಲಿಲ್ಲ. ದೇವರ ಕರುಣೆಯಿಂದ ಸಣ್ಣದೊಂದು ಎಲೆಯಿಂದಾದರೂ ತನ್ನನ್ನು ಮರೆಮಾಚದೇ ಇರುವುದು ಏಕೆ ಎಂದು ಪ್ರಯಾಣದುದ್ದಕ್ಕೂ ಕಪ್ಪೆ ವಿಲಪಿಸುತ್ತಲೇ ಇತ್ತು.

ನೀರುಹಾವಿಗೂ ಕಪ್ಪೆಗೂ ನಡುವೆ ನಡೆದ ಆಘಾತದಲ್ಲಿ ಎರಡೂ ಜೀವಗಳು ಆಯತಪ್ಪಿ ಆಳವಾದ ಬಾವಿಯೊಂದಕ್ಕೆ ಬಿದ್ದವು. ಆಳೆತ್ತರದ ನೀರಿದ್ದರೂ ಬಾವಿ ಉಪಯೋಗ ಶೂನ್ಯವಾಗಿತ್ತು. ಮೆಟ್ಟಲುಗಳನ್ನು ನಿರ್ಮಿಸಿದ ಬಾವಿಯ ಗೋಡೆಯ ಮೇಲೆ ದೊಡ್ಡ ಅರಳಿಕಟ್ಟೆಯಿತ್ತು. ಬಾವಿಯ ಸುತ್ತಲೂ ವಿವಿಧ ರೀತಿಯ ಸಸ್ಯಗಳು ಬೆಳೆದು ನಿಂತಿದ್ದವು. ಅದರಿಂದ ಬಾವಿಗೆ ಮಧ್ಯಾಹ್ನದ ಬಿಸಿಲಿನಲ್ಲೂ ರಾತ್ರೆಯ ಕತ್ತಲೆಯಿತ್ತು.

ಬಿದಿದ್ದರ ಆಘಾತದಿಂದ ಚೇತರಿಸಿಕೊಂಡ ಕಪ್ಪೆ ಹೊರಳಾಡುತ್ತಾ ಹಾವಸೆಯಿಂದ ನುಣುಪಾದ ಕಪ್ಪು ಕಲ್ಲನ್ನು ಹಿಡಿದು ನೀರಿನ ಮಟ್ಟದಿಂದ ಒಂದು ಅಡಿ ಮೇಲೆ ಬಂದು ಕುಳಿತಿತು. ನೀರು ಹಾವು ಬಾಯಿಯ ಸಂದಿಯಿಂದ ತನ್ನೆಲ್ಲಾ ಕೋಪವನ್ನು ಪ್ರದರ್ಶಿಸುತ್ತಾ ಕಪ್ಪು ಕಲ್ಲನ್ನು ಹತ್ತಲು ಉತ್ಸಾಹತೋರಿತು. ಕಪ್ಪೆ ತನ್ನ ಸಾವನ್ನು ಬೆರಳಂಚಿನ ಅಂತರದಲ್ಲಿ ನೋಡುತ್ತಾ ನೀರು ಹಾವಿಗೆ ಹೇಳಿತು.

‘ಗೆಳೆಯಾ, ತಿನ್ನುವ ಮೊದಲು ನಾನು ಹೇಳುವುದನ್ನು ಕೇಳು’

ನೀರುಹಾವು ಕಪ್ಪೆಯನ್ನು ನೋಡಿತು.

ಹೊಟ್ಟೆಯಲ್ಲಿ ಹಸಿರು ಗೆರೆಗಳು, ಕಣ್ಣಿನ ಸುತ್ತ ಬಿಳಿಯ ಅಂಚುಗಳಿರುವ ಕೊಬ್ಬಿದ ದೇಹ. ಅದರ ಸ್ಫಟಿಕದಂತಹ ತೊಡೆ ಮಾಂಸ ತನ್ನ ಒಳಗೆ ಸೇರಿ ಜೀರ್ಣವಾಗುವ ಪರಿಯನ್ನು ಕಲ್ಪಿಸಿಕೊಳ್ಳುತ್ತಾ ನೀರುಹಾವು ಜೊಲ್ಲು ಸುರಿಸಿತು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

‘ನಿನ್ನ ಪುರಾಣವೇನೂ ನನಗೆ ಕೇಳಬೇಕಂತಿಲ್ಲ. ಈಗ ನನಗೆ ಹಸಿವಾಗಿದೆ’ ನೀರುಹಾವು ತಾಳ್ಮೆಗೆಟ್ಟು ಹೇಳಿತು.

‘ಸರಿ’ ಕಪ್ಪೆ ಒಪ್ಪಿಕೊಂಡಿತು, ‘ಆದರೆ ನೀನು ನಿನ್ನ ಹಿಂದೆ ನೋಡು ಎಷ್ಟೊಂದು ಶೂನ್ಯತೆಯಿದೆ ಅಲ್ಲಿ’

ರೂಢಿಗೆ ವಿರುದ್ಧವಾಗಿ ಕೆಲವು ಷಟ್ಟದಿಗಳು ಮತ್ತು ಜಲದುಂಬಿಗಳಲ್ಲದೆ ಇನ್ನು ಯಾವ ಜೀವಿಯೂ ಇಲ್ಲವೆಂದು ನೀರುಹಾವಿಗೆ ಆಗ ತಿಳಿಯಿತಷ್ಟೆ.

‘ನೀನು ನನ್ನನ್ನು ತಿಂದು ಮುಗಿಸಿದ ನಂತರ ಸಾಯುವ ತನಕ ಎಷ್ಟೊಂದು ಏಕಾಂಗಿತನವನ್ನು ಅನುಭವಿಸಬೇಕಾಗುತ್ತದೆ ಯೋಚಿಸಿದ್ದೀಯಾ?’

ಕಪ್ಪೆಯ ಮಾತನ್ನು ಕೇಳಿ ನೀರುಹಾವು ಪೇಚಿಗೆ ಸಿಲುಕಿದಂತಾಗಿ ಚಡಪಡಿಸಿತು. ಪುಟ್ಟಪುಟ್ಟ ಮೀನುಗಳನ್ನು ನಿರೀಕ್ಷಿಸುತ್ತಾ ಅದು ಪುನಃ ಸಮಗ್ರ ವೀಕ್ಷಣೆಗೆ ಸಿದ್ದಗೊಂಡಿತು. ಆದರೆ ನಿರಾಶೆಯಿಂದ ಅದು ಹಿಂದಕ್ಕೆ ಸರಿಯಿತು. ಪುಟ್ಟ ಪುಟ್ಟ ಅಲೆಗಳು ಬದಿಯಲ್ಲಿರುವ ಎಲೆಗಳಿಗೆ ತಾಗಿ ಬಾವಿಗೊಂದು ಲಯ ಒದಗುವಂತೆ ಮಾಡಿತು.

ಹುಲ್ಲುಗಳ ಕೊಳೆತು ನಾರುವ ಅವಶೇಷಗಳಿಂದ ಬಲಹೀನಗೊಂಡ, ಪ್ರಾಣಿಗಳು ಅಲೆಗಳ ಹೊಡೆತಕ್ಕೆ ಮೇಲೆದ್ದು ಬಂದು ಮತ್ತೆ ಯಥಾಸ್ಥಾನಕ್ಕೆ ಮರಳಿದವು. ಬಾವಿಯ ಭಿತ್ತಿಗಳಲ್ಲಿ ಬೆಳೆದಿರುವ ಬಳ್ಳಿಗಳತ್ತ ನೀರುಹಾವು ಕಣ್ಣುಗಳನ್ನು ಹಾಯಿಸಿತು.

‘ನನಗೆ ತುಂಬಾ ಹಸಿವಾಗುತ್ತಿದೆ’ ಅದು ಧ್ವನಿಯೇರಿಸಿ ಹೇಳಿತು.

‘ಹಸಿವಷ್ಟೇ ಏನು ಬದುಕು?’ ಕಪ್ಪೆ ಕೇಳಿತು.

ಬಾವಿಯ ಮೇಲೆ ತುಂಬಾ ದೂರದಿಂದ ಮೋಟಾರ ಬೈಕೊಂದರ ಧ್ವನಿ ಕೇಳಿಸಿತು. ಯಾರಿಗೂ ಬೇಡವಾದ ಈ ಹೊಲದ ಆಚೆ, ರಸ್ತೆ ಮತ್ತು ಜನವಾಸ ಇರಬೇಕು. ಆದರೆ ಈ ಬಾವಿಯ ಮೇಲೆ ಮನುಷ್ಯನ ನೆರಳು ಬಿದ್ದೇ ವರ್ಷಗಳಾಗಿರಬೇಕು.

“ಲೋ..” ನೀರುಹಾವು ಕರೆಯಿತು, “ಈ ಜಗತ್ತಿನಲ್ಲಿ ನಿನ್ನ ವೇದಾಂತಕ್ಕೆ ದೊಡ್ಡ ಮಾರುಕಟ್ಟೆಯೇನೂ ಇಲ್ಲ. ಯಾವುದೇ ಕೆಲಸಕ್ಕೆ ಮುಂಚೂಣಿಯಲ್ಲಿರುವುದು, ಸಿಗುವುದು ಏನಾದರೂ ಸರಿಯೆ, ಸಮಯ ವ್ಯರ್ಥ ಮಾಡದೆ ಬಳಸುವುದು.. ಇದು ನನ್ನ ರೀತಿ. ನನ್ನ ಅಭಿಪ್ರಾಯದ ಪ್ರಕಾರ ಭೂತ ಮತ್ತು ಭವಿಷ್ಯತ್‍ಗಳು ಇಲ್ಲ. ವರ್ತಮಾನವಷ್ಟೇ ಇರೋದು. ನಾನು ನಿನ್ನನ್ನು ನುಂಗುತ್ತೇನೆ.”

ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ವೈರಿ ತನ್ನೊಂದಿಗೆ ನಿದ್ರಿಸುವಾಗ ರಾತ್ರಿಗಳನ್ನು ಕಳೆಯುವುದಾದರೂ ಹೇಗೆ?

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಎಲ್ಲಾ ಭಾಗಗಳನ್ನು ಮತ್ತು ಅಂಕಣದ ಎಲ್ಲಾ ಅನುವಾದಿತ ಇತರೇ ಕಥೆಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Follow us on

Related Stories

Most Read Stories

Click on your DTH Provider to Add TV9 Kannada