ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನೀರುಹಾವು ಕತ್ತನ್ನು ಬಳ್ಳಿಗಳ ಸಂದಿಯಿಂದ ಕಲ್ಲಿನ ಮೇಲಕ್ಕೆ ಚಾಚಿತು. ‘ಸರಿ ಹಾಗಿದ್ದರೆ’ ಕಪ್ಪೆ ಸಿದ್ದವಾಯಿತು, ‘ಆದರೆ ನನ್ನ ನಂತರ ನೀನು ಯಾರನ್ನು ತಿನ್ನುತ್ತೀಯ? ನಿನ್ನ ಹಸಿವನ್ನು ಹೇಳಿ ಕೊಲ್ಲುವುದಕ್ಕಾದರೂ ಒಬ್ಬರು ಇರುತ್ತಾರೆಯೆ? ಒಬ್ಬರ ಸಾವಿನಿಂದ ಮತ್ತೊಬ್ಬರಿಗೆ ಶಾಶ್ವತ ಪರಿಹಾರವಾಗುವುದಾದರೆ ನನ್ನ ಒಪ್ಪಿಗೆಯಿದೆ.’ ‘ನೋಡು, ಒಬ್ಬ ಮಾವನ ಮಗಳಂತೆ, ಆಹಾರಸರಪಳಿಯಲ್ಲಿ ಜೀವಶಾಸ್ತ್ರ ನನಗೆ ನಿನ್ನನ್ನು ಹೇಳಿಟ್ಟಿದ್ದಾರೆ’. ‘ನೀನು ಹೇಳುವ ಅಷ್ಟನ್ನೂ ನಾನು ಅಂಗೀಕರಿಸುತ್ತೇನೆ’. ಕಪ್ಪೆ ಮತ್ತೊಮ್ಮೆ ಭದ್ರವಾಗಿ ಕುಳಿತುಕೊಂಡಿತು, ‘ಬದುಕಿನ ವಿಶಾಲವಾದ ಹೊರ ಜಗತ್ತಿನಲ್ಲಿ ನಾವು ಪರಿಸ್ಥಿತಿಗೆ ಹೊಂದಿಕೊಂಡು ಸಮರಸದಿಂದ ಬದುಕೋಣ. ಜೀವಶಾಸ್ತ್ರದಂತೇ ಅಲ್ಲ ಜಗತ್ತಿನ ಎಲ್ಲಾ ನೀತಿನಿಯಮಗಳನ್ನು ಕಣ್ಮುಚ್ಚಿ ಅಂಗೀಕರಿಸೋಣ. ಆದರೆ ಇದು ಒಂದು ಗುಂಡಿ. ನಾವು ಸಿಕ್ಕಿಬಿದ್ದ ಗುಂಡಿ. ಹತ್ತುತ್ತಾ ಹೋದಂತೆ ಎಳೆದು ಕೆಳಕ್ಕೆ ಹಾಕುವ ಸತ್ತವನ ಕಣ್ಣುಗಳಂತೆ ಏಕಾಂತವಾದ ಒಂದು ಸ್ಥಳ. ಇದರಿಂದ ಹೇಗೆ ಪಾರಾಗುವುದು ಎಂಬ ಪ್ರಶ್ನೆಗೆ ಪರ್ಯಾಯವಾಗಿ ನನ್ನನ್ನು ನುಂಗುವುದೇ ಉತ್ತರವಾದರೆ ಹಾಗೆಯೇ ಅಗಲಿ.’
ಕಥೆ : ಉಭಯ ಜೀವನ | ಮಲಯಾಳ ಮೂಲ : ಸಂತೋಷ ಏಚಿಕಾನಂ | ಕನ್ನಡಕ್ಕೆ : ಕೆ.ಕೆ. ಗಂಗಾಧರನ್
(ಭಾಗ 2)
ಕಪ್ಪೆಯ ಮಾತುಗಳು ಅದರ ಹೊಟ್ಟೆಯ ಶೂನ್ಯತೆಯಲ್ಲಿ ಬಂದು ನಾಟಿತು. ನೀರುಹಾವು ಉಗಿಯಲೂ ಆಗದ ನುಂಗಲೂ ಆಗದ ತೀವ್ರ ಮಾನಸಿಕ ಸಂದಿಗ್ಧದಲ್ಲಿ ಸಿಲುಕಿತು.
ಬಾವಿಯ ಮೇಲೆ ತಣ್ಣನೆಯ ಗಾಳಿ ಬೀಸಿತು. ಅದರ ಒಂದು ಅಲೆ ಅರಳೀ ಮರದ ತುದಿಯನ್ನು ಸ್ಪರ್ಶಿಸಿತು. ಹೊತ್ತು ನಡುಹಗಲು ದಾಟಿದೆ. ಸ್ವಲ್ಪ ದೂರದಲ್ಲಿ ಒಂದು ಕಾರು ಹಾರ್ನ್ ಹೊಡೆಯುವುದು ಕೇಳಿಸಿತು. ಅದು ಒಂದು ಗೇಟಿನೊಳಕ್ಕೆ ಹೋಗುವ ಸಿದ್ಧತೆಯಲ್ಲಿತ್ತು. ಶಬ್ಧದ ಲಯ ವಿನ್ಯಾಸಗಳು ಅದೊಂದು ಬೆಲೆಬಾಳುವ ವಾಹನವೆಂಬುದನ್ನು ಧ್ವನಿಸುತ್ತಿತ್ತು. ಇಬ್ಬರು ಮಕ್ಕಳು ಒಟ್ಟಿಗೆ ಕರೆಯುವುದು ಕೇಳಿಸಿತು, ‘ಡ್ಯಾಡೀ’
ಅವರು ಅನಂತರ ಚಾಕ್ಲೆಟ್, ಹಲವು ರೀತಿಯ ಆಟದ ಸಾಮಾನುಗಳ ಕತೆ ಪುಸ್ತಕಗಳ ಹೆಸರುಗಳನ್ನು ಹೇಳುವುದು ಕೇಳಿಸಿತು.
ಆತ ಬೆಳಿಗ್ಗೆ ಆಫೀಸಿಗೆ ಹೊರಡುವಾಗ ಮಕ್ಕಳು ಏನೋ ಒಂದಷ್ಟನ್ನು ತರಲು ಹೇಳಿರಬಹುದು. ಪಾಪ ಕೆಲಸದ ಒತ್ತಡದಲ್ಲಿ ಅವನು ಅವೆಲ್ಲವನ್ನು ಮರೆತಿರಹುದು. ಅದಕ್ಕಾಗಿ ಮಕ್ಕಳಲ್ಲಿ ಅವನು ಕ್ಷಮೆ ಯಾಚಿಸುತ್ತಿದ್ದಾನೆ. ಪ್ರೀತಿ ವಾತ್ಸಲ್ಯ ತುಂಬಿದ ಹುಸಿ ಜಗಳದ ನಡುವೆ ಒಬ್ಬ ಮಹಿಳೆಯ ಸುಂದರವಾದ ನಗು ಹೊರ ಹೊಮ್ಮುತ್ತಿತ್ತು.
ಕಪ್ಪೆ ಹೇಳಿತು.
‘ಇಲ್ಲಿ ಸಮೀಪದಲ್ಲೇ ಒಂದು ಕುಟುಂಬ ವಾಸವಿದೆ’
ನೀರುಹಾವು ಮತ್ತೆ ಮೌನಾವಲಂಬಿಯಾಗಿರುವುದನ್ನು ಗಮನಿಸಿ, ಕಪ್ಪೆ ತನ್ನ ದೇಹದ ಮೇಲೆ ಯಾವುದೇ ಸ್ವಾರ್ಥವನ್ನೂ ಬಯಸದೆ ಒಬ್ಬ ವ್ಯಕ್ತಿಯಂತೆ ಹೇಳತೊಡಗಿತು.
‘ಗೆಳೆಯಾ, ನೀನು ಈಗಲೂ ನಿನ್ನ ಹಸಿವಿನ ಕುರಿತೇ ಯೋಚಿಸುತ್ತಿರುವೆಯೆಂದು ನನಗೊತ್ತು. ಆದರೆ ನಾಳೆ ಎಂಬ ಕಲ್ಪನೆ ಬದುಕನ್ನು ಚೇತೋಹಾರಿಯನ್ನಾಗಿ ಮಾಡುತ್ತದೆ. ಸದ್ಯದ ನಿನ್ನ ಹಸಿವಿಗೆ ಕ್ರಿಮಿ ಕೀಟಗಳಿವೆ. ನಿಧಾನವಾಗಿ ನೀನು ಹಸಿರು ಎಲೆಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳುವೆ.’
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಸೆಲ್ವಕುಮಾರಿ ಅನುವಾದಿಸಿದ ತಮಿಳು ಕಥೆ ‘ದೇವರು ಮತ್ತು ಟೈಗರ್ ಸ್ವಾಮಿ’
ನೀರುಹಾವು ಕೋಪದಿಂದ ಬುಸುಗಟ್ಟಿತು.
‘ನಾನು… ನಾನು ಮಾಂಸಾಹಾರಿ’
‘ಗೊತ್ತು ಗೊತ್ತು ಮಾಂಸಾಹಾರಿ ಅಥವಾ ಸಸ್ಯಾಹಾರಿ ಎಂಬ ತಾರತಮ್ಯಕ್ಕೆ ಈ ಬಾವಿಯಲ್ಲಿ ಯಾವುದೇ ಅರ್ಥವಿಲ್ಲ. ಇದು ಮಿಶ್ರಾಹಾರಿಗಳ ಜಗತ್ತು. ರಕ್ಷಣೆ ಪಡೆಯಬೇಕೆಂದರೆ ಇಂತಹ ಹೊಂದಾಣಿಕೆಗಳು ಅನಿವಾರ್ಯ ಗೆಳೆಯ.’
ನೀರುಹಾವು ಕ್ಷಣಕಾಲ ಚಿಂತಿಸಿತು.
ಬಲಿಯೊಂದಿಗಿನ ಇಂತಹ ಹೊಂದಾಣಿಕೆಯ ಸಹಜೀವನ ಎಷ್ಟು ಕಾಲ ಸಹಿಸಲು ಸಾಧ್ಯ. ಕಲ್ಪಿಸಲು ಕೂಡ ಸಾಧ್ಯವಾಗುತ್ತಿಲ್ಲ. ನೀರುಹಾವು ತನ್ನ ದೇಹವನ್ನು ಒಮ್ಮೆ ಕೊಡವಿತು. ಅನಂತರ ನೀರಿನಲ್ಲಿ ಮುಳುಗಿ ಮತ್ತೆ ಎದ್ದು ಬಂದು ಹಾವಸೆಗಳ ನಡುವೆ ತಲೆಹುದುಗಿಸಿ ಕಪ್ಪೆಯನ್ನು ದುರುಗುಟ್ಟುತ್ತಾ ನೋಡಿತು.
ನೀರುಹಾವಿನ ನೋಟ ಕಪ್ಪೆಯ ದೇಹದೊಳಕ್ಕೆ ಸೂಜಿಯ ಮೊನಚಿನಂತೆ ಚುಚ್ಚಿತು. ವೈರಿ ತನ್ನೊಂದಿಗೆ ನಿದ್ರಿಸುವಾಗ ರಾತ್ರೆಗಳನ್ನು ಕಳೆಯುವುದಾದರೂ ಹೇಗೆ? ಕಪ್ಪೆಯ ಮನಸ್ಸಿನಲ್ಲಿ ಆತಂಕವೊಂದು ಹೊಗೆಯಾಡತೊಡಗಿತು. ಆಪತ್ತಿನ ಹೊದಿಕೆಯನ್ನು ತಟ್ಟಿಕೊಡವಿ ನೆಮ್ಮದಿಯಿಂದ ನಿದ್ರಿಸಲು ಯಾವ ಕಪ್ಪೆಗೆ ಸಾಧ್ಯ?
ಕಪ್ಪೆಯ ಆತಂಕವನ್ನು ಮುರಿದಿದ್ದು ನರ್ಸರಿ ರೈಂ ಉರುವಿಡುತ್ತಿದ್ದ ಮಕ್ಕಳು. ಕರಿದು, ಉರಿದು ಸಿದ್ದಗೊಳಿಸುತ್ತಿರುವ ರಾತ್ರೆಯಡಿಗೆಯ ರುಚಿಯಾದ ಘಮಲು ಗಾಳಿಯಲ್ಲಿ ತೇಲಿ ಬಂತು. ದೀಪ ಹಚ್ಚುವ ಸಮಯ.
ಆ ಕುಟುಂಬದ ಆಕರ್ಷಣೀಯವಾದ ಅಂತರಿಕ್ಷದಲ್ಲಿ ಕಪ್ಪೆ ದೇವರನ್ನು ಪ್ರಾರ್ಥಿಸಿತು. ಆದರೆ ನೀರುಹಾವು ಆಗಲೂ ಯಾವ ನಿರ್ಧಾರಕ್ಕೂ ಬಾರದೆ ಬಾವಿಯ ಕತ್ತಲೆಯ ಮೂಲೆಗೆ ಸರಿಯಿತು. ನಿಜ, ಹಸಿದವನಿಗೆ ಬದುಕಿನ ಆಗುಹೋಗುಗಳೊಂದಿಗೆ ಅಷ್ಟು ಬೇಗನೆ ಹೊಂದಿಕೊಂಡು ಹೋಗಲು ಸಾಧ್ಯವಾಗದು.
ಅಷ್ಟರಲ್ಲಿ ಬಾವಿಯ ಸಹಜ ಕತ್ತಲೆಯ ಮೇಲೆ ಇರುಳಿನ ಪದರ ಬೀಳ ತೊಡಗಿತು. ತೀವ್ರವಾದ ಭಯ ಕಪ್ಪೆಯನ್ನು ಮುತ್ತಿತು. ತಾನು ದಯನೀಯವಾದ ರೋದನವಾಗಿ, ರಕ್ಷಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲದೆ ಅಂತ್ಯಗೊಳ್ಳುವ ಪೈಶಾಚಿಕ ನಿಮಿಷಗಳ ಕುರಿತು ಒಳನಡುಕದೊಂದಿಗೆ ಚಿಂತಿಸಿತು. ಅದರ ಉಸಿರಾಟ ತೀವ್ರಗೊಂಡಿತು. ಅದು ಬಾವಿಯ ನಿಶ್ಶಬ್ದತೆಯಲ್ಲಿ ನವಿರಾದ ಧ್ವನಿಯಾಗಿ ಹೊರಹೊಮ್ಮಿತು.
ಸ್ವಲ್ಪ ಸಮಯವಾಗಿರಬೇಕು… ಎರಡು ಬೈಕುಗಳು ಮೊರೆಯುತ್ತಾ ಬಂದು ಪೋರ್ಚ್‍ನಲ್ಲಿ ಮೌನವಾದವು. ಬಾಗಿಲು ತೆರೆದಂತಾಯಿತು. ಹಾಯ್… ವೆಲ್ಕಂ ಎಂಬ ಅತಿಥೇಯನ ಉಪಚಾರದ ಮಾತುಗಳು ಕೇಳಿಸಿದವು. ಮನೆಯಲ್ಲಿ ಇಂದು ರಾತ್ರೆಗೆ ಒಂದಷ್ಟು ಅತಿಥಿಗಳಿದ್ದಾರೆಂದು ಕಪ್ಪೆಯ ಅರಿವಿಗೆ ಬಂತು. ಈ ಮೊದಲು ಗಾಳಿಯಲ್ಲಿ ತೇಲಿ ಬಂದ ಹೃದ್ಯವಾದ ಘಮಲು ಅವರಿಗೋಸ್ಕರ ತಯಾರಿಸಿದ ವಿವಿಧ ವ್ಯಂಜನಗಳಿಂದಲೇ. ಬಹುಶಃ ಅತಿಥಿಗಳು ಮಧುಚಂದ್ರ ಆಚರಿಸಲು ಬಂದ ನವ ಜೋಡಿಗಳಾಗಿರಬಹುದು.
ರಾತ್ರೆಯ ಭೋಜನದ ನಡುವೆ ಮನೆಯೊಡೆಯ ಪ್ರಿಯತಮಳ ತೋಳಿನ ಮೇಲೆ ಕೈಯಿರಿಸಿ ಅವರಿಗೆ ಹೇಳಬಹುದು.
‘ಡಿಯರ್ ಫ್ರೆಂಡ್ಸ್, ಶೀ ಈಸ್ ಮೈ ಎವರಿಥಿಂಗ್. ನನ್ನ ನಿಧಿ ನೋಡಿ, ನೀವು ಈಗ ತಾನೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಿದ್ದೀರಿ. ಪರಸ್ಪರ ಅರ್ಥಮಾಡಿಕೊಳ್ಳುವುದರಿಂದ ಮಾತ್ರ ಒಂದು ಕುಟುಂಬವನ್ನು ಮುಂದೆ ಕೊಂಡೊಯ್ಯಲು ಸಾಧ್ಯ.’
ಮಧ್ಯೆರಾತ್ರಿಯಾಗಿರಬಹುದು. ಬೈಕುಗಳು ಸದ್ದು ಮಾಡುತ್ತಾ ದೂರವಾದವು. ಬಾವಿಯ ಮೇಲೆ ಉದ್ದಕ್ಕೂ ಚಾಚಿದ ಹಾದಿಯನ್ನು ನೆನೆದು ಕಪ್ಪೆ ಅಸೂಯೆಪಟ್ಟಿತು.
ತಡಮಾಡದೆ ಬೆಳದಿಂಗಳು ಕಾಣಿಸಿಕೊಂಡಿತು. ಬಾವಿಯೊಳಕ್ಕೆ, ನೀರಿನಲ್ಲಿ ಬದಿ ಮುರಿದ ಚಂದ್ರಬಿಂಬ ಎಲೆಗಳ ಸಂದಿಯಿಂದ ಇಳಿದು ಬಂತು.
ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ‘ಏನು ಪಾಪ? ಹಸಿವು ಮುಖ್ಯ, ಆದರ್ಶಗಳು ಆಮೇಲೆ’
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಕಥೆಯ ಎಲ್ಲಾ ಭಾಗಗಳನ್ನು ಮತ್ತು ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi