Body Shaming; ಸುಮ್ಮನಿರುವುದು ಹೇಗೆ? : ಬ್ರಹ್ಮನಷ್ಟೇ ಅಲ್ಲ ನೀವೆಲ್ಲ ಬರೆದಿದ್ದೂ ಸಾಕು, ಇನ್ನಾದರೂ ಆಕೆ ತನ್ನ ಹಣೆಯಲ್ಲಿ ತಾನೇ ಬರೆದುಕೊಳ್ಳಲಿ!

|

Updated on: Apr 02, 2021 | 5:21 PM

‘ಒಂದಾನೊಂದು ಕಾಲದಲ್ಲಿ ಮಹಿಳೆ ಸೊಂಟದಲ್ಲಿ ಮಗುವನ್ನು ಭದ್ರವಾಗಿ ಕೂಡಿಸಿಕೊಂಡಂತೆ, ಪುರುಷನೂ ತನ್ನ ಭುಜಗಳ ಮೇಲೆ ಮಗುವನ್ನು ಭದ್ರವಾಗಿ ಮೇಲೇರಿಸಿಕೊಂಡು ನಡೆಯುತ್ತಿದ್ದ. ಇಂದು ವಿದೇಶಿ ಹೆಂಡ ಕುಡಿದು, ಭುಜ ಮತ್ತು ಕುತ್ತಿಗೆ ಎರಡೂ ಒಂದೇ ಆಗಿ ಮಗುವನ್ನು ಕೂಡಿಸಿಕೊಳ್ಳಲು ಪುರುಷನಿಗೆ ಆಗುತ್ತಿಲ್ಲ ಎಂದು ಯಾವ ಮಹಿಳೆಯಾದರೂ ಈತನಕ ಹೇಳಿದ್ದಿದೆಯಾ? ನಾನಂತೂ ಕೇಳಿಲ್ಲ.‘ ಸಂಗೀತಾ ಚಚಡಿ 

Body Shaming; ಸುಮ್ಮನಿರುವುದು ಹೇಗೆ? : ಬ್ರಹ್ಮನಷ್ಟೇ ಅಲ್ಲ ನೀವೆಲ್ಲ ಬರೆದಿದ್ದೂ ಸಾಕು, ಇನ್ನಾದರೂ ಆಕೆ ತನ್ನ ಹಣೆಯಲ್ಲಿ ತಾನೇ ಬರೆದುಕೊಳ್ಳಲಿ!
ಸಂಗೀತಾ ಚಚಡಿ
Follow us on

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

‘ಅವಳ ಚಲನವಲನಗಳ ಮೇಲೆ ಗಂಡ, ಮಕ್ಕಳು, ಅತ್ತೆ ಮಾವ, ಬಂಧು ಬಳಗ ಎಲ್ಲರ ಹದ್ದಿನ ಕಣ್ಣುಗಳು ಇರಬೇಕಾಗಿಲ್ಲ. ಅವಳನ್ನು ಅವಳಾಗಿರಲು ಬಿಡಿ. ಆಗ ಅವಳು ಇನ್ನೂ ಅರಳುತ್ತಾಳೆ. ಅವಳ ದೇಹ ಅವಳದಷ್ಟೇ. ಲಂಗುಲಗಾಮಿಲ್ಲದ ನಾಲಿಗೆಯಿಂದ ಅಸಭ್ಯ ಹೇಳಿಕೆಗಳನ್ನು ನೀಡುತ್ತಾ ಅರಚುವ ಪ್ರಾಣಿಗಳನ್ನೊಯ್ದು ಝೂನಲ್ಲಿಡಬೇಕು!’ ಎನ್ನುತ್ತಿದ್ದಾರೆ ಲೇಖಕಿ ಸಂಗೀತಾ ಚಚಡಿ.

ಅವತ್ತೊಂದು ದಿನ ಐಟಿ ಕಂಪನಿಯೊಂದರಲ್ಲಿ, ಅವರ ಕಟ್ಟಡದ ನೀಲನಕ್ಷೆಯ ಬಗ್ಗೆ ಮೀಟಿಂಗ್ ಇತ್ತು. ಗೇಟ್ ಹತ್ತಿರ ಸರದಿಯಲ್ಲಿ ನಿಂತು ಐಡಿ ಕಾರ್ಡ್​ ತೆಗೆಂದುಕೊಂಡು ಹೋಗುವುದಿತ್ತು. ಸರದಿಯ ಉದ್ದ ಕೊಂಚ ಹೆಚ್ಚೇ ಇತ್ತು. ಅಲ್ಲೇ ಓಡಾಡುತ್ತ ಎಲ್ಲರನ್ನೂ ಗಮನಿಸುತ್ತಿದ್ದ ವಾಲೆಂಟಿಯರ್ ಹುಡುಗಿಯೊಬ್ಬಳು ‘ನೀವು ಬನ್ನಿ ಮೇಡಂ’ ಎಂದು ನನ್ನನ್ನು ನೇರವಾಗಿ ಕೌಂಟರ್ ಹತ್ತಿರ ಕರೆದುಕೊಂಡು ಹೋಗಿ ಕಾರ್ಡ್​ ಮಾಡಿಸಿಕೊಟ್ಟು, ನನ್ನ ಹೊಟ್ಟೆಯನ್ನೇ ನೋಡುತ್ತ ಮೇಲೊಂದು ನಸುನಗು ಬೀರಿ ಸಾಗಿದ್ದಳು. ಅವಳ ನಸುನಗುವಿಗೆ ಉತ್ತರವಾಗಿ ನನ್ನ ಕಣ್ಣಿಂದ ನೀರಿಳಿಯಿತು, ಮಗನ ಹೆರಿಗೆಯ ವೇಳೆಗೆ ಹೊಟ್ಟೆಯಲ್ಲಿ ಫೈಬ್ರಾಯ್ಡ್ ಬೆಳೆದು, ಹೆರಿಗೆ ಕಷ್ಟವಾಗಿ, ಹೊಟ್ಟೆ ಕತ್ತರಿಸಿ ಮಗುವನ್ನು ಕೈಗೆ ಕೊಟ್ಟಿದ್ದು ನೆನಪಾಯಿತು.

ಹೆರಿಗೆಗೆ ರಜೆಯೂ ಇಲ್ಲದ ಚಿಕ್ಕ ಖಾಸಗಿ ಕಂಪನಿಯಲ್ಲಿ ಇದ್ದದ್ದು ಆಗ. ಹಾಗೂ ಹೀಗೂ ಎರಡೇ ಎರಡು ತಿಂಗಳು ವೇತನರಹಿತ ರಜೆ ಪಡೆದು ಅನಿವಾರ್ಯ ಕಾರಣಗಳಿಂದ ಮತ್ತೆ ಕೆಲಸ ಶುರು ಮಾಡಿದ್ದೆ. ಮಗನ ಕಾಳಜಿ, ಮನೆಯ ಕಾಳಜಿ, ಮನೆಯವರ ಕಾಳಜಿ, ಆಫೀಸಿನ ಕೆಲಸ ಹೀಗೆ ಇನ್ನೂ ಏನೇನೋ ನೆಪಗಳ ಗುಡ್ಡೆ ಸೇರಿಸಿ ಹೊಟ್ಟೆಯಲ್ಲೊಂದು ಗಡ್ಡೆಯಾಗಿ, ಯಾವಾಗಲೂ, ಈಗಲೋ ಆಗಲೋ ಹೆರಿಗೆ ಎಂಬಂತೆ ಕಾಣುತ್ತಿದ್ದದ್ದೇ ಅಂದು ಆ ಹುಡುಗಿಗೆ ನನ್ನನ್ನು ಕೌಂಟರ್​ಗೆ ನೇರವಾಗಿ ಕರೆದೊಯ್ಯುವಂತೆ ಮಾಡಿತ್ತು.

ಇಂತಹ ಹತ್ತು ಹಲವು ಕಾರಣಗಳಿಂದಾಗಿ, ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ತನ್ನ ದೇಹದ ಆಕೃತಿಯ ವಿಭಿನ್ನ ಆವೃತ್ತಿಗಳೊಂದಿಗೆ ದೈಹಿಕ ಹಾಗೂ ಮಾನಸಿಕ ಸಂಘರ್ಷ ನಡೆಸುವ ನನ್ನಂಥ ಸಾಕಷ್ಟು ಮಹಿಳೆಯರಿದ್ದಾರೆ. ಆದರೆ ಇಂದು ವಿದೇಶಿ ಹಸುವಿನ ಹಾಲು ಕುಡಿದು ಸೊಂಟ ದಪ್ಪಗಾಗಿಸಿಕೊಳ್ಳುತ್ತಿದ್ದಾಳೆ ಎಂದು ಯಾವುದೋ ಪ್ರಾಣಿ ಅರಚುತ್ತಿದೆಯೆಂದು ಕೇಳಿದೆ. ಒಂದಾನೊಂದು ಕಾಲದಲ್ಲಿ ಮಹಿಳೆ ಸೊಂಟದಲ್ಲಿ ಮಗುವನ್ನು ಭದ್ರವಾಗಿ ಕೂಡಿಸಿಕೊಂಡಂತೆ, ಪುರುಷನೂ ತನ್ನ ಭುಜಗಳ ಮೇಲೆ ಮಗುವನ್ನು ಭದ್ರವಾಗಿ ಮೇಲೇರಿಸಿಕೊಂಡು ನಡೆಯುತ್ತಿದ್ದ. ‘ಇಂದು ವಿದೇಶಿ ಹೆಂಡ ಕುಡಿದು, ಭುಜ ಮತ್ತು ಕುತ್ತಿಗೆ ಎರಡೂ ಒಂದೇ ಆಗಿ ಮಗುವನ್ನು ಕೂಡಿಸಿಕೊಳ್ಳಲು ಪುರುಷನಿಗೆ ಆಗುತ್ತಿಲ್ಲ’ ಎಂದು ಯಾವ ಮಹಿಳೆಯಾದರೂ ಈತನಕ ಹೇಳಿದ್ದಿದೆಯಾ? ನಾನಂತೂ ಕೇಳಿಲ್ಲ.

ನಮ್ಮ ನೆಲದಲ್ಲಿ ನಿಂತು ಯೋಚಿಸಿ ಅವಳ ಬಗ್ಗೆ ಮಾತನಾಡುವಾಗ. ಅವಳಿಗೆ ಸಮಯವೆಲ್ಲಿದೆ ತನ್ನ ಅಂದ ಆರೋಗ್ಯ ನೋಡಿಕೊಳ್ಳಲು? ಆದರೂ ಸಮಾಜ ಕೇಳುವ  ಪ್ರತಿಯೊಂದಕ್ಕೂ ಆಕೆ ಉತ್ತರಿಸಬೇಕೆಂಬ ನಿಯಮ. ಹೇಗೋ ನಾನು ಕಷ್ಟಪಟ್ಟು ಸ್ವಾರ್ಥಿಯಾಗಿ, ನನಗೋಸ್ಕರ ಕೊಂಚ ಸಮಯ ಹೊಂದಿಸಿಕೊಂಡು, ಗಡ್ಡೆ ತೆಗೆಸಿ, ಗುಡ್ಡೆ ಕರಗಿಸಿ ಆರೋಗ್ಯ ರಕ್ಷಣೆ ಮಾಡಿಕೊಂಡೆ. ದಪ್ಪಗಾದಾಗ ಆಡಿಕೊಳ್ಳುವುದು ಬಿಡಿ. ಆದರೆ ಸಣ್ಣಗಾಗಲು ಹೊರಟಾಗ ಜರೆಯಲು ಹುಡುಕುವ ಕಾರಣಗಳಂತೂ ಹೇಳತೀರದು.

ಸೌಜನ್ಯ : ಅಂತರ್ಜಾಲ

ಕೆಲವು ತಿಂಗಳುಗಳ ಹಿಂದೆ ಅದೊಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಮಧ್ಯವಯಸ್ಸಿನ ಮಹಿಳೆಯೊಬ್ಬಳು ತುಂಬ ಕಠಿಣ ಪರಿಶ್ರಮದಿಂದ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾಳೆ. ಕೆಲವು ದಿನಗಳ ಬಿರುಸು ನಡಿಗೆ ಹಾಗೂ Tread mill ನಂತಹ ವ್ಯಾಯಮಗಳಾದ ಮೇಲೆ ತನ್ನ ಹಳೆಯ ಬಟ್ಟೆಗಳನ್ನು ತೊಟ್ಟುಕೊಂಡು ನೋಡುವುದು, ತೂಕವನ್ನು ನೋಡಿಕೊಳ್ಳುವುದು ಮಾಡುವಾಗ ಎಲ್ಲರೂ ಅವಳನ್ನು ವಿಚಿತ್ರವಾಗಿ ನೋಡುತ್ತಿರುತ್ತಾರೆ, ಅವಳೇನೋ ಮಾಡಬಾರದ ಕೆಲಸ ಮಾಡುತ್ತಿರುವಳು ಎಂಬಂತೆ. ಮಕ್ಕಳೂ ಅವಳನ್ನು ನೋಡಿ ಮಾತನಾಡಿಕೊಂಡು ನಗುತ್ತಿರುತ್ತಾರೆ. ಈ ವಯಸ್ಸಿನಲ್ಲಿ ಇವಳಿಗೇನು ತೆಳ್ಳಗೆ ಕಾಣುವ ಹಂಬಲ? ಎನ್ನುವಂತೆ ಉಳಿದವರೂ ನಗುತ್ತಿರುತ್ತಾರೆ. ಅವಳು ಯಾರಿಗೂ ಕೇರ್ ಮಾಡದೇ ತನ್ನ ಪಾಡಿಗೆ ತಾನು ತೂಕ ಇಳಿಸುವ ಕೆಲಸ ಮಾಡುತ್ತಾಳೆ.

ಕೊನೆಗೆ ಅವಳು ಇದನ್ನು ಮಾಡಿದ್ದು ತನ್ನ ಗಂಡನಿಗೆ ತನ್ನ ಕಿಡ್ನಿ ಕೊಡುವ ಸಲುವಾಗಿ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ವೈದ್ಯರು ಅವಳ ತೂಕ ಇಳಿದರೆ ಮಾತ್ರ ಅವಳು ತನ್ನ ಒಂದು ಕಿಡ್ನಿಯನ್ನು ಗಂಡನಿಗೆ ಕೊಡಬಹುದು ಎಂದು ಹೇಳಿರುತ್ತಾರೆ. ಅದಕ್ಕಾಗಿ ಅವಳು ಯಾರನ್ನೂ ಲೆಕ್ಕಿಸದೇ ತನ್ನ ಗುರಿಯನ್ನು ತಲುಪುತ್ತಾಳೆ. ನಂತ ಅವಳನ್ನು ನೋಡಿ ಆಡಿಕೊಂಡವರೆಲ್ಲ ಅವಳನ್ನು ಅಭಿನಂದಿಸುತ್ತಾರೆ.  ಜನಸಾಮಾನ್ಯರಿಗೆ ದೇಹಾಂಗದಾನದ ಬಗ್ಗೆ ಅರಿವು ಮೂಡಿಸುವ ಈ ಜಾಹಿರಾತಿನ ಬಗ್ಗೆ ಎರಡು ಮಾತಿಲ್ಲ. ಆದರೆ ಕೊನೆಯಲ್ಲಿ ಅವಳ ಉದ್ದೇಶ ತಿಳಿದ ಮೇಲೆ ಅಭಿನಂದಿಸುವ ಜನ ಮೊದಲು ಅವಳ ಆ ಪ್ರಯತ್ನದ ಬಗ್ಗೆ ಕೆಟ್ಟದಾಗಿ ನೋಡುವುದೇಕೆ?
ಒಬ್ಬ ಮಧ್ಯ ವಯಸ್ಸಿನ ಮಹಿಳೆಗೆ ತೆಳ್ಳಗೆ ಕಾಣುವ ಹಾಗೂ ಅದಕ್ಕಾಗಿ ಪ್ರಯತ್ನ ಮಾಡುವ ಸ್ವಂತ ಹಕ್ಕೂ ಇಲ್ಲವೆ?

ಇದೊಂದು ಚಿಕ್ಕ ಉದಾಹರಣೆ ಅಷ್ಟೇ. ಮಹಿಳೆ ತನಗಾಗಿ ಒಂದು ಚಿಕ್ಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗೆಲ್ಲ ಅವಳು ಸ್ವಾರ್ಥಿಯೇ. ಮದುವೆಯಾದ ಒಂದೇ ವರುಷದ ಅವಧಿಯಲ್ಲಿ ಹಸುಕಂದನನ್ನು ಮಡಿಲಿಗೆ ಹಾಕಿಕೊಂಡು ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ಅದುಮುತ್ತಾ ನಡೆಯುವ ಅವಳಿಗೆ, ಸಂಸಾರ ಒಂದು ಘಟ್ಟವನ್ನು ತಲುಪಿದ ನಂತರ ಆಕೆ ತನ್ನ ಆಸೆಗಳನ್ನು ಅನುಭವಿಸಲು ಬಿಡಿ. ಕೊನೇಪಕ್ಷ ಸಮಾನಮನಸ್ಕರೊಂದಿಗೆ ಪ್ರವಾಸ ಹೋಗುವುದು? ಅವಳ ಚಲನವಲನಗಳ ಮೇಲೆ ಗಂಡ, ಮಕ್ಕಳು, ಅತ್ತೆ ಮಾವ, ಬಂಧು ಬಳಗ ಎಲ್ಲರ ಹದ್ದಿನ ಕಣ್ಣುಗಳು ಇರಬೇಕಾಗಿಲ್ಲ. ಅವಳನ್ನು ಅವಳಾಗಿರಲು ಬಿಡಿ. ಆಗ ಅವಳು ಇನ್ನೂ ಅರಳುತ್ತಾಳೆ. ಅವಳ ದೇಹ ಅವಳದಷ್ಟೇ. ಇಂಥ ಅಸಭ್ಯ ಹೇಳಿಕೆಗಳಿಗೆ ಧಿಕ್ಕಾರವಿರಲಿ. ಲಂಗುಲಗಾಮಿಲ್ಲದ ನಾಲಿಗೆಯಿಂದ ಅಸಭ್ಯ ಹೇಳಿಕೆಗಳನ್ನು ನೀಡುತ್ತಾ ಅರಚುವ ಪ್ರಾಣಿಗಳನ್ನೊಯ್ದು ಝೂನಲ್ಲಿಡಬೇಕು!

ಗೆಳತಿ ಸುಮಾ ಮಂಜುನಾಥ ಹೇಳಿದಂತೆ, ‘ಹೆಣ್ಣೊಬ್ಬಳ ಹಣೆಯಲ್ಲಿ ಬ್ರಹ್ಮ ಬರೆದಿದ್ದು ಸಾಲದೆಂಬಂತೆ; ಅಪ್ಪ ಅಮ್ಮ, ಅಣ್ಣ, ತಮ್ಮ, ಗಂಡ, ಮಕ್ಕಳು,
ಊರಮಂದಿ, ಸಂಬಂಧವೇ ಇಲ್ಲದ ಸಂಬಂಧಿಕರು ಎಲ್ಲರೂ ಬರೆಯುವವರೇ! ಕಡೆಗೊಂದು ಸಾಲಾದರೂ ಅವಳೇ ಬರೆದುಕೊಳ್ಳಲಿ ಬಿಟ್ಟುಬಿಡಿ, ಏಕೆಂದರೆ ಬದುಕು ಅವಳದ್ದು ಕೂಡ.’

ಇದನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ಯಾವ ಕ್ಷೇತ್ರದಲ್ಲಿ ಮಹಿಳೆ ಸದೃಢವಾಗಿ ನಿಲ್ಲಬೇಕೋ ಅಲ್ಲೇ ವಿಕೃತಿ ತಾಂಡವವಾಡುತ್ತಿದೆ

ನಾನೆಂಬ ಪರಿಮಳದ ಹಾದಿಯಲಿ: ನಾನು ಅವಳನ್ನು ಒಮ್ಮೆಯೂ ಅಮ್ಮಾ ಎನ್ನಲೇ ಇಲ್ಲ

 

Published On - 12:36 pm, Fri, 2 April 21