Literature: ನೆರೆನಾಡ ನುಡಿಯೊಳಗಾಡಿ; ‘ಏನು ಪಾಪ? ಹಸಿವು ಮುಖ್ಯ, ಆದರ್ಶಗಳು ಆಮೇಲೆ’
Santhosh Echikkanam‘s Malayalam Story : ತನ್ನ ಸಹಜೀವಿಯೊಂದಿಗೆ ಮಾಡಿಕೊಂಡ ಒಪ್ಪಂದ, ಹೊಂದಾಣಿಕೆಗಳು ಒಂಟಿತನಕ್ಕಿಂತಲೂ ಭೀಕರವಾಗಿದೆಯೆಂದು ಕಪ್ಪೆಗೆ ತಿಳಿಯಿತು. ನೀರುಹಾವಿಗೆ ಸೋತು ಎಲ್ಲವನ್ನು ಒಮ್ಮೆಗೆ ಕೊನೆಗೊಳಿಸಿ ಬಿಡೋಣವೆಂದೂ ಅದು ಯೋಚಿಸದಿರಲಿಲ್ಲ.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಬಾವಿಯ ಕತ್ತಲೆಯ ಅಸಹಿಷ್ಣುತೆಯಲ್ಲಿ, ಅನಂತ ದೂರಗಳನ್ನು ಮತ್ತು ಸ್ವತಂತ್ರವಾಗಿರುವ ಶರತ್‍ಕಾಲದ ಆಕಾಶದಲ್ಲಿ ಅರಳಿ ಬರುತ್ತಿರುವ ಚೇತೋಹಾರಿ ದೃಶ್ಯವನ್ನು ನೀರುಹಾವಿಗೆ ತೋರಿಸಬೇಕೆಂದು ಕಪ್ಪೆಗೆ ಅನಿಸಿತು. ಆದರೆ ನೀರು ಹಾವು ಅಷ್ಟರಲ್ಲಿ ಕೊಳೆತು ನಾರುವ ಸೊಪ್ಪುಹಾವಸೆಗಳ ನಡುವೆ ನಿದ್ರಿಸತೊಡಗಿತ್ತು. ಹೊರಗಿನ ಮನೆಯಿಂದ ಹಲವಾರು ರೀತಿಯ ಸದ್ದುಗಳು ಇಳಿದುಬಂದು ಬಾವಿಯ ಏಕಾಂತತೆಯನ್ನು ಸೇರಿದವು. ದಿನಗಳು ಉರುಳಿದವು. ಒಂದು ನಸುನಗುವಿನಿಂದ, ಆದರೆ ಒಳಗೆ ಕೊರೆದು ತಿನ್ನುವ ಸಹಜವಾದ ದ್ವೇಷದಿಂದ ಕಪ್ಪೆ ಮತ್ತು ನೀರುಹಾವು ಪರಸ್ಪರ ನೋಡುವುದು ವಾಡಿಕೆಯಾಯಿತು. ನೀರುಹಾವು ಹಸಿರೆಲೆಗಳ ಸಂದಿಯಲ್ಲಿ ತಲೆ ಚಾಚುವಾಗ ಕಪ್ಪೆ ಅದು ಕೂಡ ತಿಳಿಯದಂತೆ ಒಂದು ಅಪಹಾಸ್ಯದ ನಗು ಹೊರಹೊಮ್ಮಿಸುತ್ತಿತ್ತು. ಗಾಳಿಯಲ್ಲಿ ವಾಲಾಡುತ್ತಿರುವ ಕಪ್ಪೆಯ ನಾಲಗೆಯ ಮೃದುತ್ವದಲ್ಲಿ ಷಟ್ಟದಿ ಕೂಡ ತಡೆಯಲು ಸಾಧ್ಯವಾಗದಿರುವುದನ್ನು ಕಂಡು ನೀರುಹಾವು ಕೂಡ ಮನಸ್ಸಿನಲ್ಲಿಯೇ ನಕ್ಕಿತು. ವಾಸ್ತವದಲ್ಲಿ ಇಬ್ಬರೂ ಅಗಾಧವಾದ ನಿಶ್ಶಬ್ದತೆಯನ್ನು ಪಕ್ವತೆಯನ್ನು ಪರಿಪಾಲಿಸುತ್ತಾ ಬಂದವು.
ಕಥೆ : ಉಭಯ ಜೀವನ | ಮಲಯಾಳ ಮೂಲ : ಸಂತೋಷ ಏಚಿಕಾನಂ | ಕನ್ನಡಕ್ಕೆ : ಕೆ.ಕೆ. ಗಂಗಾಧರನ್
(ಭಾಗ 3)
ಒಂದು ದಿನ ಬಾವಿಯ ಬದಿಯಲ್ಲಿ ಓಡಿಹೋಗುತ್ತಿದ್ದ ಕಿರಿಯ ಜಾತಿಯ ಗೋಸುಂಬೆ ಕಾಲು ಜಾರಿ ಬಾವಿಗೆ ಬಿತ್ತು. ತಪ್ಪಿಸಿಕೊಳ್ಳಲು ಅವಕಾಶಕೊಡದೆ ನೀರುಹಾವು ಅದನ್ನು ಬಾಯೊಳಕ್ಕೆಳೆದುಕೊಂಡಿತು. ಒಂದು ಪೂರ್ಣ ದೇಹ ಸ್ವಲ್ಪ ಸ್ವಲ್ಪವಾಗಿಯೇ ಶತ್ರುವಿನೊಳಕ್ಕೆ ಇಳಿಯುವುದನ್ನು ಕಂಡು ಕಪ್ಪೆಯ ಎದೆ ಬಡಿತ ತೀವ್ರಗೊಂಡಿತು. ಪರಿಣಾಮವಾಗಿ ಅದರ ನೆಮ್ಮದಿಯೇ ಬುಡಮೇಲಾಯಿತು. ನೀರುಹಾವು ಹಸಿರೆಲೆಯ ರಾತ್ರೆಯೂಟದಿಂದ ರೋಸಿಹೋಗಿತ್ತು. ಅದು ನಂಬಲಾಗದ ವೇಗದಲ್ಲಿ ರಕ್ತದ ವಾಸನೆಯಿರುವ ಪೂರ್ವಕಾಲಕ್ಕೆ ಮರಳಿತು. ರೂಢಿಗೆ ಭಿನ್ನವಾಗಿ ಅದು ಕಪ್ಪೆಯನ್ನು ದುರಾಸೆಯಿಂದ ನೋಡಿತು.
ಒಂದು ದಿನ ಕಪ್ಪೆಯನ್ನು ಪೊಳ್ಳು ಜಲಚರದಂತೆ ಪರಿಗಣಿಸಿ ಹಾವು ತನ್ನ ನಾಲಗೆಯನ್ನು ಸಿಡಿಲಿನಂತೆ ಅದರತ್ತ ಚಾಚಿತು. ಆದರೆ ಅದೃಷ್ಟವಶಾತ್ ಅದು ಉಳಿದುಕೊಂಡಿತು. ಅದು ಉದ್ದೇಶಪೂರ್ವಕವಲ್ಲವೆಂಬ ಕ್ಷಮಾಪಣೆಯ ಮಾತುಗಳನ್ನಾಡಿ ತಿರುಗಿ ಹೋದ ನೀರುಹಾವಿನ ಕಣ್ಣುಗಳಲ್ಲಿ ಎಲ್ಲೋ ಒಂದು ಕಡೆ ತನ್ನ ಸಾವು ಇದೆಯೆಂದು ಕಪ್ಪಗೆ ಖಚಿತವಾಯಿತು.
ಮಿಕ್ಕುಳಿದ ದಿನಗಳಲ್ಲಿ ತನ್ನ ಸಹಜೀವಿಯೊಂದಿಗೆ ಮಾಡಿಕೊಂಡ ಒಪ್ಪಂದ ಹಾಗೂ ಹೊಂದಾಣಿಕೆಗಳು ಒಂಟಿತನಕ್ಕಿಂತಲೂ ಭೀಕರವಾಗಿದೆಯೆಂದು ಕಪ್ಪೆಗೆ ತಿಳಿಯಿತು. ನೀರುಹಾವಿಗೆ ಸೋತು ಎಲ್ಲವನ್ನು ಒಮ್ಮೆಗೆ ಕೊನೆಗೊಳಿಸಿ ಬಿಡೋಣವೆಂದೂ ಅದು ಯೋಚಿಸದಿರಲಿಲ್ಲ. ಹಾಗೆ ನೋಡಿದರೆ ಭೂಮಿಯಲ್ಲಿರುವ ಎಲ್ಲಾ ಜೀವಿಗಳು ಒಂದು ದೊಡ್ಡ ಗುಳಿಯಲ್ಲಿದೆಯೆಂದು ಅನುಭವದ ಬೆಳಕಿನಲ್ಲಿ ಕಪ್ಪೆ ಖಚಿತಪಡಿಸಿಕೊಂಡಿತು.
ಆ ರಾತ್ರೆ ಅದಕ್ಕೆ ನಿದ್ರೆ ಹತ್ತಲಿಲ್ಲ. ಕಲ್ಲೊಂದರ ಮೇಲೆ ತಲೆ ಬಡಿದು ರೂಢಿಗೆ ಭಿನ್ನವಾಗಿ ಗಟ್ಟಿಯಾಗಿ ಅತ್ತಿತು. ಕಣ್ಣುಗಳು ತುಂಬಿ ಹರಿದವು. ದುಃಖ ತನ್ನ ಸುತ್ತಲೂ ಬೆಂಕಿ ಹಚ್ಚಿ ನೃತ್ಯವಾಡುತ್ತಿದೆಯೆಂದು ಕಪ್ಪೆಗನಿಸಿತು.
ಇದ್ದಕ್ಕಿದ್ದಂತೆ ಸುಳಿಗಾಳಿಯಂತೆ ಯಾವುದೋ ಒಂದು ವಸ್ತು ಆರ್ತನಾದ ಹೊರ ಹೊಮ್ಮಿಸುತ್ತಾ ದೊಪ್ಪೆಂದು ಬಾವಿಗೆ ಬಿತ್ತು. ಬಾವಿಯ ನೀರಿನ ಮೇಲೆ ಸಿಡಿಲಿನಂತೆ ಎದ್ದ ಅಲೆಗಳು ಬಾವಿಯ ಬದಿಗಳಿಗೆ ಬಡಿದು ಮಣ್ಣಿನ ಹೆಂಟೆಗಳನ್ನು ಉದುರಿಸಿದವು. ಏನೋ ಒಂದು ವಸ್ತು ಅಸಂಖ್ಯ ಕಪ್ಪು ನಾರುಗಳಿಂದ ಹೆಣೆದ ಬಲೆಯಲ್ಲಿ ಸಿಕ್ಕಿ ಬಿದ್ದಿದೆಯೆಂದು ಕಪ್ಪೆಗನಿಸಿತು. ಆದರೆ ಅದು ತನ್ನ ಕಲ್ಪನಾ ಲೋಕದಿಂದ ಹೊರ ಬಂದು ಸ್ಥಳ ಕಾಲ ಪ್ರಜ್ಞೆ ಮರಳಿ ದೊರೆತಾಗ ಬಿದ್ದ ವಸ್ತು ಸಮೃದ್ದವಾದ ತಲೆಗೂದಲಿರುವ ಹೆಣ್ಣಿನ ತಲೆಯೆಂದು ತಿಳಿಯಿತು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ
ನೀರುಹಾವು ಕಷ್ಟಪಟ್ಟು ಮೇಲೆ ಬಂದು ಕಪ್ಪೆಯನ್ನು ಸಮೀಪಿಸಿತು. ಅವುಗಳು ಪರಸ್ಪರ ಅಚ್ಚರಿಯಿಂದ ನೋಡಿಕೊಂಡವು.
ಬಾವಿಯ ಮೇಲೆ ನೆರಳಾಡುತ್ತಿರುವುದನ್ನು ಕಪ್ಪೆ ಗಮನಿಸಿತು,
ಗಾಳಿಯಲ್ಲಿ ಸಿಗರೇಟಿನ ಕಮಟು ವಾಸನೆ ತೇಲಿ ಬಂತು. ಕಪ್ಪೆ ಮಹಿಳೆಯ ಹೆಣದ ಮುಖದತ್ತ ತರಾತುರಿಯಿಂದ ನೋಡಿತು. ಅದರ ಕುತ್ತಿಗೆ ನೀಲಿಬಣ್ಣಕ್ಕೆ ತಿರುಗಿತ್ತು. ಕಣ್ಣುಗಳು ಮುಂದಕ್ಕೆ ಚಾಚಿದ್ದವು. ಅದು ತೀವ್ರವಾದ ದುಃಖವನ್ನು ಅನುಭವಿಸಿದಂತೆ ತೋರುತ್ತಿತ್ತು.
ಸುಂದರಿಯೆಂಬುದು ಅವಳು ಉಟ್ಟಬಟ್ಟೆ ಹಾಗೂ ತೊಟ್ಟ ಆಭರಣಗಳಿಂದಲೂ ತಿಳಿಯುತ್ತಿತ್ತು. ಸಂಪನ್ನ ಕುಟುಂಬಕ್ಕೆ ಸೇರಿದವಳೆಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಕಪ್ಪೆಗೆ ಅಚ್ಚರಿಯೆನಿಸಿತು
ಮರುದಿನ ಮಂಜಾನೆ ಬಾವಿಯ ಮೂಕತೆಯನ್ನು ಭೇದಿಸುವ ಯಾವುದೇ ಸದ್ದುಗಳು ಕೇಳಿಸಲಿಲ್ಲ. ಕಪ್ಪೆ ಯೋಚಿಸಿತು. ಬಹುಶಃ ರಜಾದಿನಗಳು ಆರಂಭವಾಗಿರಬೇಕು. ಆ ಮನೆಯವರೆಲ್ಲಾ ಎಲ್ಲೋ ಪ್ರವಾಸ ಹೋಗಿರಬಹುದು.
ಮೃತದೇಹ ತಲುಪಿದುದರಿಂದ ಕಪ್ಪೆಗೆ ಒಂದು ರೀತಿಯ ಮನೋಸ್ಥೈಯ ಮರಳಿ ದೊರೆತಂತಾಯಿತು. ನೀರುಹಾವಿನ ನಿರೀಕ್ಷಿತ ಆಕ್ರಮಣಕ್ಕೆ ಅಡ್ಡಲಾಗಿ ಅವುಗಳ ನಡುವೆ ಕೊಳೆಯುತ್ತಿರುವ ಆ ಪ್ರೌಢದೇಹ ತನ್ನ ಇರುವಿಕೆಯನ್ನು ಖಚಿತಗೊಳಿಸಿತು. ಒಂದು ದಿನ ನೀರುಹಾವು ಪುನಃ ತನ್ನ ಹಸಿವಿನ ಕುರಿತು ಹೇಳಿದಾಗ ಕಪ್ಪೆ ಅದಕ್ಕೆ ಮೃತದೇಹವನ್ನು ತಿನ್ನಲು ಬಲವಂತಪಡಿಸಿತು.
ನೀರುಹಾವು ಅನುಮಾನದಿಂದ ಕಪ್ಪೆಯನ್ನು ಕೇಳಿತು.
‘ಅದು ಪಾಪವಲ್ಲವೆ?’
ಕಪ್ಪೆ ನಕ್ಕು ನುಡಿಯಿತು, ‘ಏನು ಪಾಪ? ಹಸಿವು ಮುಖ್ಯ. ಆದರ್ಶಗಳು ಆಮೇಲೆ’
‘ಆದರೂ…’
‘ಆದರೂ ಗೀದರೂ ಏನು ಇಲ್ಲ. ಹಸಿವಿನ ಸೆಳೆತಕ್ಕೆ ಸಿಕ್ಕಿದಾಗ ಹೆಣವಾದರೂ ಸರಿಯೆ..’
ಕಪ್ಪೆಯ ನಿರಂತರ ಒತ್ತಾಯಕ್ಕೆ ಮಣಿದು ನೀರುಹಾವು ಹೆಣದ ಕೆನ್ನೆಯಿಂದ ಒಂದು ಭಾಗವನ್ನು ಕಿತ್ತು ತಿಂದು ತನ್ನ ಹಸಿವನ್ನು ಇಂಗಿಸಿತು.
ಅದು ತಿನ್ನವುದನ್ನು ತಲೆಗೂದಲಿನ ಅಂತರದಲ್ಲಿ ಮರೆಯಾಗಿ ನಿಂತು ನೋಡುತ್ತಾ ಕಪ್ಪೆ ಕುಲುಕುಲನೆ ನಕ್ಕಿತು.
ಮೃತದೇಹದ ಸಾನಿದ್ಯ ಕಪ್ಪೆಯಲ್ಲಿ ನಾಳೆಯ ಕುರಿತಾದ ಕನಸ್ಸುಗಳ ಕುರಿತು ಯೋಚಿಸುವಂತೆ ಮಾಡಿತು. ಈ ಬಾವಿಯಲ್ಲಿ ಸಿಕ್ಕಿ ಬಿದ್ದ ನಂತರದ ಮೊದಲ ಅನುಭವ. ಮೊದಲಾಗಿದ್ದರೆ ಕಣ್ಮುಚ್ಚಿದರೆ ಮರುಭೂಮಿಯ ಬರ ಕಾಣಿಸುತ್ತಿತ್ತು ಕನಸ್ಸಿನಲ್ಲಿ. ಆದರೆ ಈಗ ತನಗೆ ಯಾವುದೋ ಸುರಕ್ಷಿತ ಹಾದಿ ತೆರೆದು ಕೊಂಡಿದೆಯೆನಿಸುತ್ತಿದೆ. ಬದುಕು ಕೈಯಲ್ಲಿ ಇಲ್ಲದ ಒಂದು ವಸ್ತುವೆಂದೂ, ಹೆಸರಾಗಲಿ, ರೂಪವಾಗಲಿ ವ್ಯಾಖ್ಯಾನಿಸಲಾಗದ, ಅದು ನಿಗಮನಗಳನ್ನು ಕಬಳಿಸಿ ಮುಂದಕ್ಕೆ ಚಲಿಸುವ ವಿಭ್ರಮವೆಂದು ಕಪ್ಪೆ ನಿರೂಪಿಸಿತು. ಉಳಿದುಕೊಳ್ಳುವುದು ಹೇಗೆಂಬುದೇ ಪ್ರಮುಖ ಪ್ರಶ್ನೆ. ಅದಕ್ಕಾಗಿ ಬದುಕಿನ ನೀತಿ ಶಾಸ್ತ್ರಗಳನ್ನು ಕಾಲ ಮತ್ತು ಸಂದರ್ಭಕ್ಕೆ ತಕ್ಕನಂತೆ ತಿರುಚಿ ಪುನರ್‍ರೂಪಿಸಬೇಕಾಗುತ್ತದೆ. ಅದೆಂದೂ ತಪ್ಪಾಗಲಾರದು. ಇತಿಹಾಸ ಬದುಕಿನ ಮೇಲೆ ಹೇರಿದ ಆದರ್ಶಗಳು ಶೂನ್ಯವಾದ ಅನೇಕ ಮಾತುಗಳ ಮೊರೆತ ಮಾತ್ರವೆಂಬುದು ಬಾವಿಯಲ್ಲಿರುವವನಿಗೆ ಮಾತ್ರವೇ ಅರ್ಥವಾಗುವುದು.
ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ದೇವರೇ, ಸಾವೆಂಬ ಭಾರವನ್ನು ಎಂದೆಂದಿಗೂ ಕಿತ್ತೆಸೆಯುವಂತಿದ್ದರೆ?
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಕಥೆಯ ಎಲ್ಲಾ ಭಾಗಗಳನ್ನು ಮತ್ತು ಅಂಕಣದ ಎಲ್ಲಾ ಅನುವಾದಿತ ಇತರೇ ಕಥೆಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 11:09 am, Fri, 22 April 22