Body Shaming ; ಸುಮ್ಮನಿರುವುದು ಹೇಗೆ? : ಯಾವ ಕ್ಷೇತ್ರದಲ್ಲಿ ಮಹಿಳೆ ಸದೃಢವಾಗಿ ನಿಲ್ಲಬೇಕೋ ಅಲ್ಲೇ ವಿಕೃತಿ ತಾಂಡವವಾಡುತ್ತಿದೆ

|

Updated on: Apr 01, 2021 | 3:42 PM

‘ಹೆಣ್ಣು ಏನು ಉಣ್ಣುತ್ತಾಳೆ, ಏನು ತೊಡುತ್ತಾಳೆ, ಎಷ್ಟು ದಪ್ಪಗಿದ್ದಾಳೆ, ಎಷ್ಟು ಸಣ್ಣಗಾಗಿದ್ದಾಳೆ, ಎನ್ನುವುದನ್ನು ಯಾರೂ ಗಮನಿಸುವ ಅಗತ್ಯವಿಲ್ಲ. ಈ ಪ್ರಕೃತಿಯಲ್ಲಿ ವಿಕೃತಿ ಇಲ್ಲ. ಪಶು, ಪಕ್ಷಿಗಳಲ್ಲೂ ಇಲ್ಲ. ಆದರೆ ಜಾಣನಾದ ಮನುಷ್ಯನಲ್ಲಿ ಮಾತ್ರ ಈ ವಿಕೃತಿ ಕಂಡು ಬರುವುದು ವಿಪರ್ಯಾಸ! 'ನನ್ನ ಘನತೆ-ನನ್ನ ಗೌರವ ನನ್ನ ಜವಾಬ್ದಾರಿ' ಪ್ರತಿ ಮಹಿಳೆ ಇದನ್ನು ತನ್ನ ಬದುಕಿನ ಧ್ಯೇಯ ವಾಕ್ಯವಾಗಿಸಿಕೊಂಡು, ಯಾವುದೇ ಕ್ಷೇತ್ರದಲ್ಲಿದ್ದರೂ, ಸುಗಮವಾಗಿ ಜೀವನ ನಡೆಸುತ್ತ ಮುನ್ನಡೆಯುವುದು ಶ್ರೇಯಸ್ಕರ.’ ಕಾವ್ಯಶ್ರೀ ಮಹಾಗಾಂವಕರ

Body Shaming ; ಸುಮ್ಮನಿರುವುದು ಹೇಗೆ? : ಯಾವ ಕ್ಷೇತ್ರದಲ್ಲಿ ಮಹಿಳೆ ಸದೃಢವಾಗಿ ನಿಲ್ಲಬೇಕೋ ಅಲ್ಲೇ ವಿಕೃತಿ ತಾಂಡವವಾಡುತ್ತಿದೆ
ಕಾವ್ಯಶ್ರೀ ಮಹಾಗಾಂವಕರ
Follow us on

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

‘Happy to bleed’ ಎನ್ನುವ ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿ ನಡೆದ ನೆನಪು ಹಸಿಯಾಗಿದೆ. ಆಗ ಪ್ರತಿಯೊಬ್ಬರೂ, ‘Yes we bleed, and we are proud of it’ ಎಂದು ಹೇಳಿದ್ದೆವು. ಇದೀಗ, ‘We are least bothered of body shaming’ ಎಂದು ಹೇಳುವ ಸ್ಥಿತಿ ನಿರ್ಮಾಣವಾಗಿದೆ’ ಲೇಖಕಿ ಕಾವ್ಯಶ್ರೀ ಮಹಾಗಾಂವಕರ ಋತುಬಂಧದ ತಮ್ಮ ಸಂಕಟಮಯ ಗಳಿಗೆಗಳೊಂದಿಗೆ ಜೀವಪರ ವಿಷಯಗಳನ್ನೂ ಚರ್ಚಿಸಿದ್ದಾರೆ.  

ಇಡೀ ದೇಹವೆಲ್ಲಾ ಬಿಸಿ. ಹಣೆಯ ಮೇಲೆ ಬೆವರಹನಿ ಸಾಲುಗಟ್ಟಿ ತಟತಟನೆ ಕೆಳಗಿಳಿಯುವುದು, ಮನಸು ಕ್ಷೋಭೆಗೊಳಗಾದಂತೆ, ಹೃದಯ ಬಡಿತಕ್ಕೆ ನಗಾರಿಯ ಸ್ವರೂಪ. ಭಯಗ್ರಸ್ಥ ಮನಸ್ಥಿತಿ, ಎಲ್ಲದರಲ್ಲೂ ನಿರುತ್ಸಾಹ. ಏನೋ ಕಳೆದುಕೊಳ್ಳುತ್ತಿರುವ ಹಳವಂಡ, ಯಾರೂ ಅಕ್ಕರೆ ತೋರುತ್ತಿಲ್ಲ ಎನ್ನುವ ನಕಾರ ಭಾವ, ಯಾರ ಮೇಲಾದರೂ ಅಪವಾದ ಹೊರಿಸುವ ಕೋಪ, ಏನೋ ಗಿಜಿ ಗಿಜಿ, ಕಿರಿಕಿರಿ. ನನ್ನ ಈ ಒಂದು ವಿಚಾರ, ನಿರ್ಧಾರ ಮತ್ತು ಆಲೋಚನೆಯಿಂದ ಈವತ್ತು ನನಗೀ ಸ್ಥಿತಿ ಬಂದಿತೇ? ಎನ್ನುವ ಅಪರಾಧಿ ಮನೋಭಾವ. ಇಡೀ ಜಗತ್ತಿನಲ್ಲಿ ನಾನೊಬ್ಬಳೇ ಎನ್ನುವ ತಬ್ಬಲಿತನ. ಕಿಟಾರನೆ ಕಿರುಚಬೇಕೆನಿಸಿದರೂ, ಅರಿಯದ ಅಸಹಾಯಕತೆಯಲಿ ಮಹಾಮೌನ ಅನಿವಾರ್ಯ.

ಉಟ್ಟ ಬಟ್ಟೆ ಯಾವ ಘಳಿಗೆ ತೋಯ್ದು ತೊಪ್ಪೆಯಾಗುವುದೆಂಬ ಆತಂಕ ದಿನದ ಇಪ್ಪತ್ನಾಲ್ಕು ಗಂಟೆಯೂ. ವಾಶ್ರೂಮಿನಲ್ಲಿ ಒಂದು ಜೊತೆ ಉಡುಪು ಕಾಯ್ದಿರಿಸುವ ಮುಂದಾಲೋಚನೆಗೆ ಮನಸ್ಸು ಸದಾ ಜಾಗೃತ. ಪ್ರತಿ ತಿಂಗಳು ನಿಗದಿತ ತಾರೀಕಿನಲ್ಲೇ ಬಂದು ಹೋಗುವ ಮಾಸಿಕದಲ್ಲಿ ಸಿಕ್ಕಾಪಟ್ಟೆ ಏರುಪೇರು. ಯಾವಾಗ ಬೇಕಾದರೂ ಧುತ್ತೆಂದು ಹರಿಯುವ ಕೆಂಪುಹೊಳೆ. ನಿಂತಲ್ಲೇ ಭೂಮಿ ಬಾಯಿಬಿಡಬಾರದೆ ಎಂಬಂಥ ಸ್ಥಿತಿ. ಮಾನಾಪಮಾನದ ಸವಾಲು ಎದುರಿಸುವ ಸತ್ವ ಪರೀಕ್ಷೆ. ಒಮ್ಮಿಂದೊಮ್ಮೆಲೆ ರಕ್ತದ ಕೋಡಿ ಹರಿದರೆ, ಇನ್ನೊಮ್ಮೆ ಏನೂ ಇಲ್ಲದ ಪಾಳು ಬಾವಿ. ಕಾಣದ ದೈವವೊಂದೇ ಕಾಪಾಡಬೇಕು. ಜೀವಮಾನದಲ್ಲೇ ಇದು ಮೊದಲ ಅನುಭವ. ಆದರೆ ನನ್ನ ಗಂಡನಿಗಿದು ಅರ್ಥವಾಗದ ವಿಚಿತ್ರ ನಡವಳಿಕೆ. ಏನೇನೋ ಕಥೆ ಕಟ್ಟಿ, ತಮಾಷೆ ಮಾಡಲು ಒಂದು ಸುಲಭದ ಅವಕಾಶ. ಆದರೆ ಇಂಥ ಸಮಯದಲ್ಲಿ  ನಗಲು ಮತ್ತು ನಗಿಸುವಂಥ ಮಾನಸಿಕ ಸ್ಥಿತಿ ಹೆಣ್ಣಿಗಿದ್ದರೆ ತಾನೆ? ಹೀಗಿರುವಾಗ ಮನೆಯವರೆಲ್ಲರ ನಡೆಳಿಕೆಗಳು ಮತ್ತಷ್ಟು ಖಿನ್ನತೆಗೆ ಜಾರಿಸಿಬಿಡುತ್ತವೆ. ಗಂಡನ ಮಾತುಗಳಂತೂ ಪರಪರ ಪರಚಿಕೊಳ್ಳುವಂತೆ ಮಾಡುತ್ತವೆ.

‘ಐದಾರ್ ಮೀಟರ್ ಸೀರ್ಯಾಗ ಎಷ್ಟು ಧಮ್ಮ ಆದ್ರೂ ಗೊತ್ತಾಗಂಗಿಲ್ಲ ನೋಡು. ವೇಯಿಂಗ್ ಮಶೀನ್ ಕಾಟಾ ಖಟ್ಟ್ ಅಂತ ಮುರ್ದಾತು.’

‘ಗಾಬ್ರಿಯಾದ್ಹಂಗಾ, ಸುಸ್ತಾದ್ಹಂಗಾ ನಾಟಕ್ ಮಾಡ್ತಿದಿ ಅನಿಸ್ತದ.’

‘ಅದೆಷ್ಟ ಫ್ಯಾನ್, ಎಸಿ ಅಂತ ಬಡ್ಕೊಂತಿ. ಏನ್ ನಿಮೌವ್ವ ಅಮೆರಿಕಾ, ಸ್ವಿಟ್ಜರ್ಲೆಂಡ್​ದಾಗೇ ಹಡದಾಳೇನು?’

‘ನೀ ತಪ್ಪಿ ಭಾರತದಾಗ ಹುಟ್ಟಿದಿ ನೋಡು, ತಂಪ್ ದೇಶಾದಾಗ ಇರದಿತ್ತು.’

‘ತೆಲಿ ಮ್ಯಾಲ ಫ್ಯಾನ್ ಇಟ್ಗೊಂಡೇ ಓಡಾಡು.’

ಸೌಜನ್ಯ : ಅಂತರ್ಜಾಲ

ದೈಹಿಕವಾಗಿ ಆಗುತ್ತಿರುವ ಬದಲಾವಣೆ, ಸಂಕಷ್ಟ, ತಲ್ಲಣಗಳ ನಡುವೆ ಈ ಮಾತುಗಳು ಬೆಂಕಿ ಮಳೆಯಂತೆ ಭಾಸವಾದವು. ಮನಸಿಗೆ ನೂರಾರು ಚೂಪಾದ ಚಾಕುವಿನಿಂದ ಇರಿದ ನೋವು. ಅಪಮಾನಕ್ಕಿಂತ ದೊಡ್ಡದಾದ ಬೇರೆ ನೋವಿಲ್ಲವಲ್ಲ. ಮನಸು ಕುಗ್ಗಿ ಕುಗ್ಗಿ ಆಳಕ್ಕೆ ಇಳಿದು ಹೋಗಿತ್ತು. ಹೇಳಿಕೊಳ್ಳುವುದಾದರೂ ಯಾರಲ್ಲಿ? ಮಕ್ಕಳಿಗೆ ಅವರದೇ ಆದ ಪ್ರಪಂಚ. ಗಂಡನಿಗೆ ತನ್ನದೇ ಲೋಕ. ಹೆಂಡತಿಯ ಆರೋಗ್ಯದ ಗಂಧವೂ ತಿಳಿಯದು. ಮೇಲಾಗಿ ಯಾರೊಂದಿಗಾದರೂ ಹಂಚಿಕೊಳ್ಳಲು ಮುಜುಗರ ಮುಂದಾಗಿ ನಿಲ್ಲುವುದು. ಒಂದೂ ತಿಳಿಯದೆ ಸ್ತ್ರೀರೋಗ ತಜ್ಞರ ಬಳಿ ಓಡಿದೆ.

ವೈದ್ಯರೊಂದಿಗೆ ಹೇಳಿಕೊಂಡು ಹಗೂರವಾಗಿ ಅಳುವುದೊಂದೆ ಬಾಕಿ. ಆದರೂ ಒತ್ತರಿಸಿ ಬಂದ ದುಃಖವನ್ನು ಕಷ್ಟಪಟ್ಟು ತಡೆದುಕೊಂಡೆ. ಗಂಡನ ಮೇಲೂ ಆರೋಪ ಮಾಡಿದೆ. ‘ಮೆನೊಪಾಸ್ ಸಿಂಪ್ಟಮ್ಸ್ ಶುರುವಾಗಿದೆ. ಹಾರ್ಮೋನ್ ಇಂಬ್ಯಾಲೆನ್ಸ್ ಆಗಿದೆ. ಥೈರಾಯ್ಡ್ ಚೆಕ್ಅಪ್ ಮಾಡಿಸಬೇಕು. ಇದೆಲ್ಲಾ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಆಗುತ್ತದೆ.’ ಅವರ ಮಾತು ಮುಗಿದ ಮೇಲೆ ನಿರಾಳವಾಗಿ ಉಸಿರುಬಿಟ್ಟೆ. ‘ನಾನು ಮಹಿಳೆಯರ ಇಂತಹ ಸಮಸ್ಯೆಗಳ ಬಗ್ಗೆ ಕೆಲವು ಲೇಖನಗಳ ಓದಿದ್ದೆ. ಆದರೆ ನನಗೇ ಆದಾಗ ತಿಳಿಯಲಿಲ್ಲ ನೋಡಿ’ ಹೀಗೆಂದಾಗ ಡಾಕ್ಟರ್ ನಕ್ಕುಬಿಟ್ಟರು. ‘ನೀವು ಎಜುಕೇಟೆಡ್ ಇರಬಹುದು. ಆದರೆ ಸ್ವತಃ ಡಾಕ್ಟರ್ ಇದ್ದವರಿಗೂ ತಮ್ಮ ಸ್ಥಿತಿ ಬಗ್ಗೆ ಇನ್ನೊಬ್ಬರು ಡಾಕ್ಟರ್ ಹೇಳಿದಾಗಲೇ ತಿಳಿಯುತ್ತದೆ’ ಈ ವಿಷಯವನ್ನು ಭಾರ ಮಾಡದೆ, ನಗುನಗುತ್ತ ಹೇಳಿ ಮನಸು ಹಗುರ ಮಾಡಿದರು. ಗಂಡನ ಪ್ರತಿಕ್ರಿಯೆಗೆ ಜೂನಿಯರ್ ಡಾಕ್ಟರ್ ಜೊತೆ ಖಡಕ್ಕಾಗಿ ಚರ್ಚೆ ಮಾಡಿದರು. ಅರ್ಥ ಮಾಡಿಕೊಳ್ಳದ ಇಡೀ ಪುರುಷ ವರ್ಗವನ್ನೇ ನಿಂದಿಸಿದರು.

ಪ್ರತಿಯೊಬ್ಬ ಮಹಿಳೆಯೂ ಈ ಸ್ಥಿತಿಯ ಮೂಲಕ ಸಾಗಲೇಬೇಕು. ಈ ಸ್ಥಿತ್ಯಂತರವನ್ನು ಎದುರಿಸಲೇಬೇಕು. ಆದರೆ ಹಾಗಾಗುವುದಿಲ್ಲ. ಹೆಣ್ಣಿನ ಬದುಕಿನಲ್ಲಿ ‘ಋತುಸ್ರಾವ’ ದಿಂದ ‘ಋತುಬಂಧ’ದವರೆಗಿನ ಪಯಣ ಅನೇಕ ದೈಹಿಕ ಪಲ್ಲಟಗಳಿಂದ ಕೂಡಿರುತ್ತದೆ. ಬಾಲ್ಯದಿಂದ ಯೌವನಕ್ಕೆ ಕಾಲಿಟ್ಟಾಗ, ಮಾಸಿಕದ ಕಿರಿಕಿರಿ. ‘ನೋವು’ ಅಂದರೆ ಏನೆಂದು ಗೊತ್ತಿರದ ಎಳೆಯ ಜೀವಕ್ಕೆ ಯಾತನೆಯ ಪರಿಚಯಿಸುವ ನೈಸರ್ಗಿಕ ಪ್ರಕ್ರಿಯೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಗೂ ಒಂದೊಂದು ರೀತಿಯ ತೊಂದರೆ. ಯಾರಿಗೆ ಹೆಚ್ಚು, ಯಾರಿಗೆ ಕಡಿಮೆ, ತೊಂದರೆ ತಪ್ಪಿದ್ದಲ್ಲ, ಇದ್ದದ್ದೇ. ಹೊಟ್ಟೆ ನೋವು, ವಾಂತಿ, ತಲೆನೋವು, ತಲೆಸುತ್ತು, ಪ್ಯಾಡ್ ಚೇಂಜ್ ಮಾಡುವ ಹೀಗೆ ಒಂದು ರೀತಿ ಅಸ್ಪೃಶ್ಯ ಭಾವದ ಮುಜುಗರಗಳ ನಡುವೆ ಖಿನ್ನತೆ.

ಋತುಸ್ರಾವದ ಆರಂಭದ ದಿನಗಳಲ್ಲಿ ತಾಯಿಯ ಪ್ರೀತಿ, ಕಾಳಜಿ, ಕಕ್ಕುಲಾತಿ, ಆರೈಕೆ ಸಹಜವಾಗಿಯೇ ದಕ್ಕುತ್ತದೆ. ಎಲ್ಲರೂ ‘ದೂರ ಸರಿ ದೂರ ಸರಿ’ ಎನ್ನುವಾಗ, ಅವ್ವ ಬಾಚಿ ತಬ್ಬಿಕೊಂಡು, ಸಲಹೆ ನೀಡಿದಾಗ ಧೈರ್ಯದ ಮೂಟೆ ದಕ್ಕಿದಂತೆ. ಒಂದಿಷ್ಟು ಸಂಭ್ರಮದ ವಾತಾವರಣವೂ ನಿರ್ಮಾಣವಾಗಿರುತ್ತದೆ. ಹೊಸ ಸೀರೆ, ಕುಪ್ಪಸ, ಹೂವು, ಹಣ್ಣು, ವಿಶೇಷ ಅಡಿಗೆ, ಉಪಚಾರ ನಡೆದು ಹಬ್ಬದ ವಾತಾವರಣ. ಆಗ ನೋವು ಸಹ ನಲಿವಾಗಿ ಮಾರ್ಪಟ್ಟು ಸಡಗರಿಸುವತ್ತ ವಾಲುತ್ತದೆ. ಇತ್ತೀಚೆಗೆ ಇದೊಂದು ಪ್ರಕೃತಿ ಸಹಜಕ್ರಿಯೆ ಎಂದು ತಮ್ಮೊಳಗೇ ಅನುಭವಿಸಿ, ವೈಭವೀಕರಿಸುವುದನ್ನು ನಿಲ್ಲಿಸಿದ ಸುಶಿಕ್ಷಿತ ಕುಟುಂಬಗಳೂ ಇವೆ. ಆದರೆ ಋತುಬಂಧದ ಸಮಯವೆಂದರೆ? ಹೇಳಲಾಗದ, ಹಂಚಲಾಗದ, ಅನುಭವಿಸಲಾಗದ ಸಂದಿಗ್ಧತೆ. ಮನೆಜವಾಬ್ದಾರಿ ಹೊತ್ತ ಮಹಿಳೆಯನ್ನು ಇಂತಹ ಸಮಯದಲ್ಲಿ ಯಾರೂ ಕೇಳುವ, ಗಮನಿಸುವ ಸ್ಥಿತಿಯಲ್ಲಿರುವುದಿಲ್ಲ. ಆಕೆ ಮತ್ತಷ್ಟು ಒದ್ದಾಡುವುದು ಮನೆಯವರ ಅಸಡ್ಡೆಯಿಂದಾಗಿ ಮತ್ತು ಗಂಡನ ನಿರಾಸಕ್ತಿಯಿಂದಾಗಿ.

ಒಮ್ಮೆ ಗಂಡಸರಿಬ್ಬರು ಮಾತನಾಡುವುದನ್ನು ಕೇಳಿದಾಗ ಎಂಥವರನ್ನೂ ಕೆರಳಿಸುವಂತ್ತಿತ್ತು. ‘ಹೆಣ್ಣು ಮಕ್ಕಳಿಗೆ ಗರ್ಭಕೋಶದ ಸಮಸ್ಯೆಯಾದರೆ, ತಲೆ ಕೆಡಿಸಿಕೊಳ್ಳಬಾರದು. ರಕ್ತ ಸೋರಿ ಸೋರಿ, ಒಂದು ದಿನ ಒಣಗಿ ಹೋಗುತ್ತದೆ. ಗರ್ಭಕೋಶ ತಾನೇ ಹೊರಗೆ ಬರುತ್ತದೆ. ಡಾಕ್ಟರಗಳು ಆಪರೇಶನ್ ಹೆಸರಿನಲ್ಲಿ ದುಡ್ಡು ಹೊಡೀತಾರೆ. ಹೆಣ್ಣು ಹುಟ್ಟಿದ್ದೇ ಹಡಿಯಕ್ಕೆ. ಅದರ ಸುತ್ತ ಎಲ್ಲಾ ತನ್ನಿಂದ ತಾನೆ ನಡೆದು ಹೋಗುತ್ತದೆ.’ ಈ ಸಸಾರದ ಮಾತುಗಳು ಸಲ್ಲದು.
ಗಂಡು, ಹೆಣ್ಣಿನ ದೇಹ ರಚನೆಯಲ್ಲಿ ವ್ಯತ್ಯಾಸವಿರುವುದು ಬಹಳ ಮಹತ್ವದ ಸಂಗತಿ. ಏಕೆಂದರೆ ಗಂಡು ತನ್ನ ದೈಹಿಕ ಮಿತಿಯೊಳಗೆ ಎರಡು ಕ್ರಿಯೆಗೆ ಮಾತ್ರ ಒಳಗಾಗ ಬಲ್ಲ. ಒಂದು ‘ಉದ್ರೇಕ’ ವಾಗುವುದು, ಇನ್ನೊಂದು ‘ವಿಸರ್ಜನೆ’. ಆದರೆ ಹೆಣ್ಣಿನ ದೈಹಿಕ ರಚನೆ ಅನೇಕ ಪ್ರಕ್ರಿಯೆಗಳಿಂದ ಹಾದು ಹೋಗುತ್ತದೆ. ‘ಮುಟ್ಟು’ ಮತ್ತು ‘ಹುಟ್ಟು’ ಎರಡೂ ಒಂದಕ್ಕೊಂದು ಪೂರಕ. ನಿಸರ್ಗದಲ್ಲಿ ನಡೆಯುವ ಜೈವಿಕ ಕ್ರಿಯೆ ಮುಟ್ಟಿನ ಸುತ್ತಲೇ ಮನುಷ್ಯನ ಹುಟ್ಟಿನ ಸಂಕಥನ ಅಡಗಿಸಿರುವುದು ಈ ಪ್ರಕೃತಿಯ ವಿಶೇಷತೆ. ಮುಟ್ಟಿನ ಕೋಶ ಕಟ್ಟಿಕೊಂಡಾಗಲೇ ಒಂದು ಜೀವ ಹುಟ್ಟಲು ಸಾಧ್ಯ. ಋತುಮತಿ, ಮದುವೆ, ಪ್ರಸ್ತ, ಬಸಿರು, ಬಾಣಂತಿ, ತಾಯ್ತನಗಳ ಮಧ್ಯೆ ಅನೇಕ ಸಂಬಂಧಗಳ ಜವಾಬ್ದಾರಿ ನಿಭಾಯಿಸುವ ಹೆಣ್ಣು ಅಸಮಾನ್ಯಳು.

ಪ್ರತಿ ಮಗುವಿಗೂ ಜನ್ಮ ನೀಡಿದಾಗ ಮತ್ತೆ ಮತ್ತೆ ಪುನರ್ಜನ್ಮ ಪಡೆಯುವವಳು ತಾಯಿ. ಅವಳ ದೇಹ ಅದೆಷ್ಟೋ ಬಾರಿ ಅರಳಿ, ಅನುಭವಿಸಿ, ಪಡೆದು, ಪೋಷಿಸಿ, ಹೊತ್ತು, ಹೆತ್ತು, ಸಾಕಿ, ಸಲಹಿ ಈ ಇಡೀ ಜಗತ್ತಿನ ಚಲನಶೀಲತೆಗೆ ಕಾರಣವಾಗುತ್ತಾಳೆ. ಅದಕ್ಕಾಗಿಯೇ ‘ತಾಯಿ ಋಣ ತೀರಿಸಲಾಗದು’ ಎನ್ನುವುದು. ‘Happy to bleed’ ಎನ್ನುವ ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿ ನಡೆದ ನೆನಪು ಹಸಿಯಾಗಿದೆ. ಆಗ ಪ್ರತಿಯೊಬ್ಬರೂ, ‘Yes we bleed, and we are proud of it’ ಎಂದು ಹೇಳಿದ್ದೆವು. ಇದೀಗ, ‘we are least bothered of body shaming’ ಎಂದು ಹೇಳುವ ಸ್ಥಿತಿ ನಿರ್ಮಾಣವಾಗಿದೆ. ವಿದೇಶಗಳಲ್ಲಿ ಈ ಚರ್ಚೆ ಇರುವುದೇ ಇಲ್ಲ. ಇಂತಹ ಸಮಸ್ಯೆಗಳು, ಚರ್ಚೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುವುದು ಭಾರತೀಯ ಮನಸುಗಳಲ್ಲಿ ಎನ್ನುವುದೂ ಸತ್ಯ. ಇಂದು ಸಮಾಜದಲ್ಲಿ ಮಹಿಳೆಯ ದೇಹದ ಆಕಾರದ ಬಗ್ಗೆ ಚರ್ಚೆ ನಡೆಯುತ್ತಿರುವುದು ಖೇದಕರ. ಸಾಮಾಜಿಕ ಜಾಲತಾಣಗಳಿಂದ ವೈರಲ್ ಆಗುತ್ತಿರುವ ಸಂಗತಿಗಳು ಸಮಾಜಕ್ಕೆ ವೈರಸ್ ನಂತೆ ಪರಿಣಮಿಸುತ್ತಿವೆ.

ಸೌಜನ್ಯ : ಅಂತರ್ಜಾಲ

ಇನ್ನು ‘ರಾಜಕೀಯ ಕ್ಷೇತ್ರ’ ಮಹಿಳೆಗೆ ವಿಸ್ತಾರವಾಗಿ ತೆರೆದುಕೊಂಡಿಲ್ಲ. ಯಾವ ಕ್ಷೇತ್ರದಲ್ಲಿ ಮಹಿಳೆ ಸದೃಢವಾಗಿ ನಿಲ್ಲಬೇಕೋ ಅಲ್ಲೇ ವಿಕೃತಿ ತಾಂಡವವಾಡುತ್ತಿದೆ. ಅವಳನ್ನು ‘ಬಾಡಿ ಶೇಮಿಂಗ್’ ಗೆ ಒಳಪಡಿಸುತ್ತಿರುವುದು ಅಮಾನವೀಯ. ‘ಹೆಣ್ಣು ಎಂಟರ ಆಕಾರದಲ್ಲಿ ಇರಬೇಕು’ ಎಂದು ಹೇಳುವವರು ಒಮ್ಮೆ ತಮ್ಮ ಹುಟ್ಟಿನ ಬಗ್ಗೆ, ಜನ್ಮದಾತೆಯ ನೆನಪಿಸಿಕೊಳ್ಳಲೇಬೇಕು. ಈ ಕಡೆ ಯೌವನವೂ ಅಲ್ಲದ ಮುಪ್ಪೂ ಅಲ್ಲದ ಮಧ್ಯವಯಸ್ಸಿನಲ್ಲಿ, ದೇಹ ಒಳಗಾಗುವ ಜೈವಿಕ ಸ್ಥಿತ್ಯಂತರ ಕ್ರಿಯೆಗಳಿಗೆ ಹೆಣ್ಣು ವಿಪರೀತ ದಪ್ಪ ಅಥವಾ ವಿಪರೀತ ತೆಳ್ಳಗೆ ಆಗುವ ಸಾಧ್ಯತೆ ಇರುತ್ತದೆ. ಹಾರ್ಮೋನ್ ಸಮತೋಲನವಾಗಿಟ್ಟುಕೊಳ್ಳುವುದು ಅವಳ ಅಂಕೆಯಲ್ಲಿರುವುದಿಲ್ಲ. ಅದಕ್ಕೆ ಯಾರು ಹೊಣೆ?

ಸಿನಿಮಾ ನಟಿಯರಂತೆ ದೈಹಿಕ ಸೌಂದರ್ಯಕ್ಕೆ ಸದಾ ಗಮನವಿಡಲು ಸಾಮಾನ್ಯ ಮಹಿಳೆಗೆ ಸಾಧ್ಯವಾಗದು. ಭಾರತದ ಅನೇಕ ಮನೆಗಳಲ್ಲಿ ಪ್ರತಿ ದಿನದ ಒಲೆ ಉರಿಯ ಬೇಕಾದರೆ, ಪತಿ ಪತ್ನಿ ಇಬ್ಬರೂ ದುಡಿಯಬೇಕಾಗುತ್ತದೆ. ಇದೇ ಸಾಮರಸ್ಯದ ಚಿಂತನೆ ಸಮಾನತೆಗೆ ನಾಂದಿ. ‘ಮೊಲೆ ಮುಡಿ ಬಂದಡೆ ಹೆಣ್ಣೆಂಬರು ಗಡ್ಡ ಮೀಸೆ ಬಂದಡೆ ಗಂಡೆಂಬರು ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣ ರಾಮನಾಥ’ ಎಂದು ಹೇಳಿದ ಜೇಡರ ದಾಸಿಮಯ್ಯನ ವಚನ ನೆನಪಾಗುತ್ತದೆ. ಜೈವಿಕ ವ್ಯತ್ಯಾಸವನ್ನು ಮೀರಿ ಚಿಂತನೆ ಸಾಗುವ ತುರ್ತು ಇಂದಿನದಾಗಿದೆ. ಕಲಬುರಗಿಯ ಸುಪ್ರಸಿದ್ಧ ವೈದ್ಯರು ದಿವಂಗತ ಡಾ.ಮುರಳಿಧರ ರಾವ್ ಹೇಳುತ್ತಿದ್ದರು, ‘ಮಹಿಳೆಗೆ ಗರ್ಭಕೋಶ ಇರುವುದು ಮಕ್ಕಳಿಗೆ ಜನ್ಮ ನೀಡಲು. That is one of the biological factors. ಅದರ ಕೆಲಸ ಮುಗಿದ ಮೇಲೆ ಅದೊಂದು ಭಾಗವಷ್ಟೆ. ಅಕಸ್ಮಾತ್ ತೊಂದರೆಯಾದರೆ ಯಾವ ಮುಲಾಜಿಲ್ಲದೆ ಆ ಕೋಶವನ್ನು ತೆಗೆದು ಹಾಕಬೇಕು. After that lady can lead a normal life.’

ಹೆಣ್ಣು ಏನು ಉಣ್ಣುತ್ತಾಳೆ, ಏನು ತೊಡುತ್ತಾಳೆ, ಎಷ್ಟು ದಪ್ಪಗಿದ್ದಾಳೆ, ಎಷ್ಟು ಸಣ್ಣಗಾಗಿದ್ದಾಳೆ, ಎನ್ನುವುದನ್ನು ಯಾರೂ ಗಮನಿಸುವ ಅಗತ್ಯವಿಲ್ಲ. ಈ ಪ್ರಕೃತಿಯಲ್ಲಿ ವಿಕೃತಿ ಇಲ್ಲ. ಪಶು, ಪಕ್ಷಿಗಳಲ್ಲೂ ಇಲ್ಲ. ಆದರೆ ಜಾಣನಾದ ಮನುಷ್ಯನಲ್ಲಿ ಮಾತ್ರ ಈ ವಿಕೃತಿ ಕಂಡು ಬರುವುದು ವಿಪರ್ಯಾಸ! ‘ನನ್ನ ಘನತೆ-ನನ್ನ ಗೌರವ ನನ್ನ ಜವಾಬ್ದಾರಿ’ ಪ್ರತಿ ಮಹಿಳೆ ಇದನ್ನು ತನ್ನ ಬದುಕಿನ ಧ್ಯೇಯ ವಾಕ್ಯವಾಗಿಸಿಕೊಂಡು, ಯಾವುದೇ ಕ್ಷೇತ್ರದಲ್ಲಿದ್ದರೂ, ಸುಗಮವಾಗಿ ಜೀವನ ನಡೆಸುತ್ತ ಮುನ್ನಡೆಯುವುದು ಶ್ರೇಯಸ್ಕರ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ನನ್ನನ್ನು ನಾನು ಹುಡುಕಿಕೊಂಡಿದ್ದು ಅಕ್ಷರಗಳ ಮೂಲಕ

Published On - 3:29 pm, Thu, 1 April 21